ವೈ.ಕೆ.ಸಂಧ್ಯಾ ಶರ್ಮ
ಇಂದು ಉತ್ತಮ ಭರತನಾಟ್ಯ ಕಲಾವಿದೆಯಾಗಿ ಎಂದು ಗುರುತಿಸಿಕೊಂಡಿರುವ ಪೂರ್ಣಿಮಾ ರಜಿನಿ ಅವರದು ಬಹುಮುಖ ಪ್ರತಿಭೆ. ನೃತ್ಯಕ್ಷೇತ್ರ ಮತ್ತು ಸಮಾಜಸೇವೆಯಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡ ಇವರದು ಪ್ರಯೋಗಶೀಲತೆ ಮತ್ತು ಅನ್ವೇಷಕ ಮನೋವೃತ್ತಿ. ಚಿಕ್ಕಂದಿನಿಂದ ಇವರು ರೂಢಿಸಿಕೊಂಡು ಬಂದದ್ದು ಸ್ವಾವಲಂಬಿ ಮನೋಧರ್ಮ. ಅದಕ್ಕೆ ಸಾಕ್ಷಿಗೊಡುತ್ತದೆ ಅವರ ಮೂರು ದಶಕಗಳ ನೃತ್ಯಪಯಣದ ಏರಿಳಿತದ ಹಾದಿ.
ಬಾಲ್ಯದಿಂದಲೇ ಪರಿಶ್ರಮ ತಮ್ಮಲ್ಲಿದ್ದ ನೃತ್ಯಾಸಕ್ತಿಯನ್ನು ಗುರುತಿಸಿಕೊಂಡವರು ಸ್ವಯಂ ಅವರೇ. ನೆರೆಮನೆಯ ಸ್ನೇಹಿತೆ ನೃತ್ಯ ಕಲಿಯುತ್ತಿದ್ದುದನ್ನು ಕಂಡು ಆಸಕ್ತಳಾಗಿ ಗೆಳತಿಯ ನೃತ್ಯಶಾಲೆಗೆ ಹೋಗಿ ಸೇರಿಕೊಂಡಾಗ ಪೂರ್ಣಿಮಾಗೆ ಇನ್ನೂ ಏಳರ ಎಳವೆ. ಹಾಗೆ ಅವಳ ಪಾಲಿಗೆ ಗುರುಗಳಾಗಿ ಒದಗಿ ಬಂದವರು ಹಿರಿಯ ನಾಟ್ಯಗುರು ರಾಧಾ ಶ್ರೀಧರ್. ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪಂದನಲ್ಲೂರು ಶೈಲಿಯಲ್ಲಿ ಚುರುಕಾಗಿ ನೃತ್ಯದ ಮಜಲುಗಳನ್ನರಿತು ಸಾಧನೆಯ ಕನಸಿನ ಹಾದಿಯಲ್ಲಿ ಸಾಗಿದ ಪೂರ್ಣಿಮಾ, ಎರಡುದಶಕಗಳ ಕಾಲ ಅವಿರತ ಶ್ರಮಿಸಿದಳು.
ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದವಳಿಗೆ ಚಿಕ್ಕವಯಸ್ಸಿನ ಭಾರತ ಸರ್ಕಾರದ ಫೆಲೋಶಿಪ್ ದೊರೆತದ್ದು ಆಕೆಯ ಪ್ರತಿಭೆಗೆ ಸಾಕ್ಷಿ. ಜೊತೆಗೆ ಕರ್ನಾಟಕ ಶಾಸೀಯ ಸಂಗೀತಾಭ್ಯಾಸ ಮತ್ತು ನಟುವನ್ನಾರ್ನಲ್ಲೂ ತರಬೇತಿ ದೊರೆಯಿತು.
ಮಕ್ಕಳಿಗೆ ತರಬೇತಿ
ಮೊದಲಿನಿಂದಲೂ ಸ್ವಾಭಿಮಾನಿಯಾಗಿದ್ದ ಪೂರ್ಣಿಮಾ ತಂದೆ ಶೇಷಾದ್ರಿ ಮತ್ತು ತಾಯಿ ಪ್ರೇಮಾ ಅವರಿಗೆ ತನ್ನ ರಂಗಪ್ರವೇಶದ ಖರ್ಚನ್ನು ಹೊರೆಯಾಗಿಸುವ ಮನಸ್ಸಿಲ್ಲದೆ, ಹದಿನಾಲ್ಕು ವರ್ಷಕ್ಕೇ ಬಾಲಾಭ್ಯಾಸಿಗಳಿಗೆ ನೃತ್ಯ ಪಾಠ ಹೇಳುತ್ತಾ ಹಣವನ್ನು ಒಗ್ಗೂಡಿಸಿಕೊಂಡು ರಂಗಪ್ರವೇಶವನ್ನು ಮಾಡಿದ್ದಲ್ಲದೆ, ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡತೊಡಗಿದ್ದು ಈಕೆಯ ವೈಶಿಷ್ಟ್ಯ. ಓದಿನಲ್ಲೂ ಬುದ್ಧಿವಂತೆಯಾಗಿದ್ದ ಈಕೆ ಮೈಕ್ರೋ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಜೊತೆಯ ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ.ಪದವಿಯನ್ನೂ ಪಡೆದುಕೊಂಡರು.
ಎಲ್ಲದರಲ್ಲೂ ಹೋರಾಟ-ವಿಕ್ರಮ. ತರಗತಿಯಲ್ಲಿ ಮೊದಲಸ್ಥಾನ ಪಡೆದು ಫ್ರೀಶಿಪ್ ಕೂಡ ದಕ್ಕಿಸಿಕೊಂಡ ಹೆಮ್ಮೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಹೆತ್ತವರಿಗೆ ಹೊರೆಯಾಗದೆ, ಸ್ವಾವಲಂಬಿಯಾಗಿ ಮುನ್ನಡಿಯಿಟ್ಟದ್ದು ಪೂರ್ಣಿಮಾ ವಿಶೇಷ. ದೂರದರ್ಶನದಲ್ಲಿ ಗ್ರೇಡೆಡ್ ಕಲಾವಿದೆಯಾಗಿ, ಒಂದೇ ವರ್ಷದಲ್ಲಿ ಬೆಂಗಳೂರು ದೂರದರ್ಶನದಿಂದ ಐದು ಪ್ರಮುಖ ನೃತ್ಯೋತ್ಸವಗಳಲ್ಲಿ ನೃತ್ಯಪ್ರಸ್ತುತಿಪಡಿಸಲು ಆಹ್ವಾನ ಪಡೆದರು. ಕೇವಲ ೨೩ ವರ್ಷದ ಯುವತಿ ಕರ್ನಾಟಕ ಸರ್ಕಾರ ನಡೆಸುವ ನೃತ್ಯಪರೀಕ್ಷೆಗಳಿಗೆ ಪರೀಕ್ಷಕರೂ ಆಗಿ ಕೆಲಸ ಮಾಡಿದ ಅಗ್ಗಳಿಕೆ.
ಹೈದರಾಬಾದ್ನಲ್ಲಿ ಮದುವೆಯಾಗಿ ಹೈದರಾಬಾದಿಗೆ ತೆರಳಿದನಂತರವೂ ನೃತ್ಯ ಚಟುವಟಿಕೆಗಳು ಸ್ಥಗಿತಗೊಳ್ಳಲಿಲ್ಲ. ಪದ್ಮಶ್ರೀ ಡಾ.ಆನಂದಶಂಕರ್ ಜಯಂತ್ ಗರಡಿಯಲ್ಲಿ ಕಲಾಕ್ಷೇತ್ರ ಬಾನಿಯ ತರಬೇತಿ ಮುಂದುವರಿಯಿತು. ಮದುವೆಗೆ ಮುನ್ನವೇ ಬೆಂಗಳೂರಿನಲ್ಲಿ ನೃತ್ಯಶಾಲೆ ತೆರೆದು ಅನೇಕರಿಗೆ ನಾಟ್ಯ ಹೇಳಿ ಕೊಡುತ್ತಿದ್ದ ಪೂರ್ಣಿಮಾ, ಹೈದರಾಬಾದಿನಲ್ಲೂ ನೃತ್ಯಶಿಕ್ಷಣ ಮುಂದುವರಿಸಿದರು. ಹೈದರಾಬಾದ್ ಆಕಾಶವಾಣಿಯಲ್ಲಿ ಭರತನಾಟ್ಯ ಮತ್ತು ಸಂಬಂಽತ ಕಲೆಗಳ
ಬಗ್ಗೆ ಉಪನ್ಯಾಸಗಳನ್ನು ನೀಡಿzರೆ. ಜೊತೆಗೆ ಅನೇಕ ಹೊಸ ನೃತ್ಯರೂಪಕಗಳನ್ನು ತಯಾರಿಸಿ, ಮೈಸೂರು ದಸರಾ, ನಟರಾಜೋತ್ಸವ, ತಿರುಪತಿ ಮುಂತಾದ ಪ್ರತಿಷ್ಠಿತ ಉತ್ಸವಗಳಲ್ಲಿ ದೇಶಾದ್ಯಂತ ಪ್ರದರ್ಶನ ನೀಡಿದ ಅನುಭವ, ಹಲವು ಶಿಷ್ಯರ ರಂಗಪ್ರವೇಶವನ್ನೂ ನೆರವೇರಿಸಿದ್ದಾರೆ.
