Friday, 13th December 2024

ಜೈಲು ಪಾಲಾಗುವ ನಿರಪರಾಧಿಗಳ ಒಡಲಾಳ ಎಂಥಾದ್ದು? 

ವಿರಾಜಯಾನ

ವಿರಾಜ್ ಕೆ ಅಣಜಿ

ಇಂದು, ನಾಳೆ ಎಂದು ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಕೊನೆಗೆ ಹೆನ್ರಿ ಮತ್ತು ಲಿಯೋನ್ ಏನೂ ತಪ್ಪು ಮಾಡಿಲ್ಲ ಎಂದು 2014ಲ್ಲಿ ತೀರ್ಪು ನೀಡಿ, ಇಬ್ಬರಿಗೂ ಮರಣ ದಂಡನೆಯಿಂದ ಮುಕ್ತಿ ನೀಡಿತ್ತು. ಆದರೆ, ಇಬ್ಬರನ್ನೂ ತಪ್ಪು ಮಾಡಿಲ್ಲ ಎಂದು ಕೋರ್ಟ್ ಹೇಳಲು ತೆಗೆದುಕೊಂಡಿದ್ದು ಬರೋಬ್ಬರಿ 31 ವರ್ಷ! ಆ ಬಾಲಕ ರಿಬ್ಬರೂ ತಾವು ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಲೆಂದೇ ತಮ್ಮ ಜೀವನದ ಬರೋಬ್ಬರಿ 31 ವರ್ಷವನ್ನು ವ್ಯಯಿಸಿಬಿಟ್ಟಿದ್ದರು.

ನೂರು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ಕಾನೂನಿಗೆ ಇರುವ ಅಘೋಷಿತ ಕಾನೂನು. ಇದು ಕಾನೂನಿನ ಧ್ಯೇಯವಾಕ್ಯವೂ ಹೌದು. ಕಾನೂನುಗಳು ಎಂದರೆ ದೇವಲೋಕದಿಂದ ಇಳಿದು ಬಂದ ದೈವವಾಣಿ ಗಳಲ್ಲ. ಅವು ಚರ್ಚೆ, ತಿದ್ದುಪಡಿ, ಒಪ್ಪು – ತಪ್ಪುಗಳನ್ನೆಲ್ಲ ಸಂಸ್ಕರಿಸಿ ಕೊನೆಗೆ ಬಹುಮತದಿಂದ ಒಪ್ಪಿತವಾದ, ಅಂಗೀಕೃತವಾದ ಮಾರ್ಗಸೂಚಿಗಳಷ್ಟೆ.

ಒಮ್ಮೆ ಅಂಗೀಕಾರವಾದ ಕಾನೂನು ನೂರಾರು ಕಾಲ ಸರಿಯಾಗಿ, ಅದೇ ಸರ್ವ ಕಾಲಕ್ಕೂ ಒಪ್ಪಿತವಾಗಿಯೇ ಇರಬೇಕು ಎಂಬು ದೇನೂ ಇಲ್ಲ, ಅದು ಸಾಧ್ಯವೂ ಇಲ್ಲ. ಇಂದು ಮಾಡಿದ ಯಾವುದೋ ಕಾನೂನು ನಾಳೆಗೂ ಸರಿ ಇರಲೇ ಬೇಕು ಎನ್ನುವುದು, ಇಂದು ಮಾಡಿದ ಅನ್ನ ಹತ್ತು ದಿನದ ನಂತರವೂ ತಿನ್ನಲು ಚೆನ್ನಾಗಿ ಇರಲೇಬೇಕು ಎಂಬಂತಷ್ಟೇ.

