Saturday, 14th December 2024

ದಿಕ್ಕೆಟ್ಟ ಮುಖಂಡನಿಂದ ಕಂಗೆಟ್ಟ ಸಾರಿಗೆ ನೌಕರರು

ಅವಲೋಕನ

ಚಂದ್ರಶೇಖರ ಬೇರಿಕೆ

ಕರೋನಾ ಸಾಂಕ್ರಾಮಿಕವು 1ನೇ ಅಲೆಯಿಂದ 2ನೇ ಅಲೆಗೆ ಕಾಲಿಟ್ಟು ಇನ್ನಷ್ಟು ತೀವ್ರವಾಗಿ ಅಬ್ಬರಿಸುತ್ತಿದ್ದಂತೆ ರಾಜ್ಯದಲ್ಲಿ 2020ರ ಡಿಸೆಂಬರ್‌ನಲ್ಲಿ ನಡೆಸಲಾದ ಸಾರಿಗೆ ನೌಕರರ ಮೊದಲ ಹಂತದ ಮುಷ್ಕರ ಎರಡನೇ ಹಂತದಲ್ಲಿ ಸರಕಾರದಿಂದ
ಉಪೇಕ್ಷೆಗೊಳಗಾದ ಮಧ್ಯೆಯೂ 15 ದಿನದ ಹೋರಾಟದ ಬಳಿಕ ರಾಜ್ಯ ಹೈಕೋರ್ಟ್‌ನ ಸೂಚನೆಯಂತೆ ಕೊನೆಗೊಂಡಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಇಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ಎಂಬ 4 ವಲಯಗಳ ಸಾರಿಗೆ ನೌಕರರ ಮುಷ್ಕರದ ಮೊದಲ ಹಂತದಲ್ಲಿ ಸಾರಿಗೆ ನೌಕರರು ಸರಕಾರದ ಮುಂದೆ  9ಬೇಡಿಕೆಗಳನ್ನು ಇಟ್ಟಿದ್ದರು. ಆ ಪೈಕಿ 8 ಬೇಡಿಕೆ ಗಳನ್ನು ಈಡೇರಿಸಲಾಗಿದೆ ಎಂದು ಸರಕಾರ ಹೇಳಿಕೊಂಡಿದ್ದು, ಆದರೆ ಪ್ರಮುಖ ಬೇಡಿಕೆಯಾದ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ನೀಡಲು ಸಾಧ್ಯವಿಲ್ಲವೆಂದೂ ಸರಕಾರ ಸ್ಪಷ್ಟಪಡಿಸಿತ್ತು.

ಆದಾಗ್ಯೂ ಕಾರ್ಮಿಕರ ಹಿತ ಕಾಯುವ ಸೋಗಿನಲ್ಲಿ ಕಾರ್ಮಿಕ ಮುಖಂಡರು ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಧಾವಂತ ದಲ್ಲಿ ಸಾರಿಗೆ ಸಿಬ್ಬಂದಿಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ರಹಸ್ಯವಾಗೇನೋ ಉಳಿದಿಲ್ಲ. ಕಾರ್ಮಿಕರು ಹರಕೆಯ ಕುರಿಯಾದರೂ ಪರವಾಗಿಲ್ಲ, ಆದರೆ ತನ್ನ ಪ್ರತಿಷ್ಠೆ ಎಂದೂ ನೆಲ ಕಚ್ಚಬಾರದು ಎಂಬುದು ಈ ನಾಯಕರ ಒಂದಂಶದ ಕಾರ್ಯ ಸೂಚಿಯಾಗಿತ್ತು. ಅದರಲ್ಲೂ ತಾನೊಬ್ಬ ರೈತ ಮುಖಂಡ, ಸಾರಿಗೆ ನೌಕರರ ಸಂಘದ ಮುಖಂಡ ಇತ್ಯಾದಿ… ಇತ್ಯಾದಿ… ಎಂಬ ಬಹುಮುಖ ಪ್ರತಿಭೆಗೆ ಯಾವುದೇ ಚ್ಯುತಿ ಅಥವಾ ಧಕ್ಕೆಯಾಗಬಾರದು ಎಂಬುದು ಒಬ್ಬ ಸಕಲಕಲಾವಲ್ಲಭನ ಅಂಬೋಣ ವಾಗಿತ್ತು.

ತಾನು ಒಬ್ಬ ಪ್ರಭಾವಿ ರೈತ ಮತ್ತು ಸಾರಿಗೆ ನೌಕರರ ಸಂಘದ ಮುಖಂಡನಾಗಿಯೇ ಸಮಾಜದಲ್ಲಿ ಗುರುತಿಸಿಕೊಂಡಿರಬೇಕು ಮತ್ತು ಆ ಸ್ಥಾನಮಾನ ಅಬಾಧಿತವಾಗಿರಬೇಕು, ಪ್ರಶ್ನಾತೀತನಾಗಿರಬೇಕು ಎಂಬ ಮನೋವೃತ್ತಿಯಿಂದ ಮುಷ್ಕರ ಮುಂದುವರಿಯುತ್ತಲೇ ಇತ್ತು. ಈ ಮುಖಂಡರ ವರಸೆ ಹೇಗಿತ್ತೆಂದರೆ ‘ಯಾರನ್ನೋ ಬಾವಿಗೆ ತಳ್ಳಿ ಆಳ ನೋಡುವ ಪ್ರವೃತ್ತಿ’ ಎಂದರೆ ತಪ್ಪಾಗಲಾರದು.
ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿ ಇನ್ನಷ್ಟು ರೋಚಕತೆಗೊಳಿಸಲು ಟೊಂಕ ಕಟ್ಟಿ ನಿಂತ ವ್ಯಕ್ತಿ ಈ ಹಿಂದೆ ರೈತ ಮುಖಂಡನಾಗಿ ಹೋರಾಟದಲ್ಲಿ ಕಾಣಿಸಿಕೊಂಡವರು.

ಕೇಂದ್ರ ಸರಕಾರದ 3 ಕೃಷಿ ಕಾಯಿದೆಗಳು ಮತ್ತು ರಾಜ್ಯ ಸರಕಾರದ ಕೃಷಿ ನೀತಿಯ ವಿರುದ್ಧ ರೈತರು ಪ್ರತಿಭಟನೆಗಳಿಗಿಳಿದಾಗ
ರೈತ ಹೋರಾಟದ ನೇತೃತ್ವ ವಹಿಸಿದವರಲ್ಲಿ ಈ ವ್ಯಕ್ತಿಯೂ ಒಬ್ಬರು. ರೈತ ಹೋರಾಟಕ್ಕೆ ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ಜಗ್ಗದೇ ಇದ್ದಾಗ ಮತ್ತು ರೈತ ಹೋರಾಟಕ್ಕೆ ಪ್ರಚೋದನೆ ನೀಡಿದರೆಂಬ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ತೀವ್ರ ತೆಗಳಿಕೆಗೆ ಒಳಗಾದ ಈ ರೈತ ಮುಖಂಡ ಸರಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆ ಸಂದರ್ಭದಲ್ಲಿ ಸಾರಿಗೆ ನೌಕರರ ಮುಷ್ಕರವನ್ನು ಕೂಡಿಕೊಂಡು ಇದ್ದಕ್ಕಿದ್ದಂತೆ ಸಾರಿಗೆ ನೌಕರರ ಸಂಘದ ಮುಖಂಡನಾಗಿಯೂ ಗುರುತಿಸಿ ಕೊಳ್ಳುತ್ತಾರೆ ಎಂದರೆ ಆ ವ್ಯಕ್ತಿಯ ಸಿದ್ಧಾಂತ ಮತ್ತು ಬದ್ಧತೆ ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.

ಎಲ್ಲಿಯ ರೈತ ಮುಖಂಡ ? ಎಲ್ಲಿಯ ಸಾರಿಗೆ ನೌಕರರ ಸಂಘದ ಮುಖಂಡ?. ಸವಾಲಿನ ಸಂದರ್ಭಗಳಲ್ಲಿಯೂ ಸಹ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಸರಕಾರ ಈಗಾಗಲೇ ಈಡೇರಿಸಿದ್ದು, 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಭತ್ಯೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು’ಎಂದು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಏಪ್ರಿಲ್ 9, 2021 ರಂದು ಸಾರಿಗೆ ನೌಕರರಲ್ಲಿ ಮನವಿ ಮಾಡಿಕೊಂಡರು.

