ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 68
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಆಹಾರ ತಜ್ಞ ಕೆ.ಸಿ.ರಘು ಸಲಹೆ
ಬೆಂಗಳೂರು: ಪ್ರಸ್ತುತ ನಾವು ಎಲ್ಲ ವೈವಿಧ್ಯತೆಯನ್ನು ಕಳೆದುಕೊಂಡಿದ್ದೇವೆ. ವೈವಿಧ್ಯತೆಯನ್ನು ಗುರುತಿಸದೇ ಇರುವುದೇ ನಮ್ಮ ತಪ್ಪಾಗಿದೆ. ಆಹಾರದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು ಎಂದು ಎಂದು ಆಹಾರ ತಜ್ಞ ರಘು ಕೆ.ಸಿ.ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಆಯೋಜಿಸಿದ್ದ ಆಹಾರ-ಕಲಬೆರಕೆ-ಆರೋಗ್ಯ ಸಂವಾದದಲ್ಲಿ ಮಾತನಾಡಿ, ನಾವು ಹುಟ್ಟಿದಾಗಿನಿಂದಲೇ ಬುದ್ಧಿವಂತರು. ಆದರೆ ಕಲಿಯುತ್ತಾ ಕಲಿಯುತ್ತಾ ಅಜ್ಞಾನಿಗಳಾಗಿದ್ದೇವೆ. ವಿಜ್ಞಾನದಲ್ಲಿ ಎಲ್ಲವನ್ನೂ ಬಿಡಿಬಿಡಿಯಾಗಿ ಹೇಳಿದ್ದರಿಂದ ನಾವು ಇಡಿಯನ್ನು ಮರೆತು ಬಿಡಿಯನ್ನು ಹಿಡಿದುಕೊಂಡಿ ದ್ದೇವೆ. ಇವತ್ತು ನಾವು ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಕೇಳುತ್ತಿದ್ದೇವೆ. ಅನೇಕ ಪೋಷಕರು ಪರೀಕ್ಷಾ ಸಂದರ್ಭದಲ್ಲಿ ಮಕ್ಕಳಿಗೆ ಯಾವ ರೀತಿಯ ಪೌಷ್ಟಿ ಕಾಂಶಯುಕ್ತ ಆಹಾರವನ್ನು ಸೇವಿಸಬೇಕು ಎಂದು ಕೇಳುತ್ತಾರೆ.
ಆದರೆ ನಾವು ತಿನ್ನುವ ವೈವಿಧ್ಯವಾದ ಆಹಾರದಲ್ಲೇ ಪೌಷ್ಟಿಕಾಂಶವು ಅಡಗಿರುತ್ತದೆ ಎಂಬುದನ್ನು ಅರಿಯಬೇಕು. ಆಹಾರ ಅಂದರೆ ರಸಮಯ ಜಗತ್ತು. ಆನಂದ ವನ್ನು ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ನಮ್ಮ ಮೂಗಿನ ಕೆಳಗೇ ಇದೆ. ರಸಮಯ ಜಗತ್ತಿನಲ್ಲಿ ಇದು ಸಾಧ್ಯ. ಆದರೆ ನಾವು ಈ ರಸ ಗ್ರಂಥಿಗಳಿಗೆ ಉಣಬಡಿಸುತ್ತಿಲ್ಲ ಎಂದರು. ಕರೋನಾದಿಂದಾಗಿ ನಾವು ನಮ್ಮ ದೇಹದ ಹಿಡಿತವನ್ನು ವೈದ್ಯಕೀಯಕ್ಕೆ ಒತ್ತೆ ಇಟ್ಟು ಬದುಕುತ್ತಿದ್ದೇವೆ.
ಗಳಿಕೆಯ ಶೇ.90ರಷ್ಟನ್ನು ನಾವು ಆಸ್ಪತ್ರೆಗೆ ಖರ್ಚು ಮಾಡುತ್ತೇವೆ. 28 ಲಕ್ಷ ಆಹಾರಕ್ಕೆ ಖರ್ಚು ಮಾಡಿದರೆ 18 ಲಕ್ಷ ಕಾಯಿಲೆಗಾಗಿ ಆಸ್ಪತ್ರೆಗೆ ಸುರಿಯುತ್ತೇವೆ. ಆದರೆ ಅಮೆರಿಕದಂತಹ ದೇಶದಲ್ಲಿ ಊಟಕ್ಕೆ ೫ ಸಾವಿರ ಖರ್ಚು ಮಾಡಿದರೆ 12 ಸಾವಿರದಷ್ಟು ಆಸ್ಪತ್ರೆಗೆ ಖರ್ಚು ಮಾಡುತ್ತಾರೆ.
