Wednesday, 11th December 2024

ಅಧಿಕಾರಕ್ಕೆ ಬಂದಾಗಲೆಲ್ಲ ಬಿಜೆಪಿಯದ್ದು ಇದೇ ಸಮಸ್ಯೆ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

‘ನಗುವಾಗ ಎಲ್ಲ ನೆಂಟರು… ಅಳುವಾಗ ಯಾರೂ ಇಲ್ಲ’ ಎನ್ನುವ ಹಾಡನ್ನು ನಾವೆಲ್ಲ ಕೇಳಿಯೇ ಇದ್ದೇವೆ. ಸಂತಸ, ಅಧಿಕಾರದ ವೇಳೆ ಅನೇಕರು ಜತೆಯಾಗಿದ್ದು ತಮ್ಮ ಕೆಲಸವನ್ನು ನೀಟಾಗಿ ಮಾಡಿಕೊಂಡಿರುತ್ತಾರೆ ಎನ್ನುವುದು ಸತ್ಯ. ಆದರೆ ಈ ಮಾತು
ಕರ್ನಾಟಕ ಬಿಜೆಪಿ ಘಟಕಕ್ಕೆ ಮಾತ್ರ ಅನ್ವಯಿಸುವುದಿಲ್ಲ.

ಹೌದು, ಈ ಮಾತನ್ನು ಹೇಳುತ್ತಿರುವುದೇಕೆ ಎನ್ನುವುದಕ್ಕೆ ಮುಂದೆ ಹತ್ತಾರು ಉದಾಹರಣೆ ಸಹಿತ ವಿವರಿಸಲಿದ್ದೇನೆ. ಇಡೀ ದೇಶ ದಲ್ಲಿ ಬಿಜೆಪಿ ಇದೀಗ ತನ್ನದೇಯಾದ ಹಿಡಿತವನ್ನು ಸಾಧಿಸುತ್ತಿದೆ. ಪಕ್ಷದ ಬಾವುಟ ಕಟ್ಟಲು ಜನರಿಲ್ಲದ ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡಿನಂತ ರಾಜ್ಯಗಳಲ್ಲಿ ಅಸ್ತಿತ್ವವನ್ನು ತೋರಿಸುತ್ತಿದೆ. ಇದಕ್ಕೆ ಪೂರಕ ಎನ್ನುವ ಹಾಗೇ, ಚುನಾವಣೆ ಯಲ್ಲಿ ಸೀಟುಗಳನ್ನು ಗೆಲ್ಲುತ್ತಿದ್ದಾರೆ. (ಕೇರಳದಲ್ಲಿ ಗೆಲುವು ಸಾಧ್ಯವಾಗಿರದಿದ್ದರೂ, ಮತಗಳಿಕೆಯಲ್ಲಿ ಸಾಧನೆ ಮಾಡಿರುವುದು ಒಂದು ಸಾಧನೆ). ಈ ರೀತಿ ಒಂದೊಂದು ರಾಜ್ಯದಲ್ಲಿ ಸಂಘಟನೆಯನ್ನು ವಿಸ್ತರಿಸಿಕೊಳ್ಳುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಖುಷಿಗಿಂತ, ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡಿಕೊಂಡು, ಕಿತ್ತಾಡಿಕೊಂಡು ಸಿಕ್ಕ  ಅವಕಾಶ ವನ್ನು ಸದ್ಬಳಿಕೆ ಮಾಡಿಕೊಳ್ಳದೇ ಇರುವ ವರ್ಚಸ್ಸನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆಯಲ್ಲಿ 104 ಸ್ಥಾನಕ್ಕೆ ಬಿಜೆಪಿ ಬಂದು ನಿಂತಿತ್ತು. ಆದರೆ ಈ ಸಂಖ್ಯೆ ಅಧಿಕಾರದ ಗದ್ದುಗೆ
ಹಿಡಿಯುವಷ್ಟು ಸಾಕಾಗುತ್ತಿರಲಿಲ್ಲ. ಆದ್ದರಿಂದ ಒಂದೂವರೆ ವರ್ಷಗಳ ಕಾಲ ಪ್ರತಿಪಕ್ಷ ಸ್ಥಾನದಲ್ಲಿ ಕೂತುಕೊಳ್ಳಬೇಕಾದ
ಪರಿಸ್ಥಿತಿ ಬಿಜೆಪಿಗೆ ನಿರ್ಮಾಣವಾಗಿತ್ತು. ಈ ಅವಧಿಯಲ್ಲಿ ಬಿಜೆಪಿ ಹಲವು ‘ಆಪರೇಷನ್ ಕಮಲ’ಕ್ಕೆ ಪ್ರಯತ್ನಿಸಿದ್ದರೂ ಸಫಲ ವಾಗಲಿಲ್ಲ. ಆದರೆ ಭಾರಿ ತಿಣುಕಾಟ, ಎಲ್ಲ ರೀತಿಯ ಬಲವನ್ನು ಪ್ರಯೋಗಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 16 ಶಾಸಕರಿಗೆ ರಾಜೀನಾಮೆ ಕೊಡಿಸಿ, ಬಳಿಕ ಅಧಿಕಾರಕ್ಕೆ ಬಿಜೆಪಿ ಬಂದಿತ್ತು.

