ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಸ್ನೇಹಿತರೆ, ಮೀಡಿಯಾ ಮಾಸ್ಟರ್ಸ್‌ಗೆ ಸ್ವಾಗತ ಸುಸ್ವಾಗತ ಎಂಬ ಮಾತುಗಳನ್ನು ಕೇಳದೇ ಇರುವ ಕನ್ನಡಿಗರು ಕಡಿಮೆಯೇ ಎಂದು ಭಾವಿಸುತ್ತೇನೆ. ಯಾಕೆಂದರೆ ಈ ದನಿ ತುಂಬಾ ಜನರ ಮೆಚ್ಚುಗೆಯನ್ನು ಗಳಿಸಿದೆ.
ಇದಕ್ಕೆ ಕಾರಣ ಅದು ತಾನು ಹೊಂದಿರುವ ಆಕರ್ಷಣೀಯ ಮಾಧುರ್ಯ! ಒಂಥರಾ ಇದು ಮಾದಕ ದನಿಯೂ ಹೌದು, ನಿಮಗೆಲ್ಲ ಗೊತ್ತಿರುವ ಹಾಗೆ ಆ ದನಿ ಎಂ.ಎಸ್.ರಾಘವೇಂದ್ರ ಅವರದ್ದು. ಇವರ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಈಗಾಗಲೇ ಅವರು ತಮ್ಮನ್ನು ತಾವೇ ನಾನು ಯಾರು ಎಂಬ ವಿಡಿಯೋದಲ್ಲಿ ಪರಿಚಯಿಸಿಕೊಂಡಿದ್ದಾರೆ. ಆ ಮೂಲಕ ಅವರ ಕುರಿತಾಗಿ ಅರ್ಥವಾದ ಮತ್ತು ಅರಿವಿಗೆ ಬಂದ ಸಂಗತಿಯೇನೆಂದರೆ, ರಾಘವೇಂದ್ರರು ಕೂಡ ನಮ್ಮ ಹಾಗೆ ಸಾದಾ ಸೀದಾ ಮನುಷ್ಯ
ಎಂಬುದು.
ಇತ್ತೀಚೆಗಷ್ಟೇ ಚಕ್ರವರ್ತಿ ಸೂಲಿಬೆಲೆಯವರು ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ರಾಘವೇಂದ್ರರು ತಾನು ಮೀಡಿಯಾ ಮಾಸ್ಟರ್ಸ್ ಆರಂಭಿಸಿದ್ದು ಹೇಗೆ, ಅದಕ್ಕೂ ಪೂರ್ವದಲ್ಲಿ ಯೂಟ್ಯೂಬ್ ಬಗ್ಗೆ ತನ್ನಲ್ಲಿ ಎಷ್ಟು ಜ್ಞಾನವಿತ್ತು ಎಂಬುದರ ಬಗ್ಗೆ
ಸವಿವರವಾಗೇ ಹೇಳಿಕೊಂಡಿದ್ದು ಯೂಟ್ಯೂಬ್‌ನಲ್ಲಿ ಆ ವಿಡಿಯೋವನ್ನು ನೋಡಿದವರಿಗೆ ಗೊತ್ತಿರುತ್ತದೆ.
ಯೂಟ್ಯೂಬ್ ಬಗ್ಗೆ ತನ್ನಲ್ಲಿರುವ ಅಜ್ಞಾನವನ್ನು ಯಾವ ಸಂಕೋಚ, ಮುಚ್ಚುಮರೆಯಿಲ್ಲದೆಯೂ ಅವರಾಡಿದ ಮಾತುಗಳಲ್ಲಿ ಸಷ್ಟವಾಗುವುದೇನೆಂದರೆ, ಯಾವುದೇ ಕೆಲಸವನ್ನಾದರೂ ಮಾಡುವ ಪೂರ್ವದಲ್ಲಿ ಅದರ ಬಗ್ಗೆ ಚೆನ್ನಾಗಿ ಕಲಿತೇ ಆ ಕಾರ್ಯದ ಸಾಹಸಕ್ಕಿಳಿಯಬೇಕು. ಮತ್ತು ಅದರಲ್ಲಿ ಬದ್ಧತೆಯನ್ನು ಕಾಯ್ದುಕೊಳ್ಳಬೇಕು. ದೊಡ್ಡಮಟ್ಟದ ಕನ್ವಿಕ್ಷನ್ ಅನ್ನು ಕಾಪಿಟ್ಟು ಕೊಂಡರೆ ಯಶಸ್ಸನ್ನು ಪಡೆಯಬಹುದು ಎಂಬುದು.
ಯಾಕೆಂದರೆ ಲಾಭವಾಗಲಿಲ್ಲ, ಕೈಹಿಡಿಯಲಿಲ್ಲ ಅಂತ ಆರಂಭಿಸಿದ ಕಾರ್ಯವನ್ನು ಅರ್ಧಕ್ಕೇ ಬಿಟ್ಟುಬಿಡುವ ಚಟ ತುಂಬಾ
ಜನರಲ್ಲಿರುತ್ತದೆ. ಯಶಸ್ಸಿಗಾಗಿ ಹಂಬಲಿಸುವವರೂ ಅದು ಸಿಗದಿzಗ ಬಿಟ್ಟುಬಿಡುವುದುಂಟು. ಯಶಸ್ಸು ಅಂದರೆ, ತನ್ನ ಕಾರ್ಯ ಗಳ ಮುಖೇನ ಜನರಿಗೆ ಹಿತವೆನಿಸುವುದು. ಪ್ರಿಯವಾಗುವುದು. ಅದನ್ನೇ ಮಾಡುವುದು. ಅಷ್ಟೇ ಅಲ್ಲ, ಮಾಡುವ ಕಾರ್ಯದಲ್ಲಿ ತಾದಾತ್ಮ್ಯವನ್ನು ನಿರಂತರವಾಗಿ ಹೊಂದುವುದು. ಸುಳ್ಳಿನ ಮೂಲಕ ಯಶಸ್ಸು ಗಳಿಸುವುದಲ್ಲ.
