ಸುರೇಶ ಗುದಗನವರ
ನದಿ ದಡದಲ್ಲಿ ಹಾವುಗಳು ಸತ್ತಿದ್ದವು. ಏಕೆಂದು ಗಮನಿಸಿದಾಗ, ಅತಿಯಾದ ಬಿಸಿಯೇ ಕಾರಣ ಎಂದು ತಿಳಿಯಿತು. ಆ ಜಾಗ ತಂಪು ಮಾಡಲು ಇವರು ಕೈ ಗೊಂಡ ಏಕಾಂಗಿ ಸಾಹಸದಿಂದ ಅಲ್ಲಿ ಕಾಡು ರೂಪುಗೊಳ್ಳಲು ಸಾಧ್ಯವಾಯಿತು. ಇವರು ಏಕಾಂಗಿಯಾಗಿ ಕಾಡು ಬೆಳೆಸಿದ್ದರಿಂದಾಗಿ, ಇವರು ನಿಜವಾಗಿಯೂ ಕಾಡು ಮನುಷ್ಯ.
ಕಳೆದ 40 ವರ್ಷಗಳಿಂದ ಒಬ್ಬ ರೈತ ಬಂಜರು ಭೂಮಿಯಲ್ಲಿ ಮರಗಳನ್ನು ಬೆಳೆಸಿ, ಆ ಭೂಮಿಯನ್ನು ಅರಣ್ಯವಾಗಿ ಪರಿವರ್ತಿಸಿ ದಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರೇ ಅಸ್ಸಾಂನ ಜಾಧವ್ ಮೊಲೈ ಪಾಯೆಂಗ್. ಜಾಧವ್ 1963 ರಲ್ಲಿ ಅಸ್ಸಾಂನ ದೂರದ ಹಳ್ಳಿಯೊಂದರ ಬುಡಕಟ್ಟು ಸಮುದಾಯದಲ್ಲಿ ಜನಿಸಿದರು. ಹಳ್ಳಿಯ ಶಾಲೆಯಲ್ಲಿ ಓದಿ ಮೆಟ್ರಿಕ್ಯುಲೇಷನ್ ಮಾಡಿದರು. 1979ರಲ್ಲಿ ಪ್ರವಾಹ ಬಂದು ನಿಂತ ಮೇಲೆ, ಜಾಧವ್ ಬ್ರಹ್ಮಪುತ್ರ ನದಿಯ ಮರಳಿನಲ್ಲಿ ನಡೆದಾಗ ಅವರಿಗೆ ಹಾವುಗಳು ಸತ್ತಿರುವುದು ಗೋಚರವಾಯಿತು. ಕೆಲವು ದಿನಗಳ ನಂತರ ಹಾವುಗಳು ಶಾಖದಿಂದ ಸತ್ತಿರುವುದೆಂದು ತಿಳಿದುಕೊಂಡ ಅವರು ಮರಳು ಪ್ರದೇಶದಲ್ಲಿ ಬಿದಿರುಗಳನ್ನು ನೆಡಲು ಪ್ರಾರಂಭಿಸಿದರು.
1980ರಲ್ಲಿ ಅಸ್ಸಾಂನ ಅರಣ್ಯ ವಿಭಾಗವು 200 ಹೆಕ್ಟೇರ್ ಭೂಪ್ರದೇಶದ ಅರುಣ್ ಚಪೋರಿ ಮರಳು ಪ್ರದೇಶದಲ್ಲಿ ಅರಣ್ಯ ಮಾಡುವ ಯೋಜನೆಯನ್ನು ಪ್ರಾರಂಭಿಸಿತು. ಜಾಧವ್ ಐದು ವರ್ಷಗಳ ಕಾಲ ಅದೇ ಯೋಜನೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದರು. ಸರಕಾರದ ಯೋಜನೆ ಮುಗಿದರೂ ಜಾಧವ ಸುಮ್ಮನೆ ಕೂಡಲಿಲ್ಲ. ಅವರು ಬಂಜರು ಪ್ರದೇಶದಲ್ಲಿ ಸಸಿಗಳನ್ನು ನೆಡುವುದನ್ನು ಮತ್ತು ಪೋಷಿಸುವುದನ್ನು ಮುಂದು ವರೆಸಿದರು. ಬೆಳಿಗ್ಗೆ ಮತ್ತು ಸಂಜೆ ಸಸ್ಯಗಳಿಗೆ ತಪ್ಪದೇ ನೀರುಣಿಸುತ್ತಿದ್ದರು. ಜಾಧವ್ ವರ್ಷಕ್ಕೆ ಮೂರು ತಿಂಗಳು ಪ್ರತಿದಿನ ಸಸಿಗಳನ್ನು ನೆಡುತ್ತಿದ್ದರು. ನೂರಾರು ಎಕರೆ ಪ್ರದೇಶದಲ್ಲಿ ಏಕಾಂಗಿಯಾಗಿ ಬಂಜರು ಭೂಮಿಯನ್ನು ಅರಣ್ಯ ಪ್ರದೇಶವನ್ನಾಗಿ ಪರಿವರ್ತಿಸಿ ಸಾಧಿಸಿ ತೋರಿಸಿದ್ದಾರೆ.