ಅಧಿಕಾರ ಹಿಡಿಯುವುದಕ್ಕೆ ಬಿಜೆಪಿ ಇಷ್ಟೆಲ್ಲ ಪ್ರಯತ್ನಪಟ್ಟಿರುವುದನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ಇಷ್ಟೆಲ್ಲ ಕಷ್ಟಪಟ್ಟು ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಶುರುವಾಗಿದ್ದು ಗುಂಪುಗಾರಿಕೆ. ಆರಂಭದಲ್ಲಿ ಸಚಿವ ಸ್ಥಾನ ನೀಡಲಿಲ್ಲವೆಂದು ತಮ್ಮ ಅಸಮಾಧಾನವನ್ನು ಕೆಲವರು ಹೊರಹಾಕಿದರೆ, ಇನ್ನು ಕೆಲವರು ಅವರಿಗೆ ಏಕೆ ಸ್ಥಾನ? ಇವರಿಗೇಕೆ ಈ ಸ್ಥಾನವೆಂದು ಪ್ರಶ್ನಿಸಿಕೊಂಡು ಬೆಂಗಳೂರು – ದೆಹಲಿ, ದೆಹಲಿ – ಬೆಂಗಳೂರು ಓಡಾಡಿಕೊಂಡು, ಮಾಧ್ಯಮಗಳಿಗೆ ಆಹಾರವಾದರು. ಮತ್ತೂ ಕೆಲವರು ಎಲ್ಲವನ್ನು ಕೊಟ್ಟರೂ, ಯಡಿಯೂರಪ್ಪ ಅವರೇ ಬದಲಾಗಬೇಕು ಎಂದು ಹೇಳುವ ಮೂಲಕ ವಿವಾದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದರು.

ಈ ರೀತಿ ಅಧಿಕಾರಕ್ಕೆ ಬಂದ ಮರುಗಳಿಗೆ ಗಲಾಟೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2008 ರಲ್ಲಿಯೂ ಇದೇ ಕಿತ್ತಾಟದಿಂದ ಐದು ವರ್ಷದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ನೋಡಬೇಕಾದ ಸ್ಥಿತಿಯನ್ನು ಬಿಜೆಪಿ ನಿರ್ಮಿಸಿಕೊಂಡಿತ್ತು. ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ‘ಪಕ್ಷವೊಂದು ಮೂರು ಭಾಗವಾಗಿ’ ಅಧಿಕಾರವನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿತ್ತು. ಬಳಿಕ ಪಕ್ಷದಿಂದ ಹೊರಹೋಗಿದ್ದ ಯಡಿಯೂರಪ್ಪ, ಶ್ರೀರಾಮುಲು ಆಂಡ್ ಟೀಮ್ ವಾಪಸು ಪಕ್ಷಕ್ಕೆ ಬಂದ ಬಳಿಕ ನಡೆದ ಚುನಾವಣೆಯಲ್ಲಿಯೇ ಪುನಃ ಶತಕದ ಗಡಿ ದಾಟಲು ಸಾಧ್ಯವಾಗಿದ್ದು.

ಇದೀಗ ಈ ಹಳೇ ರಾದ್ಧಾಂತವನ್ನು ನೆನಪಿಸಿಕೊಳ್ಳುವುದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ. ಈಗಾಗಲೇ ಹೇಳಿದಂತೆ ಕಷ್ಟಬಿದ್ದು
ಅಧಿಕಾರಕ್ಕೆ ಬಂದ ಬಿಜೆಪಿ, ಸಂಪುಟ ರಚನೆಯಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿಯೂ ಕಿತ್ತಾಡಿಕೊಂಡು, ಹಾದಿ ರಂಪ ಬೀದಿ ರಂಪ ಮಾಡಿಕೊಳ್ಳುತ್ತಿದೆ. ಅದರಲ್ಲಿಯೂ ಇಡೀ ಶ ಕರೋನಾ ಸಂಕಷ್ಟ ಕಾಲದಲ್ಲಿರುವಾಗ ಕರ್ನಾಟಕದ ಕೆಲ ಬಿಜೆಪಿ ನಾಯಕರಿಗೆ ಮಾತ್ರ, ಈ ಸಮಸ್ಯೆಗಿಂತ ದೊಡ್ಡ ಚಾಲೆಂಜ್ ‘ನಾಯಕತ್ವ ಬದಲಾವಣೆ’ ಮಾಡುವುದಾಗಿದೆ.

ಅದಕ್ಕೆ ಅವರು ನೀಡುತ್ತಿರುವ ಕಾರಣ, ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಪಕ್ಷದ ನಿಯಮದಂತೆ 75 ವರ್ಷ ಮೀರಿದ ಬಳಿಕ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಬೇಕು ಎಂದು. ಪಕ್ಷದ ತತ್ತ್ವ, ಸಿದ್ಧಾಂತದ ದೃಷ್ಟಿಯಿಂದ ನೋಡುವುದಾದರೆ, ನಾಯಕತ್ವ ಬದಲಾವಣೆಗೆ ಧ್ವನಿ ಎತ್ತಿರುವವರ ವಾದ ಸರಿಯಾಗಿದೆ. ಆದರೆ ಈ ವಾದ ಎಲ್ಲವೂ ಸರಿಯಾಗಿರುವ ಸಮಯದಲ್ಲಿ. ಈಗ ರಾಜ್ಯದಲ್ಲಿ ಕರೋನಾ ಎರಡನೇ ಅಲೆಗೆ ತತ್ತರಿಸಿ ಹೋಗಿದೆ. ನಿತ್ಯ ನೂರಾರು ಸಾವುಗಳು ಸಂಭವಿಸುತ್ತಿವೆ. ಕರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹೇರಿರುವುದರಿಂದ, ಅನೇಕರಿಗೆ ಕೆಲಸವಿಲ್ಲ.

ಸರಕಾರದ ಬಳಿ ಹಣವಿಲ್ಲ. ಈ ಎಲ್ಲ ಸಂಕಷ್ಟಗಳನ್ನು ಎದುರಿಸಲೇಬೇಕಾದ ಅನಿವಾರ್ಯತೆಯಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಸರಕಾರವಿದೆ. ಆದರೆ ಈ ಯಾವುದನ್ನು ಪರಿಗಣಿಸದೇ, ಕೆಲವರು ಸರಕಾರ ವಿರುದ್ಧ ಮಾತನಾಡಿ, ‘ನಮಗೆ ಅನುದಾನ ಕೊಡುತ್ತಿಲ್ಲ’ ಎಂದರೆ, ಯಡಿಯೂರಪ್ಪ ಅವರ ಸಂಪುಟದಲ್ಲಿಯೇ ಸಚಿವರಾಗಿರುವ ಯೋಗೇಶ್ವರ ಅವರು ‘ಬಿಜೆಪಿ ಬಿಜೆಪಿಯಾಗಿ
ಉಳಿದಿಲ್ಲ’ ಎನ್ನುವ ಮಾತನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ.

ಇದಿಷ್ಟೇ ಅಲ್ಲದೇ ಸಚಿವರಾಗಿ ಅಧಿಕಾರ ಸ್ವೀಕರಿಸುವ ಮೊದಲು ಹಾಗೂ ಈಗ ಯಡಿಯೂರಪ್ಪ ವಿರುದ್ಧ ನಿರಂತರ ಪರೋಕ್ಷ
ಅಥವಾ ನೇರವಾಗಿ ದೆಹಲಿ ನಾಯಕರ ಬಳಿಕ ಚಾಳಿ ಹೇಳುತ್ತಾ ಬರುತ್ತಿದ್ದಾರೆ. ಆದರೆ ಇದರಿಂದ ಆಗುತ್ತಿರುವ ಲಾಭವೇನು
ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಈಗ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರನ್ನು ಬದಲಾಯಿಸಿ ಯಾರನ್ನು ಕೂರಿಸಬೇಕು. ಎಲ್ಲ ಸಮುದಾಯದವರನ್ನು ಒಟ್ಟಿಗೆ ತಗೆದುಕೊಂಡು ಹೋಗುವ ನಾಯಕತ್ವ ಯಾರ ಬಳಿಯಿದೆ ಎನ್ನುವ ಪ್ರಶ್ನೆ ಬಂದಾಗ ಯಾರಿಂದಲೂ ಸರಿಯಾದ ಉತ್ತರ ಸಿಗುವುದಿಲ್ಲ.

