Saturday, 14th December 2024

ಹರಕೆಯ ಕುರಿಯಾದರೇ ಬೆಲ್ಲದ ?

ಸಿ.ಪಿ.ಯೋಗೀಶ್ವರ್ ಮಾತು ಕೇಳಿ ನಾಯಕತ್ವ ಬದಲಾವಣೆಗೆ ಹೆಗಲು ಕೊಟ್ಟು ಕೈ ಸುಟ್ಟುಕೊಂಡ ಬೆಲ್ಲದ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಷಯದಲ್ಲಿ ಇದ್ದಕ್ಕಿದ್ದಂತೆ ಮುಂಚೂಣಿಗೆ ಬಂದ ಅರವಿಂದ ಬೆಲ್ಲದ ಅವರು
‘ಹರಕೆಯ ಕುರಿ’ಯಾದರೆ? ಎಂಬ ಮಾತುಗಳು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿವೆ.

ಸರಕಾರ ರಚನೆ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ನಾಯಕತ್ವ ವಹಿಸಿದ ರೀತಿಯಲ್ಲಿ ಸಿಎಂ ಬದಲಾವಣೆಗೆ ತಾವು ನಾಯಕತ್ವ ವಹಿಸಿಕೊಳ್ಳುವುದಾಗಿ ಮುಂದೆ ಬಂದ ಸಿ.ಪಿ.ಯೋಗೇಶ್ವರ್ ಅವರ ಮಾತು ಕೇಳಿಕೊಂಡು ಅರವಿಂದ್ ಬೆಲ್ಲದ
ಹರಕೆಯ ಕುರಿಯಾದರು.

ಹೈಕಮಾಂಡ್ ಸಿಎಂ ಪರವಾಗಿ ಬ್ಯಾಟಿಂಗ್ ನಡೆಸಿ ಅವರನ್ನೇ ಮುಂದುವರಿಸುವ ಕುರಿತು ಮಾತನ್ನಾಡುತ್ತಿದ್ದಂತೆ ಸಿ.ಪಿ.ಯೋಗೀಶ್ವರ್ ಕೂಡ ಬೆಲ್ಲದ ಅವರಿಂದ ದೂರಾಗಿ ಅವರನ್ನು ಒಂಟಿ ಮಾಡಿದರು ಎನ್ನಲಾಗುತ್ತಿದೆ. ಸಿ.ಪಿ.ಯೋಗೇಶ್ವರ್ ಅವರು, ರಮೇಶ್ ಜಾರಕಿಹೊಳಿಯಂತೆ ಶೈನ್ ಆಗುವ ಪ್ರಯತ್ನ ನಡೆಸಿದರು. ಆದರೆ, ಅವರಷ್ಟು ಸಾಮರ್ಥ್ಯ ತಮಗಿಲ್ಲ ಎಂಬುದನ್ನು ಮರೆತರು.

ರಮೇಶ್ ಜಾರಕಿಹೊಳಿ ಎಸ್‌ಟಿ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡ ಕುಟುಂಬದಿಂದ ಬಂದವರು. ಆದರೆ, ಯೋಗೇಶ್ವರ್ ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಬಿಜೆಪಿಯಲ್ಲಿಯೇ ಅವರಿಗೆ ಪ್ರಬಲ ಪೈಪೋಟಿಯಿದೆ. ಮೂಲ ಬಿಜೆಪಿಯ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಮತ್ತು ಆರ್.ಅಶೋಕ, ತಮ್ಮದೇ ಸಮುದಾಯದ ವಲಸಿಗ ನಾಯಕನೊಬ್ಬ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾಡುವಷ್ಟು ಪ್ರಬಲವಾಗಿ ಬೆಳೆಯುವುದನ್ನು ಸಹಿಸುವುದಿಲ್ಲ.

ಅನೇಕ ಸಂದರ್ಭದಲ್ಲಿ ಅವರನ್ನು ಮುಂಚೂಣಿಗೆ ತರುವಲ್ಲಿ ಇಬ್ಬರು ನಾಯಕರು ತಡೆಯಾಗಿದ್ದರು ಎನ್ನುವುದನ್ನು ಸ್ಮರಿಸ ಬಹುದು. ಬಿಜೆಪಿಯ ಮಟ್ಟಿಗೆ ನಾಯಕತ್ವ ಬದಲಾವಣೆ ಈಗ ಸಾಧ್ಯವಿರುವ ಮಾತಲ್ಲ. ಯಡಿಯೂರಪ್ಪ ಅವರನ್ನು ಬದಲಾಯಿಸಲು ಕೆಲ ಘಟಾನುಘಟಿ ನಾಯಕರು ಹಿಂದೆಯೇ ಪ್ರಯತ್ನ ನಡೆಸಿ ಕೈಸುಟ್ಟುಕೊಂಡಿದ್ದರು. ಬಿಎಸ್‌ವೈ ಬದಲಿಗೆ
ಪ್ರಹ್ಲಾದ್ ಜೋಶಿ ಅಥವಾ ಸುರೇಶ್ ಅಂಗಡಿ ಸಿಎಂ ಆಗುತ್ತಾರೆ ಎಂಬ ಮಾತುಗಳು ಆಗಲೇ ಕೇಳಿಬಂದಿತ್ತು. ಆದರೆ, ಅದು ಸಾಧ್ಯವಾಗದ ಮಾತು ಎಂಬುದನ್ನು ಅರಿತು ಕೆಲವರು ತಟಸ್ಥರಾದರು. ಆ ನಂತರದ ಬೆಳವಣಿಗೆಯಲ್ಲಿ ಸಿ.ಪಿ.ಯೋಗೇಶ್ವರ್ ನಾಯಕತ್ವದಲ್ಲಿ ದೆಹಲಿ ದಂಡಯಾತ್ರೆ ಆರಂಭವಾಗಿತ್ತು.