ಇದಕ್ಕೂ ಜಗ್ಗದೇ ಇದ್ದಾಗ ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ವೇತನ ನೀಡುವುದಿಲ್ಲ, ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುತ್ತೇವೆ, ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸರಕಾರ ಖಂಡತುಂಡ ವಾಗಿ ಹೇಳಿದ್ದು ಮಾತ್ರವಲ್ಲ ಮುಷ್ಕರ ಮುಂದುವರಿದಂತೆ ಸರಕಾರ ತನ್ನ ನಿಲುವನ್ನು ಇನ್ನಷ್ಟು ಬಿಗಿಗೊಳಿಸಿತ್ತು. ರೈತ
ಮುಖಂಡನಾಗಿದ್ದುಕೊಂಡು ರಾತ್ರೋರಾತ್ರಿ ಸಾರಿಗೆ ನೌಕರರ ಸಂಘದ ಮುಖಂಡನಾಗಿಯೂ ಗುರುತಿಸಿಕೊಂಡ ವ್ಯಕ್ತಿಯನ್ನು ಮತ್ತು ಸಾರಿಗೆ ನೌಕರರ ಕೂಟದವರನ್ನು ಉಪೇಕ್ಷಿಸುವ ತಂತ್ರವನ್ನೂ ಅನುಸರಿಸಿತ್ತು. ಮುಷ್ಕರ ನಡೆಸುವ ಸಮಯ ಮತ್ತು
ಸನ್ನಿವೇಶ ಸೂಕ್ತವಾಗಿಲ್ಲದ ಕಾರಣ ಸಹಜವಾಗಿಯೇ ಸರಕಾರದ ಪರವಾಗಿ ಸಾರ್ವಜನಿಕ ಅನುಕಂಪವೂ ಇತ್ತು.

ಸಾರಿಗೆ ಸಿಬ್ಬಂದಿಗಳ ಪೈಕಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳಿಗೆ ಸರಕಾರ ವೇತನ ಬಿಡುಗಡೆ ಮಾಡಿತ್ತು. ಆದರೆ ಶಿಸ್ತು ಕ್ರಮದ ಎಚ್ಚರಿಕೆಗೂ ಬಗ್ಗದ ಕೆಲವು ನೌಕರರನ್ನು ಸೇವೆಯಿಂದ ಅಮಾನತು, ವಜಾ, ವರ್ಗಾವಣೆ ಮತ್ತು ನಿವೃತ್ತಿ ಅಂಚಿನಲ್ಲಿದ್ದ ನೌಕರರನ್ನು ಅವಧಿ ಪೂರ್ವ ನಿವೃತ್ತಿಗೆ ಒಳಪಡಿಸಿ ಖಡಕ್ ಸಂದೇಶವನ್ನು ರವಾನಿಸಿತ್ತು. ಇದರಿಂದ ವಿಚಲಿತರಾದ ಮುಷ್ಕರ ನಿರತ ಸಾರಿಗೆ ನೌಕರರ ಪೈಕಿ ಹೆಚ್ಚಿನವರು ತಮ್ಮ ಮುಖಂಡರುಗಳ ಮಾತಿಗೆ ಸೊಪ್ಪು ಹಾಕದೆ ಕರ್ತವ್ಯಕ್ಕೆ ಹಾಜರಾಗಲು ಆರಂಭಿಸಿದರು.

ಆರಂಭದಲ್ಲಿ ಸರಕಾರದ ವಿರುದ್ಧ ಸೆಡ್ಡು ಹೊಡೆದ ಮುಖಂಡರುಗಳು ಸರಕಾರದ ಬಿಗಿ ನಿಲುವಿನಿಂದ ಪರಿಸ್ಥಿತಿ ತಮ್ಮ ಕೈಜಾರು ವುದನ್ನು ಸೂಕ್ಷ್ಮವಾಗಿ ಅರಿತು ಸರಕಾರದ ಕಡೆಯಿಂದ ಮಾತುಕತೆಗೆ ಯಾವುದೇ ಆಹ್ವಾನವಿಲ್ಲದಿದ್ದರೂ ಅವರಾಗಿಯೇ ಮುಂದಾಗಿ ಸಚಿವರುಗಳನ್ನು ಭೇಟಿ ಮಾಡಿ ಚೌಕಾಶಿ ಆರಂಭಿಸಿದರು. ಈ ಮಧ್ಯೆ ಮುಷ್ಕರವನ್ನು ಅಂತ್ಯಗೊಳಿಸಲು ಒಂದು ನೆಪಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಮೃದುವಾದ ಎಚ್ಚರಿಕೆ ಹೊರಬೀಳುತ್ತಿದ್ದಂತೆ ಪ್ರವಾಹದಲ್ಲಿ ಕೊಚ್ಚಿ
ಹೋಗುತ್ತಿದ್ದವನಿಗೆ ಬಳ್ಳಿ ಆಸರೆಯಾದಂತೆ ಸಾರಿಗೆ ನೌಕರರ ಸಂಘದ ಮುಖಂಡ ದೊಡ್ಡ ಮುಖಭಂಗದಿಂದ ಪಾರಾಗಲು ಇದು
ಸಹಕಾರಿಯಾಯಿತು.

