ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 60
ವಚನದಲ್ಲಿ ಜೀವನಧರ್ಮ ಕುರಿತ ಉಪನ್ಯಾಸ
ಸಂವಾದದಲ್ಲಿ ಡಾ.ಸಿ. ಸೋಮಶೇಖರ್ ಅಭಿಮತ
ಬೆಂಗಳೂರು: ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ವಚನ ವೈಭವದ ಮೆರವಣಿಗೆ, ಕೇಳುಗರ ಕಿವಿಗೆ ವಚನ ಸಾಹಿತ್ಯದ ಕಂಪು, ವಚನಗಳಲ್ಲಿ ಸಿಗುವ ಜೀವ ಚೈತನ್ಯದ ಹಿರಿಮೆಯ ತಂಪು ಹರಡಿದವರು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್.
ಬಸವಾದಿ ಶರಣರ ವಚನಗಳ ಮೂಲಕವೇ ಜೀವನ ಮೌಲ್ಯದ ಬೆಳಕು ಚೆಲ್ಲುವ ಮಾತುಗಳನ್ನು ಕೇಳುಗರಿಗೆ ಉಣಬಡಿಸುವ ಮೂಲಕ, ವಚನ ಸಾಹಿತ್ಯದ ಪರಿಚಯ ಮಾಡಿಕೊಟ್ಟ ಅವರು, ವಿಶ್ವದ ಯಾವ ಕ್ರಾಂತಿಯೂ ವಚನಕ್ರಾಂತಿಯಷ್ಟು ಪರಿಣಾಮಕಾರಿಯಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ವಚನ ಸಾಹಿತ್ಯ ಕ್ರಾಂತಿಯನ್ನೇ ಮಾಡಿತು.
ವಚನಗಳು ಅನುಭಾವದ ಉಜ್ವಲ ಕುಲುಮೆಯಲ್ಲಿ ಸಿಡಿದುಬಂದ ಚಿನ್ನದ ಕಿಡಿಗಳು ಎಂಬುದು ವಚನ ವಿಮರ್ಶಕರ ಅಭಿಪ್ರಾಯ. ವಚನಕಾರರು ಸಂಸ್ಕೃತದ ಆಚಾರರಲ್ಲ, ಅಚ್ಚ ಕನ್ನಡದ ಬೇಸಾಯಗಾರರು, ಅವರು ವಿಶ್ವಧರ್ಮ ವನ್ನು ಸ್ಥಾಪಿಸಿದವರು. ಕನ್ನಡ ಸಾಹಿತ್ಯ ಪ್ರಪಂಚವನ್ನು ವಿಶ್ಲೇಷಣೆ ಮಾಡಿದಾಗ ವಚನಗಳು ಶ್ರೇಷ್ಟವಾದ ಸಾಲಿನಲ್ಲಿ ನಿಲ್ಲುತ್ತವೆ ಎಂದು ಅಭಿಪ್ರಾಯಪಟ್ಟರು.
ವಚನಗಳೆಂಬುದು ಧರ್ಮ ಬೋಧನೆಯಿಂದ ಧರ್ಮ ಗ್ರಂಥ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟರೆ, ಬಿಎಂಶ್ರೀ ಅವರು ವಚನಗಳು ಶಾಸವೂ ಹೌದು, ಸಾಹಿತ್ಯವೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ. ರಂ.ಶ್ರೀ. ಮುಗುಳಿ ಅವರು ವಚನಗಳು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು ಹೇಳುತ್ತಾರೆ ಎಂದರು.
