ಅಭಿವ್ಯಕ್ತಿ
ಸಿದ್ದಾರ್ಥ ವಾಡೆನ್ನವರ
ಭವಿಷ್ಯದ ಬಗ್ಗೆ ಸದಾ ಚಿಂತಿಸುವುದು ಸುಖಕರ ಜೀವನ ಅಲ್ಲ. ಹಾಗೆ ಮಾಡಿದರೆ ನೀವು ನಿಮ್ಮ ಈ ಕ್ಷಣದ ಅಸ್ತಿತ್ವವನ್ನೇ ಮರೆಯುತ್ತೀರಿ. ಭವಿಷ್ಯ ಇನ್ನೂ ಬಂದಿಲ್ಲ.
ಈಗ ನಿಮ್ಮ ಕೈಯಲ್ಲಿರುವ ವರ್ತಮಾನ, ಈ ಸಮಯವನ್ನು ವ್ಯರ್ಥ ಮಾಡಬೇಡಿ. ಈ ಕ್ಷಣದ ಬಗ್ಗೆ ಚಿಂತಿಸದಿರುವುದು, ಆನಂದದಿಂದ ಇರದೇ ಇರುವುದಕ್ಕೆ ಕಾರಣ. ಅರಿವಿನ ಪ್ರಜ್ಞೆ ಕಡಿಮೆ ಇರುವುದೇ ಆಗಿದೆ. ಭವಿಷ್ಯವಿನ್ನೂ ಹುಟ್ಟಿಲ್ಲ. ಅದನ್ನು ನಾವಾಗಲಿ, ಅಥವಾ ಯಾರಾದರಾಗಲಿ ಹುಟ್ಟಿಸುವುದು ಸರಿಯಲ್ಲ!
ಈ ಒಂದು ವಿಷಯದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲವು ಅಂಶಗಳನ್ನು ಚರ್ಚಿಸಬೇಕಾಗಿದೆ. ಭವಿಷ್ಯದಲ್ಲಿ ನಾವು ಹೀಗೆ ಇರುತ್ತೇವೆ ಎಂದು ಯೋಚಿಸುತ್ತೇವೆ. ಆದರೆ ಹಾಗೆ ಇರದೇ ಇರುವ ಸಂಭವಗಳಿರುತ್ತವೆ. ನಾವು ಅಂತಿಮ ಘಟ್ಟ ತಲುಪಿದ್ದೇವೆ, ಇನ್ನೇನಿದ್ದರೂ ಇದರ ಉಳಿವಿಗಾಗಿ ಪ್ರಯತ್ನಿಸ ಬೇಕಾಗಿದೆ. ಭವಿಷ್ಯದ ವಾಸ್ತವವನ್ನು ಗುರುತಿಸುವುದು ಅತ್ಯಂತ ದುಃಖಕರ. ನಿಮ್ಮನ್ನು ನೀವು ಗುರುತಿಸುವುದು ಒಳ್ಳೆಯದು, ನಿಮ್ಮನ್ನು ಇನ್ನೊಬ್ಬರ ಮುಖಾಂತರ ಗುರುತಿಸುವುದು ಸಮೃದ್ಧ ಜೀವನಕ್ಕೆ ಒಳ್ಳೆಯದಲ್ಲ.
ಏಕೆಂದರೆ ಆಗಲಾರದ ಹೊಸ ತಿರುವುಗಳನ್ನು ಗುರುತಿಸುವುದು ತಪ್ಪು. ಇಂದು ಪ್ರಪಂಚವು ಸಾಗುತ್ತಿರುವ ದಿಸೆ ನೋಡಿದರೆ ಮನುಷ್ಯ ತನ್ನನ್ನು ತಾನು ಮರೆತಿದ್ದಾನೆ.ಪ್ರತಿ ಕ್ಷಣ ಆತ್ಮಹತ್ಯೆಯತ್ತ ಸಾಗುತ್ತಿದ್ದಾನೆ. ಮನುಷ್ಯನಿಗೆ ನೆಮ್ಮದಿ ಇಲ್ಲವೇ ಇಲ್ಲ. ಜನಸಂಖ್ಯಾ ಸ್ಫೋಟ ಇದು ಮಾನವ ಕುಲವನ್ನು ಸಂಕಷ್ಟದಲ್ಲಿ
ಸಿಲುಕಿಸಿದ್ದಷ್ಟೇ ಅಲ್ಲದೇ ಸಕಲ ಚರಾಚರ ಜೀವರಾಶಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಜಗತ್ತಿನಲ್ಲಿ ಸುಮಾರು ಶೇ.95ರಷ್ಟು ಜನ ಮಾಂಸಾಹಾರಿಗಳೇ ಆಗಿದ್ದಾರೆ. ಜೀವಿಗಳನ್ನು ಹಿಂಸಿಸಿ ಕೊಂದು ತಿಂದು ತೇಗುತ್ತಿದ್ದಾರೆ. ಇರಲಿ ಬಿಡಿ, ಇದು ಸೃಷ್ಟಿಯ ನಿಯಮ!
ಜಗತ್ತು ಹೀಗೆ ಇರುವಾಗ ಯಾರು ತಾನೆ ಬದಲಾಯಿಸಲು ಸಾಧ್ಯ. ಒಂದು ಜೀವಿ ಇನ್ನೊಂದು ಜೀವಿಯನ್ನು ತಿಂದು ಬದುಕುತ್ತಿದೆ. ತಿಂದು ಬದುಕಿದರೂ ಈ ಶ್ರೇಷ್ಠ ಜೀವಿ ಅಂದರೆ ಈ ಮನುಷ್ಯ ಜೀವಿ ಏಕೆ ಉಲ್ಲಾಸ, ಸಂತೋಷ, ಆನಂದದಲ್ಲಿ ಇಲ್ಲ? ನಾಳಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಕಡಿಮೆ ಮಾಡಿಕೊಳ್ಳಬೇಕು. ನಮ್ಮ ಸುರಕ್ಷತೆಯ ಕಾರಣಕ್ಕಾಗಿ ಮಕ್ಕಳಿಗೆ ಜನ್ಮ ನೀಡುವುದು ಸರಿಯಲ್ಲ. ಮಕ್ಕಳಿಗೆ ಜನ್ಮ ನೀಡಿ ಆದರೆ ಈ ಭೂಮಿಯ ಮೇಲೆ ಅನ್ನ ನೀರು ಮಲಗಲು ಸ್ಥಳ ಸಿಗದೇ ಇರುವಷ್ಟು ಮಕ್ಕಳಿಗೆ ಜನ್ಮ ನೀಡುವುದು ಸರೀನಾ? ಮಕ್ಕಳನ್ನು ಹೆತ್ತು ಹೆತ್ತು ನರಕ ಸೃಷ್ಟಿ ಮಾಡುತ್ತಿದ್ದಾರೆ.
ನಾಳೆಯ ಬಗ್ಗೆ ಮತ್ತು ನಾಳಿನ ತನ್ನ ಸುರಕ್ಷತೆಯ ಬಗ್ಗೆ ಯೋಚಿಸಿ ಹೆಜ್ಜೆ ಇಟ್ಟಿದ್ದರ ಪ್ರತಿಫಲವೇ ಇಷ್ಟೊಂದು ಜನಸಂಖ್ಯೆ ಬೆಳವಣಿಗೆ! ಎಲ್ಲರೂ ಜ್ಞಾನಿಗಳಾದರೆ ಈ ಭೂಮಿಯ ಮೇಲೆ ಜನಸಂಖ್ಯೆ ಇಷ್ಟೊಂದು ರೀತಿಯಲ್ಲಿ ಸೋಟ ಆಗುತ್ತಿರಲಿಲ್ಲ, ಎಲ್ಲ ಜೀವಿಗಳ ಹಾಗೆ ಮನುಷ್ಯ ಜೀವಿಯೂ ಸುಖದಿಂದ ಬದುಕುತ್ತಿತ್ತು, ಬೇರೆ
ಜೀವಿಗಳಿಗೆ ಅತಿಯಾಗಿ ಇರದ ದುಃಖ, ನಿರಾಶೆ, ನೋವು ಈ ಮನುಷ್ಯನಿಗೇಕೆ ಇದೆ? ಅದೇ ನಿನ್ನೆ ಮತ್ತು ನಾಳೆಯ ಚಿಂತೆ! ಜನಸಂಖ್ಯೆಯನ್ನು ನಿಯಂತ್ರಿಸಲು ಯಾವ ರಾಜಕಾರಣಿಯೂ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ತರುವಾಯ ಜನರಿಗೆ ತಿನ್ನಲು ಅನ್ನ ಇಲ್ಲ ಆದರೆ ಎಲ್ಲಕ್ಕೂ ಸ್ವಾತಂತ್ರ್ಯ ಇದೆ. ಆ
ಸ್ವಾತಂತ್ರ್ಯದಿಂದ ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಆದರೆ ಆ ಮಕ್ಕಳಿಗೆ ಅನ್ನ ನೀಡುವ ಸಾಮರ್ಥ್ಯ ಬೆಳೆಸಿಕೊಂಡಿಲ್ಲ.
