ಅಭಿಮತ
ಅನೀಶ್ ಬಿ. ಕೊಪ್ಪ
ಪ್ರತಿವರ್ಷ ಜೂನ್ ತಿಂಗಳು ಬಂತೆಂದರೆ ಎಸ್‌ಎಸ್‌ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಡಗರ. ಎಸ್‌ಎಸ್‌ಎಲ್ಸಿ ಅಂಕಪಟ್ಟಿಯನ್ನು ಹಿಡಿದು, ಹೊಸ ಕಾಲೇಜ್‌ಗೆ ದಾಖಲಾಗಿ, ಕಾಲೇಜ್‌ನತ್ತ ಮುಖಮಾಡುವ ಸುಸಂದರ್ಭ. ಆದರೆ ಕಾಲ ಬದಲಾಗಿದೆ. ಜೂನ್ ತಿಂಗಳು ಕಳೆದು, ಜುಲೈ ತಿಂಗಳ ಪ್ರಾರಂಭದಲ್ಲಿ
ನಾವಿದ್ದೇವೆ.
ಕೋವಿಡ್‌ನ ಕರಿನೆರಳಿನಿಂದಾಗಿ ಇನ್ನೂ ಎಸ್‌ಎಸ್‌ಎಲ್ಸಿ ಪರೀಕ್ಷೆಯೇ ನಡೆದಿಲ್ಲ. ಪರೀಕ್ಷೆ ಬರೆದು, ಫಲಿತಾಂಶ ಬಂದು, ಹೊಸ ಕಾಲೇಜ್‌ಗೆ ದಾಖಲಾಗುವಾಗ ಈ ಬಾರಿ ರಾಜ್ಯ ಪಠ್ಯಕ್ರಮದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಬರೋಬ್ಬರಿ 2020ರ ಏಪ್ರಿಲ್‌ನಿಂದ 2021ರ ಆಗಸ್ಟ್ ತನಕ 16 ತಿಂಗಳುಗಳ ಕಾಲ ಎಸ್‌ಎಸ್‌ಎಲಸಿಯಲ್ಲಿ ಓದುವ ಅವಕಾಶ ಪಡೆದ ಅದೃಷ್ಟವಂತರಾಗುತ್ತಾರೆ!
ವಿದ್ಯಾರ್ಥಿಯ ಶೈಕ್ಷಣಿಕ ಬದುಕಿನ ಪಥದಲ್ಲಿ ಎಸ್‌ಎಸ್‌ಎಲಸಿ ಒಂದು ಮಹತ್ತರವಾದ ಮೈಲಿಗಗಿದೆ. ಕರೋನಾ ಬಂದಿತೆಂದು ಪರೀಕ್ಷೆಯನ್ನು ರದ್ದು ಮಾಡದೇ, ಪರೀಕ್ಷಾ ವಿಧಾನವನ್ನು ಬದಲಿಸಿದ್ದು, ಹೊಸತನ ಎಂದೆನಿಸಿದರೂ ಒಗ್ಗಿಕೊಳ್ಳಲೇಬೇಕಾದ ಸುಸಮಯವಿದು. ನನ್ನ ಓದಿನ ಕನ್ನಡಿ ಎಂಬಂತೆ, ಫಲಿತಾಂಶ ಪಡೆಯುತ್ತೇನೆ’ ಎಂಬ ಧನಾತ್ಮಕ ಚಿಂತನೆಯ ಮನಸ್ಥಿತಿಯು ವಿದ್ಯಾರ್ಥಿಗಳಲ್ಲಿ ಮೂಡಬೇಕಿದೆ. ಕರೋನಾ ಕಾಲದಲ್ಲಿ ಪರೀಕ್ಷೆ ನಡೆಯುತ್ತದೆ ಎಂದರೆ ಅದು ಸುಲಭದ ಮಾತೇನಲ್ಲ. ಕೋವಿಡ್ ಬಗ್ಗೆ ಎಚ್ಚರವಹಿಸಿ, ಪರೀಕ್ಷೆಯನ್ನು ಯಶಸ್ವಿಗೊಳಿಸುವಲ್ಲಿ ಕರೋನಾ ವಾರಿಯರ್ಸ್, ಪೋಷಕರು, ಶಿಕ್ಷಣ ಇಲಾಖೆಯವರಿಗಿಂತ ಒಂದಿನಿತು ಜಾಸ್ತಿ ಜವಾಬ್ದಾರಿ ಪರೀಕ್ಷೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳ ಮೇಲಿದೆ.
ಸುದೀರ್ಘ 16 ತಿಂಗಳುಗಳ ಕಾಲ ಆನ್ ಲೈನ್ ಮತ್ತು ಆಫ್ಲೈನ್ ಅಂಗಳದಲ್ಲಿ ಕಲಿತದ್ದನ್ನು ಪರೀಕ್ಷೆ ಎಂಬ ಲಾಸ್ಟ್ ಬಾಲ್‌ಗೆ ಯಶಸ್ಸಿನ ಸಿಕ್ಸರ್ ಹೊಡೆದು,
ಶಾಲಾ ಹಂತವನ್ನು ಯಶಸ್ವಿಯಾಗಿ ದಾಟಿ, ಕಾಲೇಜಿನ ಮೆಟ್ಟಿಲನ್ನೇರುವ ಜವಾಬ್ದಾರಿ ವಿದ್ಯಾರ್ಥಿಗಳ ಹೆಗಲ ಮೇಲಿದೆ. ವಿದ್ಯಾರ್ಥಿಯ ಕಲಿಕೆಗೆ ಪಬ್ಲಿಕ್ ಪರೀಕ್ಷೆ ಎಂಬ ಮೌಲ್ಯಮಾಪನವೇ ಇಲ್ಲವಾದಲ್ಲಿ 15 ತಿಂಗಳ ಕಲಿಕೆಗೆ ಬೆಲೆ ಇಲ್ಲದಂತಾಗುತ್ತದೆ. ಪ್ರತಿವರ್ಷದ ಮಾದರಿಯಂತೆ ಈ ವರ್ಷವೂ ಪರೀಕ್ಷೆ ನಡೆಸಲು ಹೊರಟರೆ ವಿದ್ಯಾರ್ಥಿಗಳಿಗೆ ಅದು ಕಷ್ಟಸಾಧ್ಯ. ಹಾಗಾಗಿ ಒಂದು ವಿಷಯಕ್ಕೆ 40 ಅಂಕಗಳಂತೆ ಒಟ್ಟು 240 ಅಂಕಗಳ ಬಹು ಆಯ್ಕೆಯ ಮಾದರಿಯ ಪ್ರಶ್ನೆ ಗಳನ್ನು ಈ ಬಾರಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕೇಳಲಾಗುತ್ತದೆ ಎಂಬ ಇಲಾಖೆಯ ನಿರ್ಧಾರ ಸಮಜಂಸ, ಸಕಾಲಿಕ ಮತ್ತು ಮೌಲ್ಯಮಾಪನಕ್ಕೆ ಸಮರ್ಪಕ. ಸುಮಾರು 80-90ರ ದಶಕಗಳಲ್ಲಿ ಪಾಸ್ ಆದವನೇ ಜಾಣ ಎಂದೆನ್ನುತ್ತಿದ್ದ ಮಾತು ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಪಾಸ್ ಆಗುತ್ತಾರೆ.
ಪಾಸ್ ಆಗೋದಕ್ಕಿಂತ ಹೆಚ್ಚು ಗ್ರೇಡ್ ತೆಗೆಯೋದೇ ಮುಖ್ಯ ಎಂಬಂತಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿ ಯಾರೂ ಫೇಲ್ ಆಗದಿರಬಹುದು. ಆದರೆ ಎಲ್ಲರೂ ಉತ್ತಮ ಗ್ರೇಡಿಂಗ್ ಪಡೆದು, ಉತ್ತಮ ಕಾಲೇಜ್‌ಗೆ ಸೇರಬೇಕೆಂದರೆ ಪರೀಕ್ಷೆಯನ್ನು ಎದುರಿಸಲೇಬೇಕಲ್ಲವೇ? ಹಾಗಾಗಿ ಪರೀಕ್ಷೆಯೇ ಶಿಕ್ಷಣದ ಅಳತೆಯ ಮಾಪನವಾಗದಿದ್ದರೂ ವರ್ಷವಿಡೀ ಸಂದಿಗ್ಧತೆಯಲ್ಲಿಯೇ ವಿದ್ಯಾರ್ಥಿಯು ಕಲಿತ ಕಲಿಕೆಯ ಪ್ರತಿಫಲನ ಮತ್ತು ಶಿಕ್ಷಕರ ಮಾರ್ಗದರ್ಶಿತ್ವದ ಮೌಲ್ಯಮಾಪನ ವಾಗಿದೆ. ಅದಲ್ಲದೇ ಅತ್ಯಂತ ಕಡಿಮೆ ತಿಂಗಳುಗಳ ಕಾಲ ಶಿಕ್ಷಕರೊಂದಿಗೆ ಮುಖಾಮುಖಿ ಕಲಿತು, ಸ್ವಪ್ರಯತ್ನದಿಂದ ದೂರಶಿಕ್ಷಣದ ಮಾದರಿಯಲ್ಲಿ ಹಲವು
ಸವಾಲುಗಳನ್ನು ಮೆಟ್ಟಿ ನಿಂತು, ಶಿಕ್ಷಣದ ನಿರಂತರತೆಯನ್ನು ಕಾಪಾಡಿಕೊಂಡು ಸಾಗಿದ ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯು ಒಂದು ಹಬ್ಬದಂತಾಗಬೇಕಿದೆ.
ಹಬ್ಬದಲ್ಲಿ ಸಂಭ್ರಮದ ನಗು ಬೀರುವಂತೆ ಪರೀಕ್ಷೆ ಎಂಬ ಹಬ್ಬ ಆತ್ಮವಿಶ್ವಾಸದಿಂದ, ಸವಾಲನ್ನು ಮೆಟ್ಟಿನಿಂತ ವಿಜಯೋತ್ಸವದ ಹಬ್ಬವಾಗಬೇಕಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮುಂದಿನ ಹಂತವನ್ನು ನಿರ್ಧರಿಸುವ ಎಸ್‌ಎಸ್‌ಎಲ್ಸಿ ಪರೀಕ್ಷೆ ಎಂಬ ಮಾಪನಕ್ಕಿಂತ ವಿದ್ಯಾರ್ಥಿಗಳ ಜೀವವೂ ಮುಖ್ಯವೇ. ಕಳೆದ ವರ್ಷ ಕರೋನಾದ ನಡುವೆಯೂ ನಮ್ಮ ರಾಜ್ಯವು ಎಸ್ ಎಸ್‌ಎಲಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಈ ವರ್ಷ ಕೂಡ ಪರೀಕ್ಷೆ ಎದುರಿಸುತ್ತಿರುವ ರಾಜ್ಯ
ಪಠ್ಯಕ್ರಮದ 8,76,581 ವಿದ್ಯಾರ್ಥಿಗಳು ಕರೋನಾ ಸುರಕ್ಷಿತ ಕ್ರಮಗಳನ್ನು ಅನುಸರಿಸಿ, ಆರೋಗ್ಯದ ಬಗ್ಗೆ ಗಮನ ವಹಿಸಿ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ, ವಿಜಯೀಭವರಾಗಲಿ ಎಂಬ ಆಶಯ ಸರ್ವರದ್ದಾಗಿದೆ.