Saturday, 14th December 2024

ಕ್ರಿಕೆಟ್ ಕ್ರೀಡಾಂಗಣಕ್ಕೆ ದಿಗ್ಗಜರ ಹೆಸರೇಕಿಲ್ಲ ?

ಅನಿಸಿಕೆ 

ಸಂದೀಪ್‌ ಶರ್ಮಾ

ಭಾರತದ ಕೋಟ್ಯಂತರ ಜನರ ಜೀವನಶೈಲಿಯಲ್ಲಿ ಕ್ರಿಕೆಟ್ ಹಾಸುಹೊಕ್ಕಾಗಿದೆ. ಕ್ರಿಕೆಟ್ ಎಂದ ಕೂಡಲೇ ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೂ ಅತಿಯಾಗಿ ಇಷ್ಟ ಪಡುವ ಕ್ರೀಡೆ ಇದಾಗಿದೆ. ಎರಡು ದಶಕಕ್ಕೆ ಹೋಲಿಸಿದರೆ ಈಗ ಕ್ರಿಕೆಟ್ ಆಟದ ವ್ಯಾಮೋಹ ಆಸಕ್ತರಿಗೆ ಅತಿಯಾಗಿಯೇ ಇದೆ, ಕಾರಣ ಟೆ, ಏಕದಿನ ಪಂದ್ಯಾವಳಿಯ ಪಟ್ಟಿಯಲ್ಲಿ, ಟಿ-20 ಮತ್ತು ಐಪಿಎಲ್‌ನ ಸೇರ್ಪಡೆ. ಈ ನವೀನ ಮಾದರಿಯ ಆಟದ ಸೇರ್ಪಡೆಯಿಂದ ಕ್ರಿಕೆಟ್ ಆಟವು ತನ್ನ ಪ್ರಚುರವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಪ್ರಚಾರವು ಹೆಚ್ಚಾದಂತೆ ಕ್ರೀಡಾಂಗಣದ ಅವಶ್ಯಕತೆಯು ಹೆಚ್ಚುತ್ತ ಹೋಗುತ್ತದೆ. ನಮ್ಮ ದೇಶದಲ್ಲಿ ಎಷ್ಟು ಅಂತಾರಾಷ್ಟ್ರೀಯ ಕ್ರೀಡಾಂಗಣಗಳಿಗೆ ಕ್ರಿಕೆಟಿಗರ ಹೆಸರನ್ನು ಇಡಲಾಗಿದೆ? ಒಟ್ಟು 52 ಕ್ರೀಡಾಂಗಣಗಳನ್ನು ಹೊಂದಿರುವ ನಮ್ಮ ದೇಶ ಕ್ರಿಕೆಟಿಗರ
ಹೆಸರಲ್ಲಿ ಕ್ರೀಡಾಂಗಣವಿಲ್ಲದಿರುವುದು ಆಶ್ಚರ್ಯಕರ ಹಾಗೂ ಹಾಸ್ಯಾಸ್ಪದ.

ಒಂದೇ ಒಂದು ಅಂತಾರಾಷ್ಟ್ರೀಯ  ಕ್ರೀಡಾಂಗಣಕ್ಕೂ ದಿಗ್ಗಜ ಕ್ರಿಕೆಟಿಗರ ಹೆಸರು ಇಟ್ಟಿರುವುದು ಕಾಣಿಸುವುದಿಲ್ಲ. ಇತರ ಜನಪ್ರಿಯ ಕ್ರೀಡೆಗಳ ಕ್ರೀಡಾಂಗಣಗಳು ಕೂಡ ಹೊರತಲ್ಲ. ಆಯಾ ಕ್ಷೇತ್ರದ ದಿಗ್ಗಜರ ಹೆಸರಲ್ಲಿ ಕ್ರೀಡಾಂಗಣಗಳು ನಾಮಕರಣ ವಾಗಿಲ್ಲ. ಎಲ್ಲಾ ಒಂದೋ ಎರಡೋ ದಿಗ್ಗಜರ ಹೆಸರಲ್ಲಿ ದೊರಕಬಹುದಷ್ಟೆ. ಕೆಲ ವರ್ಷಗಳ ಹಿಂದೆ ಅಮೆರಿಕದ ಕೆಂಟುಕಿಯಲ್ಲಿ ಕ್ರಿಕೆಟ್ ಕ್ರೀಡಾಂಗಣವೊಂದಕ್ಕೆ ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಭೇಟಿ ಇತ್ತರು. ಆ ಕ್ರೀಡಾಂಗಣಕ್ಕೆ ಅವರ ಹೆಸರನ್ನು ಇಡಲಾಯಿತು. ಆ ಮೈದಾನವನ್ನು ಉದ್ಘಾಟಿಸಿದ್ದ ಗಾವಸ್ಕರ್, ಈ ದೇಶದಲ್ಲಿ ಕ್ರಿಕೆಟ್ ಪ್ರಮುಖ ಆಟವಲ್ಲವಾದರು, ಕ್ರೀಡಾಂಗಣ ಕ್ಕೆ ನನ್ನ ಹೆಸರು ಕೊಡಲಾಗಿದೆ.