ಬಂಜರು ಭೂಮಿ ಈಗ ಹಸಿರಿನ ಸಿರಿ
ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಜಾಧವ್ ಅವರು 1360 ಎಕರೆ ಬಂಜರು ಪ್ರದೇಶವನ್ನು ಹಚ್ಚ ಹಸಿರಿನ ಕಾಡನ್ನಾಗಿ ಬೆಳೆಸಿರುವುದು ಅಚ್ಚರಿ ಉಂಟು ಮಾಡುತ್ತದೆ. ಕಾಲಕ್ರಮೇಣ ಈ ಪ್ರದೇಶದಲ್ಲಿ ವಿವಿಧ ರೀತಿಯ ಸಸ್ಯಗಳು ತಮ್ಮಷ್ಟಕ್ಕೇ ಬೆಳೆದವು ಮತ್ತು ಇತರ ವಲಸೆ ಹಕ್ಕಿಗಳು ಸಹ ಇಲ್ಲಿಗೆ ಬರಲು ಪ್ರಾರಂಭಿ ಸಿದವು. ಮೊಲೈ ಫಾರೆಸ್ಟ್ ಎಂದು ಪ್ರಸಿದ್ಧವಾಗಿರುವ ಈ ಕಾಡಿನಲ್ಲಿ ಈಗ ಹುಲಿ, ಖಡ್ಗಮೃಗ, ಆನೆ, ಜಿಂಕೆ, ಮೊಲಗಳು ಮತ್ತು ಇನ್ನಿತರ ಪ್ರಾಣಿಗಳು ಕಂಡು ಬರುತ್ತವೆ.
ಹಲವಾರು ಬಗೆಯ ಪಕ್ಷಿಗಳಿಗೆ ನೆಲೆಯಾಗಿದೆ. ಮೊಲೈ ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳಿದ್ದು, ಅವುಗಳಲ್ಲಿ ವಾಲ್ಕೋಲ್, ಜಾಕ್ ಫ್ರುಟ್, ಅನಾನಸ್, ಕಸ್ಟರ್ಡ್ ಆಪಲ್ ಗೋಲ್ಮೋಹರ್ ಇತ್ಯಾದಿ ಮರಗಳಿವೆ. ಜತೆಗೆ ಇವರು ಬೆಳೆಸಿದ ಬಿದಿರು ಹೆಚ್ಚಿನ ಪ್ರದೇಶವನ್ನು ಒಳಗೊಂಡಿದೆ. ಹಸಿರು ಕ್ರಾಂತಿಯನ್ನು ತನ್ನ ಉಸಿರು ಮಾಡಿಕೊಂಡಿದ್ದ ಜಾಧವ್ ಅವರ ಸಾಹಸಮಯ ಕಾರ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಜಿತು ಕಲಿಕಾ ಅವರು ‘ದಿ ಮೊಲೈ ಫಾರೆಸ್ಟ್’ ಎಂಬ ಹೆಸರಿನ ಸಾಕ್ಷ್ಯ ಚಿತ್ರ ವನ್ನು ನಿರ್ಮಿಸಿದರು. ಅದು ಹಲವು ಕಡೆ ಪ್ರದರ್ಶನಗೊಂಡಿತು. ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎನ್ವಿರಾ ನ್ಮಂಟಲ್ ಸೈನ್ಸ್ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಮಕ್ಕಳಿಗೆ ಪ್ರೇರಣೆ
ಯುವಕರಲ್ಲಿ ಜಾಗೃತಿ ಮೂಡಿಸಲು ಜಾಧವ್ ದೇಶದ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿನ ಶಾಲೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಿ, ನಮ್ಮ ಜೀವನದಲ್ಲಿ ಮರಗಳು ಮತ್ತು ಕಾಡುಗಳು ವಹಿಸುವ ಪಾತ್ರ ಹಾಗೂ ಅವುಗಳೆಲ್ಲ ಹವಾಮಾನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಕುರಿತು ಮಾತನಾಡುತ್ತಾರೆ. ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭದಲ್ಲಿಯೇ ಒಂದನೆಯ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಸಸಿ ನೆಡಲು ಮತ್ತು ಅದನ್ನು ಐದನೆಯ ತರಗತಿಯವರೆಗೆ ಪೋಷಿಸಲು ಸೂಚಿಸಬೇಕು, ಆ ಗಿಡ ಬೆಳೆದರೆ ಮಾತ್ರ ಆರನೆಯ ತರಗತಿಗೆ ಪ್ರವೇಶ ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ.
