ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 104
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಶ್ರೀ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಅಭಿಮತ
ಬೆಂಗಳೂರು: ಭಾರತದಲ್ಲಿ ಮಣ್ಣು, ಕಲ್ಲು, ನೆಲ, ಜಲ, ಗಾಳಿ ಪವಿತ್ರ ಮೂರ್ತಸ್ವರೂಪ ಪಡೆದುಕೊಳ್ಳುತ್ತದೆ. ಇಲ್ಲಿ ನೀರು ತೀರ್ಥವಾಗುತ್ತದೆ. ಬಿದಿರು ಕೊಳಲು, ಬುಟ್ಟಿಯಾಗುತ್ತದೆ. ಇಲ್ಲಿ ಭಕ್ತಿಯ ಭಂಡಾರವಿದೆ. ಜ್ಞಾನ, ವಿಜ್ಞಾನಗಳ ಸಂಗಮವಿದೆ.
ಇವ ನಮ್ಮವ ಎಂದು ಎಲ್ಲರನ್ನೂ ಬೆಸೆಯುವ ದಿವ್ಯ ಮನೋಭಾವವಿದೆ. ಇದು ಆಧ್ಯಾತ್ಮ ಭಾರತದ ಭವ್ಯ ಬೆಳಗು ಎಂದು ಅಥಣಿಯ ಶ್ರೀ ಮೋಟಗಿಮಠ ಪ್ರಭು ಚನ್ನ ಬಸವ ಸ್ವಾಮೀಜಿ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್ ವತಿಯಿಂದ ಆಯೋಜಿಸಲಾಗಿದ್ದ ‘ಮಹಾತ್ಮರ ಬದುಕು-ಬೆಳಕು’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆಲ್ಲಾ ಇರುವ ಆಸ್ತಿ, ಅಂತಃಸತ್ವ ನೀಡಿದವರು ಮಹಾತ್ಮರು. ಮಹಾತ್ಮರ ಧ್ಯೇಯ, ಆದರ್ಶ, ಅನುಕರಣೀಯ ಆಗಬೇಕು. ಭಾರತದ ಬೆಳಕೇ ಈ ಮಹಾತ್ಮರು ಎಂದರು.
ಆಧ್ಯಾತ್ಮವೆಂದರೆ ಗವಿಯಲ್ಲಿ ಕುಳಿತು ಧ್ಯಾನ ಮಾಡುವುದಲ್ಲ. ಸೇವೆಯ ಮೂಲಕ ಜಗತ್ತನ್ನು ಬೆಳಗುವುದು. ಈ ಮೂಲಕ ಸಾಕ್ಷಾತ್ಕಾರಗೊಳಿಸಿದವರು ಮಹಾತ್ಮರು. ಮಾನ ವೀಯ ಮೌಲ್ಯಗಳ ಸೇವಾವೃತದಿಂದ ಮಹನೀಯರಾಗುತ್ತಾರೆ. ಮನುಷ್ಯ ರೂಪದಲ್ಲಿ ವಿಭೂತಿಯು ತತ್ವ, ಬೆಳಕು ತರುತ್ತದೆ. ವಿಭೂತಿ ಆಧ್ಯಾತ್ಮಿಕವಾಗಿ ಹೊಸ ರೂಪ. ಭೂತಿ ಸಾಮಾನ್ಯವಾಗಿ ಇರುವಂತಹದು.
ಭೂತಿಯಿಂದ ವಿಭೂತಿಗೆ ಹೋದವರು ಮಹಾತ್ಮರಾಗುತ್ತಾರೆ. ಬೇಡ ಭೂತಿಯಾದರೆ, ಮಹರ್ಷಿ ವಾಲ್ಮೀಕಿ ವಿಭೂತಿ. ನರೇಂದ್ರ ಭೂತಿ, ವಿವೇಕಾನಂದ ವಿಭೂತಿ, ಕೆ.ವಿ.ಪುಟ್ಟಪ್ಪ ಭೂತಿ ಕುವೆಂಪು ವಿಭೂತಿ, ಸಿದ್ಧಯ್ಯ ಪುರಾಣಿಕ ಭೂತಿ, ಕಾವ್ಯಾನಂದ ವಿಭೂತಿ. ಇವರೆಲ್ಲರೂ ಸಾಧನೆಯಿಂದ ಮಹಾತ್ಮರಾಗಿ ಬೆಳಗಿದವರು. ನಮ್ಮೊಂದಿಗೆ ಇದ್ದು, ಬದುಕಿ ಸಾಧನೆ ತೋರಿದವರು, ಅವರ ಬದುಕೇ ಬೆಳಕಾಯ್ತು. ಶ್ರೀಮಂತರಾಗಿ ಹುಟ್ಟಿ ಯಾರೂ ಮಹಾತ್ಮರಾಗಿಲ್ಲ, ತಮ್ಮ ಸಾಧನೆಯಿಂದಲೇ ಮಹಾತ್ಮರಾಗಿದ್ದಾರೆ ಎಂದು ತಿಳಿಸಿದರು.
***
ಉತ್ತರ ಕರ್ನಾಟಕದ ಅಥಣಿ ಜಂಗಮಲಿಂಗ ತಪೋವನ. ಸರ್ವಧರ್ಮೀಯರ ಸಂಗಮ ಕ್ಷೇತ್ರ. ಇವರು ಅಥಣೀಶ ಎಂಬ ಕಾವ್ಯ
ನಾಮದಿಂದ ಪ್ರಸಿದ್ಧರು. ಸಾಕಷ್ಟು ಪುಸ್ತಕ ಬರೆದಿದ್ದಾರೆ. ಮೊದಲ ಕೃತಿ ರಚಿಸಿದಾಗ ಬೆನ್ನುಡಿ ಬರೆಯುವಂತೆ ಕೇಳಿದ್ದರು, ಬರೆದು ಕೊಟ್ಟೆ. ಅಂದಿನಿಂದ ನಾನು ಅವರ ಓದುಗ. ಸ್ವಾಮೀಜಿ ನಮ್ಮ ನಾಡು ಮತ್ತು ಸಾಹಿತ್ಯಲೋಕ ಹೆಮ್ಮೆ ಪಡುವ ಅದ್ಭುತ ಪುಸ್ತಕ ರಚಿಸಿದ್ದಾರೆ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ
ಸಂಪಾದಕರು
ವಿಶ್ವವಾಣಿ ಕ್ಲಬ್‌ಹೌಸ್ ಇದೊಂದು ಆಧುನಿಕ ಅನುಭವ ಮಂಟಪ. ಎಲ್ಲರನ್ನೂ ಒಂದುಗೂಡಿಸಿ, ಎಲ್ಲರ ಜನ ಮಾನಸವನ್ನು
ತಲುಪುವಂತಹ ಕಾರ್ಯವನ್ನು ಮಾಡುತ್ತಿದೆ.
– ಪ್ರಭು ಚನ್ನಬಸವ
ಸ್ವಾಮೀಜಿ ಶ್ರೀ
ಮೋಟಗಿಮಠ, ಅಥಣಿ