ಈ ಮುಖಂಡರೆನಿಸಿಕೊಂಡವರ ಪ್ರತಿಷ್ಠೆ, ಹಠಮಾರಿತನ ಮತ್ತು ಹುಂಬತನದ ಧೋರಣೆಯಿಂದ ಅವರನ್ನು ಅನುಸರಿಸಿದ ವಿವೇಚನೆಯಿಲ್ಲದ ನೌಕರರ ದೈನಂದಿನ ಜೀವನ ನಿರ್ವಹಣೆಗೆ ತೊಡಕಾಗಿದ್ದು ಸುಳ್ಳಲ್ಲ. ಸಾರ್ವಜನಿಕ ಸಾರಿಗೆಯನ್ನೇ
ಅವಲಂಬಿಸಿದ್ದ ಪ್ರಯಾಣಿಕರು ಸಾರಿಗೆ ನಿಗಮಗಳ ಬಸ್ ಇಲ್ಲದ ಕಾರಣ ಹಬ್ಬದ ಪ್ರಯುಕ್ತ ದೂರದ ಊರುಗಳಿಗೆ ತೆರಳಲು ದುಪ್ಪಟ್ಟು ಪಾವತಿಸಿ ಜನಸಂದಣಿಯೊಂದಿಗೆ ತೆರಳಿದರು.

ಇದರಿಂದ ಕರೋನಾ 2ನೇ ಅಲೆಯ ಈ ವಿಷಮ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ಪ್ರಸರಣೆ ಇನ್ನಷ್ಟು ತೀವ್ರಗೊಳ್ಳಲು ಎಡೆ
ಮಾಡಿಕೊಟ್ಟಂತಾಯಿತು. ಇನ್ನು ಖಾಸಗಿ ವಾಹನಗಳೋ ಈ ಸನ್ನಿವೇಶವನ್ನು ಸರಿಯಾಗಿಯೇ ದುರುಪಯೋಗಪಡಿಸಿಕೊಂಡು ಸ್ವಾರ್ಥ ಸಾಧನೆಗಾಗಿ ಹಗಲು ದರೋಡೆಗಿಳಿದರು. ಸಾರಿಗೆ ನೌಕರರ ಮುಷ್ಕರದಿಂದ ಸರಕಾರಕ್ಕೆ ಆದಾಯ ಖೋತಾ ಆಗಿದ್ದು ಬಿಟ್ಟರೆ ಬೇರೆ ಯಾವ ದುಷ್ಪರಿಣಾಮವೂ ಬೀರಿಲ್ಲ. ಆದರೆ ಇದರಿಂದ ತೊಂದರೆಗೆ ಸಿಲುಕಿದವರು ಸಾರ್ವಜನಿಕರು ಮಾತ್ರ.

ಪ್ರಯಾಣಕ್ಕೆ ಸಾರಿಗೆ ವ್ಯವಸ್ಥೆಯೂ ಇಲ್ಲದೆ ಬಸ್ ನಿಲ್ದಾಣಗಳಲ್ಲಿಯೇ ಪರಿತಪಿಸಬೇಕಾದ ಪರಿಸ್ಥಿತಿ, ಇಲ್ಲವೇ ಖಾಸಗಿ ವಾಹನಗಳಿಗೆ ದುಪ್ಪಟ್ಟು ಪಾವತಿಸಿ ಪ್ರಯಾಣಿಸಬೇಕಾದ ಅನಿವಾರ್ಯತೆ, ಬಸ್‌ಗಾಗಿ ಕಾದು ದೈಹಿಕ ಬಳಲಿಕೆ ಮತ್ತು ಆಹಾರದ ಸಮಸ್ಯೆ, ಚಿಕ್ಕ
ಮಕ್ಕಳೊಂದಿಗೆ ಮಹಿಳೆಯರ ಪರಿಸ್ಥಿತಿ, ವೃದ್ಧರು ಮತ್ತು ಅನಾರೋಗ್ಯಕ್ಕೆ ಒಳಗಾದ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು.

