Saturday, 23rd November 2024

60,000 ಗಡಿ ದಾಟಿದ ಷೇರುಪೇಟೆ ಸೆನ್ಸೆಕ್ಸ್

ಮುಂಬೈ: ಭಾರತದ ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 60,000 ಗಡಿದಾಟಿದೆ. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 325.71 ಪಾಯಿಂಟ್ಸ್ ಏರಿಕೆ ಗೊಂಡು ಗರಿಷ್ಠ ಪ್ರಮಾಣದ ದಾಖಲೆ ಮಾಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಎತ್ತರಕ್ಕೇರಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 325.71 ಪಾಯಿಂಟ್ಸ್ ಹೆಚ್ಚಾಗಿ 60211.07 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 93.30 ಪಾಯಿಂಟ್ಸ್ ಏರಿಕೆಗೊಂಡು 17916.30 ಮುಟ್ಟಿದೆ. ದಿನದ ವಹಿವಾಟಿನ ಆರಂಭದಲ್ಲಿ 1293 ಷೇರುಗಳು ಏರಿಕೆಗೊಂಡರೆ, 355 ಷೇರುಗಳು ಕುಸಿದವು ಮತ್ತು 89 ಷೇರುಗಳ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ಸೆನ್ಸೆಕ್ಸ್ ಕರೋನಾ ಸಂದರ್ಭದಲ್ಲೂ 60,000 ಗಡಿ ದಾಟಿ ಮೈಲಿಗಲ್ಲನ್ನು ತಲುಪಿರುವುದು ಸಾಧನೆಯಾಗಿದೆ ಎಂದು ಹೂಡಿಕೆ ತಂತ್ರಗಾರ ಡಾ. ವಿ ಕೆ ವಿಜಯಕುಮಾರ್ ಹೇಳಿದ್ದಾರೆ.

ಇನ್ಫೋಸಿಸ್ ಷೇರುಗಳು ರೂ. 25 ರಷ್ಟು ಏರಿಕೆಯಾಗಿ 1,767.95 ರೂ. ತಲುಪಿದೆ. ವಿಪ್ರೋ ಷೇರುಗಳು ರೂ. 684.00 ರಲ್ಲಿ ಆರಂಭವಾಗಿದ್ದು, ಸುಮಾರು ರೂ .10 ಗಳಿಸಿದರೆ, ಲಾರ್ಸೆನ್‌ನ ಷೇರುಗಳು ರೂ .1787.00 ರಲ್ಲಿ ಆರಂಭವಾಗಿದ್ದು, ಸುಮಾರು 17 ರೂಪಾಯಿಗಳ ಲಾಭದೊಂದಿಗೆ ಮುನ್ನೆಡೆದಿದೆ.

ಇಳಿಕೆಗೊಂಡ ಪ್ರಮುಖ ಷೇರುಗಳು: HUL ಷೇರುಗಳು ರೂ. 22 ರಷ್ಟು ಇಳಿಕೆಯಾಗಿ ರೂ .2,760.10 ಕ್ಕೆ ಆರಂಭವಾಯಿತು. ಟೈಟಾನ್ ಕಂಪನಿಯ ಷೇರುಗಳು ರೂ 13 ರಷ್ಟು ಇಳಿಕೆಯಾಗಿ ರೂ 2,092.10 ರಲ್ಲಿ ಪ್ರಾರಂಭವಾಯಿತು.