ಅಭಿಮತ
ಇಂದುಧರ ಹಳೆಯಂಗಡಿ
ಅದೊಂದು ಕಾಲವಿತ್ತು. ಒಲಿಂಪಿಕ್ಸ್ ಕೂಟದಲ್ಲಿ ಭಾರತಕ್ಕೆ ಒಂದು ಪದಕ ಬಂದರೂ ಸಂಭ್ರಮ. ಕನಿಷ್ಠ ಒಂದು ಕಂಚಿನ ಪದಕವಾದರೂ ಬರಲಿ ಎಂದು ಕ್ರೀಡಾ ತಂಡಕ್ಕೆ ಹಾರೈಸುತ್ತಿದ್ದರು. ಆದರೆ 2012ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು 6 ಪದಕಗಳನ್ನು ಗೆದ್ದಾಗ ದೇಶದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಕೇವಲ 2 ಪದಕಗಳನ್ನು ಗೆದ್ದಿದ್ದರು. ಇದೇ ಕಾರಣಕ್ಕೆ ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್, ಕಬಡ್ಡಿ, ಹಾಕಿ ಎಂದು ಹಲವರು ಟೀಕಿಸಿದ್ದೂ ಉಂಟು. ಆದರೆ ಎಲ್ಲವೂ ಬದಲಾದದ್ದು 2020ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ. ನಿರೀಕ್ಷೆಗೂ ಮೀರಿ ಭಾರತವು ಕ್ರಮವಾಗಿ 7 ಮತ್ತು 19 ಪದಕಗಳನ್ನು ಗೆದ್ದಿತು. ಎರಡೂ ಕೂಟದಲ್ಲೂ ಐತಿಹಾಸಿಕ ಸಾಧನೆ. ಇದಕ್ಕೆಲ್ಲವೂ ಒಂದು ಪ್ರಮುಖ ಕಾರಣವೇ ಕೇಂದ್ರ ಸರಕಾರ 2014ರಲ್ಲಿ ಜಾರಿಗೆ ತಂದ ಟಾಪ್ ಯೋಜನೆ!
ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಕೇಂದ್ರ ಕ್ರೀಡಾ ಸಚಿವಾಲಯವು 2014 ರ ಸೆಪ್ಟೆಂಬರ್ ನಲ್ಲಿ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾ) ಅನ್ನು ಆರಂಭಿಸಿತು. ಕ್ರೀಡಾಪಟುಗಳಿಗೆ ಸಮಗ್ರ ಬೆಂಬಲವನ್ನು ನೀಡುವ ಸಲುವಾಗಿ ಏಪ್ರಿಲ್ 2018 ರಲ್ಲಿ ಇದನ್ನು ಇನ್ನಷ್ಟು ಪರಿಷ್ಕರಿಸಲಾಯಿತು. ಇದರ ಅಡಿಯಲ್ಲಿ ವಿದೇಶದಲ್ಲಿ ತರಬೇತಿ, ಗುಣಮಟ್ಟದ ಕೋಚಿಂಗ್ ಸೌಲಭ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತಯಾರಿ, ಅಗತ್ಯ ಸಲಕರಣೆಗಳು ಹೀಗೆ ಎಲ್ಲಾ ರೀತಿಯ ತರಬೇತಿ ಯನ್ನು ನೀಡಲಾಗುತ್ತದೆ.
ಟಾಪ್ಸ್ ಕೇಂದ್ರ ಕ್ರೀಡಾ ಸಚಿವಾಲಯದ ಒಂದು ಪ್ರಮುಖ ಯೋಜನೆಯಾಗಿದ್ದು, ಇದು ಭಾರತದ ಅಗ್ರ ಕ್ರೀಡಾ ಪಟುಗಳಿಗೆ ನೆರವು ನೀಡುತ್ತದೆ. ಈ ಕ್ರೀಡಾಪಟು ಗಳ ತಯಾರಿಗೆ ಹೆಚ್ಚಿನ ಅಗತ್ಯ ಸೌಲಭ್ಯಗಳನ್ನು ಸೇರಿಸಲು ಇದು ಪ್ರಯತ್ನಿಸುತ್ತಿದೆ. ಈ ಯೋಜನೆಯು ಪ್ರಸ್ತುತ 13 ವಿವಿಧ ಕ್ರೀಡಾ ವಿಭಾಗದ 104 ಟಾಪ್ಸ್ ಕೋರ್ ಗ್ರೂಪ್ ಕ್ರೀಡಾಪಟುಗಳನ್ನು, ಹಾಕಿ (ಪುರುಷರ ಮತ್ತು ಮಹಿಳೆಯರ) ತಂಡಗಳು ಮತ್ತು 12 ವಿವಿಧ ಕೀಡಾ ವಿಭಾಗದ 269 ಟಾ ಡೆವಲಪ್‌ಮೆಂಟ್ ಗ್ರೂಪ್‌ನಲ್ಲಿರುವ ಕ್ರೀಡಾಪಟುಗಳಿಗೆ ತನ್ನ ಬೆಂಬಲವನ್ನು ನೀಡುತ್ತಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಮಿಷನ್ ಒಲಿಂಪಿಕ್ ಸೆಲಅನ್ನು ರಚಿಸಲಾಗಿದೆ. ಇದೊಂದು ಆಯ್ಕೆ ಮತ್ತು ಪರಿಶೀಲನಾ ಸಮಿತಿಯಾಗಿದ್ದು, ಟಾಪ್ಸ್ ಯೋಜನೆಯ ಅಡಿಯಲ್ಲಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು, ಪ್ರತಿ ವಾರ ಅವರ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ. ಪ್ರಮುಖವಾಗಿ ಪ್ರತಿ ಕ್ರೀಡಾಪಟುಗಳ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸುವುದು, ಯೋಜನೆಗೆ ಹಣಕಾಸಿನ ವಿತರಣೆಯನ್ನು ಶಿಫಾರಸು ಮಾಡುವುದು, ಕ್ರೀಡಾಪಟು ಗಳಿಗೆ ಬೆಂಬಲ, ಅವರ ಮೇಲ್ವಿಚಾರಣೆ ಮತ್ತು ಪರಿಶೀಲನೆ, ಕ್ರೀಡಾಪಟುಗಳ ಒಪ್ಪಂದದ ಬಾಧ್ಯತೆಗಳನ್ನು ಖಚಿತಪಡಿಸಿಕೊಳ್ಳುವುದಾಗಿದೆ.
ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ, ಕ್ರೀಡೆಗೆ ಕೇವಲ ಹಣ ಮತ್ತು ಸಂಪನ್ಮೂಲಗಳ ವಿಷಯದಲ್ಲಿ ಪ್ರೋತ್ಸಾಹ ಮಾತ್ರವಲ್ಲದೆ, ದೇಶದಿಂದ ಭಾವನಾತ್ಮಕ ಬೆಂಬಲದ ಅಗತ್ಯ ವಿರುತ್ತದೆ. ಈ ಬಾರಿಯ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಇಡೀ ರಾಷ್ಟ್ರದಿಂದ ಅಗಾಧವಾದ ಬೆಂಬಲ ವನ್ನು ಪಡೆದರು. ಹಾಗಂತ ಕ್ರೀಡಾಪಟುಗಳ ಪರಿಶ್ರಮವನ್ನು ಅಲ್ಲಗೆಳೆಯುವಂತಿಲ್ಲ. ಅವರ ಕಠಿಣ ತಪಸ್ಸಿಗೆ ಕೈ ಜೋಡಿಸಿದ್ದು ಕೇಂದ್ರ ಕ್ರೀಡಾ ಸಚಿವಾಲಯ ಎಂದೇ ಹೇಳಬಹುದು.
ಹಾಗೆ ನೋಡಿದರೆ, ಟಾಪ್ಸ್ ಎಲ್ಲಾ ರೀತಿಯಲ್ಲೂ ಸರಿಯಾಗಿದೆ ಎಂದೇನಿಲ್ಲ. ಇದರೊಳಗೆ ಇನ್ನಷ್ಟು ಹೊಸ ನೀತಿಗಳನ್ನು ಹಾಕಬೇಕಾಗಿದೆ. ಹೊಸಬರಿಗೆ ಅವಕಾಶ ಗಳನ್ನು ನೀಡದಿರುವುದು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾದ ಕ್ರೀಡಾಪಟುಗಳಿಗೆ ಬೆಂಬಲವನ್ನು ನಿಲ್ಲಿಸುವುದು, ಕೆಲವು ಸೇವೆಗಳನ್ನು ಸಮಯಕ್ಕೆ ಸರಿಯಾಗಿ ನೀಡದಿರುವುದು ಇತ್ಯಾದಿ ಟೀಕೆಗಳು ಕೇಳಿ ಬಂದಿವೆ. ಕೆಲವು ಕ್ರೀಡಾ ವಿಭಾಗಗಳಿಗೆ ಟಾಪ್ಸ್ ಯೋಜನೆ ವಿಸ್ತಾರ ಆಗದಿರುವುದೂ ಹಿನ್ನೆಡೆಗೆ ಕಾರಣ ವಾಗಿದೆ. ಆದರೆ ನ್ಯೂನತೆಗಳ ಹೊರತಾಗಿಯೂ, ಟಾಪ್ಸ್ ಕ್ರೀಡಾಪಟುಗಳ ಇತ್ತೀಚಿನ ಯಶಸ್ಸು, ಒಲಿಂಪಿಕ್ಸ್ ಮಾತ್ರವಲ್ಲದೆ, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯರ ಯಶಸ್ಸು, ಟಾಪ್ಸ್ ಭರವಸೆಯ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಸಾಬೀತುಪಡಿಸುತ್ತದೆ.