ವಾಸ್ತವ ಮತ್ತು ಹೊಣೆಗಾರಿಕೆಯನ್ನು ಅರಿತು ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದು, ಬಸ್‌ಗೆ ಕಲ್ಲು ತೂರಿ ವಿಕೃತಿಯನ್ನು ಮೆರೆದಿದ್ದು, ದುಬಾರಿ ಬಸ್‌ಗಳ ಗಾಜುಗಳನ್ನು ಹೊಡೆದು ಹಾಕಿದ್ದು, ಬಸ್ ಚಾಲಕನನ್ನೇ ಕಲ್ಲು ಹೊಡೆದು ಸಾಯಿಸುವಷ್ಟರ ಮಟ್ಟಿಗೆ ಕ್ರೂರತ್ವ ಪ್ರದರ್ಶಿಸಿದ್ದು ದೇಶದ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿಲ್ಲದಿರುವುದನ್ನು ಸೂಚಿಸುತ್ತದೆ.

ಯಾರಿಗಾದರೂ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಕೆಲವೊಂದು ನೀತಿ ನಿರ್ಧಾರಗಳ ವಿರುದ್ಧ ಪ್ರತಿಭಟಿಸಲು ಅವಕಾಶ ವಿದೆಯೇ ಹೊರತು ತಮ್ಮ ಅಪೇಕ್ಷೆಗೆ ವಿರುದ್ಧವಾಗಿರುವವರ ಮೇಲೆ ಹಲ್ಲೆ ಅಥವಾ ಕೊಲೆ ಮಾಡಲು ಯಾರಿಗೂ ಅಧಿಕಾರವಿಲ್ಲ.
ಮುಷ್ಕರ ಕರೆ ನೀಡಿದ ಹೊರತಾಗಿಯೂ ಅದನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ಚಪ್ಪಲಿ ಹಾರ ಹಾಕುತ್ತೇವೆ ಎಂದು ಬೆದರಿಕೆ ಒಡ್ಡುವುದು ಹತಾಶೆಯ ಪ್ರವೃತ್ತಿ ಮತ್ತು ಪಾಳೇಗಾರಿಕೆ ಮನಸ್ಥಿತಿಯನ್ನು ಸೂಚಿಸುತ್ತದೆ.

ಆದಾಗ್ಯೂ ಈ ಬೆದರಿಕೆಗಳನ್ನು ನಿರ್ಲಕ್ಷಿಸಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳು ಸಾರ್ವಜನಿಕರ ಪಾಲಿಗೆ ಹೀರೋಗಳೆನಿಸಿ ಕೊಂಡರು. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಕೋವಿಡ್ –19 ಲಾಕ್ ಡೌನ್ ಸಂದರ್ಭದಲ್ಲಿ ಸಾರಿಗೆ ನೌಕರರು ಕರ್ತವ್ಯ ನಿರ್ವಹಿಸದೇ ಇದ್ದರೂ, ಸಂಸ್ಥೆಗೆ ಯಾವುದೇ ಆದಾಯ ಇಲ್ಲದಿದ್ದರೂ ನೌಕರರ ಹಿತರಕ್ಷಣೆಯನ್ನು ಗಮನ ದಲ್ಲಿಟ್ಟುಕೊಂಡು ಅವರಿಗೆ ವೇತನ ನೀಡಲು ಸರಕಾರ 2300 ಕೋಟಿ ಅನುದಾನ ನೀಡಿತ್ತು.

ಆದರೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಎಷ್ಟೋ ಸಂಸ್ಥೆಗಳು ಪೂರ್ಣ ವೇತನವನ್ನು ಪಾವತಿ ಮಾಡಿಲ್ಲ. ಒಂದು ವೇಳೆ ಪೂರ್ಣ ವೇತನ ಪಾವತಿ ಮಾಡಿದ್ದರೂ ಹಾಗೇ ಪಾವತಿ ಮಾಡಿದ ವೇತನವನ್ನು ಆ ಬಳಿಕದ ವೇತನದಲ್ಲಿ ಅಥವಾ ಇನ್ನಿತರ ಸೌಲಭ್ಯಗಳಿಗೆ ಕತ್ತರಿ ಹಾಕಿ ಸರಿಹೊಂದಿಸಿಕೊಂಡ ಸಂಸ್ಥೆಗಳು ಹಲವು. ಕೆಲಸದ ಮಧ್ಯೆ ಕನಿಷ್ಠ ಅವಧಿಯ ವಿಶ್ರಾಂತಿ ಪಡೆದು ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿಯಿದೆ.

