ಸುರೇಶ ಗುದಗನವರ
ಸಾಧಿಸುವ ಛಲ, ಆಸಕ್ತಿ ಇದ್ದರೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮುಂದುವರಿಯಬಹುದು ಎಂಬುದಕ್ಕೆ ಈ ಕಲಾವಿದ ಸಾಕ್ಷಿ. ಆರೋಗ್ಯದ ಸಮಸ್ಯೆ ಇದ್ದರೂ, ಇವರ ಕುಂಚಗಳು ಚಿತ್ರಗಳನ್ನು ರಚಿಸುವಲ್ಲಿ ಹಿಂದೆ ಬಿದ್ದಿಲ್ಲ. ಇವರು ರೂಪಿಸಿದ ಚಿತ್ರಗಳು ಎಲ್ಲರಿಗೂ ಸೂರ್ತಿ ನೀಡುವಂತಹವು.
ಕಲಾಪ್ರತಿಭೆಯನ್ನು ಪೋಷಿಸಿ, ಅಧ್ಯಯನಕ್ಕೆ ಒಳಗುಪಡಿಸಿ, ಮುಂದುವರಿಸಿದರೆ ಸಾಧನೆ ಸಾಧ್ಯ ಎಂಬುದಕ್ಕೆ ಇವರೊಂದು ಉತ್ತಮ ಉದಾಹರಣೆ. ಪೋಲಿಯೋಕ್ಕೆ ಒಳಗಾಗಿ ಕೈಕಾಲುಗಳಲ್ಲಿ ಶಕ್ತಿ ಕುಂಠಿತವಾಗಿದ್ದರೂ ಪ್ರತಿಭೆ ಕುಂಠಿತವಾಗಿಲ್ಲ ಎನ್ನುವದಕ್ಕೆ ಕಿರಣ ಶೇರಖಾನೆ ಅವರು ಬಿಡಿಸಿದ ಕಲಾ ಕೃತಿಗಳೇ ಸಾಕ್ಷಿ. ಕಳೆದ ಹಲವು ವರ್ಷಗಳಿಂದ ನಡೆದಾಡಲು ಸಹ ಆಗದೆ ಇದ್ದರೂ ಒಬ್ಬರ ಸಹಾಯದ ಮೂಲಕ ಛಲ ಬಿಡದ ವಿಕ್ರಮನಂತೆ ಕಲಾ ಸಾಧನೆಯಲ್ಲಿ ತೊಡಗಿದ್ದಾರೆ.
ಮೂಲತಃ ಹುಬ್ಬಳ್ಳಿಯವರಾದ ಕಿರಣ ಸಾಮಾನ್ಯ ಕುಟುಂಬವೊಂದರಲ್ಲಿ 1999ರ ಎಪ್ರೀಲ್ 16ರಂದು ಜನಿಸಿದರು. ರೇಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಪ್ಪ ಬದುಕಿಗಾಗಿ ಬಡಗಿತನ ಕೆಲಸ ಮಾಡಿಕೊಂಡಿದ್ದರು. ಕಿರಣ ಮೂರು ವರ್ಷಗಳವರೆಗೆ ಆರೋಗ್ಯವಾಗಿಯೇ ಇದ್ದರು. ಆದರೆ ಆಗ ದುರ್ದೈವವ ಶಾತ್ ಪೋಲಿಯೋಗೆ ತುತ್ತಾದರು. ಕಿರಣ ಅವರ ಬಾಲ್ಯದ ಚಿತ್ರಣವೇ ಬದಲಾಯಿತು.
ಅವರ ಚಿಕ್ಕಪ್ಪ ರಮೇಶ ಚಿತ್ರ ಬಿಡಿಸುತ್ತಿದ್ದರು. ಅವರ ಚಿತ್ರಗಳನ್ನು ನೋಡುತ್ತಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ದಲ್ಲಿದ್ದಾಗ ಶಾಲೆಯಲ್ಲಿ ಜರುಗುತ್ತಿದ್ದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು ಕಿರಣ್. ಹೀಗಾಗಿ ಎಸ್.ಎಸ್.ಎಲ್.ಸಿ. ಮುಗಿದ ಬಳಿಕ ಕಿರಣ್ ಚಿತ್ರಕಲೆಯ ಅಧ್ಯಯನದಲ್ಲಿ ತೊಡಗಿ ಕೊಂಡರು. ಅವರು ಧಾರವಾಡದ ಸೃಜನಾ ಫೈನ್ ಆರ್ಟ್ ಕಾಲೇಜು ಸೇರಿ ಬಿ. ಎಫ್. ಎ. ಪದವಿಯನ್ನು ಗಳಿಸಿದರು. ನಂತರ ಧಾರವಾಡದಲ್ಲಿ ಎಫ್. ವಿ. ಚಿಕ್ಕಮಠ ಗುರುಗಳಲ್ಲಿ ಹತ್ತು ವರ್ಷಕ್ಕಿಂತಲೂ ಹೆಚ್ಚು ಕಾಲ ಕಲಿತರು. ಅವರು ಎಮ್. ಎಫ್. ಎ. ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ದಿಂದ ಪೂರ್ಣಗೊಳಿಸಿದ್ದಾರೆ.