ಹಾಗಂತ ಅಪ್ರಿಯವನ್ನು ಹೇಳಬಾರದು ಎಂದೇನಲ್ಲ. ಅಪ್ರಿಯವಾದ ಸತ್ಯವನ್ನು ಹೇಳುವ ಧ್ಯರ್ಯವನ್ನು ರಾಘವೇಂದ್ರರು ಕೃಷಿ
ಮಸೂದೆ, ಬಜೆಟ್ ಬಗ್ಗೆ ಅದರ ಪೂರ್ವಾಪರ (ಅಂದರೆ ಮಸೂದೆಯ ಸಾಧಕ ಬಾಧಕವನ್ನು ಹೇಳುವಾಗ, ಬಜೆಟ್ಟನ್ನು
ನಿಷ್ಪಕ್ಷಪಾತವಾಗಿ ವಿಶ್ಲೇಷಿಸುವಾಗ)ವನ್ನು ಹೇಳುವ ಸಂದರ್ಭದಲ್ಲಿ ನಿಖರವಾಗೇ ಹೇಳಿzರೆ. ಅದೂ ತಾರ್ಕಿಕವಾದ ನೆಲೆಯ!
ವೈಜ್ಞಾನಿಕವಾದ ರೀತಿಯ! ಆದ್ದರಿಂದ ಆ ವಿಡಿಯೋಗಳಲ್ಲಿ ಹೇಳಲ್ಪಟ್ಟ ವಿಚಾರಗಳು ಯಾರ ಪರ ಅಥವಾ ವಿರುದ್ಧ ಎಂದು
ಭಾವಿಸಲಾಗದು. ಈ ವಿಡಿಯೋಗಳು ಬಿಜೆಪಿಯವರಿಗೆ, ಆ ಪಕ್ಷದ ಬೆಂಬಲಿಗರಿಗೆ, ಅಥವಾ ಮೋದಿಯನ್ನು ಬೆಂಬಲಿಸುವವರಿಗೆ
ಇಷ್ಟವಾಗಿರಲಾರದು, ಇಷ್ಟವಾಗದೇ ಹೋಗಬಹುದು. ಆದರೆ ವಿಚಾರಗಳಂತೂ ಪೂರ್ತಿಯಾಗಿ ಸತ್ಯವಾಗೇ ಇದೆ. ಯಾಕೆಂದರೆ,
ಮೂರ್ನಾಕು ಸಲ ನಾನದನ್ನು ಕೇಳಿದ್ದೇನೆ, ನೋಡಿದ್ದೇನೆ. ಆದ್ದರಿಂದ ಮೀಡಿಯಾ ಮಾಸ್ಟರ್ಸ್ ವಿಡಿಯೋಗಳ ಬಗ್ಗೆ ಯಾರೂ
ಆರೋಪವನ್ನಾಗಲೀ, ಆಕ್ಷೇಪವನ್ನಾಗಲೀ ಮಾಡುವಂತಿಲ್ಲ.
Of course ಅಂಥ ವಿಡಿಯೋಗಳು ಯಾವವು ಇನ್ನೂವರೆಗೂ ರಾಘವೇಂದ್ರರು ಮಾಡಿಲ್ಲ. ಮಾಡಲಾರರು ಕೂಡ ಎಂದೇ
ಭಾವಿಸುತ್ತೇನೆ. ಮೀಡಿಯಾ ಮಾಸ್ಟರ್ಸ್ ವಿಡಿಯೋಗಳು ಜನಪ್ರಿಯವಾಗಲು ಮುಖ್ಯ ಕಾರಣ ಅದರಲ್ಲಿ ಮಾತನಾಡುವ ರಾಘವೇಂದ್ರ ಅವರ ದನಿ.
