Friday, 13th December 2024

ಹಳ್ಳಿ ಹಕ್ಕಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗವಾ ?

ಬಿಜೆಪಿಯಿಂದ ಅಮಾನತು ಮಾಡುವ ಮಾತನಾಡುತ್ತಿರುವ ನಾಯಕರು
ಪಕ್ಷದ ಸದಸ್ಯತ್ವ ಕಳೆದುಕೊಂಡರೂ ಪರಿಷತ್ ಸ್ಥಾನಕ್ಕಿಲ್ಲ ಕಂಟಕ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು

ಸಿಎಂ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದ ಪರಿಷತ್ ಸದಸ್ಯ ವಿಶ್ವನಾಥ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಲಿದೆ
ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದು ಕಾರ್ಯ ಸಾಧುವೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ಎಚ್.ವಿಶ್ವನಾಥ್ ಅವರು ಜೆಡಿಎಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ
ಪಾತ್ರವಹಿಸಿದ್ದರು. ಆನಂತರ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆಗ ಸಹಜವಾಗಿಯೇ
ಬಿಜೆಪಿಯ ಸದಸ್ಯತ್ವ ಪಡೆದುಕೊಂಡಿರುತ್ತಾರೆ.

ಒಂದು ವೇಳೆ ಬಿಜೆಪಿ ಅವರ ನಡೆಯನ್ನು ವಿರೋಧಿಸಿ ಅಮಾನತು ಮಾಡಿದರೆ, ಅವರು ಪಕ್ಷದ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಆದರೆ, ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನದಿಂದ ತೆಗೆಯಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾಜಕೀಯವಾಗಿ ವಿಶ್ವನಾಥ್ ಅವರು ಮಾಡಿರುವ ಆರೋಪ ಸಿಎಂ ಯಡಿಯೂರಪ್ಪ ಸರಕಾರಕ್ಕೆ ಮುಜುಗರ ತರುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರಕಾರ ಸ್ಪಷ್ಟನೆಯನ್ನು ನೀಡಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ತಿಳಿಸಿದೆ. ಆದರೆ, ಸ್ವಪಕ್ಷದ ಪರಿಷತ್ ಸದಸ್ಯರೇ ಆರೋಪ
ಮಾಡಿರುವುದರಿಂದ ಇದು ರಾಜಕೀಯವಾಗಿ ಬಿಜೆಪಿಗೆ ಅದರಲ್ಲೂ ಬಿಎಸ್‌ವೈಗೆ ದೊಡ್ಡ ಹಿನ್ನಡೆಯಾಗಲಿದೆ. ಈ ನಿಟ್ಟಿನಲ್ಲಿ ವಿಶ್ವನಾಥ್ ಅವರಿಗೆ ನೋಟಿಸ್ ನೀಡಿ, ಅವರನ್ನು ಪಕ್ಷದಿಂದ ಅಮಾನತು ಮಾಡಲಾಗುವುದು ಎಂಬ ಮಾತುಗಳು ಬಿಜೆಪಿಯ ಕೆಲ
ನಾಯಕರ ಬಾಯಿಂದ ಬರುತ್ತಿವೆ. ಬಿಎಸ್‌ವೈ ಬೆಂಬಲಿಗ ಶಾಸಕರು ಪಕ್ಷದ ರಾಜ್ಯಾಧ್ಯಕ್ಷರ ಮೇಲೆ ಒತ್ತಡವನ್ನು ತರುತ್ತಿದ್ದಾರೆ. ಆದರೆ, ಪಕ್ಷಕ್ಕೆ ವಿಶ್ವನಾಥ್ ಅವರನ್ನು ತೆಗೆಯುವುದು ಸಾಧ್ಯವೇ ಎಂಬ ಅನುಮಾನಗಳು ಬಿಜೆಪಿ ವಲಯದಲ್ಲಿಯೇ ಕೇಳಿಬಂದಿವೆ.

ಪರಿಷತ್ ಸದಸ್ಯ ಸ್ಥಾನಕ್ಕಿಲ್ಲ ಕಂಟಕ?
ಒಂದು ವೇಳೆ ಬಿಜೆಪಿ ವಿಶ್ವನಾಥ್ ಅವರನ್ನು ಪಕ್ಷದಿಂದ ಅಮಾನತು ಮಾಡಿದರೂ, ಪರಿಷತ್ ಸದಸ್ಯ ಸ್ಥಾನಕ್ಕೆ ಯಾವುದೇ ಕಂಟಕ ಇಲ್ಲ ಎನ್ನಬಹುದು. ಅವರು ರಾಜ್ಯಪಾಲರಿಂದ ಸಾಹಿತ್ಯ ಕ್ಷೇತ್ರದಿಂದ ನಾಮ ನಿರ್ದೇಶನವಾಗಿದ್ದಾರೆ. ಸರಕಾರವೇ ಶಿಫಾರಸು ಮಾಡಿದ್ದರೂ, ಅವರಿಗೆ ಪಕ್ಷದ ಹಂಗಿಲ್ಲ. ಆದರೆ, ಪರಿಷತ್ ಸದಸ್ಯರಾದ ನಂತರ ಅವರು ಯಾವ ಪಕ್ಷದ ಪರ ಎಂಬುದನ್ನು
ಹೇಳಬೇಕಿರುತ್ತದೆ. ಆದರೆ, ಪಕ್ಷದಿಂದ ಅವರನ್ನು ಅಮಾನತು ಮಾಡಿದ ಮಾತ್ರಕ್ಕೆ ಅವರ ಸ್ಥಾನಕ್ಕೆ ಯಾವುದೇ ಸಮಸ್ಯೆ ಯಾಗುವುದಿಲ್ಲ.

