Wednesday, 11th December 2024

ಕರೋನಾ, ಲಾಕ್‌ಡೌನ್‌ ಮತ್ತು ನಮ್ಮ ಜವಾಬ್ದಾರಿ

ಅಭಿಮತ

ವಿನಾಯಕ ಭಟ್ಟ

ಇತಿಹಾಸ ಮರುಕಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ಇಷ್ಟು ಬೇಗ ಅನ್ನುವುದು ಮಾತ್ರ ಯಾರೂ ಊಹಿಸಿರಲಿಕ್ಕಿಲ್ಲ. ಸುಮಾರು ಒಂದು ವರ್ಷದ ಹಿಂದೆ ಇದ್ದ ಸ್ಥಿತಿಗೆ ಮತ್ತೆ ಬಂದಿದ್ದೇವೆ. ಇನ್ನೇನು ಕರೋನಾ ವಿರುದ್ಧ ಗೆದ್ದು ಬಿಟ್ಟೆವು ಅನ್ನುತ್ತಾ ಬೀಗಿದ್ದೆವು. ಮಾಸ್ಕನ್ನು ಕಿತ್ತು ಎಸೆದಿದ್ದೆವು.

ಎಂದರಲ್ಲಿ ಜನಜಂಗುಳಿಯನ್ನ ಮಾಡಿದ್ದೆವು. ಬೇಕಾಬಿಟ್ಟಿ ಅಲೆದಿದ್ದೆವು. ಪ್ರವಾಸ, ಪ್ರಯಾಣವನ್ನೂ ಮಾಡಿದ್ದೆವು. ನಮ್ಮದೇ ದೇಶದ ಲಸಿಕೆಯನ್ನು ಹೇಯವಾಗಿ ಬಿಂಬಿಸುತ್ತಾ ನಕ್ಕಿzವು. ನಮ್ಮ ಅಡಗಿ ಕೂತಿದ್ದ ಸಂಚಾರಿ ಮತ್ತೊಮ್ಮೆ ಅಟ್ಟಹಾಸ ಶುರು  ಮಾಡಿ ಬಿಟ್ಟಿತು. ನಾವೆಷ್ಟು ಸಂಚಾರ ಮಾಡಲು ತೊಡಗಿದೆವೋ ತಾನೂ ಕೂಡ ಕಡಿಮೆ ಅಲ್ಲ ಅನ್ನುತ್ತಾ ಓಡಾಡಲು
ತೊಡಗಿತು.

ಮತ್ತೆ ಶುರುವಾಯಿತು ನೋಡಿ ಎಲ್ಲವನ್ನೂ ಬಂದ್ ಮಾಡಿ ಕೂತು ಕೊಳ್ಳುವ ಪರಿಸ್ಥಿತಿ. ಮತ್ತೆ ಲಾಕ್ ಡೌನ್. ಯಾರಿಗೆ ಹೇಳೋಣ ನಮ್ಮ ಗೋಳು ಅನ್ನುವಂತೆ, ಮತ್ತೆ ಎಲ್ಲರ ಜೀವನವನ್ನು ಹಳೆಯ ದುರ್ಭರ ಪರಿಸ್ಥಿತಿಗೆ ತಂದು ನಿಲ್ಲಿಸಿಬಿಟ್ಟಿದೆ. ನಾವೂ ಕೂಡ ಮೊದಲ ಅಲೆಯಿಂದ ಪಾಠ ಕಲಿಯದೇ ಮತ್ತೊಮ್ಮೆ ಕಷ್ಟಕ್ಕೆ ಸಿಲುಕಿದ್ದೇವೆ. ಎರಡನೇ ಅಲೆಯ ಹೊಡೆತ ಜೋರಾಗಿಯೇ ಇದೆ.
ಹಳ್ಳಿ ಹಳ್ಳಿಗಳನ್ನು ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಬದಲಾದ ನೀತಿ ನಿಯಮಗಳನ್ನು ರೂಪಿಸಲು ಈ ಸಲ ಅವಕಾಶ ಸಿಕ್ಕಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಅಲ್ಲಿನ ಜಿಡಳಿತ ವಿವಿಧ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಸಾಂಕ್ರಾಮಿಕ ರೋಗವನ್ನು ತಡೆಯಲೇ ಬೇಕು. ವಿಧಿ ಇಲ್ಲ. ಅನಿವಾರ್ಯ. ಆದರೆ, ಸ್ಥಳೀಯ ಭೂಗೋಳಿಕ, ಸಾಮಾಜಿಕ, ಆರ್ಥಿಕ ಆಧಾರಿತ ವ್ಯವಸ್ಥೆಗಳನ್ನೂ ಗಣನೆಗೆ ತೆಗೆದುಕೊಂಡು ನಿಯಮಗಳನ್ನು ರೂಪಿಸಿದ್ದರೆ ಹೆಚ್ಚಿನ ಅನಾನುಕೂಲವನ್ನು ತಪ್ಪಿಸಬಹು
ದಿತ್ತೇನೋ. ಕೆಲವು ದಿನಗಳ ಹಿಂದೆ ಬಂದ ಚಂಡಮಾರುತ ಬಹುತೇಕ ಜಿಯಲ್ಲಿ ಅವ್ಯಾಹತವಾಗಿ ಮಳೆಯನ್ನೂ ಸುರಿಸಿದೆ. ಹವಾಮಾನ ಇಲಾಖೆ ಈಗಾಗಲೇ ಈ ಸಲದ ಮುಂಗಾರು ಸಮಯಕ್ಕೆ ಸರಿಯಾಗಿ ಪ್ರವೇಶಿಸುತ್ತದೆ ಅನ್ನುವ ಮುನ್ಸೂಚನೆ ನೀಡಿದೆ.

