Wednesday, 11th December 2024

ಮಿದುಳಿಗೆ ಕೋವಿಡ್ ತೀವ್ರ ಹಾನಿ ಮಾಡುವುದೇ ?

ವೈದ್ಯವೈವಿಧ್ಯ

ಡಾ.ಎಚ್.ಎಸ್.ಮೋಹನ್‌

drhsmohan@gmail.com

ಕರೋನಾ ವೈರಸ್ ಬಗೆಗಿನ ಹೊಸ ಹೊಸ ಮಾಹಿತಿಗಳು ಲಭ್ಯವಾಗುತ್ತಿರುವುದು ಸರಿಯಷ್ಟೇ. ಕೋವಿಡ್ ಕಾಯಿಲೆ ಮೆದುಳಿನಲ್ಲಿ ಉಂಟು ಮಾಡುವ ಹಲವು ಪರಿಣಾಮ ಗಳು ಹೆಚ್ಚಿನವರಿಗೆ ತಿಳಿದಿದೆ. ರುಚಿ ಮತ್ತು ವಾಸನೆ ನಷ್ಟವಾಗುವುದು, ಮತ್ತೆ ಕೆಲವರಲ್ಲಿ ನೆನಪಿನ ಶಕ್ತಿ ಮತ್ತು ಮೆದುಳಿನ ಒಟ್ಟೂ ಗ್ರಹಿಸುವ ಸಾಮರ್ಥ್ಯ ಕುಂಠಿತ ಗೊಳ್ಳುವುದು – ಮುಖ್ಯ ಲಕ್ಷಣಗಳು.

ಮುಖ್ಯ ರೋಗ ಲಕ್ಷಣಗಳಾದ ರುಚಿ ಮತ್ತು ವಾಸನೆ ನಷ್ಟವಾಗುವುದು ಮೆದುಳಿನಲ್ಲಿ ಸರಿಯಾಗಿ ಮುದ್ರಿತ ಗೊಳ್ಳುತ್ತದೆ. ಇತ್ತೀಚೆಗೆ ಮೆದುಳನ್ನು ಸ್ಕ್ಯಾನ್ ಮಾಡಿ ನಡೆಸಿದ ಒಂದು ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಕೋವಿಡ್ ಕಾಯಿಲೆ ತರುವ ಕರೋನಾ ವೈರಸ್ ಹೊರತುಪಡಿಸಿ ಬೇರೆ ಕರೋನಾ ವೈರಸ್‌ ಗಳಲ್ಲಿ ಹಿಂದೆ ಕೈಗೊಂಡ ಅಧ್ಯಯನಗಳಲ್ಲಿ ಶ್ವಾಸಕೋಶಕ್ಕೆ ತೊಂದರೆ ಉಂಟುಮಾಡುವ ವೈರಸ್‌ಗಳು ಮೆದುಳಿನ ವಿವಿಧ ಕಾರ್ಯಗಳ ಮೇಲೆ ಪರಿಣಾಮ ಹೊಂದಿವೆ ಎಂಬ ಬಗ್ಗೆ ಅಧ್ಯಯನ ಮಾಡಲಾಗಿತ್ತು.

ಅವುಗಳ ಪ್ರಕಾರ ವಾಸನೆ, ರುಚಿ, ನೆನಪು, ವಿವಿಧ ಕಾರ್ಯಗಳನ್ನು ಕೈಗೊಳ್ಳುವ ಸಾಮರ್ಥ್ಯ ಜತೆಗೆ ಮಿದುಳಿನ ಗ್ರಹಣ ಶಕ್ತಿ – ಇವುಗಳಿಗೆ ಸಂಬಂಧಪಟ್ಟ ಮಿದುಳಿನ ಭಾಗಗಳು ಶಿಥಿಲಗೊಳ್ಳುತ್ತವೆ ಎಂಬ ವಿಷಯ ಗೊತ್ತಾಗಿತ್ತು. ಆದರೆ ಇತ್ತೀಚಿನ ಈ ಅಧ್ಯಯನದಲ್ಲಿ ಕರೋನಾ ವೈರಸ್‌ಗೆ ಪಾಸಿಟಿವ್ ಹೊಂದಿರುವ ವ್ಯಕ್ತಿಗಳ ಮೆದುಳಿನಲ್ಲಿ ವಾಸನೆ ಮತ್ತು ರುಚಿಗೆ ಸಂಬಂಧಪಟ್ಟ ಮೆದುಳಿನ ಭಾಗಗಳಲ್ಲಿ ಮಿದುಳಿನ ಅಂಗಾಂಶವಾದ ಗ್ರೇ ಮ್ಯಾಟರ್ ನಷ್ಟ ಹೊಂದುವುದು ಸ್ಪಷ್ಟವಾಗಿ ಗೊತ್ತಾಗಿದೆ. ಇದು ಕೋವಿಡ್ ಕಾಯಿಲೆ ಬಂದು ವಾಸಿಯಾದ ವ್ಯಕ್ತಿಗಳಲ್ಲಿ ಮತ್ತು ಕಾಯಿಲೆ ಬರದ ಮೆದುಳಿನ ಸ್ಕ್ಯಾನ್ ಮಾಡಿದಾಗ ಗೊತ್ತಾದ ಅಂಶ.
ಕರೋನಾ ವೈರಸ್ ನೇರವಾಗಿ ಈ ನಷ್ಟವನ್ನು ಉಂಟುಮಾಡುವುದೇ ಅಥವಾ ಅದು ಅಪರೋಕ್ಷವಾಗಿ ಈ ನಷ್ಟಕ್ಕೆ ಕಾರಣವಾಗುತ್ತದೆಯೇ ಎಂಬ ವಿಚಾರ
ಈ ಅಧ್ಯಯನದಲ್ಲಿ ಸ್ಪಷ್ಟವಾಗಿಲ್ಲ. ಮೆದುಳಿನ ಗ್ರೇ ಮ್ಯಾಟರ್‌ನಲ್ಲಿ ಕೇಂದ್ರೀಯ ನರ ವ್ಯವಸ್ಥೆಯ ನರ ಜೀವಕೋಶಗಳಿರುತ್ತವೆ.

ಮೆದುಳಿನ ಜೀವಕೋಶ ಗಳಲ್ಲಿ ಮುಖ್ಯವಾಗಿ ಗ್ರೇ ಮ್ಯಾಟರ್ ಮತ್ತು ವೈಟ್ ಮ್ಯಾಟರ್ ಎಂಬ ನರ ಜೀವಕೋಶ ಗಳನ್ನೊಳಗೊಂಡ ಎರಡು ಭಾಗಗಳಿವೆ. ಈ ಗ್ರೇ ಮ್ಯಾಟರ್ ಮೆದುಳಿನ ಹೊರ ಭಾಗದಲ್ಲಿ ತೆಳುವಾದ ಪದರದ ರೀತಿ ಇರುವ ಇದು ಮೆದುಳಿನ ಹೆಚ್ಚಿನ ನರ ಜೀವಕೋಶಗಳನ್ನು ಹೊಂದಿರುತ್ತದೆ. ನಮ್ಮ ದೇಹದ ಸಂವೇದನೆಗಳನ್ನು ಉತ್ಪಾದಿಸುವ ಮತ್ತು ಮಾಂಸಖಂಡಗಳನ್ನು ನಿಯಂತ್ರಿಸುವ ನರ ಜೀವಕೋಶಗಳು ಈ ಗ್ರೇ ಮ್ಯಾಟರ್‌ನಲ್ಲಿರುತ್ತವೆ.

ವೈಟ್ ಮ್ಯಾಟರ್‌ನಲ್ಲಿ axon ಗಳಿರುತ್ತವೆ. ಇವು ಗ್ರೇ ಮ್ಯಾಟರ್‌ನ ಸಂಪರ್ಕ ಜಾಲ. ಈ ಗ್ರೇ ಮ್ಯಾಟರ್‌ನ ನಾಶವು ಕೋವಿಡ್ ಕಾಯಿಲೆಯು ದೇಹಕ್ಕೆ ಹಾನಿ ಉಂಟುಮಾಡುವ ಗಂಭೀರ ಪರಿಣಾಮ. ರೋಗಿಯು ಇಳಿ ವಯಸ್ಸಿನವನಾಗಿದ್ದು ಸ್ಥೂಲಕಾಯದವನಾಗಿದ್ದರೆ ಸ್ವಲ್ಪ ಮಟ್ಟಿಗೆ ಜಾಸ್ತಿ ಕಾಣಿಸಿಕೊಳ್ಳಬಹುದು. ಅಥವಾ ಹೆಚ್ಚಿನ ಏರುರಕ್ತದೊತ್ತಡ ಅಥವಾ ಡಯಾಬಿಟಿಸ್ ಕಾಯಿಲೆ ಇದ್ದವರಲ್ಲಿ ಈ ಪರಿಣಾಮ ಜಾಸ್ತಿ.

ಮಿದುಳಿನ ನೆನಪಿನ ಕೋಶಗಳನ್ನೊಳಗೊಂಡ ಭಾಗಗಳಲ್ಲಿ ಈ ಗ್ರೇ ಮ್ಯಾಟರ್ ನ ನಾಶವಾದರೆ ಆತ ಭವಿಷ್ಯದಲ್ಲಿ ಮತಿಭ್ರಮಣೆ (Dementia) ಹಂತಕ್ಕೆ ಹೋಗುವ ಸಾಧ್ಯತೆ ಜಾಸ್ತಿ ಎಂದು ಆಕ್ಸರ್ಡ್ ವಿಶ್ವವಿದ್ಯಾನಿಲಯ ದ ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಹಾಗೂ ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಇದೊಂದು ವಿಶಿಷ್ಟವಾದ ಅಧ್ಯಯನ ಎಂದು ಹೇಳಬಹುದು. ಇದರಲ್ಲಿ ಯುನೆಟೆಡ್ ಕಿಂಗ್ಡಮ್‌ನ ಬಯೋಬ್ಯಾಂಕ್ ಇನಿಷಿಯೇಟಿವ್ ಇವರು ಕೋವಿಡ್ ಕಾಯಿಲೆ ಆರಂಭವಾಗುವ ಮೊದಲೇ ಸಂಗ್ರಹಿಸಿಟ್ಟಿದ್ದ 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 40000 ಸ್ವಯಂಸೇವಕರ ಮಿದುಳಿನ MRI scan ನ್ನು ಉಪಯೋಗಿಸ ಲಾಗಿದೆ. ಇದೊಂದು ಅಗಾಧ ಪ್ರಮಾಣದ ಮಿದುಳಿನ ಸ್ಕ್ಯಾನ್‌ನ ಸಂಗ್ರಹ ಎಂದು ಹೇಳಬಹುದು. ಇದರಲ್ಲಿ ನಂತರ ಕರೋನಾ ವೈರಸ್ ಸೋಂಕಿಗೆ ಒಳಗಾದ 394 ವ್ಯಕ್ತಿಗಳ ಹಾಗೂ ಕರೋನಾ ಸೋಂಕಿಗೆ ಒಳಗಾಗದ ೩೮೮ ವ್ಯಕ್ತಿಗಳ ಮೆದುಳಿನ ಸ್ಕ್ಯಾನ್‌ಗಳನ್ನು ಪರಿಶೀಲಿಸಲಾಯಿತು. ಇದರಲ್ಲಿ ವಿಜ್ಞಾನಿಗಳು ಈ ಎರಡೂ ಗುಂಪುಗಳ ಮೆದುಳಿನ ಭಾಗಗಳಲ್ಲಿ ಕಾಲದ ಕಾರಣಗಳಿಂದ ಬದಲಾವಣೆಗಳು ಕಂಡುಬಂದಿವೆಯೇ? ಹಾಗೂ ಕೋವಿಡ್ ಪೀಡಿತ ವ್ಯಕ್ತಿಗಳ ಮೆದುಳಿನಲ್ಲಿ ನಿರ್ದಿಷ್ಟ ಬದಲಾವಣೆಗಳಾಗಿವೆಯೇ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಿದರು.

ಅಲ್ಲದೇ ಇದರಲ್ಲಿ ಸೋಂಕಿನ ಪ್ರಮಾಣ, ವಯಸ್ಸು, ಲಿಂಗ,  ethnicity ಮುಂತಾದ ಅಂಶಗಳು ಇವೆರೆಡರೊಳಗಿನ ವ್ಯತ್ಯಾಸಗಳನ್ನು ಸೂಕ್ತ ಕಾರಣಗಳಿಂದ ವಿವರಿಸಲು ಸಾಧ್ಯವೇ – ಈ ಅಂಶಗಳನ್ನು ಸೂಕ್ತ ಕಾರಣಗಳಿಂದ ವಿವರಿಸಲು ಸಾಧ್ಯವೇ ? – ಈ ಅಂಶಗಳನ್ನೂ ಸೂಕ್ತವಾಗಿ ಗಮನಿಸಿದ್ದಾರೆ. ಈ ಸೋಂಕಿನ ಆರಂಭದ ಮೊದಲಿನ ಮೆದುಳಿನ ಸ್ಕ್ಯಾನಿಂಗ್ ಮಾಹಿತಿ ಲಭ್ಯವಾಗಿದ್ದರಿಂದ ಬಿಪಿ, ಡಯಾಬಿಟಿಸ್ ತರಹದ ಕಾಯಿಲೆಗಳು ಹಾಗೂ ಸ್ಥೂಲಕಾಯ ಮತ್ತು ವಯಸ್ಸಿನ ಪ್ರಭಾವ ತರಹದ ರಿಸ್ಕ್ ಅಂಶಗಳು ಇವುಗಳ ಬದಲಾವಣೆಗಳನ್ನು ಗಮನ ದಲ್ಲಿಟ್ಟುಕೊಂಡು ಅಧ್ಯಯನ ನಡೆಸಲಾಗಿದೆ. ಹೀಗೆ ಮಾಡಿದ್ದರಿಂದ ನಂತರ ಕಂಡು ಬಂದ ಎಲ್ಲಾ ಬದಲಾವಣೆಗಳನ್ನು ಕೋವಿಡ್ ಕಾಯಿಲೆಯ ಪರಿಣಾಮ ಎಂದು ತಪ್ಪು ವಿಶ್ಲೇಸಿಸುವ ಸಾಧ್ಯತೆ ಕಡಿಮೆ.

ಹಾಗಾಗಿ ಈ ರೀತಿಯ ಕಾಯಿಲೆ ಪೂರ್ವದ ಮಾಹಿತಿ ಇದ್ದದ್ದು ತಮ್ಮ ಈ ಅಧ್ಯಯನಕ್ಕೆ ತುಂಬಾ ಪೂರಕ ಎಂಬುದು ಈ ವಿಜ್ಞಾನಿಗಳ ಅಭಿಮತ. ಮೂಗಿನ ಭಾಗದಿಂದ ಅಲ್ಲಿನ ಮ್ಯೂಕೋಸಾ (ತೆಳುವಾದ ಹೊರಪದರ) ಅಥವಾ olfactory bulb ಗಳ ಮೂಲಕ ವಾಸನೆಯ ಅಥವಾ ರುಚಿ – ಈ ಸಂವೇದನೆಗಳ ನರಗಳಿಂದ ವೈರಸ್ ಕೇಂದ್ರೀಯ ನರ ಮಂಡಲವನ್ನು ಪ್ರವೇಶಿಸುವುದರಿಂದ ಈ ಮೆದುಳಿನ ಸ್ಕ್ಯಾನ್‌ನ ಪರಿಣಾಮಗಳು ಕೋವಿಡ್ ಕಾಯಿಲೆ ಅಥವಾ ವೈರಸ್ ಹರಡಿರುವ ಮುಖ್ಯ ಹೆಗ್ಗುರುತು ಎಂದು ಹೇಳಬಹುದು ಎಂದು ಮೇಲಿನ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.ಇದಕ್ಕೆ ಸಂಬಂಧಪಡದ ಕೆಲವು ವಿಜ್ಞಾನಿಗಳು ಈ ಅಧ್ಯಯನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಗೆಡವಿದ್ದಾರೆ.

ಅವರಲ್ಲಿ ಪ್ರಮುಖವಾಗಿ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ನರ ಶಾಸ್ತ್ರದ ವಿಜ್ಞಾನಿ ಭಾರತ ಮೂಲದ ಅಪೂರ್ವ ಭಂಡಾರಿ ಅವರು ಪ್ರಮುಖರು. ಈ ಅಧ್ಯಯನವು ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದು ಕಾಯಿಲೆ ಇರುವವರಲ್ಲಿ ಮೆದುಳಿನ ಮುಖ್ಯ ಭಾಗವಾದ ಗ್ರೇ ಮ್ಯಾಟರ್‌ನ ಭಾಗ ಗಮನಾರ್ಹವಾಗಿ ನಷ್ಟ
ಹೊಂದವುದನ್ನು ಸ್ಪಷ್ಟವಾಗಿ ತೋರಿಸಿದೆ. ಕೋವಿಡ್ ಕಾಯಿಲೆ ಯಿಂದಲೇ ಹೀಗಾಗಿದೆಯೋ ಅಥವಾ ಕರೋನಾ ವೈರಸ್ ನೇರವಾಗಿ ನರ ಜೀವಕೋಶಗಳನ್ನು
ಆಕ್ರಮಿಸುವುದರಿಂದ ಆಗಿದೆಯೋ ಎಂದು ಎಂದು ಸ್ಪಷ್ಟವಾಗಿ ಈ ಹಂತದಲ್ಲಿ ಹೇಳಲು ಬರುವುದಿಲ್ಲ.

ಮೇಲೆ ತಿಳಿಸಿದಂತೆ ಅದು ವಾಸನೆಯ ಗ್ರಹಿಕೆಯ ಪರಿಣಾಮದಿಂದ ಆಗಿರಬಹುದು. ಅಂದರೆ ಮೂಗಿನ ಒಳಗಿರುವ ವಾಸನೆಯ ಗ್ರಹಿಕೆಯ ಜೀವಕೋಶಗಳಿಗೆ
ಕರೋನಾ ವೈರಸ್‌ನಿಂದ ಆದ ಪರಿಣಾಮದಿಂದ ಆಗಿರಬೇಕು. ನರಗಳ ಗ್ರಹಿಕೆಯ ವ್ಯವಸ್ಥೆಯ ಪ್ರಕ್ರಿಯೆ (processing)ಯ ಮೇಲೆ ವಿಪರೀತವಾದ ಪರಿಣಾಮ
ವೈರಸ್‌ನಂಥ ಸೂಕ್ಷ್ಮ ಜೀವಿಯಿಂದ ಆದರೆ ಅದರ ಪರಿಣಾಮ ಮುಂದಿನ ಹಂತದ ಪ್ರಕ್ರಿಯೆಗಳ ಭಾಗಗಳ (ಮೆದುಳಿನ ಗ್ರೇ ಮ್ಯಾಟರ್) ಮೇಲೂ ಆಗುವುದು
ಸಹಜ. ಈ ತರಹದ ಪರಿಣಾಮ ಕೆಲವೊಮ್ಮೆ ಆರೋಗ್ಯವಂತ ವ್ಯಕ್ತಿಗಳಲ್ಲಿಯೂ ಆಗಬಹುದು.

