Wednesday, 11th December 2024

ಸಾಧನೆ ಮಾಡಲು ಸ್ಫೂರ್ತಿ ಇವರು !

ಸುರೇಶ ಗುದಗನವರ

ಬದುಕಿನಲ್ಲಿನ ಕಷ್ಟಗಳು ಎದುರಾದಾಗ ಸ್ಫೂರ್ತಿ ಇವರು! ಕುಂದುವುದು ಸಹಜ. ಆದರೆ ಅನಿರೀಕ್ಷಿತ ಘಟನೆಯಿಂದ ಕುಗ್ಗಬಾರದು. ಮತ್ತೆ ಸಾಧನೆ ಮಾಡಬೇಕು. ಅಂತಹವರಿಗ ಸ್ಫೂರ್ತಿಯಾಗಿ ನಿಲ್ಲುವವರು ಮಾಳವಿಕಾ ಅಯ್ಯರ್. 

ಕೆಲವರ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ನೋವಿನ ಕಂದಕಕ್ಕೆ ತಳ್ಳಿ ಬಿಡುತ್ತವೆ. ಆದರೆ ಧೈರ್ಯವೊಂದಿದ್ದರೆ
ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸಬಹುದು. ಎರಡೂ ಕೈಗಳನ್ನು ಕಳೆದು ಕೊಂಡರೂ, ಬದುಕನ್ನು ಎದುರಿಸಿ, ಪಿಹೆಚ್.ಡಿ. ಮಾಡಿದ ಅಪರೂಪದ ಛಲಗಾತಿಯೇ ತಮಿಳುನಾಡಿನ ಡಾ. ಮಾಳವಿಕಾ ಅಯ್ಯರ್.

ತಮಿಳುನಾಡಿನ ಕುಂಭಕೋಣಂನವರಾದ ಮಾಳವಿಕಾ ಫೆಬ್ರವರಿ 18, 1989ರಂದು ಜನಿಸಿದರು. ಅವರ ತಂದೆ ಬಿ.ಕೃಷ್ಣನ್, ತಾಯಿ ಹೇಮಾ ಕೃಷ್ಣನ್. ತಂದೆಯವರು ಜಲಸಂಪನ್ಮೂಲ ಇಲಾಖೆಯಲ್ಲಿ ಎಂಜನಿಯರ್. ಅವರು ಮೇಲಿಂದ ಮೇಲೆ ವರ್ಗಾವಣೆಯಾಗುತ್ತಿದ್ದರು. ಹೀಗಾಗಿ ಮಾಳವಿಕಾ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ರಾಜಸ್ಥಾನದ ಬಿಕಾನೇರನಲ್ಲಿ ವಾಸಿಸುತ್ತಿದ್ದರು. ಮಾಳವಿಕಾ ಬಾಲ್ಯದಲ್ಲಿ ಚೂಟಿಯಾಗಿದ್ದು, ಸ್ನೇಹಿತರ ಜತೆ ಆಡವಾಡಿಕೊಂಡು ಸಂತಸದಿಂದ ಇದ್ದು.

2002ರ ಬೇಸಿಗೆಯ ರಜಾದಿನಗಳಲ್ಲಿ ಭಾನುವಾರ ಮಧ್ಯಾಹ್ನ ಅವಳು ತನ್ನ ಜೀನ್ಸ್ ಪ್ಯಾಂಟಿನ ಜೇಬು ಹರಿದು ಹೋಗಿದ್ದರಿಂದ, ಅದನ್ನು ಫೆವಿಕಾಲ್ ದಿಂದ ಪ್ಯಾಚ್ ಮಾಡಲು ಹೊರಗೆ ಬಂದು ಗ್ಯಾರೇಜ್‌ನಲ್ಲಿಯ ವಸ್ತುವೊಂದನ್ನು ತೆಗೆದುಕೊಂಡು ತನ್ನ ಕೋಣೆಗೆ ಬಂದು ಪ್ಯಾಚ್ ಅಂಟಿಸಲು ಬಲವಾಗಿ ಹೊಡೆಯುತ್ತಾಳೆ. ಆಗ ಅದು ಸ್ಫೋಟವಾಗುತ್ತದೆ. ಮಾಳವಿಕಾಳಿಗೆ ಅದು ಗ್ರೆನೇಡ್ ಎಂದು ಗೊತ್ತೇ ಇರಲಿಲ್ಲ. ಹತ್ತಿರದ ಮದ್ದುಗುಂಡು ಡಿಪೋ ತಿಂಗಳ ಹಿಂದೆ ಸ್ಫೋಟಗೊಂಡಿತ್ತು. ಆಗ ಹಾರಿ ಬಂದ ಗ್ರೆನೇಡ್ ಅಲ್ಲಿ ಬಿದ್ದಿತ್ತು. ಈಗ ಇವರ ಹತ್ತಿರ ಸೋಟಗೊಂಡಿದೆ.