ವಸ್ತು ವಿಷಯದ ಆಯ್ಕೆ, ವಿಷಯ ಪ್ರವೇಶ, ವಿಷಯ ಸಂಗ್ರಹ, ವಿಷಯ ನಿರೂಪಣೆ, ತೌಲನಿಕ ಚಿಂತನೆಯುಳ್ಳ ವೈಚಾರಿಕತೆ, ಸತ್ಯವನ್ನೇ ಹೇಳಬೇಕೆಂಬ ಧೋರಣೆ, ಕಟ್ಟುಕತೆಗಳ ಮೂಲಕ ಜನರನ್ನು ರಂಜಿಸುವ ಯಾವ ಬೌದ್ಧಿಕ ಜಾಣ್ಮೆಯೂ ಇಲ್ಲದಿರು ವುದು, ಆಯ್ದ ವಸ್ತು ವಿಷಯಕ್ಕೆ ಪೂರಕವಾದ ಸಮಗ್ರ ಕಿರು ಮಾಹಿತಿಯ ಒದಗಿಸುವಿಕೆ, ತಕ್ಷಣಕ್ಕೇ ಅರ್ಥವಾಗಿಸಿ ಇನ್ನೂ ಕೇಳಬೇಕೆಂಬ ಕುತೂಹಲವನ್ನು ಹುಟ್ಟಿಸುವುದು, ಆಯ್ದ ವಸ್ತು ವಿಚಾರವಾಗಿ ನಿರೂಪಣೆ ಯಲ್ಲಿ ನಿರಂತರತೆಯನ್ನು ಕಾಯ್ದು ಕೊಳ್ಳುವುದು, ಸಾಂದರ್ಭಿಕವಾಗಿ ಹೇಳುವ ವಿಚಾರಗಳಿಗೆ ಪೂರಕವಾದ ಹಿಂದಿನ ಮಾಹಿತಿಯುಳ್ಳ ವಿಡಿಯೋ ಲಿಂಕುಗಳನ್ನು description box ಅಲ್ಲಿ ನೀಡುವುದು, ಉತ್ತಮ ರೆಸಲೂಷನ್ ಇರುವ ಪೋಟೋ, ಎಕ್ಯುರೇಟ್ ನಿರೂಪಣೆ ಅಂದರೆ only connect ಅಂತಾರಲ್ಲ ಹಾಗೆ ವಿಚಾರಗಳ ಹೊಂದಾಣಿಕೆ, ಅನಿವಾರ್ಯಯಿದ್ದಲ್ಲಿ ಇಂಗ್ಲಿಷ್ ಪ್ರಯೋಗ, ಸುಲಭದ ಕನ್ನಡ ವಾಕ್ಯರಚನೆ, ಗ್ರಂಥಸ್ಥ ಕನ್ನಡ, ತಿಳಿಯಾದ ಹಾಸ್ಯಪ್ರಜ್ಞೆ, ಭಾಷಾ ಶುದ್ಧಿ, ನಿರೂಪಣೆಯಲ್ಲಿ ಗಾಂಭೀರ್ಯ, ಅಲ್ಲಲ್ಲಿ ಆಭಾಸವೆನಿಸದ ವ್ಯಂಗ್ಯ, ವಿಡಂಬನೆ, ಸ್ಪಷ್ಟ ಉಚ್ಛಾರ, ಕೊಡುವುದನ್ನು ಅದರ ಉತ್ಕೃಷ್ಟ ಸ್ಥಿತಿಯ ಕೊಡಬೇಕು ಎನ್ನುವ ತುಡಿತ, ದನಿ ಏರಿಳಿತ- ಹೀಗೆ ಒಟ್ಟಾರೆಯಾಗಿ, ಸೋಷಿಯಲ್ ಮೀಡಿಯಾದಲ್ಲಿ ಯಾರಿಗೂ ಅನುಕರಣೀಯವಾದ, ಅನುಸರಣೀಯವಾದ ಒಂದು ಮಹತ್ವದ ಮೈಲಿಗಲ್ಲನ್ನು ಕನ್ನಡದ ಮಟ್ಟಿಗೆ ರಾಘವೇಂದ್ರ ಅವರು ದಾಖಲಿಸಿದ್ದಾರೆ.
ಮಜಾ ಏನೆಂದರೆ, ಮೀಡಿಯಾ ಮಾಸ್ಟರ್ಸ್ ಅನ್ನು ಅನುಕರಿಸುವ ಭರದಲ್ಲಿ ಅಂಥದ್ದೇ ಅನಿಸುವ, ಆದರೆ ಸ್ವಲ್ಪ ವಿಭಿನ್ನವಾದ ಹೆಸರಿನಲ್ಲೂ, ರೀತಿಯಲ್ಲೂ, ಪರಿಯಲ್ಲೂ ಪ್ರತಿಬಿಂಬಿತವಾಗುವ ಚಾನೆಲ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹುಟ್ಟಿ ಕೊಂಡಿವೆ. ರಾಘವೇಂದ್ರರ ಥರಾನೇ ಮಾತನಾಡುವ, ನಿರೂಪಣೆ ಮಾಡುವ ಅನುಕರಣೆಗೆ ಮುಂದಾದದ್ದು ಅದರಲ್ಲಿದೆ. ಇರಲಿ, ಅವನ್ನೂ ಒಪ್ಪೋಣ. ಸ್ವೀಕರಿಸೋಣ. ಅನುಕರಣೆಯೂ ಒಂದು ಕಲೆಯೇ ಅಲ್ಲವೆ? ಮತ್ತು ಅನುಸರಣೆಗೂ ಒಂದು ಒಳ್ಳೆಯ ಮನಸ್ಥಿತಿ ಬೇಕಾಗುತ್ತದೆ. ಪೂರ್ವಗ್ರಹ ಪೀಡಿತ ಮನಸ್ಸು ಅನುಕರಣೆಗೂ ಸಲ್ಲ, ಅನುಸರಣೆಗೂ ಒಲ್ಲ.
ನನಗೆ ರಾಘವೇಂದ್ರರ Concern ಎಂಬುದು ಮಹತ್ವವೂ, ತುರ್ತಾದ ಅಗತ್ಯವೂ, ಅನಿವಾರ್ಯವೂ ಎನಿಸಿ ಮತ್ತು ವೈಯಕ್ತಿಕವಾಗಿ ಇಷ್ಟವಾಗಲು ಕಾರಣ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅಮೃತ-ಲಗಳಾದ ಗೀತೆ, ವೇದೋಪನಿಷತ್ತು, ರಾಮಾ ಯಣ ಮಹಾಭಾರತ, ಪುರಾಣಗಳೇ ಮುಂತಾದವುಗಳ ಬಗ್ಗೆ ನಿರಂತರವಾಗಿ ವಿಡಿಯೋಗಳನ್ನು ಮಾಡುತ್ತ ಕನ್ನಡ ಮಾತ್ರ ಮಾತನಾಡಬಲ್ಲ ಎಂಥ ಅನಕ್ಷರಿಗೂ (ಓದಲು ಬರೆಯಲು ಬಾರದವರು) ಅರ್ಥವಾಗುವಂತೆ ಅವುಗಳನ್ನು ಕನ್ನಡದಲ್ಲಿ ಕೊಡ ಬೇಕೆಂಬ ಅವರ ಅದಮ್ಯ ವಾಂಛೆ!
ನಿಷ್ಕಲ್ಮಷ ಪ್ರೀತಿ, ಇವುಗಳ ಬಗೆಗಿನ ಅನುರಕ್ತಿ, ಉತ್ಕಟ ಭಾವ ಅವರಲ್ಲಿ ಇದ್ದುದರಿಂದ ಅವರಿಗೆ ಇದು ಸಾಧ್ಯವಾಗುತ್ತಿದೆ ಎಂದು ಭಾವಿಸುತ್ತೇನೆ. ಭಗವದ್ಗೀತೆ, ರಾಮಾಯಣ-ಮಹಾಭಾರತ, ಪುರಾಣ ಲೋಕದ ವಿಸ್ಮಯಗಳ ಬಗ್ಗೆ ಈಗಾಗಲೇ ಕನ್ನಡ ವಿದ್ವತ್ ಲೋಕದಲ್ಲಿ ಮತ್ರು ಸಾರಸ್ವತ ಲೋಕದಲ್ಲಿ, ಸಾಹಿತ್ಯ ಲೋಕದಲ್ಲಿ ಉಪನ್ಯಾಸ, ಭಾಷಣ, ಬರೆಹ, ತರ್ಕ – ಜಿeಸೆ, ಚರ್ಚೆ, ವಾದ-ವಿವಾದಗಳಂತೂ ಲೆಕ್ಕವಿಲ್ಲದಷ್ಟು ಆಗಿಹೋಗಿವೆ.
ಸ್ವಾಮೀಜಿಗಳು, ಸಂನ್ಯಾಸಿಗಳು, ಉಪನ್ಯಾಸಕರು, ಪ್ರವಚನಕಾರರು, ಚಿಂತಕರು, ವಿಮರ್ಶಕರು ಅಂತ ಅನಿಸಿಕೊಂಡು ಜನ ಮಾನ್ಯತೆ ಮತ್ತು ಜನಪ್ರಿಯತೆಯನ್ನು ಅದಾಗಲೇ ಗಳಿಸಿಕೊಂಡವರು ಅನೇಕರು ನಮ್ಮ ನಡುವೆ ಇದ್ದಾರೆ. ಅಸಂಖ್ಯ ಅಭಿಮಾನಿ ಗಳನ್ನೂ ಓದುಗರನ್ನೂ ಇವರು ಹೊಂದಿದ್ದಾರೆ. ಹಿರಿಯರಾದ ಪ್ರೊ. ಕೆ.ಎಸ್. ನಾರಾಯಣ ಆಚಾರ್ಯರು, ಸ್ವರ್ಗಸ್ಥ ಬನ್ನಂಜೆ ಗೋವಿಂದಾಚಾರ್ಯರು, ಪಾವಗಡ ಪ್ರಕಾಶ ರಾವ್, ಶತಾವಧಾನಿ ಡಾ.ಆರ್.ಗಣೇಶ, ಲಕ್ಷ್ಮೀಶ ತೋಳ್ಪಾಡಿ ಇವರೇ ಮುಂತಾದ ಹಿರಿಯರು, ಉಪನ್ಯಾಸ, ಪ್ರವಚನದಲ್ಲಿ ಮುಂತಾದ ಹಿರಿಯ-ಕಿರಿಯ ವಿದ್ವಾಂಸರು, ಚಿಂತಕರು ಈವರೆಗೆ ನಾಡಿನಲ್ಲಿ ತಮ್ಮನ್ನು ಈ ಮೂಲಕವೇ ಪರಿಚಯಿಸಿಕೊಂಡವರಿದ್ದಾರೆ.
ಇವರಲ್ಲಿ ಕೆಲವರು ಲೇಖಕರು, ಬರೆಹಗಾರರು ಆಗಿದ್ದಾರೆ. ಅಕೆಡಮಿಕ್ ವಲಯದಲ್ಲೂ ಗುರುತಿಸಿಕೊಂಡವರಿದ್ದಾರೆ. ಇವರುಗಳ ಬೌದ್ಧಿಕ ಸಂಪತ್ತನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಆದರೆ ಇವರ ಬೌದ್ದಿಕ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಲು ಶ್ರೋತೃ ಗಳಿಗೂ ಒಂದು ಮಟ್ಟಿಗಿನ ಬೌದ್ಧಿಕ ಅರ್ಹತೆ ಬೇಕೇ ಬೇಕು ಎಂದು ನಾನು ಭಾವಿಸುತ್ತೇನೆ. ಹಾಗೆ ನೋಡಿದರೆ ಬನ್ನಂಜೆ ಹಾಗೂ ನಾರಾಯಣ ಆಚಾರ್ಯರಂತೂ ಕನ್ನಡ ನಾಡಿನಲ್ಲಿ ಉಳಿದವರೆಲ್ಲರಿಗಿಂತ ಬಹುಹಿಂದೆಯೇ ಹೆಸರಾದವರು.
ಇವರುಗಳು ಅಳವಡಿಸಿಕೊಂಡು ಬದುಕಿನಲ್ಲಿ ಅನುಸರಿಸಿಕೊಂಡು ಬಂದ ದಾರಿಯನ್ನೇ ಪೂರ್ತಿಯಾಗಿ ಅಲ್ಲದಿದ್ದರೂ ರಾಘವೇಂದ್ರರು ತುಳಿದಿದ್ದು ಮಾತ್ರ ನನಗೆ ಅಚ್ಚರಿಯೆನಿಸುತ್ತದೆ. ಮೇಲೆ ಹೇಳಿದ ಅನೇಕ ವಿದ್ವಾಂಸರು, ಜ್ಞಾನಿಗಳು ಲೌಕಿಕರಲ್ಲಿ ಅಲೌಕಿಕರು. ಅಲೌಕಿಕರಲ್ಲಿ ಲೌಕಿಕರು. ಆದರೆ ರಾಘವೇಂದ್ರರು ಮಾತ್ರ ಶುದ್ಧಾತಿಶುದ್ಧ ಲೌಕಿಕರು. ನಾಕಾರು ಕಡೆ ದುಡಿದವರು.
ಅಲೌಕಿಕರಾಗಿ ಬದುಕನ್ನು ಸಾಗಿಸಿದವರಲ್ಲ. ಆದರೂ ರಾಮಾಯಣ ಮಹಾಭಾರತ ಗೀತೆಗಳ ಬಗ್ಗೆ ಉತ್ತಮ ಎನಿಸಬಹುದಾದ
ವ್ಯಾಖ್ಯಾನವನ್ನು ಸುಲಭದಲ್ಲಿ ಸಿಗುವಂತೆ, ಒಂದು ನಿರ್ದಿಷ್ಟವಾಗಿ ನಿಗದಿ ಮಾಡಿಕೊಳ್ಳುವಂತೆ ಸಮಯವನ್ನು ಸೆರೆಹಿಡಿದು
ಸಾಧ್ಯವಾಗುವಂತೆ ಏಳರಿಂದ ಹದಿಮೂರು ನಿಮಿಷಗಳ ಅವಧಿಯಲ್ಲಿ ಅನೇಕ ವಿಡಿಯೋಗಳನ್ನು ನೀಡಿದ್ದಾರೆ.
ಗೀತೆಯ ಬಗ್ಗೆಯಂತೂ ಬಹು ಸೊಗಸಾಗಿ ಪ್ರಾಥಮಿಕ ಮತ್ತು ಹೈಸ್ಕೂಲು ಮಕ್ಕಳಿಗೂ ಅರ್ಥವಾಗುವಂತೆ ಒಂದೊಂದು ಅಧ್ಯಾಯದ ಬಗ್ಗೆಯೂ ಚಿಕ್ಕದಾಗಿ ಚೊಕ್ಕದಾಗಿ ನೀಡಿದ ವಿಡಿಯೋ ಮಾಹಿತಿಗಳಂತೂ ಅದ್ಭುತವಾಗೇ ಇದೆ. ಸಂಗ್ರಹಯೋಗ್ಯ ವಾಗಿದೆ. ಅದೇ ರೀತಿ ರಾಘವೇಂದ್ರರ ಮಹಾಭಾರತ ಕಥಾಮೃತದಲ್ಲೂ ಕೂಡ ಬಹು ಸೊಗಸಾದ ರೀತಿಯ ಪಾತ್ರ ವಿಶ್ಲೇಷಣೆ ಆಗುತ್ತಿದೆ.
ಕನ್ನಡದ ಮಟ್ಟಿಗೆ ಇದೊಂದು ಅಪೂರ್ವವಾದ ಸಾಹಸವೇ ಸರಿ. ನಾರಾಯಣಾಚಾರ್ಯರ ರಾಮಾಯಣ ಹಾಗೂ ಮಹಾಭಾರತ
ಪಾತ್ರ ಪ್ರಪಂಚವನ್ನು ಓದಿಕೊಂಡವರಿಗೆ ಮೀಡಿಯಾ ಮಾಸ್ಟರ್ಸ್ ಕೊಡುತ್ತಿರುವ ಮಹಾಭಾರತದ ಕಥಾಮೃತ ಅತೀ ಸುಲಭ ವಾಗಿ ಅರ್ಥವಾಗುವಂತಿದೆ. ರಾಮಾಯಣದ ಬಗ್ಗೆ ಮೊನ್ನೆಯ ರಾಮನವಮಿಯ ದಿನ ರಾಮಾಯಣ ಕಥಾಮೃತ ಆರಂಭವಾಗಿದೆ.
ಈ ಮೊದಲು ಅಲ್ಲಲ್ಲಿ ರಾಮಾಯಣದ ಕುರಿತಾಗಿ ವಿಡಿಯೋಗಳು ಬಂದಿರುವುದು ವೀಕ್ಷಕರ ಮನದಲ್ಲಿ ನೆಲೆಯೂರಿದೆ.
