ನವದೆಹಲಿ: 2022ರ ಜನವರಿ ಒಂದರವರೆಗೆ ದಿಲ್ಲಿಯಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ.
ಈ ನಿಷೇಧ ಸಂಪೂರ್ಣವಾಗಿದ್ದು, ಹಸಿರು ಪಟಾಕಿಗಳಿಗೆ ಕೂಡಾ ಅವಕಾಶವಿಲ್ಲ ಎಂದು ಡಿಪಿಸಿಸಿ ಸ್ಪಷ್ಟಪಡಿಸಿದೆ. ದಿಲ್ಲಿಯಲ್ಲಿ ಅತ್ಯಧಿಕವಾಗಿರುವ ವಾಯುಮಾಲಿನ್ಯ ವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಬಂಧಿಸುವ ಅಗತ್ಯವಿದೆ. ಜತೆಗೆ ಕೋವಿಡ್-19ನ ಮತ್ತೊಂದು ಅಲೆ ತಡೆಯುವ ದೃಷ್ಟಿಯಿಂದ ಸಂಪೂರ್ಣ ನಿಷೇಧಕ್ಕೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ತಜ್ಞರು ಕೋವಿಡ್-19 ಪ್ರಕರಣಗಳ ಏರಿಕೆ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದು, ಪಟಾಕಿ ಸಿಡಿಸುವ ದೊಡ್ಡ ಪ್ರಮಾಣದ ಸಂಭ್ರಮಾಚರಣೆಯಂಥ ಕ್ರಮಗಳು ಸುರಕ್ಷಿತ ಅಂತರ ನಿಯಮಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೇ, ಅಧಿಕ ಪ್ರಮಾಣದ ವಾಯುಮಾಲಿನ್ಯಕ್ಕೂ ಕಾರಣವಾಗಲಿದೆ.
ವಾಯು ಗುಣಮಟ್ಟ ತೀವ್ರ ಸ್ವರೂಪದ ವರ್ಗದಲ್ಲಿದ್ದು, ಇದು ಆರೋಗ್ಯವಂತರಿಗೆ ಕೂಡಾ ಉಸಿರಾಟದ ಸಮಸ್ಯೆಗಳನ್ನು ಸೃಷ್ಟಿಸುವ ಅಪಾಯವಿದೆ. ಜತೆಗೆ ಶ್ವಾಸ ಕೋಶ ಮತ್ತು ಹೃದ್ರೋಗ ಸಮಸ್ಯೆ ಇರುವವರಲ್ಲಿ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಲಿದೆ” ಎಂದು ಎಚ್ಚರಿಸಿದೆ.
ಕಳೆದ ವರ್ಷ ಕೂಡಾ ಎನ್‌ಸಿಆರ್ ಪ್ರದೇಶದಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ಎನ್‌ಜಿಟಿ ನಿಷೇಧಿಸಿತ್ತು.