Wednesday, 11th December 2024

ರಂಗ ತಾಣವಾಗಬೇಕಿದ್ದ ಕಲಾಗ್ರಾಮ ಈಗ ಸ್ಮಶಾನ !

ಅಭಿವ್ಯಕ್ತಿ

ಡಾ.ಡಿ.ಸಿ.ನಂಜುಂಡ

ಕೆಲವೊಮ್ಮೆ ಹೀಗೆ ಆಗುತ್ತದೆ. ಯಾವುದೋ ಒಂದು ಮಹತ್ವದ ಕಾರಣದಿಂದ ಆರಂಭವವಾಗುವ ಕೆಲಸಗಳು ಬೇರೆ ಯಾವುದೋ
ಕೆಲಸಕ್ಕೆ ಬಳಕೆಯಾಗುತ್ತದೆ. ಕೆಲವೊಂದು ಅನಿವಾರ್ಯ, ಕೆಲವೊಂದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತದೆ. ಸಾವು ಕೂಡ ಮೂಲಭೂತ ಪ್ರಕ್ರಿಯೆ.

ಸತ್ತ ನಂತರ ಗೌರವಯುತವಾಗಿ ಆ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಬೇಕಾಗಿರುವುದು ಅಷ್ಟೇ ಮುಖ್ಯ ಕೂಡ. ಪಶ್ಚಿಮದ ದೇಶಗಳಲ್ಲಿ ಖಾಸಗಿಯವರು ಸ್ಮಶಾನಗಳ ನಡೆಸುವುದು ಬಹಳ ಸಹಜವಾದ ವ್ಯವಸ್ಥೆ. ಆದರೆ ನಮ್ಮಲ್ಲಿ ಅವ್ಯವಸ್ಥೆಯನ್ನು ಕೂಡ ಸರಿಯಾಗಿ ಬಂದಿಲ್ಲ. ಸಾಮಾನ್ಯವಾಗಿ ಆಯಾ ಜಿಲ್ಲೆಯ ಸ್ಥಳೀಯ ಆಡಳಿತಗಳು ಸ್ಮಶಾನಗಳನ್ನು ನಿರ್ವಹಿಸುತ್ತವೆ. ಈ ಸಂಬಂಧ
ಇಲ್ಲೊಂದು ಉದಾಹರಣೆ ಇದೆ ನೋಡಿ.

ಅದು 2001ರ ಆಸುಪಾಸು. ರಂಗ ಚಟುವಟಿಕೆಗಳನ್ನು ನಿರ್ವಹಿಸಲು ಬೆಂಗಳೂರಿನ ಹೊರವಲಯದಲ್ಲಿ ದೊಡ್ಡಮಟ್ಟದ ಜಾಗವನ್ನು ಹುಡುಕುತ್ತಿದ್ದ ಕಾಲ. ಆಗ ಅಂದಿನ ಸರಕಾರದ ಕಣ್ಣಿಗೆ ಬಿದ್ದಿದ್ದು ಬೆಂಗಳೂರಿನ ಮಲ್ಲತ್ತಹಳ್ಳಿಯ ಅಂದರೆ ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಕ್ಯಾಂಪಸ್‌ನ ಉತ್ತರದಲ್ಲಿರುವ ಸುಮಾರು 32-35 ಎಕರೆ ಜಾಗ. ಅಂದಿನ ಕಾಲಕ್ಕೆ ಇದು ಹೆಚ್ಚುಕಡಿಮೆ ಅರೆಬರೆ ಯಾಗಿದ್ದ ಒಂದು ರೀತಿಯ ಕಾಡಿನಂಥ ಪ್ರದೇಶ.

ರಂಗ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಜಾಗವನ್ನು ಮೀಸಲಿಟ್ಟು ಅದಕ್ಕೆ ಕಲಾಗ್ರಾಮ ಎಂದು ಹೆಸರು ಕೊಟ್ಟು ಅಲ್ಲಿ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದುಕೊಂಡಂತೆ ಸಂಪೂರ್ಣ ಜಾಗವನ್ನು ಬಳಸಿಕೊಳ್ಳಲು ಆಗದಿದ್ದರೂ ಒಂದು ಹಂತದವರೆಗೆ ಈ ಜಾಗವನ್ನು ವಿವಿಧ ರೀತಿಯ ರಂಗ ಚಟುವಟಿಕೆಗಳಿಗೆ ಬಳಸಿಕೊಳ್ಳ ಲಾಗಿತ್ತು. ಅಲ್ಲದೆ ಸುಮಾರು ಹತ್ತು ಹದಿನೈದು ವರ್ಷಗಳ ಕಾಲ ಅಲ್ಲಿ ಒಂದಿಷ್ಟು ರಂಗ ಚಟುವಟಿಕೆಗಳು ನಡೆದವು. ಆದರೆ
ಕ್ರಮೇಣ ವಿವಿಧ ಕಾರಣಗಳಿಂದ ಇಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾಗತೊಡಗಿತ್ತು.

ಇದೇ ಜಾಗದಲ್ಲಿ ಇಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ನಾಟಕ ಶಾಲೆ, ಇಂದಿರಾ ಗಾಂಧಿ ಕಲಾಸಂಘ ಇದರ ಆಸುಪಾಸಿನಲ್ಲಿದೆ. ಈ ಮಧ್ಯೆ ಕೆಲವು ವರ್ಷಗಳ ಹಿಂದೆ ಕಲಾಗ್ರಾಮದಲ್ಲಿ ಒಂದು ಅಗ್ನಿ ಆಕಸ್ಮಿಕ ನಡೆದು ಬಹಳ ಸುದ್ದಿಯಾಗಿತ್ತು. ಇತ್ತೀಚಿಗೆ ಸರಕಾರ ಸುಮಾರು 75 ಲಕ್ಷ ಖರ್ಚು ಮಾಡಿ ಅದನ್ನು ದುರಸ್ತಿ ಮಾಡಲಾಗಿದೆ. ರಂಗಚಟುವಟಿಕೆ ಬಿಟ್ಟು, ಬೇಡದೇ ಇರುವ ಕೆಲಸಗಳು ನಡೆಯುತ್ತಿರುವುದನ್ನು ಗಮನಿಸಿದ ಕಲಾಪ್ರಿಯರು ಸರಕಾರದ ಗಮನವನ್ನು ಇತ್ತಕಡೆ ಸೆಳೆಯಲು ಪ್ರಾರಂಭಿಸಿ ದರು.

ಒಂದು ಹಂತದಲ್ಲಿ ಸರಕಾರ ಖಾಸಗಿಯವರ ಸಹಾಯದಿಂದ ಈ ಕಲಾಗ್ರಾಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಪ್ರಯತ್ನವನ್ನು ಪ್ರಾರಂಭಿಸಿತು ಎನ್ನುತ್ತಾರೆ ತಜ್ಞ ಶ್ರೀ ಮುರಳಿಕೃಷ್ಣ . ಅದಕ್ಕಾಗಿ ಕಳೆದ ಬಜೆಟ್‌ನಲ್ಲಿ ಸ್ವಲ್ಪ ಹಣವನ್ನು ಮೀಸಲಿಡಲಾಗಿತ್ತು. ಅದಕ್ಕಾಗಿ ಒಂದು ರಂಗ ತಜ್ಞರ ತಂಡವನ್ನು ರಚಿಸಿ ಕಲಾಗ್ರಾಮಕ್ಕೆ ಅಂತಾರಾಷ್ಟ್ರೀಯ ಪ್ರವಾಸ ತಾಣವನ್ನಾಗಿ ಮಾಡುವ ಆಲೋಚನೆ ಸಹ ಇದೆ ಎನ್ನಲಾಗಿದೆ. ಅಲ್ಲಿಗೆ ಆಯೋಜನೆ ಅರ್ಧಕ್ಕೆ ನಿಂತಿದೆ. ಆದರೆ ರಂಗ ತಾಣ ವಾಗಿ ಬೇಕಾಗಿದ್ದ ಈ ಕಲಾಗ್ರಾಮ ಕ್ರಮೇಣ ಒಂದು ಸ್ಮಶಾನವಾಗಿ ಪರಿವರ್ತನೆಯಾಗಬಹುದು ಎನ್ನುವ ಕಲ್ಪನೆ ಯಾರಿಗೂ ಸಹ ಇರಲಿಲ್ಲ.

