Saturday, 14th December 2024

ಗಲ್ಲುಶಿಕ್ಷೆಗೆ ಗುರಿಯಾದ ಹದಿನೆಂಟರ ತರುಣ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಕೇವಲ 18 ವರ್ಷದ ಒಬ್ಬ ಯುವಕನನ್ನು  ಬ್ರಿಟಿಷರು ಗಲ್ಲಿಗೇರಿಸಿದ ಪ್ರಕರಣ ನಿಮಗೆ ಗೊತ್ತಾ? ಆ ಯುವಕನೇ ಖುದಿರಾಮ್ ಬೋಸ್. ಬ್ರಿಟಿಷರ ದಬ್ಬಾಳಿಕೆ ಯನ್ನು, ಆಡಳಿತವನ್ನು ವಿರೋಧಿಸಲು, ಅನುಶೀಲನ ಸಮಿತಿಯು ನಡೆಸುತ್ತಿದ್ದ ಸರಣಿ ಹೋರಾಟದ ಭಾಗವಾಗಿ, ಬ್ರಿಟಿಷ್ ನ್ಯಾಯಾಧೀಶನನ್ನು ಬಾಂಬ್ ಇಟ್ಟು ಸಾಯಿಸಲು ಖುದಿರಾಮ್ ಬೋಸ್ ಪ್ರಯತ್ನ ನಡೆಸಿದ್ದ.

ಆದರೆ, ಬಾಂಬ್ ಎಸೆದಾಗ, ಅದು ಪಕ್ಕದ ಸಾರೋಟಿನೊಳಗೆ ಬಿದ್ದದ್ದರಿಂದ, ನ್ಯಾಯಾಧೀಶ ಸಾಯುವ ಬದಲು, ಇಬ್ಬರು ಬ್ರಿಟಿಷ್ ಮಹಿಳೆಯರು ಸತ್ತರು. ಹಾಲುಗಲ್ಲದ ತರುಣ ಖುದಿರಾಮ್ ಬೋಸ್ ನನ್ನು ಬೆಂಬತ್ತಿ ಹಿಡಿದ ಬ್ರಿಟಿಷರು, ಆತನನ್ನು ವಿಚಾರಣೆಗೆ ಒಳಪಡಿಸಿ, ಗಲ್ಲುಶಿಕ್ಷೆಗೆ ಗುರಿಪಡಿಸಿದರು. ಆಗ ಆ ಯುವಕನ ವಯಸ್ಸು 18 ವರ್ಷ, ಎಂಟು ತಿಂಗಳು, 11 ದಿವಸ! ಈ ಘಟನೆ ನಡೆದದ್ದು 1908ರಲ್ಲಿ. ಇನ್ನೂ ವಿಶೇಷವೆಂದರೆ, ಎಪ್ರಿಲ್ 1908ರಲ್ಲಿ ಖುದಿ ರಾಮ್ ಬೋಸ್ ಬಾಂಬ್ ಎಸೆದದ್ದು. ಅದಾಗಿ ಕೇವಲ ನಾಲ್ಕೇ ತಿಂಗಳಿನಲ್ಲಿ ಬ್ರಿಟಿಷ್ ನ್ಯಾಯವ್ಯವಸ್ಥೆಯು ಆತನ ವಿಚಾರಣೆ ನಡೆಸಿ, ಶರವೇಗದಲ್ಲಿ ’ನ್ಯಾಯ ದಾನ’ ಮಾಡಿ, 11 ಆಗಸ್ಟ್ 1908 ರಂದು ಆತನನ್ನು ಗಲ್ಲಿಗೇರಿಸಿತು!

ದಕ್ಷಿಣ ಭಾರತದಲ್ಲಿರುವ ನಮಗೆ ಬ್ರಿಟಿಷರ ವಿರುದ್ಧ ನಡೆದ ಹೋರಾಟದ ವಿವರಗಳು, ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ನಡೆದ ಕ್ಷೋಭೆಗಳು, ತಲ್ಲಣಗಳು ಹೆಚ್ಚು ಪರಿಚಯವಿಲ್ಲ ಎಂಬ ಒಂದು ವ್ಯಂಗ್ಯವಾದ ಮಾತಿದೆ. ಅದರಲ್ಲಿ ಸತ್ಯಾಂಶವಿಲ್ಲದೇ ಇಲ್ಲ. ನಮ್ಮ ರಾಜ್ಯದ ಜನರಿಗೆ, ವಿದ್ಯಾರ್ಥಿ ಗಳಿಗೆ 1900-1915ರ ನಡುವೆ ಬ್ರಿಟಿಷರ ವಿರುದ್ಧ ಬಂಗಾಳದ ಜನರು ನಡೆಸಿದ ಹೋರಾಟದ ವಿವರಗಳ ವ್ಯಾಪಕ ಪರಿಚಯವಿಲ್ಲ ಎಂಬುದು ಸಹ ಅಷ್ಟೇ ಸತ್ಯ. ಬ್ರಿಟಿಷರು ಕೊಲ್ಕೊತ್ತಾವನ್ನು ರಾಜಧಾನಿಯನ್ನಾಗಿಸಿಕೊಂಡು, ತಮ್ಮ ನಿಯಂತ್ರಣಕ್ಕೆ ಒಳಪಟ್ಟ ಪ್ರಾಂತ್ಯಗಳಲ್ಲಿ ಹಲವು ’ಕಲೆಕ್ಟರ್‌’ಗಳನ್ನು ನೇಮಿಸಿ ಕೊಂಡು, ಹಣ ಸಂಗ್ರಹಿಸಿ, ನಿರಂತರವಾಗಿ ತಮ್ಮ ದೇಶಕ್ಕೆ ಸಾಗಿಸುವುದನ್ನು ಕಂಡು, ಬಂಗಾಳದ ಹೋರಾಟಗಾರರು ಸುಮ್ಮನೆ ಕುಳಿತಿರಲಿಲ್ಲ.

ಅರಬಿಂದೋ ಅವರೂ ಸೇರಿದಂತೆ, ಹಲವು ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧ ಸಶಸ ಹೋರಾಟಕ್ಕೆ ಇಳಿದರು. ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದ,
ಭಾರತೀಯ ಸಿವಿಲ್ ಸರ್ವಿಸ್‌ನಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕಿದ್ದ ಅರಬಿಂದೋ ಘೋಷ್‌ರಂತಹ ಯುವಕರು, ಬ್ರಿಟಿಷರ ವಿರುದ್ಧ ಅಂದು ರಹಸ್ಯ ಕಾರ್ಯಾಚರಣೆಯನ್ನು ಕೈಗೊಂಡ ವಿಚಾರವೇ ಅಭೂತಪೂರ್ವ ಎನಿಸುತ್ತದೆ. ಬ್ರಿಟಿಷರು ದಬ್ಬಾಳಿಕೆಯ ಆಡಳಿತ ನಡೆಸುತ್ತಿರುವ ಸಮಯದಲ್ಲೇ, ತಮ್ಮ ’ಕಲೆಕ್ಷನ್‌’ ಗೆ ತೊಂದರೆ ಉಂಟಾದಾಗಲೆಲ್ಲಾ, ಎಂತಹದೇ ಕುತಂತ್ರಗಳನ್ನೂ ನಡೆಸಲೂ ಹೇಸುತ್ತಿರಲಿಲ್ಲ.

1900ರ ದಶಕದಲ್ಲಿ ಬಂಗಾಳ ಪ್ರಾಂತ್ಯದಲ್ಲಿ ತಮಗೆ ಸವಾಲೆಸೆಯುವಂತೆ ಕ್ರಾಂತಿಕಾರಿಗಳು ಹೋರಾಟವನ್ನು ಆರಂಭಿಸಿದ್ದನ್ನು ಕಂಡು, ಬಂಗಾಳವನ್ನೇ ಎರಡು ಭಾಗವನ್ನಾಗಿಸಿದರು! ತಮ್ಮ ನಾಡು ಎರಡು ಭಾಗವಾಗಿದ್ದನ್ನು ಸಹಿಸದ ಬಂಗಾಳಿಗಳು ಅದರ ವಿರುದ್ಧವೂ ಹೋರಾಟ ನಡೆಸಿ, ತಾತ್ಕಾಲಿಕವಾಗಿ ಆ ವಿಭಜನೆ ಯನ್ನು ತಡೆದರು. ಬ್ರಿಟಿಷರ ಈ ಕುತಂತ್ರವು, 1947ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ಪುನಃ ಬಂಗಾಳದ ವಿಭಜನೆಗೆ ಕಾರಣವಾದದ್ದು, ಆ ಮೂಲಕ ಭಾರತದ ಒಂದು ಭಾಗವು ಇನ್ನೊಂದು ದೇಶವಾಗಿ ರೂಪುಗೊಳ್ಳುವಂತಾಗಿದ್ದು ಇಂದು ಇತಿಹಾಸದ ಭಾಗವಾಗಿಹೋಗಿಬಿಟ್ಟಿದೆ.

ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಿದ್ದ ಕ್ರಾಂತಿಕಾರಿಗಳನ್ನು ಹಿಡಿದು ಶಿಕ್ಷೆಗೆ ಗುರಿಪಡಿಸುವಲ್ಲಿ ಅಂದಿನ ಅಧಿಕಾರಶಾಹಿ ಸ್ವಲ್ಪವೂ ಕರುಣೆ, ಕನಿಕರ ತೋರು ತ್ತಿರಲಿಲ್ಲ. ಅಂತಹ ವಿಚಾರಣೆಗಳ ಸಮಯದಲ್ಲಿ, ಸಣ್ಣ ಪುಟ್ಟ ಹೋರಾಟಗಾರರನ್ನೂ ತೀವ್ರ ಶಿಕ್ಷೆಗೆ ಗುರಿಪಡಿಸುತ್ತಿದ್ದ ನ್ಯಾಯಾಧೀಶರಲ್ಲಿ ಕಿಂಗ್ಸ್ ಫೋರ್ಡ್ ಎಂಬಾತ ಕುಖ್ಯಾತ ಎನಿಸಿದ್ದ. ಈತನನ್ನು ಮುಗಿಸಬೇಕು ಎಂದು ಬಂಗಾಲಿ ಹೋರಾಟಗಾರರು ನಿರ್ಧರಿಸಿದರು. ಮುಂದೆ ಅಧ್ಯಾತ್ಮ ಸಾಧನೆಯಲ್ಲಿ ಹೆಸರು ಮಾಡಿದ ಅರಬಿಂದೋ ಘೋಷ್ ಸಹ ನೇತೃತ್ವವಹಿಸಿದ್ದ ಅನುಶೀಲನ ಸಮಿತಿಯು ಇದರ ಮುಂದಾಳತ್ವ ವಹಿಸಿತು.

1902ರಲ್ಲಿ ಸ್ಥಾಪನೆಗೊಂಡಿದ್ದ, ಬ್ರಿಟಿಷರ ವಿರುದ್ಧ ರಹಸ್ಯ ಕಾರ್ಯಾಚರಣೆಯೇ ಮುಖ್ಯ ಉದ್ದೇಶ ಎನಿಸಿದ್ದ ಅನುಶೀಲನ ಸಮಿತಿಯು ಅದಕ್ಕೆ ಮುಂಚೆ ಮತ್ತು ನಂತರವೂ, ಇಂತಹ ಸಾಕಷ್ಟು ಸಶಸ್ತ್ರ ಕಾರ್ಯಾಚರಣೆಗಳನ್ನು ನಡೆಸಿತ್ತು. 1908ರಲ್ಲಿ ನ್ಯಾಯಾಧೀಶ ಕಿಂಗ್ಸ್ಫಫೋರ್ಡ್‌ನನ್ನು ಮುಗಿಸಲು ಯೋಜಿಸಿದ ಕಾರ್ಯಾ ಚರಣೆಯನ್ನು ಜಾರಿಗೊಳಿಸಲು ಆಯ್ಕೆಯಾದ ಯುವಕರೇ ಖುದಿರಾಮ್‌ ಬೋಸ್ ಮತ್ತು ಪ್ರಫುಲ್ಲ ಚಾಕಿ ಎಂಬ ಯುವಕರು. ನ್ಯಾಯಾಧೀಶ ಡಗ್ಲಾಸ್ ಕಿಂಗ್ಸ್ ಫೋರ್ಡ್‌ನು ಮುಜಫರ್‌ಪುರದಲ್ಲಿ ಪ್ರತಿದಿನ ಇಸ್ಪೀಟು ಆಡಲು ಬರುತ್ತಿದ್ದ ಜಾಗವನ್ನು ಈ ಯುವಕರು ಹುಡುಕಿದರು.

ಆತ ಇಸ್ಪೀಟು ಆಡಿ ವಾಪಸಾಗುವ ಸಮಯದಲ್ಲಿ ಆತನ ಸಾರೋಟಿನ ಮೇಲೆ ಬಾಂಬ್ ಎಸೆಯುವುದು ಎಂದು ನಿರ್ಧರಿಸಿ, ಹೇಮಚಂದ್ರ ಎಂಬಾತನು ಬಾಂಬ್ ತಯಾರಿಸಿ, ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿಗೆ ನೀಡಿದ. ಈ ಇಬ್ಬರು ಯುವಕರು ಮಾರುವೇಷದಲ್ಲಿ, ಹರೇನ್ ಸರ್ಕಾರ್ ಮತ್ತು ದಿನೇಶ್ ಚಂದ್ರ ರಾಯ್ ಎಂಬ ಹೆಸರಿನಿಂದ ಮುಜಫರ್ ಪುರದ ಧರ್ಮಶಾಲೆಯಲ್ಲಿ ತಂಗಿದರು. ಮೂರು ವಾರಗಳ ತನಕ ಇವರಿಬ್ಬರೂ ತಮ್ಮ ಗುರಿ ಎನಿಸಿದ ಆ ಬಿಳಿಯ ನ್ಯಾಯಾಧೀಶನ ಚಲನವಲನವನ್ನು ಗಮನಿಸುತ್ತಾ ಹೋದರು.

29 ಎಪ್ರಿಲ್ 1908ರಂದು, ರಾತ್ರಿ 8.30ರ ಸಮಯಕ್ಕೆ ಆ ನ್ಯಾಯಾಧೀಶನು ಅಲ್ಲಿನ ಯುರೋಪಿಯನ್ ಕ್ಲಬ್‌ನಲ್ಲಿ ಇಸ್ಪೀಟು ಆಟ ಮುಗಿಸಿ, ಮನೆಯತ್ತ ಹೊರಟ. ಆತನ ಜತೆ ಆತನ ಹೆಂಡತಿಯೂ ಇದ್ದಳು. ಜತೆಯಲ್ಲೇ ಪ್ರಿಂಗಲ್ ಕೆನಡಿ ಎಂಬ ಬ್ರಿಟಿಷ್ ಬ್ಯಾರಿಸ್ಟರ್‌ನ ಕುಟುಂಬವೂ ಇಸ್ಪೀಟು ಆಡಲು ಬಂದು, ಹಿಂತಿರುಗುತ್ತಿತ್ತು. ಯುರೋಪಿಯನ್ ಕ್ಲಬ್‌ನ ಪೂರ್ವಗೇಟ್‌ನ ಬಳಿ ಅವರ ಸಾರೋಟು ಬರುತ್ತಿದ್ದಂತೆ, ಖುದಿರಾಮ್ ಬೋಸ್ ಮತ್ತು ಪ್ರಫುಲ್ ಚಾಕಿ ಇಬ್ಬರೂ ಓಡುತ್ತಾ ಹೋಗಿ, ಬಾಂಬ್ ಎಸೆದರು. ಆದರೆ ನ್ಯಾಯಾಧೀಶ ಕಿಂಗ್ಸ್ ಫೋರ್ಡ್ ಕುಳಿತಿದ್ದ ಸಾರೋಟಿನ ಮೇಲೆ ಬೀಳಬೇಕಾಗಿದ್ದ ಬಾಂಬ್, ಪಕ್ಕದ ಸಾರೋಟಿನ ಮೇಲೆ ಬಿದ್ದು ಸಿಡಿದದ್ದರಿಂದ ಪ್ರಿಂಗಲ್ ಕೆನಸಿಯ ಹೆಂಡತಿ ಮತ್ತು ಮಗಳು ಬಲಿಪಶುವಾದರು.

ಇಬ್ಬರೂ ಇಹಲೋಕ ತ್ಯಜಿಸಿದರು. ಬಾಂಬ್ ಎಸೆದು ಅಲ್ಲಿಂದ ತಪ್ಪಿಸಿಕೊಂಡ ಆ ಇಬ್ಬರು ಯುವಕರು ಕತ್ತಲಿನಲ್ಲಿ ಬೇರೆ ಬೇರೆ ದಿಕ್ಕಿಗೆ ಚಲಿಸಿದರು. ರಾತ್ರಿ ಇಡೀ ನಡೆದು ಸಾಗಿದ ಖುದಿರಾಮ್ ಬೋಸ್, ಬೆಳಗಿನ ಹೊತ್ತಿಗೆ 25 ಕಿಮೀ ದೂರ ವೈನಿ ರೈಲ್ವೆ ಸ್ಟೇಷನ್ ತಲುಪಿದನು. ಅಲ್ಲಿನ ಟೀ ಸ್ಟಾಲ್‌ನಲ್ಲಿ ಆತ ನೀರು ಕುಡಿಯು ತ್ತಿದ್ದಾಗ, ಫತೇಹ್ ಸಿಂಗ್ ಮತ್ತು ಶಿವ ಪ್ರಸಾದ್ ಸಿಂಗ್ ಎಂಬ ಇಬ್ಬರು ಪೊಲೀಸರು ಅನುಮಾನದಿಂದ ಆತನನ್ನು ಬಂಧಿಸಿದರು. ಖುದಿರಾಮ್ ಬಳಿ ಒಂದು ಪಿಸ್ತೂಲು ಸಹ ಇತ್ತು!