ಹೀಗಿರುವಾಗ ಸದ್ಯದ ಮಳೆ, ಮುಂದೆ ಮುಂಗಾರಿಗೆ ಕೂಡಿಕೊಳ್ಳುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಹೀಗಿರುವ ಸಮಯದಲ್ಲಿ ಈ
ಲಾಕ್‌ಡೌನ್ ಅನ್ನುವ ಅಸ ಪ್ರಯೋಗ!. ಅದೆಷ್ಟು ರೀತಿಯಲ್ಲಿ ಈ ಲಾಕ್‌ಡೌನ್ ಅನ್ನುವುದು ತೊಂದರೆ ಕೊಡುತ್ತಿದೆ ಅನ್ನುವುದು ಅನುಭವಿಸಿದವರಿಗೇ ಗೊತ್ತು. ಕರ್ನಾಟಕದ ಬಹುತೇಕ ಜಿಗಳ ಜನ ಅವಲಂಬಿಸಿರುವುದು ಕೃಷಿಯನ್ನು. ಕೃಷಿ ಹವಾಮಾನ
ಆಧಾರಿತ ಕೆಲಸ ಅನ್ನುವುದು ಆಡಳಿತಕ್ಕೆ ತಿಳಿಯದ ವಿಷಯ ಏನಲ್ಲ.

ಹೀಗಿರುವಾಗ ಮುಂಗಾರು ಬರಲಿರುವ ಈ ಸಮಯದಲ್ಲಿ, ಅದೆಷ್ಟೋ ಕೆಲಸಗಳು ಇರುತ್ತವಲ್ಲ. ಅವುಗಳನ್ನೆಲ್ಲ ಹೇಗೆ ಮಾಡಿ ಕೊಳ್ಳುವುದು? ಕಾಗದದಲ್ಲಿ ಕೃಷಿ ಕೆಲಸಕ್ಕೆ ವಿನಾಯತಿ ಇದೆ. ಆದರೆ, ಅದಕ್ಕೆ ಪೂರಕವಾದ ಅನೇಕ ವ್ಯವಸ್ಥೆಗಳೂ, ಅಂಗಡಿಗಳೂ, ಓಡಾಟಗಳೂ ಕೂಡ ಅವಶ್ಯಕವೇ ಅಲ್ಲವೇ? ಉದಾಹರಣೆಗೆ, ಮಳೆ ಶುರುವಾಗುವ ಮೊದಲೇ ಅಡಿಕೆಗೆ ಕೊಳೆ ನಿರೋಧಕ ಸಿಂಪಡಿಸಬೇಕು. ಅದಕ್ಕೆ, ಕೊಳೆ ಪಂಪು ರಿಪೇರಿ ಬೇಕು, ರಿಪೇರಿ ಅಂಗಡಿಗಳು ತೆರೆಯುವಂತಿಲ್ಲ!

