Saturday, 23rd November 2024

ದ್ವಂದ್ವ ತುಂಬಿರುವ ಜೀವನದಲ್ಲಿ ಶಾಂತಿ ನೆಲೆಸಲಿ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 70

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲಿ ದ್ವಂದ್ವಗಳು ಇರುತ್ತವೆ. ದ್ವಂದ್ವದಿಂದ ತುಂಬಿರುವ ಜೀವನದಲ್ಲಿ ಶಾಂತಿ, ವಿಶ್ವಾಸ, ಪ್ರೀತಿ ನೆಲೆಸಬೇಕಿದೆ. ನಮ್ಮ ಶರೀರ ವರ್ತಮಾನದಲ್ಲಿದ್ದರೂ, ಮನಸ್ಸು ಭೂತ-ಭವಿಷ್ಯದಲ್ಲಿ ತೊಯ್ದಾಡುತ್ತಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಂಸ್ಥಾಪಕರಾದ ಶ್ರೀ ರವಿಶಂಕರ ಗುರೂಜಿ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮನಸ್ಸಿನ ಉತ್ಸಾಹಕ್ಕೆ ಧ್ಯಾನ, ಪ್ರಾಣಾಯಮ ಮಾಡಬೇಕು. ಮನಸ್ಸು ವಿಶಾಲವಾಗಿರಬೇಕು. ಧ್ಯಾನ, ಜ್ಞಾನ, ರಾಗದಿಂದ ಜೀವನ ಕೂಡಿರಬೇಕು. ಸಂಗೀತ ಜೀವನದ ಅಂಗವಾಗಿರಬೇಕು. ಸಂಗೀತದಿಂದ ಶರೀರ ಹಾಗೂ ಮನಸ್ಸಿಗೆ ಉತ್ಸಾಹ ಬರುತ್ತದೆ. ಧ್ಯಾನ ಮಾಡಿದಾಗ ಮನಸ್ಸು ಶುದ್ಧವಾಗುತ್ತದೆ. ಧ್ಯಾನದಿಂದ ಹುರುಪು ಉತ್ಸಾಹ ಸಿದ್ದಿಯೂ ಆಗುತ್ತದೆ ಎಂದರು. ನಮ್ಮಲ್ಲಿ ಯೋಗ, ಪ್ರಾಣಯಾಮ, ವೇದಾಂತ, ಸಾಹಿತ್ಯ ಓದಿನಿಂದ ಜ್ಞಾನ ಬಂದಿದೆ. ಓದಿದ್ದು, ತಿಳಿದಿದ್ದು, ಸಿದ್ಧಾಂತ ಒಂದು ಕಡೆ ಇಟ್ಟು, ಜೀವನ ಕುರಿತು ಅವಲೋಕಿಸಿಕೊಳ್ಳಬೇಕು. ವಿರೋಧಾತ್ಮಕ ಜೀವನ ಘಟನೆಗಳು ಒಂದಕ್ಕೊಂದು ಪೂರಕ ಎಂದರು.

ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು ಎಂದು ತಿಳಿಯಬೇಕು. ಇವತ್ತಿನ ಸೋಲು, ನಾಳಿನ ಗೆಲುವಿಗೆ ಕಾರಣ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಮಾಡಬೇಕು. ಪರಿಸ್ಥಿತಿ ಹೇಗಿದೆಯೋ ಹಾಗೆ ಸ್ವೀಕಾರ ಮಾಡಬೇಕು. ಬೇರೆಯವರು ನಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂದು ತಲೆಕೆಡಿಸಿ ಕೊಳ್ಳಬಾರದು ಎಂಬ ಸಂದೇಶ ಸಾರಿದರು.

ನಮ್ಮೊಳಗೆ ಅಂತಃಶಕ್ತಿ, ಇಂದ್ರಿಯ ಶಕ್ತಿಗಿಂತಲೂ ಹೆಚ್ಚು ಪ್ರಭಾವಶಾಲಿ: ನಮ್ಮ ಮಿದುಳನ್ನು ಶೇ.೩ರಷ್ಟು ಬಳಕೆ ಮಾಡುತ್ತಿದ್ದೇವೆ. ಮಕ್ಕಳ ಕಣ್ಣಿಗೆ ಬಟ್ಟೆ ಕಟ್ಟುವ ಮೂಲಕ ಮನಸ್ಸಿನ ಕಣ್ಣಿನಿಂದ ವಸ್ತುಗಳನ್ನು ಗುರುತಿಸುವ ತರಬೇತಿ ನೀಡಲಾಗುತ್ತಿದೆ. ಕಣ್ಣುಗಳು ಕೆಲಸ ಮಾಡ ದಿದ್ದರೂ ಮನಸ್ಸಿನಿಂದ ಎಲ್ಲವನ್ನೂ ಗುರುತಿಸುವಂತೆ ಮಾಡಲಾಗುತ್ತಿದೆ. ಅಂಧ ವಿದ್ಯಾಲಯಗಳಲ್ಲಿ ಇಂತಹ ತರಬೇತಿ ನಡೆಯುತ್ತಿದೆ. ಧ್ಯಾನದ ಮೂಲಕ ಬದುಕಿ ನಲ್ಲಿ ಶಾಂತಿ,  ನೆಮ್ಮದಿ, ಸ್ಥಿರತೆ ಹಾಗೂ ಏಕಾಗ್ರತೆಗಳು ಮೂಡುತ್ತವೆ.

