ವಿಶ್ಲೇಷಣೆ
ಎಂ.ಜೆ.ಅಕ್ಬರ್, ಹಿರಿಯ ಪತ್ರಕರ್ತ, ಮಾಜಿ ಕೇಂದ್ರ ಸಚಿವ
ಸಾಮಾನ್ಯವಾಗಿ ಯಾವಾಗಲೂ ಅತಿದೊಡ್ಡ ಬದಲಾವಣೆಯೆಂದರೆ ಯಾವುದನ್ನು ನಾವು ಯಾವತ್ತೂ ಗಮನಿಸಿರುವುದಿಲ್ಲವೋ ಅದೇ ಆಗಿರುತ್ತದೆ. ಜನರಷ್ಟೇ ಅಲ್ಲ, ಬಹಳ ಸಲ ಖಾಸಗಿ ಕಾರ್ಪೊರೇಟ್ ಕಂಪನಿಗಳು ಹಾಗೂ ಸರಕಾರಗಳು ಕೂಡ ಇಂಥ ಬದಲಾವಣೆಯನ್ನು ಗಮನಿಸಿರುವುದೇ ಇಲ್ಲ.
ಕೊನೆಗೆ ಒಂದು ದಿನ ಈ ಬದಲಾವಣೆ ಧುತ್ತನೆ ಎಲ್ಲರ ಕಣ್ಣೆದುರು ಬಂದು ನಿಲ್ಲುತ್ತದೆ. ಆಗ ಅಚ್ಚರಿಯಿಂದ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.
ಅಯ್ಯೋ, ಇಷ್ಟು ದಿನ ನಾವಿದನ್ನು ಗಮನಿಸಲೇ ಇಲ್ಲವಲ್ಲ ಎಂದು ಕೈಕೈ ಹಿಸುಕಿಕೊಳ್ಳುತ್ತಾರೆ. ನಮ್ಮ ಕಣ್ಮುಂದೆಯೇ ಇಂತಹದ್ದೊಂದು ಭಾರಿ ಬದಲಾವಣೆ
ನಡೆಯುತ್ತಿದ್ದರೂ ನಾವದನ್ನು ಗುರುತಿಸುವಲ್ಲಿ ವಿಫಲರಾದೆವಲ್ಲ ಎಂದು ಹಳಹಳಿಸುತ್ತಾರೆ. ಆದರೆ ಈ ನಿರ್ಲಕ್ಷ್ಯಕ್ಕೆ ತೆರಬೇಕಾದ ಬೆಲೆ ಬಹಳ ಸಲ ಅತ್ಯಂತ ಕಠೋರವಾಗಿರಬಹುದು.
ಪ್ರಜಾಪ್ರಭುತ್ವದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಬಳಲಿ ಮಲಗಿದ ಸರಕಾರಗಳ ಬಗ್ಗೆ ರಾಶಿ ರಾಶಿ ಕತೆಗಳಿವೆ. ಅವು ತಮ್ಮ ಕಾಲಿನ ಕೆಳಗಿನ ಭೂಮಿಯೇ ಕುಸಿಯುತ್ತಿದ್ದರೂ ಅದನ್ನು ಗುರುತಿಸದೆ ಬೇಸ್ತು ಬಿದ್ದಿದ್ದವು. ಆಗಸದಲ್ಲಿ ಚಂಡಮಾರುತವೇ ಏಳಲಿ ಅಥವಾ ನೆಲ ಅದುರಿ ಭಯಾನಕ ಭೂಕಂಪನವಾಗಲಿ, ಆ ಸರಕಾರಗಳು ತಮ್ಮದೇ ಗೂಡಿನೊಳಗೆ ಭದ್ರವಾಗಿ ನೆಮ್ಮದಿಯಿಂದ ಕುಳಿತಿದ್ದವು. ಏಕೆಂದರೆ ಆ ಸರಕಾರಗಳಿಗೆ ಬಹುಮತದ ಮತ್ತೇರಿತ್ತು. ತೀರಾ ತಡವಾಗಿ, ಕೊನೆಗೆ ಸರಿಪಡಿಸಲಾಗದಷ್ಟು ಹಾನಿಯಾಗುವವರೆಗೂ ಅವು ಎಚ್ಚೆತ್ತುಕೊಳ್ಳಲೇ ಇಲ್ಲ. ಈ ರೋಗಕ್ಕೆ ಒಳ್ಳೆಯ ಉದಾಹರಣೆಯೆಂದರೆ ಇಂದಿರಾ ಗಾಂಧಿ.
