Friday, 13th December 2024

ಮಕ್ಕಳ ಕೈತಪ್ಪಿ ಹೋದ ಒಂದು ವರ್ಷ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಈ ಜೂನ್ ತಿಂಗಳಿದೆಯಲ್ಲಾ, ನಮ್ಮೆಲ್ಲರ ಜೀವನದ ಮೇಲೆ ಬಹಳಷ್ಟು ಪ್ರಭಾವ ಬೀರಿದ ಮಹತ್ವದ ತಿಂಗಳು. ಆಕಾಶವೇ
ತೂತು ಬಿದ್ದು, ಬಿರುಗಾಳಿ ಬಂದು, ಮಳೆ ಸುರಿದು, ನದಿ – ತೊರೆಗಳಲ್ಲಿ ನೆರೆಯೇ ತುಂಬಿ ಹರಿದರೂ, ಜೂನ್ 1ನೆಯ ತಾರೀಕು ಶಾಲೆಗಳು ಆರಂಭವಾಗಲೇಬೇಕು.

ನಮ್ಮ ಹಳ್ಳಿಯಲ್ಲಂತೂ ಪ್ರತಿ ಜೂನ್ ಮೊದಲ ವಾರವೇ ಬಿರುಮಳೆ, ಆದರೂ ಹೊಸ ತರಗತಿಗಳು ಜೂನ್ 1ರಂದು ಶುರು ವಾಗಲೇಬೇಕು, ಆಗುತ್ತಿದ್ದವು. ಹೊಸ ತರಗತಿಯ ಮೊದಲ ದಿನ ಎನಿಸಿದ ಜೂನ್ ಒಂದು ಎಂದರೆ, ನಮ್ಮ ಭವಿಷ್ಯವನ್ನೇ ತಿದ್ದಿ ಬರೆಯುವಂಥ ಅನುಭವ. ಹೊಸ ಸ್ನೇಹಿತರು, ಹೊಸ ಪುಸ್ತಕ, ಹೊಸ ಬಳಪ, ಹೊಸ ಪೆನ್ನು, ಕೆಲವು ಬಾರಿ ಹೊಸ ಶಾಲೆ, ಹೊಸ ಟೀಚರ್ – ಈ ರೀತಿಯ ವಿವಿಧ ಅನುಭವಗಳಿಗೆ ನಮ್ಮನ್ನು ದೂಡುವ ಜೂನ್ 1 ಎಂದರೆ ಅದೊಂದು ವಿಶೇಷವೇ ಸರಿ. ಅದು ಒಂದು ವರ್ಷ ಮಾತ್ರವಲ್ಲ , ಪ್ರತಿವರ್ಷವೂ ತೆರೆದುಕೊಳ್ಳುತ್ತಿದ್ದ ಅದ್ಭುತ ಮಾಯಾ ಪೆಟ್ಟಿಗೆ.

ಆ ದಿನ ನಮ್ಮ ಮುಂದೆ ಬಹುಪಾಲು ಅಪರಿಚಿತ ಲೋಕವೇ ತೆರೆದುಕೊಂಡು, ಹೊಸ ಹೊಸ ಅನುಭವಗಳ ಪಾಠ ಕಲಿಯಲು ನಮ್ಮೆಲ್ಲರನ್ನು ಸಿದ್ಧಗೊಳಿಸುತ್ತಿತ್ತು. ಹೊಸದಾಗಿರುವ ಪಠ್ಯಗಳ ಅಪರಿಚಿತ ಲೋಕವು ದಿನದನವೂ ಚೂರುಚೂರೇ ಪರಿಚಿತ ಗೊಳ್ಳುವ, ಮನನಗೊಳ್ಳುವ ಪರಿಯೇ ಒಂದು ವಿಸ್ಮಯ.