ವಚನ ಸಾಹಿತ್ಯ ಸಂವಿಧಾನಕ್ಕೆ ಪ್ರೇರಕ
ಸ್ವಾತಂತ್ರ್ಯ ಭಾರತದ ಶ್ರೇಷ್ಠ ಸಂವಿಧಾನಕ್ಕೆ ವಚನ ಸಾಹಿತ್ಯವೇ ಪೀಠಿಕೆ ಎಂದರೆ ತಪ್ಪಾಗದು ಎಂಬುದು ಸೋಮಶೇಖರ್ ಅವರ ಅಭಿಪ್ರಾಯ. ಅವರ ಪ್ರಕಾರ ವಚನ ಸಾಹಿತ್ಯವೇ ನಮ್ಮ ಸಂವಿಧಾನಕ್ಕೆ ಪೀಠಿಕೆ, ಜಾತ್ಯಾತೀತತೆ, ಮಹಿಳಾ ಸ್ವತಂತ್ರ್ಯ, ದೀನದಲಿತರ ಏಳಿಗೆಗೆ ಇದೇ ಪ್ರೇರಕ ಎನ್ನಬಹುದು. ೯ ಶತಮಾನದ ಹಿಂದೆ ಜಾತ್ಯತೀತ ಸಮಾಜ ನಿರ್ಮಾಣ ಕಟ್ಟಲು ಹೊರಟಿದ್ದವರು ವಚನಕಾರರು. ಇದರ ಆಧಾರದಲ್ಲಿ ದೇಶದಲ್ಲಿ ಜಾತ್ಯತೀತ ಸಮಾಜದ ನಿರ್ಮಾಣಕ್ಕೆ ಸಂವಿಧಾನವನ್ನು ಜಾರಿಗೊಳಿಸಲಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ಅಧಿಕಾರಸ್ಥರಿಗೆ ಸಂದೇಶ ಅನ್ವಯ
ಕುಳ್ಳಿರೆಂದರೆ ನೆಲ ಕುಳಿ ಬೀಳುವುದೇ ಎಂಬ ವಚನದ ಮೂಲಕ ಆಳುವವರು ಮತ್ತು ಅಽಕಾರ ವರ್ಗಕ್ಕೆ ಅಂದೇ ಸಂದೇಶ ಕೊಟ್ಟಿದ್ದಾರೆ ಬಸವಾದಿ ಶರಣರು. ಇಂದಿನ ಪರಿಸ್ಥಿತಿಯ ಕುರಿತು ಒಂಬತ್ತು ಶತಮಾನದ ಹಿಂದೆಯೇ ಹೊಲೆ ಹತ್ತಿ ಉರಿದೊಡೆ ನಿಲ್ಲಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ, ಏರಿ ನೀರುಂ ಬೊಡೆ, ನಾರಿಯೇ ತನ್ನ ಮನೆಯಲ್ಲಿ ಕಳುವೊಡೆ, ತಾಯಿ ಮೊಲೆ ಹಾಲೇ ನಂಜಾದೊಡೆ ಇನ್ನಾರಿಗೆ ದೂರಲಿ ಕೂಡಲ ಸಂಗಮದೇವ ಎನ್ನುವ ಮೂಲಕ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ ಎಂದು ಸೋಮಶೇಖರ್ ವಿವರಿಸಿದರು.
೨ ದಶಕದಲ್ಲಿ ಬಸವತತ್ವ ವಿಶ್ವಮಾನ್ಯ
ಇನ್ನೆರಡು ದಶಕಗಳಲ್ಲಿ ಬಸವಣ್ಣ ವಿಶ್ವದ ಎಲ್ಲರಿಗೂ ಬೇಕಾದ ವ್ಯಕ್ತಿಯಾಗುತ್ತಾನೆ. ಬಸವತತ್ವ ಜಗತ್ತಿನ ಶ್ರೇಷ್ಠ ಧರ್ಮ ಆಗುತ್ತದೆ. ಬಸವಣ್ಣನ ವಚನಗಳಲ್ಲಿ ಬುದ್ಧನ