ಅಭಿವೃದ್ಧಿ ಹೊಂದಿದ ದೇಶದಲ್ಲೇ ಈ ಪರಿಸ್ಥಿತಿ ಇದೆ. ನಾವು ಆಹಾರ ಅಂದರೆ ಕಾಯಿಲೆಗೆ ಔಷಧ ದೃಷ್ಟಿಯಿಂದ ನೋಡುತ್ತೇವೆ. ಅದು ಬದಲಾಗಬೇಕು ಎಂದರು. ಜಗತ್ತಿನಲ್ಲಿ ವೈವಿಧ್ಯಮಯ ಆಹಾರಗಳಿರುತ್ತವೆ. ಹಣ್ಣುಗಳಲ್ಲೇ ಅನೇಕ ವಿಧವಾದ ಪೌಷ್ಟಿಕಾಂಶವಿರುತ್ತವೆ. ಆದರೆ ನಾವು ಅದನ್ನು ಗುರುತಿಸುತ್ತಿಲ್ಲ. ತಾಜಾ ಹಣ್ಣಿ ನಲ್ಲಿರುವ ಪೌಷ್ಟಿಕಾಂಶವು ಗ್ಯಾಸ್ ಚೇಂಬರ್‌ನಲ್ಲಿ ಶೇಖರಿಸಿಟ್ಟು ತಿನ್ನುವ ಪದಾರ್ಥಗಳಲ್ಲಿ ದೊರಕುವುದಿಲ್ಲ. ಆದಷ್ಟು ತಾಜಾತನ ಹೊಂದಿರುವ ತರಕಾರಿ, ಹಣ್ಣುಗಳನ್ನೇ ಸೇವಿಸಬೇಕು. ಆ ಪದಾರ್ಥಗಳನ್ನು ಸೇವಿಸುವಾಗ ನಾವು ಅದರ ತಾಜಾತನವನ್ನು ಅನುಭವಿಸಬೇಕು. ಆ ಅನುಭವದಿಂದ ನಮಗೆ ದೊರೆಯುವ ಆನಂದ ಬೇರೊಂದರಲ್ಲಿ ಇಲ್ಲ ಎಂದರು.
ಆಹಾರದಲ್ಲಿ ಕಲಬೆರಕೆ
ಪ್ರಸ್ತುತ ನಾವು ತಿನ್ನುವ ಹೆಚ್ಚಿನ ಪದಾರ್ಥಗಳು ಕಲಬೆರಕೆಯಾಗಿದೆ. ನಮಗೆ ನೀಡಲಾಗುವ ಶೇ.80ರಷ್ಟು ಆಂಟಿಬಯೋಟಿಕ್ ಕಲಬೆರಕೆಯಿಂದಾಗಿದೆ. ಇದನ್ನು ಪ್ರಾಣಿಗಳ ತೂಕ ಹೆಚ್ಚಳ ಮಾಡಲು ಬಳಸಲಾಗುತ್ತಿದೆ. ಪ್ರಸ್ತುತ ಸೋಯಾಬೀನ್‌ನ್ನು ಜೆನೆಟಿಕ್ ಮಾಡಿಫಿಕೇಷನ್‌ಗೆ ಒಳಪಡಿಸುತ್ತಿದ್ದಾರೆ. ಇದನ್ನು ತಿಂದರೆ ತೊಂದರೆ ಆಗಬಹುದಾಗಿದೆ. 20 ವರ್ಷಗಳಿಂದ ಅಮೆರಿಕದವರು ಇದನ್ನು ತಿನ್ನುತ್ತಿದ್ದಾರೆ. ಅವರಿಗೇನೂ ಆಗಿಲ್ಲವಲ್ಲ ಎನ್ನುವ ವಾದ ಬರಬಹುದು. ಆದರೆ ಅವರೂ ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದಾರೆ ಎಂಬುದು ಅರಿತುಕೊಳ್ಳಬೇಕಾದ ಸತ್ಯ ಎಂದು ರಘು ಹೇಳಿದರು.
***
*ಜಗತ್ತಿನಲ್ಲಿ ತಾಯಿಯ ಎದೆ ಹಾಲಿಗಿಂತ ಅಮೃತ ಇನ್ನೊಂದಿಲ್ಲ.
*ಊಟ, ಆಹಾರ, ಪೌಷ್ಟಿಕಾಂಶ ಅಭ್ಯಾಸ, ಜೀವನಕ್ರಮದಿಂದ ಸಾಧ್ಯ.
*ಆಹಾರ ಎಂದರೆ ರಸಮಯ ಜಗತ್ತು. ಆಸ್ವಾದಿಸಿ ಅನುಭವಿಸಿದರೆ ಪಡೆಯಲು ಸಾಧ್ಯ.
*ನಮ್ಮನ್ನು ನಾವು ಕಂಡುಕೊಳ್ಳಲು ರಸಮಯ ಜಗತ್ತಿನಲ್ಲಿ ಸಾಧ್ಯ.
*ನಮ್ಮ ನಾಲಿಗೆ, ಮೂಗಿನಲ್ಲಿಯೇ ರಸಗ್ರಂಥಿಗಳಿವೆ.
*ಆಹಾರಕ್ರಮದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು.
*ಹೊಸ ಜಗತ್ತಿನ ಅರಿವಿಗೆ ದೃಷ್ಟಿಕೋನ ಬದಲಿಸಿಕೊಳ್ಳಬೇಕು.
*ಸಂಸ್ಕರಣೆಯಿಂದಲೇ ಪೌಷ್ಟಿಕಾಂಶವನ್ನು ಕಳೆಯುತ್ತೇವೆ.