ಗೌರಿ ಚಂದ್ರಕೇಸರಿ
ಬಾನಿನಲ್ಲಿ ಮಿಂಚಿನ ಸಂಚಾರ, ಗುಡುಗಿನ ಆರ್ಭಟ. ಕೋಲ್ಮಿಂಚು ಹರಿದಾಡುತ್ತಾ ದೇಹದ ನರನಾಡಿಗಳ ತುದಿಯಲ್ಲಿ ಕಾತುರವನ್ನು, ಆತುರವನ್ನು, ಕಂಪನವನ್ನು ತುಂಬಿವೆ. ಈ ಸ್ಥಿತಿಯಲ್ಲಿ ನೀನೇಕೆ ನನ್ನ ದಬ್ಬಿದೆ, ಓ ನನ್ನ ಹುಡುಗಾ!
ನಿನ್ನೆ ಬಿದ್ದ ಮಳೆಯು ನನ್ನ ಎದೆಯಲ್ಲಿ ನಿನ್ನ ನೆನಪನ್ನೇ ಹನಿಸುತ್ತಿದೆ. ನೀಲಾಗಸದಿಂದ ಸಣ್ಣಗೆ ಸುರಿವ ಆ ತಂಪು ಮಳೆಗೆ ಅದೇನು ಶಕ್ತಿ ಇದೆಯೋ ಗೊತ್ತಾಗುತ್ತಿಲ್ಲ, ಆ ಮಳೆ ಹನಿಯನ್ನು ಕಂಡ ಕ್ಷಣದಿಂದ ನಿನ್ನ ಕನವರಿಕೆಯಿಂದ ಹೊರಬರಲಾಗದೇ
ಮನಸೆಲ್ಲ ಕಲೆಸಿ ಹೋಗಿದೆ ಹುಡುಗಾ.
ಕಿಟಕಿಯ ಪಕ್ಕದಲ್ಲಿ ಕುಳಿತು ಮಾಳಿಗೆಯಿಂದ ಬೀಳುವ ಮುತ್ತಿನಂತಹ ಮಳೆ ಹನಿಗಳನ್ನೇ ನಿರುಕಿಸುತ್ತಾ ನನ್ನಲ್ಲೇ ನಾನು ಕಳೆದು
ಹೋಗಿದ್ದೇನೆ. ಮಳೆ ತಂದ ತಂಪನ್ನು ಅನುಭವಿಸಲೆಂದು, ಕೈಯ್ಯಲ್ಲಿ ಹಿಡಿದ ಬೆಚ್ಚನೆಯ ಕಾಫಿ ಕಪ್ಪಿನಿಂದ ಹೊರಟ ಹಬೆ
ಸಹ ಮಳೆಯ ಮೋಡಿಗೆ ಸಿಲುಕಿದೆಯೇನು! ಆ ಕಾಫಿಯಿಂದ ಹೊರಟ ಹಬೆಯು ತನ್ನಷ್ಟಕ್ಕೇ ಚಿತ್ರವಿನ್ಯಾಸ ಬರೆದು, ಅದರಲ್ಲಿ
ತುಂಟ ನಗೆ ಸೂಸುವ ನಿನ್ನ ಮುಖಾರವಿಂದ ಮೂಡುತ್ತಿದೆ.
ತಣ್ಣಗೆ ಬೀಸಿ ಬರುವ ಕುಳಿರ್ಗಾಳಿ ನಿನ್ನ ನೆನಪನ್ನು ಮತ್ತೆ ಮತ್ತೆ ಮೂಡಿಸುತ್ತಿದೆ, ಹೃದಯದಲ್ಲಿ ಹೇಳಿಕೊಳ್ಳಲಾಗದ ಸಣ್ಣ
ನೋವೊಂದನ್ನು ತಂದಿದೆ. ದಾರಿಯಲ್ಲಿ ಹೊರಟಿರುವ ಪುಟ್ಟ ಮಗುವೊಂದು ತನ್ನ ಅಪ್ಪನಿಂದ ಕೈ ಬಿಡಿಸಿಕೊಂಡು, ಮಳೆ
ಸುರಿದ ನಂತರ ದಾರಿಯಲ್ಲಿ ನಿಂತ ನೀರಿನಲ್ಲಿ ಕುಪ್ಪಳಿಸಿ ಕುಣಿದು ಕೇಕೆ ಹಾಕುವ ಮಗುವಂತಾಗಿದೆ ಮನಸ್ಸು.