ದಯೆ, ಕ್ರಿಸ್ತನ ಅಹಿಂಸೆ, ಮಹಾವೀರ, ಪೈಗಂಬರನ ಅಂತಸತ್ವದ ಗುಣಗಳನ್ನು ಕಾಣಬಹುದು. ಬಸವ ತತ್ವವೇ ಜಗತ್ತಿನ ಶ್ರೇಷ್ಠ ಮಾನವೀಯ ಮೌಲ್ಯ ಗಳನ್ನೊಳ \ಗೊಂಡ ತತ್ವ ಎಂಬುದು ಜಗತ್ತಿಗೆ ಈಗೀಗ ಅರಿವಾಗುತ್ತಿದೆ. ಹೀಗಾಗಿ, ಬಸವ ಧರ್ಮ ಜಗತ್ತಿನ ಶ್ರೇಷ್ಠ ಧರ್ಮವಾಗಿ ನೆಲೆಯಾಗುವ ಕಾಲ ದೂರವಿಲ್ಲ. ಇಡೀ ಜಗತ್ತೇ ಬಸವಣ್ಣನ ತತ್ವಗಳನ್ನು ಮೆಚ್ಚಿ ಅಹುದಹುದು ಎಂಬುವ ಕಾಲ ದೂರದಲ್ಲಿಲ್ಲ ಎಂದು ಸೋಮಶೇಖರ್ ತಿಳಿಸಿದರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಜ್ಯೋತಿಷ್ಯವನ್ನು ವಚನಕಾರರು ನಂಬಿದವರಲ್ಲ. ಅವರು ಹಿಂದಿನ ಆಚಾರಗಳು, ಮುಂದಿನ ಕಂದಾಚಾರಗಳನ್ನು ಸಹಿಸಿದವರಲ್ಲ. ಸ್ವರ್ಗ, ನರಕಗಳ ಕಲ್ಪನೆ ಯನ್ನು ಬಿತ್ತಿದವರಲ್ಲ. ಇಲ್ಲಿ ಸಲ್ಲುವರು ಅಲ್ಲೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ, ಆಚಾರವೇ ಸ್ವರ್ಗ, ಅನಾಚರವೇ ನರಕ ಎಂಬುದು ಜೋತ್ಯಿಷ್ಯ, ಸ್ವರ್ಗ ನರಕದ ಕುರಿತು ವಚನಕಾರರ ಉಲ್ಲೇಖ ಎಂದು ಸೋಮಶೇಖರ್ ವಿಶ್ಲೇಷಿಸಿದರು.
ವಚನ ಸಾಹಿತ್ಯದಲ್ಲಿ ಜಾತಿಗಿಲ್ಲಿ ನೆಲೆಯಿಲ್ಲ
ವಚನ ಸಾಹಿತ್ಯಕ್ಕೆ ಜಾತಿಯ ನೆಲೆಯಲ್ಲಿ. ಇದೊಂದು ಜ್ಯಾತ್ಯಾತೀತ ಅನುಭವ ಮಂಟಪ. ಅನುಭವ ಮಂಟಪವನ್ನು ವಿಶ್ವದ ಮೊದಲ ಪಾರ್ಲಿಮೆಂಟ್ ಎಂದು
ಕರೆಯುವುದುಂಟು. ಕಾಯಕದ ಮೂಲಕ ಶ್ರೇಷ್ಠವಾಗಿ ನಡೆದವರೇ ಶ್ರೇಷ್ಠ ಕುಲದವರು. ಇತ್ತೀಚೆಗೆ ವ್ಯಕ್ತಿಯ ಜಾತಿಯನ್ನು ಕೇಳುತ್ತಾ ಕೇಳುತ್ತಾ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆ ಬಸವಣ್ಣ ‘ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯಾ ಎನ್ನುವ ಮೂಲಕ ಎಲ್ಲರೂ ಒಂದೇ ಎಂಬ ಸಂದೇಶವನ್ನು ವಚನದ ಮೂಲಕ ಹೇಳಿದರು.
ಕೆಳಸ್ತರದ ಜನರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿಯೇ ಬಸವಣ್ಣ, ಅಪ್ಪನು ನಮ್ಮ ಮಾದಾರ ಚನ್ನಯ್ಯ ಎನ್ನುವ ಮೂಲಕ ಶರಣ ದೀಕ್ಷೆಯನ್ನು ಕೊಟ್ಟು ಅವರಿಗೆ ಮಾನಸಿಕ ಬೆಂಬಲ ಸೂಚಿಸಿದರು ಎಂದು ತಿಳಿಸಿದರು.
ದಯವಿಲ್ಲದ ಧರ್ಮ ಯಾವುದಯ್ಯಾ,
ದಯೆಯೇ ಧರ್ಮದ ಮೂಲವಯ್ಯ
ಸಕಲ ಜೀವರಾಶಿಯಲ್ಲಿ
ದಯೆಯೇ ಎಲ್ಲರ ಆಸ್ತಿ
ಎಂಬುದನ್ನು ತೋರಿಸಿಕೊಟ್ಟರು.
