ಸಲಹೆ
ಡಾ.ರವೀಂದ್ರ ನಿಡೋಣಿ
ravi3071@gmail.com
ದೇಹದಲ್ಲಿ ಲಿವರ್ ಬಹಳ ಪ್ರಮುಖ ಅಂಗ. ನಾವು ತಿಂದ ಆಹಾರ ಜೀರ್ಣವಾಗಲು, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು, ವಿಷಪೂರಿತ ಅಂಶಗಳು ಹೊರ ಹೋಗಿ ದೇಹ ಸ್ವಚ್ಛವಾಗಲು, ವಿಟಮಿನ್ಗಳು ದೇಹದಲ್ಲಿ ಶೇಖರಣೆಗೊಳ್ಳಲು ಹೀಗೆ ನಾನಾ ಕಾರ್ಯಗಳಿಗಾಗಿ ಲಿವರ್ (ಯಕೃತ್ತು) ಸರಿಯಾಗಿ ಕೆಲಸ ಮಾಡುತ್ತಿರ ಬೇಕಾಗುತ್ತದೆ.
ಮನುಷ್ಯನ ದೇಹದಲ್ಲಿ ಲಿವರ್ ೨ನೇ ಅತಿದೊಡ್ಡ ಅಂಗ ಕೂಡ ಹೌದು. ಇದು ನಮ್ಮ ದೇಹದ ತೂಕದ ಶೇ.೨ರಷ್ಟು ತೂಕ ಹೊಂದಿದೆ. ಭಾರತದಲ್ಲೀಗ ಲಿವರ್ ಸಂಬಂಧಿ ರೋಗಗಳು ಹೆಚ್ಚುತ್ತಿವೆ. ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಸಾವಿಗೆ ಕಾರಣವಾಗುವ ರೋಗಗಳ ಪೈಕಿ ಲಿವರ್ ಸಂಬಂಧಿ ರೋಗಗಳು 10ನೇ ಸ್ಥಾನ ಪಡೆದಿವೆ. ಮನುಷ್ಯರಲ್ಲಿ ಲಿವರ್ ಸಂಬಂಧಿ ರೋಗಗಳು ಕಾಣಿಸಿಕೊಳ್ಳಲು ಸಾಮಾನ್ಯ ಕಾರಣಗಳು ಯಾವುವು? ವೈರಸ್ಗಳು, ವಂಶವಾಹಿ ಕಾರಣಗಳು, ಅತಿ ಯಾದ ಕುಡಿತ, ಅತಿಯಾದ ಧೂಮಪಾನ, ಅನಾರೋಗ್ಯಕರ ಆಹಾರ ಸೇವನೆ, ಸ್ಥೂಲಕಾಯ ಮುಂತಾದ ಜೀವನ ಶೈಲಿಗೆ ಸಂಬಂಧಿಸಿದ ಕಾರಣಗಳಿಂದ ಲಿವರ್ ರೋಗಗಳು ಬರುವುದು ಹೆಚ್ಚು.
ಲಿವರ್ಗೆ ನಿರಂತರ ಹಾನಿಯಾಗುತ್ತಿದ್ದರೆ ಒಂದು ದಿನ ಅದು ಸರಿಪಡಿಸಲಾಗದ ಮಟ್ಟಕ್ಕೆ ಹೋಗಿ ತಲುಪುತ್ತದೆ. ಅದಕ್ಕೆ ಲಿವರ್ ಸಿರೋಸಿಸ್ ಎಂದು ಕರೆಯು ತ್ತಾರೆ. ಆತಂಕದ ಸಂಗತಿಯೇನೆಂದರೆ, ಲಿವರ್ಗೆ ಹಾನಿಯಾಗು ತ್ತಿದೆ ಎಂದು ನಮಗೆ ಆರಂಭದ ದಿನಗಳಲ್ಲಿ ಗೊತ್ತೇ ಆಗುವುದಿಲ್ಲ. ಏಕೆಂದರೆ ಅದರ ಯಾವ ಲಕ್ಷಣಗಳೂ ನಮ್ಮ ದೇಹದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಲಿವರ್ಗೆ ಹೆಚ್ಚಿನ ಹಾನಿ ಉಂಟಾದಾಗಲೇ ಒಂದೊಂದಾಗಿ ಲಕ್ಷಣಗಳು ಕಾಣಿಸಿಕೊಳ್ಳ ತೊಡಗುತ್ತವೆ. ಅಷ್ಟರಲ್ಲಿ ತಡವಾಗಿರುತ್ತವೆ. ಲಿವರ್ಗೆ ಹಾನಿಯಾಗಿದೆ ಎಂಬುದರ ಸಾಮಾನ್ಯ ಲಕ್ಷಣಗಳೆಂದರೆ ಜಾಂಡೀಸ್, ಕಾಲು ಊತ, ನಿಶ್ಯಕ್ತಿ, ಹೊಟ್ಟೆಯಲ್ಲಿ ನೀರು ಶೇಖರಣೆಯಾಗುವುದು, ನಿದ್ದೆಯ ರೀತಿ ಬದಲಾಗುವುದು, ರಕ್ತದ ವಾಂತಿಯಾಗುವುದು, ಮಲ ಕಪ್ಪಾಗುವುದು ಹಾಗೂ ಅನೀಮಿಯಾ. ಹಾಗಾದರೆ ಯಕೃತ್ತನ್ನು ಆರೋಗ್ಯ ಕರವಾಗಿಟ್ಟುಕೊಳ್ಳುವುದು ಹೇಗೆ. ಇದಕ್ಕೆ ಕೆಲ ಟಿಪ್ಸ್ ಇಲ್ಲಿವೆ.
ಮದ್ಯ ಸೇವನೆ ನಿಯಂತ್ರಣದಲ್ಲಿರಲಿ
ಮದ್ಯ ಸೇವನೆ ನಿಮಗೆ ಕಿಕ್ ಕೊಡಬಹುದು. ಆದರೆ ಅದು ಲಿವರ್ಗೆ ಹೆಚ್ಚಿನ ಕೆಲಸ ಕೊಡುತ್ತದೆ. ಮದ್ಯವನ್ನು ನಮ್ಮ ದೇಹದಲ್ಲಿ ಸಂಸ್ಕರಣೆ ಮಾಡುವ ಪ್ರಮುಖ ಅಂಗ ಲಿವರ್. ಒಂದು ವೇಳೆ ಲಿವರ್ನ ಕೋಶಗಳಿಗೆ ವಿಪರೀತ ಎನ್ನುವಷ್ಟು ಕೆಲಸ ಬಂದರೆ ಆಗ ಲಿವರ್ಗೆ ಹಾನಿಯಾಗುತ್ತದೆ. ನಿಮ್ಮ ದೇಹಕ್ಕೆ ಎಷ್ಟು ಆಲ್ಕೋ ಹಾಲನ್ನು ತಡೆದುಕೊಳ್ಳುವ ಶಕ್ತಿಯಿದೆ ಎಂಬುದನ್ನು ಡಾಕ್ಟರ್ ಬಳಿ ಕೇಳಿ ತಿಳಿದುಕೊಳ್ಳಿ. ಸಾಮಾನ್ಯವಾಗಿ ಅವರು ತುಂಬಾ ಕಡಿಮೆ ಕುಡಿಯಲು ಹೇಳುತ್ತಾರೆ ಅಥವಾ ಪೂರ್ತಿ ಬಿಡಲು ಕೂಡ ಹೇಳಬಹುದು.
ಆರೋಗ್ಯಕರ ತೂಕ ಕಾಪಾಡಿಕೊಳ್ಳಿ
ಸ್ಥೂಲಕಾಯದಿಂದ ಆಲ್ಕೋಹಾಲೇತರ ಲಿವರ್ ಊತ ರೋಗ (ಎನ್ಎಎಫ್ಎಲ್ಡಿ) ಬರಬಹುದು. ಇದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ ಲಿವರ್ ರೋಗವಾಗುತ್ತಿದೆ. ಹೀಗಾಗಿ ದೇಹದ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಿ. ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 25ಕ್ಕಿಂತ ಕಡಿಮೆ ಇರಲಿ. ನಿಮ್ಮ ದೇಹದ ಬಿಎಂಐ ಎಷ್ಟಿದೆ ಎಂದು ತಿಳಿದುಕೊಳ್ಳಲು ಇಂಟರ್ನೆಟ್ನಲ್ಲಿ ಬಿಎಂಐ ಕ್ಯಾಲ್ಕ್ಯುಲೇಟರ್ನ ಸಹಾಯ ಬೇಕಿದ್ದರೆ ಪಡೆದುಕೊಳ್ಳಬಹುದು. ಅದರಲ್ಲಿ ವಯಸ್ಸು, ಎತ್ತರ ಮತ್ತು ತೂಕ ನಮೂದಿಸಿದರೆ ಬಿಎಂಐ ಸಿಗುತ್ತದೆ.
ಆರೋಗ್ಯಕರ ಆಹಾರ ಸೇವಿಸಿ
ಹೆಚ್ಚು ಕ್ಯಾಲೊರಿ ಇರುವ ಆಹಾರಗಳಿಂದ ಸಾಧ್ಯವಾದಷ್ಟು ದೂರವಿರಿ. ಸ್ಯಾಚುರೇಟೆಡ್ ಫ್ಯಾಟ್, ರಿಫೈನ್ಸ್ ಕಾರ್ಬೊಹೈಡ್ರೇಟ್ಸ್ (ಉದಾಹರಣೆಗೆ ವೈಟ್ ಬ್ರೆಡ್, ವೈಟ್ ರೈಸ್ ಹಾಗೂ ಪಾಸ್ತಾ) ಮತ್ತು ಸಕ್ಕರೆ ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ಸೇವಿಸಿ. ಒಳ್ಳೆಯ ಡಯೆಟ್ ನಿಮ್ಮದಾಗಬೇಕು ಅಂದರೆ ಹೆಚ್ಚೆಚ್ಚು ಫೈಬರ್ ಇರುವ ಆಹಾರ ಸೇವಿಸಿ. ಇದು ನಿಮಗೆ ತಾಜಾ ಹಣ್ಣು, ತರಕಾರಿ, ಹೋಲ್ ಗ್ರೇನ್ ಬ್ರೆಡ್, ಅನ್ನ ಮತ್ತು ಬೇಳೆಕಾಳುಗಳಲ್ಲಿ ಸಿಗುತ್ತದೆ. ದೇಹದಲ್ಲಿ ನೀರಿನಂಶ ಯಾವಾಗಲೂ ಇರುವುದು ಮುಖ್ಯ. ಅದಕ್ಕಾಗಿ ಯಾವಾಗಲೂ ನೀರು ಕುಡಿಯುತ್ತಿರಿ.
ಹೆಪಟೈಟಿಸ್ ಬಿ ಅಥವಾ ಸಿ ಬಗ್ಗೆ ಎಚ್ಚರ
ಸಾಮಾನ್ಯವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹೆಪಟೈಟಿಸ್ ಬಿ ಅಥವಾ ಸಿ ರೋಗ ಬರುತ್ತದೆ. ನೇರವಾಗಿ ಒಬ್ಬರ ರಕ್ತ ಇನ್ನೊಬ್ಬರ ರಕ್ತದ ಸಂಪರ್ಕಕ್ಕೆ ಬಂದರೂ ಈ ರೋಗ ಹರಡಬಹುದು. ಹೀಗಾಗಿ ಸುರಕ್ಷಿತ ಲೈಂಗಿಕ ಸಂಪರ್ಕ ಇರಿಸಿಕೊಳ್ಳಿ. ಟೂತ್ಬ್ರಶ್, ರೇಜರ್ ಗಳು, ಸೂಜಿ ಅಥವಾ ಇನ್ನೊಬ್ಬರ ಖಾಸಗಿ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ. ಇವು ಒಬ್ಬರಿಂದ ಒಬ್ಬರಿಗೆ ಹೆಪಟೈಟಿಸ್ ಬಿ ಅಥವಾ ಸಿ ಹರಡಬಹುದು. ಅನುಮಾನ ಬಂದರೆ ಹೆಪಟೈಟಿಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಈಗ ಹೆಪಟೈಟಿಸ್ ಸಿ ರೋಗಕ್ಕೆ ಚಿಕಿತ್ಸೆಯಿದೆ. ಆದರೆ ಹೆಪಟೈಟಿಸ್ ಬಿ ಪಾಸಿಟಿವ್ ಬಂದರೆ ಚಿಕಿತ್ಸೆಯಿಲ್ಲ. ಜೀವನಪೂರ್ತಿ ಔಷಧಿ ಸೇವಿಸುತ್ತಾ ಆ ವೈರಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹೆಪಟೈಟಿಸ್ ಬಿ ನೆಗೆಟಿವ್ ಬಂದರೆ ಲಸಿಕೆ ತೆಗೆದುಕೊಳ್ಳಿ.
ವಿಷದ ಪದಾರ್ಥದಿಂದ ದೂರವಿರಿ
ವಿಷಕಾರಿ ಪದಾರ್ಥಗಳು ಲಿವರ್ನ ಜೀವಕೋಶಗಳನ್ನು ನಾಶಪಡಿಸುತ್ತವೆ. ಹೀಗಾಗಿ ಮನೆ ಅಥವಾ ಬಾತ್ ರೂಂ ಸ್ವಚ್ಛಗೊಳಿ ಸುವ ಪದಾರ್ಥಗಳು, ಏರೋ ಸೋಲ್ ಉತ್ಪನ್ನಗಳು, ಕೀಟನಾಶಕಗಳು, ರಾಸಾಯನಿಕ ಪದಾರ್ಥಗಳು ಹಾಗೂ ಅಡಿಟಿವ್ಗಳನ್ನು ಬಳಸುವಾಗ ಎಚ್ಚರ ವಹಿಸಿ. ಏರೋಸೋಲ್ಗಳನ್ನು ಬಳಸುವಾಗ ಕೋಣೆಯಲ್ಲಿ ಗಾಳಿಯಾಡುತ್ತಿರಲಿ. ಮುಖಕ್ಕೆ ಮಾಸ್ಕ್ ಧರಿಸಿ.
ಡಯಾಬಿಟಿಸ್ ನಿಯಂತ್ರಣದಲ್ಲಿಡಿ
ನೀವು ಮಧುಮೇಹಿಯಾಗಿದ್ದರೆ ಲಿವರ್ ಸಂಬಂಧಿ ಅನಾರೋಗ್ಯಗಳು ಬರಬಾರದು ಅಂದರೆ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಲೇಬೇಕು. ಅನಿಯಂತ್ರಿತ ಮಧುಮೇಹದಿಂದ ಲಿವರ್ಗೆ ಹಾನಿಯಾಗುತ್ತದೆ. ಅದಕ್ಕೆ ನಾನ್ ಆಲ್ಕೋಹಾಲಿಕ್ ಸ್ಟೀಟೋಹೆಪಟೈಟಿಸ್ (ನ್ಯಾಶ್) ಎಂದು ಕರೆಯುತ್ತಾರೆ. ಮಧುಮೇಹಿಗಳಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ನಿಯಮಿತವಾದ ವ್ಯಾಯಾಮ ಸಹಕಾರಿ. ಅದರ ಹೊರತಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತವಾಗಿ ಅಳೆಯುತ್ತಿರಬೇಕು. ವೈದ್ಯರ ಸಲಹೆಯಂತೆ ಔಷಧಿಗಳ ಪ್ರಮಾಣವನ್ನು ಬದಲಿಸುತ್ತಿರಬೇಕು.
ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಿ
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಲಿವರ್ಗೂ ಇದು ಒಳ್ಳೆಯದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ರಕ್ತದ ಲಿಪಿಡ್ ಪ್ರೊಫೈಲ್ ಪರೀಕ್ಷೆ ನಡೆಸಬೇಕಾಗುತ್ತದೆ. ಆಗ ಕೊಲೆಸ್ಟ್ರಾಲ್ ಹೆಚ್ಚು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಔಷಧಿಗಳ ಹೊರತಾಗಿ ನಿಯಮಿತ ವ್ಯಾಯಾಮ, ದೇಹದ ತೂಕ ಇಳಿಕೆ, ಆರೋಗ್ಯಕರ ಆಹಾರ ಸೇವನೆಯಿಂದಲೂ ಕೂಡ ಕೊಲೆಸ್ಟ್ರಾಲ್ ಮಟ್ಟವನ್ನು ಇಳಿಸಿಕೊಳ್ಳಬಹುದು.
ಲಿವರ್ ಊತ ಕಡೆಗಣಿಸಬೇಡಿ
ಬೇರೆ ಯಾವುದಾದರೂ ಕಾರಣಕ್ಕಾಗಿ ಸ್ಕ್ಯಾನಿಂಗ್ ನಡೆಸಿದಾಗ ಅನೇಕರಲ್ಲಿ ಲಿವರ್ನ ಊತದ ಸಮಸ್ಯೆ ಪತ್ತೆಯಾಗುತ್ತದೆ. ಇದಕ್ಕೆ ಫ್ಯಾಟಿ ಲಿವರ್ ಎನ್ನುತ್ತಾರೆ. ಇದರಿಂದ ತಕ್ಷಣಕ್ಕೆ ಸಮಸ್ಯೆಯಿಲ್ಲ ಎಂದು ಬಹಳ ಜನರು ಕಡೆಗಣಿಸಿಬಿಡುತ್ತಾರೆ. ಅದು ತಪ್ಪು. ಕೂಡಲೇ ಲಿವರ್ ತಜ್ಞರನ್ನು ಕಂಡು, ಫ್ಯಾಟಿ ಲಿವರ್ ಸಮಸ್ಯೆ ಸರಿಪಡಿಸಿಕೊಳ್ಳಲು ಔಷಧಿ ತೆಗೆದುಕೊಳ್ಳುವುದು ಒಳ್ಳೆಯದು. ಲಿವರ್ ಊತವನ್ನು ಬಹುಕಾಲ ಕಡೆಗಣಿಸಿದರೆ ಅದು ಫೈಬ್ರೋಸಿಸ್ ಸಮಸ್ಯೆಗೂ, ಕೊನೆಗೆ ಲಿವರ್
ಸಿರೋಸಿಸ್ಗೂ ಹೋಗುತ್ತದೆ. ಅದು ಜೀವಕ್ಕೇ ಕುತ್ತು ತರಬಹುದು.