Saturday, 14th December 2024

ಕಾಡಿನ ಕಾಯಿಯಿಂದ ಅಟ್ಟೆಣೆ : ಇದೆಂಥಾ ಸೋಜಿಗ!

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ನಮ್ಮ ಮಾವನ ಮನೆಯ ಹತ್ತಿರ ಒಂದು ಬೃಹದಾಕಾರದ ಮರವಿದೆ. ಅದಕ್ಕೆ ಎಷ್ಟು ವಯಸ್ಸಾಗಿರಬಹುದೆಂದು ಯಾರಿಗೂ ಗೊತ್ತಿಲ್ಲ. ಅದೆಷ್ಟು ಹಳೆಯದೆಂದರೆ, ಆ ಊರಿನ ಹೆಸರಿಗೆ ಮೂಲವೇ ಆ ಮರ! ಹೆದ್ದಾರಿಯಿಂದ ತುಸು ಒಳಗಿರುವ, ಗಾಡಿ ಪೈಂಟ್ ಸಂಪರ್ಕವಿದ್ದ ತಾರಿಕಟ್ಟೆ ಎಂಬ ಪುಟ್ಟ ಪೇಟೆಯಲ್ಲಿ ನಮ್ಮ ಮಾವನ ಮನೆ ಇರುವುದು.

ಹಿಂದೆ ಇದ್ದ ಗಾಡಿಪೈಂಟ್ ರಸ್ತೆಯು ಈಗ ಟಾರು ರಸ್ತೆಯಾಗಿ ಬದಲಾಗಿದ್ದರೂ, ಅದರ ಮೇಲೆ ಕಲ್ಲು ಸಾಗಿಸುವ ಲಾರಿಗಳ ಓಡಾಟ ಉಂಟೇ ವಿನಃ ಬಸ್ ಸಂಚಾರ ಇನ್ನೂ ಆಗಿಲ್ಲ. ಒಂದು ಸಾರಾಯಿ ಅಂಗಡಿ, ಒಂದೆರಡು ಪುಟ್ಟ ದಿನಸಿ ಅಂಗಡಿ ಗಳು, ಹಾಲು ಸಂಗ್ರಹಿಸುವ ಡೈರಿ ಹೊಂದಿರುವ ತಾರಿಕಟ್ಟೆಯು ಈಗಲೂ ಒಂದು ಪುಟಾಣಿ ಹಳ್ಳಿಯೇ. ಆ ಊರಿಗೆ ಹೆಸರು ಬರುವಂತೆ ಮಾಡಿದ ಒಂದು ಬೃಹತ್ ತಾರಿ ಮರ ಈಗಲೂ ಇದೆ!

ಅಗಲವಾದ ಕಾಂಡ, ವಿಶಾಲವಾಗಿ ಹರಡಿಕೊಂಡ ರೆಂಬೆ ಕೊಂಬೆಗಳು. ನಾನು ಬಾಲ್ಯದಲ್ಲಿ ಕಂಡಾಗಲೂ ಆ ಮರ ಹಾಗೆಯೇ ಬೆಳೆದುಕೊಂಡಿತ್ತು; ಈಗಲೂ
ಹಾಗೆಯೇ ಇದೆ. ಬಾಲ್ಯದಲ್ಲಿ ನಮ್ಮಜ್ಜಿಯನ್ನು ಕೇಳಿದ್ದೆ – ಈ ತಾರಿ ಮರ ಎಷ್ಟು ಹಳೆಯದು ಎಂದು. ಅವರು ಪುಟಾಣಿಯಾಗಿದ್ದಾಗಲೂ ಆ ಮರ ಹಾಗೆಯೇ
ಬೆಳೆದುಕೊಂಡಿತ್ತಂತೆ, ಅದರ ಬುಡದಲ್ಲಿದ್ದ ಗಾಡಿಪೈಂಟ್‌ನಲ್ಲಿ ನಡೆದುಕೊಂಡೇ ಅವರು ತಮ್ಮ ತವರುಮನೆಗೆ ಹೋಗುತ್ತಿದ್ದರಂತೆ! ‘ಆ ತಾರಿಮರ ಇಪ್ಪುಕೆ ಹೋಯಿ, ಅಲ್ಲಿಗೆ ತಾರಿಕಟ್ಟೆ ಎಂಬ ಹೆಸರು ಬಂದಿತ್, ಕಾಂತಿಲ್ಯಾ?’ ಎಂದು ಅವರು ನನಗೇ ಮರುಪ್ರಶ್ನೆ ಮಾಡಿದ್ದರು! ತಾನು ಬಾಲ್ಯದಿಂದಲೂ ಕಂಡಿದ್ದ ಅದು, ಒಂದು ಪುರಾತನ ಮರ ಎಂದು ವ್ಯಕ್ತಪಡಿಸುವ ರೀತಿ ಅದು.