ಅಲ್ಲಿಗೆ ಮಾಲು ಸಹಿತ ಸಿಕ್ಕಿಬಿದ್ದ ಕ್ರಾಂತಿಕಾರಿ ಎನಿಸಿದ ಖುದಿರಾಮ್ ಬೋಸ್, ಬ್ರಿಟಿಷರ ಕುಖ್ಯಾತ ’ನ್ಯಾಯವ್ಯವಸ್ಥೆ’ಯ ಚಕ್ರವ್ಯೂಹಕ್ಕೆ ಸಿಲುಕಿಬಿದ್ದ. ತ್ವರಿತವಾಗಿ ವಿಚಾರಣೆ ನಡೆದು, ನಾಲ್ಕೇ ತಿಂಗಳ ಅವಧಿಯಲ್ಲಿ ಆತನಿಗೆ ಗಲ್ಲುಶಿಕ್ಷೆ ವಿಧಿಸಿದ ಸರಕಾರ, 11 ಆಗಸ್ಟ್ 1908ರಂದು ಈ ಯುವ ಹೋರಾಟಗಾರ ನನ್ನು ಹತ್ಯೆ ಮಾಡಿತು. ಖುದಿರಾಮ್ ಬೋಸ್ ಸಿಕ್ಕಿಬಿದ್ದ ರೈಲ್ವೆ ನಿಲ್ದಾಣವನ್ನು ಇಂದು ’ಖುದಿರಾಮ್ ಬೋಸ್ ಪುಸಾಸ್ಟೇಷನ್‌’ ಎಂದು ಹೆಸರಿಸುವ ಮೂಲಕ, ತಕ್ಕ ಮಟ್ಟಿಗಿನ ಗೌರವ ಸೂಚಿಸಲಾಗಿದೆ.

ಈತನ ಜತೆಗಾರ ಪ್ರಫುಲ್ ಚಾಕಿ ಬೇರೊಂದು ದಿಕ್ಕಿನಲ್ಲಿ ಚಲಿಸಿದ. ಬೇರೆ ಹೋರಾಟಗಾರರ ಸಹಾಯದಿಂದ ಕೊಲ್ಕೊತ್ತಾ ತಲುಪಿ, ಅಲ್ಲಿಂದ ಇನ್ನೊಂದು ರೈಲಿ ನಲ್ಲಿ ಹೌರಾಕ್ಕೆ ಹೊರಟ. ಆದರೆ, ಆ ರೈಲಿನಲ್ಲಿದ್ದ ನಂದಲಾಲ್ ಬ್ಯಾನರ್ಜಿ ಎಂಬ ಪೊಲೀಸನು ಈತನನ್ನು ಗುರುತಿಸಿ, ಮುಜಫರ್‌ಪುರ್ ಪೊಲೀಸರಿಗೆ ತಂತಿಯ ಮೂಲಕ ಸುದ್ದಿ ಮುಟ್ಟಿಸಿದ. ಮೊಕಮಾಘಾಟ್ ರೈಲ್ವೆಸ್ಟೇಷನ್‌ನಲ್ಲಿ ಪೊಲೀಸರು ಈತನನ್ನು ಬಂಧಿಸಲು ಬಂದಾಗ, ಪ್ರಫುಲ್ಲನು ತನ್ನಲ್ಲಿದ್ದ ಪಿಸ್ತೂಲಿನಿಂದ ದಾಳಿ ನಡೆಸಿದ; ನಂತರ ಅದೇ ಪಿಸ್ತೂಲಿನ ಕೊನೆಯ ಗುಂಡನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡ ಎಂದು ದಾಖಲಾಗಿದೆ.

ಕೇವಲ ಹದಿನೆಂಟನೆಯ ವಯಸ್ಸಿನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಖುದಿರಾಮ್ ಬೋಸನು, ಆ ರೀತಿ ಬಲಿದಾನ ಮಾಡಿದ ಮೊದಲ ಸ್ವಾತಂತ್ರ್ಯ ಹೋರಾಟ ಗಾರರಲ್ಲಿ ಒಬ್ಬನಾಗಿದ್ದಾನೆ. ಈ ಘಟನೆ ನಡೆಯುವಾಗ ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದರು. ಬಂಗಾಳದಲ್ಲಿ ಮತ್ತು ಪಂಜಾಬ್ ನಲ್ಲಿ ಬ್ರಿಟಿಷರ ವಿರುದ್ಧ ಇಂತಹ ಹಲವು ಕಾರ್ಯಾಚರಣೆಗಳನ್ನು ಕ್ರಾಂತಿಕಾರಿಗಳು ಆಗಾಗ ನಡೆಸುತ್ತಾ ಇದ್ದರು. ಬ್ರಿಟಿಷರ ವಿರುದ್ಧ ಈ ರೀತಿಯ ಹಿಂಸೆ ಮತ್ತು ಸಶಸ್ತ್ರ ಹೋರಾಟ ಸರಿಯಲ್ಲ ಎಂಬುದೇ ಮಹಾತ್ಮಾ ಗಾಂಧಿಯವರ ಅಭಿಮತವಾಗಿತ್ತು ಮತ್ತು ಅದನ್ನು ಅವರು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ.

ಖುದಿರಾಮ್ ಬೋಸ್ ಎಸೆದ ಬಾಂಬ್‌ನಿಂದಾಗಿ ಇಬ್ಬರು ಯುರೋಪಿಯನ್ ಮಹಿಳೆಯರು ಸತ್ತ ವಿಚಾರವು, ಅಂದಿನ ಬ್ರಿಟಿಷ್ ಆಡಳಿತಕ್ಕೆ ಎಸೆದ ಒಂದು
ಸವಾಲು ಎನಿಸಿತ್ತು. ಆ ವಸಾಹತುಶಾಹಿ ಆಡಳಿತವು ಸುಮ್ಮನೆ ಕೂರಲಿಲ್ಲ. ಇದನ್ನೇ ನೆಪ ಮಾಡಿಕೊಂಡು, ಖುದಿರಾಮ್ ಬೋಸ್ ಜತೆಯಲ್ಲೇ ಅನುಶೀಲನ
ಸಮಿತಿಯ 38ಕ್ಕೂ ಹೆಚ್ಚಿನ ಹೋರಾಟಗಾರರನ್ನು ಸರಕಾರವು ಬಂಧಿಸಿತು. ಬ್ರಿಟಿಷರ ಮುಖ್ಯ ಗುರಿ ಎಂದರೆ, ಅನುಶೀಲನ ಸಮಿಯನ್ನು ಹುಟ್ಟುಹಾಕುವಲ್ಲಿ
ಪ್ರಮುಖ ಪಾತ್ರ ವಹಿಸಿದ್ದ ಅರಬಿಂದೋ ಘೋಷ್ ಮತ್ತು ಅವರ ಸಹೋದರ ಬರಿಂದ್ರ ಕುಮಾರ್ ಘೋಷ್.

1907ರಲ್ಲಿ ಸರ್ ಆಂಡ್ರ್ಯೂ ಫೇಸರ್ ಎಂಬ ಲೆಫ್ಟಿನೆಂಟ್ ಗವರ್ನರ್ ಚಲಿಸುತ್ತಿದ್ದ ರೈಲನ್ನು ಬೀಳಿಸುವ ಪ್ರಕರಣ ಮತ್ತು ಇಂತಹ ಇತರ ಕೆಲವು ಪ್ರಕರಣಗಳನ್ನು
ಸಹ ಇದಕ್ಕೆ ತಳುಕು ಹಾಕಲಾಯಿತು. ಬಂಧಿಸಿದವರೆಲ್ಲರನ್ನೂ ಅಲಿಪುರ ಜೈಲಿನಲ್ಲಿಟ್ಟಿದ್ದರಿಂದ, ಈ ಪ್ರಕರಣವನ್ನು ಅಲಿಪುರ ಬಾಂಬ್ ಪ್ರಕರಣ ಎಂದೂ ಕರೆಯ ಲಾಗಿದೆ. ಏನಾದರೂ ಮಾಡಿ ಅರವಿಂದರು ಮತ್ತು ಆತನ ಸಹೋದರನನ್ನು ಮುಗಿಸಬೇಕು ಎಂದು ಬ್ರಿಟಿಷ್ ಸರಕಾರ ಯೋಚಿಸಿತು. ಅದಕ್ಕಾಗಿ, ತಾನೇ
ರೂಪಿಸಿದ ನ್ಯಾಯಾಲಯ ಮತ್ತು ಕಾನೂನುಗಳನ್ನು ಸಾಕಷ್ಟು ಧಾರಾಳವಾಗಿ ಬಳಸಿಕೊಂಡಿತು. ಈ ಪ್ರಕರಣದಲ್ಲಿ ಅರಬಿಂದರನ್ನು ಆಳವಾಗಿ ಸಿಕ್ಕಿ ಹಾಕಲೆಂದು, ಬ್ರಿಟಿಷ್ ಪೊಲೀಸರು ಒಬ್ಬ ಅಪ್ರೂವರ್ ಸಾಕ್ಷಿಯನ್ನು ತಯಾರುಮಾಡಿದ್ದರು.

ಆತನ ಹೆಸರು ನರೇಂದ್ರನಾಥ ಗೋಸ್ವಾಮಿ. ಆತನ ಬಾಯಿಯಿಂದ ನ್ಯಾಯಾಲಯದಲ್ಲಿ ಹೇಳಿಸುವ ಹೇಳಿಕೆಗಳನ್ನು ಆಧರಿಸಿಕೊಂಡು, ಯಾರನ್ನು ಬೇಕೋ ಅವರನ್ನು ಗಲ್ಲುಶಿಕ್ಷೆಗೋ ಅಥವಾ ಕರಿನೀರಿನ ಶಿಕ್ಷೆಗೋ ಗುರಿಪಡಿಸುವ ಇರಾದೆ ಬ್ರಿಟಿಷರದ್ದು. ಇಂತಹ ಹಲವು ಹೀನ ಕೆಲಸಗಳನ್ನು ಅವರು ಅದಾಗಲೇ ತಮ್ಮ
ಱನ್ಯಾಯವ್ಯವಸ್ಥೆೞ ಮೂಲಕ ಮಾಡಿದ್ದರು ತಾನೆ! ಆದರೆ, ಬಂಧನದಲ್ಲಿದ್ದ ಕ್ರಾಂತಿಕಾರಿಗಳಿಗೆ ಈ ಅಪ್ರೂವರ್ ಆಗಿದ್ದ ನರೇಂದ್ರನಾಥ ಗೋಸ್ವಾಮಿ ಮಾಡ ಬಹುದಾದ ಹೇಸಿಗೆ ತಿನ್ನುವ ಕೆಲಸದ ಸುಳಿವು ಸಿಕ್ಕಿಬಿಟ್ಟಿತ್ತು. ಅದು ಹೇಗೋ ಪಿಸ್ತೂಲನ್ನು ಸಂಪಾದಿಸಿದ ಕುನೈಲಾಲ್ ದತ್ತಾ ಮತ್ತು ಸತ್ಯೇಂದ್ರನಾಥ ಬೋಸ್ ಎಂಬ ಇನ್ನಿಬ್ಬರು ಆಪಾದಿತರು, ಆ ಅಪ್ರೂವರ್ ಸಾಕ್ಷಿದಾರನನ್ನು ಗುಂಡಿಟ್ಟು ಜೈಲಿನಲ್ಲೇ ಸಾಯಿಸಿಬಿಟ್ಟರು!

ಅಲ್ಲಿಗೆ ಅರವಿಂದರನ್ನು ಫಾಸಿ ಶಿಕ್ಷೆಗೆ ದೂಡಬೇಕೆಂದು ಬ್ರಿಟಿಷರೇನಾದರೂ ಯೋಚಿಸಿದ್ದರೆ, ಅಂತಹ ಯೋಜನೆ ತಲೆಕೆಳಗಾಯಿತು. ಖುದಿರಾಮ್ ಬೋಸ್ ಎಸೆದ ಬಾಂಬ್ ಪ್ರಕರಣದಲ್ಲಿ ಆಪಾದಿತರಾಗಿದ್ದ ಅರವಿಂದರು ಶಿಕ್ಷೆ ಇಲ್ಲದೇ ಬಿಡುಗಡೆಯಾದರು. ಆ ನಂತರ ಅವರು ಪಾಂಡಿಚೆರಿಗೆ ಬಂದು, ಧ್ಯಾನ, ಯೋಗ ಮತ್ತು ಪ್ರವಚನದಲ್ಲಿ ತೊಡಗಿಸಿಕೊಂಡರು. ಆದರೆ, ಅರವಿಂದರ ಸಹೋದರ ಬರೀಂದ್ರ ಕುಮಾರ್ ಘೋಷ್ ಅದೃಷ್ಟ ಅಷ್ಟು ಚೆನ್ನಾಗಿರಲಿಲ್ಲ. ಅಂತಿಮ ತೀರ್ಪಿನಲ್ಲಿ ಅವರಿಗೆ ಮತ್ತು ಉಲ್ಲಾಸ್ಕರ್ ದತ್ತಾ ಎಂಬಾತನಿಗೆ ಗಲ್ಲು ಶಿಕ್ಷೆ ವಿಽಸಲಾಗಿತ್ತು. ಆದರೆ ನಂತರ ಅಪೀಲು ಮಾಡಿಕೊಂಡಾಗ, ಬರೀಂದ್ರ ಕುಮಾರ್ ಘೋಷ್ ಅವರ ಗಲ್ಲು ಶಿಕ್ಷೆಯನ್ನು, ಆಜೀವ ಕರಿನೀರಿನ ಶಿಕ್ಷೆಗೆ ಬದಲಾಯಿಸಲಾಯಿತು.

ಶಿಕ್ಷೆಗೆ ಒಳಪಟ್ಟ ಇತರರೊಡನೆ, ಇವರನ್ನು ಅಂಡಮಾನಿನ ಜೈಲಿಗೆ ಬ್ರಿಟಿಷರು ಸಾಗಿಸಿ, ಅಲ್ಲೇ 12 ವರ್ಷ ಕೊಳೆಹಾಕಿದರು. ಖುದಿರಾಮ್ ಬೋಸ್‌ನನ್ನು ಸ್ವಾತಂತ್ರ್ಯ ಹೋರಾಟಕ್ಕೆ ಎಳೆದು ತಂದ, ಆ ಮೂಲಕ ಆತನ ಬಲಿದಾನಕ್ಕೆ ಕಾರಣೀಕರ್ತವಾದ ಅನುಶೀಲನ ಸಮಿತಿಯ ಹೋರಾಟ ಸುಮಾರು 1930ರ ತನಕವೂ ಮುಂದುವರಿಯಿತು. ಕುತಂತ್ರಿ ಬ್ರಿಟಿಷರು, ಬಂಗಾಳಿಗಳ ಹೋರಾಟವನ್ನು ತಣ್ಣಗಾಗಿಸಲು, 1911ರಲ್ಲಿ ರಾಜಧಾನಿಯನ್ನು ಕೊಲ್ಕೊತ್ತಾದಿಂದ ದೆಹಲಿಗೆ ಸ್ಥಳಾಂತರಿಸುವ ನಿರ್ಧಾರ ಮಾಡಿದರು. ಆಪ್ರಯುಕ್ತ ಏರ್ಪಡಿಸಿದ್ದ ಸಮಾರಂಭ ಮತ್ತು ಅಂದಿನ ವೈಸ್‌ರಾಯ್ ಮೆರವಣಿಗೆಯ ಮೇಲೆ ಅನುಶೀಲನ ಸಮಿತಿಯ ರಾಶ್ ಬಿಹಾರಿ ಬೋಸ್ ನೇತೃತ್ವದಲ್ಲಿ ಬಾಂಬ್ ಎಸೆಯಲಾಯಿತು. ಇದು ನಡೆದದ್ದು 23.12.1912ರಂದು.

ಆನೆಯ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದ ವೈಸ್‌ರಾಯ್ ಲಾರ್ಡ್ ಹಾಡಿಂಜ್‌ನು, ಬಾಂಬ್ ಎಸೆತದಲ್ಲಿ ಗಾಯಗೊಂಡ. ಆತನ ಅಂಗರಕ್ಷಕ ಮೃತನಾದ. ಇಂತಹ ಘಟನೆಗಳೆಲ್ಲವನ್ನೂ ಸ್ವಾತಂತ್ರ್ಯ ಹೋರಾಟದ ಭಾಗಗಳೆಂದೇ ನಾವು ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ಮತ್ತೊಂದು ಸ್ವಾತಂತ್ರ್ಯೋ ತ್ಸವದ ಆಗಮನದ ಹಿನ್ನೆಲೆಯಲ್ಲಿ ಇಂತಹ ಹಲವು ಘಟನೆಗಳು ಮನದ ಪಟಲದ ಮೇಲೆ ಹಾದುಹೋದವು.