ಲಹರಿ
ಡಾ.ಕೆ.ಎಸ್.ಚೈತ್ರಾ
ನಮ್ಮ ತೆಲುಗು ಅತ್ಯಂತ ಸುಂದರವಾದ ಭಾಷೆ; ನಮ್ಮ ತಮಿಳು ಅತಿ ಪ್ರಾಚೀನ ಮಾತ್ರವಲ್ಲ, ಮಧುರವಾದದ್ದು; ಅಯ್ಯೋ, ನಮ್ಮ ಬಂಗಾಳಿಯಂತೂ ಶ್ರೀಮಂತವಾದ ಭಾಷೆ; ಅರೆ, ನಮ್ಮ ಹಿಂದಿ ರಾಷ್ಟ್ರ ಭಾಷೆ ಮತ್ತು ಕಲಿಯಲೆಷ್ಟು ಸುಲಭ!
ಮತ್ತೆ ಕನ್ನಡ ? ಇಂಥದ್ದೊಂದು ಪ್ರಶ್ನೆ ಈಗ ಇಪ್ಪತ್ತೈದು ವರ್ಷಗಳ ಮಣಿಪಾಲಕ್ಕೆ ದಂತವೈದ್ಯಕೀಯ ವಿದ್ಯಾಭ್ಯಾಸಕ್ಕೆ ಹೋದಾಗ ಎದುರಾದ ಪ್ರಶ್ನೆ. ಮೊನ್ನೆ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ನಡೆದ ಪ್ರಕರಣ ನೋಡಿದಾಗ ಮತ್ತೆ ಹಳೆಯದೆಲ್ಲ ನೆನಪಾಯಿತು. ಅಂತಾರಾಷ್ಟ್ರೀಯ ವಿದ್ಯಾಸಂಸ್ಥೆಯಾದ ಮಣಿಪಾಲದಲ್ಲಿ ತಂತಮ್ಮ ರಾಜ್ಯ – ಭಾಷೆಯ ಜನರು ಒಟ್ಟಾಗಿ ಗುಂಪಾಗುವುದು, ತಮ್ಮ ಆಚಾರ – ವಿಚಾರ – ಭಾಷೆ ಶ್ರೇಷ್ಠ ಎಂದು ವಾದಿಸುವುದು ಹೊಸತೇನೂ ಅಲ್ಲ.
ನಾವಿನ್ನೂ ವೃತ್ತಿಪರ ಕಾಲೇಜು ಸೇರಿ ಒಂದು ತಿಂಗಳಾಗಿತ್ತು. ಊರು, ಜನ, ಹಾಸ್ಟೆಲ್ ಜೀವನ, ವಿದ್ಯಾಭ್ಯಾಸ ಕ್ರಮ, ಮಣಿಪಾಲದ ಬಿರುಬಿಸಿಲು ಎಲ್ಲವೂ ಹೊಸತು. ಅಷ್ಟರಲ್ಲಿ ಒಂದು ಭಾನುವಾರ ಓದಲೆಂದು ಲೈಬ್ರರಿಯಲ್ಲಿ ಸೇರಿದ್ದ ಸಹಪಾಠಿಗಳ ಹರಟೆ ಈ ದಿಕ್ಕಿಗೆ ಸಾಗಿತ್ತು. ಅದು ಶುರುವಾಗಲು ಕಾರಣವಿತ್ತು. ಮೊದಲ ಮತ್ತು ಎರಡನೇ ವರ್ಷದಲ್ಲಿ ಬರೀ ಥಿಯರಿ ಮತ್ತು ಪ್ರಯೋಗಾ ಲಯಗಳಲ್ಲಿ ತರಗತಿಗಳು ನಡೆಯುವುದರಿಂದ ಇಂಗ್ಲೀಷ್ ಗೊತ್ತಿದ್ದರೆ ಸಾಕು.
ಆದರೆ ಮೂರನೇ ವರ್ಷದಿಂದ ರೋಗಿಗಳನ್ನು ಪರಿಶೀಲನೆ ಮಾಡಬೇಕು. ಹಾಗಾಗಿ ಸ್ಥಳೀಯ ಭಾಷೆ ಕನ್ನಡ ಮತ್ತು ಗಡಿಭಾಗದ ಜನರು ಬರುವುದರಿಂದ ಸ್ವಲ್ಪವಾದರೂ ಮಲಯಾಳಂ ಕಲಿಯಬೇಕು ಎಂದು ಯಾರೋ ಸೀನಿಯರ್ ಹೇಳಿದ್ದರು. ಅದಕ್ಕೆ ಮಲಯಾಳಂ ಅಂದರೆ ಬಾಯಿಯಲ್ಲಿ ಕಲ್ಲಿಟ್ಟುಕೊಂಡು ಮಾತನಾಡಿದ ಹಾಗೆ.
ಕನ್ನಡವಂತೂ ಕೇಳಲೂ – ಕಲಿಯಲೂ ಕಷ್ಟ ; ಅದಕ್ಕೆ ಕಲಿಯಲು – ಮಾತನಾಡಲು ಇಷ್ಟವಿಲ್ಲ ಎಂಬುದು ಹಲವರ ಅಭಿಪ್ರಾಯ. ನೂರು ಜನರಿದ್ದ ತರಗತಿಯಲ್ಲಿ ಕನ್ನಡದವರ ಸಂಖ್ಯೆ ಕೇವಲ ಹತ್ತು. ಸುಮ್ಮನೇ ಶುರುವಾದ ಮಾತು ಜೋರಾ ಗುತ್ತಾ, ಕನ್ನಡ ಎಂದರೆ ಕಡಿಮೆ ಎನ್ನುವ ಧಾಟಿಯಲ್ಲಿ ಸಾಗಿತ್ತು. ಇದ್ದ ಬೆರಳೆಣಿಕೆಯ ನಾವು ಪ್ರತಿಭಟನೆ ವ್ಯಕ್ತಪಡಿಸಿದರೂ ಉಳಿದವರ ಆರ್ಭಟದಲ್ಲಿ ನಮ್ಮ ದನಿ ಕೇಳಲೇ ಇಲ್ಲ.
ಅಸಮಾಧಾನದಿಂದಲೇ ನಾವು ಅವರನ್ನು ಬಿಟ್ಟು ಹಾಸ್ಟೆಲ್ಲಿಗೆ ಬಂದಿದ್ದೆವು. ಮನಸ್ಸಿಗೆ ಬಹಳ ಬೇಸರವಾಗಿತ್ತು. ಆದರೆ ಏನು
ಮಾಡುವುದು ಗೊತ್ತಾಗಿರಲಿಲ್ಲ. ಹೇಗೋ ಈ ವಿಷಯ ನಮ್ಮ ಹಾಸ್ಟೆಲ್ಲಿನಲ್ಲಿ ಸುದ್ದಿಯಾಗಿ ಮೆಸ್, ಕ್ಯಾಂಟೀನಿಗೂ ತಲುಪಿತು. ಮರುದಿನ ಮೆಸ್, ಕ್ಯಾಂಟೀನಿಗೆ ಹೋದರೆ ಎಲ್ಲರೂ ಕನ್ನಡದಲ್ಲೇ ಮಾತುಕತೆ. ಮೊದಲೆಲ್ಲಾ ಅಲ್ಲಿದ್ದ ಸಿಬ್ಬಂದಿ ಹಿಂದಿ – ಇಂಗ್ಲೀಷಿನಲ್ಲಿ ಉತ್ತರಿಸುತ್ತಿದ್ದರು.
ಈ ಗಲಾಟೆ ವಿಷಯ ತಿಳಿದ ನಂತರ ತಮಗೆ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆ ಬರುವುದಿಲ್ಲ ಎಂದು ಬಿಟ್ಟರು. ಏನು ಬೇಕಿದ್ದರು ಕನ್ನಡದಲ್ಲೇ ಕೇಳುವುದು ಕಡ್ಡಾಯವಾಯಿತು. ಹಾಗೆಯೇ ಅಲ್ಲಲ್ಲಿ ಇಂಗ್ಲೀಷಿನಲ್ಲಿ ಕನ್ನಡ ಶಬ್ದಗಳನ್ನು ಬರೆದು ಅಂಟಿಸಿದರು. ಅದನ್ನು ಓದಿ ಮಾತನಾಡಿದರೆ ಮಾತ್ರ ತಿಂಡಿ – ಊಟ ಉಳಿದೆಲ್ಲಾ ಕೆಲಸ. ಒಂದೆರಡು ದಿನ ವಿದ್ಯಾರ್ಥಿಗಳು ಸುಮ್ಮನಿದ್ದರು. ಕಡೆಗೆ ಸಿಟ್ಟು ಬಂದು ಹಾಸ್ಟೆಲ್ ಮತ್ತು ಮೆಸ್ ಸ್ಟುಡೆಂಟ್ ಸೆಕ್ರೆಟರಿಗೆ ದೂರು ನೀಡಿದರು, ತಮ್ಮ ಕಷ್ಟ ತೋಡಿಕೊಂಡರು. ಸೆಕ್ರೆಟರಿಗಳು ತೆಲುಗು ಮತ್ತು ತಮಿಳು ಆಗಿದ್ದರಿಂದ ತಮಗೆ ಬೆಂಬಲ ಸಿಗುತ್ತದೆ ಎಂಬ ಆಶಯ ಎಲ್ಲರದ್ದು. ಅವರೂ ಇವರ ಮಾತನ್ನು ಕೇಳಿ ತಲೆ ಆಡಿಸಿದರು.
ಎಲ್ಲಾ ಹೊಸ ವಿದ್ಯಾರ್ಥಿಗಳ ಮೀಟಿಂಗ್ ಕರೆಯಲಾಯಿತು. ಬಂದು ಇನ್ನೂ ತಿಂಗಳಾಗಿಲ್ಲ, ಆಗಲೇ ಹೊಸ ಬ್ಯಾಚ್ ಸಾಕಷ್ಟು ಹೆಸರು ಮಾಡಿದೆ. ಆರಂಭದಲ್ಲೇ ಹೀಗಾಗಿದ್ದು ಒಳ್ಳೆಯದೇ ಆಯಿತು. ಕೆಲವು ವಿಷಯ ಸ್ಪಷ್ಟವಾಗಿರಲಿ… ತೆಲುಗು, ತಮಿಳು, ಬಂಗಾಲಿ, ಹಿಂದಿ ಎಲ್ಲವೂ ಅತ್ಯುತ್ತಮ ಭಾಷೆಗಳು. ಅವರವರ ಮಾತೃಭಾಷೆ ಅವರವರಿಗೆ ಶ್ರೇಷ್ಠ. ಇನ್ನು ಕನ್ನಡದ ವಿಷಯಕ್ಕೆ ಬರುವುದಾದರೆ ದೇಶ ವಿದೇಶಗಳಿಂದ ಕರ್ನಾಟಕಕ್ಕೆ ಬಂದಿದ್ದೀರಿ. ಏಕೆ? ಕಲಿಯಲು!