ಅವರ ತಾಯಿಯ ಮನೆಯಿಂದ ಹೊರಟು, ತಾರಿಕಟ್ಟೆಯ ಗಾಡಿರಸ್ತೆಯಲ್ಲಿ ನಡೆದು, ತಾರಿ ಮರದ ಬುಡದಲ್ಲೇ ತಿರುವು ತೆಗೆದುಕೊಂಡು ಅವರು ನಮ್ಮೂರಿಗೆ ಬಂದಿದ್ದು ಅದೆಷ್ಟೋ ಸಲ. ಅದಂತೂ ನಿಜ, ಅವರಿಗೆ ಬಾಲ್ಯ ವಿವಾಹವಾಗಿದ್ದರಿಂದ, ಅವರು ಪುಟಾಣಿ ಯಾಗಿದ್ದಾಗಲೇ ಆ ಮರವನ್ನು ನೋಡುತ್ತಲೇ ತವರು
ಮನೆಯಿಂದ ಗಂಡನ ಮನೆಗೆ, ಗಂಡನ ಮನೆಯಿಂದ ತವರು ಮನೆಗೆ ಓಡಾಡುತ್ತಿದ್ದರು.

ನಮ್ಮ ಅಜ್ಜಿಯ ಬಾಲ್ಯದಲ್ಲೇ ಮರವಾಗಿ ಬೆಳೆದಿದ್ದ ಆ ತಾರಿಮರಕ್ಕೆ ಎಷ್ಟು ವರ್ಷವಾಗಿರಬಹುದು! ಆ ಮರದ ಬುಡದಲ್ಲಿ ಆಗೊಂದು ಕಟ್ಟೆಯಿದ್ದಿರಬೇಕು.
ಅದಕ್ಕೆಂದೇ ಆ ಮರದ ಸುತ್ತ ಬೆಳೆದ ಆ ಪುಟ್ಟ ಪೇಟೆಗೆ ತನ್ನ ಹೆಸರನ್ನೇ ಕೊಟ್ಟ ಗಟ್ಟಿಗಿತ್ತಿ ಆ ತಾರಿಮರ. ಆ ತಾರಿಮರ ಅದೆಷ್ಟು ಗಟ್ಟಿ ಎಂದರೆ, ಒಮ್ಮೆ ಮುರಕಲ್ಲು
ತುಂಬಿದ ಲಾರಿಯೊಂದು ಅದಕ್ಕೆ ಡಿಕ್ಕಿ ಹೊಡೆಯಿತು; ಲಾರಿ ಜಕುಂ ಆಯಿತೇ ಹೊರತು, ಮರಕ್ಕೇನೂ ಬಾಧೆಯಾಗಲಿಲ್ಲ. ಕಾಂಡದ ಒಂದು ಭಾಗ ಜಜ್ಜಿ ಹೋಯಿ ತಷ್ಟೆ; ಕೆಲವೇ ಸಮಯದಲ್ಲಿ ಮರ ತನ್ನ ಕಾಂಡವನ್ನು ತಾನೇ ರಿಪೇರಿ ಮಾಡಿಕೊಂಡಿತು. ಕೆಲವು  ರ್ಷಗಳ ಹಿಂದೆ ಅದರ ಒಂದು ದೊಡ್ಡ ಕೊಂಬೆಯು, ಆಷಾಢದ ಗಾಳಿ ಮಳೆಯ ಹೊಡೆತಕ್ಕೆ ಕುಸಿದುಬಿತ್ತು; ಮರದ ಕ್ಯಾನೊಪಿಯ ಸುಮಾರು ಕಾಲುಭಾಗ ಕೆಳಗೆ ಬಿದ್ದು, ಮರವು ಸ್ವಲ್ಪ ಬೋಳು ಬೋಳಾಗಿ ಕಾಣತೊಡಗಿತು. ಆದರೆ ಒಂದೆರಡು ವರ್ಷಗಳಲ್ಲೇ, ನಷ್ಟಗೊಂಡ ತನ್ನ ಆ ವಿಶಾಲ ಕ್ಯಾನೊಪಿಯನ್ನು ಪುನಃ ಬೆಳೆಸಿಕೊಂಡು, ಮೊದಲಿನಂತೆ ಹಸಿರಿನಿಂದ ತುಂಬಿಕೊಂಡಿತು ಆ ತಾರಿ ಮರ!