ಒಮ್ಮೆ ಅಂಗೀಕಾರವಾದ ಕಾನೂನುಗಳಿಗೆ ಸಂಸತ್ ಮತ್ತು ನ್ಯಾಯಾಲಯಗಳು ಗಾರ್ಡಿಯನ್ ಗಳಾಗಿರುತ್ತವೆ. ಒಂದು ಕಾನೂನು ಒಬ್ಬರಿಗೆ ಕಂಡಂತೆ ಇನ್ನೊಬ್ಬರಿಗೆ ಕಾಣಬೇಕು ಎಂದೇನೂ ಇಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೆ, 1967ರಲ್ಲಿ ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು ಗೋಲಕ್‌ನಾಥ್ ಕೇಸ್ ನಲ್ಲಿ ಭಾರತದ ಸಂವಿಧಾನವನ್ನು ಯಾವುದೇ ಕಾರಣಕ್ಕೂ ಬದಲು, ತಿದ್ದುಪಡಿ ಮಾಡಲು ಅವಕಾಶವೇ ಇಲ್ಲ ಸ್ಪಷ್ಟವಾಗಿ ಷರಾ ಬರೆದಿತ್ತು. ಆದರೆ ಏಳೇ ವರ್ಷಗಳಲ್ಲಿ ಅಂದರೆ 1973ರ ಅದೇ ಸುಪ್ರೀಂ ಕೋರ್ಟ್, ತಾನು ನೀಡಿದ್ದ ಹಿಂದಿನ ತೀರ್ಪನ್ನು ಉಲ್ಟಾ ಮಾಡಿ, ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಎಲ್ಲ ಅಧಿಕಾರ ಸಂಸತ್ತಿ ಗಿದೆ. ಆದರೆ, ಸಂವಿಧಾನ ಮೂಲ ಆಶಯ(ಬೇಸಿಕ್ ಸ್ಟ್ರಕ್ಚರ್)ಗೆ ಯಾವುದೇ ನಂಜು ಉಂಟಾಗಬಾರದು ಎಂದು ಹೇಳಿತ್ತು. ಇದೇ ಇಂದಿಗೂ ಸುಪ್ರಸಿದ್ಧ ಕೇಶವಾನಂದ ಭಾರತಿ ಕೇಸ್ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಇದೆಲ್ಲ ಇತಿಹಾಸವಾಯಿತು, ಸರಕಾರದ ಮಟ್ಟದಲ್ಲಿ ಆಗುವಂಥ ಮಹತ್ವದ ವಿಚಾರವಾಯಿತು. ನಾನಿಲ್ಲಿ ಹೇಳಹೊರಟಿರು ವುದು, ಒಬ್ಬ ಸಾಮಾನ್ಯ ವ್ಯಕ್ತಿಗೆ ಕಾನೂನಿಂದಾಗುವ ಅನುಕೂಲಗಳು ಎಷ್ಟಿವೆಯೋ, ಅಷ್ಟೇ ಸಂಕಟಗಳೂ ಕೂಡ ಒಮ್ಮೊಮ್ಮೆ
ಆಗಿಬಿಡುತ್ತದೆ. ಇದಕ್ಕೆ ಯಾವುದೇ ದೇಶವೂ ಹೊರತಲ್ಲ ಎಂದರೆ ತಪ್ಪಾಗದು. ಮೊನ್ನೆ ದಿನಪತ್ರಿಕೆಯ ಓದುವಾಗ ಅಮೆರಿಕದ ನ್ಯಾಯಾಲಯ ನೀಡಿದ್ದ ತೀರ್ಪು ಮತ್ತು ಅದರಿಂದ ಇಬ್ಬರು ವ್ಯಕ್ತಿಗಳ ಜೀವನದಲ್ಲಾದ ಅಲ್ಲೋಲ ಕಲ್ಲೋಲದ ಬಗ್ಗೆ ಓದಿದಾಗ ಮನಸ್ಸು ಒಂದು ಕ್ಷಣ ದಿಗಿಲಾಯಿತು.

ಅಷ್ಟಕ್ಕೂ ಅವರಿಬ್ಬರ ಕತೆ ಹೀಗಿದೆ. ಹೆನ್ರಿ ಮ್ಯಾಕಲಂ ಹಾಗೂ ಲಿಯೋನ್ ಬ್ರೌನ್ ಎಂಬಿಬ್ಬರು ಬಾಲಕರು ಅಮೆರಿಕದ ನಾಗರಿ ಕರು. ಅದು 1983ರ ಸುಮಾರು. 11 ವರ್ಷ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಹೆನ್ರಿ, ಲಿಯೋನ್‌ ರನ್ನು ಬಂಧಿಸಲಾಗಿತ್ತು. ಆಗ ಹೆನ್ರಿಗೆ 19 ವರ್ಷ ಹಾಗೂ ಲಿಯೋನ್‌ಗೆ 15 ವರ್ಷವಷ್ಟೇ. ತೀವ್ರ ಮತ್ತು ಸರಿಯಾದ ತನಿಖೆ ನಡೆಸಿದ್ದ ಅಲ್ಲಿನ ಕೋರ್ಟ್ ಇವರಿಬ್ಬರೂ ಮಾಡಿದ ತಪ್ಪಿಗೆ ಕ್ಷಮೆಯೇ ಇಲ್ಲ ಎಂದು ಹೇಳಿ, ಇಬ್ಬರಿಗೂ ಮರಣ ದಂಡನೆ ವಿಧಿಸಿತ್ತು.

ಕೋರ್ಟ್ ಏನೋ ಇವರಿಬ್ಬರೂ ತಪ್ಪಿತಸ್ಥರು ಎಂದು ಷರಾ ಬರೆದು ನೇಣಿಗೆ ಏರಿಸಿ ಎಂದು ಹೇಳಿತ್ತು. ಆದರೆ, ಆತ್ಮಸಾಕ್ಷಿಗಿಂತ ದೊಡ್ಡ ನ್ಯಾಯಾಲಯ ಇರಲು ಸಾಧ್ಯವೇ? ತಾವು ತಪ್ಪು ಮಾಡಿಲ್ಲ ಎಂಬುದು ಹೆನ್ರೀ ಹಾಗೂ ಲಿಯೋನ್ ಅವರಿಗೆ ಗೊತ್ತಿತ್ತು. ತಾವು ತಪ್ಪು ಮಾಡದೇ ತಪ್ಪಿತಸ್ಥರೆಂದು ಒಪ್ಪಿಕೊಂಡು ತಮ್ಮ ಬದುಕಿಗೆ, ಪಡೆದ ಜನ್ಮಕ್ಕೆ ಅವಮಾನ ಮಾಡಿಕೊಳ್ಳಬಾರದು ಎಂದು ಆ ಎಳೆಯ ಮನಸ್ಸುಗಳು ಅಂದೇ ನಿರ್ಧರಿಸಿದ್ದವು.

ತಮಗೆ ನೇಣು ಬಿಗಿದು ಉಸಿರು ನಿಲ್ಲಿಸುವವರೆಗೂ ತಾವು ಹೋರಾಟ ಮಾಡಲೇ ಬೇಕು ಎಂದು ಇಬ್ಬರೂ ದೃಢ ನಿಶ್ಚಯ ಮಾಡಿಕೊಂಡಿದ್ದರು. ಆದರೆ, ಅದಕ್ಕೆ ಬೇಕಾದ ಹಣಕಾಸು ಬಲವಾಗಲಿ, ಯಾರೊಬ್ಬರ ಸಾಂತ್ವನದ ನುಡಿಗಳಾಗಲಿ ಅವರಿಗೆ ಸಿಗಲೇ ಇಲ್ಲ. ಆದರೂ, ಇವರ ನಂಬಿಕೆಯ ಸೌಧ ಕುಸಿದಿರಲಿಲ್ಲ. ಜೈಲಿನಲ್ಲಿ ಸಿಗುವ ಕಾನೂನಿನ ನೆರವು ಪಡೆದೇ ಮೇಲ್ಮನವಿ ಸಲ್ಲಿಸಿದರು. ತಮ್ಮಿಂದ ಯಾವ ತಪ್ಪೂ ಆಗಿಲ್ಲ ಎಂಬುದು ನಮ್ಮ ಆತ್ಮಸಾಕ್ಷಿಗೆ ಗೊತ್ತು. ಅದನ್ನು ನೀವೂ ನಂಬಬೇಕು ಎಂದರೆ, ಯಾವುದೇ ಹಂತದ ಪರೀಕ್ಷೆಗೂ ನಾವು ಸಿದ್ಧ, ಎಂತಹದ್ದೇ ಆದ ತನಿಖೆಯಾದರೂ ಮಾಡಿಸಿ ಎಂದು ಅಲವತ್ತುಕೊಂಡರು.