ನಮ್ಮಂತೆಯೇ ಹೊಸದಾಗಿ ಸೇರಿಕೊಂಡ ಸಹಪಾಠಿಗಳೊಂದಿಗೆ ಸಂವಹನ,ಆಟ, ಪಾಠ, ಮುನಿಸು, ನಗು ದುಗುಡ, ನಾಚಿಗೆ, ದಾಕ್ಷಿಣ್ಯ, ದುಮ್ಮಾನ, ಜಗಳ ಇವೆಲ್ಲವೂ ಆರಂಭಗೊಂಡು, ಮುಂದಿನ ಜೀವನಕ್ಕೆ ಒಂದು ತಳಪಾಯವನ್ನು ಕಟ್ಟಿಕೊಡುವ ತಿಂಗಳು ಜೂನ್! ಇದ್ಯಾಕೆ ಜೂನ್‌ನಲ್ಲಿ ಯಾಂತ್ರಿಕವಾಗಿ ಆರಂಭವಾಗುತ್ತಿದ್ದ ತರಗತಿಗಳನ್ನು ಈ ಪರಿ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ನಿಮ್ಮಲ್ಲಿ ಕೆಲವರಿಗಾದರೂ ಸಣ್ಣ ಅಚ್ಚರಿ ಮೂಡಿರಬಹುದು – ಅದಕ್ಕೆ ಪ್ರಮುಖ ಕಾರಣವೆಂದರೆ, ಈಗ ಒಂದು ವರ್ಷ ದಿಂದ ಮಕ್ಕಳಿಗೆ ಜೂನ್ 1ರಂದು (ಅಥವಾ ಅದೇ ಆಸುಪಾಸು) ಹೊಸ ತರಗತಿಗಳಿಗೆ ಹೋಗುವ ಅವಕಾಶವೇ ದೊರೆಯಲಿಲ್ಲ ಎಂಬ ವಾಸ್ತವ!

ಅದೊಂದು ಅಮೂಲ್ಯ ಅನುಭವದಿಂದ ಈಗಿನ ಮಕ್ಕಳ ತಲೆಮಾರು ವಂಚಿತವಾಗುತ್ತಿರುವ ಸನ್ನಿವೇಶವನ್ನು ಕಣ್ಣಾರೆ
ನೋಡುತ್ತಿರುವಾಗ, ಮನದ ಮೂಲೆಯಲ್ಲೆಲ್ಲೋ ಮೂಡಿದ ಸಣ್ಣ ನೋವು, ನನ್ನ ಕಾಲದ ತರಗತಿಗಳ ಆರಂಭವನ್ನು, ಅದರೊಂದಿಗೆ ಮಿಳಿತವಾಗಿದ್ದ ಸಂಭ್ರಮವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

ನಾನು ಮತ್ತು ನನ್ನ ಓರಗೆಯವರೆಲ್ಲಾ ಓದಿದ್ದು ಸರಕಾರಿ ಶಾಲೆಗಳಲ್ಲಿ. ನಮಗೆ ಆಗ ಬಾಲವಾಡಿ, ಎಲ್‌ಕೆಜಿ, ಯುಕೆಜಿಗಳು ಇರಲಿಲ್ಲ. ಮೊದಲನೆಯ ತರಗತಿಗೆ ನಾನು ಸೇರಿಕೊಂಡ ಶಾಲೆಗೆ ಹಂಚಿನ ಮಾಡಿನ ಕಟ್ಟಡದ ಜತೆಯಲ್ಲೇ, ಬಿದಿರಿನ ತಡಿಕೆ ಗಳಿಂದ ಮಾಡಿದ ನಾಲ್ಕಾರು ಕೊಠಡಿಗಳೂ ಇದ್ದವು. ನಿಜ ಹೇಳಬೇಕೆಂದರೆ, ಮೊದಲಿನ ಎರಡು ತರಗತಿಗಳಿಗೆ ಹೋದ ನೆನಪು ನನಗೆ ಸ್ಪಷ್ಟವಿಲ್ಲ; ಮೂರನೆಯ ತರಗತಿಯ ಮತ್ತು ನಾಲ್ಕನೆಯ ತರಗತಿಯ ನೆನಪು ಸಾಕಷ್ಟಿದೆ. ಆ ನನ್ನ ಶಾಲೆಯಿದ್ದದ್ದು
ಆಂಧ್ರಪ್ರದೇಶದಲ್ಲಿ!

ಅರ್ಧವಾರ್ಷಿಕ ರಜೆಗಳನ್ನು ಮುಗಿಸಿ ಬಂದಾಗ, ಸ್ಕೂಲಿನ ಸಿಮೆಂಟ್ ನೆಲವನ್ನು ಪೂರ್ತಿಯಾಗಿ ಒಡೆದು ಹಾಕಿದ್ದರು. ರಿಪೇರಿಯ ನೆಪ; ಆ ಒಡಕಲು ನೆಲದ ಮೇಲೆ ಕುಳಿತು ಪಾಠ ಕೇಳಿದ ಅನುಭವ. ನಾಲ್ಕನೆಯ ತರಗತಿಯಲ್ಲಿ ಒಂದೆರಡು ತಿಂಗಳು ಕಳೆದ
ನಂತರ, ಆ ತೆಲುಗು ಶಾಲೆಯಿಂದ ನನ್ನನ್ನು ಬಿಡಿಸಿ, ಮಲೆನಾಡಿನ ತಪ್ಪಲಲ್ಲಿದ್ದ ನಮ್ಮೂರಿನ ಗುಡಿಸಲು ಶಾಲೆಗೆ ತಂದು ಸೇರಿಸಿದರು ನಮ್ಮಪ್ಪ.

