ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ಇಡೀ ಪ್ರಪಂಚವನ್ನು ಏಳು ಬಾರಿ ಸುತ್ತಿ ಬಂದರೂ ಇಂಥದ್ದೊಂದು ಕಲೆ ಮತ್ತೆಲ್ಲೂ ಕಾಣಸಿಗಲಿಕ್ಕಿಲ್ಲ. ನಾನು ಹೇಳುತ್ತಿರುವುದು ಕರ್ನಾಟಕದ ಗಂಡು ಕಲೆ ಎಂದೇ ಹೆಸರಾದ ಯಕ್ಷಗಾನದ ವಿಷಯ. ಸಾಹಿತ್ಯ, ಶಾಸ್ತ್ರೀಯ ಹಾಡುಗಾರಿಕೆ, ತಾಳಕ್ಕೆ ತಕ್ಕ ನೃತ್ಯ, ಲಯಬದ್ಧವಾದ ಮಾತು, ಪಾತ್ರಕ್ಕೊಪ್ಪುವ ಮುಖವರ್ಣಿಕೆ, ವೇಷ ಭೂಷಣ ಎಲ್ಲವನ್ನೂ ಒಳಗೊಂಡ ಇನ್ನೊಂದು ಜನಪದ ಕಲಾ ಪ್ರಕಾರ ಮತ್ತೊಂದಿರಲಿಕ್ಕಿಲ್ಲ.
ಸಮಗ್ರ ದಕ್ಷಿಣ ಕನ್ನಡ, ಮುಕ್ಕಾಲು ಉತ್ತರ ಕನ್ನಡ, ಅರ್ಧ ಶಿವಮೊಗ್ಗ, ಕಾಲು ಭಾಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಣ ಸಿಗುವ ಈ ಕಲೆಗೆ ಐದು ಶತಮಾನಗಳ ಇತಿಹಾಸವಿದೆ. ಅಂಥ ಒಂದು ಕಲೆ ಈಗಲೂ ಇವಿಷ್ಟೇ ಪ್ರದೇಶಕ್ಕೆ ಸೀಮಿತವಾಗಿರುವುದು ಒಂದು ದುರಂತವೇ ಸೈ. ಇತ್ತೀಚೆಗೆ ಮುಂಬೈ, ಬೆಂಗಳೂರು, ಹುಬ್ಬಳ್ಳಿಯಂಥ ನಗರಗಳಲ್ಲಿ, ಆಗೊಮ್ಮೆ ಈಗೊಮ್ಮೆ ವಿದೇಶಗಳಲ್ಲಿ ಯಕ್ಷಗಾನ ನಡೆದರೆ, ಅದಕ್ಕೂ ಕಾರಣ ಇದೇ ಪ್ರದೇಶದ, ಅಲ್ಲಿ ನೆಲೆಸಿದ ಜನರೇ ವಿನಾ ಉಳಿದವರಲ್ಲ. ಉಳಿದಂತೆ ಕರ್ನಾಟಕದ ಇತರ ಭಾಗದ ಜನರು ಇದರ ಬಗ್ಗೆ ಕೇಳಿರಬಹುದೇ ಹೊರತು ಹೆಚ್ಚಿನ ಆಸಕ್ತಿ ತೋರಿಸಿದವರಲ್ಲ.
ಕರ್ನಾಟಕದ ಉತ್ತರಕ್ಕಿರುವ ಬೀದರ್ನಗಲೀ ಅಥವಾ ದಕ್ಷಿಣಕ್ಕಿರುವ ಚಾಮರಾಜನಗರದಗಲೀ, ಯಕ್ಷಗಾನ ಇಂದಿಗೂ ಅಪರಿಚಿತ, ಆಗಂತುಕ. ಇನ್ನು ಮೂಲ ಬೆಂಗಳೂರು ನಿವಾಸಿಗಳಿಗೆ ಯಕ್ಷಗಾನವೆಂದರೆ ‘ನೈಸ್ ಕಾಸ್ಟ್ಯೂಮ’ ಅಷ್ಟೇ. ಅದಕ್ಕಿಂತ ಕೇರಳದ ಕಾಸರಗೋಡು ಜಿಲ್ಲೆಯೇ ವಾಸಿ. ಯಕ್ಷಗಾನ ಇಂದಿಗೂ ಜೀವಂತವಾಗಿದೆ ಎಂದರೆ ಪ್ರಮುಖ ಕಾರಣ ಅದರಲ್ಲಿರುವ ನಾಟ್ಯ, ಭಾಷೆ ಮತ್ತು ಸಾಹಿತ್ಯ. ಉಳಿದಂತೆ ಬಣ್ಣ, ಭೂಷಣಗಳಲ್ಲಿ ಹೆಚ್ಚಿನ ಬದಲಾವಣೆಯಾಗಲಿಲ್ಲ. ಇಂದಿಗೂ ಅದೇ ಕಿರೀಟ, ಅದೇ ಪಗಡೆ, ಅದೇ ಶಿಖೆ. ಹಳೆಯ ಕಥಾಭಾಗ ಇಂದಿಗೂ ಸಶಕ್ತವಾಗಿ ಇರುವುದಕ್ಕೆ ಕಾರಣ ಅದರ ಪದ್ಯದಲ್ಲಿರುವ ಸತ್ವ ಮತ್ತು ಅದಕ್ಕೆ ತಕ್ಕಂತೆ ಅರ್ಥ ಹೇಳುವ ಕಲಾವಿದನ ಅಸ್ಖಲಿತ ವಾಗ್ಝರಿಯ ಅಳವು.