ಇಂದು ನಾಳೆ ಎಂದು ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಕೊನೆಗೆ ಹೆನ್ರಿ ಮತ್ತು ಲಿಯೋನ್ ಏನೂ ತಪ್ಪು ಮಾಡಿಲ್ಲ ಎಂದು 2014ರಲ್ಲಿ ತೀರ್ಪು ನೀಡಿ, ಇಬ್ಬರಿಗೂ ಮರಣ ದಂಡನೆಯಿಂದ ಮುಕ್ತಿ ನೀಡಿತ್ತು. ಆದರೆ, ಇಬ್ಬರನ್ನೂ ತಪ್ಪು ಮಾಡಿಲ್ಲ ಎಂದು ಕೋರ್ಟ್ ಹೇಳಲು ತೆಗೆದುಕೊಂಡಿದ್ದು ಬರೋಬ್ಬರಿ 31 ವರ್ಷ!

ಆ ಬಾಲಕರಿಬ್ಬರೂ ತಾವು ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಲೆಂದೇ ತಮ್ಮ ಜೀವನದ ಬರೋಬ್ಬರಿ 31 ವರ್ಷವನ್ನು ವ್ಯಯಿಸಿಬಿಟ್ಟಿದ್ದರು. ಜೈಲಿನ ಗೋಡೆಗಳ ನಡುವೆ, ತಮಗಾಗಿ ಕಾಯುತ್ತಿರುವ ನೇಣು ಕುಣಿಕೆಯ ನೆರಳಿನ ನಡುವೆ, ಆ ಎರಡೂ
ನಿರಪರಾಽ ಮನಸುಗಳು ಹೇಗೆ ತಮ್ಮ ಜೀವವನ್ನು ಗಟ್ಟಿ ಮಾಡಿಕೊಂಡಿರಬೇಡ? ಅದ್ಯಾವ ಶಕ್ತಿ ಮತ್ತು ನಂಬಿಕೆಯಿಂದ ಅವರಿಬ್ಬರೂ ತಮಗೆ ನ್ಯಾಯ ಸಿಗಲಿದೆ ಎಂದು ಹೋರಾಡುವ ಶಕ್ತಿ ನೀಡಿರಬೇಡ ಎಂದು ಊಹಿಸಲು ಯತ್ನಸಿದೆ.

