ಸಂಧ್ಯಾ. ಎಂ.
ಅಲೆಯೊಂದು ರಭಸದಿಂದ ಬಂದು ಬಡಿದಿದೆ ಬಂಡೆಯ ಮೇಲೆ. ನೀರ ಹನಿಗಳೆಲ್ಲಾ ಚಲ್ಲಾಪಿಲ್ಲಿ. ನೋವಿನ ಎಳೆಗಳೇ ಮನದ ತುಂಬಾ.
ತಂಪು ಕಳೆದುಕೊಂಡ ನಕ್ಷತ್ರಗಳು ಸುಡುತ್ತಿದ್ದವು, ಬೆಳದಿಂಗಳ ಸೂಸುವ ಚಂದ್ರನೂ ಮಾಯವಾಗಿದ್ದ. ಅದೆಷ್ಟೋ ಹಿತ ಬಿಸುಪುಗಳು ಮನದ ಸಂಚಿಯಲ್ಲಿಯೇ
ಉಳಿದು ಬಿಟ್ಟಿವೆ. ಸಂಜೆಗತ್ತಲಿನಲೊಂದು ಹೆಜ್ಜೆಯಿಲ್ಲದ ಗೆಜ್ಜೆ ಕುಣಿತ ..ಬದುಕ ನೇವರಿಸ ಬಂದ ನಿನ್ನ ಧ್ಯಾನವಷ್ಟೇ ಈ ಮನಕೆ ಸೀಮಿತ.
ಹೌದು ಈ ಬದುಕಲ್ಲಿ ನಿನ್ನ ನೆನಪು ಬಿಟ್ಟು ಬೇರೆನೂ ಉಳಿದಿಲ್ಲ. ನನ್ನ ಬದುಕಿನ ಆರಂಭವೂ ನೀನೆ, ಅಂತ್ಯವೂ ನೀನೆ. ನನಗಿನ್ನು ಆ ದಿನ ನೆನಪಿದೆ, ನನ್ನ ಆಫೀಸ್ಗೆ ಹೊಸದಾಗಿ ನೀನು ಸೇರಿದ್ದೆ. ನನ್ನ ಹೊಸ ಅಸಿಸ್ಟೆಂಟ್ ನೀನು. ಪ್ರತಿಯೊಂದು ಕೆಲಸ ಮಾಡುವಾಗಲೂ, ನೂರಾರು ಪ್ರಶ್ನೆ. ನೀನು ಪ್ರಶ್ನೆ ಕೇಳಿ ದಣಿಲಿಲ್ಲ, ಆದರೆ ನಾನು ಉತ್ತರ ಹೇಳಿ ಹೇಳಿ ಬಸವಳಿದಿದ್ದೆ. ‘ಎಲ್ಲಿಂದ ತಗ್ಲಾಕೊಂಡ’ ಈ ಪ್ರಾಣಿ ಅಂತ ಅದೆಷ್ಟು ಬಾರಿ ಮನಸಲ್ಲೇ ಬೈಕೊಂಡಿದ್ದೀನೋ ನಾನೇ ಬಲ್ಲೆ.
ನಿನಗೂ ಆಫೀಸ್ನಲ್ಲಿ ನನ್ನ ಬಿಟ್ಟು ಬೇರೆ ಪರಿಚಯ ಇಲ್ಲ. ಕಾಫಿಗೆ, ಊಟಕ್ಕೆ ಪ್ರತಿಯೊಂದು ಕಡೆ ಬಾಲದ ರೀತಿ ನನ್ನ ಹಿಂದೆಯೇ ನೀ ಸುತ್ತುತ್ತಿದ್ದೆ. ಆಫೀಸ್ನಲ್ಲಿ ನಿನ್ನ ನನ್ನ ಪಿಎ ಅಂತಾಲೆ ಕರೀತಿದ್ರು. ಅದ್ಯಾವುದಕ್ಕೂ ನೀನು ತಲೆ ಕೆಡೆಸಿಕೊಂಡವನಲ್ಲ. ‘ನಿನ್ನ ನನ್ನ ಬಕೆಟ್’ ಅಂದಾಗಲೂ ನಸು ನಕ್ಕು ಸುಮ್ಮನಾಗಿದ್ದೆ. ನಿನ್ನ ತಾಳ್ಮೆಯ ಪರಿ ನನಗೆ ಮೆಚ್ಚುಗೆ ಆಗಿತ್ತು. ಸ್ವಲ್ಪ ಇರಿಟೇಟ್ ಆದ್ರೂ ನೀನು ಒಳ್ಳೆ ಹುಡುಗ ಅಂತಾ ಅರ್ಥ ಆಗಿತ್ತು.
