Saturday, 23rd November 2024

ಭಾರತೀಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಿ ಶಕ್ತಿ ತುಂಬಲಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್​​​​ಗೆ ಸೋಮವಾರ ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಮಾರಂಭದಲ್ಲಿ ಹೊಸ ಹಂತಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 21 ನೇ ಶತಮಾನದಲ್ಲಿ ಭಾರತವು ಮುಂದುವರೆಯಲು ಇಂದು ಅತ್ಯಂತ ಮಹತ್ವದ ದಿನ. ಕಳೆದ 7 ವರ್ಷಗಳ ಹಿಂದೆ ಆರಂಭಿಸಿದ ಆರೋಗ್ಯ ಅಭಿಯಾನಕ್ಕೆ ಇಂದು ಹೊಸ ಟಚ್ ಸಿಕ್ಕಿದೆ. ಭಾರತ್ ಡಿಜಿಟಲ್ ಮಿಷನ್ ಇಂದಿನಿಂದ ಕಾರ್ಯಾರಂಭ ಆಗುತ್ತಿದೆ. ಇದು ಭಾರತೀ ಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಿ ಶಕ್ತಿಯನ್ನು ತುಂಬಲಿದೆ ಎಂದು ಅಭಿಪ್ರಾಯಪಟ್ಟರು.

3 ವರ್ಷಗಳ ಹಿಂದೆ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆಯುಷ್ಮಾನ್ ಯೋಜನೆ ಆರಂಭಿಸಲಾಯಿತು. ಇಂದಿನಿಂದ ದೇಶಾದ್ಯಂತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಶುರುವಾಗುತ್ತಿದ್ದು, ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಆಯುಷ್ಮಾನ್ ಯೋಜನೆ ದೇಶದ ಸಾವಿರಾರು ಬಡ ಕುಟುಂಬಗಳ ಕೈಹಿಡಿದಿದೆ. ಇಇದರ ಅಡಿಯಲ್ಲಿ ಡಿಜಿಟಲ್ ಆರೋಗ್ಯ ಐಡಿಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ನಾಗರಿಕನ ಆರೋಗ್ಯ ದಾಖಲೆಯನ್ನು ಡಿಜಿಟಲ್ ಮೂಲಕ ರಕ್ಷಿಸಲಾಗುತ್ತದೆ ಅಂದರು.

ಆರೋಗ್ಯ ಸೇತು ಆಯಪ್ ಕರೋನಾ ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಸಹಾಯ ಮಾಡಿದೆ. ಉಚಿತ ಲಸಿಕೆ ಅಭಿಯಾನದ ಅಡಿಯಲ್ಲಿ ಭಾರತವು ಇಂದು ಸುಮಾರು 90 ಕೋಟಿ ಡೋಸ್‌ ವ್ಯಾಕ್ಸಿನೇಷನ್ ಪೂರೈಸಿದೆ. ಇದರ ಹಿಂದೆ ಕೋ-ವಿನ್‌ ಆಯಪ್​ನ ಪಾತ್ರ ಕೂಡ ದೊಡ್ಡದಿದೆ. ಕೊರೊನಾ ಅವಧಿಯಲ್ಲಿ ಟೆಲಿಮೆಡಿಸಿನ್‌ನ ವಿಸ್ತರಣೆಯೂ ಆಗಿದೆ. ಈ ಸೌಲಭ್ಯವು ರಿಮೋಟ್​ ಸ್ಥಳಗಳಲ್ಲಿ ವಾಸವಾಗಿರುವ ದೇಶವಾಸಿಗಳು ನಗರದ ದೊಡ್ಡ ಆಸ್ಪತ್ರೆಗಳ ವೈದ್ಯರೊಂದಿಗೆ ಮನೆಯಲ್ಲಿಯೇ ಕುಳಿತು ಸಂಪರ್ಕಿಸಲು ಸಹಾಯ ಆಗಿದೆ ಎಂದರು.