ಅವಳಿಗೆ ತೀವ್ರವಾದ ಗಾಯವಾಗಿತ್ತು. ಕೂಡಲೇ ಮಾಳವಿಕಾರನ್ನು ಆಸ್ಪತ್ರೆಗೆ ಸಾಗಿಸಲಾಗಿ, ವೈದ್ಯರು ಬಾಲಕಿಯ ಎರಡೂ ಕೈಗಳ ಅಂಗೈಗಳನ್ನು ಕತ್ತರಿಸಿ ಶಸ್ತ್ರ ಚಿಕಿತ್ಸೆ ಮಾಡಿದರು. ಈ ಘಟನೆಯಿಂದ ಮಾಳವಿಕಾ 18 ತಿಂಗಳು ಆಸ್ಪತ್ರೆಯಲ್ಲೇ ಕಳೆಯ ಬೇಕಾಯಿತು. ಬಾಲ್ಯದಲ್ಲೇ ತಾನೊಬ್ಬ ವೈದ್ಯೆ ಆಗಬೇಕೆಂಬ ಕನಸು ಕಂಡಿದ್ದ ಮಾಳವಿಕಾಗೆ ಸ್ಪೋಟದಿಂದ ಕೈಕಳೆದುಕೊಂಡಿದ್ದು ಭಾರೀ ಆಘಾತ ಕೊಟ್ಟಿತ್ತು. ಮಾಳವಿಕಾ 9 ನೆಯ ತರಗತಿಯಲ್ಲಿದ್ದಾಗ ಬಾಂಬ್ ಸ್ಪೋಟಗೊಂಡು, ಒಂದು ವರ್ಷದ ಶಾಲಾ ಶಿಕ್ಷಣವನ್ನು ತಪ್ಪಿಸಿಕೊಂಡಳು. ನಂತರ ಮಾಳವಿಕಾ ಖಾಸಗಿ ಅಭ್ಯರ್ಥಿಯಾಗಿ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್
ಪರೀಕ್ಷೆಗೆ ಹಾಜರಾದಳು.

ಅಲ್ಲಿ ಬರಹಗಾರನ ಸಹಾಯದೊಂದಿಗೆ ಪರೀಕ್ಷೆಯನ್ನು ಬರೆದಳು. ಅವರು 500ಕ್ಕೆ 483 ಪಡೆದು ಅಂಕಗಳನ್ನು ರ‍್ಯಾಂಕ್
ಪಡೆದುರು. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿದ್ದರು. ಅಂದಿನ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಲು ಮಾಳವಿಕಾಳಿಗೆ ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಲಾಯಿತು.

ನಂತರ ದೆಹಲಿಯ ಸೆಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಮಾಳವಿಕಾರವರು ಮದ್ರಾಸ್ ಸ್ಕೂಲ್ ಆಫ್ ಸೋಷಿಯಲ್ ವರ್ಕ್ಸ್‌ನಲ್ಲಿ ಸ್ನಾತಕೋತ್ತರ ಮುಗಿಸಿ, ಸಾಮಾಜಿಕ ಕಾರ್ಯದಲ್ಲಿ ಎಂ.ಫಿಲ್. ನ್ನು ಪ್ರಥಮ ದರ್ಜೆಯಲ್ಲಿ ಪಡೆಯುತ್ತಾರೆ. 2012ರಲ್ಲಿ ಎಂ.ಫಿಲ್. ಪ್ರಬಂಧಕ್ಕಾಗಿ ರೋಲಿಂಗ್ ಕಪ್ ಗೆದ್ದರು. ಮಾಳವಿಕಾ ಅವರು ಅಂಗವೈಕಲ್ಯದ ಬಗೆಗಿನ ವರ್ತನೆಗಳ ಪರಿಕಲ್ಪನೆಯ ಮೇಲೆ ಪಿಹೆಚ್.ಡಿ. ಕಾರ್ಯವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರು ಪ್ರಶ್ನಾವಳಿಯನ್ನು ಸಿದ್ಧಗೊಳಿಸಿ ಒಂದು ಸಾವಿರ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಮಾಡಿದರು. ಅವರು ಮದ್ರಾಸ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್‌ಗೆ ಪ್ರೌಢ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಿದರು.

