ಪ್ರಚಲಿತ
ಸೌಮ್ಯ ಗಾಯತ್ರಿ
ತಿಳಿಯಾದ ಮುಸ್ಸಂಜೆ ಗಾಳಿ ಬೀಸುತ್ತಿತ್ತು, ಮನೆಯ ಬಾಲ್ಕನಿ ಇಂದ ಸಂಜೆಯ ಸ್ಟ್ರಾಂಗ್ ಫಿಲ್ಟರ್ ಕಾಫಿ ಹೀರುತ್ತಾ ಧರೆಗೆ ತಂಪೆರೆಸುವ ಮಳೆಯನ್ನು ನೋಡು ನೋಡುತ್ತಿದ್ದಂತೆ ಮೊಬೈಲ್ ಫೋನ್ ರಿಂಗಾಯಿಸಿತು. ಅತ್ತ ಕಡೆಯಿಂದ ಅಣ್ಣನ ಧ್ವನಿ.
ಅವನೊಡನೆ ಮಾತನಾಡಿದ ತುಸು ನಿಮಿಷಗಳಲ್ಲಿ ಯೋಚನಾ ಲಹರಿ ಕಳೆದೆರಡು ವರ್ಷಗಳ ಹಿಂದಿನ ನಮ್ಮ ಪರಿಸ್ಥಿತಿಯೆಡೆಗೆ ಹರಿಯಿತು.
2019 ಡಿಸೆಂಬರ್‌ನಲ್ಲಿ ಟಿವಿಯಲ್ಲಿ ಹರಿದು ಬಂದ ಸುದ್ದಿ, ಚೀನಾದಲ್ಲಿ ಯಾವುದೋ ವೈರಸ್ ಅಂತೇ, ಜ್ವರ ಬಂತೆಂದರೆ ಅಷ್ಟೇ, ಭಗವಂತನ ಪಾದ ಸೇರಲಿಕ್ಕೆ ಅದು ಫ್ರೀ ಪಾಸ್ ಅಂತೆ ಎಂಬ ಗುಸು ಗುಸು. ವಾಟ್ಸ್‌ಆಪ್ ನಲ್ಲಿ ಅದರದೇ ಶೈಲಿಯ ಜೋಕುಗಳು, ಯಾರ ಬಾಯಲ್ಲಿ ನೋಡಿದರೂ ಇದೆ ಸುದ್ದಿ. ಥೂ, ಕಚಡಾಗಳು. ಹಾಳು ಮೂಳು ತಿಂತಾವೆ. ಕಪ್ಪೆ, ಹಾವು ಜಿರಳೆ ಅಂತ
ತಿಂದರೆ ಇನ್ನೇನಾಗುತ್ತೆ ಅಂತ ನಮ್ಮ ಹಿರಿಯರ ಮಾತಿನ ಹರಿವು ಒಂದೆಡೆಯಾದರೆ, ಚೀನಾದವರು ಅಸಾಮಾನ್ಯರು, ತಮ್ಮ ನಾಡಿನ ಜನಸಂಖ್ಯೆ ಇಳಿಸಲು ಅವರೇ ಏನೋ ಮಾಡಿರಬೇಕು ಒಂದು ಹುಸಿ ಕಾಯಿಲೆಯ ಸೃಷ್ಟಿ ಎಂಬ ವಾದ ಮತ್ತೊಂದೆಡೆ.
ಹೀಗೆ ನೋಡ ನೋಡುತ್ತಿದ್ದಂತೆ ಯುರೋಪ್, ಅಮೆರಿಕದಂತಹ ಬಲಾಢ್ಯ ಅಭಿವೃದ್ಧಿ ಹೊಂದಿದ ಎಲ್ಲ ರಾಷ್ಟ್ರಗಳೂ ಈ ಯಾವುದೋ ಚೀನಾದ ವೈರಾಣುವಿಗೆ ಶರಣಾಗಿ ಸಾವು ನೋವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಎದುರಿಸಲು ಹರ ಸಾಹಸ
ಪಡುತ್ತಾ ಹೈರಾಣಾಗಿ ಹೋದದ್ದು ಎಲ್ಲರಿಗೂ ತಿಳಿದೇ ಇದೆ.
ಅಣ್ಣನ ಕರೆಗೂ, ಚೀನಾದ ವೈರಾಣುವಿನ ಯೋಚನೆಗೆ ಏನು ಸಂಬಂಧ ಎಂದು ಅನಿಸಿತೇ ? ಕರೆ ಮಾಡಿದ ಅಣ್ಣ ನಮಗೆ ಬಲು ಪರಿಚಿತರೊಬ್ಬರ ವಿಷಯವಾಗಿ ತಿಳಿಸಿದ ವಿಚಾರ ಕ್ಷಣಕಾಲ ಭೂತಕಾಲಕ್ಕೆ ಭೇಟಿ ನೀಡುವಂತೆ ಮಾಡಿತು. ವರ್ತಮಾನದಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸಿರುವುದಂತೂ ಅಲ್ಲಗಳೆಯುವಂತಿಲ್ಲ. ನಮಗೆ ಪರಿಚಿತರೊಬ್ಬರ ಸುಂದರ ಚೊಕ್ಕ ಸಂಸಾರ. ಗಂಡ – ಹೆಂಡತಿ, ಆರತಿಗೊಬ್ಬಳು ಮತ್ತು ಕೀರ್ತಿಗೊಬ್ಬ ಎಂಬಂತೆ ಇಬ್ಬರು ಮಕ್ಕಳು. ಮನೆಯ ಯಜಮಾನರು ಸ್ವಂತ ಉದ್ಯೋಗಿ.
2-3 ಹೋಟೆಲ್ ಮಾಲೀಕರು. ಹೆಂಡತಿ ಗೃಹಿಣಿ. ಮಗಳು PUC ಓದುತ್ತಿದ್ದರೆ ಮಗ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ಸುಂದರ ಸಂಸಾರ. ಭಗವಂತ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ. ಇಂತಹ ಸುಖಿ ಸಂಸಾರಕ್ಕೆ ಯಾರ ದೃಷ್ಟಿ ತಾಗಿತೋ? ವಾರದ
ಹಿಂದೆ ಮನೆಯಲ್ಲಿ ಎಲ್ಲಾ ಗ್ಯಾಸ್ ವಾಸನೆ ಬರುತ್ತಿರುವುದಾಗಿ ಹೆಂಡತಿ ಹೇಳಿದಾಗ, ಅದು ತಮ್ಮ ಮನೆಯ ಗ್ಯಾಸ್ ಗೀಜರ್‌ನಿಂದ ಎಂಬುದನ್ನು ಅರಿತುಕೊಳ್ಳಲು ಬಹಳ ಸಮಯವೇನೂ ಬೇಕಾಗಲಿಲ್ಲ.
ಕೂಡಲೇ ಮನೆಯ ಕಿಟಕಿಗಳನ್ನು ತೆರೆಯುವಂತೆ ಮಕ್ಕಳಿಗೆ ತಿಳಿಸಿ ಯಾವುದೇ ಸ್ವಿಚ್ ಅನ್ನು ಹಾಕಬೇಡಿ ಎನ್ನುವಷ್ಟರಲ್ಲಿ ದೇವರ ಕೋಣೆಯಲ್ಲಿ ಉರಿಯುತ್ತಿದ್ದ ಎಣ್ಣೆ ದೀಪದ ಸ್ಪರ್ಶಕ್ಕೆ ಭಗ್ಗನೆ ಬೆಂಕಿಯ ಕೆನ್ನಾಲಗೆ ಮನೆಯ ಎಲ್ಲಾ ಸದಸ್ಯರನ್ನೂ ಆವರಿಸಿತ್ತು. ಬೆಂಕಿಯಿಂದ ಆವೃತರಾದ ಎಲ್ಲರೂ ಹೇಗೋ ಆಸ್ಪತ್ರೆ ಸೇರಿದರು. ಮೊದಲಿಗೆ ಮಗನಿಗೆ ಪ್ರಾಣಾಪಾಯ ಇಲ್ಲ ಎಂಬ ಸುದ್ದಿ
ಬಂದಿತು. ಮಿಕ್ಕವರೆಲ್ಲರ ತಪಾಸಣೆ ನಡೆಯುತ್ತಿತ್ತು.
ಇದಾಗಿ 3ನೇ ದಿನ ಮಗ ಕೊನೆಯುಸಿರೆಳೆದದ್ದು ಅತಿ ಘೋರವಾದ ಸುದ್ದಿ. ಅದರ ಎರಡು ದಿನದ ನಂತರ ಮಗಳು, ಅದಾದ ಒಂದೇ ದಿನಕ್ಕೆ ಮನೆಯ ಯಜಮಾನ ಅಸು ನೀಗಿದ್ದು ಈಗ ಮನೆಯ ಗೃಹಿಣಿ, ತಾಯಿ ಮಾತ್ರ ಒಬ್ಬಂಟಿಗಳಾಗಿ ಜೀವನದೊಂದಿಗೆ ಹೋರಾಟ ನಡೆಸುತ್ತಿದ್ದಾಳೆ. ಪಾಪ ಆ ತಾಯಿಗೆ ಯಾವ ವಿಚಾರವೂ ತಿಳಿದಿಲ್ಲ. ಕೋಟ್ಯಾಂತರ ರುಪಾಯಿ ಆಸ್ತಿಯನ್ನು
ಯಾರಿಗಾಗಿ ದುಡಿದು ಬಿಟ್ಟು ಹೋದರು ಆ ಪುಣ್ಯಾತ್ಮ? ಗಂಡ ಮಕ್ಕಳನ್ನು ಕಳೆದು ಕೊಂಡು ಈ ತಾಯಿ ಏನು ಮಾಡುತ್ತಾಳೆ? ಹಣ ಆಸ್ತಿ ಸತ್ತವರನ್ನು ಪುನರ್‌ಜೀವಕ್ಕೆ ಎಬ್ಬಿಸಲು ಸಾಧ್ಯವೇ? ಕಳೆದೆರಡು ವರ್ಷಗಳಲ್ಲಿ ನಮ್ಮ ಜೀವನ ಎಷ್ಟು ಬದಲಾಗಿದೆ.
ಶಾಲೆಗೆ ಮೊಬೈಲ್ ಫೋನ್ ತರಬಾರದು ಎಂಬ ನಿಯಮ ಜಾರಿಯಲ್ಲಿತ್ತು. ಆದರೀಗ ಶಾಲೆಯೇ ಮೊಬೈಲ್ ಫೋನ್‌ನಲ್ಲಿ
ಬಂದಿಳಿದಿದೆ. ನೆಂಟರು, ಬಂಧುಗಳು ಮನೆಗೆ ಬರುವರೆಂದರೆ ಇಂತಹ ಸಂತಸದ ವಿಷಯ. ಇಂದು ಯಾರೂ ಯಾರ ಮನೆಗೂ ಭೇಟಿ ನೀಡುತ್ತಿಲ್ಲ. ಒಬ್ಬರೊನ್ನೊಬ್ಬರು ಆತ್ಮೀಯವಾಗಿ ಹತ್ತಿರ ಕುಳಿತು ಮಾತನಾಡಲೂ ಆಗದಂತಹ ಅಸಮರ್ಥ ಅಸಹಾಯಕ ಸ್ಥಿತಿಯಲ್ಲಿ ಬದುಕುವ ಸನ್ನಿವೇಶ ನಮ್ಮ ಸುತ್ತಮುತ್ತಲದಾಗಿದೆ ಎಂದರೆ ಯೋಚಿಸಿ ನೋಡಿ ನಾವು ಎತ್ತ ಸಾಗುತ್ತಿದ್ದೇವೆ ಎಂದು. ಮಾಸ್ಕ್, ಸಾನಿಟೈಜರ್, ಸಾಮಾಜಿಕ ಅಂತರ ಹೀಗೆ ಇದರ ಸುತ್ತಲೇ ನಮ್ಮ ಬದುಕು ತಿರುಗುತ್ತಿದೆ.
ಮಕ್ಕಳು ಶಾಲೆಯನ್ನು ನೋಡಿ ವರ್ಷಗಳೇ ಆಯಿತು, ಪರೀಕ್ಷೆಗಳು ರzಗಿವೆ, ಆನ್ ಲೈನ್ ಕಲಿಕೆಯೇ ಈಗ ವಿದ್ಯಾಭ್ಯಾಸದ ನವ ವಿಧಾನವಾಗಿ ಹೊರ ಹೊಮ್ಮಿದೆ. ಮನೆಯೇ ಕಚೇರಿಗಳಾಗಿ, ಎಲ್ಲರೂ ಲ್ಯಾಪ್‌ಟಾಪ್, ಕಂಪ್ಯೂಟರ್‌ಗೆ ಜೋತು ಬಿದ್ದು ಮನೆಯ
ಉಳಿಯುವ ಕಾಲ ಬಂದಿದೆ. ಇದೆಲ್ಲ ಎಂದು ಸಹಜ ಸ್ಥಿತಿಗೆ ಹಿಂದಿರುಗುವುದೋ ಆ ಭಗವಂತನೇ ಬಲ್ಲ. ಈ ಕರೋನಾ ಅನೇಕರ ಜೀವನದಲ್ಲಿ ವಿಧ ವಿಧವಾದ ರೂಪಾಂತರಿಯಾಗಿ ಆಟವಾಡಿರುವುದುಂಟು.
ಬಹಳಷ್ಟು ಜನರಿಗೆ ಜೀವನದ ಮೌಲ್ಯವನ್ನು, ಅದರ ಪ್ರಾಮುಖ್ಯತೆಯನ್ನು ಕಲಿಸಿದೆ ಎಂದರೆ ತಪ್ಪಾಗಲಾರದು. ಈ ಸಾಂಕ್ರಾ ಮಿಕವು ನಮ್ಮ ಆದ್ಯತೆಗಳನ್ನು ಪುನಃ ಯೋಚಿಸುವಂತೆ ಮಾಡಿದೆ ಮತ್ತು ಜೀವನ ಎಷ್ಟು ಅಮೂಲ್ಯವಾದುದು ಎಂಬುದನ್ನು ನೆನಪಿನಲ್ಲಿಡಲು, ಜೀವನದಲ್ಲಿ ಸಣ್ಣ ಸಣ್ಣ ಸಂಗತಿಗಳನ್ನು ಪ್ರಶಂಸಿಸಲು ಇದು ಒಂದು ಜ್ಞಾಪನೆಯಾಗಿದೆ. ಪ್ರತಿದಿನ ನಮ್ಮ ಸುತ್ತ ಮುತ್ತ ಹಲವಾರು ಸಾವುಗಳು ಸಂಭವಿಸುತ್ತಿರುವುದರ ಮಧ್ಯೆ ಸುರಕ್ಷಿತವಾಗಿ ಜೀವನ ನಡೆಸುವ ವರದಾನ ನೀಡಿದ ಆ ಭಗವಂತ ನಿಗೆ ನಾವು ಕೃತಜ್ಞರಾಗಿರಬೇಕು.