ಹಸಿದು ಬರುವ ಆ ಮಕ್ಕಳಿಗೆ ಆಸರೆ ನೀಡಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಸರ್ಗ ತನ್ನ ಬ್ಯಾಲೆನ್ಸ್ ಖಂಡಿತ ಮಾಡಿಕೊಳ್ಳುತ್ತದೆ. ಆ ಒಂದು ಸಾಮರ್ಥ್ಯ ಈ ಭೂಮಿಗೆ ಖಂಡಿತ ಇದೆ. ಉತ್ತಮ ಆಡಳಿತ ನಡೆಸಲು, ಪ್ರಕೃತಿ ಪೂರಕ ನಿರ್ಧಾರ ಕೈಗೊಳ್ಳಲು ಅಧ್ಯಾತ್ಮ – ಧ್ಯಾನ ಅಳವಡಿಸಿಕೊಂಡು
ಅಂತರ್ ಜ್ಞಾನ ಪಡೆದವರ ಕೈಗೆ ಅಧಿಕಾರ ಕೊಡಬೇಕು. ಮಹಾಮಾರಿ ವೈರಸ್‌ಗಳು ಈ ಮನುಷ್ಯನನ್ನು ಕಾಡುತ್ತಲೇ ಇವೆ. ಅವು ಕಾಳ್ಗಿಚ್ಚಿನಂತೆ ಹರಡುತ್ತಲೇ ಇರುತ್ತವೆ. ಮುಂಬರುವ ಕೆಲ ದಶಕಗಳಲ್ಲಿ ಗುಣಪಡಿಸಲು ಅಸಾಧ್ಯವಿರುವ ವೈರಸ್‌ಗಳ ಉತ್ಪತ್ತಿ ಆಗುವ ಸಾಧ್ಯತೆ ಇದೆ. ಔಷಧವನ್ನು ಕಂಡುಹಿಡಿಯಲು
ಅಸಾಧ್ಯವೆನ್ನುವ ಮಾತುಗಳು ಕೇಳಿ ಬರುತ್ತವೆ. ವಿಜ್ಞಾನಿಗಳಿಗೆ ಹೆಚ್ಚೂ ಕಡಿಮೆ ಇದು ಖಾತ್ರಿಯಾಗಿದೆ. ಗುಣಪಡಿಸಲಾಗದ ರೋಗದ ಜನನಕ್ಕೆ ಯಾರು ಕಾರಣ? ಈ ಮಾನವ ತಾನೇ! ತಾನೇ ಹೆಣೆದ ಬಲೆಗೆ ಸಿಲುಕಿ ನರಳುತ್ತಿದ್ದಾನೆ.
ಮನುಷ್ಯನಿಗೆ ಮನುಷ್ಯನೇ ಶತ್ರು ಆಗಿದ್ದಾನೆ. ಆತನನ್ನು ಬದಲಾಯಿಸಬೇಕಾಗಿದೆ. ಶತ್ರುಗಳನ್ನು ಗುರುತಿಸಿದರೆ ಮಾತ್ರ ನಾವು ಅವರನ್ನು ಬದಲಾಯಿಸಲು ಸಾಧ್ಯ. ಶತ್ರುಗಳನ್ನು ಗುರುತಿಸುವಷ್ಟು ಜ್ಞಾನವಾದರೂ ಬೇಕಲ್ಲ! ಯಾರು ಶತ್ರುಗಳು? ನಮ್ಮ ಭವಿಷ್ಯದ ಬಗ್ಗೆ ಹೇಳಿ ನಮ್ಮ ಭವಿಷ್ಯ ಹಾಳು ಮಾಡುವವರಿಗೆ ನಾನು ಶತ್ರುಗಳು ಎಂದು ಕರೆಯುತ್ತೇನೆ. ನೀವು ಅವರಿಗೆ ದೇವರ ಪ್ರತಿನಿಽಗಳ ಸ್ಥಾನ ನೀಡುತ್ತೀರಿ. ವಿಪರ್ಯಾಸವೆಂದರೆ ಇದೆ ಆಗಿದೆ. ಶ್ರಮಪಡಬೇಕು,
ಶ್ರಮಪಡದೇ ಏನನ್ನೂ ಬಯಸಬಾರದು. ಉತ್ತಮ ಮಾರ್ಗದತ್ತ ಸಾಗಬೇಕು. ಶತ್ರು ನಿಮ್ಮೊಳಗೆ ಇದ್ದಾನೆ, ಅವನನ್ನು ಎಚ್ಚರಿಸಿ ಬದಲಾಗಿಸಬೇಕಾಗಿದೆ. ಮುಂಬರುವ ಕೆಲವು ದಶಕಗಳಲ್ಲಿ ಈ ಮಾನವ ಎದುರಿಸಬೇಕಾಗುವ ಅತ್ಯಂತ ದೊಡ್ಡ ಸಮಸ್ಯೆ ಅಂದರೆ ಪರಿಸರದ ನಾಶ.