ಅದಕ್ಕೆ ಬೇಕಾದ ಅಂಗಡಿಗಳೂ  ತೆರೆಯುವಂತಿಲ್ಲ. ಹೊಲಗಳನ್ನು ಊಳಲು ಟ್ರಾಕ್ಟರ್, ಟಿಲ್ಲರ್ ಮೊದಲಾದ ಯಂತ್ರಗಳೂ ಅವಶ್ಯಕ. ಆದರೆ ಆಟೋಮೊಬೈಲ್ ರಿಪೇರಿ ಅಂಗಡಿಗಳಿಗೆ ಅನುಮತಿ ಇಲ್ಲ. ಹತ್ತಿರದ ಚಿಕ್ಕ ಪಟ್ಟಣಗಳಲ್ಲಿ ಎಲ್ಲವೂ ಒಂದೇ ಕಡೆ
ಸಿಗುತ್ತದೆ ಎಂತಲೋ, ಕೃಷಿಗೆ ಸಂಬಂಧಿಸಿದ ಉಪಕರಣ ಮಾತ್ರ ಮಾರುವ ಅಂಗಡಿ ಎಂತಲೋ ಸಿಗುವುದು ಎಷ್ಟರ ಮಟ್ಟಿಗೆ ಸಾಧ್ಯ? ಓಡಾಡಲೂ ಕೂಡ ಸೀಮಿತ ಅವಧಿಯ ಅವಕಾಶ. ಒಂದು ಕೃಷಿ ಯಂತ್ರವನ್ನು ಒಂದು ದಿನ ತೆಗೆದುಕೊಂಡು ಹೋಗಿ, ರಿಪೇರಿಗೆ ಕೊಟ್ಟರೆ, ಮುಂದಿನ ಯಾವುದೋ ದಿನ ತರಲು ಹೋಗಬೇಕು.

ಅಂದರೆ ಒಂದು ತಿರುಗಾಟದಲ್ಲಿ ಮುಗಿಯುತ್ತಿದ್ದ ಯಂತ್ರ ರಿಪೇರಿ ಕೆಲಸಕ್ಕೆ , ಈಗ ಎರಡು ಬಾರಿ ತಿರುಗಾಟ ತೆಗೆದುಕೊಳ್ಳುತ್ತದೆ ಯಲ್ಲವೇ? ಯಾವ ರೀತಿಯಲ್ಲಿ ಜನರ ತಿರುಗಾಟ ಕಡಿಮೆ ಮಾಡಿದಂತೆ ಆಯಿತು? ಇದೇ ರೀತಿಯ ಉದಾಹರಣೆಗಳು ಹಲವಾರು ಸಿಕ್ಕಾವು. ಹಂಗಾಮಿನ ಸಮಯಕ್ಕೆ ಸಂಬಂಧ ಪಟ್ಟ ಬೆಳೆ ಸಾಲ ಮುಂತಾದ ಕಾಗದ ಪತ್ರ ಮತ್ತು ಆರ್ಥಿಕ ವ್ಯವಹಾರಗಳೂ ಕೂಡ ಈ ಸಮಯ ಮಿತಿಯ ಲಾಕ್ ಡೌನ್‌ನಿಂದಾಗಿ ಹೆಚ್ಚಿನ ಶ್ರಮ, ಸಮಯ, ತಿರುಗಾಟವನ್ನು ಮಾಡಿಸುತ್ತಿಲ್ಲವೇ? ಓಡಾಟ ನಿಯಂತ್ರಣ ಎಂದು ಹಾಕಿರುವ ಲಾಕ್‌ಡೌನ್ ಅನ್ನುವುದು, ತಿರುಗಾಟವನ್ನು ಹೆಚ್ಚು ಮಾಡುತ್ತಿಲ್ಲವೇ? ಮತ್ತೊಂದು ವಿಚಿತ್ರ ನೋಡಿ- ಬಹುತೇಕ ಜಿಲ್ಲೆಗಳಲ್ಲಿ ಓಡಾಟಕ್ಕೆ ಬೆಳಗಿನ ಹೊತ್ತಿನಲ್ಲಿ ಸಮಯ ನಿಗದಿ ಮಾಡಲಾಗಿದೆ.

