Sunday, 15th December 2024

ಕಾಣೆಯಾಗುತ್ತಿರುವ ಕಥಾ ಕೀರ್ತನ ಕಲೆ

ಅಭಿವ್ಯಕ್ತಿ

ಕೆ.ರಾಮಮೂರ್ತಿ ರಾವ್

ಕಥಾ ಕೀರ್ತನ ಕಲೆಯ ಬಗ್ಗೆ ಎಲ್ಲಾ ವರ್ಗದ ಜನರಿಗೂ ತುಂಬಾ ಅಭಿಮಾನ, ಬಲವು ಇತ್ತು. ಸಂತ ಭದ್ರಗಿರಿ ಅಚ್ಯುತ ದಾಸರು, ಗುರುರಾಜುಲು ನಾಯ್ಡು (ಅರುಣ ಕುಮಾರ ) ಅವರ ಹರಿಕಥೆಗಳಿಗೆ ಜನ ಜಮಾಯಿಸುತ್ತಿದ್ದರು. ಈಗ ಅದು ಇತಿಹಾಸ ಮಾತ್ರ. ಅವರು ಇಂದು ನಮ್ಮ ಮಧ್ಯೆ ಇಲ್ಲ. ಆದರೂ ಅವರ ಸಾಕಷ್ಟು ಸಂಖ್ಯೆಯ ಧ್ವನಿ ಅಡಕ ಮುದ್ರಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಥಾ ಕೀರ್ತನ ಕಲೆಯ ಬಗ್ಗೆ ಎಲ್ಲಾ ವರ್ಗದ ಜನರಿಗೂ ತುಂಬಾ ಅಭಿಮಾನ, ಬಲವು ಇತ್ತು. ಈಗ ಅದು ಇತಿಹಾಸ ಮಾತ್ರ.

ಕಥೆ ಹೇಳುವ, ಕೇಳುವ ಕಲೆ ಮನುಕುಲದ ಇತಿಹಾಸದಷ್ಟೇ ಪ್ರಾಚೀನವಾದದ್ದು, ಕಥೆ ಕೇಳುತ್ತ ಕೇಳುತ್ತಲೇ ಮಗು ತಾಯಿ, ಅಜ್ಜಿಯರ ಮಡಿಲಲ್ಲಿ ಬೆಳೆಯುತ್ತದೆ. ಊಟ ಮಾಡುವಾಗ, ನಿದ್ರಾದೇವಿಯ ಮಡಿಲಿಗೆ ಹೋಗುವಾಗ ಹೀಗೆ ಯಾವಾಗಲೂ ಮಗುವಿಗೆ ಕಥೆ ಹೇಳುತ್ತಿದ್ದರೆ ತಾಯಿಗೆ ಆ ಕೆಲಸಗಳು ಸುಲಭವಾಗುತ್ತವೆ.

ಹಾಗೆಯೇ ಮಗುವು ಬೆಳೆಯುತ್ತಿದ್ದಂತೆ ಕಥೆ ಕೇಳುವ ಆಸಕ್ತಿ ಅದಕ್ಕೆ ಹೆಚ್ಚುತ್ತಿರುತ್ತದೆಯೇ ವಿನಃ ನಶಿಸುವುದಿಲ್ಲ. ತುಂಬಾ
ರಂಜನೆಯೊಂದಿಗೆ ವಿಚಾರಪ್ರದವಾಗಿದ್ದರೆ ದೊಡ್ಡವರಿಗೂ ಕಥೆ ಕೇಳಲು ಇಷ್ಟವಾಗುತ್ತದೆ. ಹೀಗಾಗಿ ಕಥಾ ಕೀರ್ತನೆ ಅಥವಾ ಹರಿಕಥೆ ಎಂಬ ಕಲಾ ಪ್ರಕಾರವೊಂದು ನಮ್ಮಲ್ಲಿ ತಾನೇ ತಾನಾಗಿ ಉಗಮವಾಗಿ ಒಂದು ಕಾಲ ಘಟ್ಟದಲ್ಲಿ ಬಹಳ ಜನಪ್ರಿಯ ವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಒಂದು ರೀತಿ ಸಮಾಜದಲ್ಲಿ ಕಳೆದು ಹೋಗುತ್ತಿರುವುದು ದುಃಖದ ಸಂಗತಿ.