ಆದರೂ ಖಾಸಗಿ ವಲಯದ ಕಾರ್ಮಿಕರು ಅಂತಹ ಸಂಸ್ಥೆಗಳ ವಿರುದ್ಧ ಗುಟುರು ಹಾಕಿಲ್ಲ. ಯಾಕೆಂದರೆ ಸಂಸ್ಥೆಗಳು ಉಳಿದು ಕೊಂಡರಷ್ಟೇ ಮುಂದಿನ ದಿನಗಳಲ್ಲಿ ನಮಗೆ ಜೀವನೋಪಾಯಕ್ಕೆ ಕೆಲಸ ಸಿಗಲಿದೆ ಎಂಬ ಸ್ಪಷ್ಟ ಅರಿವು ಖಾಸಗಿ ವಲಯದ ನೌಕರರು ಮತ್ತು ಕಾರ್ಮಿಕರಿಗೆ ಇತ್ತು. ಅನ್ನ ನೀಡಿದ ಸಂಸ್ಥೆಗೆ ತೊಂದರೆ ಕೊಡಲು ಅವರಿಗೆ ಮನಸಾಗಲಿಲ್ಲ. ಹಾಗಾಗಿ ಲಾಕ್
ಡೌನ್ ಸಂದರ್ಭದಲ್ಲಿನ ಅಲ್ಪಾವಧಿಯ ಸಂಕಷ್ಟಗಳನ್ನು ಅನುಭವಿಸಿದರೂ ಸಂಸ್ಥೆಗಳ ಮೇಲೆ ಭರವಸೆಯನ್ನು ಕಳೆದುಕೊಂಡು ವಿಚಲಿತರಾಗಲಿಲ್ಲ.

ಸಂಸ್ಥೆಗಳಿಗೆ ದ್ರೋಹ ಬಗೆದಿಲ್ಲ, ಕಲ್ಲು ಹೊಡೆದಿಲ್ಲ, ಸಂಸ್ಥೆಯ ಕಾರ್ಯಾಚರಣೆಗೆ ತಡೆಯೊಡ್ಡಿಲ್ಲ. ಆದಾಗ್ಯೂ ಖಾಸಗೀ ವಲಯ ದಲ್ಲಿ ಕೆಲಸ ಕಳೆದುಕೊಂಡು ಕರೋನಾ ಹೊಡೆತಕ್ಕೆ ಪತರಗುಟ್ಟಿ ಹೋದವರೆಷ್ಟೋ? ಇನ್ನೊಂದು ಗಮನಿಸಬೇಕಾದ ವಿಚಾರ ವೆಂದರೆ ಖಾಸಗೀ ವಲಯದ ಕಾರ್ಮಿಕರು ಸರಕಾರ ವಿವಿಧ ವರ್ಗದ ಕಾರ್ಮಿಕರಿಗೆ ನಿಗದಿಪಡಿಸಿದ ಕನಿಷ್ಠ ವೇತನವನ್ನಷ್ಟೇ ಪಡೆಯುತ್ತಾರೆ.

ಅದೂ ಅಲ್ಲದೇ ಗ್ರಾಹಕ ಬೆಲೆ ಸೂಚ್ಯಂಕ ಏರಿಕೆಯ ಆಧಾರದಲ್ಲಿ ಪ್ರತಿ ಅಂಶ/ಸೂಚ್ಯಂಕಕ್ಕೆ 4 ಪೈಸೆಯಂತೆ ತುಟ್ಟಿ ಭತ್ಯೆಯನ್ನು ಲೆಕ್ಕ ಹಾಕಿದಾಗ ಪ್ರತೀ ವರ್ಷ ವಿವಿಧ ವರ್ಗದ ಕಾರ್ಮಿಕರ ವೇತನದಗುವ ಹೆಚ್ಚಳ 1 ಸಾವಿರ ರುಪಾಯಿಗಳನ್ನೂ ದಾಟುವುದಿಲ್ಲ.
ಸಾರ್ವಜನಿಕ ಸಂಸ್ಥೆ, ಉದ್ದಿಮೆಗಳ ಆದಾಯದ ಹಣವೇ ಆಗಲಿ, ಸಾರ್ವಜನಿಕರ ತೆರಿಗೆ ಹಣವೇ ಆಗಲಿ ಅದನ್ನು ಹಂಚಿಕೆ ಮಾಡುವಾಗ ಕೆಲವೊಂದು ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸಮಯ ಸನ್ನಿವೇಶಗಳನ್ನು
ಗಮನದಲ್ಲಿಟ್ಟುಕೊಳ್ಳಬೇಕು.

