ನೂರಾರು ಫೋಟೋಗಳನ್ನು ಉಚಿತವಾಗಿ ಸಂಗ್ರಹಿಸಬಹುದಾದ ಗೂಗಲ್ ಫೋಟೋಸ್ ಸೌಲಭ್ಯವು ಸಾಕಷ್ಟು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಹೆಚ್ಚಿನ ಫೋಟೋಗಳನ್ನು ಸಂಗ್ರಹಿಸುತ್ತಿರುವವರಿಗಾಗಿ ಗೂಗಲ್ ಒಂದು ಜಾಪಾಳ ಮಾತ್ರೆ ನೀಡಿದೆ!
ಇವತ್ತಿನಿಂದ, ಅಂದರೆ ಜೂನ್ 1 ರಿಂದ ಅನ್ವಯವಾಗುವ ಹೊಸ ನಿಯಮಗಳ ಪ್ರಕಾರ, ಬಳಕೆದಾರರು ತಮ್ಮ ಗೂಗಲ್ ಖಾತೆ ಯಲ್ಲಿ 15 ಜಿಬಿ ಮಾತ್ರ ಉಚಿತವಾಗಿ ಉಪಯೋಗಿಸಬಹುದು. ಅದಕ್ಕೂ ಹೆಚ್ಚಿನ ಜಾಗ ಬೇಕಾದರೆ ಹಣ ನೀಡಬೇಕು! ಇದುವರೆಗೆ ಗೂಗಲ್ನ ಎಲ್ಲಾ ಸೇವೆಗಳನ್ನು ಬಹುಮಟ್ಟಿಗೆ ಉಚಿತವಾಗಿ ಬಳಸುತ್ತಿರುವವರಿಗೆಲ್ಲರಿಗೂ ಇದೊಂದು ಸಣ್ಣ ಅಚ್ಚರಿಯೇ ಸರಿ.
ಗೂಗಲ್ನಲ್ಲಿ ಸಂಗ್ರಹವಾಗುವ ಎಲ್ಲಾ ಫೋಟೋ, ವಿಡಿಯೋಗಳು ಆಯಾ ಬಳಕೆದಾರರ ಖಾತೆಯ ಮಿತಿಗೆ ಇಂದಿನಿಂದ ಒಳ ಪಡುತ್ತವೆ. ಹಳೆಯ ಫೋಟೋಗಳಿಗೆ ಇದು ಅನ್ವಯವಾಗುವುದಿಲ್ಲವಾದರೂ, ಇಂದಿನಿಂದ ಅಪ್ಲೋಡ್ ಆಗುವ ಫೋಟೋ ಗಳಿಗೆ 15 ಜಿಬಿ ಮಾತ್ರ ಉಚಿತ.
ಇನ್ನಷ್ಟು ಫೋಟೋಗಳನ್ನು ಗೂಗಲ್ ಡ್ರೈವ್ನಲ್ಲಿ ಸಂಗ್ರಹಿಸಬೇಕಾದರೆ, 100 ಜಿಬಿಗೆ ರು.130– ಹಣ ನೀಡಬೇಕು. ಪರ್ಯಾಯ ವಾಗಿ, ಗೂಗಲ್ ಡ್ರೈವ್ನ ಜಾಗವನ್ನು ಆಗಾಗ ಖಾಲಿಗೊಳಿಸುತ್ತಾ ಹೋಗಬಹುದು. ಮುಂದಿನ ದಿನಗಳಲ್ಲಿ ಇಂತಹ ಹಲವು ಶುಲ್ಕ ಸಹಿತ ಸೇವೆಗಳಿಗೆ ಎಲ್ಲರೂ ಮೊರೆಹೋಗಬೇಕಾಗಬಹುದು.