ನಾವು ಜೀವ ಸಂಪನ್ಮೂಲಗಳನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ಅದರ ಅರಿವು ಈಗ ನಮಗೆ ಬರುತ್ತಿಲ್ಲ. ಪರಿಸರದ ಅಸಮತೋಲನ ಜಗತ್ತಿಗೆ ಕಂಟಕ. ಈ
ಅಸಮತೋಲನವನ್ನು ನಾವು ಅನೇಕ ಬಗೆಯಲ್ಲಿ ಸರಿಪಡಿಸಬೇಕಾಗಿದೆ. ಪರಿಸರ ಬೆಳೆಸಬೇಕಾಗಿದೆ, ಅಭಿವೃದ್ಧಿ ನೆಪದಲ್ಲಿ ಕಾಡುಗಳನ್ನು ನಾಶ ಪಡಿಸುತ್ತಿದ್ದಾರೆ. ಇಲ್ಲಿರುವ ಜೀವ ಸಂಕುಲವನ್ನೂ ನಾಶ ಪಡಿಸಿದ್ದಾರೆ. ನಾವು ಬದುಕುವ ಪ್ರದೇಶದ ತಾಪಮಾನ ಹೆಚ್ಚಾಗುವಂತೆ ಮಾಡಿದ್ದಾರೆ. ಅದರ ಪರಿಣಾಮ ಹಲವು ರೋಗ ಗಳ ಜನನ! ರೋಗಗಳ ನಿವಾರಣೆಗೆ ಜೀವ ಪಣಕ್ಕಿಟ್ಟು ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ದೇಶ ದೇಶಗಳ ಮಧ್ಯ ತಾರತಮ್ಯ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೊಸದೊಂದು ತಾರತಮ್ಯ ಹುಟ್ಟಿಕೊಂಡಿದೆ, ಆರ್ಥಿಕತೆಯಲ್ಲಿ ನಾನೇ ಬಲಿಷ್ಠ, ಇದು ಇನ್ನೂ ಡೇಂಜರ್! ಮಾನವ ಜಾತಿ ಒಂದೇ, ಅದು ಒಂದೇ ರೀತಿಯ ಅಂತರಂಗದ ಭಾವನೆಗಳನ್ನು ಅಡಗಿಸಿಕೊಂಡಿದೆ. ನಂಬಿಕೆಯಲ್ಲಿ ಸೃಷ್ಟಿಯಾದ ‘ಅಹಂ’ ಎಲ್ಲವು ಗಳನ್ನು ಮಾಡಿಸುತ್ತಿದೆ. ಅದರಲ್ಲಿಯೂ ಬೇರೆಯವರಿಗಿಂತ ನಾವೇ ಶ್ರೇಷ್ಠ ಎನ್ನುವ ಭಾವನೆ ಈ ಮನುಷ್ಯನ ಮನಸ್ಸಿನಲ್ಲಿ ಒಂದು ಬೇಧ ಸೃಷ್ಟಿಸಿದೆ. ಈ ಮನುಷ್ಯ ನಿಗೆ ಪ್ರಕೃತಿದತ್ತವಾಗಿ ಪ್ರಾಪ್ತಿಯಾದ ಕಲ್ಪನಾಶಕ್ತಿಯಿಂದ ಇದೆಲ್ಲಾ ಆಗುತ್ತಿದೆ. ತನ್ನ ಕಲ್ಪನಾ ಶಕ್ತಿಯಿಂದ ತಾನೇ ಸೃಷ್ಟಿಸಿಕೊಂಡ ಧರ್ಮ, ರಾಷ್ಟ್ರ, ಬಣ್ಣ, ಜಾತಿ, ಮೇಲು – ಕೀಳು, ಕರಿಯ – ಬಿಳಿಯ ಹೀಗೆ ಈ ಮಾನವ ಕುಲ ವಿಭಜನೆಗೊಂಡು ಛಿದ್ರ, ಛಿದ್ರವಾಗಿ ಒಡೆದು ಸಾವಿರಾರು ಯುದ್ಧಗಳನ್ನು ಮಾಡಿ ಲಕ್ಷಗಟ್ಟಲೇ ಮನುಷ್ಯನ ರಕ್ತವನ್ನು ಮನುಷ್ಯನೇ ಹರಿಸಿದ್ದಾನೆ.
ಇದು ಮನುಷ್ಯನ ಕ್ರೂರತೆಯನ್ನು ತೋರಿಸುತ್ತದೆ. ಈ ಕಾರಣದಿಂದಾಗಿ ನಾನು ಪ್ರಸ್ತಾಪಿಸುವುದೇನೆಂದರೆ ನಾವೆಲ್ಲ ಈ ಪ್ರಕೃತಿಯೊಂದಿಗೆ ದುಃಖದಿಂದ, ಕ್ರೋಧ ದಿಂದ ಬದುಕದೆ ಉಲ್ಲಾಸ, ಆನಂದದಿಂದ ಬದುಕಬೇಕಾಗಿದೆ. ನಮ್ಮನ್ನು ನಾವು ಅರಿತುಕೊಂಡಾಗ ಪ್ರತಿಕ್ಷಣ ಸುಖ, ಆನಂದ, ಉತ್ಸಾಹ ಸೃಷ್ಟಿಯಾಗು ತ್ತದೆ. ಬದುಕಲು ಇಂಥ ಒಂದು ವ್ಯವಸ್ಥೆ ಸೃಷ್ಟಿಸಿಕೊಂಡರೆ ಆ ವ್ಯವಸ್ಥೆಗೆ ನಾನು ಅಧ್ಯಾತ್ಮ ಆಧಾರಿತ ಬದುಕುವ ವ್ಯವಸ್ಥೆ ಅನ್ನುತ್ತೇನೆ. ಅಪಾಯಕರ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗುತ್ತಾರೆ, ಆದರೆ ಮನಸ್ಸಿಗೆ ಶಾಂತಿ ನೀಡುವ ಮಾರ್ಗ ತುಳಿಯುವಲ್ಲಿ ಎಲ್ಲರೂ ಒಂದಾಗುವುದಿಲ್ಲ. ರಕ್ಷಿಸಿಕೊಳ್ಳಲು ಅಪಾಯವನ್ನೇ ಕಲ್ಪನೆ
ಮಾಡಿಕೊಳ್ಳುವುದು ಸರೀನಾ? ವೈರಿ ಕಾಣದಂತಿದ್ದರೆ ವೈರಿ ಇಲ್ಲವೆಂದು ಅರ್ಥಮಾಡಿಕೊಳ್ಳಬಾರದು.
ಜನಪ್ರತಿನಿಧಿಗಳ ಕಾಳಜಿ ಎಲ್ಲವೂ ಕೇವಲ ಕ್ಷುಲ್ಲಕ ವಿಚಾರಗಳ ಬಗ್ಗೆಯೇ ಇರುತ್ತದೆ. ಅತಿದೊಡ್ಡ ಅಪಾಯ ಮುಂದಿರುವಾಗಲೂ ಕಿಂಚಿತ್ತಾದರೂ ಅವರಿಗೆ ಪ್ರಜ್ಞೆ ಇರುವುದಿಲ್ಲ. ಇದೇ ರೀತಿಯಲ್ಲಿ ಮನುಷ್ಯ ಮುಂದುವರಿದರೆ ಸಕಲ ಜೀವಿಗಳೆಲ್ಲವೂ ಬದುಕುಳಿಯುವುದಿಲ್ಲ. ಅಪಾಯಕಾರಿ ಸಶಸಗಳ ಶೇಖರಣೆ ಆಗುತ್ತಿದೆ. ಸುಮಾರು ೧೯೩ ದೇಶಗಳು ನಿರ್ಮಾಣ ಆಗಿವೆ. ಈ ಭೂಮಿಯ ಮೇಲೆ ಒಬ್ಬ ಹುಚ್ಚ ನಾಯಕ ಹುಟ್ಟಿದರೆ, ಅವನಿಗೆ ಅಧಿಕಾರ ಸಿಕ್ಕರೆ ವಿಶ್ವದ ಭೂಪಟ
ಬದಲಾಗುತ್ತದೆ. ಗಂಭೀರ ಅಪಾಯ ಇದೆ. ನನ್ನ ಅಭಿಪ್ರಾಯದ ಪ್ರಕಾರ ಇಡೀ ಜಗತ್ತಿಗೇ ಒಂದೇ ಸಂವಿಧಾನ ಇರಬೇಕು, ಮಿಲಿಟರಿಗೆ ಖರ್ಚುಮಾಡುವ ಹಣವನ್ನು ಬಡವರಿಗೆ ಹಂಚಬೇಕು. ಜಗತ್ತಿನ ಯಾವುದೋ ಮೂಲೆಗೂ ಹೋಗುವ ಸರಳ ಅವಕಾಶ ಇರಬೇಕು.