ಉದಾಹರಣೆಗೆ ಬೆಳಗ್ಗೆ 6 ರಿಂದ 10ಗಂಟೆಯವರೆಗೆ ಓಡಾಟಕ್ಕೆ ಅವಕಾಶ ಅದೂ ವಾರದ ಎರಡು ಮೂರು ದಿನ ಹೀಗೆ. ಆರ್ಥಿಕ ವ್ಯವಹಾರಕ್ಕೆ ಸಂಬಂಧ ಪಟ್ಟ ಬ್ಯಾಂಕುಗಳು ಬೆಳಗ್ಗೆ 10ರಿಂದ 2 ಗಂಟೆ. ಹೀಗಿದ್ದರೆ ಬ್ಯಾಂಕಿಗೆ ಹೋಗುವುದಾದರೂ ಹೇಗೆ!
ಹೀಗಿರುವಾಗ, ನಮ್ಮ ರಾಜ್ಯದ ಅನೇಕ ಸಹಕಾರಿ ಸಂಘಗಳು ಸಮಯ ಬದಲಾವಣೆ ಮಾಡಿ ಜನಕ್ಕೆ ಸೇವೆ ಮಾಡುತ್ತಿರುವುದು ಪ್ರಶಂಸನೀಯ.

ಇನ್ನು ಭೌಗೋಳಿಕವಾಗಿ ನೋಡಿದಾಗ ಕೂಡ ಈ ಲಾಕ್ ಡೌನ್ ಅನ್ನುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಅನ್ನುವುದರ ಸ್ಪಷ್ಟತೆ ಇಲ್ಲ. ಹಳ್ಳಿಗಳಲ್ಲಿ ದೂರದೂರ ಇರುವ ಮನೆಗಳು. ಅತಿ ಕಡಿಮೆ ಜನಸಂಖ್ಯೆ ಇರುವ ವಾತಾವರಣದಲ್ಲಿ, ಸ್ಥಳೀಯ ಅವಶ್ಯಕ ಓಡಾಟಗಳಿಗೂ ನಿರ್ಬಂಧ ಹೇರಿದ್ದು ಅಷ್ಟೇನೂ ಪರಿಣಾಮ ಬೀರಲಾರದು. ಅಷ್ಟಕ್ಕೂ ಸುಖಾ ಸುಮ್ಮನೇ ತಿರುಗಲು ಹಳ್ಳಿ ಜನ ಖಾಲಿ ಕೂತಿರುವುದಿಲ್ಲ. ಅವರಿಗೂ ಅವರದ್ದೇ ಆದ ಜವಾಬ್ದಾರಿ ಯುತ ಕೃಷಿ ಕೆಲಸಗಳು ಅದೂ ಈ ಸಮಯದಲ್ಲಿ ಇದ್ದೇ ಇರುತ್ತವಲ್ಲ. ಹೀಗಿರುವಾಗ ಹಳ್ಳಿಯ ಜನ ಸುಮ್ಮನೆ ತಿರುಗಾಡುತ್ತಾರೆ ಎಂದು ಏಕೆ ಭಾವಿಸಲಾಗಿದೆ ಎಂಬುದು ಅರ್ಥ ಆಗದ ಪ್ರಶ್ನೆ.

ಅಷ್ಟೇನೂ ಪರಿಣಾಮ ಬೀರಲಾರದ ಕ್ರಮ ಅವಶ್ಯಕತೆ ಇತ್ತಾ ಅನ್ನುವುದು ಕೂಡ ಹಲವರ ಪ್ರಶ್ನೆ. ಇನ್ನು ಹಳ್ಳಿಗಳಲ್ಲಿ ಜನ ಸಂಖ್ಯೆ ಕೂಡಾ ಕಡಿಮೆಯೇ. ಸ್ವಾಭಾವಿಕವಾಗಿಯೇ ಸಾಮಾಜಿಕ ಅಂತರ ಒಂದು ಮಟ್ಟಕ್ಕೆ ಇರುತ್ತದೆ. ಇಂಥ ಒಂದು ಭೂಗೋಳಿಕ ಪ್ರದೇಶದಲ್ಲಿ ಈ ಲಾಕ್‌ಡೌನ್‌ನಿಂದ ಮಾತ್ರ ಕರೋನಾ ನಿಯಂತ್ರಣ ಆಗುತ್ತದೆ ಅನ್ನುವುದು ಸ್ಪಷ್ಟ ಪರಿಹಾರ ಅಲ್ಲ ಅನ್ನಿಸುತ್ತದೆ.
ಹಾಗಾದರೆ ಹಾಗೆಯೇ ಬಿಟ್ಟು ಬಿಡೋಣವಾ ? ಖಂಡಿತಕ್ಕೂ ಸಲ್ಲದು. ಏಕೆಂದರೆ ಕರೋನಾ ತೀವ್ರತೆ, ಸಾವು, ನೋವು ಕೂಡ ಚಿಕ್ಕದೇನಲ್ಲ. ಅದೂ ಕೂಡ ಸ್ವಂತ ಕುಟುಂಬದಲ್ಲಿ ಅನುಭವಿಸಿದಾಗ ಆಗುವ ವೇದನೆ ಯಾರಿಗೂ ಬಾರದಿರಲಿ. ಒಂದು ಕಡೆ ಕರೋನಾ ಪೀಡಿತ ರೋಗಿಗಳು, ಅವರ ಹತ್ತಿರಕ್ಕೂ ಹೋಗಲಾರದ ಆರೋಗ್ಯವಂತ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು.

