Saturday, 23rd November 2024

ಜನಪ್ರತಿನಿಧಿಗಳು ಸರಳತೆಯೆಡೆ ಮುಖ ಮಾಡಲಿ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಚುನಾಯಿತ ಜನಪ್ರತಿನಿಧಿಗಳಿಗೆ ಸರಕಾರದಿಂದ ಎಲ್ಲ ಬಗೆಯ ಖರ್ಚು-ವೆಚ್ಚ ದಿನಚರಿ ಚಟುವಟಿಕೆಗಳಿಗೆ ಐಷಾರಾಮಿ ಸವಲತ್ತುಗಳು ದೊರೆಯುತ್ತವೆ. ಶಾಸಕ ರಿಗೆ ಶಾಸಕರ ಭವನ, ಸಚಿವರಿಗೆ ಪ್ರತ್ಯೇಕ ಬಂಗ್ಲೆ, ಬೆಂಗಾವಲು ವಾಹನ ಹೀಗೆ ನಾನಾ ಸೌಲಭ್ಯಗಳು ದೊರಕುತ್ತವೆ.

ಈ ಎಲ್ಲಾ ವ್ಯವಸ್ಥೆಗಳಿಗೆ ಸರಕಾರದ ಬೊಕ್ಕಸದಿಂದ ಕೋಟ್ಯಂತರ ರುಪಾಯಿ ವ್ಯಯವಾಗುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗಿತ್ತು. ಅದೇನೆಂದರೆ ಕಾಡಿನ ಮಧ್ಯೆ ವನವಾಸಿ ಕಲ್ಯಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿದ್ಧಿ ಸಮುದಾಯದ ಶಾಂತಾರಾಮ ಸಿದ್ಧಿ ಎಂಬವರು ಕರ್ನಾಟಕ ವಿಧಾನಪರಿಷತ್ತಿಗೆ ಆಯ್ಕೆಗೊಂಡ ಬಳಿಕ ಬೆಂಗಳೂರಿಗೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಸರಕಾರಿ ಸವಲತ್ತುಗಳನ್ನು ಬದಿಗೊತ್ತಿ ಸರಳತೆ ಮೆರೆದಿದ್ದರು.

ಇದರ ಜತೆಗೆ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಚಿವ ಎಸ್ ಅಂಗಾರ ಇಂದಿಗೂ ಸಚಿವರ ಬಂಗ್ಲೆಯಿಂದ ಅಂತರ ಕಾಯ್ದುಕೊಂಡು ಶಾಸಕರ ಭವನದಲ್ಲಿ ಉಳಿದುಕೊಳ್ಳುತ್ತಾರೆ. ಪ್ರಸ್ತುತ ಕರೋನಾ ಅಲೆಗೆ ತತ್ತರಿಸಿರುವ ಜನಜೀವನ ಸರಕಾರದ ಆರ್ಥಿಕ ವ್ಯವಸ್ಥೆಯ ಕುಂಠಿತದ ಕಾರಣದಿಂದ ಹಲವಾರು ಸಂಘಸಂಸ್ಥೆ ಸಾರ್ವಜನಿಕ ಸಂಸ್ಥೆಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಪ್ರಕ್ರಿಯೆ ನಡೆದಿತ್ತು.

ಒಂದಷ್ಟು ನೂತನ ಯೋಜನೆಗಳಿಗೆ ಕಾಯಕಲ್ಪ ಒದಗಿಸುವ ಪರಿಸ್ಥಿತಿಯಲ್ಲಿ ಯಾವ ಸರಕಾರಗಳೂ ಇಲ್ಲ. ಅಂತಹ ಸ್ಥಿತಿಗೆ ಪ್ರಕೃತಿದತ್ತವಾಗಿ ಬಂದ ಕರೋನಾ ಎಂಬ ಮಾಯೆ ದೂಡಿದ್ದಂತೂ ಸುಳ್ಳಲ್ಲ. ಸಭೆ-ಸಮಾರಂಭ ಗಳಲ್ಲಿ ನೂತನ ಸಚಿವರುಗಳಿಗೆ ಹಾರ-ತುರಾಯಿಗೆ ಕೋಟ್ಯಂತರ ರುಪಾಯಿ ವ್ಯಯಿಸುವ ಪದ್ಧತಿ ಯನ್ನು ಸಚಿವರುಗಳು ತಿರಸ್ಕರಿಸಬೇಕು. ಇತ್ತೀಚೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನೂತನ ಇಂಧನ ಸಚಿವ ಕಾರ್ಕಳದ ಶಾಸಕ ಸುನಿಲ್ ಕುಮಾರ್‌ರವರು ಹಾರ ತುರಾಯಿ ಬದಲು ಪುಸ್ತಕ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದರು. ಜತೆಗೆ ಆ ಪುಸ್ತಕಗಳನ್ನು ಊರಿನ ಗ್ರಂಥಾಲಯಕ್ಕೆ ನೀಡುವು ದಾಗಿ ತಿಳಿಸಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು  ಇದೊಂದು ಮಾದರಿ ನಡೆಯೆಂದರೂ ತಪ್ಪಾಗಲಾರದು.ಇಂತಹ ಸಂಪ್ರದಾಯಕ್ಕೆ ಎಲ್ಲಾ  ಸಚಿವರು ಗಳು ಒಗ್ಗಿಕೊಳ್ಳಬೇಕಾದ ಅವಶ್ಯಕತೆ ಇದೆ.

ಹಾರ-ತುರಾಯಿಗಳು ಏನಿದ್ದರೂ ಕ್ಷಣಿಕ ಮಾತ್ರ. ಬಳಿಕ ತಿಪ್ಪೆಯಲ್ಲಿ,ಸಾರ್ವಜನಿಕ ಕಸದ ಗುಂಡಿಯಲ್ಲಿ ಅನಾಥವಾಗಿ ಬಿದ್ದಿರುತ್ತದೆ. ಒಂದು ಗ್ರಂಥಾಲಯಕ್ಕೆ ಪುಸ್ತಕ ಬಂದಾಗ ಆ ಊರಿನ ಹತ್ತಾರು ಮಂದಿ ಓದಿ ಜ್ಞಾನವೂ ವೃದ್ದಿಯಾಗುವುದಲ್ಲದೆ, ಜತೆಗೆ ಹತ್ತು ಮಂದಿಗೆ ಪ್ರಯೋಜನವೂ ಆದೀತು. ಇದರೊಂದಿಗೆ ಮುಖ್ಯಮಂತ್ರಿ ಗಳು ಝಿರೋ ಟ್ರಾಫಿಕ್ ವ್ಯವಸ್ಥೆಯನ್ನು ತಿರಸ್ಕರಿಸಿರುವುದು ಕೂಡ ಒಳ್ಳೆಯ ಬೆಳವಣಿಗೆ. ಇದು ಕಾರ್ಯರೂಪಕ್ಕೆ ಬರಬೇಕು. ವಿವಿಧ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ, ಮಂಡಳಿ, ಪ್ರಾಽಕಾರ, ಆಯೋಗಗಳ ಅಧ್ಯಕ್ಷರುಗಳು ಕೂಡ ಇದೇ ಮಾದರಿಯನ್ನು ಅನುಸರಿಸಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುವ ನಿಟ್ಟಿನಲ್ಲಿ ಯಾಕೆ ಯೋಚಿಸಬಾರದು?