ಇಷ್ಟು ದಿನ ಹತ್ತಿರವಿದ್ದೂ ದೂರದಲ್ಲಿದ್ದಂತೆ ಇದ್ದ ನಾವು, ಇಂದು ದೂರದಲ್ಲಿದ್ದೂ ಹತ್ತಿರವಾಗಿದ್ದೇವೆ. ಮನಸು ಮನಸುಗಳು ಒಂದಾದ ಬೆನ್ನಲ್ಲೇ ನಿನಗೆ ಕರ್ತವ್ಯದ ಕರೆ ಬಂದಿದೆ. ಕರ್ತವ್ಯಕ್ಕೆಂದು ನೀನು ಲಗುಬಗೆಯಿಂದ ಹೊರಟದ್ದೇನೋ ನಿಜ. ಆ ಕ್ಷಣ ದಿಂದ ನನ್ನ ಸ್ಥಿತಿ ಅದೆಂತಹ ಸಂದಿಗ್ಧತೆಗೆ ಒಳಗಾಯಿತು ಗೊತ್ತಾ? ಪ್ರಶಾಂತವಾಗಿದ್ದ ನನ್ನ ಮನದಲ್ಲಿ ಬಿರುಗಾಳಿಯನ್ನೆಬ್ಬಿಸಿ ಹೊರಟು ಬಿಟ್ಟೆ. ಪ್ರೀತಿಯ ನಿವೇದನೆಗೆ ನಿನ್ನೆಯ ದಿನವೇ ಬೇಕಿತ್ತಾ ನಿನಗೆ? ನನ್ನಿಂದ ಬರುವ ಪ್ರತಿಕ್ರಿಯೆ ಏನಾಗಿರಬಹುದೆಂಬ ಕುತೂಹಲವೂ ನಿನಗಿಲ್ಲವಾ? ಕೂಗಿ ಕೂಗಿ ಹೇಳಬೇಕೆನ್ನಿಸುತ್ತಿದೆ, ‘ನಾನೂ ನಿನ್ನ ಪ್ರೀತಿಯಲ್ಲಿ ಬಿದ್ದಿರುವೆ ಕಣೋ’ ಎಂದು.
ಆದರೆ ನನ್ನ ಧ್ವನಿ ಕೇಳದಷ್ಟು ದೂರದಲ್ಲಿ ನೀನಿರುವೆ. ನನ್ನ ಶಕ್ತಿ ಮೀರಿ, ಧ್ವನಿಯನ್ನುಬ್ಬಿಸಿ ಕೂಗಬೇಕು ಎಂಬ ಬಯಕೆ ಹೃದಯದಿಂದ ಒತ್ತೊತ್ತಿ, ಉಬ್ಬರಿಸಿಕೊಂಡು ಬರುತ್ತಿದೆ. ಆದರೇನು ಮಾಡುವುದು, ನೀನಾಗಲೇ ಹೊರಟುಬಿಟ್ಟಿರುವೆ. ನನ್ನ
ಕೂಗನ್ನು ಕೇಳಿಸಿಕೊಳ್ಳುವಷ್ಟು ಸಮಯ ನೀಡಲಾರೆದೆ ಹೋದೆ. ಯಾರದೋ ಮನೆಯ ಕಿಟಕಿಯಿಂದ ತೇಲಿ ಬರುತ್ತಿರುವ ‘ವಿರಹಾ ನೂರು ನೂರು ತರಹಾ’ ಎಂಬ ಹಾಡು ಹೃದಯವನ್ನು ಮತ್ತಷ್ಟೂ ಹಿಂಡುತ್ತಿದೆ. ವಿರಹ ಎಂಬ ಪದದ ಅರ್ಥವೇನೆಂದು ಈಗ ಅನುಭವಕ್ಕೆ ಬರತೊಡಗಿದೆ.
ಇಷ್ಟು ದಿನ ಕಾಯ್ದು ಕೆಂಪಡರಿದ ಭೂಮಿಗೆ ತಂಪೆರೆದಿದೆ ಮಳೆ. ಬಿಸಿಯಾಗಿದ್ದ ಭೂಮಿಯು ಆಗಸದಿಂದ ಬಿದ್ದ ತಂಪನೆಯ ನೀರ ಹನಿಗಳನ್ನು ಆತುರದಿಂದ ಕುಡಿದಿದೆ, ಕಾತುರದಿಂದ ಆಘ್ರಾಣಿಸಿದೆ, ಬಾಯಿ ಕಳೆದು ಕುಡಿದು ತನ್ನ ದಾಹವನ್ನು ತಣಿಸಿ ಕೊಂಡಿದೆ. ಆದರೆ ನೀನು ನನ್ನ ಎದೆಗೆ ಕೊಳ್ಳಿ ಇಟ್ಟಂತೆ ವಿರಹವೆಂಬ ದೊಂದಿಯನ್ನು ಹಚ್ಚಿ ಹೋಗಿದ್ದೀಯ. ನೀನು ಮರಳಿ ಬರುವವರೆಗೂ ಅದು ಧಗ ಧಗಿಸುತ್ತಲೇ ಇರುತ್ತದೆ. ಬಾನಿನಿಂದ ಸುರಿವ ಮಳೆಗೆ ಆ ಧಗೆಯನ್ನು ತಣಿಸುವ ಶಕ್ತಿ ಇಲ್ಲ.