ಈ ಹೊಸ ಶಾಲೆಯ ಅನುಭವವಂತೂ ವಿಭಿನ್ನ, ವಿಶಿಷ್ಟ, ಅಚ್ಚರಿಪೂರ್ಣ. ಅದೊಂದು ರೀತಿಯ ಮಜಾ ಎಂದರೂ
ಹೇಳಬಹುದು. ಹೊಸ ಶಾಲೆಗೆ, ಹೊಸ ಜಾಗಕ್ಕೆ ಬಂದು ನಾನು ಕಲಿತದ್ದು ಅಪಾರ; ಹೊಸ ಮಕ್ಕಳು, ಹೊಸ ಮೇಸ್ಟರು, ಹೊಸ ಪುಸ್ತಕ, ಹೊಸ ಸ್ಲೇಟು, ಕನ್ನಡದ ‘ಹೊಸ’ ಭಾಷೆಯ ಬರವಣಿಗೆ! ಆಗ ಸುಮಾರು ಒಂಬತ್ತು ವರ್ಷ ವಯಸ್ಸಿನವನಾದ ನನಗೆ ಈ ಹೊಸ ವಾತಾವರಣದಲ್ಲಿ ಅದೆಷ್ಟು ಹೊಸತನ್ನು ಕಲಿಯುವ, ಬೆಳೆಯುವ ಅವಕಾಶ!

ಇವೆಲ್ಲವನ್ನು ನೆನಪಿಸಿಕೊಂಡೇ ನನಗೆ ಈ ವರ್ಷ ತುಸು ಕಸಿವಿಸಿ ಎನಿಸುತ್ತಿರುವುದು – ಸತತ ಎರಡು ಜೂನ್ ತಿಂಗಳಿನಲ್ಲಿ ಮಕ್ಕಳ ಶಾಲೆಗಳ ಬೀಗವೇ ತೆರೆಯದೇ ಇದ್ದುದರಿಂದ, ಈಗಿನ ಮಕ್ಕಳು ಇತರರೊಡನೆ ಬೆರೆಯುವ ಅವಕಾಶ, ಅದರಿಂದ ವರ್ತನಾಪಾಠ ಗಳನ್ನು ಕಲಿಯುವ ಅವಕಾಶ ಕಳೆದುಕೊಂಡು, ತಮ್ಮ ಜೀವನದ ಪ್ರಮುಖ ಘಟ್ಟದಲ್ಲಿ ನಷ್ಟವನ್ನೇ ಅನುಭವಿಸಿದ್ದಾರೆ ಎಂದು.
ನಾಲ್ಕನೆಯ ತರಗತಿಯ ನಡುವೆ ತೆಲುಗು ಶಾಲೆಯನ್ನು ಬಿಟ್ಟುಬಂದು ಕನ್ನಡ ತರಗತಿಗಳಿಗೆ ಹೊಸದಾಗಿ ಸೇರಿಕೊಂಡು, ಅನುಭವಗಳ ಸರಮಾಲೆಗೇ ನನ್ನನ್ನು ಒಡ್ಡಿಕೊಂಡ ಆ ಶಾಲೆಯ ಕಥೆ ಕೇಳಿದರೆ, ಈಗಿನ ಮಕ್ಕಳು ಮತ್ತು ಪೋಷಕರು ನಿಬ್ಬೆರ ಗಾದಾರು!