ಪ್ರಮುಖ ವ್ಯಕ್ತಿಗಳ ಮತ್ತು ಸಾಹಿತಿಗಳ ಅಂತ್ಯಸಂಸ್ಕಾರವನ್ನು ಈ ಕಲಾಗ್ರಾಮದಲ್ಲಿ ನಡೆಸಲು ಆರಾಮವಾಗಿ ವರ್ಷಗಳೇ ಕಳೆದುಹೋದವು. ಇದೆಲ್ಲ ಹೇಗೆ ಶುರುವಾಯಿತು ಎನ್ನುವುದೇ ಇಂದಿಗೂ ಸೋಜಿಗ. ನಿಜ ಹೇಳಬೇಕೆಂದರೆ ದೇಶದ ಅತ್ಯಂತ ಉನ್ನತ ನಾಯಕರುಗಳ ಶವಗಳ ಅಂತ್ಯಸಂಸ್ಕಾರ ವಿಚಾರದಲ್ಲಿ ಬಹಳಷ್ಟು ವರ್ಷಗಳಿಂದ ಜಟಾಪಟಿ ನಡೆಯುತ್ತಲೇ ಇದೆ. ಮಾಜಿ ಪ್ರಧಾನಿ ಶಾಸೀಯವರ ಅಂತ್ಯಸಂಸ್ಕಾರದಲ್ಲಿ ಸಹ ಜಾಗದ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಅಂದು ಉಂಟಾಗಿತ್ತು. ದೇಶದ ಇಬ್ಬರು ಪ್ರಧಾನಮಂತ್ರಿಗಳ ಅಂತ್ಯ ಸಂಸ್ಕಾರದ ಸಮಯದಲ್ಲಿ ಚಂದನ ಮತ್ತು ಗಂಧದ ಕಟ್ಟಿಗೆಯನ್ನು ಬಳಸಿದ್ದು ಅಂದಿನ ಕಾಲಕ್ಕೆ ಭಾರಿ ವಿವಾದವನ್ನು ಉಂಟುಮಾಡಿತ್ತು.

ಇದನ್ನು ಪರಿಸರ ತಜ್ಞರು ತೀವ್ರವಾಗಿ ವಿರೋಧಿಸಿದ್ದರು. ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಸಂಸ್ಕಾರ ವಿಚಾರದಲ್ಲಿ ಅವರು
ತೀರಿಕೊಂಡ ಹತ್ತು ವರ್ಷ ಗಳಾದರೂ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಗೊಂದಲಗಳು ಮುಗಿದಿಲ್ಲ. ಸದ್ಯ ಮೈಸೂರು ಎಚ್.ಡಿ ಕೋಟೆ ರಸ್ತೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡಲಾಗಿದೆ.

ಡಾ. ರಾಜಕುಮಾರ್ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಬಹಳಷ್ಟು ಗೊಂದಲ ಉಂಟಾಗಿತ್ತು. ಇದರ ಮಧ್ಯೆ ಸಮಾಜಮುಖಿ ನಾಯಕರು, ಸಾಹಿತಿಗಳು ತುಂಬ ಸರಳವಾಗಿ ತಮ್ಮ ಅಂತ್ಯಸಂಸ್ಕಾರ ವಾಗಬೇಕೆಂದು ತಾವು ಬದುಕಿದ್ದಾಗಲೇ ಸಂಬಂಧಿಕರಿಗೆ ತಿಳಿಸಿ ಅದೇ ರೀತಿ ಆಗಿರುವ ಉದಾಹರಣೆಗಳು ನಮ್ಮಲ್ಲಿ ಬಹಳ. ಇನ್ನು ಕೆಲವರು ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ
ಅಧ್ಯಯನಕ್ಕೆ ನೀಡಿದ ಉದಾರಣೆಗಳು ಬೇಕಾದಷ್ಟಿದೆ. ಆದರೆ ಇತ್ತೀಚಿಗೆ ಕಲಾಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡುವ ರೂಢಿ ಆರಂಭವಾಗುವುದನ್ನು ಇಲ್ಲಿ ಗಮನಿಸಬೇಕಾಗಿದೆ.

2013ರಲ್ಲಿ ರಾಷ್ಟ್ರ ಕವಿ ಶಿವರುದ್ರಪ್ಪ ಅವರನ್ನು ಸಹ ಕಲಾಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಬದುಕಿದ್ದಾಗ ಪ್ರಗತಿಪರ ಚಿಂತನೆಗಳನ್ನು ರೂಢಿಸಿಕೊಂಡು ಕೊನೆಗೆ ತಮ್ಮ ಜಾತಿ ಅನುಸಾರವಾಗಿಯೇ ಅಂತ್ಯಸಂಸ್ಕಾರವಾಗಬೇಕೆಂದು
ಇಚ್ಛಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು. ಆರ್. ಅನಂತಮೂರ್ತಿ ಅವರನ್ನು ಚಂದನದ ಕಥೆ ಗಳೊಂದಿಗೆ ಕಲಾ ಗ್ರಾಮದಲ್ಲಿ 2014ರಲ್ಲಿ ಸಂಸ್ಕಾರ ಮಾಡಲಾಯಿತು. ಇತ್ತೀಚಿಗೆ ನಿಧನರಾದ ಜನಪ್ರಿಯ ಸಾಹಿತಿ ಸಿದ್ಧಲಿಂಗಯ್ಯನವರ
ಅಂತ್ಯ ಸಂಸ್ಕಾರ ಸಹ ಇದೇ ಕಲಾಗ್ರಾಮದಲ್ಲಿ ನಡೆಯಿತು.

ಕಲಾಗ್ರಾಮ ಕ್ರಮೇಣ ಸ್ಮಶಾನ ವಾಗುವುದನ್ನು ಗಮನಿಸಿದ ಸಾಹಿತಿ ಹಂಪ ನಾಗರಾಜಯ್ಯ, ದಿವಂಗತ ಗೌರಿ ಲಂಕೇಶ್, ಪಾಟೀಲ್ ಪುಟ್ಟಪ್ಪನವರು ಕೆಲವು ವರ್ಷಗಳ ಹಿಂದೆ ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದರು. ಆದರೆ ಅದ್ಯಾವುದೂ ಉಪಯೋಗಕ್ಕೆ
ಬಂದಿಲ್ಲ. ಈ ಕಾರಣದಿಂದ ಕಲಾಗ್ರಾಮದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಮತ್ತು ಇಂದಿರಾ ಗಾಂಧಿ ಕಲಾ ಕೇಂದ್ರಕ್ಕೆ ನಿಗದಿಪಡಿಸಿರುವ ಜಾಗ ಕಡಿಮೆ ಯಾಗುತ್ತದೆ ಎನ್ನುವ ಅಪವಾದ ಇದೆ.

ಸ್ಮಶಾನ ಎಂದರೆ ಹೆದರುವ ನಮ್ಮ ಜನ ಇನ್ನು ಮುಂದೆ ಅಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತವೆ ಎಂದರೆ
ಬರುತ್ತಾರೆಯೇ? ಇದರ ಬದಲಾಗಿ ಖ್ಯಾತ ರಾಜಕೀಯ ನಾಯಕರು ಮತ್ತು ಸಾಹಿತಿಗಳ ಅಂತ್ಯಸಂಸ್ಕಾರವನ್ನು ಅವರ ಹುಟ್ಟೂರಿ ನಲ್ಲಿ ನಡೆಸಿದರೆ (ಉದಾಹರಣೆಗೆ ರಾಷ್ಟ್ರಕವಿ ಕುವೆಂಪು) ಆ ಊರಿಗೆ ಭೂಪಟದಲ್ಲಿ ಒಂದು ಪ್ರಮುಖ ಸ್ಥಾನ ಸಿಗುತ್ತದೆ ಮತ್ತು ಪ್ರವಾಸಿತಾಣವಾಗಿ ಬದಲಾಗುತ್ತದೆ. ಇನ್ನು ಈ ಸಮಸ್ಯೆಯ ಇನ್ನೊಂದು ಮುಖವನ್ನು ನೋಡುವುದಾದರೆ 2011ರ ಜನಗಣತಿ ವರದಿ ಪ್ರಕಾರ ಇಂದಿಗೂ ಎಷ್ಟೋ ನಗರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸರಿಯಾದ ಸ್ಮಶಾನಗಳು
ಇಲ್ಲ.

ಕರ್ನಾಟಕ ಭೂಕಂದಾಯ ಸೆಕ್ಷನ್ 71ನೇ ಪ್ರಕಾರ ಪ್ರತಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನಗಳಿಗೆ ಪ್ರತ್ಯೇಕ ಜಾಗವನ್ನು ಇರಿಸಬೇಕಾಗುತ್ತದೆ. ಆದರೆ ಈ ಕಾಯಿದೆ ಕೇವಲ ಕಾಯಿದೆಯಾಗಿ ಮಾತ್ರ ಉಳಿದುಕೊಂಡಿದೆ. ಅದು ಸರಿಯಾಗಿ ಜಾರಿಗೆ ಬಂದಿರು ವುದು ಅನುಮಾನವೇ. ಇನ್ನು ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನದ ಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳಿಗೆ ಏನು ಕಡಿಮೆ ಇಲ್ಲ.

2014ರ ಸರಕಾರದ ಆದೇಶದ ಪ್ರಕಾರ ಪ್ರತಿ ವ್ಯಕ್ತಿಗೆ ಕನಿಷ್ಠ 60 ಅಡಿ ಜಾಗವನ್ನು ಶವ ಸಂಸ್ಕಾರಕ್ಕಾಗಿ ನೀಡಬೇಕೆಂದು ನಿಯಮವಿದೆ. ಆದರೆ ಆದೇಶವು ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಜಾಗ ಇಲ್ಲದಿರುವ ಕಡೆ ಮಾರುಕಟ್ಟೆ ದರದಲ್ಲಿ ಜಾಗವನ್ನು
ಖರೀದಿಸಲು ಸಹ ಜಿಲ್ಲಾಧಿಕಾರಿಗಳಿಗೆ ಹಲವು ವರ್ಷಗಳ ಹಿಂದೆಯೇ ಸರಕಾರ ಆದೇಶ ನೀಡಿದೆ. ಅದು ಕೂಡ ಅಷ್ಟಾಗಿ ಏನು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಸ್ಮಶಾನಕ್ಕೆಂದು ಗುರುತು ಮಾಡಿದ ಪ್ರದೇಶಗಳನ್ನು ಹುಡುಕಬೇಕಾದ
ಪರಿಸ್ಥಿತಿ ಇದೆ ಎನ್ನಲಾಗಿದೆ! ಅಲ್ಲದೇ ಸ್ಮಶಾನಗಳು ಹೀಗೆ ರಾತ್ರೋರಾತ್ರಿ ಮಾಯವಾಗುವುದರಲ್ಲಿ ರಿಯಲ್‌ಎಸ್ಟೇಟ್ ಕುಳಗಳ ಕೈವಾಡ ಸಹ ಖಂಡಿತವಾಗಿ ಇರುತ್ತದೆ.

ಹಳ್ಳಿಗಳಲ್ಲಿ ಶ್ರೀಮಂತರು ತಮ್ಮ ಸ್ವಂತ ಜಮೀನುಗಳಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿ ಸಮಾಧಿಗಳನ್ನು ಕಟ್ಟುತ್ತಾರೆ. ಹೆಚ್ಚಿನ
ಬಡಜನರಿಗೆ ಇಂದಿಗೂ ಸಹ ಸಾರ್ವಜನಿಕ ಸ್ಮಶಾನವೇ ಗತಿ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಚಿತಾಗಾರಗಳು ಎಲ್ಲೂ ಇಲ್ಲ. ಇನ್ನು ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಅಂತಿಮ ಸಂಸ್ಕಾರ ಮಾಡಲು ಕಿಲೋಮೀಟರ್ ಗಟ್ಟಲೆ ಶವಗಳನ್ನು ಕೊಂಡೊಯ್ಯ
ಬೇಕಾದ ಸ್ಥಿತಿ ಇದೆ. ಸ್ವಲ್ಪ ದಿನಗಳ ಹಿಂದೆ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ದೋಣಿಯಲ್ಲಿ ಶವವನ್ನು ಹಾಕಿಕೊಂಡು ನದಿಯ ಇನ್ನೊಂದು ಬದಿಗೆ ತಂದು ಅಂತ್ಯಸಂಸ್ಕಾರ ಮಾಡಿದ್ದು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಇಂಥ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಯಾರಾದ್ರೂ ಸಾವಿಗೀಡಾದರೆ ಬದುಕಿರುವ ವರಿಗಿಂತ ಶವಗಳಿಗೆ ಕಷ್ಟ ಜಾಸ್ತಿ!

ಬೆಂಗಳೂರಿನಲ್ಲಿ ಬಿಬಿಎಂಪಿ ನಿರ್ವಹಿಸುತ್ತಿರುವ ಚಿತಾಗಾರಗಳ ಸಂಖ್ಯೆ ಕಡಿಮೆ ಇದೆ. ಕೆಲವು ಚಿತಾಗಾರ ನಡೆಸುವವರ ಪ್ರಕಾರ ಕಳೆದ ಬಾರಿಯೇ ಸರಕಾರ ಸರಿಯಾಗಿ ಅವರ ಬಾಕಿ ಹಣವನ್ನು ನೀಡಿಲ್ಲ. ಹಾಗಾಗಿ ಗುತ್ತಿಗೆ ಪಡೆದವರು ಕೆಲಸಗಾರರಿಗೆ
ಸಮಯಕ್ಕೆ ಸರಿಯಾಗಿ ಸಂಬಳವನ್ನು ಸಹ ನೀಡಿಲ್ಲ. ಇನ್ನು ಕೆಲವು ಚಿತಾಗಾರಗಳ ಕೆಲಸಗಾರರಿಗೆ ಕಳೆದ ಒಂದು ವರ್ಷ ದಿಂದಲೂ ಅವರಿಗೆ ಬರಬೇಕಾದ ಹಣ ಸರಕಾರದಿಂದ ಇನ್ನೂ ಸಹ ಬಂದಿಲ್ಲ.

ಬೆಂಗಳೂರಿನಲ್ಲಿ ಒಟ್ಟು 280 ಮಂದಿ ವಿವಿಧ ಚಿತಾಗಾರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಇವರಿಗೆ ಎಲ್ಲಾ ಕಳೆದು ತಿಂಗಳಿಗೆ ಸುಮಾರು 10500 ಸಂಬಳ ಮಾತ್ರ ಬರುತ್ತದೆ ಎನ್ನಲಾಗಿದೆ. ಸರಕಾರದ ಕನಿಷ್ಠ ವೇತನ ಕಾಯಿದೆ
ಯನ್ನು ಇಲ್ಲಿ ಸಾರಸಗಟಾಗಿ ನಿರ್ಲಕ್ಷ್ಯಮಾಡಲಾಗಿದೆ ಎನ್ನಬಹುದು. ಏರುತಿರುವ ಜೀವನ ಮಟ್ಟಕ್ಕೆ ಇದು ಎಲ್ಲಿಗೆ ಸಾಕಾಗುತ್ತದೆ? ಮೃತಪಟ್ಟ ವ್ಯಕ್ತಿಗೆ ಗೌರವಯುತ ಅಂತ್ಯಸಂಸ್ಕಾರ ಎಂಬುದು ಆ ವ್ಯಕ್ತಿಯ ಮೂಲಭೂತ ಹಕ್ಕು ಎಂದು ಸರಕಾರ ಹೇಳುತ್ತದೆ.

ಈಗಲಾದರೂ ಸರಕಾರ ಚಿತಾಗಾರಗಳು ಮತ್ತು ಮತ್ತು ಗ್ರಾಮೀಣ ಪ್ರದೇಶಗಳ ಸ್ಮಶಾನದ ಬಗ್ಗೆಯೂ ಸ್ವಲ್ಪ ಗಮನ ನೀಡಿ,
ಅವುಗಳ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಪ್ರತಿ ಗ್ರಾಮದಲ್ಲೂ ಸ್ಮಶಾನಕ್ಕಾಗಿ ಜಾಗವನ್ನು ಗುರುತಿಸ ಬೇಕಾಗಿದೆ. ಅವುಗಳ ಒತ್ತುವರಿಯ ಕಡೆ ಗಮನ ನೀಡಬೇಕಾಗಿದೆ. ಪ್ರತಿ ತಾಲೂಕಿಗೊಂದು ವಿದ್ಯುತ್ ಚಿತಾಗಾರದ ಅವಶ್ಯಕತೆ ಇದೆ. ಗ್ರಾಮೀಣ
ಪ್ರದೇಶ ಗಳಲ್ಲಿ ಚಿತಾಗಾರಗಳ ನಿರ್ವಹಣೆಯನ್ನು ಖಾಸಗಿ ಯವರಿಗೆ ನೀಡಬಹುದಾಗಿದೆ. ಈ ಎಲ್ಲದರ ಕುರಿತು ಸಂಬಂಧ ಪಟ್ಟವರು ಈಗಲಾದರೂ ಎಚ್ಚೆತ್ತುಕೊಳ್ಳ ಬೇಕಾಗಿದೆ. ಏಕೆಂದರೆ ಎಲ್ಲರೂ ಒಂದಲ್ಲ ಒಂದು ದಿನ ಅಲ್ಲಿಗೆ ಹೋಗಲೇ
ಬೇಕಲ್ಲವೇ? ರಂಗ ಚಟುವಟಿಕೆ ಗಳಿಗೆ ಮೀಸಲಾಗಿದ್ದ ಕಲಾಗ್ರಾಮ ಅದಕ್ಕೆ ಮೀಸಲಾಗಿರುವುದು ಒಳ್ಳೆಯದು.

ಇದೇ ಕಲಾ ಗ್ರಾಮದಿಂದ ಇನ್ನಷ್ಟು ಹೊಸ ಪ್ರತಿಭೆಗಳು ಹುಟ್ಟಿ ಬರಲಿ. ಆದರೆ ಇದು ಒಂದು ದೊಡ್ಡಸ್ಮಶಾನ ಆಗದಿರಲಿ.