ನಾಯಕತ್ವ ಹುಟುಕಾಟದಲ್ಲಿರುವಾಗಲೇ ಪಕ್ಷವನ್ನು ಎರಡನೇ ಬಾರಿಗೆ ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು
ಬದಲಾಯಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಿದೆ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರನ್ನು ಕಾಂಗ್ರೆಸ್ ಸರಿಯಾಗಿ
ನಡೆಸಿಕೊಳ್ಳದೇ, ಲಿಂಗಾಯತ ವೋಟ್‌ಬ್ಯಾಂಕ್ ಕೈಬಿಡುವಂತೆ ಮಾಡಿಕೊಂಡಿತ್ತು. ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್‌ನಲ್ಲಿ
ಕಳೆದು ಹೋಗಿರುವ ಲಿಂಗಾಯತ ವೋಟ್‌ಬ್ಯಾಂಕ್ ಅನ್ನು ಮರಳಿ ಪಡೆಯಲು ಆಗುತ್ತಿಲ್ಲ. ಇದೀಗ ಬಿಜೆಪಿಯೂ  ಅವಸರದಲ್ಲಿ ಹೆಜ್ಜೆಯಿಟ್ಟರೆ ಪುನಃ ಈ ಸಮಸ್ಯೆ ಎದುರಾಗುವುದರಲ್ಲಿ ಅನುಮಾನವೇ ಇಲ್ಲ.

ಹಾಗೇ ನೋಡಿದರೆ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದದ್ದು ಸುಲಭವಾಗಿರಲಿಲ್ಲ. ಮೈತ್ರಿ ಸರಕಾರದ ಆಡಳಿತ ಪಕ್ಷದಲ್ಲಿದ್ದ
ಏಳೆಂಟು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದರು. ಆದರೆ ಬಿಜೆಪಿಗೆ ಬೇಕಿದದ್ದು 14
ಸೀಟುಗಳು. ಈ ಹಂತದಲ್ಲಿ ಕೊರತೆಯಾದ ಏಳೆಂಟು ಜನರನ್ನು ವಿಶ್ವಾಸಕ್ಕೆ ಪಡೆದು, ರಾಜೀನಾಮೆ ಕೊಡಿಸುವುದು
ಸುಲಭವಾಗಿರಲಿಲ್ಲ.

ಯಡಿಯೂರಪ್ಪ ತಮ್ಮ ರಾಜಕೀಯದ ವಿವಿಧ ದಾಳಗಳನ್ನು ಉರುಳಿಸಿ, ವಿವಿಧ ನಾಯಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಮೈತ್ರಿ ಸರಕಾರವನ್ನು ಬೀಳಿಸಿ, ಬಿಜೆಪಿ ಅಧಿಕಾರಕ್ಕೆ ತಂದರು. ಅಧಿಕಾರಕ್ಕೆ ಬರುವ ತನಕ ಎಲ್ಲವೂ ಚೆನ್ನಾಗಿತ್ತು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ, ನಾಯಕ ಅಥವಾ ಸರಕಾರ ವಿರುದ್ಧ ಪಕ್ಷದೊಳಗೆ ಭಿನ್ನಮತ ಸ್ಫೋಟ ಶುರು ವಾಯಿತು. ಇದೇ ರೀತಿ 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೂ, ಪಕ್ಷದೊಳಗಿನ ಅಸಮಾಧಾನದ ಬೇಗುದಿಯಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಬೇಕಾಯಿತು. ಅವರ ಬಳಿಕ ಸದಾನಂದ ಗೌಡರನ್ನು ದೆಹಲಿಯಿಂದ ಕರೆತಂದು, ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು.