ರಾತ್ರಿಯಿಂದ ಬೆಳಗಿನ ಜಾವದ ವರೆಗೆ ನಡೆಯುವ ‘ಆಟ’ (ಯಕ್ಷಗಾನಕ್ಕೆ ಹೀಗೂ ಹೇಳುವುದಿದೆ)ದಲ್ಲಿ ಹೆಚ್ಚಾಗಿ ನಡೆಯುವುದು ಪಾತ್ರಗಳ ನಡುವಿನ ಸಂವಾದವಾದ್ದರಿಂದ ಕಂಠಪಾಠ ಮಾಡಿದರೆ ಆಗದು. ಅದಕ್ಕಾಗಿ ಪ್ರಸಂಗಕರ್ತರಿಂದ ಹಿಡಿದು ಕಲಾವಿದ ರವರೆಗೆ ಪ್ರತಿಯೊಬ್ಬರೂ ಸಾಹಿತ್ಯದ ಸಾಮರ್ಥ್ಯ, ಶಬ್ದದ ಶಕ್ತಿ, ಸ್ಪಷ್ಟ ಉಚ್ಚಾರಣೆಯ ಕಸುವು ವೃದ್ಧಿಸಿಕೊಳ್ಳುತ್ತಲೇ ಇರಬೇಕು. ಯಕ್ಷಗಾನದ ರಂಗಸ್ಥಳ ಆಶು ಭಾಷಣದ ವೇದಿಕೆ ಇದ್ದಂತೆ. ನಿತ್ಯವೂ ನೂತನ ಕಥಾಭಾಗ, ಭಿನ್ನ ಪಾತ್ರ, ಅದಕ್ಕೆ ತಕ್ಕಂತೆ ವಿಭಿನ್ನ ಮಾತು.
ಇಲ್ಲಿ ‘ಹ’ ಕಾರಕ್ಕೆ ‘ಅ’ ಕಾರ ಬಳಸುವವರಾಗಲೀ, ಶಿವನನ್ನು ಸಿವ ಎನ್ನುವವರಾಗಲೀ ಸಿಗುವುದಿಲ್ಲ. ರಾತ್ರಿಯಿಂದ ಬೆಳಗಿನವರೆಗೆ ಸುಮಾರು ಎಂಟು ತಾಸು ನಡೆಯುವ ಆಟದಲ್ಲಿ ಒಂದೇ ಒಂದು ಇಂಗ್ಲೀಷ್ ಪದದ ಬಳಕೆಯಾಗುವುದಿಲ್ಲ. ‘ಕೇಳೆ ನನ್ನ ವೈಫ್, ನೀನೇ ನನ್ನ ಲೈಫ್,’ ‘ಅದೋ ನೋಡು ಚಂದ್ರ ಬಿಂಬ, ಇದೋ ನೋಡು ಕರೆಂಟ್ ಕಂಬ’ ಇತ್ಯಾದಿ ಮಿಶ್ರ ತಳಿಗೆ ಇಲ್ಲಿ ಸ್ಥಳವಿಲ್ಲ. ಇಲ್ಲಿ ಭಾಷೆ ಸಟಿಕದಷ್ಟು ಸ್ಪಷ್ಟ. ಶ್ವೇತದಷ್ಟು ಶುಭ್ರ. ನಿಮಗೆ ತಿಳಿದಿರಲಿ, ಯಕ್ಷಗಾನದ ಮೇರು ಕಲಾವಿದರಾದ ಕೆರೆಮನೆ
ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋವಿಂದ ಭಟ್, ಹಡಿನಬಾಳ ಶ್ರೀಪಾದ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ರಂಥವರು ಪ್ರೌಢಶಾಲೆಯ ಮೆಟ್ಟಿಲನ್ನೂ ಕಂಡವರಲ್ಲ. ಆದರೆ ಅವರ ನಿರರ್ಗಳ ಮಾತಿನ ವೇಗಕ್ಕೆ, ಓಘಕ್ಕೆ ಇದು ಎಂದಿಗೂ ತೊಡಕಾಗಲಿಲ್ಲ.
ಅವರ ಭಾಷಾ ಭಂಡಾರದಲ್ಲಿ ಅಕ್ಷರಕ್ಕೆ ತಡಕಾಟ ವಿರಲಿಲ್ಲ, ಪದಗಳಿಗೆ ಹುಡುಕಾಟವಿರಲಿಲ್ಲ. ಅವರ ಭಾಷೆಯ ಅಕ್ಷಯ ಪಾತ್ರೆ ಯಾವ ಸಂಶೋಧಕರಿಗೂ ಕಮ್ಮಿಯಲ್ಲದಂತೆ ತುಳುಕುತ್ತಿತ್ತು. ಅವರ ನಾಲಿಗೆಯ ಮೇಲೆ ವಿದ್ಯಾ ದೇವತೆ ನಲಿದಾಡುತ್ತಿದ್ದಳೆಂದರೆ ಕಾರಣ, ಅವರು ಆಯ್ದುಕೊಂಡ ಯಕ್ಷಗಾನ ಕಲೆ. ಆ ಕಲೆಯಲ್ಲಿ ಅವರು ತೊಡಗಿಸಿಕೊಂಡದ್ದು ಭಕ್ತಿ, ಶ್ರದ್ಧೆ, ಶ್ರಮ. ಕಲಾಮಾತೆಗೆ ಅವರನ್ನು ಎತ್ತಿ ಆಡಿಸಲು ಅಷ್ಟೇ ಸಾಕಾಯಿತು. ಅದು ಯಕ್ಷಗಾನದ ತಾಕತ್ತು.
ಬಹುಶಃ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಯಾವ ಆಘಾತವೂ, ಆತಂಕವೂ ಇಲ್ಲದೇ ನೆಮ್ಮದಿಯಿಂದ ನಿರುಮ್ಮಳವಾಗಿ
ಬದುಕುತ್ತಿರುವುದು ಇದೊಂದೇ ಕ್ಷೇತ್ರದಲ್ಲಿ. ಆರಂಭದ ದಿನಗಳಿಂದ ಇಂದಿನವರೆಗೂ ಸಾಹಿತ್ಯದಲ್ಲಿ ಸತ್ವ ಉಳಿಸಿಕೊಂಡು ಬಂದ ಕ್ಷೇತ್ರ ಇದು. ನವ್ಯ ಕವಿತೆ ಕವನಗಳ ಬಿರುಗಾಳಿಯ ನಡುವೆ, ಗಣಗಳು, ಆದಿಪ್ರಾಸ, ಅಂತ್ಯಪ್ರಾಸ, ಜೋಡಿ ಪ್ರಾಸ ಇತ್ಯಾದಿಗಳು ಇನ್ನೂ ಪ್ರಾಣ ಉಳಿಸಿಕೊಂಡಿದ್ದು ಇಲ್ಲಿ ಮಾತ್ರ.
ಛಂದಸ್ಸು ವರ್ಚಸ್ಸನ್ನು ಕಳೆದುಕೊಂಡು ಛಿದ್ರವಿಛಿದ್ರವಾಗದೇ, ಗಣಗಳು ಗುಣ ಕಳೆದು ಕೊಂಡು ಹಗರಣವಾಗದೇ ಉಳಿದ ಕ್ಷೇತ್ರವೆಂದರೆ ಇದೊಂದೇ. ಈ ಕಾರಣಕ್ಕಾಗಿಯೇ ಕಲಾವಿದರೊಂದಿಗೆ ಯಕ್ಷಗಾನದ ಪ್ರೇಕ್ಷಕರಲ್ಲಿಯೂ ಭಾಷೆಯ ವಿಷಯದಲ್ಲಿ ಸ್ಪಷ್ಟತೆ ಸ್ವಾಭಾವಿಕ, ಸಹಜ. ಯಕ್ಷಗಾನ ನಡೆಯುವ ಪ್ರದೇಶದಲ್ಲಿ ಇಂದಿಗೂ ಕನ್ನಡ ಭಾಷೆಹೆಚ್ಚಿನ ಹಾನಿಗೊಳಗಾಗದೇ ಬದುಕುತ್ತಿದೆ, ಬೆಳೆಯುತ್ತಿದೆ. ಈಪ್ರದೇಶದ ಕನ್ನಡ ಕಲಬೆರಕೆ ಆಗದೇ ಇರುವಲ್ಲಿ ಯಕ್ಷಗಾನದ ಮಹತ್ತರ ಪಾತ್ರವಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಸುಮ್ಮನೇ ಒಂದಿಷ್ಟು ಯಕ್ಷಗಾನ ಪದ್ಯದ ಸಾಹಿತ್ಯದಲ್ಲಿ ಸಂಚರಿಸಿ ಬರೋಣ. ಯಕ್ಷಗಾನದ ಪದ್ಯಕ್ಕೂ ಛಂದಸ್ಸು, ಗಣ, ಘಾತ, ಆವೃತ್ತ ಇತ್ಯಾದಿ ಇರುತ್ತದೆ. ಅದನ್ನೆಲ್ಲ ಬದಿಗಿಟ್ಟು, ಕೇವಲ ಸಾಹಿತ್ಯ ವಿಹಾರ ಮಾಡೋಣ. ಯಕ್ಷಗಾನದ ಅಲ್ಪ ಸ್ವಲ್ಪ ಅರಿವಿದ್ದವನಿಗೂ ತಿಳಿದಿರುವ ಶೃಂಗಾರ ರಸದ ವನ ವಿಹಾರದ ಜನಪ್ರಿಯ ಪದ್ಯ ಇದು. ‘ನೀಲ ಗಗನದಲಿ ಮೇಘಗಳ ಕಂಡಾಗಲೆ ನಲಿಯುತ ನವಿಲು ಕುಣಿಯುತಿದೆ ನೋಡೆ, ಸಖಿ ನೋಡೆ. ಅರಳಿದ ಸುಮದೊಳು ದುಂಬಿಗಳು ಝೇಂಕರಿಸುತ ನಾದದಿ ಮಧುವ ಹೀರುತಿವೆ ನೋಡೆ.