ಧಗೆಯಿಂದಾಗಿ ಮೈ, ಮನವೆಲ್ಲವೂ ಕಾಯ್ದುಹೋಗಿದೆ. ಆ ಭೂರಮೆಯಷ್ಟು ತಾಳ್ಮೆ ನನಗಿಲ್ಲ. ನನ್ನ ಬಿಸಿಯನ್ನು, ಬೇಗೆಯನ್ನು, ಕಾತುರವನ್ನು, ಬೇಗುದಿಯನ್ನು, ಧಗೆಯನ್ನು ತಣಿಸುವ ದಾರಿಯಾವುದೆಂದು ನೀ ಹೇಳಲಾರೆಯಾ? ಸಳಕ್ಕನೇ ಮಿಂಚಿ ಹೋದ ಮಿಂಚಿನಂತೆ ನೀನು ನಿನ್ನ ಮನದ ಇಂಗಿತವನ್ನು ಹೇಳಿ ಮರೆಯಾಗಿ ಬಿಟ್ಟೆ. ಹೇಳಿದ್ದೇನೋ ನಿಜ, ಆ ಒಂದು ಸಂತಸದ ಅಚ್ಚರಿಯು ನನ್ನ ಮನ ತಟ್ಟಿ, ಆ ಸಂಭ್ರಮವನ್ನು ಅನುಭವಿಸುವಷ್ಟು ಸಮಯವನ್ನೇ ನೀನು ನೀಡದೇ, ಕರ್ತವ್ಯದ ಕರೆಯನ್ನು ಆಲಿಸಿ ಹೊರಟುಬಿಟ್ಟೆ!
ಆದರೆ ನನ್ನ ಮನದಲ್ಲಿ ಈಗ ಬಿರುಗಾಳಿ ಎದ್ದಿದೆ. ನಿರಂತರ ಗುಡುಗು ಸಿಡಿಲುಗಳ ಆರ್ಭಟ ನಡೆದಿದೆ. ಕಣ್ ಕೋರೈಸುವ ಮಿಂಚಿನ ಕೋಲುಗಳು ದೇಹದ ಇಂಚು ಇಂಚಿನಲ್ಲಿ ತುಡಿತವನ್ನು ಹುಟ್ಟಿಸಿವೆ. ಮಿಂಚಿನ ಸಂಚಾರದಿಂದ ನರನಾಡಿಗಳೆಲ್ಲವೂ ಅತಿ ಸೂಕ್ಷ್ಮ ಕಂಪನವನ್ನು ಅನುಭವಿಸುತ್ತಿವೆ. ನೀನು ಹಚ್ಚಿ ಹೋದ ಕಿಚ್ಚು ನನ್ನ ಹಸಿವು, ನಿದ್ರೆ, ನೀರಡಿಕೆಗಳನ್ನೆಲ್ಲ ಕಸಿದಿದೆ.
ಎಷ್ಟು ಹೊತ್ತಿನಿಂದ ಕುಳಿತಿದ್ದೇನೋ ನನಗೇ ಅರಿವಿಲ್ಲ. ಮತ್ತೆ ಮೋಡ ಮುಸುಕಿದೆ. ಕಿವಿಗಡಚಿಕ್ಕುವ ಸಿಡಿಲಿನ ಆರ್ಭಟ
ಶುರುವಾಗಿದೆ. ಆಕಾಶವೇ ಕಳಚಿ ಬಿದ್ದಂತೆ ಮಳೆ ಮೊರೆಯತೊಡಗಿದೆ. ಮತ್ತೊಂದು ಕಪ್ ಕಾಫಿ ಕುಡಿಯಬೇಕೆಂಬ ಹಂಬಲವಾಗು ತ್ತಿದೆ. ‘ವಿರಹಾ ಪ್ರೇಮ ಕಾವ್ಯದಾ ಕಹಿ ಬರಹಾ’ ಎಂಬ ಆ ಆರ್ತನಾದದ ದನಿಯು ಮತ್ತೆ ತೇಲಿ ಬರುತ್ತಿದೆ, ನನ್ನ ಹೃದಯವನ್ನು ಹಿಂಡಲು.