1977ರ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವವರೆಗೂ ಅವರಿಗೆ ಭಾರತದಲ್ಲಿ ತಾನು ಜಾರಿಗೊಳಿಸಿದ ತುರ್ತುಸ್ಥಿತಿಯನ್ನು ಜನರು ಯಾವ
ಪರಿ ದ್ವೇಷಿಸಿದ್ದರು ಎಂಬುದು ತಿಳಿದಿರಲೇ ಇಲ್ಲ. ಜನರು ತನ್ನನ್ನು ಎಷ್ಟು ದ್ವೇಷಿಸುತ್ತಿದ್ದಾರೆ, ದೇಶದ ಮೂಡ್ ಹೇಗೆ ಬದಲಾಗಿದೆ ಎಂಬುದು ಆ ಚುನಾವಣೆಯ ಫಲಿತಾಂಶ ಬಂದ ನಂತರವೇ ಅವರಿಗೆ ತಿಳಿದಿತ್ತು. ನಂತರ ಬಂದ ಜನತಾ ಸರಕಾರಕ್ಕೂ ಇದು ಇಷ್ಟೇ ಸಮಾನವಾಗಿ ಅನ್ವಯಿಸುತ್ತದೆ.
1980ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮತ್ತೆ ಅದ್ಭುತವಾಗಿ ಚೇತರಿಸಿಕೊಳ್ಳುವವರೆಗೂ ಜನತಾ ಸರಕಾರಕ್ಕೆ ತಾನು ಮಾಡುತ್ತಿರುವ ತಪ್ಪು ಮನವರಿಕೆಯಾಗಿರಲಿಲ್ಲ. ಇಂದು ಕೋವಿಡ್ನ ಕರಾಳ ಅನುಭವ ಭಾರತೀಯರನ್ನು ಕಂಗೆಡಿಸಿದೆ. ಇದ್ದಕ್ಕಿದ್ದಂತೆ ಸಂಭವಿಸುವ ಸಾವು ಅದೆಷ್ಟೋ ಜನರ ಹೃದಯ
ಗಳನ್ನು ಒಡೆದಿದೆ, ಮನಸ್ಸುಗಳನ್ನು ಚೂರಾಗಿಸಿದೆ. ಭಯಾನಕ ಅನಾರೋಗ್ಯವು ಲಕ್ಷಾಂತರ ಕುಟುಂಬ ಗಳನ್ನು ಇನ್ನಿಲ್ಲದ ನೋವಿನ ಕೂಪಕ್ಕೆ ತಳ್ಳಿದೆ. ನಿಜಕ್ಕೂ
ದೇಶದಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗದ ಅಯೋಮಯ ಸ್ಥಿತಿ. ಬದುಕೆಂದರೆ ಏನು ಎಂಬುದನ್ನೇ ಮಂಥನ ಮಾಡುವುದಕ್ಕೆ ಅದೆಷ್ಟೋ ಜನರಿಗೆ ಸಾಧ್ಯ ವಾಗುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳು ಜನರನ್ನು ಭಾವನಾತ್ಮಕವಾಗಿ ಕುಗ್ಗಿಸಿವೆ.
ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಎಲ್ಲರೂ ಜರ್ಜರಿತವಾಗಿದ್ದಾರೆ. ಪ್ರೀತಿಪಾತ್ರರನ್ನು ಹಠಾತ್ ಕಳೆದುಕೊಳ್ಳುವ ಕೆಟ್ಟ ಅನುಭವವನ್ನು ಅಥವಾ ಚಿಕಿತ್ಸೆಯೆಂಬ ನರಕವನ್ನು ಅನುಭವಿಸದ ಜನರು ಬಹಳ ಕಡಿಮೆ ಇದ್ದಾರೆ. ಇವುಗಳಿಂದಾದ ಒಂದು ಬಹುಮುಖ್ಯ ಬದಲಾವಣೆಯೆಂದರೆ ಅನೇಕ ಪದ ಮತ್ತು ನುಡಿಗಟ್ಟುಗಳ ಅರ್ಥವ್ಯಾಪ್ತಿಯೇ ಬದಲಾಗಿದೆ. ಅದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. 2020ರ ಮಾರ್ಚ್ನಲ್ಲಿ ನಮ್ಮ ದೇಶದ ಎಷ್ಟು ಜನರಿಗೆ ಪಾಸಿಟಿವಿಟಿ ರೇಟ್ ಅಂದರೆ ಗೊತ್ತಿತ್ತು? ಇವತ್ತು ದಿನಪತ್ರಿಕೆಗಳು ಕೂಡ ಹೆಡ್ಲೈನಿನಲ್ಲಿ ಈ ಪದ ಬಳಸುತ್ತಿವೆ. ಹದಿನೈದು ತಿಂಗಳ ಹಿಂದೆ ಅಂಕಿಅಂಶಗಳ ಬಗ್ಗೆಯೆಲ್ಲ ಜನಸಾ ಮಾನ್ಯರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಅದೆಲ್ಲ ಶಿಕ್ಷಣ ಕ್ಷೇತ್ರದವರಿಗೆ, ತಜ್ಞರಿಗೆ, ಸಂಶೋಧಕರಿಗೆ, ಅರ್ಥಶಾಸಜ್ಞರಿಗೆ ಹಾಗೂ ದೇಶದ ಹಣಕಾಸು ಮಂತ್ರಿಗಳ ಆಪ್ತ ಬಳಗಕ್ಕೆ ಸೇರಿದ್ದು ಎಂದೇ ಎಲ್ಲರೂ ಭಾವಿಸಿದ್ದರು. ಇಂದು ನ್ಯೂಸ್ ಬಗ್ಗೆ ಅಲ್ಪಸ್ವಲ್ಪ ಗಮನ ನೀಡುವ ವ್ಯಕ್ತಿ ಕೂಡ ದಿನನಿತ್ಯ ನೂರಾರು ಅಂಕಿಅಂಶಗಳನ್ನು ಮೆಲುಕು ಹಾಕುತ್ತಾನೆ. ಕೋವಿಡ್ ಸೋಂಕು ಹೇಗೆ ಹರಡುತ್ತಿದೆ, ಅದರ ಪರಿಣಾಮ ವೇನು ಎಂಬ ಬಗ್ಗೆ ಅವನು ನಿರಂತರವಾಗಿ ಅಂಕಿಅಂಶ ಗಳಿಂದಲೇ ಮಾಹಿತಿ ಪಡೆಯುತ್ತಿದ್ದಾನೆ. ವಿಜ್ಞಾನವು ಪರದಾಡುತ್ತಿರುವ ಹೊತ್ತಿನಲ್ಲಿ ಸಾರ್ವತ್ರಿಕ ಸಾಂಕ್ರಾಮಿಕ ರೋಗ ತನ್ನನ್ನು ತಾನು ದಿನೇದಿನೇ ಹೊಸ ಹೊಸ ರೂಪದಲ್ಲಿ ಹೊಸತಾದ ಉಗ್ರಾವತಾರದಲ್ಲಿ ಮರು ಅನ್ವೇಷಣೆ ಮಾಡಿಕೊಳ್ಳುತ್ತಿದೆ.