ಜೀವ ಕೊಟ್ಟಿದ್ದು ಫ.ಗು ಹಳಕಟ್ಟಿ
ಫ.ಗು ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಉತ್ಖನನ ಮಾಡಿದವರು. ಕಾರಣಾಂತರದಿಂದ ಮಂಗಳೂರಿನ ಕೆಲ ಕ್ರೈಸ್ತ ಮಿಷನರಿಗಳು ಅವರು ಸಂಗ್ರಹಿಸಿದ
ವಚನ ಸಾಹಿತ್ಯವನ್ನು ಪ್ರಕಟ ಮಾಡಲು ಒಪ್ಪಿಗೆ ಸೂಚಿಸಲಿಲ್ಲ. ಮನೆಮನೆಗೆ ತೆರಳಿ ವಚನ ಸಾಹಿತ್ಯದ ತಾಳೆಗರಿಗಳನ್ನು ಸಂಗ್ರಹಿಸಿದ ಅವರು, ತಮ್ಮ ಮನೆಯನ್ನು ಮಾರಿ ವಚನ ಸಾಹಿತ್ಯವನ್ನು ಕ್ರೋಢೀಕರಣ ಮಾಡಲು ತೊಡಗಿದರು. ಕೊನೆಗೆ ತಾವೇ ಮುದ್ರಣವನ್ನು ಆರಂಭಿಸಿ ವಚನಕಾರರ ಜೀವಸೆಲೆಗಳನ್ನು ಉಳಿಸಿದರು. ಆ ಮೂಲಕ ವಚನ ಸಾಹಿತ್ಯ ಜೀವಜಗತ್ತಿಗೆ ದೊರೆಯುವಂತೆ ಮಾಡಿದರು. ಹೀಗಾಗಿಯೇ, ಅವರನ್ನು ವಚನ ಸಾಹಿತ್ಯದ ಪಿತಾಮಹಾ ಎಂದು
ನೆನೆಯಲಾಗುತ್ತದೆ ಎಂದು ಸೋಮಶೇಖರ್ ಅಭಿಪ್ರಾಯಪಟ್ಟರು.
ಮಠಗಳಲ್ಲಿ ಜಾತಿ
ಎಲ್ಲ ಮಠಗಳು ಇಲ್ಲ, ಕೆಲವು ಮಠಾಧೀಶರಿಗೆ ಭಕ್ತರ ಕಾಟ ಜಾಸ್ತಿಯಾಗಿದೆ. ಭಕ್ತರಿಂದಲೇ ಕೆಲವು ಜಾತಿ ಮಠಗಳಾಗಿ ಮಾರ್ಪಾಡಾಗಿವೆ. ಭಕ್ತರ ಒತ್ತಡಕ್ಕೆ ಮಣಿದು ಜಾತಿಯ ಕೂಗಿಗೆ ಸ್ವಾಮೀಜಿಗಳು ಬಲಿಯಾಗುತ್ತಿದ್ದಾರೆ. ಕೆಲವು ಮಠಗಳು ಭಕ್ತರ ಒತ್ತಾಯದಿಂದಾಗಿಯೇ ನಿರ್ಮಾಣವಾಗುತ್ತಿವೆ. ಹೀಗಾಗಿ, ಮಠ ಮಾನ್ಯಗಳನ್ನು ಸರಿದಾರಿಗೆ ತರುವುದು ಭಕ್ತರದೇ ಜವಾಬ್ದಾರಿ ಎಂಬುದು ನನ್ನ ಅನಿಸಿಕೆ ಎಂದು ಸೋಮಶೇಖರ್ ತಿಳಿಸಿದರು.
***
ಡಾ.ಸಿ.ಸೋಮಶೇಖರ್ ಅವರು, ನಡೆದಾಡುವ ವಚನಕೋಶ. ಒಬ್ಬ ಅಧಿಕಾರಿಯಾಗಿ ವಚನ ಪರಂಪರೆಯಂತೆಯೇ ನಡೆದ ಅವರು, ಪ್ರಸ್ತುತ ವಚನ ಸಾಹಿತ್ಯದ ಅರಿವು ಮೂಡಿಸುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸುತ್ತಿದ್ದಾರೆ.
– ವಿಶ್ವೇಶ್ವರ ಭಟ್
ವಿಶ್ವವಾಣಿ ಪ್ರಧಾನ ಸಂಪಾದಕರು