ಅನೇಕ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿರುವುದನ್ನು ನೋಡುವಾಗ ನಮ್ಮ ಉತ್ತಮ ಆರೋಗ್ಯಕ್ಕಾಗಿ ನಾವು ಕೃತಜ್ಞರಾಗಿರ ಬೇಕು. ಎಷ್ಟೋ ಜನರು ಉದ್ಯೋಗ ಕಳೆದುಕೊಂಡು ಮನೆ, ಮಠ, ಜೀವನ, ಸಂತೋಷ ಎಲ್ಲವೂ ಇಲ್ಲದಂತವರಾಗು ತ್ತಿದ್ದಾರೆ. ನಮ್ಮ ಫ್ರಿಜ್ ನಲ್ಲಿರುವ ಆಹಾರಕ್ಕಾಗಿ ಮತ್ತು ಬೇಕಾದಾಗ ಆಹಾರವನ್ನು ಮನೆಗೆ ಕರೆಸಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇ ವೆಂದರೆ ಅದಕ್ಕೆ ನಾವು ನಿಜವಾಗಿಯೂ ಬಹಳ ಕೃತಜ್ಞರಾಗಿರಬೇಕು. ಈ ಸಾಂಕ್ರಾಮಿಕವು ನಮ್ಮ ಜೀವನವನ್ನು ಮರು ಮೌಲ್ಯ ಮಾಪನ ಮಾಡಲು ಮತ್ತು ನಮ್ಮ ಆದ್ಯತೆಗಳನ್ನು ನಿರ್ಣಯಿಸಲು ಸಹಾಯ ಮಾಡಿದೆ.
ಜೀವನವನ್ನು ಪ್ರತಿ ಹೆಜ್ಜೆಯಲ್ಲಿಯೂ ಆನಂದಿಸುತ್ತಾ, ಇರುವುದನ್ನು ಮರೆತು ಇಲ್ಲದರ ಬಗ್ಗೆ ಯೋಚಿಸುವ ಮತ್ತು ಕೊರಗುವ ಮನೋಭಾವನೆ ಬಿಟ್ಟು ನಮ್ಮಲ್ಲಿರುವ ಪ್ರತಿಯೊಂದನ್ನೂ ಪ್ರಶಂಸಿಸುವ ಮನೋಭಾವನೆ ನಮ್ಮಲ್ಲಿ ಕರೋನಾ ಮೂಡಿಸಿದೆ. ನಮ್ಮ ಸುತ್ತಮುತ್ತಲಿನ ಎಲ್ಲದಕ್ಕೂ ಸಂತೋಷ ಮತ್ತು ಸಕಾರಾತ್ಮಕವಾಗಿರುವ ಬದಲಾವಣೆಯನ್ನು ನಮ್ಮಲ್ಲಿ ತಂದಿದೆ ಈ ಕರೋನಾ. ಅದಲ್ಲದೆ ಎಲ್ಲರನ್ನು ಪ್ರೀತಿಸಲು, ಪ್ರೀತಿಸಿದವರನ್ನು ಕೇಳಲು, ಅವರ ಬಗ್ಗೆ ಕಾಳಜಿ ವಹಿಸಲು, ಎಲ್ಲರನ್ನು ಗೌರವಿ ಸಲು ಮತ್ತು ಕೈಲಾದಷ್ಟು ಸಹಾಯ ಮಾಡಲು ಕಲಿಸಿದೆ.
ಮನೆಯ ಮೇಲೆ ಮನೆಗಳು, ಆಸ್ತಿಗಳನ್ನು ಮಾಡುತ್ತಾ ಸಾಧ್ಯವಾದಷ್ಟು ತಮ್ಮ ಮನೆಯವರಿಗೆ, ಮಕ್ಕಳಿಗೆ ಹಣ ಆಸ್ತಿ ಸೇರಿಸುವತ್ತ ಗಮನ ಹರಿಸಿ ತಮ್ಮ ವರ್ತಮಾನವನ್ನು ಬಿಪಿ ಶುಗರ್ ಕಾಯಿಲೆಗಳಿಗೆ ಬಂದು ನೆಲೆಸುವಂತೆ ಮುಕ್ತ ಆಹ್ವಾನ ನೀಡಿ ಜೀವನ ಸಾಗಿಸುತ್ತಿದ್ದ, ಅನೇಕರು ಇಂದು ನೆಮ್ಮದಿಯಾಗಿರಲು ಒಂದು ಸೂರು, ದೇಹ ಕೈ ಕೊಟ್ಟಾಗ ಅದನ್ನು ಗುಣಪಡಿಸಲು ಬ್ಯಾಂಕಿನಲ್ಲಿ ಸಾಕಷ್ಟು ಹಣ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಚೈತನ್ಯ ಮತ್ತು ಎಲ್ಲದಿಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯ ನಮ್ಮ
ಪಾಲಿಗಿದ್ದರೆ ಸಾಕಪ್ಪ ಎನ್ನುವ ಹಂತ ತಲುಪಿದ್ದಾರೆ.
ಅಂದರೆ ಈ ಅಗೋಚರ ವೈರಾಣು ನಿಜಕ್ಕೂ ಬಹಳ ಪ್ರತಿಭಾಶಾಲಿ ಮತ್ತು ಪ್ರಭಾವಶಾಲಿ ಎಂದರೆ ತಪ್ಪಾಗಲಾರದು.
ಎರಡನೆಯ ಅಲೆಯಲ್ಲಿ ಬಹಳಷ್ಟು ಮಂದಿ ಮರಳಿ ಬಾರದ ಲೋಕಕ್ಕೆ ಕೊಚ್ಚಿ ಹೋಗಿರುವ ಈ ದುರಂತಮಯ ಸಮಯದಲ್ಲಿ ಅನೇಕರ ಮನೋಭಾವನೆಗಳು ಸಾಕಷ್ಟು ಬದಲಾಗಿವೆ. ನಾಳೆ ಎಂಬುದು ಅನಿರ್ದಿಷ್ಟವಾಗಿರುವ ಈ ಸಮಯದಲ್ಲಿ ಇರುವ ಸಮಯವನ್ನು ಮನೆ ಮಂದಿಯವರೊಡನೆ ಸಂತೋಷದಿಂದ ಕೂಡಿ ಕಳೆಯುವ, ಒಟ್ಟಿಗೆ ಕುಳಿತು ಊಟ ಮಾಡುವ, ಮೊಬೈಲ್ ಪೋನ್ ಎಂಬ ಅಡ್ಡಗೋಡೆಯನ್ನು ಸರಿಸಿ ಮುಖಾಮುಖಿ ಕುಳಿತು ಕಾಲ ಹರಟೆ ಮಾಡುವ ಎಂಬೆಲ್ಲ ಯೋಚನೆಗಳು, ಯೋಜನೆಗಳು ಕಾರ್ಯರೂಪಕ್ಕೆ ಬರುವ ಕಾಲ ಇದೇ ಇರಬಹುದು ಅನಿಸುತ್ತದೆ.
ಎದರೂ ಸುತ್ತಿ ಬರೋಣವೇ ಎಂದಾಕ್ಷಣ ವಿದೇಶ ಪ್ರವಾಸ ಮಾಡೋಣ ಎಂಬ ಮನಸ್ಥಿತಿ ಇದ್ದ ಹಲವಾರು ಜನರು ಇಂದು ನಮ್ಮ ಸುಂದರ ದೇಶದ ಪ್ರವಾಸ ಕೈಗೊಳ್ಳೋಣ. ಹತ್ತಿರದ ಅನೇಕ ಸ್ಥಳಗಳಿಗೆ ಕುಟುಂಬದವರೆಲ್ಲರೊಡನೆ ಭೇಟಿ ಕೊಟ್ಟು ಸುಮಧುರ ನೆನಪುಗಳನ್ನು ನಮ್ಮ ಜೀವನದ ಅನುಭವ ಪುಸ್ತಕದಲ್ಲಿ ಬಂಧಿಸೋಣ ಎಂಬ ಮನಸ್ಥಿತಿಗೆ ತಿರುಗಿದ್ದಾರೆ.