ದೈನಂದಿನ ಬದುಕಿನಲ್ಲಿ ಚೈತನ್ಯ ಮೂಡುತ್ತದೆ. ಆಗ ಉಲ್ಲಾಸ ನಿಮ್ಮ ಹೃದಯದಲ್ಲಿ ಸ್ಥಾನ ಪಡೆಯುತ್ತದೆ. ಸದಾ ಕಾಲ ನಗು ನಿಮ್ಮದಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಧ್ಯಾನ ಬದಲಾವಣೆ ಮೂಡಿಸಿದೆ. ಜೀವನದಲ್ಲಿ ಏರಿಳಿತಗಳನ್ನು, ಸವಾಲುಗಳನ್ನು ಸುಲಭವಾಗಿ ಎದುರಿಸುವ ತಾಳ್ಮೆಯನ್ನು, ನಿಧಾನತೆಯನ್ನು ನೀಡಿದೆ. ಧ್ಯಾನಕ್ಕೆ ಅಗಾಧವಾದ, ಅಗೋಚರ ಶಕ್ತಿ ಇದೆ ಎಂದು ಹೇಳಿದರು.

ಉಗ್ರರ ಮನಸ್ಥಿತಿ ಬದಲಾವಣೆಗೆ ಪ್ರಯತ್ನ

ಆಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಂತಹ ಕಲ್ಲು ಹೃದಯವೂ ಕರಗುತ್ತದೆ. ಅಪ್ಘಾನಿಸ್ತಾನ ದಿಂದ 240 ಜನರನ್ನು ಜರ್ಮನಿಗೆ ಕೊಂಡೊ ಯ್ಯಲು ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಭಯೋತ್ಪಾದಕರ ಮನಸ್ಥಿತಿ ಬದಲಾವಣೆ ಮಾಡಲು ಬಹಳ ಸಮಯ ಬೇಕಾಗುತ್ತದೆ. ಮುಂದೆ ಪ್ರಯತ್ನ ಮಾಡ ಲಾಗುತ್ತದೆ ಎಂದು ಶ್ರೀ ರವಿಶಂಕರ ಗುರೂಜಿ ಹೇಳಿದರು.

ಗುರೂಜಿ ನೀಡಿದ ಸಂದೇಶಗಳು ಭೂತಕಾಲದ ಬಗ್ಗೆ ಆಕ್ರೋಶ, ಭವಿಷ್ಯದ ಬಗ್ಗೆ ಆತಂಕ ಬೇಡ ಧ್ಯಾನವೆಂದರೆ ಏಕಾಗ್ರತೆಯೊಂದೇ ಅಲ್ಲ, ಮನಸ್ಸನ್ನು ಶಾಂತಿ ಗೊಳಿಸುವ ಕಲೆ ಎಲ್ಲರೂ ವಿಶ್ವಮಾನವತೆ ಕಡೆ ಹೋಗಬೇಕಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಧರ್ಮಕ್ಕಿಂತ ಮೇಲಾಗಿ ಅಧ್ಯಾತ್ಮಿಕತೆ ಹೆಚ್ಚಾಗಬೇಕು ಕ್ಲಬ್‌ಹೌಸ್ ಎಂದರೆ ಮಾತಿನಿಂದಲ್ಲ, ಮನಸ್ಸಿನಿಂದ ಸೇರುವುದು. ನಕಾರಾತ್ಮಕ ಚಿಂತನೆಗಳಿಂದ ದೂರವಾಗಿರಬೇಕು ವಿಶ್ವವಾಣಿ ಕ್ಲಬ್‌ಹೌಸ್ ಉತ್ತಮ ವ್ಯಕ್ತಿಗಳ ಕೂಟವಾಗಿ ಮುಂದುವರಿಯಲಿ.

***

ಶ್ರೀ ಶ್ರೀ ರವಿವಿಶಂಕರ ಗುರೂಜಿ ಅವರು ಕನ್ನಡಿಗರು. ಮಾನವೀಯ ಮೌಲ್ಯ ಹಾಗೂ ಶಾಂತಿಯ ಮಂತ್ರ ಸಾರುವ ಅಗ್ರಮಾನ್ಯರು. ಇವರ ಮಧ್ಯಸ್ಥಿಕೆಯಿಂದ
ಎಷ್ಟೋ ಜಾಗತಿಕ ಸಮಸ್ಯೆಗಳು ಇತ್ಯರ್ಥವಾಗಿವೆ. ಆರ್ಟ್ ಆಫ್ ಲಿವಿಂಗ್, ಇಂಟರ್ ನ್ಯಾಷನಲ್ ಅಸೋಶಿಯನ್ ಫಾರ್ ಹ್ಯೂಮನ್ ವ್ಯಾಲ್ಯೂಸ್ ಸ್ಥಾಪಿಸಿದ್ದಾರೆ. ಭಾರತದಲ್ಲಿ 702 ಶಾಲೆಗಳನ್ನು ಸ್ಥಾಪಿಸಿ, 70 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಜಗತ್ತಿನಲ್ಲಿ ಸ್ವಯಂ ಸೇವಕರ ಬೃಹತ್ ಸಮುದಾಯ ಕಟ್ಟಿದ್ದಾರೆ. ಜಗತ್ತಿನಾದ್ಯಂತ ಸೇವೆ, ಪ್ರೀತಿ, ಶಾಂತಿ ಸಂದೇಶ ಸಾರುತ್ತಿದ್ದಾರೆ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು