Saturday, 23rd November 2024

ಹಿರಿಯರ ಋಣ ತೀರಿಸಲು ಪಿತೃಪಕ್ಷ ಆಚರಣೆ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 92

ವಿಶ್ವವಾಣಿ ಕ್ಲಬ್‌ಹೌಸ್‌ನ ಅರಿವಿನ ಉಪನ್ಯಾಸ ಕಾರ್ಯಕ್ರಮದಲ್ಲಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಮಾಹಿತಿ

ಬೆಂಗಳೂರು: ನಮ್ಮ ಹಿರೀಕರು ನಮ್ಮ ಋಣ ಪೂರ್ಣಗೊಳಿಸಲು ನೀತಿ ನಿಯಮಗಳನ್ನು ಹಾಕಿಕೊಟ್ಟಿದ್ದಾರೆ. ತಂದೆ ತಾಯಿಯ ಯಾವುದಾದರೊಂದು ಋಣವನ್ನು
ತೀರಿಸಬೇಕು. ಮಹಾಲಯ ಅಮಾವಾಸ್ಯೆಯಂದು ಎಲ್ಲಾ ಪಿತೃಗಳ ದಿನ. ಇದನ್ನು ಪಿತೃಪಕ್ಷ ಎನ್ನಲಾಗುತ್ತದೆ ಎಂದು ವೇದಬ್ರಹ್ಮ ಡಾ.ಭಾನುಪ್ರಕಾಶ್ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಿಂದ ಆಯೋಜಿಸಲಾದ ಪಿತೃಪಕ್ಷ ಪುಣ್ಯಪಕ್ಷ: ಅರಿವಿನ ಉಪನ್ಯಾಸ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಭಾದ್ರಪದ ಮಾಸದ ಕೃಷ್ಣಪಕ್ಷದ ಅಮಾವಾಸ್ಯೆವರೆಗೆ ಪಿತೃಪಕ್ಷ. 15 ದಿನ ಜನರು ನಮ್ಮ ಗತಿಸಿದ ಪಿತೃಗಳಿಗೆ ಎಡೆ ನೀಡುವುದಾಗಿದೆ. ಎಲ್ಲಾ ದೇವತೆಗಳ ಹಬ್ಬವಾಗಿದ್ದು, ಎಲ್ಲಾ ದೇವತೆಗಳನ್ನು ತೃಪ್ತಿಗೊಳಿಸಲಾಯಿತು.

ಪ್ರತಿಯೊಬ್ಬರಿಗೂ ಮೂರು ಋಣವಿದೆ. ದೇವ ಋಣ, ಋಷಿ ಋಣ, ಪಿತೃಋಣ. ದೇವ ಋಣ ಎಂದರೆ ಶಾಸ್ತ್ರ ಸಂಪ್ರದಾಯದಂತೆ ದೇವರಿಗೆ ಹಣ್ಣು, ನೈವೇದ್ಯ ಮಾಡಿ ದೈನಂದಿನ ಕ್ರಮದಂತೆ ಆಚರಣೆಗಳಿಂದ ಋಣಮುಕ್ತ ರಾಗುವುದು. ಇನ್ನು ಋಷಿ ಋಣ ಎಂದರೆ ಅಪರಕರ್ಮಗಳನ್ನು ಮಾಡಿಕೊಳ್ಳುತ್ತೇವೆ. ಗುರುಋಣ ತೀರಿಸುವ ವಿಶೇಷ ದಿನ. ನಾಲ್ಕು ಪೌರ್ಣಮಿಗಳಲ್ಲಿ ನದಿಸ್ನಾನ ಮಾಡಿ ಅರ್ಘ್ಯ ಕೊಡುತ್ತಾರೆ ಈ ಮೂಲಕ ಸಮಾಪ್ತಿ ಯಾಗುತ್ತದೆ ಹಾಗೂ ಸಾಧು ಸಂತರ ಪಾದೋದಕ ಕುಡಿದು, ಪಾದವನ್ನು ತೊಳೆಯುವ ಮೂಲಕ ಪಾಪಕಳೆದುಕೊಂಡು ಋಣಮುಕ್ತರಾಗುತ್ತಾರೆ.

ಅನೇಕ ಸಂಸ್ಕಾರ: ಇನ್ನು ಪಿತೃಋಣ ತಂದೆ ತಾಯಿಗೆ ಯಾವುದಾದರೊಂದು ಋಣ ತೀರಿಸಬೇಕು. ಒಂದು ಮಗು ಹುಟ್ಟಲು ಮೊದಲು ಗರ್ಭದಲ್ಲೇ ತಾಯಿ ತಂದೆಯರು ಸಂಸ್ಕಾರವನ್ನು ನೀಡಿರುತ್ತಾರೆ. ಗಂಡು ಹೆಣ್ಣು ಮದುವೆಯ ಸಂದರ್ಭದಲ್ಲಿ ಗರ್ಭದಾನ ಮಂತ್ರಗಳಿಂದ ಭೋಗವಾದಾಗ ಸಂಸ್ಕಾರವಾಗುತ್ತದೆ. ಮಗು ಚೆನ್ನಾಗಿ ಬೆಳೆಯಲಿ ಎಂದು ಸೀಮಂತ ಮಾಡುತ್ತೇವೆ. ಬಳಿಕ ಮಗು 9 ತಿಂಗಳು 16 ದಿನ ಬಳಿಕ ಮಗು ಜನನವಾಗುತ್ತದೆ. ಮಗು ಬೆಳೆಯುತ್ತಾ ಅಕ್ಷರಾ ಭ್ಯಾಸದಂತಹ ಅನೇಕ ಸಂಸ್ಕಾರಗಳನ್ನು ನೀಡುತ್ತಾರೆ. ಮಗು ಬೆಳೆಯುತ್ತಾ ಶಾಸ್ತ್ರ ಸಂಪ್ರದಾಯದ ಮೂಲಕ ವಿವಾಹ ಸಂಸ್ಕಾರವೂ ಮಾಡ್ತಾರೆ. ಹೀಗೆ 15 ಸಂಸ್ಕಾರಗಳನ್ನು ಮಾಡುತ್ತಾರೆ. ನಮ್ಮಲ್ಲಿ ಶಾಸ್ತ್ರಬದ್ಧವಾಗಿ ಎಲ್ಲವೂ ನಡೆಯಬೇಕು. ಎಲ್ಲಾ ಸಂಸ್ಕಾರಗಳು ಇಂದು ಲೋಪವಾಗು ತ್ತಿವೆ.

ಇದರಿಂದ ಪ್ರಕೃತಿವಿಕೋಪಗಳಂತಹ ಅನೇಕ ತೊಂದರೆಗಳುಂಟಾಗುತ್ತದೆ. 16ನೇ ಸಂಸ್ಕಾರ ಪೈತ್ರುಮಂದಿರ ಸಂಸ್ಕಾರ-ಔರ್ದದೈಹಿಕ ಸಂಸ್ಕಾರ ಎಂದೂ ಕರೆಯಲಾಗುತ್ತದೆ. ಮೊದಲ ದಿನಾರಾಭ್ಯವಾಗಿ ಪಂಚ ಗವ್ಯಾದಿಗಳಿಂದ ಶುದ್ಧಿ ಮಾಡಿ ಪ್ರಾಣಪ್ರತಿಷ್ಠಾಪನೆ ಮಾಡಿ ಧರ್ಮದಂತೆ ಅಗ್ನಿ ಸ್ಪರ್ಶ ಮಾಡುತ್ತಾರೆ.