ಈಗ್ಗೆ ಸುಮಾರು 20-30 ವರ್ಷಗಳ ಹಿಂದೆ ಹರಿಕಥಾ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿದ್ದವು. ಭದ್ರಗಿರಿ ಕೇಶವ ದಾಸರು, ಭದ್ರಗಿರಿ ಅಚ್ಯುತ ದಾಸರು, ಹಂಡೆ ವೇದವ್ಯಾಸರು, ವೇಣುಗೋಪಾಲ ದಾಸರು, ಕೃಷ್ಣ ಭಾಗವತರು, ಮೈಸೂರಿನ ಲಕ್ಷ್ಮೀಪತಿ ಸಹೋದರರು, ಕೊಣನೂರು ಸೀತಾರಾಮಶಾಸಿಗಳು, ಪದ್ಮಾವತಿ ಅಮ್ಮ, ವಸಂತ ಲಕ್ಷ್ಮಿ ಮುಂತಾದ ಇನ್ನೂ ಹಲವರ ಹರಿಕಥೆಗಳೆಂದರೆ ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದರು.

ನನಗೆ ನೆನಪಿರುವಂತೆ ನಾನು ಮೈಸೂರಿನಲ್ಲಿ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಹರಿಕಥೆ ಕೇಳುವುದೇ ನನಗೆ ಒಳ್ಳೆಯ ಹವ್ಯಾಸವಾಗಿತ್ತು. ಅದೊಂದು ವಿಚಾರಪೂರ್ಣ ಜತೆಗೆ ರಂಜನೀಯ ಕಾರ್ಯಕ್ರಮ ಎನಿಸಿತ್ತು. ಇದರಲ್ಲಿ ವಿಲಾಸ ಮತ್ತು
ವಿಕಾಸದ ಎರಡೂ ಮುಖ ನಮಗೆ ಕಾಣುತ್ತಿತ್ತು. ಏಕೆಂದರೆ, ಬೋಧಪ್ರದ ಕಥೆಗಳ ಹೂರಣದೊಂದಿಗೆ ರಂಜನೆಯ ತೋರಣವೂ ಅದರಲ್ಲಿತ್ತು. ವಿವಿಧ ಬಡಾವಣೆಗಳ ಪೆಂಡಾಲುಗಳಲ್ಲಿ ನಡೆಯುವ ಗಣೇಶೋತ್ಸವಗಳಲ್ಲಿ, ಶ್ರಾವಣ ಮಾಸದಲ್ಲಿ ಏರ್ಪಾಡಾಗು ತ್ತಿದ್ದ ಶನಿದೇವರ ಉತ್ಸವವಿರಲಿ ಅಥವಾ ಇನ್ನಾವುದೇ ಹಬ್ಬ ಹರಿದಿನಗಳಂಥ ವಿಶೇಷ ಸಂದರ್ಭಗಳಲ್ಲಿ ಹರಿಕಥೆ ವ್ಯವಸ್ಥೆ ಆಗಿರುತ್ತಿತ್ತು. ಆಗ ರಸ್ತೆಗಳಲ್ಲಿ ಹಾಕಿದ ಪೆಂಡಾಲುಗಳ ಮುಂದೆ ರಸ್ತೆಯ ಕರವಸ ಹಾಕಿ ಗಂಟೆ ಕಟ್ಟಲೆ ಕುಳಿತು ಹರಿಕಥೆ ಕೇಳಿದ
ನೆನಪು ಇನ್ನೂ ಮಾಸಿಲ್ಲ.

ಇಲ್ಲಿ ಕಥೆ, ಹರಿದಾಸರ ಸಂಗೀತ, ಅಭಿನಯ, ಉಪಕಥೆಗಳನ್ನು ಕೇಳುತ್ತಿದ್ದರೆ ಸಮಯದ ಪರಿವೇ ಇರುತ್ತಿರಲಿಲ್ಲ. ಬಹುಷಃ ಅದಕ್ಕಾಗಿಯೇ ಹರಿಕಥೆಗೆ ಕಥಾ ಕಾಲಕ್ಷೇಪ ಎಂದೂ ಕರೆಯುತ್ತಿದ್ದರು. ಈಗ ಅಂಥ ಕಲೆ ಕಳೆದು ಹೋಗಿದೆ ಎಂದರೆ ತಪ್ಪಾ ಗಲಿಕ್ಕಿಲ್ಲ. ಹರಿಕಥೆ ಒಂದು ಸರ್ವಾಂಗ ಸುಂದರವಾದ ಸಂಕೀರ್ಣ ಕಲೆ. ಹರಿದಾಸನಾಗಬೇಕಾದವನಿಗೆ ಅತ್ಯುತ್ತಮ ಸಂಗೀತ ಜ್ಞಾನ, ವಾಗ್ಮಿತೆ, ಅಭಿನಯ ಸಾಮರ್ಥ್ಯ, ವೇದ ಉಪನಿಷತ್ ಮತ್ತು ಪುರಾಣ ಕಥೆಗಳ ಜ್ಞಾನ, ನೀತಿ ಕಥೆಗಳ ಅರಿವು, ಭಾಷಾ ಶುದ್ದಿ, ಮಾತು ಕಥೆಯ ಮೂಲಕ ಜನರನ್ನು ಸೆಳೆಯಬಲ್ಲ ಕೌಶಲ್ಯ, ಉತ್ತಮವಾದ ಶಾರೀರ, ಪರಿಶುದ್ಧ ಗಾಯನಕ್ರಮ ಮುಂತಾದ ಗುಣಗಳೆ ಅತ್ಯಗತ್ಯವಾಗಿ ಬೇಕು. ಆದರೆ ಇಂದು ಅಂಥ ಸಮರ್ಥ ಹರಿಕಥೆ ದಾಸರು ಬೆರಳೆಣಿಕೆಯಷ್ಟು ಮಂದಿ ಮಾತ್ರ
ಸಿಗ ಬಹುದು.

ಹಿಂದೆ ಯಾವುದೇ ಪ್ರಚಾರ ಮಾಧ್ಯಮಗಳು ಇಲ್ಲದಾಗ ನಮ್ಮ ಹರಿಕಥಾ ದಾಸರು ಧರ್ಮ, ನೀತಿ, ಆದರ್ಶ, ನಡತೆ, ಸಂಸ್ಕೃತಿ, ಜೀವನ ಮಾರ್ಗಗಳನ್ನು ತಮ್ಮ ಹರಿಕಥೆಯ ಮೂಲಕ ಮನ ಮುಟ್ಟುವಂತೆ ಬೋಧಿಸುತ್ತಿದ್ದರು. ಹರಿಕಥೆಗಳು ಕಾಂತಾಸಮ್ಮಿತಿ ಯಂತೆ ಅಂದರೆ ಮಡದಿಯ ಮಾತಿನಂತೆ ಒಲಿಸಿಕೊಳ್ಳುವ ಶೈಲಿಯಲ್ಲಿ ಕೇಳುಗನಿಗೆ ಸದಾಚಾರವನ್ನು ಬೋಧಿಸುತ್ತಿತ್ತು. ಸ್ನೇಹಿತನ ಮಾತಿನಂತೆ ಹಿತವಾದ ಮಾತುಗಳಿಂದ ಅವನನ್ನು ಆತ್ಮಶೋಧನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿತ್ತು.

ಹೀಗೆ ಕಥಾಕೀರ್ತನ ಕಲೆ, ಸಮಾಜದಲ್ಲಿ ಮಿತ್ರ, ಮಾರ್ಗದರ್ಶಕ ವಿಮರ್ಶಕ ಈ ಮೂರೂ ಆಗಿತ್ತು. ಆದ್ದರಿಂದ ಒಬ್ಬ ಕೀರ್ತನಕಾರ
ಹಲವು ಕಲೆಗಳಲ್ಲಿ ಪರಿಣಿತನಾಗಿ ಗಾಯಕ, ನಟ, ವಾದಕ, ವಿಧೂಷಕ, ಆಚಾರ್ಯ, ಶಾಸ್ತ್ರಜ್ಞ, ವಾಖ್ಯಾನಕಾರ ಇತ್ಯಾದಿ ಎಲ್ಲಾ ಪಾತ್ರಗಳನ್ನು ಧರಿಸಿ ಕಥಾ ಕೀರ್ತನೆಯ ಕರ್ತವ್ಯಗಳನ್ನು ತನ್ನ ಪ್ರತಿಭೆಯೊಂದಿಗೆ ನಿರ್ವಹಿಸಬೇಕಾಗುತ್ತಿತ್ತು. ಹೀಗಾಗಿ ಕಥಾ ಕೀರ್ತನಕಾರನು ಒಂದು ಸಂಚಾರಿ ವಿಶ್ವವಿದ್ಯಾನಿಲಯವಿದ್ದಂತೆ ಪಾತ್ರ ನಿರ್ವಹಿಸುತ್ತಿದ್ದ.