ಅರವಿಂದ್ ಬೆಲ್ಲದ ಅವರನ್ನೇ ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸಿ, ಅವರನ್ನು ಮುಂಚೂಣಿಗೆ ತರಲಾಯಿತು. ಇದಕ್ಕೆ ಇಂಬು ನೀಡುವಂತೆ ಬೆಲ್ಲದ ಕೂಡ ಪದೇ ಪದೆ ದೆಹಲಿಗೆ ಪ್ರಯಾಣ ಬೆಳೆಸುವ ಮೂಲಕ ಊಹಾಪೋಹಗಳಿಗೆ ರೆಕ್ಕೆಯಾದರು. ಇದೀಗ ಹೈಕಮಾಂಡ್ ನಾಯಕತ್ವ ಬದಲಾವಣೆ ಪ್ರಹಸನಕ್ಕೆ ಬಹುತೇಕ ತೆರೆ ಎಳೆದಿದ್ದು, ಬೆಲ್ಲದ ಬಿಜೆಪಿ ಪಾಲಿಗೆ ಕಹಿಯಾಗಿ
ಪರಿಣಮಿಸಿದ್ದಾರೆ.

ಅಸ ಕೈಚೆಲ್ಲಿ ಶರಣಾದ ಸಿಪಿವೈ? ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಸಿಎಂ ಬದಲಾವಣೆಯ ಸರ್ಕಸ್ ನಡೆಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಪ್ರಬಲ ಅಸವೊಂದು ಅವರ ಬಳಿಯಿದ್ದು, ಇದನ್ನಿಟ್ಟುಕೊಂಡು ನಾಯಕತ್ವ ಬದಲಾವಣೆ ಮಾಡುತ್ತಾರೆ ಎಂಬ ನಿರೀಕ್ಷೆ ಕೆಲವು ನಾಯಕರಲ್ಲಿತ್ತು. ಆದರೆ, ಅದು ಈಗ ಸಾಧ್ಯವಾಗಲಿಲ್ಲ. ಕೇಂದ್ರ ನಾಯಕರು
ಯಾವಾಗ ಕಠಿಣ ಸಂದೇಶ ನೀಡಿದರೋ, ಆ ದಿನವೇ ಯೋಗೇಶ್ವರ್ ಅವರು ಶಸ್ತ್ರ ಕೆಳಗಿಟ್ಟರು.

ಈ ಫಾರ್ಮುಲಾ ರೇಸ್‌ನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಬೆಲ್ಲದ, ಕೆಲ ದಿನಗಳ ಕಾಲ ಮುಂಚೂಣಿಗೆ ಬಂದರು. ಅವರೊಡನೆ ಕೆಲ ದಿನ ದೆಹಲಿ ಪ್ರವಾಸ ನಡೆಸಿದ ಸಿಪಿವೈ, ಹೈಕಮಾಂಡ್ ಮತ್ತು ಬಿಎಸ್‌ವೈ ಆಪ್ತರ ವಾಗ್ಬಾಣದಿಂದ ಬೆದರಿ, ಓಡೋಡಿ ಬಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಡೆಸಿದ ಸಭೆಗೆ ಹಾಜರಾದರು. ಆ ಮೂಲಕ ನಾಯಕತ್ವ ಬದಲಾವಣೆ ಅಸ್ತ್ರವನ್ನು   ಹೈಕಮಾಂಡ್ ಮುಂದಿಟ್ಟು ಮಂಡಿಯೂರುವ ಮೂಲಕ ಬೆಲ್ಲದ ಅವರನ್ನು ಒಂಟಿ ಮಾಡಿದರು.

ಬೆಲ್ಲದಗೆ ಇದೆಲ್ಲ ಬೇಕಿತ್ತಾ?: ಅಷ್ಟಕ್ಕೂ ಬೆಲ್ಲದಗೆ ಇದೆಲ್ಲ ಬೇಕಿತ್ತಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅವರು ಫ್ರಾನ್ಸ್ ನ ಅತ್ಯುತ್ತಮ ವ್ಯವಹಾರ ನಿರ್ವಹಣಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೃದು ಮಾತಿನ ಯುವ ರಾಜಕಾರಣಿ. ಬೇರೆಯವರಂತೆ ತಮ್ಮ ಲಿಂಗಾಯತ ಗುರುತನ್ನು ತೋಳಿಗೇರಿಸಿಕೊಂಡು ಓಡಾಡಿದವರಲ್ಲ.

ಅಚ್ಚರಿ ಹುಟ್ಟಿಸುವಷ್ಟರ ಮಟ್ಟಿಗಿನ ಅವರ ಮೃದುತ್ವದ ಇವರ ತಂದೆ ಚಂದ್ರಕಾಂತ್ ಬೆಲ್ಲದ ಅವರು ಜನತಾ ಪರಿವಾರದಲ್ಲಿದ್ದ ವರು. ಆಮೇಲೆ ಬಿಜೆಪಿಗೆ ಬಂದರು. ಅವರ ಕ್ಷೇತ್ರವನ್ನು ಮಗ ಅರವಿಂದ ಈಗ ಪ್ರತಿನಿಧಿಸುತ್ತಿದ್ದಾರೆ. ಯೋಗೇಶ್ವರ್ ತಂಡದ
ಆಲೋಚನೆ ಬೇರೆಯಾಗಿದ್ದು, ಅದು ವಿಫಲವಾದಾಗ ಅರವಿಂದ ಅವರು ಅಖಾಡಕ್ಕಿಳಿದರು. ಯೋಗೇಶ್ವರ್ ಬಣದ ನೀತಿ
ವಿಫಲವಾದಾಗ ಲಿಂಗಾಯತ ಮುಖ್ಯಮಂತ್ರಿಗೆ ಪರ್ಯಾಯವಾಗಿ ಲಿಂಗಾಯತ ನಾಯಕನನ್ನೇ ಅಖಾಡಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ಅರವಿಂದ ಅವರು ಬಲಿಪಶುವಾಗಿದ್ದಾರೆ ಎನ್ನಲಾಗುತ್ತಿದೆ.

ಮುಳುವಾದ ಜಂಪಿಂಗ್ ಪ್ರವೃತ್ತಿ
ಇನ್ನು ಯೋಗೇಶ್ವರ್ ಅವರ ಹಿನ್ನಡೆಗೆ ಅವರ ವಲಸೆ ಪ್ರವೃತ್ತಿಯೂ ಮುಳುವಾಯ್ತು ಎನ್ನಬಹುದು. ಮೊದಲಿಗೆ ಜೆಡಿಎಸ್‌ನಿಂದ ರಾಜಕಾರಣ ಆರಂಭಿಸಿದ ಅವರು ನಂತರ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿ ಬಹುತೇಕ ಪಕ್ಷಗಳಲ್ಲಿ ಪರ್ಯಟನೆ ನಡೆಸಿದರು. ಇದೀಗ ಬಿಜೆಪಿಗೆ ಬಂದಿದ್ದು, ಚುನಾವಣೆ ಸೋತರು. ಬಿಎಸ್‌ವೈ ಕೃಪಾಕಟಾಕ್ಷದಿಂದಲೇ ಪರಿಷತ್ ಸದಸ್ಯರಾಗಿ, ಮಂತ್ರಿಯಾಗಿ ದ್ದಾರೆ. ಆದರೂ ತಮ್ಮ ಮೂಲ ಪ್ರವೃತ್ತಿ ಬಿಡದ ಅವರ ನಡೆ ಬಗ್ಗೆ ಜತೆಯಲ್ಲಿರುವವರಿಗೆ ಅಪನಂಬಿಕೆ ಇದೆ.

ಮೊದಲಿಗೆ ಮಿತ್ರ ಮಂಡಳಿ ಅವರನ್ನು ಬಹಳವಾಗಿ ನಂಬಿತ್ತು. ಆದರೆ, ಅವರ ನಡೆಯಿಂದ ೧೭ ವಲಸಿಗರು ನಂತರ ನಂಬಿಕೆ ಕಳೆದುಕೊಂಡರು. ಇದೀಗ ಮುರುಗೇಶ್ ನಿರಾಣಿ, ಬೆಲ್ಲದ ಅವರಂತಹ ಉತ್ತರ ಕರ್ನಾಟಕದ ರಾಜಕಾರಣಿಗಳನ್ನಿಟ್ಟುಕೊಂಡು ಪಟ್ಟು ಕಟ್ಟುವ ಪ್ರಯತ್ನ ನಡೆಸಿ ಮಣ್ಣು ಮುಕ್ಕಿದ್ದಾರೆ. ಈಗ ಅವರಿಗೆ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ.