Saturday, 23rd November 2024

‘ಗ್ರೀನ್ ಪಾಸ್‌ಪೋರ್ಟ್’ ಪಟ್ಟಿಗೆ ಕೋವಿಶೀಲ್ಡ್: ಅನಿವಾಸಿ ಭಾರತೀಯರಿಗೆ ಸಂತಸ

ನವದೆಹಲಿ: ಯೂರೋಪ್ ನ 7 ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯನ್ನು ‘ಗ್ರೀನ್ ಪಾಸ್‌ಪೋರ್ಟ್’ ಪಟ್ಟಿಗೆ ಸೇರ್ಪಡೆ ಮಾಡಿವೆ. ಈ ಮೂಲಕ ಸ್ವದೇಶಿ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದ ಅನಿವಾಸಿ ಭಾರತೀಯರಿಗೆ ಸಂತಸವಾಗಿದೆ.

ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಸೇರಿಸಲು ನಿರಾಕರಿಸುತ್ತಿದ್ದ ಯೂರೋಪಿಯನ್ ರಾಷ್ಟ್ರಗಳು ತಮ್ಮ ಹಠಮಾರಿತನವನ್ನು ಪಕ್ಕಕ್ಕಿಟ್ಟು, ಕೋವಿಶೀಲ್ಡ್ ಲಸಿಕೆಯನ್ನು ‘ಗ್ರೀನ್ ಪಾಸ್‌ಪೋರ್ಟ್’ ಪಟ್ಟಿಗೆ ಸೇರ್ಪಡೆ ಮಾಡಿವೆ. ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ಸ್ಪೇನ್ ಸೇರಿದಂತೆ 7 ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯನ್ನು ‘ಗ್ರೀನ್ ಪಾಸ್‌ಪೋರ್ಟ್’ ಪಟ್ಟಿಗೆ ಸೇರ್ಪಡೆ ಮಾಡಿವೆ.

ತನ್ನ ‘ಲಸಿಕೆ ಪಾಸ್‌ಪೋರ್ಟ್‌’ನಲ್ಲಿ ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಸೇರಿಸಲು ನಿರಾಕರಿಸುತ್ತಿರುವ ಐರೋಪ್ಯ ಒಕ್ಕೂಟದ ನಡೆ ಭಾರತಕ್ಕೆ ತೀವ್ರ ಅಸಮಾಧಾನ ಮೂಡಿಸಿತ್ತು. ಪ್ರತಿಯಾಗಿ ಎದಿರೇಟು ನೀಡಲು ಭಾರತ ಮುಂದಾಗಿತ್ತು. ಕ್ವಾರೆಂಟೈನ್ ನೀತಿಯಲ್ಲಿ ನೀಡಿರುವ ವಿನಾಯಿತಿ ರದ್ದುಗೊಳಿಸುವ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ಕೊಡಲು ನಿರ್ಧರಿಸಿತ್ತು. ಭಾರತಕ್ಕೆ ಬಂದ ನಂತರ ಯುರೋಪಿಯನ್ ಒಕ್ಕೂಟದ ಜನರು ಕಡ್ಡಾಯವಾಗಿ ಸಂಪರ್ಕತಡೆಯನ್ನು (ಕ್ವಾರಂಟೈನ್) ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ತನ್ನ ಡಿಜಿಟಲ್ ಕೋವಿಡ್ ಪ್ರಮಾಣಪತ್ರಗಳಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಪರಿಗಣಿಸಬೇಕು ಎಂದು ಒಕ್ಕೂಟಕ್ಕೆ ಭಾರತ ಆಗ್ರಹಿಸಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಯೂರೋಪ್ ನ 7 ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯನ್ನು ‘ಗ್ರೀನ್ ಪಾಸ್‌ಪೋರ್ಟ್’ ಪಟ್ಟಿಗೆ ಸೇರ್ಪಡೆ ಮಾಡಿವೆ.

ಹೊಸ ‘ಗ್ರೀನ್ ಪಾಸ್’ ಯೋಜನೆಯಡಿ, ಕೋವಿಶೀಲ್ಡ್ ಲಸಿಕೆ ಪಡೆದ ಜನರಿಗೆ ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡಿರಲಿಲ್ಲ. ಯುರೋಪಿಯನ್ ಔಷಧೀಯ ಸಂಸ್ಥೆ ಅನುಮೋದಿಸಿದ ಲಸಿಕೆಗಳನ್ನು ಪಡೆದವರಿಗೆ ಮಾತ್ರವೇ ಯುರೋಪಿಯನ್ ದೇಶಗಳು ತಮ್ಮೊಳಗೆ ಬರಲು ಅವಕಾಶ ನೀಡುತ್ತಿವೆ. ಫೈಜರ್, ಮಾಡೆರ್ನಾ, ಆಸ್ಟ್ರಾಜೆನಿಕಾ ಮತ್ತು ಜಾನ್ಸೆನ್ ಲಸಿಕೆಗಳು ಇದರಲ್ಲಿ ಸೇರಿವೆ. ಆಸ್ಟ್ರಾಜೆನಿಕಾ ಯೂರೋಪ್ ಸಂಸ್ಥೆಯದ್ದೇ ಆದರೂ ಅದರ ಭಾರತೀಯ ಆವೃತ್ತಿಯಾಗಿರುವ ಕೋವಿಶೀಲ್ಡ್‌ಗೆ ಇನ್ನೂ ಅನುಮತಿ ನೀಡಿಲ್ಲ.