ವಿವಿಧ ರಾಷ್ಟ್ರಗಳ ಕಲ್ಪನೆ ಇಲ್ಲವಾಗಬೇಕು. ಹೀಗಾದಲ್ಲಿ ಯುದ್ಧಗಳ ಸಾಧ್ಯತೆ ತಪ್ಪಿಸಬಹುದು. ಇದರಿಂದ ಅಧಿಕಾರದ ಅಹಂ ಕಡಿಮೆ ಆಗಿ ಮಾನವೀಯತೆಗೆ ಭದ್ರಸ್ಥಾನ ಸಿಗುತ್ತದೆ. ಜಗತ್ತಿನಲ್ಲಿ ಸೃಷ್ಟಿಯಾಗುವ ಸಮಸ್ಯೆಗಳಿಗೆ ಅತ್ಯಂತ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಒಂದೇ ರೀತಿಯ ಕಾರ್ಯನಿರತ ನಿಯೋಗ ಅಸ್ತಿತ್ವಕ್ಕೆ ಬರಬೇಕು. ಮಾನವೀಯತೆ ಧರ್ಮ ಸ್ಥಾಪನೆಯ ನಿರ್ಣಯವೇ ಅಂತಿಮ ಆಗಬೇಕು. ತಾಂತ್ರಿಕವಾಗಿ ಅರಿವು ಬರಬೇಕು. ವೈಜ್ಞಾನಿಕವಾಗಿ ಸಮಸ್ಯೆ ಗಳನ್ನು ಬಗೆಹರಿಸಲು ಯಾರಲ್ಲಿ ಸಾಮರ್ಥ್ಯವಿದೆಯೋ ಅಂಥವರ ವೇದಿಕೆ ನಿರ್ಮಾಣ ಆಗಿ ಅವರ ಮೂಲಕ ಈ ಜಗತ್ತು ನಿಯಂತ್ರಿಸಲ್ಪಡಬೇಕು. ಸ್ಥಾಪಿತ ಧರ್ಮಗಳು ಬ್ರಹ್ಮಚರ್ಯೆ ಉಪದೇಶಿಸುತ್ತವೆ, ಆದರೆ ಅದು ಪ್ರಕೃತಿಯ ವಿರುದ್ಧ ಅನ್ನುವುದನ್ನು ಮರೆಯಬಾರದು. ಮಾನವನಿಗೆ ಬ್ರಹ್ಮಚರ್ಯೆ ಪಾಲಿಸುವ ಅಗತ್ಯವಿಲ್ಲ. ವಿಜ್ಞಾನ, ಅಧ್ಯಾತ್ಮ – ಧ್ಯಾನ ಇವು ಬ್ರಹ್ಮಚರ್ಯೆ ವಿಚಾರದ ಬಗ್ಗೆ ಚಿಂತಿಸುವುದಿಲ್ಲ. ಯಾರೂ ಇದರ ವಿರುದ್ಧ ಚಕಾರವೆತ್ತುವುದಿಲ್ಲ. ಸರಿ – ತಪ್ಪು ಇವುಗಳ ಬಗ್ಗೆ ಚಿಂತನೆಗೆ ಒಳಗಾಗಬೇಕು. ನಮ್ಮಲ್ಲಿ ನಿರ್ಬಂಧ ಹೇಗಿದೆ? ಒಬ್ಬರು ಸ್ವಾಮೀಜಿ ಆದ ತಕ್ಷಣ ಅವರು ಲೈಂಗಿಕತೆಯಲ್ಲಿ ಬೀಳಬಾರದು.
ಒಂದು ವೇಳೆ ಲೈಂಗಿಕತೆಯಲ್ಲಿ ತೊಡಗಿದರೆ ಅದು ತಪ್ಪು. ಈ ರೀತಿಯ ನಂಬಿಕೆಗಳು ನಮ್ಮಲ್ಲಿ ಸೃಷ್ಟಿ ಆಗಿವೆ. ಮನುಷ್ಯ ಎಲ್ಲದಕ್ಕೂ ತನ್ನನ್ನು ತಾನೇ ನಿರ್ಬಂಧಿಸಿ ಕೊಂಡು ಸಂಕಷ್ಟಕ್ಕೆ ಸಿಲುಕಿರುವುದು ಸರಿಯಲ್ಲ. ತಲೆಯನ್ನು ಮೇಲಕ್ಕೆತ್ತಿದರೆ ಸಿಟ್ಟು ಬರುವುದು ಸ್ವಾಭಾವಿಕ, ತಲೆಯನ್ನು ಕೆಳಮುಖ ಮಾಡಿದರೆ ಸಿಟ್ಟು ಬರುವು ದಿಲ್ಲ. ಹೇಗೆಂದರೆ, ಶತ್ರುವನ್ನು ನೋಡಲೇಬೇಕಾದ ಸಂದರ್ಭ ಸೃಷ್ಟಿಯಾಗುವುದಿಲ್ಲ. ಕ್ಷುಲ್ಲಕ ವಿಚಾರಗಳಲ್ಲೇ ಈ ಮನುಷ್ಯ ಸದಾ ತನ್ನ ಮನಸ್ಸನ್ನು ತೊಡಗಿಸಿ ಕೊಂಡು ನಿರಾಶೆಯಿಂದ ಬದುಕುತ್ತಿದ್ದಾನೆ. ತನ್ನ ಭವಿಷ್ಯ ಬೇರೆಯವರಿಂದ ನಿರೀಕ್ಷಿಸುತ್ತಾನೆ. ಹೀಗಿರುವುದರಿಂದಲೇ ನಿಜವಾದ ಸಮಸ್ಯೆಗಳು ಬಗೆಹರಿಯುವುದಿಲ್ಲ. ವಾಸ್ತವ ಸಮಸ್ಯೆಗಳ ಅರಿವು ಆಗಬೇಕು.