ತಾರಿಕಟ್ಟೆ ಎಂಬ ಊರಿಗೆ ಹೆಸರನ್ನು ಕಟ್ಟಿಕೊಟ್ಟ ಆ ತಾರಿ ಮರದ ಮೇಲೆ ಬಂದು ಕೂರುವ ಹಕ್ಕಿ ಪಿಕ್ಕಿಗಳ ಕಲರವವನ್ನು ಕೇಳುವುದೇ ಒಂದು ಚಂದ! ಹತ್ತಾರು ಬಗೆಯ ಹಕ್ಕಿಗಳು, ಜತೆಗೆ ಅಳಿಲುಗಳು, ಕಾಯಿಕಳ್ಳಗಳು, ಎರಣೆಗಳು ಆ ಮರವನ್ನು ತಮ್ಮ ಮನೆಯನ್ನಾಗಿಸಿಕೊಂಡಿದ್ದವು. ಇನ್ನು ಅದೆಷ್ಟು ಬಗೆಯ ಇರುವೆ, ಗೆದ್ದಲು, ಕೀಟ, ಜೀರುಂಡೆ, ಜೇಡ, ಕಂಬಳಿ ಹುಳುಗಳಿಗೆ ಆ ವಿಶಾಲ ಮರ ಆಶ್ರಯ ನೀಡಿತ್ತೋ, ಯಾರೂ ಲೆಕ್ಕವಿಟ್ಟಿಲ್ಲ. ಆ ಮರದ ಬೃಹತ್ ರೆಂಬೆಕೊಂಬೆಗಳು, ಸಂಜೆಯಾದಂತೆ, ನಿಗೂಢ ಕತ್ತಲಿನ ನೆರಳಿನಲ್ಲಿ ಮುಳುಗಿ ಹೋಗುತ್ತವೆ.

ಅಲ್ಲೊಂದು ಭೂತ ಇತ್ತು ಎಂದು ಕೆಲವು ಹೇಳುತ್ತಿದ್ದರು. ಆದರೆ, ತಾರಿಕಟ್ಟೆಗೆ ವಿದ್ಯುತ್ ಸಂಪರ್ಕ ಬಂದ ನಂತರ, ಭೂತಗಳ ಕಥೆಗಳು ಓಡಿಹೋದದ್ದಂತೂ ನಿಜ. ಚಳಿಗಾಲ ಕಳೆಯುವ ಸಮಯದಲ್ಲಿ ಆ ತಾರಿಮರದ ತುಂಬಾ ಹಕ್ಕಿಗಳು ತುಂಬಿಕೊಂಡು, ಅದೊಂದು ಖಗಗಳ ಪುಟ್ಟ ಗ್ರಾಮದಂತೆ ಬದಲಾಗುತ್ತಿತ್ತು. ಏಕೆಂದರೆ, ಫಲಗಾಳಿ ಬೀಸಿದ ಕೆಲವೇ ದಿನಗಳಲ್ಲಿ ಆ ತಾರಿಮರದ ತುಂಬಾ ಪುಟಾಣಿ ಹೂವುಗಳು. ಆ ಹೂವಿನ ಮಕರಂದ ಹೀರಲು ಬರುವ ಪಕ್ಷಿಗಳಿಂದಾಗಿ, ಅಲ್ಲೆಲ್ಲಾ
ಚಿಲಿಪಿಲಿಯ ಅನುರಣನ! ದುಂಬಿಗಳ, ಜೇನುಗಳ ಝೇಂಕಾರದ ಗುಂಗು!