ವಿಶ್ವಸಂಸ್ಥೆಯಲ್ಲಿ ಭಾಷಣ
ಅವರು ಪಿಹೆಚ್.ಡಿ. ಪಡೆದ ನಂತರ ಅವರ ಸಾಧನೆ ಜನಮೆಚ್ಚುಗೆ ಗಳಿಸಿತು. ಅವರು ಸ್ಪೂರ್ತಿದಾಯಕ ಭಾಷಣಗಳನ್ನು ನೀಡಲು ಪ್ರಾರಂಭಿಸಿದರು. 2013 ರಲ್ಲಿ ಚೆನ್ನೈನ ಟೆಡ್‌ಎಕ್ ಯುಥ್ ಸಂಸ್ಥೆ ಸಂಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮೊದಲ ಬಾರಿಗೆ ಮಾತನಾಡಿದರು. ನಂತರ ಅವರು ನ್ಯೂಯಾರ್ಕ್, ನಾರ್ವೆ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಸಿಂಗಾಪುರ್, ಕೋಜಿ ಕೋಡ್ ಮತ್ತು ವಿಶ್ವಸಂಸ್ಥೆಯ ಜಾಗತಿಕ ವೇದಿಕೆಗಳಲ್ಲಿ ಮಾತನಾಡಿ ಪ್ರೇಕ್ಷಕರಲ್ಲಿ ಸ್ಪೂರ್ತಿ ತುಂಬಿದರು.

ಮಿಚಿಗನ್ ವಿಶ್ವವಿದ್ಯಾಲಯ, ಕೇಪ್ಟೌನ ವಿಶ್ವವಿದ್ಯಾಲಯ, ಲಂಡನ್ ವಿಶ್ವವಿದ್ಯಾಲಯ, ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಸೇರಿ ದಂತೆ ಹಲವಾರು ಆನ್‌ಲೈನ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ತಮ್ಮೆಲ್ಲ ಅಂಗವೈಕಲ್ಯತೆಯನ್ನು ಬದಿಗಿಟ್ಟು ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡತೊಡಗಿದರು.

ಅಕ್ಟೋಬರ್2017ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಭಾರತದ ಆರ್ಥಿಕ ಶೃಂಗ ಸಭೆಗೆ ಅವರನ್ನು ಉಪಾ ಧ್ಯಕ್ಷರನ್ನಾಗಿ ಆಹ್ವಾನಿಸಲಾಯಿತು. ಮಾಳವಿಕಾ ಅವರು ಪಾಕ ಪ್ರವೀಣೆ ಆಗಿರುವದು ವಿಶೇಷ. ಖ್ಯಾತ ಬಾಣಸಿಗ ವಿಕಾಶ ಖನ್ನಾ ಕೂಡ ಮಾಳವಿಕಾ ಅವರ ಪಾಕಕಲೆಯನ್ನು ಮೆಚ್ಚಿಕೊಂಡಿದ್ದಾರೆ. ಅವರು ಚೆನ್ನೈನ ಎನ್.ಐ. ಎಫ್ಟಿ. ಮತ್ತು ಎಬಿಲಿಟಿ ಫೌಂಡೇಶನ್ ಆಯೋಜಿಸಿದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಶೋ ಸ್ಟಾಪರ್ ಆಗಿ ರ‍್ಯಾಂಪ್‌ನಲ್ಲಿ ನಡೆದು ಅಚ್ಚರಿ
ಮೂಡಿಸಿದ್ದಾರೆ.

ಗೌರವ
ಮಾಳವಿಕಾ ಅವರ ವಿಶೇಷ ಸಾಧನೆ ಗಮನಿಸಿ ಹಲವಾರು ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. 2018ರಲ್ಲಿ ಮಹಿಳಾ ಸಬಲೀ ಕರಣಕ್ಕೆ ಮಹೋನ್ನತ ಕೊಡುಗೆ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರವು ಮಹಿಳಾ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ನಾರಿ ಶಕ್ತಿ ಪುರಸ್ಕಾರವನ್ನು ನೀಡಿ ಗೌರವಿಸಿದೆ. ನ್ಯೂಯಾರ್ಕ್ನಲ್ಲಿ ನಡೆದ ಮೊದಲ ಮಹಿಳಾ ವಿಶ್ವ ಉದಯೋನ್ಮುಖ ನಾಯಕರ ಪ್ರಶಸ್ತಿ, ವಿಸ್ಡಮ್ ಅಂತರಾಷ್ಟ್ರೀಯ ಮ್ಯಾಗಜಿನ್‌ದಿಂದ ಅತ್ಯುತ್ತಮ ಮಾದರಿ ವಿದ್ಯಾರ್ಥಿ ಪ್ರಶಸ್ತಿ, ರೆಎಕ್ಸ್ ಕರ್ಮವೀರ್ ಚಕ್ರ ಗ್ಲೋಬಲ್ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

2020ರಲ್ಲಿ ಪ್ರಧಾನಿ ಮೋದಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆಯನ್ನು ಏಳು ಸಾಧಕರಿಗೆ ಬಿಟ್ಟು ಕೊಟ್ಟಿದ್ದು, ಅವರಲ್ಲಿ ಮಾಳವಿಕಾ ಅಯ್ಯರ್ ಕೂಡ ಒಬ್ಬರು.