ನಮ್ಮಲ್ಲಿ ಅಗ್ನಿಯಿಂದ ಸುಡುವ ಸಂಸ್ಕಾರ, ನದಿಯಲ್ಲಿ ವಿಸರ್ಜಿಸುವ ಸಂಸ್ಕಾರ, ಸನ್ಯಾಸಿಗಳಲ್ಲಿ, ಪಾರ್ಸಿಗಳಲ್ಲಿ ಆಕಾಶತತ್ವ ಅಂದರೆ ದೇಹದ ಚರ್ಮವನ್ನು ಸುಲಿದು ಎಲೆಯಲ್ಲಿ ಹದ್ದುಗಳಿಗೆ ಇಡುತ್ತಾರೆ, ಭೂಮಿಯಲ್ಲಿ ಖನನ ಸಂಸ್ಕಾರ ಅಂದರೆ ಗುಂಡಿಯಲ್ಲಿ ಹೂಳುವಿಕೆಯಂತಹ ಸಂಸ್ಕಾರಗಳಿವೆ.

ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹ: 10 ದಿನಗಳು ಆತ್ಮಕ್ಕೆ ಆಹಾರ, ದಾಹ, ಸುಟ್ಟಿರುವ ಚರ್ಮಕ್ಕೆ 10 ದಿನ ಮಗ ಮೂಲಕ ಕರ್ಮದೀಕ್ಷೆಯನ್ನು ಪಡೆದು ಸಂಸ್ಕಾರ ವನ್ನು ನೀಡುತ್ತಾನೆ. ಅಗ್ನಿಯಲ್ಲಿ ಆಹುತಿ ನೀಡುವುದು ಸಂಸ್ಕಾರ ಅದು ಹೆಣ ಸುಡುವುದಲ್ಲ. ಪಿಂಡ ಪ್ರದಾನ, ಪಾದ್ಯ, ಅರ್ಘ್ಯ ಕೊಡುತ್ತಾರೆ. ಇದನ್ನು ಪ್ರೇತ ಅಂತಾರೆ. 10 ದಿನಗಳ ಕಾಲ ಬೇಕಾದ ಸಂಸ್ಕಾರವನ್ನು ಪ್ರತಿ ದಿನ ಒಂದೊಂದು ಪಿಂಡ ಪ್ರದಾನ ಮಾಡಲಾಗುತ್ತದೆ. ಸುಟ್ಟ ಬಳಿಕ ಮೂರನೇ ದಿನ ಅಸ್ಥಿ ಸಂಚಯನ. 21 ಮೂಳೆ ಚೂರುಗಳನ್ನು ಸಂಗ್ರಹಿಸಲಾಗುತ್ತದೆ. ಈ ಅಸ್ಥಿಗಳನ್ನು ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸಲಾಗುತ್ತದೆ. ತಾಯಿ ಸ್ವರೂಪವಾದ ಮಣ್ಣನ್ನು ಬಳಸಲಾಗುತ್ತದೆ. ಇನ್ನು ಈ ಅಸ್ಥಿಗಳನ್ನು ಸಂಗಮದ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಈ ಅಸ್ಥಿ ವಿಸರ್ಜಿಸಲಾದ ಬಳಿಕ ಸಮುದ್ರ ಸೇರಿ ಮೋಡದಲ್ಲಿ ಸೇರಿ ಕೊಳ್ಳುತ್ತದೆ. ಮಳೆಯಾಗಿ ಭೂಮಿಯಲ್ಲಿ, ಮರಗಳಲ್ಲಿ ಹಣ್ಣಾಗಿ, ಭತ್ತದ ತೆನೆಯಲ್ಲಿ ಸೇರಿಕೊಂಡು, ಅವುಗಳನ್ನು ಸೇವಿಸಿದಾಗ ಅಕ್ಕಿಯ ರೂಪದಲ್ಲಿ ಮನುಷ್ಯ ಸೇವಿಸಿದಾಗ ಇದು ರಕ್ತದೊಂದಿಗೆ ಸೇರಿ ವೀರ್ಯ ಕಣಗಳಾಗಿ ಮರುಹುಟ್ಟಿಗೆ ಕಾರಣವಾಗುತ್ತದೆ.