ನನ್ನ ಮಂಡೆ ಖಾಲಿಯಾಗಿತ್ತು, ಅರಿವಿಲ್ಲದೇ ಮನಸ್ಸು ಆದ್ರವಾದಂತಾಯಿತು. ತಾನು ನೀಡಿದ್ದ ತಪ್ಪನ್ನು ಕೋರ್ಟ್ ಕೊನೆಗೂ
ಒಪ್ಪಿಕೊಂಡಿತ್ತು. ಇಬ್ಬರಿಗೂ ಆದ ನೋವು, ನಷ್ಟವನ್ನು ಪರಿಗಣಿಸಿ, ಜೈಲಿನಲ್ಲಿ ಕಳೆದಿದ್ದಕ್ಕೆ ವರ್ಷಕ್ಕೆ ಇಷ್ಟು ಎಂದು ಲೆಕ್ಕ ಹಾಕಿ ನಾರ್ತ್ ಕೆರೊಲಿನಾ ಕೋರ್ಟ್ ಈಗ 75 ಮಿಲಿಯನ್ ಡಾಲರ್, ಅಂದರೆ ಸುಮಾರು 550 ಕೋಟಿ ಹಣ ನೀಡಿತು. ತಮ್ಮ ಜೀವನದ ಬಹುಪಾಲು ಆಯಸ್ಸನ್ನೂ ಸುಂದರ ಕನಸುಗಳನ್ನು ಅರಳಿಸಬಹುದಾದ ಯೌವನವನ್ನು ಜೈಲಿನಲ್ಲಿ ಕಳೆದು ತಮ್ಮ ವೃದ್ಧಾಪ್ಯದ ಯೌವನದ ಬಾಗಿಲಲ್ಲಿ ನಿಂತ ಇಬ್ಬರಿಗೂ ಈ ಹಣ ಯಾವ ಸಂತಸ ನೀಡಲಬಲ್ಲದು? 2014ರಲ್ಲಿ ಕೋರ್ಟ್ ಶಿಕ್ಷೆಯಿಂದ ಹೊರ ಬಂದರೂ, ಇಬ್ಬರಿಗೂ ಪರಿಹಾರ ನೀಡಿದ್ದು ಕಳೆದ ವಾರವಷ್ಟೇ.

ಒಂದು ಸ್ಥಾಪಿತ ವ್ಯವಸ್ಥೆಯಿಂದ ಇದಕ್ಕಿಂತ ಕ್ರೂರ ವರ್ತನೆ ಬೇರೆ ಇರಲಾರದೇನೋ? ಹೆನ್ರಿ ಮತ್ತು ಲಿಯೋನ್ ಇಬ್ಬರು ಕಪ್ಪು
ವರ್ಣೀಯರಾಗಿದ್ದು ಅದರ ಸವಾಲುಗಳ ಜತೆಗೆ ಅಂಗವೈಕಲ್ಯವೂ ಕೂಡ ಲಿಯೋನ್ ಜತೆಗಿದೆ. ತಾವು ನಿರಪರಾಧಿಗಳು ಎಂದು ಸಾಬೀತಾದ ನಂತರದ ಇವರಿಬ್ಬರ ಮನಸ್ಸು, ಜೈಲಿನಲ್ಲಿ ತಮ್ಮಂತೆಯೇ ಇರುವ ಅನೇಕ ನಿರಪರಾಧಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಹಂಬಲಿಸುತ್ತಿದೆ.

ಅದಕ್ಕಾಗಿಯೇ ತಮ್ಮ ಉಳಿದ ಜೀವನವನ್ನು ಇಬ್ಬರೂ ಮುಡಿಪಿಟ್ಟಿದ್ದಾರೆ. ಇದು ಸಾಮಾನ್ಯರಿಬ್ಬರ ಕತೆಯಾದರೆ, ಭಾರತದವರೇ ಆದ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್ ಅವರ ಹೋರಾಟವೂ ಕೂಡ ಕಲ್ಪನೆಗೆ ನಿಲುಕದಂಥದ್ದೇ. ದೇಶಕ್ಕೆ ಹೆಮ್ಮೆ ತರುವಂಥ ಕೆಲಸವನ್ನು ಮಾಡಬೇಕು, ವಿಶ್ವ ಭೂಪಟದಲ್ಲಿ ಭಾರತದ ಹಿರಿಮೆಯನ್ನು ಎತ್ತಿ ಹಿಡಿಯಬೇಕು ಎಂದು ಕನಸು ಹೊತ್ತಂತವರನ್ನೇ ದೇಶದ್ರೋಹಿ ಎಂಬ ಆರೋಪದಲ್ಲಿ ಬಡಿದು, ಜೈಲಿಗೆ ಅಟ್ಟಿಬಿಟ್ಟರೆ ಆ ವ್ಯಕ್ತಿಗೆ ಹೇಗಾಗಿರಬೇಡ.