ಆದ್ದರಿಂದ ನಡೆದಾಡುವ ಜ್ಞಾನಕೋಶವೇ ಹರಿಕಥೆ – ಎಂಬಂತಾಗಿತ್ತು. ಭಾರತದ ಹರಿಕಥಾ ಕಲೆಯ ಬಗ್ಗೆ ಸ್ವಾಮಿ ವಿವೇಕಾ ನಂದರು ಹೀಗೆ ಹೇಳಿದ್ದಾರೆ – ಭಾರತದಲ್ಲೂ ಅಕ್ಷರ ಜ್ಞಾನ ಇಲ್ಲದವರನ್ನು ನೋಡಿದ್ದೇನೆ. ಆದರೆ ಅವರಲ್ಲಿ ಅಕ್ಷರ ಜ್ಞಾನ
ಇರದಿದ್ದರೂ ಅವರ ಹೃದಯವಂತಿಕೆ ಸಾವಿರ ಪಾಲು ಮೇಲ್ಮಟ್ಟದಲ್ಲಿದೆ. ಇದಕ್ಕೆ ನಮ್ಮ ಕೀರ್ತನನಕಾರರು, ಹರಿದಾಸರೇ ಕಾರಣ ಎಂದಿದ್ದಾರೆ. ಕಥಾ ಕೀರ್ತನ ಕಲೆಯ ಬಗ್ಗೆ ಎಲ್ಲಾ ವರ್ಗದ ಜನರಿಗೂ ತುಂಬಾ ಅಭಿಮಾನ, ಬಲವು ಇತ್ತು.

ಸಂತ ಭದ್ರಗಿರಿ ಅಚ್ಚುತ ದಾಸ್, ಗುರುರಾಜುಲು ನಾಯ್ಡು (ಅರುಣ ಕುಮಾರ ) ಅವರ ಹರಿಕಥೆಗಳಿಗೆ ಜನ ಜಮಾಯಿಸುತ್ತಿದ್ದರು. ಈಗ ಅದು ಇತಿಹಾಸ ಮಾತ್ರ. ಅವರು ಇಂದು ನಮ್ಮ ಮಧ್ಯೆ ಇಲ್ಲ. ಆದರೂ ಅವರ ಸಾಕಷ್ಟು ಸಂಖ್ಯೆಯ ಧ್ವನಿ ಅಡಕ ಮುದ್ರಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಂತ ಅಚ್ಯುತ ದಾಸರ – ಕೃಷ್ಣ ಸಂಧಾನ, ಕೊಲ್ಲೂರು ಕ್ಷೇತ್ರ, ಶ್ರೀನಿವಾಸ ಕಲ್ಯಾಣ,
ಉಡುಪಿ ಕ್ಷೇತ್ರ, ಸುದಾಮ ಚರಿತೆ, ಭಕ್ತ ಪುರಂದರ ದಾಸ ಮುಂತಾದ ಕಥೆಗಳು; ಹಾಗೆಯೇ ಗುರುರಾಜುಲು ನಾಯ್ಡು ಅವರ ಕೃಷ್ಣಾವತಾರ, ನಳದಮಯಂತಿ, ದಾನ ಶೂರ ಕರ್ಣ, ಉತ್ತರನ ಪೌರುಷ ಮಾಯಾ ಬಜಾರ್, ಸತಿ ಸಕ್ಕೂಬಾಯಿ, ಸತ್ಯವಾನ ಸಾವಿತ್ರಿ ಮುಂತಾದ ಹರಿಕಥೆಗಳು ಯುಟ್ಯೂಬಿನಲ್ಲೂ ಲಭ್ಯವಿದೆ.