ಚಿಗರೆಯ ಮರಿಗಳು ಚಿಗುರೆಲೆ ಮೇಯುತ ಜಿಗಿಯುವ ಅಂದವ ನೋಡೆ…’ ಅದರಂತೆ ಇನ್ನೊಂದು ಪದ್ಯವೆಂದರೆ ‘ಎಲ್ಲೂ
ಸೊಬಗಿದೆ, ಎಲ್ಲೂ ಸೊಗಸಿದೆ, ಮಾಮರವು ಹೂತಿದೆ, ಸೊಬಗೇರಿ ನಿಂತಿದೆ. ಚಿಗಿತ ತಳಿರ ತೋರಣ ಸುತ್ತೆಲ್ಲ ಓರಣ, ಭೂಮಾತೆ
ಉಡುಪಿದಾಯ್ತು ಚೆಲುವಿನ ಅರಿಶಿನ’. ಪದ್ಯ ಮುಂದುವರಿದು, ‘ಹರಿದು ಮೌನ ಶೃಂಖಲೆ ಪುಟಿದು ಕೋಗಿಲೆ, ಕುಹು ಕುಹೂ
ಪಂಚಮದ ಇಂಚರದಿ ಕೋಗಿಲೆ ಹಾಡಿದೆ’ ಎಂಬಲ್ಲಿಗೆ ಮುಕ್ತಾಯವಾಗುತ್ತದೆ. ಈ ರೀತಿಯ ವನ ವಿಹಾರದ ಪದ್ಯಗಳನ್ನು ರಂಗ ದಲ್ಲಿ ಸಂದರ್ಭಕ್ಕೆ ತಕ್ಕಂತೆ ಲಿಂಗ ಬದಲಾಯಿಸಿ (ಸಖಿ ನೋಡೆ, ಸಖ ನೋಡ) ಹಾಡಲಾಗುತ್ತದೆ.
ರತ್ನಾವತಿ ಕಲ್ಯಾಣ ಪ್ರಸಂಗದ ಒಂದು ಪದ್ಯ ನೋಡಿ. ‘ನುಡಿಯೇ, ನಿನ್ನೊಡೆಯನ ಪೆಸರೊಡ ನುಡಿಯೇ. ಬಡ ನಡುವಿನ
ಜಡ ಪಿಡಿ ನಡೆ ದುಡು ಕೊಡ ಬಿಡು ಕಡು ಬೆಡಗಿನೊಳುಡುಪಡೆ ಪತಿಮುಖಿ. ಈ ಪದ್ಯದಲ್ಲಿ ‘ಡ’ಕಾರದ ಬಳಕೆ ಗಮನಿಸಿ. ಹೆಚ್ಚು ಕಮ್ಮಿ ಪ್ರತಿ ಪದದ ಎರಡನೆಯ ಅಕ್ಷರ ‘ಡ’. ಅಲ್ಲದೇ ಕೊನೆಯ ಪದವೊಂದನ್ನು ಬಿಟ್ಟು ಪ್ರತಿ ಪದದಲ್ಲಿಯೂ ‘ಡ’ ಇದೆ. ಇಂಥ ಪದ್ಯಗಳನ್ನು ಹಾಡುವಾಗ ಅಥವಾ ಈ ಪದ್ಯಕ್ಕೆ ಅರ್ಥ ಹೇಳುವಾಗ ನಾಲಿಗೆಯ ಮೇಲೆ ಎಷ್ಟು ಹಿಡಿತ ಸಾಧಿಸಿರಬೇಕು ಅಲ್ಲವೇ? ‘ಡ’ ಅಕ್ಷರವನ್ನು ಹೆಚ್ಚು ಬಳಸಿದ ಇನ್ನೊಂದು ಪದ್ಯ, ಕಾಸರಗೋಡು ಸುಬ್ರಾಯ ಪಂಡಿತರು ರಚಿಸಿದ ರಾವಣವಧೆ ಪ್ರಸಂಗದಲ್ಲಿದೆ.
ರಾವಣ ತನ್ನ ಜೀವನದ ಕೊನೆಯ ಘಳಿಗೆಯಲ್ಲಿ ಶ್ರೀರಾಮನನ್ನು ಕಂಡು ಹೇಳುವ ಒಂದು ಪದ್ಯ, ‘ಕಂಡನು ದಶವದನ, ಕೋದಂಡ ರಾಮನ, ಕಂಡನು ದಶವದನ. ಪುಂಡರೀಕಾಂಬನ, ಜಗದೋದ್ದಂಡ ರೂಪನ, ಖಂಡ ಬಲ ಬ್ರಹ್ಮಾಂಡ ಕೋಟಿಯ ತಂಡಗಳ ಕೃಪೆಗೊಂಡು ಸಲಹುವ ಜಾಂಡಧಿಶನ’. ಯಕ್ಷಗಾನದಲ್ಲಿ ಇಂಥ ಸಾಕಷ್ಟು ಪದ್ಯಗಳು ಕಂಡುಬರುತ್ತವೆ. ‘ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು ಮತ್ತಿನ್ನಾವ -ಲವಿದೆ ನೀತಿಯೊಂದೆ ದೇವನೆನಿಸಿತು ಎನ್ನನು, ಜಗದೊಳಿಂತು’. ಇದು ಸುಮಾರು ನೂರ ಮೂವತ್ತು ಕೃತಿಗಳನ್ನು ರಚಿಸಿದ ಹೊಸ್ತೋಟ ಮಂಜುನಾಥ ಭಾಗವತರ ರಾಮ ನಿರ್ಯಾಣ
ಆಖ್ಯಾನದ ಒಂದು ಪದ್ಯ.
ತನ್ನ ಅಂತ್ಯಕಾಲದಲ್ಲಿ ರಾಜಾ ರಾಮನ ಮನದಲ್ಲಿ ಮೂಡುವ ಭಾವನೆಗಳನ್ನು ಕವಿ ಹೇಳಿದ ರೀತಿ ಇದು. ರಾಮನ ಸಂಪೂರ್ಣ ಜೀವನವನ್ನೇ ಕೆಲವು ಶಬ್ದಗಳಲ್ಲಿ ಹಿಡಿದಿಟ್ಟ ಕವಿಯ ಜಾಣ್ಮೆ ಮೆಚ್ಚದೇ ಇರಲು ಸಾಧ್ಯವೇ? ಆರು ಪ್ರಸಂಗಗಳನ್ನು ರಚಿಸಿದ ಕೀರ್ತಿಶೇಷ ಕಾಳಿಂಗ ನಾವುಡರು ‘ರೂಪಶ್ರೀ’ ಕಥಾಭಾಗಕ್ಕೆ ಬರೆದ ಒಂದು ಸಾಹಿತ್ಯ ನೋಡಿ. ರಾಕೇಂದುವದನೆ ನೀನಾರೆ,
ವೈಯ್ಯಾರಿಯೆ, ಕೋಕಿಲ ಗಾನೆ ರನ್ನೆ….’ ಇಲ್ಲಿ ಬಳಸಿದ ‘ರಾಕೇಂದು ವದನೆ’ ಎಂಬ ಪದವನ್ನು ಎಷ್ಟುಜನ ಕೇಳಿರಬಹುದು? ಅದರ ಅರ್ಥ ಶಶಿಮುಖಿ ಅಥವಾ ಚಂದಿರನಂತಹ ಮುಖ ಉಳ್ಳವಳು ಎಂದು ಎಷ್ಟು ಜನರಿಗೆ ತಿಳಿದಿರಬಹುದು? ಇಂಥ ತೀರಾ
ಅಪರೂಪದ ಪದಗಳ ಬಳಕೆ ಯಕ್ಷಗನದಲ್ಲಿ ಸರ್ವೇ ಸಾಮಾನ್ಯ.
ಹಾಗಂತ ಎಲ್ಲವೂ ಇದೇ ರೀತಿಯ ಪದ್ಯಗಳೇ ಆಗಬೇಕೆಂದೇನೂ ಇಲ್ಲ. ಕೆಲವೊಮ್ಮೆ ಕಥೆಗೆ ಬೇಕಾಗಿ, ಆಯಾ ಸ್ಥಳದ, ಪಾತ್ರದ
ಚಿತ್ರಣಕ್ಕೆ ಬೇಕಾಗಿ ಅದಕ್ಕೆ ತಕ್ಕ ಭಾಷೆಯನ್ನು ಬಳಸಿದ ಉದಾಹರಣೆಯೂ ಇದೆ. ಉದಾಹರಣೆಗೆ, ‘ಭೀಷ್ಮ ಪ್ರತಿಜ್ಞೆ’
ಕಥಾ ಭಾಗದಲ್ಲಿ ಇರುವ ಒಂದು ಪದ್ಯ. ‘ತಡವಿಲ್ಲದೆ ಬೇಗ ಹೋಯ್ಕು, ಆಚೆ ತಡಿಯೊಳಿಪ್ಪರ ಕಂಡು ಬರ್ಕು. ಬಿಡದೆನ್ನ ಕೂಲಿ
ತೆಕ್ಕೊಣ್ಕು, ಬೇಗ ಕೊಡದಿರ್ದಡಲ್ಲಿಯೆ ಬಿಡ್ಕು.’ ಮುಂದುವರಿದು ಪದ್ಯ ಹೀಗೆ ಅಂತ್ಯಗೊಳ್ಳುತ್ತದೆ, ‘ಅಬ್ಬರ್ಸಿ ಕರೆದವರು ಕಾಣಿ,
ಒಬ್ಬರೊಬ್ಬರ್ಹಿಂದೊಂದು ಮಾಣಿ, ಡಬ್ಬೊರತಿಲ್ಲ ಠಿಕಾಣಿ, ನಮಗೊಬ್ಬರು ಕೊಡರು ಪಾವಾಣಿ.’
ಭೀಷ್ಮನ ಮಲತಾಯಿ ಸತ್ಯವತಿಯ ತಂದೆ, ಬೆಸ್ತರ ನಾಯಕ, ದಾಶರಾಜನಿಗಿರುವ ಪದ್ಯ ಇದು. ಆ ಕಾಲದಲ್ಲಿ ಆ ಪ್ರದೇಶದ ಜನರು ಆಡುತ್ತಿದ್ದ ಭಾಷೆಯ ಸೊಗಡು ಇದರಲ್ಲಿದೆ. ಇತ್ತೀಚೆಗೆ ವನ ವಿಹಾರದ ಸಂದರ್ಭಕ್ಕೆ ಹೊಸ ಪದ್ಯಗಳು ಸೇರ್ಪಡೆಗೊಳ್ಳುತ್ತಿವೆ. ‘ಮೇಘಮಾಲೆ ಗಿರಿಯಮೇಲೆ ತೇಲಿ ಬರುತಿದೆ, ರಾಗಸುಧೆಯ ಹರಿಸಿ ವರ್ಷಧಾರೆಯಾಗಿದೆ. ಗಗನ ನೋಡಿ ಕುಣಿವ ನವಿಲು ಮುದವ ತರುತಿದೆ, ಚಿಗರೆ ಜೋಡಿ ಜಿಗಿವ ಹೊನಲು ಹರುಷ ತಂದಿದೆ. ನಾಗಾಭರಣ ನಾಟ್ಯದಂತೆ ಜಲವು ಧುಮುಕಿದೆ, ವೇಗದಿಂದ ಬೆರೆಯೆ ಶರಽ ಬಳಿಗೆ ಸಾಗಿದೆ.’ ಇದು ಹೆಬ್ರಿ ಗಣೇಶ ಭಾಗವತರ ರಚನೆ. ಅವರ ಇನ್ನೊಂದು ರಚನೆ, ‘ನೋಡು ನೋಡು ನೋಡು ಗೆಳತಿ ವರ್ಷ ಧಾರೆಯ, ಸುರಿದು ಹರಿದು ಸೇರುತಿಹುದು ಭವ್ಯ ಶರಧಿಯ.
ಭುವಿಗೆ ತಂಪನೆಸಗಿ ತಾನು ಹರಿವ ರಭಸದಿ ಇಳೆಯೊಳಿರುವ ಕಳೆಯ ಕೊಳೆಯ ತೊಳೆವಳ್ ಹರುಷದಿ….’ ಯುವ ಭಾಗವತರು, ಸುಮಾರು ಮೂವತ್ತು ಪ್ರಸಂಗ ರಚಿಸಿ, ಹದಿನೆಂಟು ಪ್ರಸಂಗಕ್ಕೆ ಪದ್ಯ ರಚಿಸಿದ ಪ್ರಸಾದ ಮೊಗೆಬೆಟ್ಟು ಅವರ
ಪದ್ಯ ರಚನೆಯ ಸೊಬಗು ನೋಡಿ. ‘ಚಂದ್ರ ಚೆಲುವೆಯಾಗಿ ಇಳೆಗೆ ಬಂದ ಹಾಗಿದೆ, ಇಂದ್ರ ನಗರಿ ಬೆಡಗಿ ಇಳಿದು ನಿಂದ ಸೊಬಗಿದೆ.
ಸುಂದರಾಂಗಿ ಸುಪ್ರಭಾಂಗಿ ನೀರೆ ಕೋಮಲೆ, ಮಂದಗಮನೆ ಪದುಮನಯನೆ ಯಾರೆ ಕೋಮಲೆ’.
ಇನ್ನೊಂದು ಪದ್ಯ, ನಡುಗಡಲ ನಾವೆಯಲಿ ಹರಿಗೋಲು ಹಾವಾಯ್ತು ದಡಗಾಣದಂತಾದ ಮೋಸ, ಹಿಡಿಹೃದಯ ಸುಡುಗಾಡ ಚಿತೆಯಾಯ್ತು ನಂಬುಗೆಯು ಕಡೆದ ಬಾಳಿನ ಶಿಲ್ಪ ನಾಶ’. ಮೊದಲನೆಯ ಪದ್ಯದಲ್ಲಿ, ವ್ಯಕ್ತಿಯೋರ್ವ ಸುಂದರಿಯೋರ್ವಳನ್ನು ಕಂಡು ಮಾತನಾಡಿಸುವ ಸನ್ನಿವೇಶವೆಂದೂ,ಎರಡನೆಯ ಪದ್ಯ ದುಃಖದ ಪದ್ಯವೆಂದೂ ಎಂಥವರಿಗೂ ಅರ್ಥವಾಗುತ್ತದೆ.
ಅವರು ‘ರಾಧಾಕೃಷ್ಣ ಯಕ್ಷಗಾನ ರೂಪಕಕ್ಕಾಗಿಬರೆದ ಒಂದು ಪದ್ಯ, ‘ಕುಸುಮಾಕ್ಷಿ ನಾಚಿ ನೀರಾದೆ, ಯಾಕೆ? ರಸಿಕ ಕೃಷ್ಣನ ರಾಣಿ ಸೊಬಗಿ ನೀ-‘ರಾಧೆ’. ಶಶಿಮುಖಿ ಬಳಿ ಬಂದೆನಲ್ಲ, ಪ್ರೀತಿ ಉಸಿರ ಸೋಕಿಸು ಮೆಲ್ಲ, ನಾ ನಿನ್ನ -ನಲ್ಲ’. ತೆನಾಲಿ ರಾಮಕೃಷ್ಣ ಪ್ರಸಂಗಕ್ಕೆ ಬರೆದ ಒಂದು ಪದ್ಯ, ‘ಒಲಿದಳು ಮಾತೆಯು ಧನ್ಯಾತ್ಮನು ನಾ, ನಲಿವಿಂದುದಿಸಿದ ಭಾಗ್ಯ ರವಿ. ಬಲ-ಎಡದಿಂದಲಿ ವಾಚಿಪ ಬಿರುದಿದು, ಇಳೆಯೊಳು ನಾನೆ ವಿ-ಕ-ಟ-ಕ-ವಿ’. ಅಕ್ಷರದೊಂದಿಗೆ ಎಷ್ಟು ಸಲೀಸಾಗಿ ಆಟವಾಡಿದ್ದಾರೆ!
‘ಜಡಜ ನೇತ್ರೆ ಜಗದ ಚೆಲುವು ನಿನ್ನೊಳಡಗಿದೆ, ಮಿಡಿದೆ ಹೃದಯ ವೀಣೆ ಒಲವು ಎನ್ನೊಳರಳಿದೆ. ಪಡೆದು ನಿನ್ನ ಪೂರ್ಣ ವಿವರ ಮನವು ತನ್ಮಯ, ನುಡಿಯಲೇನೆ ಕಾಶಿಪುದ ಎನ್ನ ಪರಿಚಯ.’ ಮಣೂರು ವಾಸುದೇವ ಮಯ್ಯರ ಕಥೆಗೆ ಪ್ರಸಾದರು ಬರೆದ ಈ ಪದ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನ ನೋಡಿ ಮೆಚ್ಚಿದರು.
ಇವು ಕೆಲವು ಉದಾಹರಣೆಗಳಷ್ಟೇ. ಇಂತಹ ಅನೇಕ ಪ್ರಸಂಗಗಳನ್ನು ರಚಿಸಿದವರು, ಪದ್ಯ ರಚನೆ ಮಾಡಿದವರಿಗೆ ಒಂದು
ಗೌರವಪೂರ್ಣ ನಮಸ್ಕಾರ ಹೇಳಲೇಬೇಕು. ಕವಿಗಳಾದ ಮುದ್ದಣ, ಗುಂಡ್ಲೂ ಸೀತಾರಾಮರಿಂದ ಹಿಡಿದು, ನಲವತ್ತಕ್ಕೂ ಹೆಚ್ಚು ಕ್ಷೇತ್ರ ಮಹಾತ್ಮೆ ರಚಿಸಿದ ಬಸವರಾಜ ಶೆಟ್ಟಿಗಾರ್, ಛಂದೋಬ್ರಹ್ಮ ಸೀಮಂತೂರು ನಾರಾಯಣ ಶೆಟ್ಟಿ, ಸತಿ ಸೀಮಂತಿನಿ, ಶೂದ್ರ
ತಪಸ್ವಿನಿ, ಚೆಲುವೆ ಚಿತ್ರಾವತಿ ಮೊದಲಾದ ಪ್ರಸಂಗ ರಚಿಸಿದ ಕೆಂದಾವರ ರಘುರಾಮ ಶೆಟ್ಟಿ, ಚೈತ್ರ ಚಂದನದ ಖ್ಯಾತಿಯ ವೈ.
ಚಂದ್ರಶೇಖರ ಶೆಟ್ಟಿ, ಮಾನಿಷಾದ, ಮೇಘ ಮಯೂರಿ ಖ್ಯಾತಿಯ ಪುರುಷೋತ್ತಮ ಪೂಂಜ, ನೀಲಾವರ ಲಕ್ಷ್ಮೀನಾರಾಯಣ,
ಛಂದಸ್ಸಿನ ರಾಯಭಾರಿ ಗಣೇಶ ಕೊಲೆಕಾಡಿ, ಮೂವತ್ತಕ್ಕೂ ಹೆಚ್ಚು ಪ್ರಸಂಗ ರಚಿಸಿದ ತಾರಾನಾಥ ವರ್ಕಾಡಿ, ಅಂಬಾತನಯ
ಮುದ್ರಾಡಿ, ಪ್ರೊ.ಎಂ.ಎ.ಹೆಗಡೆ, ಬೇಳೂರು ವಿಷ್ಣುಮೂರ್ತಿ ನಾಯಕ, ಸುಮಾರು ಎಂಬತ್ತು ಪ್ರಸಂಗ ರಚಿಸಿದ ದೇವದಾಸ
ಈಶ್ವರಮಂಗಲರಿಂದ ಹಿಡಿದು, ಯುಗ್ಮ ಯಾಮಿನಿ, ಗೋಕುಲಾಷ್ಟಮಿ ಖ್ಯಾತಿಯ ಪವನ್ ಕಿರಣ್ಕೆರೆಯವರವರೆಗೆ ಎಲ್ಲರೂ ಗೌರವಕ್ಕೆ ಭಾಜನರು.
ಯಕ್ಷಗಾನದ ಕವಿಗಳು, ಅವರ ರಚನೆ ಹೇಳಲು ಒಂದು ಅಂಕಣ ಬಿಡಿ, ಒಂದು ಬೃಹತ್ ಗ್ರಂಥವೂ ಸಾಕಾಗಲಿಕ್ಕಿಲ್ಲ. ಕೆಲವರದ್ದಾದರೂ ಪರಿಚಯ ಆಗಲಿ ಎಂದು ಈ ಹೆಸರುಗಳನ್ನು ಹೇಳಿದೆನೇ ವಿನಾ ಉಳಿದವರ ಕೊಡುಗೆ ಖಂಡಿತ ಕಮ್ಮಿಯಲ್ಲ. ಸೂಪರ್ ಸ್ಟಾರ್ಗಳ ಚಿತ್ರವೇ ಐವತ್ತು ದಿನ ಕಾಣದ ಇಂದಿನ ದಿನಗಳಲ್ಲಿ ಒಂದು ಹೊಸ ಪ್ರಸಂಗ ನೂರು ಪ್ರದರ್ಶನ ಕಾಣುತ್ತದೆ ಎಂದರೆ ಸುಮ್ಮನೆ ಮಾತಲ್ಲ. ಅದರೊಂದಿಗೆ ಸಾವಿರಾರು ಪ್ರದರ್ಶನ ಕಂಡ ನೂರಾರು ಹಳೆಯ ಪ್ರಸಂಗಗಳು ಇಂದಿಗೂ
ಚಾಲ್ತಿಯಲ್ಲಿವೆ ಎಂದರೆ ಕವಿಯ ಶ್ರಮ ಏನೆಂಬುದನ್ನು ಊಹಿಸಬಹುದು.
ಒಂದು ವಿಷಯ ನೆನಪಿರಲಿ, ಯಕ್ಷಗಾನದ ಪದ್ಯ ಬರೆಯುವುದೆಂದರೆ ಸುಮ್ಮನೆ ಮಾತಲ್ಲ. ಕಥಾ ಭಾಗವನ್ನು ಮನನ ಮಾಡಿ ಕೊಂಡು ಪದ್ಯ ಯಾವ ಸಂದರ್ಭಕ್ಕೆ ಎಂದು ಸರಿಯಾಗಿ ತಿಳಿದು ಪದಗಳ ಬಳಕೆಯಾಗಬೇಕು. ರಸಕ್ಕೆ ತಕ್ಕಂತೆ ತಾಳ, ರಾಗ
ಗಳನ್ನು ಸೂಚಿಸಬೇಕು. ಘಾತ, ಮಟ್ಟು ಎಲ್ಲವೂ ಒಂದಕ್ಕೊಂದು ಹೊಂದಾಣಿಕೆಯಾಗಬೇಕು. ಮುಂಚೆಯೇ ಮಾಡಿಟ್ಟ ರಾಗ
ಸಂಯೋಜನೆಗೆ ಅಕ್ಷರ ಜೋಡಿಸುವುದಾಗಲೀ, ಒಂದು ಸಾಲಿನಲ್ಲಿರುವ ಹತ್ತು ಪದಗಳನ್ನು ಒಂದರ ಕೆಳಗೊಂದು ಬರೆದು
ಪದ್ಯ ಎನ್ನುವುದಾಗಲೀ, ಇಲ್ಲಿ ನಡೆಯುವುದಿಲ್ಲ.
ರಾತ್ರಿಯಿಂದ ಬೆಳಗಿನವರೆಗೆ ನಡೆಯುವ ಒಂದು ಆಖ್ಯಾನಕ್ಕೆ ಸುಮಾರು ಇನ್ನೂರರಿಂದ ಇನ್ನೂರೈವತ್ತು ಪದ್ಯ ರಚಿಸಬೇಕು. ಅದರಲ್ಲಿ ಎಲ್ಲವೂ ಬಳಕೆ ಆಗಿಯೇ ಬಿಡುತ್ತದೆ ಎಂದೇನಿಲ್ಲ. ಕಾಲಕ್ಕೆ ತಕ್ಕಂತೆ ಕೆಲವನ್ನು ಬಿಟ್ಟು, ಕೆಲವನ್ನಷ್ಟೇ ಆಯ್ದುಕೊಳ್ಳುವ ಕ್ರಮವಿದೆ. ಬೇಸರದ ಸಂಗತಿಯೆಂದರೆ, ಮೊದಲೆಲ್ಲ ಪ್ರಸಂಗ ರಚಿಸಿದವರ ಹೆಸರು ಬಹುತೇಕ ಜನರಿಗೆ ತಿಳಿದಿರುತ್ತಿರಲಿಲ್ಲ. ಕಳೆದ ಒಂದು ದಶಕದಿಂದ ಕವಿಗಳನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ.
ಇದು ಯಕ್ಷಗಾನ ರಂಗದಲ್ಲಿರುವವರಿಗೆ, ಯಕ್ಷಗಾನ ಆಸಕ್ತರಿಗೆ ತಲುಪುತ್ತಿದೆಯೇ ವಿನಾ ಹೊರಗಿನ ಪ್ರಪಂಚಕ್ಕೆ ತಿಳಿಯುತ್ತಿಲ್ಲ.
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಯಕ್ಷಗಾನದ ಕವಿಗಳು ಇಂದಿಗೂ ಅಜ್ಞಾತರು. ಇಪ್ಪತ್ತೈದು ಕವನಗಳನ್ನು ಬರೆದು ಸಂಕಲನ
ಪ್ರಕಟಿಸಿದವರನ್ನು ಗುರುತಿಸುವ ಸಾಹಿತ್ಯ ಲೋಕಕ್ಕೆ ಒಂದು ಪ್ರಸಂಗಕ್ಕಾಗಿ ಇನ್ನೂರು ಪದ್ಯ ರಚಿಸುವ ಯಕ್ಷಗಾನದ ಕವಿಗಳು
ಅಸ್ಪೃಶ್ಯರು. ಕನ್ನಡ ಭಾಷೆಯನ್ನು ಒಂದಿಂಚೂ ಕೆಡದಂತೆ ಇಂದಿಗೂ ಉಳಿಸಿಕೊಂಡು ಬಂದಿರುವ ಯಕ್ಷಗಾನ, ಕನ್ನಡ ರಕ್ಷಣಾ
ಪಡೆಗಳಿಗೆ ದೂರ. ಕವಿಗಳೆಂದು ಕರೆಸಿಕೊಳ್ಳಲು, ಇತರ ಕವಿಗಳೊಂದಿಗೆ ಗುರುತಿಸಿಕೊಳ್ಳಲು, ಕನ್ನಡಕ್ಕೆ ಇವರು ಕೊಟ್ಟ
ಕೊಡುಗೆ ಸಾಲದೇ? ಈ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವವರನ್ನು ಇಂದು ಕನ್ನಡ ಪರ ಹೋರಾಟಗಾರರು, ಭಾಷೆ, ಪುಸ್ತಕ ಅಭಿವೃದ್ಧಿ ಪ್ರಾಧಿಕಾರದವರು ಗುರುತಿಸಬೇಕಾಗಿದೆ. ರಾಜ್ಯಾದ್ಯಂತ ಈ ಕಲೆ, ಕಲಾವಿದರು, ಕವಿಗಳ ಪರಿಚಯ ಆಗಬೇಕಿದೆ. ಸಾಹಿತ್ಯ ಲೋಕದ ಕವಿಗಳ ಪಂಕ್ತಿಯಲ್ಲಿ ಇವರಿಗೂ ಸ್ಥಾನ ಲಭಿಸಲಿ.
ಇತರರಿಗೆ ಸಿಗುವ ಗೌರವ, ಮನ್ನಣೆ ಇವರಿಗೂ ಸಿಗಲಿ. ಯಕ್ಷಗಾನ ಅಕಾಡೆಮಿಯವರೇ ಈ ಕೆಲಸ ಮಾಡುತ್ತಿಲ್ಲ, ಇನ್ನು ಉಳಿದವರು
ಹೇಗೆ ಅಂತೀರಾ? ಅಕಟಕಟಾ…!