ಅದಕ್ಕಿಂತಲೂ ಮುಖ್ಯವಾಗಿ ಸಾರ್ವಜನಿಕರಿಗೆ ಉತ್ತರದಾಯಿ ಯಾಗಿರಬೇಕು. ಯಾವುದೇ ಸಮಿತಿ ಅಥವಾ ಆಯೋಗಗಳ ಶಿಫಾರಸ್ಸುಗಳನ್ನು ಅನುಷ್ಠಾನ ಗೊಳಿಸುವ ಮುಂಚೆ ಸರಕಾರದ ಆರ್ಥಿಕ ಸ್ಥಿತಿಗತಿಗಳನ್ನೂ ಪರಾಮರ್ಶೆ ಮಾಡಬೇಕಾಗುತ್ತದೆ.
ಆದರೆ ತಮ್ಮ ಬೇಡಿಕೆಗಳನ್ನು ಯಾವುದೇ ಮಾರ್ಗವನ್ನಾದರೂ ಅನುಸರಿಸಿ ಶತಾಯಗತಾಯ ಈಡೇರಿಸಿಕೊಳ್ಳಲೇಬೇಕೆಂಬ ಮನೋಭಾವನೆಯಿಂದ ಹಿಂಸಾತ್ಮಕ ಮಾರ್ಗವನ್ನು, ಆಸ್ತಿಪಾಸ್ತಿಗಳನ್ನು ಜಖಂ ಮಾಡಿ ವಿಕೃತಿ ಮೆರೆಯುವುದನ್ನು ಯಾರೂ
ಸಮರ್ಥಿಸುವುದಿಲ್ಲ. ಶಾಂತಿಯುತ ಪ್ರತಿಭಟನೆ ಗಳಿಂದ ಸಾಧ್ಯವಾಗದೇ ಇದ್ದಲ್ಲಿ ಕಾನೂನು ಹೋರಾಟದ ಮೂಲಕ ಸಾಧಿಸಿಕೊಳ್ಳಲು ಅವಕಾಶಗಳು ಮುಕ್ತವಾಗಿದೆ.

ಈ ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು, ಆದರೆ ದುರಾಸೆಗಳನ್ನಲ್ಲ ಎಂಬ ಮಹಾತ್ಮ ಗಾಂಧಿಯವರ ಮಾತು ಎಷ್ಟು
ಅರ್ಥಪೂರ್ಣವಾದುದು. ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ದುರಾಸೆಗಾಗಿ ಕೊಂದು ಹೊಟ್ಟೆ ಸೀಳುವ ಇಂತಹ ಪ್ರವೃತ್ತಿ ಯಿಂದ ಲಾಭದಾಯಕ ಸಂಸ್ಥೆಗಳು, ಉದ್ದಿಮೆಗಳು ನಷ್ಟದತ್ತ ಜಾರುವುದು ಖಚಿತ. ಇಂತಹ ಬೆಳವಣಿಗೆಗಳನ್ನು ಕಂಡಾಗ
ಸಾಮಾನ್ಯವಾಗಿ ಇಂತಹ ಎಲ್ಲಾ ಸಂಸ್ಥೆಗಳನ್ನು, ಉದ್ದಿಮೆಗಳನ್ನು ಖಾಸಗೀಕರಣ ಮಾಡುವುದು ಒಳಿತು ಎಂಬ ಚಿಂತನೆ ಸಾರ್ವಜನಿಕ ವಲಯದಲ್ಲಿ ಮೂಡಿ ಆ ನಿಟ್ಟಿನಲ್ಲಿ ಒತ್ತಾಯಗಳು, ಜನಾಭಿಪ್ರಾಯಗಳು ವ್ಯಕ್ತವಾದರೆ ಅದಕ್ಕೆ ಅಂತಹ ಸಂಸ್ಥೆ ಯಲ್ಲಿ ಅಥವಾ ಉದ್ದಿಮೆಯಲ್ಲಿ ಸೇವೆ ಸಲ್ಲಿಸುವ ನೌಕರರೇ ನೇರ ಕಾರಣವಾಗುತ್ತಾರೆ.