ಲಿಕ್ವಿಡ್ ಕ್ರಯೋಜೆನಿಕ್ ಇಂಜಿನ್‌ಗಳ ಅಭಿವೃದ್ಧಿ ಮತ್ತು ಅವುಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಬೇಕು ಎಂದು ಮಹತ್ವಾ ಕಾಂಕ್ಷಿ ಕನಸು ಕಂಡಿದ್ದವರು ನಂಬಿ ನಾರಾಯಣನ್. ಅದಕ್ಕಾಗಿ ಅವರು ಹರಿಸಿದ ಬೆವರು, ಖರ್ಚು ಮಾಡಿದ ಬುದ್ಧಿ ಮತ್ತು ಅಡವಿಟ್ಟ ತಮ್ಮ ಸಮಯ ಹೇಳಲು ಸ್ವತಃ ನಂಬಿ ಅವರಿಗೂ ಕಷ್ಟವೇ. ಇಂತಹ ಒಬ್ಬ ವಿಜ್ಞಾನಿಗೆ ದೇಶದ ತಂತ್ರಜ್ಞಾನ ವನ್ನು ನೀನು ಮಾರಿಕೊಂಡಿದ್ದೀಯ ಎಂದು ಆರೋಪ ಹೊರಿಸಿ ಜೈಲಿನ ಕಂಬಿ ಎಣಿಸುವಂತೆ ಮಾಡಲಾಗಿತ್ತು.

ಹೆಣ್ಣಿನ ಆಸೆಗೆ ಬಿದ್ದು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ, ಅದರಿಂದಾಗಿ ಭಾರತದ ಹಲವು ಸೂಕ್ಷ್ಮ ವಿಚಾರಗಳನ್ನು ವಿದೇಶಗಳಿಗೆ
ಹಂಚಿಕೊಂಡಿದ್ದಾರೆ ಎಂದು ಚುಚ್ಚು ನುಡಿ ಚುಚ್ಚಲಾಯಿತು. 1994ರಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ನಿರಂತರವಾಗಿ ಶಿಕ್ಷೆ, ಅಪಮಾನ ಎದುರಿಸಿದ್ದ ನಂಬಿ ಸತತ 24 ವರ್ಷ ತಮ್ಮ ಮೇಲೆ ಬಂದಿದ್ದ ಆರೋಪಗಳಿಂದ ಮುಕ್ತರಾಗಲು ಹೋರಾಟ
ನಡೆಸಿದ್ದರು. ಇದೆಲ್ಲ ಫಲವಾಗಿ ಕೊನೆಗೆ 2018ರಲ್ಲಿ ನಂಬಿ ಅವರನ್ನು ಕೋರ್ಟ್ ನಿರಪರಾಧಿ ಎಂದು ಹೇಳಿತ್ತು.

ನಂಬಿ ನಾರಾಯಣನ್ ಅವರಿಗೆ ತಾವು ತಪ್ಪಿತಸ್ಥ ಅಲ್ಲ ಎಂದು ಹೋರಾಡಲು ನಂಬಿಕೆ ಮೂಡಿಸಿದ್ದು ದೇಶಭಕ್ತಿಯೆಂಬ ನಾರಾಯಣನೇ ಇರಬೇಕು. ಅಂತಿಮವಾಗಿ, ನಂಬಿ ಅವರಿಗೆ ಅಪಮಾನ ಮತ್ತು ನೋವು ತಂದಂತಹ ಕೋರ್ಟ್ ವಿಚಾರಣೆಗಳು,
ಪೊಲೀಸರ ನಡವಳಿಕೆಗೆ ತಪ್ಪು ಎಂದು ಒಪ್ಪಿಕೊಂಡು ಪರಿಹಾರವೆಂದು 50 ಲಕ್ಷ ರುಪಾಯಿ ಘೋಷಿಸುವ ಉದಾರತೆ ತೋರಲಾ ಯಿತು.