10ನೇ ದಿನದವರೆಗೂ ಸಂಸ್ಕಾರ ಮಾಡಲಾಗುತ್ತದೆ. 10ನೇ ದಿನ ಧರ್ಮೋದಕ ನೀಡಲಾಗುತ್ತದೆ. 11ನೇ ದಿನ 32 ಕವಳದ ಊಟವನ್ನು ನೀಡಲಾಗುತ್ತದೆ.
12ನೇ ಸಪಿಂಡೀಕರಣ ಇದರಲ್ಲಿ ಪಿಂಡದಲ್ಲಿ ಪಿಂಡವನ್ನು ಸೇರಿಸಲಾಗುತ್ತದೆ. ದರ್ಬೆಯಿಂದ ಮೂರು ಭಾಗಗಳಾಗಿ ಮಾಡಿ, 3 ಅಂಶಗಳನ್ನಾಗಿ ಮಾಡಲಾ ಗುತ್ತದೆ. ಈ ಮೂಲಕ ಪಿತೃಗಳ ಋಣಮುಕ್ತರಾಗಬೇಕು. 15 ದಿನಗಳ ಕಾಲ ಅಂಚಿಲ್ಲದೇ ಇರುವ ಶ್ವೇತ ವಸ್ತ್ರವನ್ನು ಧರಿಸಬೇಕು. 11ನೇ ದಿನ ಮುಂಡನ ಶಾಸ್ತ್ರವನ್ನು ಮಾಡಲಾಗುತ್ತದೆ. ಅಪರಕರ್ಮದಲ್ಲಿ ತಂದೆ ತಾಯಿ ಗುರುವಿಗಾಗಿ ಕೇಶಮುಂಡನವನ್ನು ಮಾಡಲಾಗುತ್ತದೆ. ಬರಿ ಚಾಪೆ ಮೇಲೆ ಮಲಗಿ ಪಿತೃಋಣವನ್ನು ತೀರಿಸಬಹುದು. 11ನೇ ದಿನದ ಬಳಿಕ ಆವೃತ್ತಾದಿ ಮಾಸಿಕವನ್ನು ಮಾಡಬೇಕಾಗುತ್ತದೆ.

ಈ ಮೂಲಕ ಪಿತೃಋಣವನ್ನು ತೀರಿಸಬಹುದು. ಆಷಾಢದಿಂದ ಶ್ರಾವಣದವರೆಗೆ, ಶ್ರಾವಣದಿಂದ ಭಾದ್ರಪದದವರೆಗೆ ಬಳಿಕ 15 ದಿನ ಪಿತೃಗಳಿಗಾಗಿ ಇರುವ ವಿಶೇಷ ದಿನವಾಗಿದೆ. ಮಹಾಭರಣಿ 24ನೇ ತಾರೀಕು ಪಕ್ಷವನ್ನು ಮಾಡಬಹುದು. ಮಹಾಲಯ ಅಮಾವಾಸ್ಯೆಯಂದು ಎಲ್ಲ ಪಿತೃಗಳ ದಿನವಾಗಿದೆ. ಈ
ಸಂದರ್ಭದಲ್ಲಿ ಪಿತೃಗಳಿಗೆ 15ದಿನಗಳ ಕಾಲ ಶ್ರಾದ್ಧ, ಪಕ್ಷ, ಎಡೆಗಳನ್ನು ಮಾಡಬಹುದು.

ಹೆಂಗಸರ ಹೆಸರಿನಲ್ಲಿಯೂ ಕರ್ಮ: ಪ್ರತಿಯೊಬ್ಬರಿಗೂ ಸಂಸ್ಕಾರಗಳಿವೆ. ಹೆಂಗಸರಿಗೆ ಗಂಡಸರಂತೆಯೇ ಸಂಸ್ಕಾರಗಳಿವೆ. ಸಂಸ್ಕಾರಗಳನ್ನು ಮಹಿಳೆಗೂ ಸಂಸ್ಕಾರಗಳಿವೆ. ಹಿಂದೆ ಮಹಿಳೆಗೂ ಅನೇಕ ಶಾಸ್ತ್ರಗಳನ್ನು ಮಾಡುತ್ತಿದ್ದರು. ಹೆಂಗಸರ ಹೆಸರಿನಲ್ಲಿಯೂ ಕರ್ಮಗಳನ್ನು ಮಾಡಲು ಶಾಸ್ತ್ರಗಳಲ್ಲಿ ಹೇಳಿದ್ದಾರೆ. ಮೋಕ್ಷದಾಯಕ 7 ನಗರಗಳನ್ನು ಸ್ಮರಣೆ ಮಾಡಿ ಎಳ್ಳು ನೀರು ಬಿಟ್ಟು ಮೋಕ್ಷ ನೀಡಬಹುದು. ಪುರೋಹಿತರನ್ನು ಕರೆಸಿ ತಿಳಿದುಕೊಂಡು ಮಾಡಿದರೆ ಉತ್ತಮ. ಪಿತೃ ದೇವತೆಗಳನ್ನು ಎಲ್ಲ ರೂಪಗಳಲ್ಲಿ ಕರೆಯಬೇಕು. ಮದುವೆಯಾದ ಮೊದಲ ವರ್ಷ ಮನೆಯಲ್ಲಿ ಪಿತೃಕರ್ಮಗಳನ್ನು ಮಾಡಿ ಅವರಿಗೆ ನೀಡಿದರೆ ಅದರಿಂದ ಉತ್ತಮ ಫಲಪ್ರಾಪ್ತಿ. ಇದರಿಂದ ಸಂಪೂರ್ಣ ಫಲ ದೊರೆಯುತ್ತೆ.

ಪ್ರವಚನಕಾರ ಬ್ರಹ್ಮಣ್ಯಾಚಾರ‍್ಯ ಮಾತನಾಡಿ, ಕೃಷ್ಣಪಕ್ಷದ ಪ್ರತಿಪತ್ತಿನ ಭಾದ್ರಪದದಿಂದ ಅಮಾವಾಸ್ಯೆಯ ೧೫ ದಿನಗಳ ಕಾಲ ಮಾತ್ರ ಮೀಸಲಿಡಲಾಗಿದೆ. ಈ
ಸಂದರ್ಭದಲ್ಲಿ ಯಾವ ಶುಭಕಾರ್ಯಗಳನ್ನು ಮಾಡಲಾಗುವುದಿಲ್ಲ. ಮಾನವ ಮಾತ್ರರಾದವರಿಗೆ, ಹಿಂದೂ ಸಂಪ್ರದಾಯವನ್ನು ಒಪ್ಪಿಕೊಂಡು ಅಪ್ಪಿಕೊಂಡವರಿಗೆ ಮೀಸಲಾಗಿರುತ್ತದೆ. ತಂದೆ ತಾಯಿಗಳು ಮಕ್ಕಳನ್ನು ಪಡೆಯುವುದು, ತಮ್ಮ ಅಂತ್ಯಕಾಲದಲ್ಲಿ ನಮ್ಮ ಊರುಗೋಲಾಗಿರುತ್ತಾರೆ ಎಂದು. ಆದರೆ ಮಕ್ಕಳು ಮಗನಾಗಿರದೇ ನೊಗವಾಗಿರುತ್ತಾರೆ. ಮಗ ಮಗ ಆಗಬೇಕು, ನೊಗ ಆಗಬಾರದು. ನೊಗ ಎಂದರೆ ಎರಡು ಎತ್ತುಗಳು ಹೊರುವುದು. ಮಗನು ತಂದೆ ತಾಯಿಗೆ ನೊಗ ಆಗಬಾರದು. ಅಪ್ಪ ಅಮ್ಮನ ಆಧಾರವನ್ನೇ ಬಯಸಿರಬಾರದು. ಅವರು ಮಾಡಿಟ್ಟಿದ್ದನ್ನು ತಿನ್ನುತ್ತಾ ಅವರನ್ನೇ ಆಧಾರವಾಗಿಟ್ಟುಕೊಂಡಿರ ಬಾರದು.