ಹೌದು ನಮ್ಮ ಸುತ್ತ ಮುತ್ತಲ ಪ್ರಸಕ್ತ ವಾತಾವರಣವನ್ನು ನೋಡಿದಾಗ Live Life King Size ಎಂಬ ಒಂದು ನುಡಿ ನೆನಪಿಗೆ ಬರುತ್ತದೆ. ಅದರೊಂದಿಗೆ ಎ ಓದಿದ ಒಂದು ಸಾಲು ಕಣ್ಣ ಮುಂದೆ ಬಂತು. Time has no Holiday and Dreams have no Expiry date ಎಷ್ಟು ನಿಜ ಅಲ್ಲವೇ? ಕೈಯಲ್ಲಿದ್ದ ಕಾಫಿ ತಣ್ಣಗಾಯಿತು, ಮತ್ತೆ ಕುಡಿಯುವ ಮನಸ್ಸು ಬರಲಿಲ್ಲ. ಹೀಗೆ ತಿಂಗಳ ಹಿಂದೆ ಯಷ್ಟೇ ಭೇಟಿ ಮಾಡಿದ್ದ ಸುಂದರ ಕುಟುಂಬ ಹೀಗೆ ಒಬ್ಬಂಟಿ ವ್ಯಕ್ತಿಯಿರುವ ಒಂದು ನಿರ್ಜೀವ ನಾಲ್ಕು ಗೋಡೆಗಳ ಗೂಡಾಗಿ ಮಾರ್ಪಟ್ಟಿತ ಎಂದು ಯೋಚಿಸಿ ಏನೋ ಒಂದು ರೀತಿಯ ಅವ್ಯಕ್ತ ದಾರುಣ ಕೂಗು ಹೃದಯಾಂತರಾಳದಿಂದ ಕೂಗಿದ ಹಾಗಾ ಯಿತು.
ಮುಂದಿರುವ ಮಸುಕಾದ ಭವಿಷ್ಯದ ನಾಲ್ಕು ದಿನದ ಈ ಬದುಕಿನಲಿ ಹೆಚ್ಚು ಹೆಚ್ಚು ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯುತ್ತಾ, ಸವಿ ನೆನಪುಗಳನ್ನು ಕಲೆ ಹಾಕುತ್ತಾ, ಜೀವನದ ಪ್ರತಿಯೊಂದು ಘಳಿಗೆಯನ್ನು ಸಂತೋಷದಿಂದ, ನಮ್ಮ ಕೈಲಾದಷ್ಟೂ ಪರರಿಗೆ ಸಹಾಯ ಮಾಡುತ್ತಾ ಒಂದು ರೀತಿಯ ಧನ್ಯತಾ ಭಾವದ ಜೀವನ ನಡೆಸೋಣ. ಎಷ್ಟೇ ಹಣವಿದ್ದರೂ ಅದರಿಂದ ಭಗವಂತ
ನೀಡಿದ ಜೀವನವನ್ನು ಕೊಂಡು ಕೊಳ್ಳಲು ಆಗದು ಎಂಬ ಸತ್ಯತೆಯನ್ನು ಅರಿತು ಕರೋನಾ ಕಲಿಸಿಕೊಟ್ಟ ಪಾಠಗಳನ್ನು ಚೆನ್ನಾಗಿ ಅರಿತು ಈ ಜೀವನವನ್ನು ಉತ್ತಮ ರೀತಿಯಲ್ಲಿ ಸಾಗಿಸೋಣ. ಆ ಭಗವಂತ ಎಲ್ಲರನ್ನೂ ಹೇರಳವಾಗಿ ಆಶೀರ್ವದಿಸಿ ಉತ್ತಮ ಬಾಳ್ವೆ ನೀಡಲು ಮುನ್ನಡೆಸಲಿ ಎಂಬ ಮನದಾಳದ ಹಾರೈಕೆ.