ಹುಲ್ಲಿನ ಛಾವಣಿ ಹೊಂದಿದ್ದ ಆ ಶಾಲಾ ಕಟ್ಟಡದಲ್ಲಿ ಇದ್ದದ್ದು ಒಂದೇ ಕೊಠಡಿ, ಓರ್ವ ಉಪಾಧ್ಯಾಯರು. ಬಹಿರ್ದೆಶೆಗೆ ಅನತಿ
ದೂರದ ಮರದ ಬುಡ. ಪ್ರತಿದಿನ ಅಲ್ಲಿದ್ದ ಕಾಸಾನು ಗಿಡಗಳ ತುದಿಗೆ ಮೂತ್ರ ಹಾರಿಸಿ, ಅದು ದಿನದಿನ ತುಸು ತುಸುವೇ ಒಣಗುತ್ತಿದ್ದುದನ್ನು ‘ಅಧ್ಯಯನ’ ಮಾಡುತ್ತಿದ್ದೆವು ನಾವೆಲ್ಲರೂ! ಆಟೋ, ವ್ಯಾನು, ಸೈಕಲ್, ಬೈಕ್, ಕಾರು, ಸ್ಕೂಟರ್ ಮತ್ತು ಬಸ್ಸುಗಳು ತಲುಪಲು ಅಸಾಧ್ಯ ಎನಿಸಿದ್ದ ಆ ಶಾಲೆಗೆ ನಾವು ಮತ್ತು ನಮ್ಮ ಉಪಾಧ್ಯಾಯರು ಸಹ ನಡೆದುಕೊಂಡೇ ಬರಬೇಕು!
ಮಯ್ಯ ಎಂಬುವವರು ಉಚಿತವಾಗಿ ನೀಡಿದ್ದ ಕಟ್ಟಡ ಅದು.

ಶಾಲೆಯ ಎದುರು ಪುಟ್ಟ ಮೈದಾನ, ಹಿಂಭಾಗದಲ್ಲಿ ಗದ್ದೆ. ಅದು ಬಿಟ್ಟರೆ ಸುತ್ತಲೂ ದಟ್ಟವಾದ ಮರಗಳಿಂದ ತುಂಬಿದ ಹಾಡಿ. ಮಳೆ ಬಂದಾಗ ಶಾಲೆಯ ಮೋಟುಗೋಡೆಗಳನ್ನು ದಾಟಿ, ಬೀಸುತ್ತಿದ್ದ ಇರುಚಲಿನಿಂದಾಗಿ, ಎಲ್ಲರಿಗೂ ತುಷಾರ ಸೇಚನ! ನಮ್ಮ
ಮನೆಯಿಂದ ಆ ಏಕೋಪಾಧ್ಯಾಯ ಶಾಲೆಗೆ ಸುಮಾರು 2 ಕಿಮೀ ದೂರ; ಮಳೆ ಬಂದಾಗಲೆಲ್ಲ ಅದನ್ನು ಎದುರಿಸಲು
ನನಗೊಂದು ಓಲಿಕೊಡೆಯನ್ನು ಕೊಡಿಸಿದ್ದರು.

ತಾಲೆಗರಿಗಳಿಂದ ನಿರ್ಮಿಸಿದ್ದ ಆ ಓಲಿಕೊಡೆಯು ಇಂದು ಮಠಾಧೀಶರಗಳು ಆಲಂಕಾರಿಕವಾಗಿ ಬಳಸುವ ಕೊಡೆಯನ್ನು ಹೋಲುತ್ತಿತ್ತು; ಆದರೆ ನಮ್ಮೂರಿನ ಥಂಡಿಯಿಂದ ಗೆದ್ದಲು ತಿನ್ನಬಾರದು ಎಂದು ಅದರ ಹೊರಭಾಗಕ್ಕೆ ಡಾಮರು ಬಳಿದಿದ್ದರು! ಅದನ್ನು ಮಡಚುವಂತಿರಲಿಲ್ಲ. ಎಲ್ಲಾ ಮಕ್ಕಳು ತಂದ ಓಲಿಕೊಡೆಗಳನ್ನು ಶಾಲೆಯೊಳಗೆ ಹರಡಿ ಇಟ್ಟಾಗ, ನಮಗೆ ಕುಳಿತು ಕೊಳ್ಳಲು ಅರ್ಧ ಕೊಠಡಿ ಮಾತ್ರ ಲಭ್ಯ! ಅಂದು ನಮಗೆ ಪಾಠಕಲಿಸುತ್ತಿದ್ದ ಸುಬ್ರಾಯ ಮಾಸ್ಟರು, ಉತ್ತಮವಾಗಿ ಬೋಧಿಸುತ್ತಿದ್ದು ದರ ಜತೆಯಲ್ಲೇ, ರಜಾದಿನಗಳಲ್ಲಿ ಮಕ್ಕಳ ಕಥೆಪುಸ್ತಕಗಳನ್ನು ಓದಲು ಕೊಟ್ಟು, ಪ್ರೇರೇಪಿಸಿ, ನನ್ನೆದೆಯಲ್ಲಿ ಸಾಹಿತ್ಯಾಸಕ್ತಿಯ ಬೀಜವನ್ನು ಬಿತ್ತಿದ್ದರು!

ವರ್ಷದ ನಾಲ್ಕು ತಿಂಗಳುಗಳ ಕಾಲ ಮಳೆ ಬರುತ್ತಿದ್ದ ನಮ್ಮೂರಿನಲ್ಲಿ, ಅವರು ಬಿತ್ತಿದ ಬೀಜ ಮೊಳಕೆಯೊಡೆದು, ಗಿಡವಾಗಲು ನಮ್ಮ ಮನೆಯ ವಾತಾವರಣವೂ ಗೊಬ್ಬರವನ್ನು ಹಾಕಿ ಪೋಷಿಸಿದ್ದು ನಿಜ. ಮನೆಯಿಂದ ಗದ್ದೆಬೈಲಿನಲ್ಲಿ ನಡೆದು, ನೀರು ಹರಿಯುವ ಎರಡು ತೊರೆಗಳನ್ನು ಸಂಕದ ಮೇಲೆ ನಡೆದು ದಾಟಿ, ಕಾಡುದಾರಿಯಲ್ಲಿ ಸಾಗಿ, ದರೆ ಇಳಿದು ನಾವೆಲ್ಲಾ ಮಕ್ಕಳು
ಆ ಗುಡಿಸಲು ಶಾಲೆಗೆ ಪ್ರತಿನಿತ್ಯ ನಡೆದು ಸಾಗುವ ಅನುಭವ ಕಲಿಸಿದ ಜೀವನ ಪಾಠ ಅದೆಷ್ಟು ಅಮೂಲ್ಯ!

ಹೊಸ ಹೊಸ ಶಾಲೆಗಳಿಗೆ ಸೇರಿಕೊಳ್ಳುವ ಪುಟಾಣಿಗಳು, ತಮ್ಮ ಸಹಪಾಠಿಗಳ ಸಂಪರ್ಕದಿಂದ ಮತ್ತು ಹೊಸ ಟೀಚರುಗಳ ಮಾರ್ಗದರ್ಶನದಲ್ಲಿ, ನವನವೀನ ಅನುಭವ ಪಡೆಯುವಲ್ಲಿ ಸಫಲರಾಗುತ್ತಾರೆ ಎಂದೆನಲ್ಲ, ಅಂತಹ ಅನುಭವ ನನಗಂತೂ ಹೇರಳವಾಗಿ ದೊರಕಿತು. ನಾಲ್ಕನೆಯ ತರಗತಿ ಪಾಸಾದ ಕೂಡಲೆ ನನಗೆ ಆ ಗುಡಿಸಲು ಶಾಲೆಯಿಂದ ಬೀಳ್ಕೊಡುಗೆ! ಐದರಿಂದ
ಏಳನೆಯ ತರಗತಿಯ ತನಕ ಇನ್ನೊಂದು ಶಾಲೆ. ಅದು ನಮ್ಮೂರಿನ ಬಸ್‌ಸ್ಟಾಪ್‌ನಿಂದಾಚೆ, ಸಂತೆ ಮಾರ್ಕೆಟ್ ಹತ್ತಿರವಿತ್ತು. ಈ ಶಾಲೆಗೆ ತಲಪಲು ಗದ್ದೆ ಅಂಚು, ಕಾಡುದಾರಿಯಲ್ಲಿ ಎರಡು ಕಿಮೀ ನಡೆದು, ಕೊನೆಯ ಒಂದು ಕಿಮೀ ದೂರವನ್ನು ಬಸ್ ಚಲಿಸುವ ಟಾರ್ ರಸ್ತೆಯಲ್ಲಿ ಕ್ರಮಿಸಬೇಕಿತ್ತು. ಆ ನಡುವೆ ಒಂದು ಹೊಳೆಯನ್ನು ದಾಟಬೇಕು. ಅದಕ್ಕೆ ಸೇತುವೆ ಇದ್ದರೂ,
ಮಳೆಗಾಲದಲ್ಲಿ ನೆರೆ ಬಂದಾಗ, ಅಲ್ಲೆಲ್ಲಾ ನೀರು ತುಂಬಿ, ರಸ್ತೆಯೇ ಬಂದ್!

ಆಗ ಶಾಲೆಗೆ ರಜೆ. ಒಮ್ಮೊಮ್ಮೆ ಶಾಲೆಗೆ ಹೋಗುವಾಗ ದಾರಿ ಸಲೀಸಾಗಿರುತ್ತಿತ್ತು; 12 ಗಂಟೆಗೆ ರಜೆ ಘೋಷಣೆ. ವಾಪಸು ಹೊರಟರೆ, ರಸ್ತೆ ಮೇಲೆ ಎರಡಡಿ ನದಿ ನೀರು! ಅದರಲ್ಲಿ ಕಾಲಾಡಿಸುತ್ತಾ ಸೇತುವೆ ದಾಟಿ ಮನೆ ತಲುಪುವ ಅನುಭವ ಅದೆಷ್ಟು ವಿಶಿಷ್ಟ! ಇಂತಹ ಅನುಭವಗಳೇ ಅಲ್ಲವೇ ಮಕ್ಕಳನ್ನು ಮುಂದಿನ ಜೀವನದ ಸವಾಲುಗಳನ್ನೆದುರಿಸಲು ಸಿದ್ಧಪಡಿಸುವುದು? ಐದನೆಯ ತರಗತಿ ಸೇರಿದಾಗ, ಮತ್ತೆ ಹೊಸ ಮಕ್ಕಳ ಸಾಂಗತ್ಯ. ಒಂದೆರಡು ದಿನಗಳಲ್ಲೇ ಒಂದಿಬ್ಬರು ಆಪ್ತರಾದರು; ಎಲ್ಲರೂ ಅದೇ ರೀತಿ ತಮತಮಗೆ ಹೊಂದಿಕೊಳ್ಳುವ ಸಂಗಾತಿಗಳ ಜತೆ ಗೆಳೆತನ ಬೆಳೆಸಿಕೊಂಡು, ಆಟಗಳಲ್ಲಿ ಜತೆಯಾಗಿ ಹೊಸ ಬದುಕನ್ನು ಕಟ್ಟಿ ಕೊಂಡರು!

ಹೊಸಬರೊಂದಿಗೆ ಸಂವಹನ ನಡೆಸಲು ಇದೂ ಸಹ ಪಾಠದ ರೂಪದಲ್ಲಿ ಮಾರ್ಗದರ್ಶನ ನೀಡಿದೆ. ಆದರೆ, ಆ ಶಾಲೆಯಲ್ಲಿ ಹುಡುಗಿಯರೊಂದಿಗೆ ಮಾತನಾಡುವ ಪದ್ಧತಿಯೇ ಇರಲಿಲ್ಲ! ಆಗಿನ ಕಾಲದ ಅನುಭವವೊಂದು ಈಗಲೂ ನೆನಪಿದೆ. ಬಸ್ ರಸ್ತೆಗೆ ಸಮೀಪ ಇರುವ, ಪ್ರತಿವಾರ ಸಂತೆ ನಡೆಯುತ್ತಿದ್ದ ಸಂತೆಮಾರ್ಕೆಟ್ ಹತ್ತಿರವಿದ್ದ, ದಾನಿಗಳ ಸಹಾಯದಿಂದ ನಿರ್ಮಾಣಗೊಂಡ ಹೆಂಚಿನ ಕಟ್ಟಡದಲ್ಲಿದ್ದ ಆ ಶಾಲೆಯ ಐದನೆಯ ತರಗತಿಗೆ ನಾನು ಸೇರ್ಪಡೆಗೊಂಡ ದಿನ, ಹತ್ತಾರು ಹುಡುಗರು ನನ್ನನ್ನು
ಸುತ್ತುವರಿದು ಕೇಳಿದ ಮೊದಲ ಪ್ರಶ್ನೆ ‘ನಿನ್ನ ಹೆಸರೇನು?’.

ಎರಡನೆಯ ಪ್ರಶ್ನೆ ‘ನೀನು ಯಾವ ಜಾತಿ?’ ಯಾವುದೇ ಮುಚ್ಚುಮರೆಯಿಲ್ಲದೆ, ಸಮಾಜದ ಮನೋಗತವನ್ನೇ ಬಿಂಬಿಸುವ ಆ ಎರಡನೆಯ ಪ್ರಶ್ನೆ ಕೇಳಲು ಆ ಮಕ್ಕಳಿಗೆ ಮುಜುಗರವಿರಲಿಲ್ಲ, ನಿಜವಾದ ಉತ್ತರ ನೀಡಲು ನನಗೂ ಸಂಕೋಚ ಎನಿಸಲಿಲ್ಲ. ಐದನೆಯ ತರಗತಿಯಂತಹ ಎಳವೆಯಲ್ಲೂ ಅಂತಹ ಪ್ರಶ್ನೆ ಕೇಳಿ, ಉತ್ತರ ಪಡೆಯುವ ಆ ಒಂದು ಸನ್ನಿವೇಶವು ಅಂದು ನಮ್ಮೂರಿನಲ್ಲಿ ಸ್ಥಿತಗೊಂಡಿದ್ದ ಸಾಮಾಜಿಕ ವ್ಯವಸ್ಥೆಗೆ ನಾವು ಹೊಂದಿಕೊಳ್ಳಲು, ಮುಂದೆ ಅಲ್ಲೇ ಜೀವನ ನಡೆಸಲು ಸಿದ್ಧ ಗೊಳಿಸುತ್ತಿತ್ತು ಎಂಬುದು ಒಂದು ವಾಸ್ತವ. ಆ ಪ್ರಶ್ನೆ ಅಂದು ನನಗೆ ಅಚ್ಚರಿ ಮೂಡಿಸಿದ್ದು ನಿಜ.

ಐದರಿಂದ ಏಳನೆಯ ತರಗತಿಯ ತನಕ ಆ ಶಾಲೆಯಲ್ಲಿ ನಾನು ಕಂಡದ್ದು ಹೊಸ ಲೋಕ. ನಾಲ್ಕಾರು ಅಧ್ಯಾಪಕರು, ನೂರಕ್ಕೂ ಹೆಚ್ಚು ಮಕ್ಕಳು, ಊಟಕ್ಕೆ ಮನೆಯ ಬುತ್ತಿ, ಶಾಲೆಯ ಮುಂದೆ ಮಾರುತ್ತಿದ್ದ ಐದು ಪೈಸೆಯ ಐಸ್ ಕ್ಯಾಂಡಿಯ ರುಚಿ, ಬುತ್ತಿ ಊಟದ ಮನೆಯ ಹಿರಿಯಣ್ಣ ನಾಯಕರು ಪ್ರತಿದಿನ ದಿನಪತ್ರಿಕೆ ಓದಿಸುತ್ತಿದ್ದ ಪ್ರೀತಿ, ಪ್ರತಿದಿನ ಬೆಳಿಗ್ಗೆ ಮೂರು ಕಿಮೀ, ಸಂಜೆ ಮೂರು ಕಿಮೀ ನಡೆಯುವ ಅನುಭವ, ಬಯಲು ಮತ್ತು ಕಾಡುದಾರಿಯಲ್ಲಿ ನಡೆಯುವಾಗ ಕಂಡ ಪರಿಸರ ವ್ಯಾಪಾರಗಳು, ಋತುಮಾನಕ್ಕನುಗುಣವಾಗಿ ಬದಲಾಗುತ್ತಿದ್ದ ನಿಸರ್ಗ, ವಾರ್ಷಿಕ ಪರೀಕ್ಷೆ, ಮಕ್ಕಳ ಆಟ, ಜಗಳ, ಮೊದಲ ಬಾರಿ ಸೀತಾಫಲ ಹಣ್ಣನ್ನು ಕೊಟ್ಟ ಸರ್ವೋತ್ತಮ ಹೆಗಡೆ, ಒಮ್ಮೆ ಆಕಸ್ಮಿಕವಾಗಿ ರುಚಿಕಂಡ ಮೇಸ್ಟರ ಬೆತ್ತದ ಏಟು – ಇವೆಲ್ಲವೂ ನನಗೆ ಕಲಿಸಿದ ಅನುಭವ ಅಪಾರ.

ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯಲು ಪಕ್ಕದ ಊರಿನ ಹೈಸ್ಕೂಲ್‌ಗೆ ಬೆಳಿಗ್ಗೆ ಬೇಗನೇ ಹೋಗಬೇಕಿತ್ತು. ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ನಮಗೆ ಪಾಠ ಹೇಳಿಕೊಡುತ್ತಿದ್ದ ಮುಖ್ಯೋಪಾಧ್ಯಾಯರು ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯ ಸಮಯದಲ್ಲಿ ಪರೀಕ್ಷಾ ಹಾಲ್‌ಗೆ ಬಂದು, ಹತ್ತಾರು ಪ್ರಶ್ನೆಗಳಿಗೆ ಉತ್ತರವನ್ನು ಬಹಿರಂಗವಾಗಿ ಹೇಳಿ, ಕೆಲವು ಮಕ್ಕಳಿಗೆ ಬರೆದುಕೊಳ್ಳಿ ಎಂದು ನಿರ್ದೇಶಿಸಿದ್ದನ್ನು ಕಂಡು ನನಗೆ ನಿಜಕ್ಕೂ ಅಚ್ಚರಿ, ಆಘಾತ!

ಎಲ್ಲಾ ಮಕ್ಕಳು ಕಷ್ಟಪಟ್ಟು ಓದಿ, ಅಂಕಗಳನ್ನು ಗಳಿಸಬೇಕು ಎಂದು ಅಂದುಕೊಂಡಿದ್ದ ನನ್ನ ಆ ಎಳೆಯ ಮನಸ್ಸಿಗೆ, ಇವರ‍್ಯಾಕೆ ಇತರ ಹುಡುಗರಿಗೆ ಉತ್ತರ ಹೇಳಿಕೊಡುತ್ತಿದ್ದಾರೆ ಎಂಬ ವಿಸ್ಮಯ! ತಮ್ಮ ಶಾಲೆಯ ವಿದ್ಯಾರ್ಥಿಗಳು ನೆರೆಯ ಊರಿನಲ್ಲಿ ನಡೆಯುತ್ತಿರುವ ಪಬ್ಲಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ, ಎಲ್ಲರೂ ತೇರ್ಗಡೆಯಾಗಲಿ ಎಂಬ ತವಕವೇ ಅವರನ್ನು ಆ ಸಣ್ಣ
ಪ್ರಮಾಣದ ಭ್ರಷ್ಟಾಚಾರಕ್ಕೆ ದೂಡಿತ್ತು! ಫೇಲಾಗುವ ಸಾಧ್ಯತೆ ಇರುವವರು ಪಾಸಾಗುವಂತೆ ನಮ್ಮ ಮುಖ್ಯೋಪಾಧ್ಯಾಯರು ಮಾಡಿದ ಸಹಾಯವು, ಆ ಶಾಲೆಯಲ್ಲಿ ನಾನು ಕಲಿತ ಮತ್ತೊಂದು ಪಾಠ.

ನನ್ನ ಅದೃಷ್ಟಕ್ಕೆ ಎಂಟನೆಯ ತರಗತಿಗೆ ಮತ್ತೊಂದು ಊರಿನ ಹೈಸ್ಕೂಲಿಗೆ ಸೇರ್ಪಡೆ! ನನ್ನ ಹದಿನಾಲ್ಕನೆಯ ವರ್ಷದಲ್ಲಿ ನಾಲ್ಕು ಶಾಲೆಗಳಲ್ಲಿ ಅಧ್ಯಯನ ಮಾಡುವ ಅವಕಾಶ! ಆ ಪ್ರೌಢಶಾಲೆಯ ಅನುಭವವೇ ಇನ್ನಷ್ಟು ವಿಭಿನ್ನ, ವ್ಯಾಪಕ. 2020 ಮತ್ತು 2021ರ ಜೂನ್ 1 ರಂದು ಶಾಲೆಗಳು ಆರಂಭವಾಗದೇ, ಮಕ್ಕಳು ಪರಸ್ಪರ ಬೆರೆಯುವ ಅವಕಾಶ ದೊರೆಯದೇ ಇರುವ ಈ ಸಂದರ್ಭದಲ್ಲಿ ಇವೆಲ್ಲವನ್ನೂ ನೆನಪಿಸಿಕೊಳ್ಳಬೇಕು ಎನಿಸಿತು. ಈ ಒಂದು ವರ್ಷದಲ್ಲಿ ಪುಟಾಣಿಗಳಿಗೆ ಆನ್‌ಲೈನ್ ತರಗತಿ ನಡೆದಿದೆ, ತೇರ್ಗಡೆಯೂ ಆಗಿದೆ, ನಿಜ.

ಆದರೆ, ತರಗತಿಗಳಲ್ಲಿ ದೊರೆಯುವ ವೈವಿಧ್ಯಮಯ ಅನುಭವ, ಉತ್ತಮ ಅಧ್ಯಾಪಕರನ್ನು ನೋಡುವ ಅವಕಾಶ, ಅವರು ವೈಯಕ್ತಿಕ ಕಾಳಜಿಯಿಂದ ಮಕ್ಕಳ ಭವಿಷ್ಯವನ್ನು ರೂಪಿಸುವ ಪರಿ – ಇವೆಲ್ಲಕ್ಕೂ ಬೇರೆಲ್ಲಿದೆ ಹೋಲಿಕೆ? ಅಷ್ಟರ ಮಟ್ಟಿಗೆ, ಈ ಒಂದು ವರ್ಷದ ಅವಧಿಯಲ್ಲಿ ಮಕ್ಕಳು ಅವಕಾಶ ವಂಚಿತರು.