ಇದು ನನಗೆ ಲಭಿಸಿದ ದೊಡ್ಡ ಸನ್ಮಾನ ಹಾಗೂ ಗೌರವ’ ಎಂದು ಭಾವುಕರಾಗಿ ಹೇಳಿಕೊಂಡರು. ನಮ್ಮ ದೇಶದಲ್ಲಿ ನೆಹರು ಹೆಸರಲ್ಲಿ ಒಟ್ಟು ಐದು ಕ್ರೀಡಾಂಗಣಗಳಿವೆ, ಹಾಗೆಯೇ ತಮ್ಮ ಮಗಳಾದ ಇಂದಿರಾ ಗಾಂಧಿ ಹೆಸರಲ್ಲಿ ಮತ್ತು ಮೊಮ್ಮಗ ರಾಜೀವ್
ಗಾಂಧಿ ಹೆಸರಲ್ಲಿ ತಲಾ ಎರಡು ಕ್ರೀಡಾಂಗಣಗಳಿವೆ. ನಾಮಕರಣದ ವಿಚಾರದಲ್ಲಿ ಹಿಂದಿನ ಪರಿಪಾಟವೇ ಈಗಲೂ ಚಾಲ್ತಿ ಯಲ್ಲಿದೆ, ಇದೇ ರೀತಿ ಮಾಜಿ ಪ್ರಧಾನಿಗಳು, ಉದ್ಯಮಿಗಳು, ರಾಜಕೀಯ ಪ್ರಾತಿನಿಧ್ಯರ ಹೆಸರು, ಕ್ರಿಕೆಟ್ ಆಡಳಿತದಲ್ಲಿ ಗುರುತಿಸಿ ಕೊಂಡವರ ಹೆಸರಿನ ಕ್ರೀಡಾಂಗಣಗಳಿವೆ.

ರಾಜಕೀಯ ಧುರೀಣರ ಹೆಸರಿಟ್ಟಾಗ ಟೀಕಿಸುವವರನ್ನು ಸಮಾಧಾನಗೊಳಿಸಲು ಪ್ರೇಕ್ಷಕರ ಸ್ಟ್ಯಾಂಡ್‌ಗಳಿಗೆ ಆಟಗಾರರ ಹೆಸರು ಇಡಲಾಗುತ್ತಿದೆ. ಆದರೆ ಕ್ರಿಕೆಟಿಗರಿಗೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗಾವಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್‌ಗಳಿವೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಟ್ಯಾಂಡ್‌ಗಳು ಮತ್ತು ವೀರೇಂದ್ರ ಸೆಹ್ವಾಗ್ ಹೆಸರಿನ ಪ್ರವೇಶದ್ವಾರವನ್ನು ಕಾಣಬಹುದು.

ವಿಶೇಷವೆಂಬಂತೆ ವೆಸ್ಟ್ ಇಂಡೀಸ್ ನಡೆ ಅನುಕರಣೀಯ. ಸೇಂಟ್ ಲೂಸಿಯಾದಲ್ಲಿ ಡ್ಯಾರೆನ್ ಸಾಮಿ, ಟ್ರಿನಿಡಾಡ್‌ನಲ್ಲಿ ಬ್ರಯನ್ ಲಾರಾ ಕ್ರೀಡಾಂಗಣಗಳಿವೆ. ಆಂಟಿಗಾದಲ್ಲಿ ವಿವಿಯನ್ ರಿಚರ್ಡ್ಸ್, ಬಾರ್ಬಡೀಸ್‌ನಲ್ಲಿ ತ್ರಿ ಡಬ್ಲ್ಯುಸ್ ಓವೆಲ್ (ಫ್ರ‍್ಯಾಂಕ್ ವೊರೆಲ್, ಕ್ಲೈಡ್ ವಾಲ್ಕಾಟ್ ಮತ್ತು ಎವರ್‌ಟನ್ ವೀಕ್ಸ್ ಅವರ ನೆನಪಿಗಾಗಿ). ಆಸ್ಟ್ರೇಲಿಯಾದಲ್ಲಿ ಸರ್ ಡಾನ್ ಬ್ರಾಡ್ಮನ್ ಮತ್ತು ಅಲನ್ ಬಾರ್ಡರ್ ಅವರ ಹೆಸರಿನ ಕ್ರೀಡಾಂಗಣ ಗಳಿವೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ಮುತ್ತಯ್ಯ ಮುರಳೀಧರನ್ ಅಂತಾರಾಷ್ಟ್ರೀಯ ಕ್ರೀಡಾಂಗಣ ಇದೆ.