ದಿನಗಳು ಉರುಳಿದ್ದೇ ನನಗೆ ತಿಳಿಲಿಲ್ಲ. ನೀನು ನನ್ನ ಜೂನಿಯರ್ ಅನ್ನೋ ಭಾವನೆ ಕ್ರಮೇಣ ದೂರಾಯಿತು. ದಿನಗಳೆದಂತೆ ಒಬ್ಬರಿಗೊಬ್ಬರು ಅಷ್ಟು ಹತ್ತಿರ ವಾಗಿದ್ವಿ. ಆಫಿಸ್ ಹೊರಗಡೆ ನಾನು ನೀನು ಬೆಸ್ಟ್ ಫ್ರೆಂಡ್ಸ್.. ಅದೆಷ್ಟು ಬಾರಿ ಕೆಲಸದ ವಿಚಾರವಾಗಿ ಜಗಳ ಮಾಡಿದ್ರೂ, ಮತ್ತೆ ಕಾಫಿಗೆ ಒಟ್ಟಿಗೆ ಹೋಗ್ತಿದ್ವಿ. ನಮ್ಮಿಬ್ಬರನ್ನ ಕಂಡ್ರೆ ಆಫೀಸ್ ನಲ್ಲಿ ಹೊಟ್ಟೆಕಿಚ್ಚು ಜಾಸ್ತಿ. ಆದ್ರೆ ಅದ್ಯಾವುದು ನಮ್ಮ ಗೆಳೆತನಕ್ಕೆ ಧಕ್ಕೆ ತರಲಿಲ್ಲ. ನಮ್ಮಿಬ್ಬರ ಗೆಳೆತನ ಎಷ್ಟು ಗಾಢವಾಗಿತ್ತು ಅಂದ್ರೆ, ಅದನ್ನು ಅಕ್ಷರಗಳಲ್ಲಿ ಹೇಳಲು ಅಸಾಧ್ಯ.
ನಾನೇ ದೊಡ್ಡವಳು
ಕಾಲ ಕಳೆದಂತೆ ನಮಗರಿಯದೇ ಪ್ರೀತಿಯಲ್ಲಿ ಬಿದ್ದಿದ್ವಿ, ಆದ್ರೆ ಒಬ್ಬರಿಗೊಬ್ಬರು ಹೇಳಿಕೊಂಡಿರಲಿಲ್ಲ. ಆ ಒಂದು ದಿನ ಇನ್ನೂ ನನಗೆ ನೆನಪಿದೆ. ಸಣ್ಣಗೆ ಮಳೆ ಜಿನಗುತ್ತಿತ್ತು.. ಮಳೆಯಲ್ಲೇ ಓಡಿಕೊಂಡು ಹೋಗಿ, ಕ್ಯಾಂಟೀನಿನಲ್ಲಿ ಬಿಸಿ ಬಿಸಿ ಕಾಫಿ ಕುಡಿದ್ವಿ. ಆಗ ನೀನು ಧೈರ್ಯ ಮಾಡಿ ಕೇಳಿದ್ದೆ ‘ಮದುವೆ ಆಗ್ತೀಯ?’ ಅಂತಾ. ನಾನು ನಿನಗಿಂತ ೩ ವರ್ಷ ದೊಡ್ಡವಳು. ಅದು ಸಮಸ್ಯೆ ಆಗಲ್ವ ಅಂತ ಕೇಳಿದ್ದೆ.