ಇಲ್ಲಿಯವರೆಗೆ ಸುಲಭ ಮಹಾಭಾರತದ ಕಥೆಯನ್ನು ಕೇಳಿದ ಮೇಲೆ ಈಗ ಸುಲಭ ರಾಮಾಯಣದ ಕಥೆಯನ್ನು ಕೇಳುವುದಕ್ಕೆ ಕೇಳುಗರು ಸಿದ್ಧವಾಗಬೇಕು. ಅದೂ ಈಗಾಗಲೇ ಮೂರು ಭಾಗಗಳಲ್ಲಿ ಮುಂದೂವರೆದಿದೆ. ಮಹಾಕಾವ್ಯಗಳ ಕುರಿತಾದ ಈ ಬಗೆಯ
ವಿಡಿಯೋಗಳು ವರ್ತಮಾನದ ಭಾರತಕ್ಕೆ ತೀರಾ ಅಗತ್ಯವೆಂಬುದರಲ್ಲಿ ಎರಡು ಮಾತಿಲ್ಲ. ಗೊತ್ತಿರುವುದನ್ನೇ ಹೇಳುವಲ್ಲಿಯೂ
ವಿಭಿನ್ನತೆಯನ್ನು ವೈಶಿಷ್ಟ್ಯವನ್ನು ಕಾದುಕೊಂಡು ಮೀಡಿಯಾ ಮಾಸ್ಟರ್ಸ್ ಅಮೇಜಿಂಗ್ ಆದ ರೀತಿಯಲ್ಲಿ ಜನರಿಗೆ ಸಿಗುತ್ತಿದೆ;
ಅದೂ ಕಾದು ನೋಡುವ ಹಾಗೆ, ಗಮನವಿಟ್ಟು ಕೇಳುವ ಹಾಗೆ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ.
ಇಂಥ ಆಸಕ್ತಿ ಮತ್ತು ಕುತೂಹಲವನ್ನು ಕಾಯ್ದುಕೊಳ್ಳುವಂತೆ ಮಾಡಿದ್ದರಿಂದ ಮೀಡಿಯಾ ಮಾಸ್ಟರ್ಸ್ Subscribers ಸಂಖ್ಯೆ ಸುಮಾರು ಹದಿನೇಳು ಲಕ್ಷದ ಸಮೀಪ ಸಾಗುತ್ತಿದೆ. ನಿಜಕ್ಕೂ ಈ ಪರಿಯ ಚಂದಾದಾರರನ್ನು, ಕೇಳುಗರನ್ನು ಕೇವಲ ಎರಡು ವರ್ಷಗಳಲ್ಲಿ ಕನ್ನಡದ ನೆಲದಲ್ಲಿ ಗಳಿಸಿದ್ದು ಗಮನಾರ್ಹ ಸಾಧನೆಯೇ ಸರಿ! ದೊಡ್ಡಮಟ್ಟದ ಗಣನೀಯ ಸಾಹಸವೂ ಅಹುದು
ಎಂದೇ ಭಾವಿಸುತ್ತೇನೆ. ಪುಸ್ತಕವನ್ನು ಓದಿ ವಿವರವಾಗೇ ಪಡೆಯಬಹುದಾದದ್ದನ್ನು ತೀರಾ ಎಂಬಷ್ಟು ಕಡಿಮೆ ಅವಧಿಯಲ್ಲಿ
ಕೇಳುಗರ ಮನಸ್ಸನ್ನು ಏಕಾಗ್ರವಾಗಿ ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದು ರಾಘವೇಂದ್ರರ ದನಿಯೆಂಬುದನ್ನೂ ಯಾರೂ ಅಲ್ಲ ಗಳೆಯುವಂತಿಲ್ಲ.
ಶ್ರೀಕೃಷ್ಣನ ಬಗ್ಗೆಯೇ ಕೆಲವು ವಿಡಿಯೋಗಳನ್ನು ಮೀಡಿಯಾ ಮಾಸ್ಟರ್ಸ್ ಮಾಡಿದೆ. ಒಂದೊಂದರ ಕಥಾಹಂದರವೂ, ನಿರೂಪಣೆಯೂ ವಿಭಿನ್ನ ಮತ್ತು ವಿಶಿಷ್ಟ. ಮೇಲಾಗಿ ಪ್ರತಿಯೊಂದೂ ವಿಡಿಯೋದಲ್ಲೂ ವಸ್ತು ವಿಚಾರಗಳ ನಿರಂತರತೆಯನ್ನು ಕಾಯ್ದುಕೊಂಡೇ ಸರಣಿಯ ರೂಪದಲ್ಲಿ ಪ್ರಸ್ತುತಪಡಿಸುವುದು ಪ್ರಧಾನವಾಗಿರುತ್ತದೆ.. ಅದಕ್ಕೆ ಸಂಬಂಧಿತ ವಿಡಿಯೋ ಲಿಂಕನ್ನು ಮತ್ತೆ ಮತ್ತೆ ನೀಡುವುದು. ತಾನು ಏನು ಕೊಟ್ಟರೂ ಅದು ಸತ್ಯಪ್ರಮಾಣವಾಗಿರಬೇಕು ಎಂಬ ಸತ್ ಪ್ರಾಮಾಣಿಕವಾದ ಹಂಬಲ ದಲ್ಲಿ ರಾಘವೇಂದ್ರರ ಸ್ವಾಧ್ಯಾಯದ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಗುವುದು ಪ್ರತಿ ವಿಡಿಯೋದಲ್ಲಿ ಪ್ರೂವ್ ಆಗುತ್ತಲೇ ಇದೆ.
ಮಹಾಭಾರತ ಕಥಾಮೃತದ ಪ್ರತಿಯೊಂದು ವಿಡಿಯೋಗಳು ಜನಪ್ರಿಯ ವಾಗಿದೆ. ನನ್ನ ಅನೇಕ ವಿದ್ಯಾರ್ಥಿಗಳು ಹುಚ್ಚು ಹಿಡಿದವ ರಂತೆ ರಾಘವೇಂದ್ರರ ದನಿಗೆ ಕಿವಿಗೊಡುತ್ತಾರೆ. ಮಹಾಭಾರತದ ಕತೆಯನ್ನು ತದೇಕಚಿತ್ತರಾಗಿ ಕೇಳುತ್ತಾರೆ. ಕತೆಯೆಂದರೆ ಯಾರಿಗೆ ತಾನೆ ಇಷ್ಟವಲ್ಲ ಹೇಳಿ? ಅದರಲ್ಲೂ ಈ ಕಾಲದ ತಲೆಮಾರಿನ ಮಕ್ಕಳಿಗೆ ಟಿವಿ, ಮೊಬೈಲ, ಫೇಸ್ ಬುಕ್, ವಾಟ್ಸ್ಯಾಪ್, ಇನ್‌ಸ್ಟಾ ಗ್ರಾಮುಗಳ ಹುಚ್ಚುಹಿಡಿದು ಹೋಗಿದೆ.
ಅವರನ್ನು ತನ್ನ ಮಾತುಗಳತ್ತ ಒಲಿಸಿಕೊಳ್ಳುವ ರಾಘವೇಂದ್ರರ ಜಾಣ್ಮೆ ಕತೆಯ ರೂಪದಲ್ಲಿಯೂ, ಅನೇಕ ವರ್ತಮಾನದ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ರೂಪದಲ್ಲಿಯೂ ಅಭಿವ್ಯಕ್ತವಾಗುತ್ತಿರೋದು ಎಲ್ಲ ದೃಷ್ಟಿಯಿಂದಲೂ ಸಮಷ್ಟಿಯ ಹಿತವಾಗಿದೆ. ಮಾಹಿತಿಗಳ ಜ್ಞಾನಪೂರೈಕೆಯೂ ವಿಷಯಾಸಕ್ತಿಯೂ ಹುಟ್ಟಿಸುವುದು ಸಣ್ಣ ಸಂಗತಿಯೇನಲ್ಲ. ಕೇವಲ ಮಹಾಭಾರತದ ಕತೆಗಳನ್ನು ಮಾತ್ರ ಕೇಳುವುದಲ್ಲದೆ ಮಕ್ಕಳ ಕುತೂಹಲ ಇನ್ನೂ ಹಲವು ಬಗೆಯಲ್ಲಿ ಇದೆಯೆಂಬುದು ನನಗೆ ಸ್ಪಷ್ಟವಾಗಿದೆ.
ಅವೆಂದರೆ ರಾಜೀವ್ ಗಾಂಧಿ ಹತ್ಯೆ, ಲಿಂಕನ್ ಸಾವು, ಇಂದಿರಾಗಾಂಧಿ ಹತ್ಯೆ, ನಂಬಿ ನಾರಾಯಣನ್ ವಿರುದ್ಧದ ಸಂಚು, ಸಪ್ತಲೋಕಗಳು, ಲಾಕ್ ಡೌನ್ ಸಾಧಕ-ಬಾಧಕ, ಚುನಾವಣೆ, ಬಜೆಟ್ಟು, ಮೋದಿ ಸರ್ಕಾರದ ಅಂತಾ ರಾಷ್ಟ್ರೀಯ ನಡೆಗಳು, ವಿದೇಶಿ ನೀತಿಗಳು, ಕೋವಿಡ-19 ಸಾಂಕ್ರಾಮಿಕ ರೋಗದ ಹರಡುವಿಕೆಯಿಂದ ಹುಟ್ಟಿದ ಆತಂಕದಲ್ಲಿ ಸರಕಾರಗಳು ನಿರ್ವಹಿಸಿದ ಪಾತ್ರಗಳ ವಿಶ್ಲೇಷಣೆ, ಈ ಸರಿಹೊತ್ತಲ್ಲಿ ಜನಸಾಮಾನ್ಯರು ನಿತ್ಯದ ಬದುಕಿನಲ್ಲಿ ಸಮೂಹಕ್ಕೆ ಹೇಗೆ ಹಿತವಾಗುವಂತೆ ನಡೆದುಕೊಳ್ಳ ಬೇಕು ಎಂಬುದನ್ನು ರಾಘವೇಂದ್ರರು ಮನಗಂಬುವಂತೆ ಹೇಳಿದ್ದು ಸಾಮಾಜಿಕನೊಬ್ಬನ ಕರ್ತವ್ಯವನ್ನು ಪ್ರತಿನಿಧಿಸುತ್ತದೆ. ಪ್ರತಿಬಿಂಬಿಸುತ್ತದೆ.
ಮೀಡಿಯಾ ಮಾಸ್ಟರ್ಸ್ ಬಿಡುಗಡೆಗೊಳಿಸಿದ ಯಾವುದೇ ವಿಡಿಯೋವನ್ನು ನೋಡಿ, ಅದರಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಸುವುದು ಮುಖ್ಯವಾಗಿರುತ್ತದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವರ್ತಮಾನಗಳಿಗೆ ಸದ್ಯದ ತುರ್ತಿಗೆ ಸ್ಪಂದಿಸುವುದು, ವಿಶ್ಲೇಷಣೆಯ ಮೂಲಕ ಜನರ ವೈಚಾರಿಕತೆಯನ್ನು ಮತ್ತಷ್ಟು ತೀವ್ರವಾಗಿ ವಿಸ್ತರಿಸುವುದು. ಚೀಣೀ ವೈರಾಣುವೊಂದರ ವಿಷಯದ ಹಲವು ವಿಡಿಯೋಗಳನ್ನು ಮಾಡಿದ ರಾಘವೇಂದ್ರರು ಕರೋನಾ ಕುರಿತಾದ ಜನರಲ್ಲಿರುವ ಆತಂಕವನ್ನು ದಮನಿಸಲು ತುಂಬಾ ಶ್ರಮವಹಿಸುತ್ತಿದ್ದಾರೆ.
ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕಾರ್ಯ ಅಂತ ಸುಮ್ಮನಾಗದೆ ಆ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ. ಪತ್ರಿಕೆಗಳು, ಟಿವಿಗಳು ಈ ಕಾರ್ಯವನ್ನು ಚೆನ್ನಾಗಿಯೇ ಮಾಡುತ್ತಿರುವುದಾದರೂ ಅವುಗಳಿಗೆ ಕಮರ್ಷಿಯಲ್ ದೃಷ್ಟಿಕೋನವಿರುತ್ತದೆಂದು ಭಾವಿಸಬಹುದು. ಆದರೆ ರಾಘವೇಂದ್ರರಿಗೆ ಅಂಥ ಅಸ್ತಿತ್ವವೇ ಇಲ್ಲ. ಜರೂರತ್ತೂ ಇಲ್ಲ. ಜನರಿಗೆ ತಿಳಿ ಹೇಳಬೇಕು ಅಷ್ಟೇ, ಹೇಳಬೇಕಾದುದನ್ನು, ಹೇಳುವುದನ್ನು ಜನ ಒಪ್ಪಿ ಸ್ವೀಕರಿಸಬೇಕು.
ಸ್ವಲ್ಪಮಟ್ಟಿಗಾದರೂ ಅನುಸರಿಸಬೇಕು. ಸಾಮಾಜಿಕ ಪ್ರಜ್ಞೆಯನ್ನು ಅರಿತು ಅದರಂತೇ ಸಾಮಾಜಿಕ ಜವಾಬ್ದಾರಿಯನ್ನು ಜನರಲ್ಲಿ ಮೂಡಿಸುವುದು ಅತೀ ತುರ್ತಾಗಿ ಆಗಬೇಕಾದ ಕಾರ್ಯವಾಗಿತ್ತು. ಅದನ್ನು ರಾಘವೇಂದ್ರರು ಚೆನ್ನಾಗಿಯೇ ನಿರ್ವಹಿಸು ತ್ತಿದ್ದಾರೆ. ಆ ಮಟ್ಟಿಗೆ ಅವರು ಅಭಿನಂದನಾರ್ಹರು. ಕೊನೆಯ ಮಾತು: ಮೀಡಿಯಾ ಮಾಸ್ಟರ್ಸ್‌ನ ಎಲ್ಲ ವಿಡಿಯೋಗಳ
ಬಗ್ಗೆ ಮಾತನಾಡಲಾರೆ. ಅಸಾಧ್ಯವದು!
ಆದರೆ, ಗತ್ತು, ಗೈರತ್ತು ಕ್ಲೀಷೆಗಳು ಇಲ್ಲವೆಂದು ನಾನು ಪರಿಭಾವಿಸಿದ ರಾಘವೇಂದ್ರರಲ್ಲಿ ನನ್ನದೊಂದು ವಿನಂತಿಯಿದೆ. ಅದೇ ನೆಂದರೆ, ಮೀಡಿಯಾ ಮಾಸ್ಟರ್ಸ್ ವಿಡಿಯೋಗಳು ನಮ್ಮ ಕನ್ನಡದ ಮಕ್ಕಳಿಗೆ ಶಾಲೆಗಳಲ್ಲಿ ಸಿಗುವಂತಾಗಬೇಕೆಂಬುದು. ತಮ್ಮ ರಾಮಾಯಣ, ಮಹಾಭಾರತ, ಪುರಾಣಗಳು, ನದಿ, ಪರ್ವತಗಳು, ದೇಶ-ವಿದೇಶಗಳ ವಿಸ್ಮಯಗಳೇ ಮುಂತಾದ ವಿಡಿಯೋಗಳನ್ನು ಶಾಲೆಗಳಲ್ಲಿ ನೈತಿಕ ಶಿಕ್ಷಣದ ಅವಧಿಯಲ್ಲಿ ಮಕ್ಕಳಿಗೆ ತೋರಿಸುವಂತಾಗಬೇಕು.
ಇಂಥ ವ್ಯವಸ್ಥೆಯನ್ನು ಮಾಡುವುದಕ್ಕೆ ರಾಘವೇಂದ್ರರು ಸಹಕರಿಸಬೇಕು. ನಮ್ಮ ಆರ್ಷೇಯ ಪರಂಪರೆಯ ಬೌದ್ಧಿಕ ಸಿರಿವಂತಿ ಕೆಯು ನಮ್ಮ ಮಕ್ಕಳಿಗೆ ಬಾಲ್ಯದ ಈ ಮೂಲಕವಾದರೂ ಸಿಗುವಂತಾಗಬೇಕು. ಕೇಳುವ, ನೋಡುವ, ಓದುವ ಕಲಿಕೆಯ ಕೌಶಲ ಗಳನ್ನು ಹೆಚ್ಚಿಸುವ ಇಂಥ ವಿಡಿಯೋಗಳು ಮಕ್ಕಳಿಗೆ ಮನರಂಜನೆಯ ಜತೆಯಲ್ಲಿ ಮಾಹಿತಿಯನ್ನೂ ನೀಡುವುದರಿಂದ ಮಕ್ಕಳ ಆಸಕ್ತಿಯನ್ನು ಅಧ್ಯಯನದ ಕಡೆಗೆ ಚಲಿಸಬಹುದು. ಮುಖ್ಯವಾಗಿ ಇಲ್ಲಿ ಕನ್ನಡದ ಉಳಿವಿನ ಚಿಂತನೆಯಿದೆ. ಶೈಕ್ಷಣಿಕ ವಾಗಿ ಅಪೇಕ್ಷಿತ ಬದಲಾವಣೆಯೂ ಆದೀತು.