ಆದರೆ ಅದು ಕೂಡ ಕೆಲವೇ ತಿಂಗಳಿಗೆ ಸೀಮಿತವಾಗಿತ್ತು. ಬಳಿಕ ಜಗದೀಶ್ ಶೆಟ್ಟರ್ ಅವರನ್ನು ಕೂರಿಸುವ ಮೂಲಕ, ‘ಇರುವ
ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿತ್ತು.’ ಆಡಳಿತ ಪಕ್ಷದಲ್ಲಿರುವಾಗ ಇಷ್ಟು ಕಿತ್ತಾಡಿಕೊಳ್ಳುವ ಅಥವಾ ಪಿತೂರಿ ರೂಪಿಸುವ ಬಿಜೆಪಿ ನಾಯಕರು, ಪ್ರತಿಪಕ್ಷದಲ್ಲಿದ್ದಾಗ ಅಣ್ತಮ್ಮರ ರೀತಿ ಇರುತ್ತಾರೆ. ಹಾಗೇ ನೋಡಿದರೆ ಬಿಜೆಪಿ ಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಲು ಯಡಿಯೂರಪ್ಪ ಹಾಗೂ ಅನಂತಕುಮಾರ ಎಷ್ಟು ಪ್ರಮುಖರೋ, ಕೆ.ಎಸ್. ಈಶ್ವರಪ್ಪ ಸಹ ಇಬ್ಬರಿಗೆ ಜತೆಯಾಗಿ ನಿಂತರು.

ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವೆ ಉತ್ತಮ ಬಾಂಧವ್ಯವೂ ಇದೆ. ಈ ಎಲ್ಲ ಸ್ನೇಹ, ಸಂಬಂಧ ಪ್ರತಿಪಕ್ಷ ಸ್ಥಾನ ದಲ್ಲಿ ಕೂತಿರುವಾಗ ಉತ್ತಮವಾಗಿರುತ್ತದೆ. ಆದರೆ ಅಽಕಾರಕ್ಕೆ ಬರುತ್ತಿದ್ದಂತೆ, ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಸ್ಥಿತಿ ನಿರ್ಮಿಸಿ ಕೊಳ್ಳುತ್ತಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಬಿಜೆಪಿ ಸರಕಾರದ ವಿರುದ್ಧ ಕೇಳಿಬಂದ ಆರೋಪ ಬಂತು. ಅದೇನೆಂದರೆ, ಅಧಿಕಾರಕ್ಕೆ ಬರುವ ಮೊದಲು ಬೇಕಿದ್ದ ಕಾರ್ಯಕರ್ತರು ಈಗ ಬೇಕಿಲ್ಲ. ಅದೆಷ್ಟೋ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಆದರೆ ಅಧಿಕಾರಕ್ಕೆ ಬಂದ ಮರುಗಳಿಗೆ, ಈ ಎಲ್ಲ ಕಾರ್ಯಕರ್ತರು ಮೂಲೆ ಗುಂಪಾಗಿದ್ದಾರೆ. ಇದರಿಂದ ಅನೇಕರು ಪಕ್ಷ ನಿಷ್ಠೆ ಯಿದೆ. ಅದರೆ ಪಕ್ಷದ ಕಾರ್ಯದಲ್ಲಿ ತೊಡಗುವುದಿಲ್ಲ ಎನ್ನುವ ಮಾತನ್ನು ಹೇಳಲು ಶುರು ಮಾಡಿದ್ದಾರೆ. ಈ ಸಮಯದಲ್ಲಿ ಪಕ್ಷಕ್ಕೆ ಎಲ್ಲರನ್ನು ಒಟ್ಟಿಗೆ ತಗೆದುಕೊಂಡು ಹೋಗುವ ನಾಯಕನ ಅವಶ್ಯಕತೆಯಿದೆ.

ನೇರಮಾರ್ಗದಲ್ಲಿ ಅಽಕಾರಕ್ಕೆ ಬರಲು ಆಗದೇ ಇರುವುದರಿಂದ ಆಪರೇಷನ್ ಕಮಲದ ನೆರವಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ನಾಯಕರು, ಮುಂದಿನ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಾದರೂ, ಸಾಮರಸ್ಯದಿಂದ ಸಾಗಬೇಕಿದೆ. ಅದನ್ನು ಬಿಟ್ಟು, ‘ಎತ್ತಿ ಏರಿಗೆ, ಕೋಣ ನೀರಿಗೆ’ ಎನ್ನುವಂತೆ ವರ್ತಿಸಿ, ಪುನಃ ಜನರ ಕಣ್ಣಲ್ಲಿ ವಿಲನ್‌ಗಳಾಬಾರದು.