ಕೊನೆಯದಾಗಿ ಈ ಸಾರಿಗೆ ನೌಕರರು ಮುಷ್ಕರದಿಂದ ಸಾಧಿಸಿದ್ದಾದರೂ ಏನು? ಜೀವನ ನಿರ್ವಹಣೆಗೆ ಈಗಿನ ವೇತನ ಸಾಕಾಗುವು ದಿಲ್ಲ ಎಂಬುದನ್ನು ನಿರೂಪಿಸಲು ಬೀದಿಯಲ್ಲಿ ಭಿಕ್ಷೆ ಬೇಡುವ ನಾಟಕವನ್ನೂ ಮಾಡಿ ಕೊನೆಗೆ ಮುಷ್ಕರದ ಅವಧಿಯ ವೇತನ ವೂ ಇಲ್ಲದೆ ಪರಿತಪಿಸಬೇಕಾಗಿ ಬಂದಿರುವುದು ಸಾರಿಗೆ ನೌಕರರ ಮೂರ್ಖತನಕ್ಕೆ ಸಾಕ್ಷಿ. ಕಳೆದ 15 ದಿನಗಳಿಂದ ನಡೆದ ಮುಷ್ಕರದ ಅವಧಿಯಲ್ಲಿ ಒಟ್ಟು 119 ಬಸ್‌ಗಳಿಗೆ ಹಾನಿ ಮಾಡಲಾಗಿದ್ದು, 4 ನಿಗಮಗಳಿಗೆ ಒಟ್ಟು 287 ಕೋಟಿ ರು. ನಷ್ಟ ವಾಗಿದೆ.

ಮುಷ್ಕರ ಅವಧಿಯಲ್ಲಿ 4 ಸಾರಿಗೆ ನಿಗಮಗಳಿಂದ ಅಮಾನತುಗೊಂಡ 2941 ನೌಕರರು, ಸೇವೆಯಿಂದ ವಜಾಗೊಂಡ ತರಬೇತಿ ಹಂತದಲ್ಲಿದ್ದ 995 ನೌಕರರು, ನೋಟೀಸ್ ಜಾರಿಗೆ ಒಳಗಾದ 7666 ನೌಕರರು ಮತ್ತು ಅಂತರ್ ನಿಗಮಕ್ಕೆ ವರ್ಗಾವಣೆಗೊಂಡ 8000 ನೌಕರರಿಗೆ ಕಾನೂನು ನೆರವು ನೀಡಲು ಸಾರಿಗೆ ನೌಕರರ ಸಂಘದ ಮುಖಂಡರಿಗೆ ಸಾಧ್ಯವೇ?. ತಮ್ಮ ಕಾಲಿಗೆ ತಾವೇ ಚಪ್ಪಡಿ ಎಳೆದುಕೊಂಡಂತಹ ಪರಿಸ್ಥಿತಿಯನ್ನು ಕೆಲವು ಸಾರಿಗೆ ಸಿಬ್ಬಂದಿಗಳು ಸೃಷ್ಟಿಸಿಕೊಂಡರು.

ಒಂದು ಕಡೆ ಸಾರಿಗೆ ನೌಕರರ ಸಂಘದ ಮುಖಂಡ ಸಾರಿಗೆ ನೌಕರರಿಗೆ ಒಬ್ಬ ವಿಲನ್ ಎಂಬಂತಾದರೆ ಇನ್ನೊಂದು ಕಡೆ ಸಾರ್ವ ಜನಿಕರ ಹಿಡಿಶಾಪಕ್ಕೆ ಒಳಗಾಗ ಬೇಕಾಯಿತು. ಯಾರನ್ನೋ ನಂಬಿ ಬೀದಿಗಿಳಿದರೆ ಬೀದಿ ಪಾಲಾಗಬೇಕಾಗುತ್ತದೆ ಎಂಬುದಕ್ಕೆ ಸಾರಿಗೆ ನೌಕರರ ಮುಷ್ಕರ ಉತ್ತಮ ನಿದರ್ಶನ.