ವಿಶೇಷ ವರದಿ: ಸುಷ್ಮಾ ಸಿ.ಕಡಲೂರು
ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಮಕ್ಕಳಲ್ಲಿ ಕರೋನಾ ಸೋಂಕು
ಬೆಂಗಳೂರು: ಕರೋನಾ ಮೂರನೇ ಅಲೆ ಹೆಚ್ಚಾಗಿ ಮಕ್ಕಳನ್ನು ಕಾಡುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದು, ಸೋಂಕು ದಿನೇ ದಿನೆ ಹೆಚ್ಚಾಗುತ್ತಿದೆ. ಆದರೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ಸೋಂಕು ತಗುಲಿದರೆ ಜೀವಕ್ಕೆ ಆಪತ್ತು ತಂದೊಡ್ಡಲಿದೆ.
ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಮಕ್ಕಳಲ್ಲಿ ಕರೋನಾ ಸೋಂಕು ಕಂಡು ಬಂದಿದೆ. ಸೋಂಕಿತ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಲವು ವರ್ಷಗಳಿಂದ ಕರ್ನಾಟಕ ಎದುರಿಸು ತ್ತಿರುವ ಸಮಸ್ಯೆಗಳಲ್ಲಿ ಅಪೌಷ್ಟಿಕತೆಯೂ ಒಂದಾಗಿದೆ. ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ತಿಳಿದುಬಂದಿದೆ. ಇಂತಹ ಮಕ್ಕಳಿಗೆ ಕರೋನಾ ಸೋಂಕು ತಗುಲಿದರೆ ಜೀವ ಉಳಿಸುವುದು ಸವಾಲಾಗಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಕರೋನಾ 3ನೇ ಅಲೆ ಕಾಣಿಸಿಕೊಂಡರೆ ಆಗ ಮಕ್ಕಳ ಪೌಷ್ಟಿಕತೆ ಮೇಲೆ ಹೆಚ್ಚು ಪರಿಣಾಮ ಉಂಟಾಗುವುದು. ನಿರುದ್ಯೊಗ ಹೆಚ್ಚಾಗುವುದು. ಕುಟುಂಬಗಳ ಆರ್ಥಿಕ ಶಕ್ತಿಯೂ ಕುಸಿಯುವುದರಿಂದ ಅದರ ನೇರ ಪರಿಣಾಮ ಹಸಿವಿನ ಮೇಲಾಗುತ್ತದೆ. ಹಸಿವು ತಣಿಯದಿದ್ದರೆ ಅದು ಅಪೌಷ್ಟಿಕತೆಗೆ ಕಾರಣವಾಗುತ್ತದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ರಾಜ್ಯದಲ್ಲಿ ಕರೋನಾ ವೈರಸ್ ಸೋಂಕಿಗೆ ಬಲಿಯಾಗುವವರ ಸಂಖ್ಯೆಗಿಂತ ಅಪೌಷ್ಟಿಕತೆಗೆ ಬಲಿಯಾಗುತ್ತಿರುವವರ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ರಾಜ್ಯದಲ್ಲಿ ತೂಕ ಮತ್ತು ಎತ್ತರ ಕಡಿಮೆ ಇರುವ ಮಕ್ಕಳು ಐದು ಲಕ್ಷ ಗಡಿ ದಾಟಿದ್ದು, ಇದು ಹೀಗೆಯೇ ಮುಂದುವರಿದರೆ ಅಪೌಷ್ಟಿಕತೆ ಯಿಂದ ಒಂದು ಪೀಳಿಗೆಗೆ ಕುತ್ತು ಬರುವುದರಲ್ಲಿ ಅನುಮಾನವೇ ಇಲ್ಲ. ಕರೋನಾ ಲಾಕ್ ಡೌನ್ ಸಮಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿರುವುದು ತಿಳಿದು ಬಂದಿದೆ.
ಅಪೌಷ್ಟಿಕತೆ ಹೇಗೆ ಗೊತ್ತಾಗುತ್ತದೆ?
6 ತಿಂಗಳಿನಿಂದ ೫ವರ್ಷದೊಳಗಿನ ಮಕ್ಕಳ ತೂಕ, ಎತ್ತರ ಅಳತೆ ಮಾಡುವುದರಿಂದ ಮಕ್ಕಳ ಅಪೌಷ್ಟಿಕತೆ ನಿರ್ಧಾರವಾಗುತ್ತದೆ. ವಯಸ್ಸಿಗೆ ತಕ್ಕ ತೂಕ ಮತ್ತು ಎತ್ತರ, ಎತ್ತರಕ್ಕೆ ತಕ್ಕ ತೂಕ, ತೋಳಿನ ಸುತ್ತಳತೆಯನ್ನು ಆಧಾರವಾಗಿಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು ವರದಿ ನೀಡುತ್ತಾರೆ.
ಅಪೌಷ್ಟಿಕತೆ ಕತೆಗೆ ಪ್ರಮುಖ ಕಾರಣ
ನಿರುದ್ಯೊಗ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಪೊಷಕರಿಗೆ ಆದಾಯ ಇಲ್ಲ.
ಆರ್ಥಿಕ ಹಿಂಜರಿತದಿಂದಾಗಿ ಉದ್ಯಮಗಳಿಗೂ ಹೊಡೆತ
ಸರಕಾರದ ಯೋಜನೆಗಳು ಕಟ್ಟಕಡೆಯ ಪ್ರಜೆಯನ್ನು ತಲುಪುತ್ತಿಲ್ಲ