ಅಧಿಕಾರದಲ್ಲಿರುವಾಗ ಕೆಲವು ಭಿನ್ನಾಭಿಪ್ರಾಯ ಸಹಜ. ಆದರೆ ಅದನ್ನೇ ದೊಡ್ಡದನ್ನಾಗಿ ಮಾಡುವ ಬದಲು, ಎಲ್ಲರೂ ಎಲ್ಲರನ್ನು ವಿಶ್ವಾಸಕ್ಕೆ ಪಡೆಯಬೇಕಿದೆ. ರಾಜಕೀಯದಲ್ಲಿ ಒಂದು ಮಾತಿದೆ. ‘ಬಿಜೆಪಿಗೆ ಅಧಿಕಾರ ಮಾಡಿ ಗೊತ್ತಿಲ್ಲ. ಕಾಂಗ್ರೆಸ್ ಪ್ರತಿಪಕ್ಷದಲ್ಲಿ ಕೂತು ಗೊತ್ತಿಲ್ಲ’ ಎಂದು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯ ಸರಕಾರವನ್ನು ಬೈದಾಡಿ ಕೊಂಡು ಓಡಾಡುತ್ತಿರುವ ಅನೇಕ ಶಾಸಕರಿಗೆ ಇದರ ಎಫೆಕ್ಟ್ ಅರಿವಾಗುತ್ತಿಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರಿ ಅಧಿಕಾರದಲ್ಲಿರುವ ಪಕ್ಷದ ಬೆನ್ನತ್ತುವ ರಾಜಕಾರಣಿ ಗಳಿಗೆ ಈ ನಡೆಯಿಂದ ಸಮಸ್ಯೆಯಾಗುವುದಿಲ್ಲ. ಏಕೆಂದರೆ ಇಂದು ಬಿಜೆಪಿ, ನಾಳೆ ಕಾಂಗ್ರೆಸ್ ಎನ್ನುವ ಸ್ಥಿತಿಯಲ್ಲಿರುತ್ತಾರೆ. ಆದರೆ ಇದರಿಂದ ಸಮಸ್ಯೆಯಾಗುವುದು ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಪಕ್ಷದ ಸಂಘಟನೆಗೆ ಎನ್ನುವುದನ್ನು ಯಾರು ಮರೆಯಬಾರದು.

ಬಿಜೆಪಿಯ ಕೋರ್ ವಲಯದಲ್ಲಿಯೇ ಯಡಿಯೂರಪ್ಪ ಅವರನ್ನು ಮುಂದಿನ ಕೆಲ ತಿಂಗಳ ಮಟ್ಟಿಗಾದರೂ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ತೀರ್ಮಾನಿಸಿದ್ದಾರೆ. ಇದಕ್ಕೆ ಕಾರಣ ಸದ್ಯವಿರುವ ಕರೋನಾ ಪಿಡುಗು ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ಈ ವಿಷಯ ಯಡಿಯೂರಪ್ಪ ಅವರಿಗೂ ತಿಳಿದಿಲ್ಲ ಎಂದಲ್ಲ. ಹೆಚ್ಚೆಂದರೆ ಮುಂದಿನ ಚುನಾವಣೆಯ ತನಕ ಅಧಿಕಾರದಲ್ಲಿದ್ದು, ಬಳಿಕ ಗೌರವಯುತ ವಿದಾಯದ ಲೆಕ್ಕಾಚಾರದಲ್ಲಿ ಸಿಎಂ ಇದ್ದರೆ, ಅದಕ್ಕೂ ಮೊದಲೇ ಗೌರವಯುತ ರಾಜಕೀಯ ನಿವೃತ್ತಿ ನೀಡುವ ಲೆಕ್ಕದಲ್ಲಿ ವರಿಷ್ಠರಿದ್ದಾರೆ.

‘ಮಾಸ್ ಲೀಡರ್’ ಎನಿಸಿಕೊಂಡಿರುವ ನಾಯಕನನ್ನು ಏಕಾಏಕಿ ಬದಲಾಯಿಸಲು ಸಾಧ್ಯವಿಲ್ಲ. ಆದಕ್ಕಾಗಿಯೇ ಈಗಾಗಲೇ ಚೌಕಾಸಿ, ವೇದಿಕೆ ಎಲ್ಲವೂ ಸಜ್ಜಾಗುತ್ತಿದೆ. ಅಲ್ಲಿಯವರೆಗೆ ಬಿಜೆಪಿಯ ಭವಿಷ್ಯದ ನಾಯಕರು ಕಾಯದೇ ಅವಸರ ಮಾಡಿದರೆ, ಮತ್ತೊಮ್ಮೆ ಕೈಸುಟ್ಟುಕೊಳ್ಳುವುದರಲ್ಲಿ ಅನುಮಾನವಿಲ್ಲ