ವಿವಿಧ ಮಾಧ್ಯಮಗಳಲ್ಲಿ ಪರಿಶ್ರಮ: 2015ರಿಂದ ಕಿರಣರವರ ಕಾಲುಗಳ ಶಕ್ತಿ ಸಹ ಕುಂಠಿತವಾಗಿ ಅವರಿಂದ ನಡೆದಾಡುಲು ಆಗುತ್ತಿಲ್ಲ. ಅವರ ಸಹೋದರ ರಾಹುಲ್ ಎಲ್ಲ ಸಂದರ್ಭಗಳಲ್ಲಿಯೂ ಸಹಾಯ ನೀಡುತ್ತಾರೆ. ಖ್ಯಾತ ಕಲಾವಿದರಾದ ಬಿ. ಕೆ. ಎಸ್. ವರ್ಮ, ಹುಸೇನ ಅವರ ಕಲಾಕೃತಿಗಳನ್ನು ಮೆಚ್ಚಿಕೊಳ್ಳುವ ಕಿರಣ ಜಲವರ್ಣ, ಆಕ್ರಾಲಿಕ್, ಪೆನ್ಸಿಲ್, ಇಂಕ್ ಮಾಧ್ಯಮದಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ.
ಜಲವರ್ಣದ ನಿಸರ್ಗ ಕಲಾಕೃತಿಗಳನ್ನು ಅವರು ಕುಂಚದ ಮೂಲಕ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಜಲವರ್ಣದ ನಿಸರ್ಗದ ಕಲಾಕೃತಿಗಳಲ್ಲಿ ಹಳ್ಳಿಯ ಪರಿಸರ, ರೈತರ ನಿತ್ಯದ ಬದುಕು, ಹಂಚಿನ ಸಾಲು ಸಾಲು ಮನೆಗಳು, ಕೆಂದುಗೆಂಪು ಮಣ್ಣಿನ ಹಾದಿ, ಹಾದಿ ಅಕ್ಕಪಕ್ಕದಲ್ಲಿ ಹಸಿರು ಮರಗಳ ಸಾಲು, ರೈತನೊಬ್ಬ ಎತ್ತುಗಳನ್ನು ಚಿಕ್ಕಡಿಗೆ ಹೂಡಿ ಒಣ ಭತ್ತದ ಹುಲ್ಲನ್ನು ಹೇರಿಕೊಂಡು ಬರುತ್ತಿರುವದು, ಹಳ್ಳಿಯ ವಾತಾವರಣದ ದೃಶ್ಯಗಳಲ್ಲಿ ಜನರು ಓಡಾಡುವ ದೃಶ್ಯ, ಮನೆಯ ಮುಂದೆ ಮಕ್ಕಳ ತುಂಟಾಟದ ದೃಶ್ಯ, ಸಹನಾಮೂರ್ತಿ ಬುದ್ಧನ ಚಿತ್ರ, ಸಮುದ್ರದ ಚಿತ್ರಣ ಸೇರಿದಂತೆ ಹಲವು ಚಿತ್ರಗಳನ್ನು ಕಲಾವಿದ ಕಿರಣ ಶೇರಖಾನೆ ಬಿಡಿಸಿದ್ದಾರೆ. ಉತ್ತರ ಕರ್ನಾಟಕದ ಗ್ರಾಮೀಣ ಸಂಸ್ಕೃತಿಯನ್ನು ಕಲೆಯ ಮೂಲಕ ಚಿತ್ರಿಸುವಲ್ಲಿ ಕಿರಣರವರು ಯಶಸ್ವಿಯಾಗಿದ್ದಾರೆ.