ನಾವು ಮಕ್ಕಳೆಲ್ಲಾ ತಾರಿ ಮರ ಹೂತಾಗ ಮೂಗು ಮುಚ್ಚಿಕೊಳ್ಳುವುದುಂಟು! ‘ಹೇ, ಎಲ್ಲಾ ಮೂಗು ಮುಚ್ಕಣಿ, ತಾರಿ ಮರ ಹೂ ಬಿಟ್ಟಿತ್!’ ತಾರಿಮರದ ಹೂವಿನ ಸುವಾಸನೆಯು ಹಕ್ಕಿಗಳಿಗೆ, ಕೀಟಗಳಿಗೆ, ದುಂಬಿಗಳಿಗೆ ಇಷ್ಟವೆನಿಸಿದರೆ, ನಮಗೆಲ್ಲಾ ಅದು ‘ಹೇಲು ವಾಸನೆ!’ ನಿಜ, ಆ ಹೂವುಗಳ ತೀಕ್ಷ್ಣ ವಾಸನೆಯು ಆ ವಾಸನೆ ಯನ್ನು ಹೋಲುತ್ತದೆ. ಆ ವಾಸನೆ ಅದೆಷ್ಟು ತೀಕ್ಷ್ಣ ಮತ್ತು ಘಾಟೆಂದರೆ, ಹತ್ತಾರು ಮಾರು ದೂರದ ತನಕವೂ ವಾಸನೆ ಅಂದರೆ ವಾಸನೆ! ದಟ್ಟ ಕಾಡಿನ ಮಧ್ಯೆ ತಾರಿ ಮರವಿದ್ದರೆ, ಅದು ಹೂ ಬಿಡುವ ಶ್ರಾಯದಲ್ಲಿ ದೂರದಿಂದಲೇ ಅದರ ಇರವನ್ನು ಗುರುತಿಸಬಹುದಾದಷ್ಟು ತೀಕ್ಷ್ಣ ವಾಸನೆ ಅದರದ್ದು.

ಈ ಹೂವುಗಳು ಕಾಯಿಯಾದಾಗ ಮಕ್ಕಳಿಗೆ ಇಷ್ಟ. ತಾರಿ ಕಾಯಿಯನ್ನು ಒಡೆದು, ಒಳಗಿನ ಬೀಜವನ್ನು ತಿಂದರೆ, ಸುಮಾರಾಗಿ ಗೋಡಂಬಿಯ ರುಚಿ. ಆದರೆ, ಅದು ಪಿತ್ತ ಆದ್ದರಿಂದ ಜಾಸ್ತಿ ತಿನ್ನಬಾರದು ಎಂಬುದು ಹಿರಿಯರ ಎಚ್ಚರಿಕೆ. ಜಾಸ್ತಿ ತಿಂದರೆ ತಲೆ ತಿರುಗುತ್ತದಂತೆ. ದೂರದ ಕುದುರೆಮುಖ ಶಿಖರದ ತಪ್ಪಲಿನ ಕಾಡಿನಲ್ಲಿ ಚಾರಣ ಮಾಡುವಾಗ ನೆಲದಲ್ಲಿ ಬಿದ್ದಿದ್ದ ತಾರಿ ಬೀಜಗಳನ್ನು ಕಂಡೇ, ಆ ಬೃಹತ್ ಮರವನ್ನು ನಾನು ಗುರುತಿಸಿದ್ದೆ. ನಮ್ಮ ಮನೆಯ ಹಿಂಭಾಗದ ತೋಟದಲ್ಲಿದ್ದ ದೂಪದ ಮರವೊಂದರ ಕಥೆ ಇನ್ನಷ್ಟು ಸ್ವಾರಸ್ಯಕರ.

ಗಾತ್ರದಲ್ಲಿ ತಾರಿ ಮರದಷ್ಟು ವಿಶಾಲವಾದ ಕ್ಯಾನೊಪಿಯನ್ನು ದೂಪದ ಮರಗಳು ಹೊಂದಿರುವುದಿಲ್ಲವಾದರೂ, ದೊಡ್ಡ ದೊಡ್ಡ ಹಸಿರೆಲೆಗಳನ್ನು ದಟ್ಟವಾಗಿ ಬೆಳೆಸಿಕೊಂಡು, ಇಡೀ ಮರಕ್ಕೆ ಮರವೇ ಕತ್ತಲುಕ್ಕಿಸುವಷ್ಟು ಹಸಿರು ಸಿರಿಯನ್ನು ತುಂಬಿಸಿಕೊಂಡಿರುತ್ತವೆ. ಅಂಗೈಯಗಲದ ದೂಪದ ಎಲೆಗಳು ದಟ್ಟ ಹಸಿರು. ಇವುಗಳನ್ನು ಬೇಯಿಸಿ, ಮಳೆಯಿಂದ ರಕ್ಷಣೆ ನೀಡುವ ಗೊರಬಿಗೆ ಪೋಣಿಸುವುದುಂಟು. ಈ ಮರವು ಬೃಹತ್ ಕಾಂಡ, ಹಲವು ರೆಂಬೆಗಳನ್ನು ಬಿಟ್ಟುಕೊಂಡು ದೊಡ್ಡದಾಗಿ ಬೆಳೆಯುವ ಮರ. ನಮ್ಮ ಸಣ್ಣ ತೋಟದಲ್ಲಿ ಕೆಲವು ಹಳೆಯ ಅಡಕೆ ಮರಗಳ ನಡುವೆ ಈ ದೂಪದ ಮರವು ದೈತ್ಯಾಕಾರದ ಶೂರನಂತೆ ತಲೆ ಎತ್ತಿ ನಿಂತಿತ್ತು.