ಹಾಗಾದರೆ ಪರಿಹಾರಗಳು ಸುಲಭವಾಗಿ ಅಂತಿಮ ಹಂತಕ್ಕೆ ಬಂದು ನಿಲ್ಲುತ್ತವೆ. ಮನುಷ್ಯ ಒಂದು ಬೈಕ್ ಅಥವಾ ಕಾರು ಚಲಾಯಿಸುತ್ತಿರುವಾಗ ಆತ ಸದಾ ಯೂಟರ್ನ್ಗಳನ್ನು ತೆಗೆದುಕೊಳ್ಳುತ್ತಿದ್ದರೆ ಖಂಡಿತವಾಗಿ ಆತ ಬೇಗ ಗುರಿ ಮುಟ್ಟಲಾರ ಮತ್ತು ಆತನಿಗೆ ಗುರಿ ಮುಟ್ಟುವ ಬಯಕೆಯೂ ಇಲ್ಲ ಎಂದರ್ಥ. ಆತನಿಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ ಮತ್ತು ಈ ಕ್ಷಣದ ಬಗ್ಗೆಯೂ ಗೊತ್ತಿಲ್ಲ. ಹಾಗಾಗಬಾರದು, ಈ ಕ್ಷಣದ ನಿನ್ನ ಸಮಯ ನಿನಗೋಸ್ಕರ ಮತ್ತು ನಿನ್ನ ಉತ್ಸಾಹಕ್ಕೋಸ್ಕರ ಅದು ನಿನಗಾಗಿ ಉಪಯೋಗ ಆಗಲೇಬೇಕು.
ಎಲ್ಲವೂ ಗೊಂದಲಗಳಿಂದ ಕೂಡಿದೆ. ಕೆಲವು ರಾಷ್ಟ್ರಗಳಲ್ಲಿ ಜನಸಂಖ್ಯೆ ಹೆಚ್ಚಾಗಲು ಆ ರಾಷ್ಟ್ರಗಳ ಗೊಂದಲಗಳ ನಿಯಮಗಳೇ ಕಾರಣ. ಕೆಲವು ರಾಷ್ಟ್ರಗಳಲ್ಲಿ ಜನಸಂಖ್ಯಾ ನಿಯಂತ್ರಣ ಆಗುತ್ತಿದೆ. ಕೆಲ ರಾಷ್ಟ್ರಗಳಲ್ಲಿ ಆಗುತ್ತಿಲ್ಲ. ಕಳೆದ ಶತಮಾನದಲ್ಲಿ ಈ ಭೂಮಿಯ ಮೇಲೆ 200 ಕೋಟಿ ಇದ್ದ ಜನಸಂಖ್ಯೆ ಇಂದು 730 ಕೋಟಿ ಆಗಿದೆ. ಧರ್ಮಗಳು ಇದಕ್ಕೆ ಸಾಥ್ ನೀಡಿವೆ. ಅಧಿಕಾರದ ವ್ಯವಸ್ಥೆ ಇದನ್ನು ಪ್ರಶ್ನೆ ಮಾಡುತ್ತಿಲ್ಲ. ಹೆಚ್ಚು ಹೆಚ್ಚು ಶಿಕ್ಷಣ ಪಡೆದ ಜನರು ಹೀಗೆ ಮಾಡುತ್ತಿಲ್ಲ
ಮತ್ತು ಮುಂದುವರಿದ ದೇಶಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿಲ್ಲ. ಅನಕ್ಷರತೆ ಎಲ್ಲಿದೆ, ಬಡತನ ಎಲ್ಲಿದೆ ಅಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಭಾರತ, ಚೀನಾ ಮತ್ತು ಪಾಕಿಸ್ತಾನ ಈ ಪ್ರದೇಶದಲ್ಲಿ ಮತ್ತು ಆಫ್ರಿಕಾ ಪ್ರದೇಶದಲ್ಲಿ ಜನಸಂಖ್ಯೆ ಬೆಳವಣಿಗೆ ಹೆಚ್ಚಾಗಿ ಕಂಡುಬಂದಿದೆ.
ಜಗತ್ತಿಗೆ ಒಂದೇ ಸರಕಾರ, ಒಂದೇ ಸಂವಿಧಾನ ಇದ್ದರೆ ನಿಯಂತ್ರಣ ಸಾಧ್ಯವಿತ್ತು. ಎಲ್ಲ ಬಗೆಯ ಮೂಢನಂಬಿಕೆ ಗಳನ್ನು ಧರ್ಮಗಳು ಜನರ ತಲೆಯಲ್ಲಿ
ತುಂಬಿವೆ, ಉದಾ: ನೀನು ಗಂಡು ಮಗುವಿಗೆ ಜನ್ಮ ನೀಡಿದರೆ ನಿನಗೆ ಮುಕ್ತಿ, ಸ್ವರ್ಗ ಸಿಗುತ್ತದೆ, ಹೀಗೆಲ್ಲಾ ಹೇಳಿವೆ! ಇಂಥ ನಂಬಿಕೆಗಳೇ ಜನರ ಸಂತೋಷವನ್ನು ಹಾಳು ಮಾಡಿವೆ. ಒಂದಂತೂ ಖಂಡಿತ ಹೇಳುತ್ತೇನೆ, ಮನುಷ್ಯ ಮನುಷ್ಯನನ್ನು ತಿನ್ನುವ ಕಾಲ ದೂರ ಇಲ್ಲ, ಅದು ಕೆಲ ಪ್ರದೇಶಗಳಲ್ಲಿ ಪ್ರಾರಂಭ ಆಗಿದೆ. ಇಂದು ಈ ಮನುಷ್ಯ ವಿಜ್ಞಾನವನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸುತ್ತಿದ್ದಾನೆ.
ಹೀಗಾಗಿ ಅವನಿಗೆ ನೆಮ್ಮದಿ ಇಲ್ಲ. ಬದಲಿಗೆ ವಿಜ್ಞಾನವನ್ನು ಸೃಜನತೆಗೆ ಮೀಸಲಾಗಿಟ್ಟರೆ ಎಲ್ಲವೂ ಉಪಯುಕ್ತ. ಇದನ್ನು ವಾರಸುದಾರರಿಗೂ ತೋರಿಸಿದರೆ ಈ ಮನುಷ್ಯ ಪರಿಶುದ್ಧ ನಾಗುತ್ತಾನೆ. ಈ ಮಾನವ ಕರುಣಾಮಯಿ ಆಗಿರಬೇಕಾಗಿದೆ, ಪ್ರೇಮಪೂರ್ಣನಾಗಿರಬೇಕಾಗಿದೆ, ಮನುಷ್ಯನಿಗೆ ಅಗತ್ಯ ಬಯಕೆಗಳಿವೆ. ಅವುಗಳಿಂದ ಅವನು ವಂಚಿತನಾದರೆ ನೋವಿನಲ್ಲಿರು ತ್ತಾನೆ. ಕಾರಣ ಈ ದೇಹ ಹಾಗೂ ಮನಸ್ಸು ಆ ಭಗವಂತನ ಸೃಷ್ಟಿ. ಬಯಕೆಗಳೂ ಅವನ ಸೃಷ್ಟಿ ಅಲ್ಲವೇ? ಮತ್ತೇಕೆ ಚಿಂತೆ. ಊಟ, ನಿದ್ರೆ, ಕಾಮ ಈ ಮೂರೂ ತ್ಯಜಿಸಿದರೆ ಈ ಮನುಷ್ಯ ಸಂತತಿ ಬೆಳೆಯುವುದಾದರೂ ಹೇಗೆ? ಈ ಮನುಷ್ಯನ ದೇಹ ಎಲ್ಲರ ಕಣ್ಮುಂದೆನೇ ಕರಗಿ ನೀರಾಗಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ.
ಆತ್ಮ, ಸ್ವರ್ಗ, ನರಕ ಇವೆಲ್ಲಾ ಈ ಮನುಷ್ಯನ ಕಲ್ಪಿತ ತಾಣಗಳು! ಅಧಿಕಾರ, ನಾಯಕತ್ವ, ನಂಬಿಕೆ ಇವುಗಳ ಚಿಂತನೆಗಳ ಪ್ರತಿಫಲವಾಗಿ ಆಚರಣೆಯಲ್ಲಿ ಬಂದಿವೆ. ಅಂದು ಈ ಭೂಮಿ ಗೋಲಾಕಾರದಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಭೂಮಿ ಗೋಲಾಕಾರದಲ್ಲಿದೆ, ಭೂಮಿ ಸೂರ್ಯನನ್ನು ಸುತ್ತುತ್ತದೆ ಎಂದು ಯಾವ ಧರ್ಮ ಗ್ರಂಥಗಳಲ್ಲಿಯೂ ನಮೂದಿಸಿಲ್ಲ! ಇದನ್ನು ನಾವೆಲ್ಲಾ ಚಿಂತಿಸಬೇಕಾಗಿದೆ. ಕಲ್ಪನೆಗಳೇ ನಿಮ್ಮ ಭವಿಷ್ಯ ಆಗಬಾರದು, ಈ ಕ್ಷಣ ಸಂತೋಷದಿಂದ ಇರಬೇಕು!