ಮೇಲಿನ ಎಲ್ಲ ಪ್ರಕರಣಗಳಲ್ಲಿ ಯಾರಿಗೇ ಏನೇ ಪರಿಹಾರ ನೀಡಿದ್ದರೂ, ತಪ್ಪು ಮಾಡದೇ ಆರೋಪ ಹೊತ್ತು ಜನರ ಕೊಂಕು ಕೇಳಿಸಿಕೊಂಡು ಜೀವ ಗಟ್ಟಿ ಹಿಡಿದುಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಮನೆಯಲ್ಲೋ, ಕಚೇರಿಯಲ್ಲೋ ಯಾರಾದರೂ
ನಾವು ಮಾಡದ ತಪ್ಪಿಗೆ ಏನಾದರೂ ಅಂದರೆ, ಮೇಲೆರೆಗಿ ಮುಯ್ಯಿ ತೀರಿಸಿಕೊಳ್ಳುತ್ತೇವೆ. ಆದರೆ, ನೀನೊಬ್ಬ ದೇಶದ್ರೋಹಿ, ಅತ್ಯಾಚಾರಿ ಎಂಬ ಸುಳ್ಳು ಆರೋಪ ಹೊತ್ತುಕೊಂಡು ಜೀವಮಾನವಿಡೀ ನ್ಯಾಯ ಸಿಗಲಿದೆ ಎಂದು ಕಾಯುವುದು ನಿಜಕ್ಕೂ ಯಜ್ಞಕುಂಡದಲ್ಲೇ ಕುಳಿತಂತೆ. ದೇವರು ಪ್ರತ್ಯಕ್ಷವಾಗಿ ಜೀವ ಕಾಪಾಡಬಹುದು ಅಥವಾ ಜೀವವೇ ಹೋಗಬಹುದು, ಆದರೆ ಆಶಾವಾದ, ನಂಬಿಕೆ ಮಾತ್ರ ಸುಟ್ಟು ಹೋಗುವಂತಿಲ್ಲ.

ಈ ಹೊತ್ತಲ್ಲಿ ನೆನಪಾಗುವ ಇನ್ನೊಬ್ಬ ಮಿರ‍್ಯಾಕಲ್ ಮ್ಯಾನ್ ಎಂದರೆ ಅದು ನೆಲ್ಸನ್ ಮಂಡೇಲಾ. ಕಪ್ಪು ವರ್ಣೀಯರ ಸಮಾನತೆ ಗಾಗಿ ಹೋರಾಡಿದ್ದ ಆ ದಿವ್ಯಪುರುಷನನ್ನು ಆರು ಅಡಿ ಅಗಲದ, ಏಳು ಅಡಿ ಉದ್ದದ, ನಲವತ್ತೆರೆಡು ಚದರ ಅಡಿ ವಿಸ್ತೀರ್ಣದ ಜೈಲೆಂಬ ಬಿಲದೊಳಗೆ 18 ವರ್ಷಗಳ ಕಾಲ ಬಂಧಿಸಲಾಗಿತ್ತು. ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಬಳಿಯ ರಾಬಿನ್ಸ್ ಐಲ್ಯಾಂಡ್ ಎಂಬ ನಿಸರ್ಗ ನಿರ್ಮಿತ ಪುಟ್ಟ ಸುಂದರ ದ್ವೀಪ, ಮಂಡೇಲಾ ಅವರ ಪಾಲಿಗೆ ಪಂಜರವಾಗಿತ್ತು.

ಬೆಳಗಾದರೆ ರಾಚುವ ರಣರಣ ಬಿಸಿಲು, ಕತ್ತಲಾದರೆ ಕಾಡುವ ಭೀಕರ, ಕರಾಳ ಮೌನವನ್ನು ಮಂಡೇಲಾ ಎಂಬ ದೈವೀ ಪುರುಷ ಮಾತ್ರವೇ ಇಪ್ಪತ್ತೇಳು ವರ್ಷಗಳ ಕಾಲ ತಡೆದುಕೊಂಡು ಬದುಕಿರಲು ಸಾಧ್ಯವೇನೋ? ತನ್ನ ಜನಗಳ ಸ್ವಾತಂತ್ರ್ಯದ ಸಾಕಾರಕ್ಕಾಗಿ ನಂಬಿಕೆ, ತಾಳ್ಮೆಯೆಂಬ ಅದೆಂಥ ಗಟ್ಟಿ ಪರ್ವತವನ್ನು ಮಂಡೇಲಾ ತಮ್ಮ ಮಂಡೆಯ ತುಂಬ ಸೃಷ್ಟಿ ಮಾಡಿಕೊಂಡಿರಬೇಡ?
ನಾವು ಸರಿ-ತಪ್ಪುಗಳನ್ನು ಎರಡು ರೀತಿ ನೋಡಬಹುದು. ಒಂದು ಮನಃಸಾಕ್ಷಿ ಪ್ರಕಾರ.

ಇನ್ನೊಂದು ಸಮಾಜ ಮತ್ತು ಒಕ್ಕೂಟ ವ್ಯವಸ್ಥೆಗಳ ಸ್ಥಾಪಿತ ಕಾನೂನುಗಳ ಪ್ರಕಾರ. ತಪ್ಪು ಮಾಡಿಯೂ ಮಾಡಿಲ್ಲ ಎಂದು  ಸಾಬೀತು ಪಡಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅದೇ ರೀತಿ, ತಪ್ಪೇ ಮಾಡದೇ ಕಠೋರ ಶಿಕ್ಷೆಗೆ ಒಳಗಾದವರೂ
ಒಂದಿಬ್ಬರಲ್ಲ. ಒಬ ನಿರಪರಾಧಿಗೆ ಜೈಲಿನ ಗೋಡೆ, ಜೈಲು ಕಂಬಿ ಕೂಡ ಚುಚ್ಚಿ ಮಾತನಾಡುವಂತೆ ಕೇಳಿಸಬಹುದು.

ನ್ಯಾಯದೇವತೆ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟುವುದು ನ್ಯಾಯ ಹೇಳುವಾಗ ನ್ಯಾಯವೇ ಇರಬೇಕು ಎಂಬ ಉದ್ದೇಶದಿಂದಷ್ಟೇ. ಆದರೆ, ತೀರ್ಪು ನೀಡುವಂತವರಿಗೂ ಸತ್ಯಗಳು ಕಾಣದೇ ಹೋದಾಗ ನಿರಪರಾಧಿಗೆ ಆಗುವಂತ ನೋವಿಗೆ ಯಾವ ಮುಲಾಮೂ ಇಲ್ಲ. ನಿಜವಾಗಿಯೂ ತಪ್ಪು ಮಾಡಿದ್ದವರಿಗೆ ಶಿಕ್ಷೆಯಾಗಲಿ, ಅದಕ್ಕವರು ನಿಜಕ್ಕೂ ಅರ್ಹರು, ಅವರಿಗೆ ಕ್ಷಮೆ ಬೇಡ. ಆದರೆ, ನಿರಪರಾಧಿ ಗಳಿಗೆ ಅತಿ ಹೀನವಾದ ಆರೋಪ ಹೊರಿಸಿ, ಶಿಕ್ಷೆ ನೀಡಿಬಿಟ್ಟರೆ ಅದು ಮನುಷ್ಯತ್ವಕ್ಕೆ ನಾವೇ ಇಡುವ ಕೊಳ್ಳಿಯಂತೆ. ಈಗಲೂ ಎಷ್ಟು ಜೈಲಿನ ಗೋಡೆಗಳ ನಡುವೆ ಎಷ್ಟು ಜನ ನಂಬಿ ನಾರಾಯಣನ್, ಹೆನ್ರಿ, ಲಿಯೋನ್‌ನಂಥ ಅಮಾಯಕರು ಇರುವರೋ ಬಲ್ಲವರ‍್ಯಾರು.