ಹಾಗೆ ನೋಡಿದರೆ, ಅಡಕೆ ಮರಗಳ ಮಧ್ಯೆ ಇಂಥ ಬೃಹತ್ ಮರಗಳಿದ್ದರೆ ತೋಟಕ್ಕೆ ತೊಂದರೆ ಎಂದು ಕತ್ತರಿಸಿ ಹಾಕುತ್ತಾರೆ. ಅದರಲ್ಲೂ ದೂಪದ ಎಲೆಗಳ
ದಟ್ಟಣೆ ಎಷ್ಟೆಂದರೆ, ಅದರ ಸುತ್ತಲೂ ‘ಮರಗೊಡ್ಲು’ ಕಾಟ ಜಾಸ್ತಿ. ಆದರೆ, ನಮ್ಮ ಮನೆಯವರು ಆ ಬೃಹತ್ ಮರವನ್ನು ಕಾಪಿಟ್ಟುಕೊಂಡಿದ್ದರು. ಅದಕ್ಕೊಂದು ಕಾರಣವೂ ಇತ್ತು. ಅದೆಂದರೆ, ವರ್ಷಕ್ಕೊಮ್ಮೆ ಆ ಮರ ನೀಡುವ ಸಾವಿರಾರು ದೂಪದ ಕಾಯಿಗಳು. ಈ ದೂಪದ ಮರವೂ ಸಾಕಷ್ಟು ಹಳೆಯದೇ. ನಮ್ಮ ಹಿರಿಯರು ಸುಮಾರು 60 ವರ್ಷಗಳ ಹಿಂದೆ ಜಮೀನನ್ನು ಪಾಲು ಮಾಡಿಕೊಂಡಾಗ, ಈ ದೂಪದ ಮರವನ್ನು ಸಹ ಪಾಲು ಮಾಡಿಕೊಂಡಿದ್ದರು!

ಕಾಲು ಭಾಗದ ಮರ ಒಬ್ಬರ ಜಾಗಕ್ಕೆ, ಇನ್ನು ಮುಕ್ಕಾಲು ಭಾಗದ ಮರ ಇನ್ನೊಬ್ಬರ ಜಾಗಕ್ಕೆ ವಿಭಾಗವಾಗಿತ್ತು! ಈ ರೀತಿ ಮರವನ್ನು ಪಾಲು ಮಾಡಿಕೊಂಡು, ಹಂಚಿಕೊಳ್ಳಲು ಇದ್ದ ಮುಖ್ಯ ಕಾರಣವೆಂದರೆ, ಪ್ರತಿ ಮಳೆಗಾಲದ ಸಮಯದಲ್ಲಿ ಆ ಬೃಹತ್ ಮರ ನೀಡುತ್ತಿದ್ದ ಸಾವಿರಾರು ದೂಪದ ಕಾಯಿಗಳ ವಾಣಿಜ್ಯಕ ಮೌಲ್ಯ! ಸರಳವಾಗಿ ಹೇಳಬೇಕೆಂದರೆ, ದೂಪದ ಕಾಯಿಯನ್ನು ಅಟ್ಟು ತಯಾರಿಸುವ ದೂಪದ ಎಣ್ಣೆಯು ಆಗಿನ ದಿನಗಳಲ್ಲಿ ಬಹು ಮೌಲ್ಯ ಹೊಂದಿತ್ತು.
ಬೋಂಡಾ ಮಾಡಲು, ಮುಳುಕ ಮಾಡಲು, ಪಲ್ಯ ಮಾಡಲು, ಸಂಡಿಗೆ, ಹಪ್ಪಳ ಕರಿಯಲು ಉಪಯೋಗಕ್ಕೆ ಬರುತ್ತಿದ್ದ ದೂಪ ಎಣ್ಣೆಯು ಈಗ ಬಹುತೇಕ ಕಣ್ಮರೆಯಾಗಿ ಹೋಗಿದೆ! ಆ ಕಾಲಘಟ್ಟದ ಕೃಷಿಕರು ಮನೆಯ ಸುತ್ತಲೂ ಸಿಗುತ್ತಿದ್ದ ಕಾಯಿಗಳಿಂದ ತಯಾರಿಸುತ್ತಿದ್ದ ಈ ಅಪರೂಪದ ಎಣ್ಣೆಯನ್ನು ನಾನು
ನೋಡದೇ ಮೂರು ನಾಲ್ಕು ದಶಕಗಳೇ ಸಂದಿವೆ.

ದೂಪದ ಎಣ್ಣೆಯನ್ನು ಈ ಕಾಲಘಟ್ಟದಲ್ಲಿ ನಿಮಗೆ ತೋರಿಸಿದರೆ ಖಂಡಿತವಾಗಿಯೂ ನಿಬ್ಬೆರಗಾಗುತ್ತೀರಿ! ಅದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ‘ನೋಡಲು ದೂಪದ ಎಣ್ಣೆಯು ಬಿಳಿಯ ಚೆಂಡಿನ ರೂಪದಲ್ಲಿ ಇರುತ್ತದೆ. ಅದನ್ನು ನೆಲದ ಮೇಲೆ ಚೆಂಡಿನ ರೀತಿ ಉರುಳಿಸಬಹುದು!’ ಅಚ್ಚರಿ ಎನಿಸದೆ? ಮಲೆನಾಡಿನ ಮನೆಯಲ್ಲಿ ಉದ್ದಿನ ಸೆಂಡಿಗೆ ಕರಿಯಬೇಕೆಂಬ ಮನಸ್ಸಾದರೆ, ಡಬ್ಬಿಯಲ್ಲಿ ತುಂಬಿಟ್ಟಿದ ಒಂದು ‘ದೂಪದ ಎಣ್ಣೆ ಚೆಂಡನ್ನು’ ಹೊರತೆಗೆದು, ಕತ್ತಿಯಿಂದ ಒಂದೆರಡು ಚಮಚದಷ್ಟು ಕೆರೆದು ಬಾಣಲೆಗೆ ಬೀಳಿಸುತ್ತಿದ್ದರು. ಬಿಳಿಯ ಪುಡಿಯಂತಾಗುವ ಅದು ಬಿಸಿಗೆ ಕರಗಿ ಎಣ್ಣೆಯಾಗುತ್ತದೆ!

ಹಲಸಿನ ಮುಳಕವನ್ನೋ, ಹಪ್ಪಳವನ್ನೂ ಕರಿಯಬೇಕೆನಿಸಿದರೆ, ಒಂದು ದೂಪದ ಎಣ್ಣೆ ಉಂಡೆಯನ್ನು ಬಾಣಲೆಯಲ್ಲಿಟ್ಟು ಬಿಸಿ ಮಾಡಿದರೆ, ಕಾಲು ಬಾಣಲೆ
ಎಣ್ಣೆಯಾಗುತ್ತದೆ. ದೂಪದ ಎಣ್ಣೆಯಲ್ಲಿ ಕರಿದ ಹಪ್ಪಳಕ್ಕೆ ರುಚಿ ಜಾಸ್ತಿ ಎನ್ನುವುದೂ ಉಂಟು! ಈಗಿನ ವೈಜ್ಞಾನಿಕ ಪರಿಭಾಷೆಯಲ್ಲಿ, ಅದರ ಅನ್‌ಸ್ಯಾಚುರೇಟೆಡ್ ಫ್ಯಾಟ್ ನ ಅಂಶ, ಗುಣಮಟ್ಟ ನಾನರಿಯೆ, ಆದರೆ ಕೊಠಡಿ ಉಷ್ಣತೆಯಲ್ಲಿ ಬಿಳಿ ಉಂಡೆಯಂತಾಗುವು ಆ ಖಾದ್ಯ ತೈಲ ಇಂದಿಗೂ ನನಗೊಂದು ಸೋಜಿಗ. ಮಳೆಗಾಲದ ಆರಂಭದ ಸಮಯದಲ್ಲಿ ದೂಪದ ಕಾಯಿಗಳು ಪಕ್ವವಾಗುತ್ತವೆ. ನಮ್ಮ ತೋಟದಲ್ಲಿರುವ ದೂಪದ ಮರದ ರೀತಿಯೇ, ಹಾಡಿಗುಡ್ಡೆಗಳಲ್ಲೂ ಇವು ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತವೆ. ಎಲ್ಲಾ ಮರಗಳೂ ಮಳೆಗಾಲ ಆರಂಭವಾದ ಕೂಡಲೆ ಸಾವಿರಾರು ಕಾಯಿಗಳನ್ನು ಉದುರಿಸಿತ್ತವೆ. ಅಡಕೆ ಗಾತ್ರದ ಅದರ ಕಾಯಿಯ ಒಳಗೆ, ದಪ್ಪನೆಯ ಬಿಳಿ ತಿರುಳು.

ಮಳೆ ಬಂದಿದ್ದರಿಂದಾಗಿ ಆ ತಿರುಳು ಮೊಳಕೆಯೊಡೆದು, ಕಾಯಿಗಳು ತಮ್ಮಷ್ಟಕ್ಕೆ ಬಿರಿಯುತ್ತವೆ. ಆ ಮೊಳಕೆಗಳು ಪುಟಾಣಿ ಸೊಂಡಿಲಿನ ರೀತಿ ಹೊರಬರುವು ದುಂಟು. ಮನೆಯವರೆಲ್ಲರೂ ಸುರಿಮಳೆಯಲ್ಲೇ ಕಂಬಳಿ ಕೊಪ್ಪೆ ಹೊದ್ದು, ದೂಪದ ಮರಗಳ ಅಡಿ ಬಿದ್ದಿರುತ್ತಿದ್ದ ಕಾಯಿಗಳನ್ನು ಆರಿಸಿ, ಬುಟ್ಟಿಯಲ್ಲಿ ತುಂಬಿ ತಂದು ಕೊಟ್ಟಿಗೆಯ ಮೂಲೆಯಲ್ಲಿ ರಾಶಿ ಹಾಕುತ್ತಿದ್ದರು. ಪುಟಾಣಿ ಕಲ್ಲಿನಿಂದ ಒಂದೊಂದೇ ಕಾಯಿಯನ್ನು ಜಜ್ಜಿ, ಒಳಗಿನ ಬಿಳಿಯ ತಿರುಳನ್ನು ಬೇರ್ಪಡಿಸಿ, ಬುಟ್ಟಿಯ ತುಂಬಾ ತುಂಬುವ ಕೆಲಸ ಮಕ್ಕಳದು.

ಈಗ ದೂಪದ ಎಣ್ಣೆ ತಯಾರಿಸುವ ಕೆಲಸ ಆರಂಭ. ಆ ಕೆಲಸ ಅದೆಷ್ಟು ಶ್ರಮದ್ದು ಎಂದರೆ, ಬಹುಶಃ ಆ ಶ್ರಮಕ್ಕೆ ಬೆದರಿಯೇ, ಈಚಿನ ತಲೆಮಾರಿನ ಕೃಷಿಕರು
ದೂಪದ ಎಣ್ಣೆ ಮಾಡುವ ಕೆಲಸವನ್ನೇ ಕೈಬಿಟ್ಟಿದ್ದಾರೆ. ಗಟ್ಟಿಯಿರುವ ಬಿಳಿ ತಿರುಳನ್ನು ಅರೆಯುವ ಕಲ್ಲಿನಲ್ಲಿ ನೀರಿನ ಜತೆ ಚೆನ್ನಾಗಿ ತಿರುವಬೇಕು. ಅರ್ಧಂಬರ್ಧ
ಅಪ್ಪಚ್ಚಿಯಾದ ಆ ತಿರುಳನ್ನು ನೀರು ಸಹಿತ, ದೊಡ್ಡ ಪಾತ್ರೆಗೆ ತುಂಬಿ, ಚೆನ್ನಾಗಿ ಬೇಯಿಸಬೇಕು.

ರಾತ್ರಿಯಿಡೀ ಕುದಿದು, ಕುದಿದು, ಬೆಳಗಿನ ಸಮಯಕ್ಕೆ ಒಂದರ್ಧ ಲೀಟರ್ ಎಣ್ಣೆಯು ಪಾತ್ರೆಯ ಮೇಲ್ಭಾಗದಲ್ಲಿ ತೇಲತೊಡಗುತ್ತದೆ. ಅದನ್ನು ಸೌಟಿನಿಂದ
ತೆಗೆದು, ಶೋಽಸಿ, ಆರಲು ಬಿಟ್ಟರೆ, ಬಿಳಿಯ ಗಡ್ಡೆಯಂತಾಗುತ್ತದೆ. ಇನ್ನೇನು ತನ್ನ ಮೃದುತ್ವವನ್ನು ಕಳೆದುಕೊಳ್ಳುವ ಸಮಯಕ್ಕೆ ಸರಿಯಾಗಿ, ದೂಪದ ಎಣ್ಣೆ ಯನ್ನು ಕೈಯಿಂದ ಆಯ್ದು ಉಂಡೆಯ ರೂಪಕ್ಕೆ ಇಳಿಸುತ್ತಾರೆ. ಬಿಳಿಯ ಚೆಂಡಿನ ರೂಪದ ದೂಪದ ಎಣ್ಣೆಯ ಉಂಡೆಗಳನ್ನು ಡಬ್ಬಿಯಲ್ಲಿ ತುಂಬಿಟ್ಟರೆ, ನಾಲ್ಕಾರು ತಿಂಗಳು ಕರಗಿಸಿ, ಕರಿಯುವ ಎಣ್ಣೆಯಾಗಿ ಉಪಯೋಗಿಸಬಹುದು.

1970ರ ದಶಕದಲ್ಲಿ ನಮ್ಮೂರಿನಲ್ಲಿ ಸಾಕಷ್ಟು ಸಂಖ್ಯೆಯ ಕೃಷಿಕರು ದೂಪದ ಎಣ್ಣೆಯನ್ನು ತಯಾರಿಸುತ್ತಿದ್ದರು. ಕಬ್ಬಿನಾಲೆ ಎಂಬ ಹಳ್ಳಿಯ ನಮ್ಮ ದೊಡ್ಡಮ್ಮ ನಮ್ಮೂರಿಗೆ ಬರುವಾಗ, ಒಂದಿಷ್ಟು ದೂಪದ ಎಣ್ಣೆಯ ಉಂಡೆಗಳನ್ನು, ಹಲಸಿನ ಹಪ್ಪಳದ ನಾಲ್ಕಾರು ಕಟ್ಟುಗಳನ್ನು ತರುತ್ತಿದ್ದರು. ಆ ಉಂಡೆ ಕರಗಿಸಿ, ಅವರೇ
ತಂದ ಹಲಸಿನ ಹಪ್ಪಳವನ್ನು ಕರಿದು ತಿನ್ನುವಾಗ ಎಲ್ಲರಿಗೂ ಖುಷಿ. ಆಗುಂಬೆಯ ತಪ್ಪಲಿನಲ್ಲಿದ್ದ ಕಬ್ಬಿನಾಲೆಯ ಸುತ್ತಲೂ ದೂಪದ ಮರಗಳೂ ಜಾಸ್ತಿ, ಹಲಸಿನ ಮರಗಳೂ ಜಾಸ್ತಿ. ಅಲ್ಲಿನ ಕೃಷಿಕರು ಶ್ರಮಕ್ಕೆ ಬೆದರದೇ, ಹೇರಳವಾಗಿ ದೂಪದ ಎಣ್ಣೆಯ ಉಂಡೆಗಳನ್ನು ತಯಾರಿಸುತ್ತಿದ್ದರು.

ಆದರೆ ನಂತರದ ದಶಕಗಳಲ್ಲಿ ದೂಪದ ಎಣ್ಣೆಯು ತನ್ನ ಜನಪ್ರಿಯತೆಯನ್ನು ಕಳೆದುಕೊಂಡು, ಈಚಿನ ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ದೂಪದ ಕಾಯಿಯ ತಿರುಳನ್ನು ಅಂಗಡಿಗೆ ಕಿಲೋ ಲೆಕ್ಕದಲ್ಲಿ ಈಗ ಮಾರುವುದೂ ಉಂಟು. ಕಾಡಿನ ದೊಡ್ಡ ಮರವೊಂದು ಬಿಡುವ ನೂರಾರು ದೂಪದ ಕಾಯಿ ಗಳು, ಮನೆಯಲ್ಲೇ ಅಟ್ಟಿಸಿಕೊಂಡು, ಬಿಳಿ ಉಂಡೆಯಂಥ ಎಣ್ಣೆಯಾಗಿ ರೂಪಾಂತರಗೊಳ್ಳುವ ಆ ಅಪರೂಪದ ಪ್ರಕ್ರಿಯೆಯು ಇಂದು ಕೇವಲ ಸ್ಮೃತಿಯಾಗಿ ಉಳಿದುಕೊಂಡಿದೆ.