ವಿದೇಶದಲ್ಲಿ ನೃತ್ಯ
ಭಾರತಾದ್ಯಂತ ಅನೇಕ ನೃತ್ಯೋತ್ಸವಗಳಲ್ಲಿ ನರ್ತಿಸಿರುವ ಪೂರ್ಣಿಮಾ , ಅಮೆರಿಕಾದಲ್ಲಿ ನಾಲ್ಕು ತಿಂಗಳು ಪ್ರವಾಸ ಮಾಡಿ ಅಲ್ಲಿನ ಇಪ್ಪತ್ತಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾರೆ ಅಮೇರಿಕಾ ಮತ್ತು ಯು.ಎ.ಇ. ಗಳಲ್ಲಿ ನೀಡಿದ ಪ್ರಮುಖ ನೃತ್ಯ ಕಾರ್ಯಕ್ರಮಗಳೆಂದರೆ- ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ವಲ್ಡ ಮಿಲೇನಿಯಂ ಕನ್ನಡ ಸಮ್ಮೇಳನ, ಲಾಸ್ ವೇಗಾಸ್ ನಲ್ಲಿ ವಲ್ಡ ಟೂರಿಸಂ ದಿನ, ಲಾಸ್ ಎಂ ಜಲಿಸ್ , ದುಬೈ, ಪೋರ್ಟ್ ಲ್ಯಾಂಡ್, ಓರಿಗನ್, ಪಿಟ್ಸಬರ್ಗ್, ಚಿಕಾಗೋ, ವಾಶಿಂಗ್ಟನ್, ವರ್ಜಿನಿಯಾ, ಸ್ಯಾನ್ ಜೋಸೆ ಮುಂತಾದೆಡೆ ನೃತ್ಯಪ್ರದರ್ಶನ ನೀಡಿರುವರು.
ಇವರ ಅನುಪಮ ಸೇವೆಯನ್ನು ಗುರ್ತಿಸಿ ಅನೇಕ ಸಂಘ-ಸಂಸ್ಥೆಗಳು ಸನ್ಮಾನ-ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ನೃತ್ಯಕ್ಷೇತ್ರದಲ್ಲಿ ಯುವ ಕಲಾವಿದರ ವಿಶಿಷ್ಟ ಕೊಡುಗೆಯ ಫೆಲ್ಲೋಶಿಪ್ ಪಡೆದಿದ್ದಾರೆ. ಪ್ರಸ್ತುತ ದಕ್ಷಿಣ ಲೋಕಸಭಾ ಸಂಸದರ ನೇತೃತ್ವದಲ್ಲಿ ನಡೆಯುತ್ತಿರುವ ವ್ಯಕ್ತಿ ವಿಕಾಸನಾ ಕಾರ್ಯಚಟುವಟಿಕೆಗಳಲ್ಲಿ ಮಾರ್ಗದರ್ಶಕಿಯಾಗಿ ಸ್ವಯಂಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ದುರ್ಬಲರಿಗೆ ಉಚಿತ ನೃತ್ಯ ತರಬೇತಿ
ಬೆಂಗಳೂರಿನಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಅಂಡ್ ಮ್ಯೂಸಿಕ್ ಸಂಸ್ಥಾಪಕ ನಿರ್ದೇಶಕಿಯಾಗಿ ಒಂಭತ್ತು ಶಾಖೆಗಳಲ್ಲಿ ನಾಟ್ಯ ಶಿಕ್ಷಣ ನೀಡುತ್ತಿರುವ ಪೂರ್ಣಿಮಾ, ಆರುವರ್ಷಕ್ಕಿಂತ ಪುಟ್ಟಮಕ್ಕಳಿಗೆ ನರ್ಸರಿ, ಪ್ರೀ ನರ್ಸರಿ ಮಕ್ಕಳಿಗೆ ಭಾರತೀಯ ಪ್ರದರ್ಶನಕಲೆಗಳನ್ನುಕಲಿಯುವ, ಪ್ರೇರೇಪಿಸುವ ಉಪಯುಕ್ತ ಪ್ರಯೋಗವೊಂದನ್ನು ನಡೆಸುತ್ತಿದ್ದಾರೆ. ಯೋಗ, ದೇಹಚಲನೆ, ಧ್ವನಿ ಏರಿಳಿತ, ಲಯವಿನ್ಯಾಸಗಳು ಮತ್ತುಕೈಬೆರಳುಗಳಿಗೆ ವ್ಯಾಯಾಮ ನೀಡುವಕರಕುಶಲ ತರಗತಿಗಳನ್ನು ನಡೆಸುತ್ತಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಮಾಜಸೇವಾ ನಿಟ್ಟಿನಲ್ಲಿ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ, ಕೊಳಗೇರಿ, ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಯೋಗ-ಸಂಗೀತ ಮತ್ತು ನೃತ್ಯ ವಿಶೇಷ ತರಬೇತಿಗಳನ್ನು ನೀಡುತ್ತಿರುವುದು ಇವರ ವೈಶಿಷ್ಟ್ಯ.