ನವದೆಹಲಿ: ಬಂದೂಕುಧಾರಿಗಳು ಲಾಯರ್ ವೇಷದಲ್ಲಿದ್ದು ದೆಹಲಿ ನ್ಯಾಯಾಲಯದಲ್ಲಿ ನಡೆಸಿದ ಗುಂಡಿನ ದಾಳಿ ನಡೆಸಿ ಗ್ಯಾಂಗ್ಸ್ಟರ್ ಸೇರಿ ಮೂವರ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ.
ಗ್ಯಾಂಗ್ಸ್ಟರ್ ಜೀತೇಂದರ್ ಗೊಗಿಯನ್ನು ಉತ್ತರ ದೆಹಲಿಯ ರೋಹಿಣಿ ಏರಿಯಾದ ನ್ಯಾಯಾಲಯ ಸಂಕೀರ್ಣದಲ್ಲಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾ ಗಿದೆ. ಆರೋಪಿಗಳು ಲಾಯರ್ ವೇಷ ಧರಿಸಿ ಕೋರ್ಟ್ ಆವರಣಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಜೀತೇಂದರ್ ನಟೋರಿಯಸ್ ಗ್ಯಾಂಗ್ಸ್ಟರ್. ತಿಹಾರ್ ಜೈಲಿನಲ್ಲಿದ್ದ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ವೇಳೆ ಎದುರಾಳಿ ‘ಟಿಲ್ಲು ಗ್ಯಾಂಗ್’ ಸದಸ್ಯರು ಲಾಯರ್ ವೇಷದಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾರೆ.
ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದ್ದು, ಟಿಲ್ಲು ಗ್ಯಾಂಗ್ನ ಇಬ್ಬರು ಸದಸ್ಯರು ಮೃತರಾಗಿದ್ದಾರೆಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ ಮಾಹಿತಿ ನೀಡಿದ್ದಾರೆ.
ಕೋರ್ಟ್ ಆವರಣದಲ್ಲಿಯೇ ಗುಂಡಿನ ದಾಳಿ ನಡೆದಿದ್ದು, ಭದ್ರತಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದುವರೆಗೂ ಎರಡು ಗ್ಯಾಂಗ್ನಿಂದ 25ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ. ಗೊಗಿಯನ್ನು ಕಳೆದ ವರ್ಷ ಮಾರ್ಚ್ ನಲ್ಲಿ ಬಂಧಿಸಲಾಗಿತ್ತು. ಆತನನ್ನು ಕೋರ್ಟ್ಗೆ ಹಾಜರುಪಡಿಸುವುದನ್ನೇ ಕಾದು ಕುಳಿತಿದ್ದ ಎದುರಾಳಿ ಗ್ಯಾಂಗ್ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ.