Saturday, 23rd November 2024

ಷೇರುಪೇಟೆ ಭರ್ಜರಿ: ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಸೋಮವಾರ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 106 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 333.76 ಪಾಯಿಂಟ್ಸ್‌ ಹೆಚ್ಚಳಗೊಂಡು 52920.60, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 106.7 ಪಾಯಿಂಟ್ಸ್ ಏರಿಕೆಗೊಂಡು 15869 ಪಾಯಿಂಟ್ಸ್‌ ಮುಟ್ಟಿದೆ. ಒಟ್ಟು 1,785 ಕಂಪನಿಗಳಲ್ಲಿ ವಹಿವಾಟು ಆರಂಭವಾಗಿದ್ದು, ಅದರಲ್ಲಿ 1,322 ಷೇರುಗಳು ಏರಿಕೆಗೊಂಡರೆ ಮತ್ತು 349 ಷೇರುಗಳು ಕುಸಿದಿವೆ. ಅದೇ ಸಮಯದಲ್ಲಿ, 114 ಕಂಪನಿಗಳ ಷೇರು ಬೆಲೆ ಯಾವುದೇ ಬದಲಾವಣೆ ಆಗಿಲ್ಲ.

ಬ್ರಿಟಾನಿಯಾ ಷೇರು 48 ರೂ. ಏರಿಕೆಯಾಗಿ 3,481.80 ರೂ., ಮಾರುತಿ ಸುಜುಕಿಯ ಷೇರು 108 ರೂಪಾಯಿ ಏರಿಕೆಯಾಗಿ 7,085.25 ಕ್ಕೆ ಪ್ರಾರಂಭ ವಾಯಿತು. ಟಾಟಾ ಕನ್ಸೂಮರ್ ಷೇರು 12 ರೂ. ಹೆಚ್ಚಾಗಿ 767.85 ಕ್ಕೆ ಆರಂಭವಾಯಿತು, 13 ರೂ ಗಳಿಕೆಯೊಂದಿಗೆ ಸಿಪ್ಲಾ ಷೇರು 932.70 ರೂ.ನಲ್ಲಿ ತೆರೆಯಿತು.

ಟೆಕ್ ಮಹೀಂದ್ರಾ ಷೇರುಗಳು ಸುಮಾರು ರೂ. 5 ರಷ್ಟು ಇಳಿಕೆಯಾಗಿ 1,204.15 ರಲ್ಲಿ ಆರಂಭವಾಗಿದ್ದು, ಹಿಂಡಾಲ್ಕೊ ಷೇರು ಸುಮಾರು 2 ರೂ. ಕುಸಿದು 443.00 ಕ್ಕೆ ಆರಂಭವಾಯಿತು, ಎನ್‌ಟಿಪಿಸಿಯ ಷೇರು ಸುಮಾರು 1 ರೂ. ಕುಸಿದು 117.60 ರೂ.ನಲ್ಲಿ ಪ್ರಾರಂಭವಾಯಿತು.

ದೇಶೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರದ ಮುಕ್ತಾಯವಾದ 74.41 ಕ್ಕೆ ಹೋಲಿಸಿದರೆ ಭಾರತೀಯ ರೂಪಾಯಿ ಸೋಮವಾರ ಪ್ರತಿ ಡಾಲರ್‌ಗೆ 74.38 ಕ್ಕೆ ಏರಿಕೆಯಾಗಿದೆ. ಜುಲೈ 30 ರಂದು, ದೇಶೀಯ ಕರೆನ್ಸಿ 13 ಪೈಸೆ ಕಡಿಮೆಯಾಗಿ ಪ್ರತಿ ಡಾಲರ್‌ಗೆ 74.41 ಕ್ಕೆ ಕೊನೆಗೊಂಡಿತು.