Wednesday, 11th December 2024

ಇನ್ನೂ ಇದೆ ಕರೋನಾ, ನೀವ್‌ ಮಾಡೋದ್ ಸರೀನಾ ?

ಅಭಿಮತ

ಬಸವನಗೌಡ ಹೆಬ್ಬಳಗೆರೆ

ಸರಿಸುಮಾರು ಎರಡು ವರ್ಷಗಳಿಂದ ಇಡೀ ಜಗತ್ತನ್ನು ಕಣ್ಣಿಗೆ ಕಾಣದ ಕರೋನಾ ವೈರಸ್ಸು ಕಾಡುತ್ತಿದೆ. ಇದರ ಕುರಿತು ಮಾಧ್ಯಮದವರು, ಆರೋಗ್ಯ ಇಲಾಖೆಯವರು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಕೂಡ ಮೊದಲ ಅಲೆ, ಎರಡನೇ ಅಲೆ ಮುಗಿಸುತ್ತಾ ಮೂರನೇ ಅಲೆಯತ್ತ ಕಾಲಿಡುತ್ತಿದ್ದೇವೆ.

ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಬಹುತೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿzರೆ. ಹಲವರು ಸಾವು ಬದುಕಿನ
ಮಧ್ಯೆ ಹೋರಾಡುತ್ತಿದ್ದಾರೆ. ಈ ಹಿಂದೆ ಮೊದಲ ಅಲೆಯು ಬರೀ ಪಟ್ಟಣದ ಜನಗಳಿಗೆ ಸೀಮಿತ ಎಂಬಂತಿತ್ತು. ಆದರೆ ಈಗ ಅದು ಹಳ್ಳಿಗಳಲ್ಲೂ ತನ್ನ ಕರಾಳ ಹಸ್ತ ಚಾಚಿದೆ. ಇಷ್ಟೆ ಆದರೂ ಇನ್ನೂ ಅನೇಕರು ಇದರ ಬಗ್ಗೆ ಅಷ್ಟೇನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅನಿಸುತ್ತದೆ. ಸರಕಾರದವರಂತೂ ಕೋವಿಡ್ ಅಪಾಯ ತಡೆಯಲು ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ.

ಉಚಿತ ಲಸಿಕೆ, ಕರೋನಾ ಪೀಡಿತರಿಗೆ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಲಾಕ್ ಡೌನ್ ಸಹ ಮಾಡಲಾಗಿದೆ. ಏನೆ ಮಾಡಿಯೂ ಸಹ ಜನರ ಸಹಕಾರ ಇಲ್ಲದಿದ್ದರೆ ಅದು ಹೊಳೆಯಲ್ಲಿ ಹುಣಸೆ ಹಿಂಡಿದಂತೆ ವ್ಯರ್ಥ! ಈ ಮಾತನ್ನು ಇಲ್ಲಿ ಪ್ರಸ್ತಾಪಿಸಿದ ಉದ್ದೇಶವೇನೆಂದರೆ ಹಲವು ಜನರು ಇನ್ನೂ ಇದರ ಬಗ್ಗೆ ಇನ್ನೂ ಅಸಡ್ಡೆ ತೋರುತ್ತಿzರೆ. ಇದರ ಲಕ್ಷಣ ಕಂಡ
ಕೂಡಲೇ ಕರೋನಾ ಪರೀಕ್ಷೆ ಮಾಡಿಸಿಕೊಳ್ಳದೇ ಮನೆಯಲ್ಲಿಯೇ ಇರುತ್ತಾರೆ. ಅಷ್ಟೇ ಅಲ್ಲ ತಮಗೇನೂ ಹಾಗಿಲ್ಲವೆಂಬಂತೆ ತಿರುಗುತ್ತಾ ವೈರಸ್ ಹರಡುವಂತ ಘನಂದಾರಿ ಕೆಲಸ ಮಾಡುತ್ತಿದ್ದಾರೆ.

ನಾನೇ ಒಬ್ಬರಿಗೆ ‘ಟೆಸ್ಟ್ ಮಾಡಿಸಿಕೊಳ್ಳಿ’ ಎಂದು ಸಲಹೆಯಿತ್ತಾಗ ಅವರು ‘ಸರ್ ಒಂದೊಮ್ಮೆ ಪಾಸಿಟಿವ್ ಬಂದರೆ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಅದರ ಬದಲು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ತೇವೆ’ ಎಂದರು. ಆದರೆ ಅವರು
ಐಸೋಲೇಷನ್ ಆಗೋ ಬದಲು ಕಂಡ ಕಂಡಲ್ಲಿ ಸುತ್ತುವುದನ್ನು ಕಂಡೆ. ಅವರಿಗೆ ಕರೋನಾ ಇತ್ತೋ ಇಲ್ವೋ ಗೊತ್ತಿಲ್ಲ. ಆದರೆ ಒಬ್ಬ ಜವಾಬ್ದಾರಿಯುತನಾಗಿ ವರ್ತಿಸಲಿಲ್ಲ ಎಂಬುದೇ ಬೇಸರದ ಸಂಗತಿ. ಹಳ್ಳಿಯಲ್ಲಿ ಕರೋನಾ ಬಂದವರನ್ನು ನೋಡುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ! ಅದಕ್ಕೆ ಕೆಲವರು ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ.

ಇಂತಹವರ ಅನೇಕ ಉದಾಹರಣೆಗಳಿರಬಹುದು!? ಅದಕ್ಕೆ ಸೋಂಕಿತರ ಸಂಖ್ಯೆ ಕುಸಿಯುತ್ತಿರಬಹುದು? ಆದರೆ ಒಂದಂತೂ ಸತ್ಯ. ಇಂಥ ತಾತ್ಸಾರವೂ ವೈರಸ್ಸಿಗೆ ಗುಪ್ತಗಾಮಿನಿಯಂತೆ ಹರಿಯಲು ಸಹಾಯವಾಗುತ್ತಿದೆ. ಇನ್ನು ಲಸಿಕೆ ವಿಷಯಕ್ಕೆ ಬಂದರೆ ಇನ್ನೂ ಹಲವರು ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ! ವೈರಸ್ ತಹಬದಿಗೆ ತರಲು ಏನೇ ನಿಯಮ ಮಾಡಿದರೂ, ಆ ನಿಯಮ ಗಳನ್ನು ಮುರಿದು ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುತ್ತಿದ್ದಾರೆ.

ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯುತ್ತಿzರೆ. ಇನ್ನು ಅನ್ ಲಾಕ್ ಮಾಡಿದರಂತೂ ಮುಗಿಯಿತು. ಮೊದಲಿನಂತೆ ವರ್ತಿಸುವುದರಲ್ಲಿ ಯಾವುದೇ ಅನುಮಾನವಿಲ್ಲ! ಹಾಗಂತ ವರ್ಷವಿಡೀ ಲಾಕ್ ಡೌನ್ ಮಾಡಲು ಸಾಧ್ಯವಿಲ್ಲ. ಜನರು ಅರ್ಥ ಮಾಡಿಕೊಳ್ಳಬೇಕಷ್ಟೇ. ಇನ್ನೂ ಕೆಲವರಿಗೆ ಮಾಸ್ಕ್ ಹಾಕಿಕೊಳ್ಳಲು ಸಲಹೆಯಿತ್ತರೆ ನಾವು ಗಟ್ಟಿ ಇದೀವಿ ನಮಗೇನೂ ಹಾಗಲ್ಲ, ಬರಲೇಬೇಕು ಎಂದು ಹಣೆಬರಹದಲ್ಲಿ ಇದ್ದರೆ ಯಾರೂ ತಪ್ಪಿಸೋಕೆ ಆಗೋಲ್ಲ ಎನ್ನುತ್ತಾರೆ. ಈ
ಕರೋನಾ ರೋಗಕ್ಕೆ ಮದ್ದಿಲ್ಲ ನಿಜ, ಆದರೆ ಕರೋನಾ ವೈರಸ್ ತಡೆಯುವ ಬುದ್ಧಿ ಮಾತ್ರ ಮನುಜರಿಗೆ ಬರಬೇಕಿದೆ.

ಇನ್ನೂ ಕೆಲವರು ಇದುವರೆಗೂ ಒಬ್ಬ ಭಿಕ್ಷುಕನಿಗೂ ಬಂದಿಲ್ಲ, ಇದು ಇದೆಯೋ ಇಲ್ಲವೋ ಎಂಬ ಅನುಮಾನಭರಿತ ವ್ಯಂಗ್ಯ ದಲ್ಲಿ ಮಾತಾಡುತ್ತಾರೆ! ಇಂಥವರಿಗೆ ಸ್ವಂತ ಅನುಭವವಾಗಿ ಮನೆಯಲ್ಲಿ ಯಾರನ್ನಾದರೂ ಕಳೆದುಕೊಂಡಾಗ ಮಾತ್ರ ಬುದ್ಧಿ ಬರುವುದು ಅನಿಸುತ್ತದೆ. ಜೀವನವು ನಾವು ಅನುಭವ ಪಟ್ಟುಕೊಂಡು ಪಾಠ ಕಲಿಸುವಷ್ಟು ದೊಡ್ಡದಿಲ್ಲ. ಬೇರೆಯವರ ಅನುಭವದಿಂದ ಪಾಠ ಕಲಿಯಬೇಕು. ಇದೇ ಬುದ್ಧಿವಂತರ ಲಕ್ಷಣ. ಇದನ್ನು ಸರ್ವರೂ ಪಾಲಿಸಬೇಕು. ಇಲ್ಲದಿದ್ದರೆ ವೈರಸ್ಸಿನ ಅಲೆಗಳ ಸಂಖ್ಯೆ ಬೆಳೆಯುತ್ತಾ ಹೋಗಬಹುದು.

ಇದರಿಂದ ರೈತರು, ವ್ಯಾಪರಸ್ಥ, ಕೂಲಿ ಕಾರ್ಮಿಕರು, ಮಕ್ಕಳಾದಿಯಾಗಿಯೂ ದೇಶವೂ ಸಹ ಸಂಕಷ್ಟ ಎದುರಿಸಬೇಕಾಗುತ್ತದೆ.
ದಯಮಾಡಿ ಅನ್ ಲಾಕ್ ನಂತರವೂ ಕರೋನಾ ನಿಯಮಗಳನ್ನು ಪಾಲಿಸಿ. ಇಲ್ಲಿ ವೈರಸ್ ಇನ್ನೂ ಲಾಕ್ ಆಗಿಲ್ಲ ಎಂಬುದು ನೆನಪಿನಲ್ಲಿರಲಿ. ಹಣೆ ಗಟ್ಟಿ ಇದೆ ಅಂತಾ ಬಂಡೆಗೆ ಹೋಗಿ ಚಚ್ಚಿಕೊಳ್ಳೋದು ಬೇಡ.