ಪಕ್ಷ ನೀಡುವ ವಿಪ್ ಉಲ್ಲಂಘನೆ ಮಾಡಿದರೆ, ಪಕ್ಷಾಂತರ ಕಾಯಿದೆಯಡಿ ಅವರನ್ನು ಉಚ್ಛಾಟನೆ ಮಾಡಬಹುದು. ಆದರೆ, ಪರಿಷತ್‌ನಲ್ಲಿ ವಿಪ್ ನೀಡುವಂತಹ ಪ್ರಸಂಗಗಳು ಸೃಷ್ಟಿಯಾಗುವುದು ಬಹಳ ಕಡಿಮೆ. ಹೀಗಾಗಿ, ಅವರ ಪರಿಷತ್ ಸದಸ್ಯ ಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ಬಿಜೆಪಿಯಲ್ಲಿಯೇ ಬೆಂಬಲ?
ವಿಶ್ವನಾಥ್ ಅವರು ಸಿಎಂ ವಿರುದ್ಧವೇ ಹೇಳಿಕೆ ನೀಡುತ್ತಾರೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ಅವರಿಗೆ ಬಿಜೆಪಿಯ ಕೆಲ ನಾಯಕರ ಬೆಂಬಲವಿರುವ ಕಾರಣಕ್ಕೆ ಅವರಿಂದ ಇಂತಹ ಆರೋಪ ಕೇಳಿಬರುತ್ತಿದೆ. ಯಡಿಯೂರಪ್ಪ ಅವರನ್ನು ಹಣಿಯಲು ಪ್ರಯತ್ನ ನಡೆಸುತ್ತಿರುವ ಕೆಲ ನಾಯಕರು ವಿಶ್ವನಾಥ್ ಹೇಳಿಕೆ ಹಿಂದಿದ್ದಾರೆ. ವಿಶ್ವನಾಥ್‌ಗಿಂತಲೂ ಖಾರವಾಗಿ ಬಿಎಸ್‌ವೈ ಮತ್ತು ಕುಟುಂಬದ ವಿರುದ್ಧ ಕಿಡಿಕಾರುವ ಯತ್ನಾಳ್‌ಗೂ ಹೈಕಮಾಂಡ್‌ನಲ್ಲಿಯೇ ಕೆಲವರ ಬೆಂಬಲವಿದೆ.

ಇದರ ಕೆಲ ಪಾಲು ವಿಶ್ವನಾಥ್ ಮೇಲೂ ಇದೆ ಎಂಬುದು ಬಿಜೆಪಿ ವಲಯದಲ್ಲಿ ಕೇಳಿಬರುವ ಮಾತು. ಈ ಹಿನ್ನೆಲೆಯಲ್ಲಿ ಅವರ
ನ್ನು ಅಮಾನತು ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಿಎಸ್‌ವೈ ಅವರ ಮಾತಿಗೆ ಕಟ್ಟುಬಿದ್ದು, ವಿಶ್ವನಾಥ್ ವಿರುದ್ಧ ಕ್ರಮಕ್ಕೆ ಬಿಜೆಪಿ ಮುಂದಾಗಬಹುದಾದರೂ, ಅದರ ಪರಿಣಾಮ ಬಹಳ ಕಡಿಮೆ. ವಿಶ್ವನಾಥ್‌ಗೆ ಇದರಿಂದ
ಯಾವುದೇ ನಷ್ಟವಾಗುವುದಿಲ್ಲ. ಅವರು ಆಗ ಮತ್ತಷ್ಟು ಸ್ವತಂತ್ರ್ಯರಾಗುತ್ತಾರೆ. ಪಕ್ಷದ ಎಲ್ಲೆ ಇಲ್ಲದೆ ಮಾತನಾಡುವ ಅವಕಾಶ ಅವರಿಗೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಇದು ಸದ್ಯಕ್ಕೆ ಸಾಧ್ಯವಿಲ್ಲದ ತೀರ್ಮಾನ ಎಂದು ಹೇಳಲಾಗುತ್ತಿದೆ.

***

ನಾಮನಿರ್ದೇಶನಗೊಂಡ ಪರಿಷತ್ ಸದಸ್ಯರನ್ನು ಪಕ್ಷದಿಂದ ಅಮಾನತು ಮಾಡಿದ ಮಾತ್ರಕ್ಕೆ ತೆಗೆಯಲು ಬರುವುದಿಲ್ಲ. ಅವರು ನಾಮನಿರ್ದೇಶನಗೊಂಡಿದ್ದು, ನಂತರವಷ್ಟೇ ಪಕ್ಷದ ಸದಸ್ಯರು ಎನಿಸಿಕೊಂಡಿರುತ್ತಾರೆ. ಪಕ್ಷದಿಂದ ಅವರನ್ನು ಅಮಾನತು ಮಾಡಿದರೂ, ಅವರ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
– ಎಂ.ಸಿ.ನಾಣಯ್ಯ ಮಾಜಿ ಕಾನೂನು ಸಚಿವರು