ಯಕ್ಷಿತಾ ಆರ್ ಮೂಡುಕೊಣಾಜೆ
ಪಚ್ಚನೆಯ ಪತ್ರೆಗಳಲ್ಲಿ ಹಲವಾರು ನಗುಮುಖಗಳನ್ನು ಸೃಷ್ಟಿಸಿ ಅವುಗಳಿಗೆ ವಿಶೇಷವಾದ ಕಳೆಯನ್ನು ತುಂಬಿ ಇದೀಗ ‘ಲೀಫ್ ಆರ್ಟ್’ ಎಂಬ ಕಲೆಯಿಂದ ಜನಮನ್ನಣೆ ಪಡೆದಿರುವರು ಮೂಡು ಬಿದಿರೆಯ ಅಕ್ಷಯ್ ಕೋಟ್ಯಾನ್. ಹಸಿರು ಎಲೆಗಳೇ ಇವರ ಚಿತ್ರ ಮಾಧ್ಯಮ. ಎಲೆಗಳ ಮೇಲೆ ಚಿತ್ರ ಮೂಡಿಸುವುದರಲ್ಲಿ
ಇವರು ಸಿದ್ಧ ಹಸ್ತರು.
ತಮ್ಮ ಚಿತ್ರಕೌಶಲದಿಂದ ‘ಲೀಫ್ ಆರ್ಟಿಸ್ಟ್’ ಎಂದೇ ಪ್ರಸಿದ್ಧಿ ಪಡೆದಿರುವ ಇವರು ಮೋಹನ್ ಬಿ.ಪೂಜಾರಿ ಮತ್ತು ಶೋಭಾ ದಂಪತಿಯ ಪುತ್ರ. ಪ್ರಾಂತ್ಯ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಹೋಲಿ ರೋಸರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ೩ನೇ ವರುಷದ ವಿಷುವಲ್ ಆರ್ಟ್ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪೆನ್ಸಿಲ್ ಸ್ಕೆಚ್, ಸಾಬೂನಿನಲ್ಲಿ ದೇವರ ಕಲಾಕೃತಿ, ವಾಲ್ ಪೈಟಿಂಗ್, ರಂಗೋಲಿ ಮತ್ತು ಪೆನ್ಸಿಲ್ನ ಮೊನೆಯಿಂದ ಮೈಕ್ರೋ ಆರ್ಟ್ ಹೀಗೆ ಹಲವಾರು ಮಾಧ್ಯಮಗಳಲ್ಲಿ ಕಲಾಕೃತಿ ರಚಿಸುವ ಇವರ ನೆಚ್ಚಿನ ಮಾಧ್ಯಮ ಎಲೆಗಳು.
ಪಚ್ಚೆ ಪತ್ರೆಗಳಲ್ಲಿ ನಗುಮುಖ
ಲಾಕ್ ಡೌನ್ ವೇಳೆ ಎಲೆಗಳಕೆ ಚಿತ್ರ ರಚಿಸಲು ಪ್ರಯತ್ನಿಸಬಾರದು ಎಂದು ಕುತೂಹಲದಿಂದ ಒಂದು ಹೆಜ್ಜೆ ಮುಂದಿಟ್ಟರು. ಮೊದಲ ಪ್ರಯತ್ನದಲ್ಲಿ ಸೋತರೂ ಎರಡನೇ ಬಾರಿ ರಶ್ಮಿಕಾ ಮಂದಣ್ಣರವರ ಮುಖಚಿತ್ರವನ್ನು ಎಲೆಯ ಮೇಲೆ ಬಿಡಿಸುವಲ್ಲಿ ಫಲಕಾರಿಯಾದರು. ನಂತರ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ, ಬಿ.ಎಸ್ ಎಡಿಯೂರಪ್ಪ, ಡಾ.ವೀರೇಂದ್ರ ಹೆಗ್ಗಡೆ, ಚಲನ ಚಿತ್ರ ಕ್ಷೇತ್ರದ ಸುದೀಪ್ ಹೀಗೆ ಅನೇಕ ಸಾಧಕರ ಮುಖಚಿತ್ರಗಳನ್ನು ಎಲೆಗಳಲ್ಲಿ ಬರೆದರು. ಈ ಒಂದು ವರುಷದಲ್ಲಿ ಒಟ್ಟು ೨೦೦ ಲೀಫ್ ಅರ್ಟ್ಗಳನ್ನುಇವರು ತಯಾರಿಸಿದ್ದಾರೆ.
ಅಶ್ವತ್ಥ ಎಲೆ ಉತ್ತಮ
ತಾಳ್ಮೆ ಮತ್ತು ಸಹನೆ ಇರುವವರಿಗೆ ಎಲ್ಲವೂ ಹೆದ್ದಾರಿಯಾಗುತ್ತದೆ ಎಂಬುದು ಈ ಕಲೆಯಲ್ಲಿ ಎದ್ದು ಕಾಣುತ್ತಿದೆ. ಹೂವಿನಷ್ಟೇ ನಾಜೂಕಾದ ಎಲೆಗಳ ಮೇಲೆ ಯಾವುದೇ ಕಲಾಕೃತಿ ಬರೆಯಲು ಎರಡರಿಂದ ಎರಡೂವರೆ ಗಂಟೆ ಬೇಕಾಗುತ್ತದೆ. ಇಲ್ಲಿ ತಮಗೆ ಬೇಕಾದ ಎಲೆಗಳನ್ನು ಆರಿಸಿಕೊಳ್ಳಬಹುದು. ‘ನಾನು ಮೊದಲನೇ ಬಾರಿ ಹಲಸಿನ ಎಲೆಗಳನ್ನು ಬಳಸಿದೆ, ನಂತರ ಅಶ್ವತ್ಥ ಎಲೆಗಳನ್ನು ಜಾಸ್ತಿ ದಿನ ಸಂಗ್ರಹಿಸಬಹುದೆಂಬ ಕಾರಣಕ್ಕೆ ಅದನ್ನು ಬಳಸಲು ಮುಂದಾದೆ.
ಮೊದಲಿಗೆ ಎಲೆಗಳ ಮೇಲೆ ಸ್ಕೆಚ್ ತಯಾರಿಸಿ ಅದರ ಮೇಲೆ ಕಟ್ಟಿಂಗ್ ಬ್ಲೇಡ್ನಿಂದ ತಿರುವುಗಳನ್ನು ಬಿಡಿಸಿ ತದನಂತರ ಕಟ್ಟಿಂಗ್ ಮುಗಿಸಿದ ಮೇಲೆ ಎಲೆಯನ್ನು ಆಕಾಶದಾಚೆಗೆ ಎತ್ತಿ ಹಿಡಿದಲ್ಲಿ ಹೊಸ ವಿನ್ಯಾಸವೊಂದು ಮೂಡಿ ಬರುತ್ತದೆ.
ಅದುವೇ ಲೀಫ್ ಆರ್ಟ್. ಇವುಗಳನ್ನು ಫ್ರೇಮ್ ಹಾಕಿ ಕೂಡ ಇಟ್ಟುಕೊಳ್ಳಬಹುದು.ಅನೇಕ ಸಮಾರಂಭಗಳಿಗೆ ಇದನ್ನು ಉಡುಗೊರೆಯಾಗಿಯೂ ಕೊಡಬಹುದು’ ಎನ್ನುತ್ತಾರೆ ಅಕ್ಷಯ. ಇವರ ಸಾಧನೆಯನ್ನು ಗುರುತಿಸಿ ವೀರಕೇಸರಿ ಬೆಳ್ತಂಗಡಿ ವತಿಯಿಂದ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗೌರವಿಸಲಾಗಿದೆ. ಅಶ್ವತ್ಥ ಎಲೆಗಳ ಮೇಲೆ ಇವರು ರಚಿಸಿದ ಚಿತ್ರಗಳನ್ನು ನೋಡಿದ ಮುಖ್ಯಮಂತ್ರಿಯವರು ಉನ್ನತ ಶಿಕ್ಷಣಕ್ಕೆ ಧನಸಹಾಯ ನೀಡುವುದಾಗಿ ಹೇಳಿದ್ದು, ಇವರ ಮುಂದಿನ ಕಲಾಭಿಯಾನಕ್ಕೆ ಪ್ರೋತ್ಸಾಹ ನೀಡಿದೆ.