ಹಲವು ಕಡೆ ಚಿತ್ರಕಲಾ ಪ್ರದರ್ಶನ
ಅವರ ಚಿತ್ರಗಳು ಬೆಂಗಳೂರು, ಪುಣೆ, ಹೈದರಾಬಾದ್, ದಿಲ್ಲಿ, ಓಡಿಸ್ಸಾ, ರಾಜಸ್ತಾನ, ಮಧ್ಯಪ್ರದೇಶ ಮಾತ್ರ ವಲ್ಲ ದೂರದ ಸಿಡ್ನಿಯಲ್ಲಿಯೂ ಕಲಾರಸಿಕರ ಮನ ಗೆದ್ದಿವೆ. ಅವರು ಧಾರವಾಡ ಜಿಲ್ಲಾ ಉತ್ಸವ, ಡಾ. ಗಂಗೂಬಾಯಿ ಹಾನಗಲ್ ಮೂಜಿಕ್ ಫೌಂಡೇಶನ್ ಹೊಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ, ಬೆಂಗಳೂರಿನ ನ್ಯಾಶನಲ್ ನೇಚರ್ ಚಿತ್ರಕಲಾ ಪ್ರದರ್ಶನ, ದೆಹಲಿಯ ಲಲಿತಾ ಕಲಾ ಅಕಾಡೆಮಿಯ ಕಲಾಕೃತಿಗಳ ಪ್ರದರ್ಶನ, ಓಡಿಸ್ಸಾದ ಬುದ್ಧ ಆರ್ಟ್ ಗ್ಯಾಲರಿ, ಮುಂಬೈನ ಜೆಹಾಂಗಿರ್ ಆರ್ಟ್ ಗ್ಯಾಲರಿ ಹೀಗೆ ರಾಜ್ಯ, ಹೊರರಾಜ್ಯಗಳಲ್ಲಿ ಸಂಚರಿಸಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಅವರ ಈ ಕಲಾ ಸಾಧನೆಗೆ ಹಲವು ಪ್ರಶಸ್ತಿ-ಪುರಸ್ಕಾರಗಳು ಒಲಿದು ಬಂದಿವೆ.
ಚಿಣ್ಣರ ಚೇತನ, ಜಿಲ್ಲಾಡಳಿತ ಗಣರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನ ಪಿ. ಆರ್. ತಿಪ್ಪೇಸ್ವಾಮಿ ಕಲಾ ಪ್ರದರ್ಶನ ಪ್ರಶಸ್ತಿ, ಕರ್ನಾಟಕ ಲಲಿತಾ ಕಲಾ
ಅಕಾಡೆಮಿಯ 2020ನೆಯ ಸಾಲಿನ ಪ್ರಶಸ್ತಿ ಮುಂತಾದ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಡೆದಾಡಲು ಸಹ ಆಗದೆ ಇದ್ದರೂ, ಕಲಾ ಸಾಧನೆಯನ್ನು ಮುಂದುವರಿಸಿ, ಉತ್ತಮ ಚಿತ್ರಗಳನ್ನು ರಚಿಸುವಲ್ಲಿ ಕಿರಣ ಶೇರಖಾನೆಯವರು ತೋರಿಸುತ್ತಿರುವ ಆಸಕ್ತಿ ಅಭಿನಂದನಾರ್ಹ. ಅವರ ಕಾಲುಗಳಲ್ಲಿದ್ದ ಶಕ್ತಿಯನ್ನು ಪೋಲಿಯೋ ಕಸಿದುಕೊಂಡಿದೆ. ಕಿರಣ ಅವರ ಪಾಲಿಗೀಗ ಬಣ್ಣಗಳೇ ಊರುಗೋಲು ಗಳಾಗಿವೆ.
ನೆಚ್ಚಿನ ಜಲವರ್ಣ
ಕಲಾವಿದ ಕಿರಣ ಶೇರಖಾನೆಯವರಿಗೆ ಜಲವರ್ಣದಲ್ಲಿ ಚಿತ್ರ ರಚಿಸುವುದೆಂದರೆ ಇಷ್ಟ. ಜತೆಗೆ ಉತ್ತರ ಕರ್ನಾಟಕದ ಗ್ರಾಮೀಣ ದೃಶ್ಯಗಳನ್ನು ಚಿತ್ರದ ಚೌಕಟ್ಟಿ ನೊಳಗೆ ಅಳವಡಿ ಸುವಲ್ಲಿ ಇವರು ವಿಶೇಷ ಕೌಶಲ್ಯ ತೋರಿದ್ದಾರೆ. ರೈತ ಮತ್ತು ಎತ್ತುಗಳು, ಮರಗಿಡಗಳ ನೆರಳಿನಲ್ಲಿ ಸಾಲಾಗಿ ನಿರ್ಮಾಣ ಗೊಂಡಿರುವ
ಹಳ್ಳಿಯ ಮನೆಗಳ ದೃಶ್ಯ, ಮಕ್ಕಳ ಆಟೋಟ ದೃಶ್ಯ ಇವೆಲ್ಲವುಗಳಲ್ಲೂ ಇವರು ಗ್ರಾಮೀನ ಬದುಕನ್ನು ಸುಂದರ ಚಿತ್ರಗಳಲ್ಲಿ ಅಳವಡಿಸಿರುವ ಪರಿ ಗಮನ ಸೆಳೆಯುತ್ತದೆ.