ಆದರೆ ಆರೋಗ್ಯವಂತ ವ್ಯಕ್ತಿಗಳಲ್ಲಿ ಇಂತಹ ಕ್ರಿಯೆ ಆದರೆ ಅದು ತಾತ್ಕಾಲಿಕವಾಗಿರುತ್ತದೆ. ಕೆಲವು ದಿನಗಳ ನಂತರ ಮೊದಲಿನ ಸ್ಥಿತಿ ಹಿಂತಿರುಗಿ ಬರುತ್ತದೆ.
ಕೋವಿಡ್ ರೋಗಿಗಳಲ್ಲಿ ಮೆದುಳಿನಲ್ಲಿನ ಈ ಗ್ರೇ ಮ್ಯಾಟರ್ ನಷ್ಟವು ಭವಿಷ್ಯದಲ್ಲಿ ಅಲ್ಲಿಗೇ ನಿಲ್ಲುತ್ತದೆಯೋ ಅಥವಾ ಇನ್ನೂ ಹೆಚ್ಚಿನ ನಷ್ಟವಾಗುತ್ತದೋ ಎಂಬ ಅಂಶಗಳು ಈ ಪ್ರಕ್ರಿಯೆ ನಡೆಯುವ ವಿಧಾನವನ್ನು ನಮಗೆ ತೋರಿಸುತ್ತದೆ. ಹಾಗೆಯೇ ಈ ಎಲ್ಲಾ ಪರಿಣಾಮಗಳ ಮಹತ್ವವೂ ಕ್ರಮೇಣ ಗೊತ್ತಾಗುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಸ್ಯಾಮ್ -ಜಲ್ ಎಂಬ ಔಷಧ ಶಾಸ್ತ್ರದ ತಜ್ಞರು ಈ ಮೇಲಿನ ಅಧ್ಯಯನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಇದರಲ್ಲಿ ವ್ಯಕ್ತವಾದ ಅಂಶಗಳ ದೂರಗಾಮಿ ( Long term) ಪರಿಣಾಮಗಳ ಬಗೆಗೂ ಬೆಳಕು ಚೆಲ್ಲಿzರೆ. ಈ ಅಧ್ಯಯನವು ತುಂಬಾ ಮುಖ್ಯ ಏಕೆಂದರೆ ಕೋವಿಡ್ ಬಂದ ವ್ಯಕ್ತಿಗಳ ಕಾಯಿಲೆ ನಂತರದ ಮೆದುಳಿನ  MRI scan ಮತ್ತು ಅದೇ ವ್ಯಕ್ತಿಗಳ ಕಾಯಿಲೆ ಪೂರ್ವದ ಸ್ಕ್ಯಾನ್ ನಡೆಸಿದ್ದರಿಂದ ಇದರಲ್ಲಿನ ಮಾಹಿತಿಗಳು ತುಂಬಾ ಗಮನಾರ್ಹವಾದದ್ದು ಮತ್ತು
ಪ್ರಬಲವಾದದ್ದು. ಹಾಗೆಯೇ ಮೆದುಳಿನ ಗ್ರೇ ಮ್ಯಾಟರ್ ಭಾಗದಲ್ಲಿನ ಮೆದುಳಿನ ನರ ಜೀವಕೋಶ ಗಳ ನಷ್ಟ ಹಾಗೂ ನೆನಪಿನ ಕೋಶಗಳ ಭಾಗ ನಷ್ಟಕ್ಕೆ
ಒಳಗಾಗುವುದು – ಇವು ಕೋವಿಡ್‌ನ ತೀರಾ ಗಂಭೀರ ಪರಿಣಾಮಗಳು. ಮತ್ತೊಂದು ಅಂಶ ಎಂದರೆ ಇಷ್ಟರವರೆಗೆ ಕೋವಿಡ್ ಕಾಯಿಲೆಯ ವಿವಿಧ ತೊಡಕುಗಳು (Complications) ಕಾಯಿಲೆ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡ ರೋಗಿಗಳಲ್ಲಿ ಮಾತ್ರ ಕಂಡು ಬರುವುದು ಎಂದು ವೈದ್ಯ ವಿಜ್ಞಾನಿಗಳು ಹಾಗೂ ಸಂಶೋ ಧಕರು ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ಭಾವಿಸಿದ್ದರು. ಆದರೆ ಕೋವಿಡ್‌ನ ಸಣ್ಣ ಪ್ರಮಾಣದ ಸೋಂಕೂ ಸಹಿತ ಈ ತರಹದ ಗಂಭೀರ ರಿಣಾಮವನ್ನು ಉಂಟುಮಾಡುತ್ತದೆ ಎಂಬುದು ಕಳವಳಕಾರಿ ಅಂಶ. ಕೋವಿಡ್ ಪೀಡಿತ ವ್ಯಕ್ತಿಗಳಲ್ಲಿ ಮೆದುಳಿನ ಮುಖ್ಯ ಭಾಗ ಥಲಾಮಸ್  (Thalamus)ನ ಗಾತ್ರ ಚಿಕ್ಕ ದಿರುತ್ತದೆ.

ಯಾರು ಕಾಯಿಲೆಗೆ ಒಳಗಾಗಿದ್ದಾರೋ ಅವರ ಕಾಯಿಲೆ ಪೂರ್ವದ MRI scan ನ ಮಾಹಿತಿಗಳು ಈ ಅಧ್ಯಯನದಲ್ಲಿ ಲಭ್ಯವಾದ್ದರಿಂದ ಮತ್ತೊಂದು ಅಂಶ ನಮಗೆ ಗೊತ್ತಾಗಿದೆ. ಕಾಯಿಲೆ ಪೂರ್ವದ ಮೆದುಳಿನ ಸ್ಕ್ಯಾನ್ ಮಾಹಿತಿ ಲಭ್ಯವಿಲ್ಲದಿದ್ದರೆ ಕೋವಿಡ್ ಕಾಯಿಲೆಯು ಮೆದುಳಿನ ಥಲಾಮಸ್ ಭಾಗವನ್ನು ಸಣ್ಣದಾಗುವಂತೆ ಮಾಡುತ್ತದೆ ಎಂಬ ತಪ್ಪು ತೀರ್ಮಾನಕ್ಕೆ ಬರಲಾಗುತ್ತಿತ್ತು. ಈಗ ಹಾಗೆ ಆಗುವ ಸಾಧ್ಯತೆ ತಪ್ಪಿದೆ. ಈಗ ಮತ್ತೊಂದು ಪ್ರೆಶ್ನೆ ಉದ್ಭವವಾಗುತ್ತದೆ. ಮೆದುಳಿನಲ್ಲಿ ಸಣ್ಣ ಥಲಾಮಸ್ ಇರುವ ವ್ಯಕ್ತಿಗಳು ಕೋವಿಡ್ ಕಾಯಿಲೆಗೆ ಒಳಗಾಗುವ ಸಾಧ್ಯತೆ ಜಾಸ್ತಿ ಇದೆಯೇ ? ಅಥವಾ ಈ ಸಣ್ಣ ಥಲಾಮಸ್ ಮತ್ತು ಕೋವಿಡ್ ಕಾಯಿಲೆ ಒಬ್ಬರ ಕಾಣಿಸಿಕೊಳ್ಳುವುದು ಕಾಕತಾಳೀಯವೇ ? ಕೆಲವು ಸಂಶೋಧಕರು ಈ ಮೇಲಿನ ಅಧ್ಯಯನ ಬೆಳಕಿಗೆ ಬಂದ ನಂತರ ಮತ್ತೊಂದು ಪ್ರೆಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಿದ್ದಾರೆ.

ಕೋವಿಡ್ ಪೀಡಿತರ ಮೆದುಳಿನಲ್ಲಿ ಕಂಡು ಬರುವ ರೀತಿಯ ಮೆದುಳಿನ ಗಾತ್ರ ನಷ್ಟವಾಗುವುದು ಇತರ ವೈರಸ್ ಕಾಯಿಲೆಗಳಲ್ಲಿ ಕಂಡು ಬರುವುದೇ? ನಮ್ಮ ದೇಹದ ನರಮಂಡಲದ ಮೇಲೆ ಪರಿಣಾಮ ಬೀರುವ ಬೇರೆ ವೈರಸ್ ಕಾಯಿಲೆಗಳಿವೆ. ಮುಖ್ಯವಾಗಿ ದಢಾರ (measles), ಏಡ್ಸ್, ಹರ್ಪಿಸ್ ಮತ್ತು ಪೋಲಿಯೊ – ಇವು ನಮ್ಮ  ದೇಹದ ಮೇಲೆ ಬೀರುವ ಪರಿಣಾಮಗಳು ತೀರಾ ಗಂಭೀರವಾಗಿರುತ್ತವೆ. ಆದರೆ ಮೆದುಳಿನ ಮೇಲೆ ಪರಿಣಾಮ ಬೀರುವ ಶ್ವಾಸಕಾಂಗ ವ್ಯೂಹದ ವೈರಸ್ ಎಂದರೆ ಕರೋನಾ ಹೊರತು ಪಡಿಸಿ Respiratory Syncytial Virus. ಆದರೆ ಇವೆ ಮೆದುಳಿನಲ್ಲಿನ ತೊಂದರೆಯಿಂದ ದೇಹದ ಕಂಪನ ಹಾಗೂ ಮೆದುಳಿನ ಮೇಲೆ ಉರಿಯೂತದ (Inflammation) ಪರಿಣಾಮ ಹೊಂದಿವೆ. ಆದರೆ ಮೆದುಳಿನ ಗ್ರೇ ಮ್ಯಾಟರ್ ಮೇಲೆ ಪ್ರಭಾವ ಬೀರಿ ಅಲ್ಲಿನ ನರ ಜೀವಕೋಶಗಳ ನಾಶಕ್ಕೆ ಕಾರಣವಾಗುವ ವೈರಸ್ ಎಂದರೆ ಕರೋನ ಮಾತ್ರ.