ಅದರಲ್ಲೂ ಕರೋನಾ ಪೀಡಿತ ಕುಟುಂಬದಲ್ಲಿ ಸಾವೇನಾದರೂ ಸಂಭವಿಸಿ ಬಿಟ್ಟರೆ ಗೋಳು ಹೇಳತೀರದು. ಅಂತ್ಯ ಸಂಸ್ಕಾರಕ್ಕೆ ಕಷ್ಟ. ನಮ್ಮವರ ಬವಣೆ ಅರ್ಥ ಆಗುತ್ತದೆ. ಆದರೆ ಹೋಗುವಂತೆಯೂ ಇಲ್ಲ. ನಮ್ಮವರದ್ದೇ ಸಾವು, ಆ ಕುಟುಂಬದ ಜತೆ ಹೋಗಿ, ಒಂದು ಚಿಕ್ಕ ಅಪ್ಪುಗೆಯನ್ನು ಕೊಟ್ಟು, ಅವರ ಕಣ್ಣೀರಿಗೆ ಹೆಗಲು ಕೊಡುವ ಮನಸ್ಸು ಇದ್ದರೂ ಕೂಡ ಮಾಡುವಂತಿಲ್ಲ. ಸಾವಿನ
ನಂತರದ ಕ್ರಿಯಾ ಕರ್ಮಗಳನ್ನು ಮಾಡುವಂತಿಲ್ಲ. ಅದನ್ನೆಲ್ಲ ನೋಡುತ್ತಾ, ಕೇಳುತ್ತ , ಅಯ್ಯೋ ಇಂಥ ಸಂದರ್ಭದಲ್ಲೂ ನಾವು ಅವರೊಂದಿಗೆ ಹೆಗಲು ಕೊಡಲು ಆಗಲಿಲ್ಲವಲ್ಲ ಅನ್ನುವ ಹತಾಶೆ ಕೂಡ ಅದೆಷ್ಟು ನೋವು ಕೊಟ್ಟುಬಿಡುತ್ತದೆ. ಅಷ್ಟು ಹತ್ತಿರ ದವರನ್ನು ಮುಂದೊಂದು ದಿನ ಎದುರಿಸಲೂ ತಲೆ ತಗ್ಗಿಸುವ ಪರಿಸ್ಥಿತಿಯನ್ನು ಕರೋನಾ ನಿರ್ಮಾಣ ಮಾಡುತ್ತಿದೆ.

ಈ ಕರೋನಾ ಅನ್ನುವ ರೋಗ ಮತ್ತು ಅದಕ್ಕೆ ಸಂಬಂಧಪಟ್ಟ ಲಾಕ್‌ಡೌನ್ ಇಷ್ಟು ಅನಾನುಕೂಲ ತರುತ್ತಿರುವಾಗ, ಅದನ್ನ ನಿಯಂತ್ರಣ ಮಾಡಬೇಕಾದ್ದು ಎಲ್ಲರ ಜವಾಬ್ದಾರಿ. ಬಹುಶಃ ಅದನ್ನ ಮರೆತಿದ್ದರಿಂದಲೇ ಮತ್ತೆ ಈ ಲಾಕ್‌ಡೌನ್ ಅನ್ನುವ ಅನಿವಾರ್ಯ ನಮ್ಮನ್ನು ಮೆತ್ತಿಕೊಂಡಿದ್ದು. ನಾವು ಜಾಗೃತಗೊಳ್ಳಬೇಕು. ನಾವು ಎಚ್ಚರಿಕೆ ವಹಿಸಬೇಕು. ಎಲ್ಲವನ್ನೂ ಸರಕಾರವೇ
ಮಾಡಬೇಕು ಎಂದರೆ ಹೇಗೆ? ಬೇಜವಾಬ್ದಾರಿಯಿಂದ ತಿರುಗುತ್ತಾ, ಕರೋನಾ ಹರಡುತ್ತಾ, ಕೊನೆಗೆ ಸರಕಾರವನ್ನು ಬೈಯುತ್ತ, ವೈದ್ಯಕೀಯ ವ್ಯವಸ್ಥೆಗೆ ಶಾಪ ಹಾಕುತ್ತಾ ನಡೆದರೆ ಯಾವ ಪ್ರಯೋಜನವೂ ಇಲ್ಲ.