ಕೊನೆ ಕಾಲದಲ್ಲಿ ತಂದೆ ತಾಯಿ ಬಯಸುವುದು ಕೇವಲ ಪ್ರೀತಿ ಮಾತ್ರ. ಮಕ್ಕಳು ಅದನ್ನು ನೀಡಬೇಕು. ಅಪ್ಪ ಅಮ್ಮ ಜಗತ್ತಿನ ಜೀವಕ್ಕೆ ನೀಡಿದ ಪ್ರತಿಮೆ. ತಂದೆ ತಾಯಿ ದೇವರ ಪ್ರತಿಮೆ. ತಾಯಿ ಜಗತ್ತು ತೋರಿಸಿದ ಮೊದಲ ಗುರು. ತಂದೆ ತಾಯಿಗೆ ಮಗ ಸಲ್ಲಬೇಕಾದ ಶಾಸ್ತ್ರಗಳನ್ನು ಮಾಡಬೇಕು. ಇದಕ್ಕೆ ಉದಾಹರಣೆ ಯೆಂಬಂತೆ ಕೃಷ್ಣ ತನ್ನ ಬಾಲ್ಯದಲ್ಲಿ ತಾಯಿಯ ಕೈಗೆ ಸಿಗದೇ ಓಡಿಹೋಗುತ್ತಿದ್ದ. ಅವನನ್ನು ಹಿಡಿಯಲು ತಾಯಿ ಅವನ ಹಿಂದಿನಿಂದ ಓಡುತ್ತಿದ್ದಳು, ಕೋಲು ಹಿಡಿದು ಪಾಠ ಕಳಿಸುತ್ತಿದ್ದಳು.

ತನ್ನ ತಾಯಿಗೆ ದೇವರು ಮಗನೇ. ಇನ್ನು ಮಾತೃವಾಕ್ಯ ಪರಿಪಾಲನೆಗಾಗಿ ರಾಮ 14 ವರ್ಷಗಳ ಕಾಲ ವನವಾಸಕ್ಕೆ ಹೋದ. ರಾಮನ ನಡೆ, ಕೃಷ್ಣನ ನುಡಿ ಯನ್ನು ಪಾಲಿಸಬೇಕು. ರಾಮನ ನಡೆ ನೋಡಿ ತಿದ್ದಿಕೊಳ್ಳಬೇಕು. ರಾಮ ಮಾಡಿ ತೋರಿಸಿದ. ಮಗನಾಗಿ ಹೇಗಿರಬೇಕು, ಸಹೋದರನಾಗಿ ಹೇಗಿರಬೇಕು, ಗಂಡನಾಗಿ ಹೇಗಿರಬೇಕು ಎಂಬುದನ್ನು ರಾಮನನ್ನು ನೋಡಿ ತಿದ್ದಿಕೊಳ್ಳಬೇಕು, ತಿಳಿದುಕೊಳ್ಳಬೇಕು. ನಮ್ಮ ನಡೆನುಡಿ ಇನ್ನೊಬ್ಬರಿಗೆ ನೋವುಂಟಾಗುವಂತಿ
ರಬಾರದು. ವರ್ಷಕ್ಕೊಂದು ಬಾರಿಯಾದರೂ ತುತ್ತುಕೊಟ್ಟ ತಂದೆ ತಾಯಿಯನ್ನು ನೆನೆಸಿಕೊಳ್ಳಬೇಕು. ಪಿತೃಪಕ್ಷದ ಮೂಲಕ ನಾಲ್ಕು ಜನರಿಗೆ ಊಟ ನೀಡುವ
ಮೂಲಕ ಹಂಚಿ ತಿನ್ನಬೇಕು. ಅಪ್ಪನ ದಿನದಲ್ಲಾದರೂ ಹಂಚಿ ತಿನ್ನಬೇಕು ಇದುವೇ ಶ್ರಾದ್ಧ. ಶ್ರದ್ದಯಾ ದೀಯತೆ ಇತಿ ಶ್ರಾದ್ಧಂ.