ಅಷ್ಟೇ ಏಕೆ ಇಂಗ್ಲೆಂಡ್‌ನಲ್ಲಿರುವ ಕ್ರಿಕೆಟ್ ಕಾಶಿ ಲಾರ್ಡ್ಸ್‌ ಕೂಡ ಮಾಜಿ ಕ್ರಿಕೆಟಿಗ ಸರ್ ಥಾಮಸ್ ಲಾರ್ಡ್ಸ್‌ ಅವರ ನೆನಪಿನಲ್ಲಿ ಕ್ರೀಡಾಂಗಣವಿದೆ, ಹೆಸರನಿದೆ ಬಿಡಿ’ ಎಂದು ಹೇಳುವುದು ಲೋಕಾರೂಢಿ. ಆದರೆ ಒಮ್ಮೆ ಯೋಚಿಸಿ. ಕರ್ನಾಟಕದಲ್ಲಿ ರಾಹುಲ್ ದ್ರಾವಿಡ್ ಅಥವಾ ಅನಿಲ್ ಕುಂಬ್ಳೆ ಹೆಸರಿರುವ ಅಂಗಳದಲ್ಲಿ ಅವರಿಂದಲೇ ಗತಕಾಲದ ಸಾಧನೆಗಳ ಕಥೆಯನ್ನು ಕೇಳುವ ಅನುಭವ ಹೇಗಿರಬಹುದು? ಅದೇ ರೀತಿ ಚಂಡೀಗಡದಲ್ಲಿ ಕಪಿಲ್ ದೇವ್, ದೆಹಲಿಯಲ್ಲಿ ಬಿಷನ್ ಸಿಂಗ್ ಬೇಡಿ ಮತ್ತು ವೀರೇಂದ್ರ ಸೆಹ್ವಾಗ್, ಮುಂಬೈನಲ್ಲಿ ತೆಂಡೂಲ್ಕರ್ ಅವರ ಹೆಸರಿನ ಅಂಗಳಗಳಿದ್ದರೆ ಎಷ್ಟು ಚೆಂದ. ಇವತ್ತು ಕ್ರಿಕೆಟ್ ಈ ಮಟ್ಟಕ್ಕೆ ಬೆಳೆಯಲು ಇವರೆಲ್ಲರ ಆಟದ ಸೊಬಗು ಮತ್ತು ವೈಖರಿ ಕಾರಣವಲ್ಲವೇ? ಆದರೂ ಕ್ರೀಡಾಂಗಣಗಳಿಗೆ ಅವರ ಹೆಸರನ್ನಿಡದೆ ರಾಜಕೀಯವೇಕೆ? ಆ ಮೂಲಕ ಅವರ ಯಶೋಗಾಥೆಗಳ ಕುರಿತು ಅರಿಯುವ ಕುತೂಹಲವನ್ನು ಮುಂದಿನ ಪೀಳಿಗೆಯ ಯುವಕರಲ್ಲಿ
ಮೂಡಿಸಬಹುದು.

ಬಿಸಿಸಿಐ ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಿಕೆಟ್ ದಿಗ್ಗಜರ ಹೆಸರನ್ನು ಕ್ರೀಡಾಂಗಣಗಳಿಗೆ ನಾಮಕರಣ ಮಾಡಿ ಔಚಿತ್ಯಪ್ರಜ್ಞೆ ಯನ್ನು ಹೆಚ್ಚಿಸಿಕೊಳ್ಳಬೇಕಿದೆ ಮತ್ತು ಗೌರವವನ್ನು ಸೂಚಿಸಿದಂತಾಗುತ್ತದೆ.