ಸರಕಾರ ಕೂಡ ಅಗತ್ಯ ಕ್ರಮ ಕೈಗೊಳ್ಳುವಾಗ ಸ್ಥಳೀಯ ಪರಿಸರದ ಆ ಹೊತ್ತಿನ ಅಗತ್ಯತೆಗಳನ್ನು ಕೂಡ ಪರಿಶೀಲಿಸಿ ಕ್ರಮ
ಕೈಗೊಳ್ಳುವುದು ಉತ್ತಮ. ಜನ ಜಾಗೃತಿಯ ಜೊತೆಗೆ ಜನಕ್ಕೆ ಅನಾನುಕೂಲ ಕಡಿಮೆ ಆಗುವಂಥ ನಿರ್ದೇಶನಗಳು ಬಂದಲ್ಲಿ ಒಳ್ಳೆಯದು. ಹಾಗಾದಾಗ ಮಾತ್ರ, ಸ್ಥಳೀಯ ಆಡಳಿತಕ್ಕೆ ಕೊಟ್ಟ ಅಧಿಕಾರದ ಮಹತ್ವ ಜನೋಪಯೋಗಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ.

ನಾವೆ ಎಚ್ಚರಿಕೆಯಿಂದ ಇದ್ದಿದ್ದು ಸಾಕಾಗಲಿಲ್ಲ. ಮುಖಕ್ಕೆ ಮಾಸ್ಕ್ ಹಾಕುವಂತೆ, ಅನವಶ್ಯಕ ತಿರುಗಾಟದ ಮನಸಿಗೆ ಕೂಡಾ ಮಾಸ್ಕ್ ಹಾಕೋಣ. ಕೈಗೆ ಸ್ಯಾನಿಟೈಸರ್ ಹಾಕಿ ತೊಳೆದು ಶುದ್ಧೀಕರಿಸುವಂತೆ, ಉತ್ತಮ ಆಹಾರ, ವ್ಯಾಯಾಮದ ಶುದ್ಧತೆಯನ್ನೂ ಬಳಸಿಕೊಳ್ಳೋಣ. ಅಂತರವನ್ನು ಭೌತಿಕವಾಗಿ ಕಾಯ್ದುಕೊಂಡರೂ, ಮಾನಸಿಕವಾಗಿ ದೂರವಾಗದ ಜೀವನ ಶೈಲಿಯನ್ನು
ರೂಢಿಸಿಕೊಳ್ಳೋಣ. ತನ್ಮೂಲಕವಾಗಿ ಈ ಲೋಕ್‌ಡೌನ್ ಅಂತಹ ಪರಿಸ್ಥಿತಿ ಮುಂದೆ ಬರದಂತೆ ನೋಡಿಕೊಳ್ಳುವುದು
ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೋವಿಡ್‌ಗೆ ಸಂಬಂಧ ಪಟ್ಟ ಮಾರ್ಗದರ್ಶಿ ಸೂತ್ರಗಳನ್ನ ಚಾಚೂ ತಪ್ಪದೆ ಪಾಲಿಸಿಕೊಂಡು, ನಮ್ಮನ್ನು ನಾವು ಸುರಕ್ಷಿತರನ್ನಾಗಿ ಇಟ್ಟುಕೊಂಡರೆ, ಮತ್ತೆ ಈ ಲಾಕ್ ಡೌನ್ ನಂಥ ಅನಾನುಕೂಲ ಪರಿಸ್ಥಿತಿಯನ್ನು ದೂರ ಇಡಲು ಸಾಧ್ಯ.