‘ಎಲ್ಲವನ್ನು ನಾನು ನಿಭಾಯಿಸ್ತೀನಿ’ ಅಂತ ನೀನು ಧೈರ್ಯ ತುಂಬಿ, ಮಾತು ಕೊಟ್ಟಿದ್ದೆ. ಹೀಗೆ ಗೆಳೆತನದಿಂದ ಪ್ರೇಮ ತಿರುಗಿದ್ದ ನಮ್ಮ ಕಥೆ ಮಧುರವಾಗಿ ಸಾಗುತ್ತಿತ್ತು. ಅದಾಗಿ ಒಂದು ವರ್ಷವಾಗುವ ಮೊದಲೇ ನಿನಗೆ ಅಮೆರಿಕಾದಿಂದ ಒಳ್ಳೆ ಆಫರ್ ಬಂದಿತ್ತು. ಒಂದೆಡೆ ಖುಷಿ, ಇನ್ನೊಂದೆಡೆ ನಿನ್ನಿಂದ ದೂರ ಇರಬೇಕು ಅನ್ನೋ ನೋವು. ಅದೇ ಮಿಶ್ರ ಭಾವನೆಯಲ್ಲಿ ನಿನ್ನ ಬೀಳ್ಕೊಟ್ಟಿದ್ದೆ. ಆದ್ರೆ ಆ ವಿಮಾನ ಹಾರಿದ ಕೂಡಲೇ, ನನ್ನ ಮನಸ್ಸಿನ ಮೂಲೆಯಲ್ಲಿ ಒಂದು ಭಾವ, ಒಂದು ಎಳೆ ಹೇಳುತ್ತಿತ್ತು. ನೀನು ಹೋಗುತ್ತಿದ್ದ ವಿಮಾನ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸತ್ತೆ ಅಂತಾ.
ನೀನು ಅಮೆರಿಕಕ್ಕೆ ಹೋಗಿದ್ದ ಆರಂಭದ ದಿನಗಳು ಚನ್ನಾಗಿ ಇದ್ವು. ಸಮಯದಲ್ಲಿ ವ್ಯತ್ಯಾಸವಿದ್ರೂ ನಮ್ಮ ಪ್ರೀತಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ
ಬರುಬರುತ್ತಾ ನೀನು ಬದಲಾದೆ. ಕೇಳಿದ್ರೆ ಕೆಲಸದ ಟೆನ್ಷನ್ ಅಂತಾ ನೆಪ. ನನಗೆ ಒಂಥರ ಭಯ, ದಿಗಿಲು. ಒಂದೊಂದು ದಿನ ಕೆಟ್ಟ ಕನಸು. ನಿನ್ನ ಫೋನುಗಳು
ವಿರಳವಾದವು. ಅದಾಗ್ಲೆ ನಿನ್ನ ಜೊತೆ ಸರಿಯಾಗಿ ಮಾತನಾಡದೆ ತಿಂಗಳು ಆಗಿತ್ತು. ವಾರಕ್ಕೊಮ್ಮೆ ಕಾಲ್ ಮಾಡ್ತಿದ್ದ ನೀನು ೧ ತಿಂಗಳಾದ್ರೂ ಕಾಲ್ ಮಾಡಲೇ ಇಲ್ಲ. ನಾನು ಮಾಡಿದ್ರೂ ನೀನು ರಿಸೀವ್ ಮಾಡಲ್ಲ. ಯಾವುದೇ ಮೆಸೇಜ್ಗೆ ಉತ್ತರ ಇಲ್ಲ.
ದೂರದ ಊರು ನಿಜಕ್ಕೂ ದೂರ
ನನ್ನ ಭಯ ನಿಜಾ ಆಗ್ತಿತ್ತು. ನೀನು ನನ್ನಿಂದ ನಿಧಾನವಾಗಿ ದೂರ ಆಗ್ತಿದ್ದೆ. ಆಗ್ತಿದ್ದೆ ಅಲ್ಲೇ, ಆಗಿದ್ದೆ. ಕಾರಣ ಕೇಳದೆ ನನ್ನಿಂದ ನನ್ನ ಸರ್ವಸ್ವವನ್ನೂ ಕಿತ್ತೊಕೊಂಡಿದ್ದೆ. ನನ್ನ ಬಿಟ್ಟದ್ದೆ. ಎಲ್ಲ ಕಡೆಯಿಂದಲೂ ಬ್ಲಾಕ್ ಮಾಡಿದ್ದೆ. ನನಗೋ ಆಕಾಶವೇ ಕಳಚಿ ಬಿದ್ದಂತ ಭಾವ. ನಾನು ಏನ್ ತಪ್ಪು ಮಾಡಿದ್ದೇ ಅನ್ನೋ ಅರಿವು ನನಗಿಲ್ಲ. ನನ್ನ ಪ್ರೀತಿಲಿ ಏನಾದ್ರೂ ಕಡಿಮೆ ಆಗಿತ್ತಾ? ಅಥ್ವ ನೀನು ಮೇಲೆ ಬರೋದಕ್ಕೆ, ಅನುಭವ ಪಡೆಯೋದಕ್ಕೆ ನನ್ನ ಬಳಸಿಕೊಂಡ್ಯ? ಯಾವುದು ಅರ್ಥ ಆಗ್ಲಿಲ್ಲ. ನನಗೆ.
ಹಾಗಂತ ನಿನ್ನ ಮರೆಯೋದು ಸುಲಭ ಇರಲಿಲ್ಲ. ಆಫೀಸ್ನ ಪ್ರತಿ ಮೂಲೇಲೂ ನಿನ್ನೊಡನೆ ಕಳೆದ ನೆನಪು ಕಾಡುತ್ತಿತ್ತು. ಬೇರೆ ಕಡೆ ಕೆಲಸಕ್ಕೆ ಸೇರಿದೆ. ಎಲ್ಲಾ ಮರೆತಂತೆ ಬದುಕಿದ್ದೆ.
ಆದ್ರೆ ಮನದ ಮೂಲೆಯಲ್ಲಿ ನಿನ್ನ ನೆನಪು ಮಾಸದೆ ಹಾಗೆ ಕೂತಿತ್ತು. ೪ ವರ್ಷಗಳು ಹಾಗೆ ಕಳೆದು ಹೋದ್ವು. ಹಳೆ ಆಫೀಸಿನ ಫ್ರೆಂಡ್ ಸಿಕ್ಕಾಗ ‘ನೋಡೆ, ನಿನ್ನ
ಪಿ ಎಲ್ಲಾ ಮದುವೆ ಆಯ್ತು, ಫಾರಿನ್ ಹುಡುಗಿ ಜತೆ’ ಅಂತ ಫೋಟೋ ತೋರಿಸಿದಾಗ, ಬಂಡೆ ಕಲ್ಲಿನ ಮೇಲೆ ದೊಡ್ಡ ಅಲೆ ಬಡಿದ ಕರ್ಕಶ ಅನುಭವ! ಏನು ಹೇಳ್ಬೇಕು ತಿಳಿಲಿಲ್ಲ. ನೀನು ಆ ಫೋಟೋಗೆ ಫೇಸ್ ಬುಕ್ನಲ್ಲಿ ಹಾಕಿದ್ದ ಕ್ಯಾಪ್ಷನ್ ಮತ್ತೆ ನಮ್ಮಿಬ್ಬರ ಸುಂದರ ಕ್ಷಣಗಳನ್ನು ನೆನಪು ಮಾಡ್ತು.
ನಾನಿರ ಬೇಕಿತ್ತು ಅಲ್ವ ಆ ಜಾಗದಲ್ಲಿ. ಕೇಳಿಯೇ ಬಿಡೋಣ ಅಂತ ಸಾವಿರ ಬಾರಿ ಅನಿಸಿತ್ತು. ಆದರೂ ಬೇಡ. ಸಂತೋಷವಾಗಿದ್ದೇನಲ್ಲ, ಎಂದು ಖುಷಿ ಪಟ್ಟಿದ್ದೆ. ಆದರೂ ಅನಿವಾರ್ಯವಾಗಿ, ಆಕಸ್ಮಿಕವಾಗಿ ನಾವಿಬ್ಬರು ಮುಖಾಮುಖಿಯಾದರೆ ಅಥವಾ ನನ್ನ ನೆನಪು ಬಂದರೆ ನನ್ನಿಂದ ದೂರಾಗಲೂ ಕಾರಣವೇನು ಎಂಬುದನ್ನು ಹೇಳು. ಈಗಲೂ ಕಾರಣ ತಿಳಿಯದೆ ಯಮಯಾತನೆ ಅನುಭವಿಸುತ್ತಿದ್ದೇನೆ. ಹೋಗುವುದು ಹೋದೆ, ಕಾರಣ ಹೇಳಿ ಹೋಗಬಹುದಿತ್ತಲ್ಲ. ಹೇಳಿ ಬಿಡು ಕಾರಣ, ಸಾಕಿನ್ನು ಶಿಕ್ಷೆ.