ಜಾಧವ್ ಪಾಯೇಂಗ್ ಅವರು ಮೆಕ್ಸಿಕೊದಲ್ಲಿ ಪರಿಸರ ಯೋಜನೆಗಳಿಗೆ ಸಹಕರಿಸಲು ಫಾಂಡಾಸಿಯನ್ ಅಜ್ಟೆಕಾ ಎಂಬ ಎನ್.ಜಿ.ಒ. ಜೊತೆ ಒಪ್ಪಂದಕ್ಕೆ ಡಿಸೆಂಬರ್ 2020ರಲ್ಲಿ ಸಹಿ ಹಾಕಿದ್ದಾರೆ. ಇದು ಉತ್ತರ ಅಮೇರಿಕಾ ದೇಶದಲ್ಲಿ ಏಳು ಮಿಲಿಯನ್ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. ಮೆಕ್ಸಿಕನ್ ಸರ್ಕಾರವು ಜಾಧವ್ ಪಾಯೆಂಗ್ ಅವರಿಗೆ ಹತ್ತು ವರ್ಷಗಳ ವೀಸಾ ನೀಡಿದೆ.
ಅವರು ಪ್ರತಿ ವರ್ಷ 3 ತಿಂಗಳು ಮೆಕ್ಸಿಕೋದಲ್ಲಿದ್ದು, ಸೆಪ್ಟೆಂಬರ್ ದಿಂದ ನವೆಂಬರ್ರವರೆಗೆ ಗಿಡ ನೆಡಲು ಒಂದು ಲಕ್ಷ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಿ
ದ್ದಾರೆ. 550 ಹೆಕ್ಟೇರ್ ಬಂಜರು ಭೂಮಿಯನ್ನು ಕಾಡನ್ನಾಗಿ ಪರಿವರ್ತಿಸಿದ್ದಕ್ಕಾಗಿ ಜಾಧವ್ ಪಾಯೆಂಗ್ ಅವರಿಗೆ 2010ರಲ್ಲಿ ವಿಶ್ವ ಭೂದಿನಾಚರಣೆಯೆಂದು ದೆಹಲಿಯಲ್ಲಿ ‘ದಿ ಫಾರೆಸ್ಟ್ ಮ್ಯಾನ್’ ಎಂಬ ಬಿರುದನ್ನು ನೀಡಲಾಯಿತು. ಜಾಧವ್ ಪಯೆಂಗ್ ಅವರ ಕಥೆಯನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಲಿಸುವ ಅಗತ್ಯವಿದೆ. ಏಕಾಂಗಿಯಾಗಿ ಕಾಡನ್ನು ನಿರ್ಮಿಸಿದ ಅವರ ಇಚ್ಛಾಶಕ್ತಿ ಎಲ್ಲರಿಗೂ ಮಾದರಿಯಾಗಲಿ. ಪರಿಸರವನ್ನು ಉಳಿಸಲು ಇಂತಹ ವ್ಯಕ್ತಿಗಳ ಸಾಹಸವೇ ನಮ್ಮ ತಲೆಮಾರಿಗೆ ಸೂರ್ತಿ ಎನಿಸಬೇಕು.
ಗೌರವ ಮತ್ತು ಪ್ರಶಸ್ತಿ
? ಭಾರತ ಸರಕಾರದಿಂದ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ
? ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎನ್ವಿರಾನ್ಮಂಟಲ್ ಸೈನ್ಸ್ನಿಂದ ಸನ್ಮಾನ
? ದಿ ಮೊಲೈ ಫಾರೆಸ್ಟ್ ಸಾಕ್ಷ್ಯ ಚಿತ್ರ
? ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್ಮೆಂಟ್ ಗೌರವ.
***
‘ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಸಿರಾಗಿಸುವುದು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಲು ಮಕ್ಕಳಿಗೆ ಕಲಿಸಬೇಕು. ಹೀಗಾಗಿ ಇಡೀ ಪರಿಸರ ವ್ಯವಸ್ಥೆಯು ಉತ್ತಮ ಸಮತೋಲನಕಾಯ್ದುಕೊಳ್ಳುತ್ತದೆ’
-ಜಾಧವ್ ಪಾಯೇಂಗ್