ಕರೋನಾ ಲಾಕ್ ಡೌನ್ ಇಂಥ ಸಮಯದ ಕಾಲಕ್ಷೇಪಕ್ಕೆ ಈ ಕೇಳ್ಮೆ ಉತ್ತಮ ಸಂಗಾತಿ ಆಗಬಲ್ಲುದು. ಇಲ್ಲಿನ ಅವರ ಅದ್ಭುತ
ಗಾಯನ, ವಾಚಾಳಿತನ, ಆಳವಾದ ಜ್ಞಾನ, ವಿದ್ವತ್ ಉಪಕಥೆಗಳ ಪೋಷಣೆಯೊಂದಿಗೆ ರಂಜಿಸುವ ಶೈಲಿ ಎಲ್ಲರನ್ನು ತಲೆ ದೂಗಿಸುತ್ತದೆ. ಅವರು ಕಥೆ ಹೇಳುತ್ತಿದ್ದರೆ ಕೇಳುಗರಿಗೆ ಸಮಯ ಸವೆಯುವುದೇ ತಿಳಿಯುವುದಿಲ್ಲ. ಕಥಾಕೀರ್ತನಾ ಶ್ರವಣದಿಂದ ಪ್ರಯೋಜನಗಳು ಹಲವಾರು. ಸಂತರು, ಶರಣರು, ಸಾಧಕರ ಕಥೆ ಅಥವಾ ಪುರಾಣದ ಕಥೆಗಳನ್ನು ಕೇಳುವುದರಿಂದ ಪುಣ್ಯ ಲಭಿಸುತ್ತದೆ ಎಂಬ ಒಂದು ನಂಬಿಕೆ ಜತೆಗೆ ಇದರಿಂದ ಜನರ ಬೌದ್ಧಿಕ ವಿಕಾಸ ಮತ್ತು ಆತ್ಮೊ ನ್ನತಿ ಸಹಜವಾಗಿಯೇ ಆಗುತ್ತದೆ.

ರಾಜಾ ಹರಿಶ್ವಂದ್ರನ ಕಥೆ ನಳ ಮಹಾರಾಜನ ಕಥೆ, ಪಾಂಡವರ ವನವಾಸ, ರಾಜಾವಿಕ್ರಮ, ಸುಧಾಮ ಚರಿತ್ರೆ ಮುಂತಾದ ಕಥೆಗಳನ್ನು ಕೇಳುವಾಗ ಎಂಥೆಂಥ ರಾಜಮಹಾರಾಜರೇ ಕಷ್ಟ ಪಟ್ಟರಂತೆ ಇನ್ನು ನಮ್ಮ ಪಾಡೇನು ಎಂದು ಕಷ್ಟದಲ್ಲಿರುವವನ ನೊಂದ ಮನಸ್ಸಿಗೆ ಕೊಂಚ ಸಾಂತ್ವನ ಲಭಿಸುತ್ತದೆ.

ಹರಿಕಥೆಯು ಧರ್ಮದಲ್ಲಿ ಪ್ರವೃತ್ತರಾದವರಿಗೆ ಧರ್ಮವನ್ನು, ಪುಕ್ಕಲು ಮಂದಿಗೆ ದಿಟ್ಟತನವನ್ನು ‘ಶೂರರಿಗೆ ಉತ್ಸಾಹವನ್ನು, ಪಾಮರರಿಗೆ ಜ್ಞಾನವನ್ನೂ, ವಿದ್ವಾಂಸರಿಗೆ ವಿಚಾರ ವಿಮರ್ಶೆಯನ್ನು ‘ದುಃಖಿಗಳಿಗೆ ಧೈರ್ಯ, ಸಮಾಧಾನಗಳನ್ನು ತುಂಬಿಸಬಲ್ಲ ಒಂದು ಮಹತ್ವಪೂರ್ಣ ಕಲೆ, ಇದನ್ನು ನಾವು ಇಂದು ಮರೆಯುತ್ತಿರುವುದು ಸರಿಯೇ? ಇದರ ಉಳಿವಿಗೆ ಬೆಳವಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?