ಅದು ಬರೀ ಪುಸ್ತಕದ ಓದಲ್ಲ, ಇಲ್ಲಿನ ಭಾಷೆ, ಸಂಸ್ಕೃತಿ ಎಲ್ಲವನ್ನೂ ಕಲಿಯಿರಿ. ಐದು ವರ್ಷ ಇಲ್ಲಿರುತ್ತೀರಿ. ಇಲ್ಲಿನ ಶಿಕ್ಷಣ ಬೇಕು, ಜ್ಞಾನ ಬೇಕು, ಅನ್ನ ಬೇಕು, ನೀರು ಬೇಕು….ಭಾಷೆ ಬೇಡವೇ? ಕನ್ನಡ ಅಂತಲ್ಲ, ಯಾವ ಜಾಗದಲ್ಲಿರುತ್ತೀರೋ ಅಲ್ಲಿನ ಭಾಷೆ ದೈನಂದಿನ ವ್ಯವಹಾರ ಮಾಡುವಷ್ಟಾದರೂ ಕಲಿಯುವುದು ಕಡ್ಡಾಯ. ನೀವು ಹೊಸಬರು, ಇನ್ನೆರಡು ತಿಂಗಳಲ್ಲಿ ಕನ್ನಡ ಕಲಿಯಲೇಬೇಕು. ಅದಕ್ಕಾಗಿ ಕನ್ನಡ ತರಗತಿಗಳು ಇವೆ. ಸಂಜೆ ಅಲ್ಲಿಲ್ಲಿ ಸುತ್ತುವ ಬದಲು ಅಲ್ಲಿಗೆ ಹೋಗಿ ಕನ್ನಡ ಕಲಿಯಿರಿ.
ಕನ್ನಡ ಬರುವವರು ಮತ್ತಾವುದಾದರೂ ಭಾಷೆ ಕಲಿಯಿರಿ. ಯಾವ ಭಾಷೆಗೂ ಅಗೌರವ ತೋರಬಾರದು, ಬೇರೆಯವರು ತೋರಿದರೂ ಪ್ರತಿಭಟಿಸಲೇಬೇಕು. ಈ ವಿಷಯ ಇಲ್ಲಿಗೆ ನಿಲ್ಲಲಿ ಎಂದುಬಿಟ್ಟರು.
ಹಾಗೇ ನಮ್ಮತ್ತ ತಿರುಗಿ ಬರೀ ಬೇಸರ ಮಾಡಿಕೊಂಡು ಪ್ರಯೋಜನವಿಲ್ಲ. ನಿಮ್ಮ ಭಾಷೆ ಬಗ್ಗೆ ಅಪಮಾನ ಮಾಡಿದರೆ ನಿಮ್ಮ ತಾಯಿ ಬಗ್ಗೆ ಅಂದಂತೆ. ಎಲ್ಲರೂ ಸೇರಿ ಅದನ್ನು ವಿರೋಧಿಸಬೇಕು, ಗಲಾಟೆ ಮಾಡಬೇಕು. ಸುಮ್ಮನಿದ್ದರೆ ನೀವೇ ಎಲ್ಲಾ ಭಾಷೆ ಕಲಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಒಟ್ಟಿನಲ್ಲಿ ನಮ್ಮ ಬ್ಯಾಚಿನ ಎಲ್ಲರಿಗೂ ಚೆನ್ನಾಗಿ ಬಿಸಿ ಮುಟ್ಟಿತ್ತು. ಆಮೇಲೆ ಅಂಥ ಗಲಾಟೆ ಎಂದೂ ಆಗಲಿಲ್ಲ. ಕನ್ನಡ ಕಲಿಯಲು ಅವರಿಗೆ ನಾವು ಸಹಾಯ ಮಾಡಿದರೆ ನಮ್ಮ ಹಿಂದಿಯನ್ನು ಅವರು ತಿದ್ದಿದರು. ಮೂರನೇ ವರ್ಷಕ್ಕೆ ಬರುವಾಗ ನಾನಾ ಉಚ್ಚಾರಣೆಯ ಕನ್ನಡ ಕ್ಲಿನಿಕ್‌ನ ತುಂಬೆಲ್ಲಾ ಕೇಳಿ ಬರುತ್ತಿತ್ತು.( ಕೆಲವು ಬಾರಿ ಸಹಪಾಠಿಗಳ ಕನ್ನಡವನ್ನು ನಮ್ಮ ಕನ್ನಡಕ್ಕೆ ಭಾಷಾಂತರಿಸುವ ಹೊಣೆ ನನ್ನದಾಗುತ್ತಿತ್ತು !)