ಹಾಗೆಯೇ ಇದರಿಂದ ದೇಹದಲ್ಲಿ ಕಂಪನ ( ( Seizures), ಪಾರ್ಶ್ವವಾಯು ಮತ್ತು Gullian – Barre Syndrome ಎನ್ನುವ ಕಾಯಿಲೆಯೂ ಬರಬಹುದು. ಈ ಗುಲಿಯನ್ ಬಾರಿ ಸಿಂಡ್ರೋಮ್ ನಲ್ಲಿ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆಯು ದೇಹದ ನರಗಳ ಮೇಲೆ ದಾಳಿ ಮಾಡಿ ವಿವಿಧ ರೋಗ ಲಕ್ಷಣಗಳನ್ನು ಉಂಟು ಮಾಡುತ್ತವೆ. ಹೆಚ್ಚಿನ ಸಂದರ್ಭ ಈ ಕಾಯಿಲೆ ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕಿನ ನಂತರ ಉಂಟಾಗುತ್ತದೆ. ಆದರೆ ಕರೋನಾದ ಕಡಿಮೆ ಪ್ರಮಾಣದ ಸೋಂಕಿನಿಂದಲೂ ಮೆದುಳಿನಲ್ಲಿ ಗಮನಾರ್ಹವಾದ ನಷ್ಟವಾಗುವುದು ಎಲ್ಲಾ ಪರಿಣಾಮಗಳಿಗಿಂತಲೂ ದೊಡ್ಡ ಸಮಸ್ಯೆ ಹಾಗೆಯೇ ಗಂಭೀರವಾದದ್ದು ಕೂಡ.
ಈ ತಜ್ಞರ ಅಭಿಪ್ರಾಯದ ಪ್ರಕಾರ ನಾವೆಲ್ಲ ಈಗ ಕೋವಿಡ್ ಕಾಯಿಲೆಯ ಸಂಖ್ಯೆಗಳ ಮೇಲೆ ಗಮನ ಹರಿಸುವುದಕ್ಕಿಂತ ಜಾಸ್ತಿ ಆ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಬೇಕಾದ ಪರಿಸ್ಥಿತಿ ಹಾಗೂ ನಂತರ ಬರುವ ಮರಣ – ಇವುಗಳ ಮೇಲೆ ಹೆಚ್ಚು ಗಮನಹರಿಸಬೇಕು.

ತೀವ್ರ ಪ್ರಮಾಣದ ಸೋಂಕಿನಲ್ಲಿಯೂ ಹಾಗೂ ವಿವಿಧ ಪ್ರಬೇಧಗಳ ಹಾವಳಿಗಳ ನಡುವೆಯೂ ಲಸಿಕೆಗಳು ತಮ್ಮ ಕೆಲಸ ಮಾಡಿ ಬಹಳಷ್ಟು ಜನರ ಮರಣ ತಪ್ಪಿಸುತ್ತಿವೆ. ಆದರೆ ಈ ಅಧ್ಯಯನದ ಪ್ರಕಾರ ಸಣ್ಣ ಪ್ರಮಾಣದ ಸೋಂಕು ಸಹಿತ ಗಂಭೀರ ಪರಿಣಾಮ ತೋರಿಸುತ್ತಿರುವುದರಿಂದ ಸೋಂಕು ಬರದಂತೆ
ಮಾಡುವುದು ಹೇಗೆ ಎಂಬುದರ ಬಗ್ಗೆ ಗಮನಹರಿಸಬೇಕು.

ವಿಜ್ಞಾನಿಗಳು, ವೈದ್ಯರು ನಿರಂತರ ಅಧ್ಯಯನ, ವಿಶ್ಲೇಷಣೆ ನಡೆಸುತ್ತಿರುವಾಗಲೇ ಕರೋನಾ ವೈರಸ್ ತನ್ನ ರೂಪಾಂತರ ಮತ್ತಿತರ ವಿಧಾನಗಳಿಂದ ಹಾವಳಿ
ಮುಂದುವರಿಸುತ್ತಾ ವಿಜ್ಞಾನಿಗಳ ನಿದ್ರೆ ಕೆಡಿಸುತ್ತಿದೆ.