ಇದ್ದಾಗ ಎಳನೀರು ಕುಡಿಸಬೇಕು. ಹೋದ ಮೇಲೆ ಎಳ್ಳುನೀರು ಕೊಡಿಸಬೇಕು. ಸತ್ತ ಮೇಲೆ ವರ್ಷಕ್ಕೊಂದು ಬಾರಿಯಾದರೂ ಹೆತ್ತವರನ್ನು, ಆಪ್ತರನ್ನು, ಹೊತ್ತವ ರನ್ನು ನೆನೆದು ಊಟ ನೀಡಬೇಕು. ಶ್ರದ್ಧೆಯಿಂದ ಶ್ರಾದ್ಧ ಮಾಡಬೇಕು. ತಂದೆ ತಾಯಿಗೆ ಉತ್ತಮ ಮಗನಾಗಬೇಕು. ದೈವಭಕ್ತಿ ದೇಶಭಕ್ತಿಯಿರುವ ಮಕ್ಕಳು ಬೇಕು. ಅಮ್ಮ ಮತ್ತು ದೇಶದ ಮೇಲೆ ಪ್ರೀತಿ ಇರಬೇಕು. ಪಿತೃಪಕ್ಷದಲ್ಲಿ 16 ಶ್ರಾದ್ಧ ಮಾಡುತ್ತಾರೆ. ಸಾಧ್ಯವಾಗದಿದ್ದರೆ ನಿತ್ಯದಲ್ಲಿ ಜಲತರ್ಪಣ ವನ್ನಾದರೂ ನೀಡಬೇಕು. ಜಾತಿ ಮತ ಪಂಥದ ಬೇಧವಿಲ್ಲದೇ ತರ್ಪಣ ನೀಡುತ್ತಾರೆ.

21 ಕುಲವನ್ನು ಉದ್ಧಾರ ಮಾಡುವ ತಾಕತ್ತು ಎಳ್ಳು ನೀರಿನಲ್ಲಿರುತ್ತದೆ. ಮಗ ಮಗನಾಗಬೇಕು. ಆದರೆ ಮೂರನ್ನೂ ಮಾಡದ ನೊಗನಾಗಬಾರದು. ನೂರಾರು
ಸಾಲಿಗ್ರಾಮ ಪೂಜೆ, ಕ್ಷೇತ್ರ ಸುತ್ತುವುದನ್ನು ಬದಿಗಿಟ್ಟು ಮನೆಯಲ್ಲಿರುವ ಹಿರಿಯರ ಸೇವೆ ಮಾಡಿ. ಪರಿ ಪರಿ ಕೆಲಸಗಳೂ ಕೂಡಾ ದೇವರ ಪಾದಪೂಜೆಯಂತೆ.
ತಂದೆತಾಯಿಗಳ ಸೇವೆ ದೇವರ ಸೇವೆಯಂತೆ ಎಂದು ತಿಳಿದುಕೊಳ್ಳಬೇಕು. ಹೆತ್ತವರಿಗೆ ಹೊತ್ತವರಿಗೆ ಹಿಂಸೆ ನೀಡಬಾರದು ನೆಮ್ಮದಿ ನೀಡಬೇಕು. ಜೀವನ ದುದ್ದಕ್ಕೂ ನಾವು ಯಾರಿಗೂ ಬೇಕಾಗಿಲ್ಲ. ರೀತಿ ನೀತಿಯಲ್ಲಿ ಬೇಡವಾದವರು ಆಗಬಾರದು. ಜನ್ಮ ಜನ್ಮದ ಸೇವೆಯ ಫಲವಾಗಿ ನಾವಿಂದು ಜೀವಿಸುತ್ತಿದ್ದೇವೆ. ಪ್ರಾಮಾಣಿಕ ತನವನ್ನು ಬಿಡಬಾರದು. ಕ್ರಮ ಮಾಡುವಾಗ ಕರ್ಮದ ಬಗ್ಗೆ ತಿಳಿದುಕೊಳ್ಳಬೇಕು. ತಿಳಿಯದೇ ಮಾಡಿದರೆ ಪ್ರಯೋಜನವಿಲ್ಲ. ತಿಳಿದಾಗ ತಿಳಿದದ್ದನ್ನು
ನಂಬಿದಾಗ,ನಂಬಿದ್ದನ್ನು ಶ್ರದ್ಧೆಯಿಂದ ಮಾಡಿದಾಗ ಪೂರ್ಣಫಲ ಪ್ರಾಪ್ತಿ ಎಂದು ತಿಳಿಸಿದರು.

? ನಾವು ದೇವಋಣ, ಋಷಿಋಣ ಹಾಗೂ ಪಿತೃಋಣವನ್ನು ಹೊತ್ತು ಭೂಮಿಗೆ ಬರುತ್ತೇವೆ.
? ತಂದೆ ತಾಯಿಗೆ ಯಾವುದಾದರೊಂದು ಋಣ ತೀರಿಸಬೇಕು
? ಮಹಾಲಯ ಅಮಾವಾಸ್ಯೆಯಂದು ಪಿತೃಗಳಿಗೆ 15 ದಿನಗಳ ಕಾಲ ಶ್ರಾದ್ಧ, ಪಕ್ಷ, ಎಡೆ ಮಾಡಬಹುದು.
? ಮಗನು ಮಗ ಆಗಬೇಕು, ನೊಗ ಆಗಬಾರದು
? ರಾಮನ ನಡೆ, ಕೃಷ್ಣ ನುಡಿಯನ್ನು ಪಾಲಿಸಬೇಕು
? ದೈವಭಕ್ತಿ, ದೇಶಭಕ್ತಿ ಇರುವ ಮಕ್ಕಳು ಇರಬೇಕು
? ರೀತಿ ನೀತಿಯನ್ನು ಬಿಡಬಾರದು ಪ್ರಾಮಾಣಿಕನಾಗಿರಬೇಕು
? ತಿಳಿಯದೇ ಸಂಸ್ಕಾರಗಳನ್ನು ಮಾಡಿದರೆ ಅದು ಮೂಢನಂಬಿಕೆ

***

ಮನುಷ್ಯ ಜನಮದಿಂದ ಜಂತುವಾಗಿರುತ್ತಾನೆ. ಸಂಸ್ಕಾರವಾದಾಗ ಎರಡನೇ ಜನ್ಮ ಎತ್ತಿದಂತಾಗುತ್ತಾನೆ ಮನುಷ್ಯನಾಗುತ್ತಾನೆ. ಪೂರ್ವ 16 ಸಂಸ್ಕಾರ, ಮತ್ತೆ 16 ಸಂಸ್ಕಾರಗಳು. ಉಪನಯನ, ಗೋದಾನ, ಮಹಾನಾಮ್ನಿ, ಮಹಾವೃತ, ಉಪನಿಷತ್ತು ಎಲ್ಲರಿಗೂ ಇದೆ. ಸಮಾವರ್ತನ, ವಿವಾಹ ಗಂಡು ಹೆಣ್ಣಿಗೆ ಇರುವ ಸಂಸ್ಕಾರ. ಮಕ್ಕಳಿಲ್ಲದವರು ದತ್ತುಪುತ್ರನಿಂದ, ಸಂಬಂಧದ ಮಗುವಿನಿಂದ ಮಾಡಿಸಬಹುದು.
– ಕಬ್ಯಾಡಿ ಜಯರಾಮಾಚಾರ್ಯ