ಕರೋನಾದ ಭಯಂಕರ ಅಂಕಿಅಂಶಗಳನ್ನು ನೋಡಿ ಎಲ್ಲಾ ಸರಕಾರಗಳೂ ಮೂಕವಿಸ್ಮಿತವಾಗಿವೆ. ಅದು ಸರಿಯೂ ಹೌದು ಬಿಡಿ. ಆದರೆ ಅವು ಇದೇ ಸಮಯದಲ್ಲಿ ಇನ್ನೂ ಒಂದು ಅಂಕಿಅಂಶಕ್ಕೆ ಹೆಚ್ಚಿನ ಗಮನ ನೀಡಬೇಕಿತ್ತು. ಇತ್ತೀಚೆಗೆ ಇದು ದಿನಪತ್ರಿಕೆಗಳ ಮುಖಪುಟದಲ್ಲೇ ಜಾಗ ಪಡೆದುಕೊಳ್ಳಲು ಆರಂಭಿಸಿದೆ. ಅದು – ಹಣದುಬ್ಬರ ದರ. ಯಾವುದೇ ಕಚೇರಿಯಲ್ಲಿ ಕುರ್ಚಿಯ ಕೆಳಗೆ ಇದ್ದಕ್ಕಿದ್ದಂತೆ ಢಂ ಎಂದು ಸೋಟಿಸಿ ಅಲ್ಲೋಲ ಕಲ್ಲೋಲ ಉಂಟು ಮಾಡುವಂಥ ಅಪಾಯಕಾರಿ ಬಾಂಬ್ ಇದು. ಕಳೆದ ಐದು ತಿಂಗಳಿನಿಂದ ದೇಶದಲ್ಲಿ ಹಣದುಬ್ಬರ ದರ ದಿನೇದಿನೇ ಏರುತ್ತಿದೆ ಎಂಬುದನ್ನು ಯಾರೂ ಗಮನಿಸಿ ರಲಿಲ್ಲ. ಈಗ ಅದು ಅಪಾಯಕಾರಿ ಎರಡಂಕಿಗೆ ಏರಿಕೆಯಾದ ಮೇಲೆ ಎಲ್ಲರೂ ಅಯ್ಯೋ ದೇವರೇ ಅಂದುಕೊಳ್ಳುತ್ತಿದ್ದಾರೆ.
ಹಣದುಬ್ಬರದ ಬಿಸಿ ಎಲ್ಲರಿಗೂ ಈಗ ತಟ್ಟತೊಡಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ದೇಶದಲ್ಲಿ ಹಣದುಬ್ಬರ ದರ ಮೈನಸ್ನಲ್ಲಿತ್ತು. ಈ ವರ್ಷದ ಏಪ್ರಿಲ್ ತಿಂಗಳಿನ ವೇಳೆಗೆ ಸಗಟು ಹಣದುಬ್ಬರ ದರ ಶೇ.10.49ಕ್ಕೆ ಏರಿಕೆಯಾಗಿತ್ತು. ಮೇ ತಿಂಗಳಲ್ಲಿ ಅದು ಶೇ.12.94ಕ್ಕೆ ಹೋಯಿತು. ಇದು ಹೆಚ್ಚುಕಮ್ಮಿ
ಶೇ.13 ಅಲ್ಲವೇ? ಚಿಲ್ಲರೆ ಹಣದುಬ್ಬರ ದರ ಮೇ ತಿಂಗಳಲ್ಲಿ ಶೇ.6.3ಕ್ಕೆ ಏರಿಕೆಯಾಯಿತು. ಜನಸಾಮಾನ್ಯರ ಮೂಲಭೂತ ಅಗತ್ಯಗಳಿಗೆ ಸಂಬಂಧಿಸಿದ ಹಣದುಬ್ಬರ ದರವಿದು. ಆಹಾರ ದುಬ್ಬರ ಏಪ್ರಿಲ್ನಲ್ಲಿ ಶೇ.೧.೯೬ ಇದ್ದಿದ್ದು ಮೇ ತಿಂಗಳಲ್ಲಿ ಶೇ.೫.೦೧ಕ್ಕೆ ಏರಿತು.
ಕಾಳುಬೇಳೆಗಳ ದರ ಶೇ.೯.೩ಕ್ಕೆ ಏರಿಕೆಯಾದರೆ, ಖಾದ್ಯ ತೈಲದ ಬೆಲೆ ಶೇ.೩೦.೮ಕ್ಕೆ ಏರಿಕೆಯಾಯಿತು. ದೆಹಲಿಯಲ್ಲಿ ಸಾಸಿವೆ ಎಣ್ಣೆ ಬೆಲೆ ಪ್ರತಿ ಲೀಟರ್ಗೆ ೧೩೨ ರು. ಇದ್ದಿದ್ದು ಈಗ ೧೭೭ ರು. ಆಗಿದೆ. ತಾಳೆ ಎಣ್ಣೆ ಬೆಲೆ ೯೫ ರು.ನಿಂದ ೧೩೦ ರು.ಗೆ ಏರಿದೆ. ಸೂರ್ಯಕಾಂತಿ ಎಣ್ಣೆ ಬೆಲೆ ೧೨೮ ರು.ನಿಂದ ೧೯೫ ರು.ಗೆ ಏರಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದರ ಬಿಸಿ ತಟ್ಟಿದೆ. ಒಂದೆಡೆ ವಿಡ್ ಸಾಂಕ್ರಾಮಿಕದಿಂದಾಗಿ ಆರ್ಥಿಕತೆ ಹಿಂಜರಿಕೆಯಲ್ಲಿದೆ.
ಇನ್ನೊಂದೆಡೆ ‘ಸ್ಟಾಗ್ ಫ್ಯಾಶನ್’ ಎಂದು ಕರೆಯಬಹುದಾದ ಆರ್ಥಿಕ ಸಾಂಕ್ರಾಮಿಕ ರೋಗದಿಂದಾಗಿ ಜನರು ಕಂಗೆಟ್ಟಿದ್ದಾರೆ. ಇದೊಂದು ಅಪಾಯಕಾರಿ ಬೆಳವಣಿಗೆ. ನಮಗೆಲ್ಲ ಗೊತ್ತಿರುವಂತೆ ಅರ್ಥಶಾಸ್ತ್ರಜ್ಞರಿಗೆ ಅನ್ನ ಹುಟ್ಟುವುದೇ ಅಂಕಿಅಂಶಗಳಲ್ಲಿ. ಅವರ ಕೆಲಸವೇ ಅಂಕಿಅಂಶಗಳನ್ನು ಗಮನಿಸುವುದು. ಆ
ಕೆಲಸಕ್ಕಾಗಿ ಅವರಿಗೆ ವೇತನ ಸಿಗುತ್ತದೆ. ನಮ್ಮ ದೇಶದ ಹಣಕಾಸು ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅರ್ಥಶಾಸ್ತ್ರಜ್ಞರು ತುಂಬಿ
ತುಳುಕುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ಹಣದುಬ್ಬರ ನಿಧಾನವಾಗಿ ದೇಶದ ಆರ್ಥಿಕತೆಯೊಳಗೆ ನುಸುಳುತ್ತಿತ್ತು ಎಂದಾದರೆ ಅದೇಕೆ ಇವರ್ಯಾರಿಗೂ ಕಾಣಿಸಲಿಲ್ಲ? ಅಪಾಯಕಾರಿ ಮಟ್ಟಕ್ಕೆ ಹಣದುಬ್ಬರ ಹೋಗಿ ನಿಲ್ಲುವವರೆಗೆ ಇವರ್ಯಾರೂ ಏಕೆ ಅದನ್ನು ಗುರುತಿಸಿ ಸರಕಾರಕ್ಕೆ ಎಚ್ಚರಿಕೆ ನೀಡಲಿಲ್ಲ? ಏಪ್ರಿಲ್ ಹಾಗೂ ಮೇ ತಿಂಗಳ ಅಂಕಿಅಂಶಗಳನ್ನು ನೋಡಿ ನಮಗೂ ಆಶ್ಚರ್ಯವಾಗಿದೆ ಎಂಬಂಥ ಅನಾಮಧೇಯ ಕೋಟ್ಗಳನ್ನು ಮಾಧ್ಯಮಗಳಿಗೆ ನೀಡುವುದಕ್ಕೆಂದು
ಇವರನ್ನು ನೇಮಕ ಮಾಡಿಕೊಳ್ಳಲಾಗಿದೆಯೇ? ತೀರಾ ಆರಂಭದಲ್ಲಿ ಅವರಿಗೆ ಇದರ ಸುಳಿವು ಸಿಗಲಿಲ್ಲ ಅಂತಾದರೆ ಕ್ಷಮಿಸಿಬಿಡೋಣ, ಆದರೆ ಏಪ್ರಿಲ್
ನಂತರವಾದರೂ ಅವರು ಏನು ಮಾಡಿದ್ದಾರೆ? ಉತ್ತರ: ಏನೂ ಇಲ್ಲ.
ಭಾರತದ ಆರ್ಥಿಕತೆಯಲ್ಲಿ ಹೆಚ್ಚಿನ ಅಭಿವೃದ್ಧಿ ದರ ಹಾಗೂ ಸಾಮಾನ್ಯ ಹಣದುಬ್ಬರ ದರ ಇವೆರಡೂ ಏಕಕಾಲಕ್ಕೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ರಿಸರ್ವ್
ಬ್ಯಾಂಕ್ ತನಗೆ ತಾನೇ ಮನವರಿಕೆ ಮಾಡಿಕೊಂಡುಬಿಟ್ಟಿದೆ. ಹೀಗಾಗಿ ಈ ಮನಸ್ಥಿತಿಯಲ್ಲೇ ಅದು ತನ್ನೆಲ್ಲಾ ಹಣಕಾಸು ನೀತಿಗಳನ್ನು ರೂಪಿಸುತ್ತದೆ. ಆದರೆ, ದಾಖಲೆಗಳನ್ನು ಗಮನಿಸಿದರೆ ಈ ಕಲ್ಪನೆ ತಪ್ಪು ಎಂಬುದು ನಿಚ್ಚಳವಾಗಿ ಕಾಣಿಸುತ್ತದೆ. ದೇವರು ಅಥವಾ ಪ್ರಕೃತಿಯಲ್ಲಿ ಎಲ್ಲದಕ್ಕೂ ಪರಿಹಾರವಿದೆ ಎಂಬ ಮೂಢನಂಬಿಕೆಗೆ ನಾವೆಲ್ಲ ಮತ್ತೆ ಜೋತುಬೀಳುತ್ತಿರುವಂತೆ ತೋರುತ್ತಿದೆ.
‘ನೈಋತ್ಯ ಮುಂಗಾರು ಈ ಬಾರಿ ಚೆನ್ನಾಗಿ ಮಳೆ ಸುರಿಸುತ್ತದೆ, ಅದರಿಂದ ದೇಶದಲ್ಲಿ ಒಳ್ಳೆಯ ಬೆಳೆ ಬರುತ್ತದೆ, ಖಾರಿ- -ಸಲು ಚೆನ್ನಾಗಿ ಬಂದರೆ ಅಗತ್ಯ ವಸ್ತುಗಳ
ಬೆಲೆಗಳು ಇಳಿಕೆಯಾಗುತ್ತವೆ, ಆಗ ಜನರು ಇನ್ನೊಂದು ವರ್ಷ ನೆಮ್ಮದಿಯಾಗಿ ಬದುಕಬಹುದು ಎಂದು ಎಲ್ಲರೂ ಯೋಚಿಸುತ್ತಿದ್ದಾರೆ. ಹಾಗಾದರೆ ೧೯ನೇ ಶತಮಾನದಿಂದ ಈಚೆಗೆ ಏನೂ ಬದಲಾಗಿಲ್ಲವೇ? ಭಾರತಕ್ಕೆ ಬೇಕಾದ ನಿಜವಾದ ಬದಲಾವಣೆ ಯಾವುದು ಗೊತ್ತೆ? ನಮ್ಮ ಮನಸ್ಥಿತಿಯ ಬದಲಾವಣೆ. ದೇಶದ ಮನಸ್ಥಿತಿ ಬದಲಾಗದಿದ್ದರೆ ಐದು ಲಕ್ಷ ಕೋಟಿಯ ಆರ್ಥಿಕತೆಯೆಂಬುದು ಕನಸಾಗಿಯೇ ಉಳಿಯುತ್ತದೆ. ಮತ್ತು ಈ ಬದಲಾವಣೆ ಯಾರಿಗೂ ಕಾಣಿಸುವುದಿಲ್ಲ.