Wednesday, 11th December 2024

ಮೊಂಡುಕೈ ಹುಡುಗಿ ಅಮೆರಿಕಾದಲ್ಲಿ ಚಿತ್ರಕಾರಳಾದ ಕತೆ

ಡಾ ಎಚ್ ಎಸ್ ಮೋಹನ್
ವೈದ್ಯ ವೈವಿಧ್ಯ

drhsmohan@gmail.com

ನಾನು ಕಳೆದ ಸುಮಾರು 4 ದಶಕಗಳಿಂದ ಕಣ್ಣಿನ ವೈದ್ಯನಾಗಿ ವೈದ್ಯಕೀಯ ವೃತ್ತಿಯಲ್ಲಿಯೂ ಹಾಗೂ 37 ವರ್ಷಗಳಿಂದ ವೈದ್ಯಕೀಯ ಸಾಹಿತ್ಯದಲ್ಲಿಯೂ
ತೊಡಗಿಕೊಂಡಿದ್ದೇನೆ. ನನ್ನ ಅನುಭವಕ್ಕೆ ಬಂದ ಕೆಲವು ಅಪರೂಪದ ಘಟನೆಗಳನ್ನು ಈ ಕಾಲಂ ನಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

1988 ರಲ್ಲಿ ನಾನು ಆ ದಿನ ಕಸ್ತೂರಬಾ ಮೆಡಿಕಲ್ ಕಾಲೇಜ್ ಮಣಿಪಾಲದ ಲೈಬ್ರರಿಯಲ್ಲಿ ಏನೋ ಓದುತ್ತಿದ್ದೆ. ಆಗ ಅಲ್ಲಿಗೆ ಬಂದ ವೈದ್ಯ ಮಿತ್ರ ಡಾ.ಗಂಗಾಧರ ರಾಯರು ಮೋಹನ್ ನಮ್ಮ ವಾರ್ಡ್ ನಲ್ಲಿ ಒಂದು ಅಪರೂಪದ ವಿಕಲಾಂಗ ಮಗು ಇದೆ. ಅಲ್ಲದೇ ಮಗುವಿನ ಪಾಲಕರು ಆಸ್ಪತ್ರೆಯಲ್ಲಿಯೇ ಮಗುವನ್ನು ಬಿಟ್ಟು ಹೋಗಿದ್ದಾರೆ. ನೀವು ಆಕೆಯ ಬಗ್ಗೆ ಏನಾದರೂ ಲೇಖನ ಮಾಡಬಹುದಾ ನೋಡಿ ಎಂದರು. ಡಾ. ಗಂಗಾಧರ ರಾಯರು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿದ್ದರು. ಆಗ ಬಹಳಷ್ಟು ಲೇಖನ ಬರೆಯುತ್ತಿದ್ದ ನಾನು ಮರುದಿನ  ಕ್ಯಾಮರಾ ತೆಗೆದುಕೊಂಡು ಹೋಗಿ ಆ ಮಗುವಿನ ಹಲವು ಫೋಟೋಗಳನ್ನು ತೆಗೆದೆ.

ವೈದ್ಯಕೀಯವಾಗಿ ವಿರಳವಾದ ಆ ವಿಕಲಾಂಗತೆ ಜತೆಗೆ ಪಾಲಕರಿಂದ ತೊರೆಯಲ್ಪಟ್ಟ ಮಾನವೀಯ ದೃಷ್ಟಿಕೋನ ಇವೆರಡನ್ನೂ ಸೇರಿ ಈ ಮಗುವಿನ ಹೊಣೆ ಯಾರದು ಎಂದು ಶೀರ್ಷಿಕೆ ಕೊಟ್ಟು ಉದಯವಾಣಿಯ ಸಂಪಾದಕರಾಗಿದ್ದ ಶ್ರೀಗುರುರಾಜರಲ್ಲಿ ಕೊಟ್ಟೆ. ಅವರು ಲೇಖನ ಓದಿ ಮರುದಿನವೇ ಉದಯ ವಾಣಿಯ ಬಲ ಮೇಲ್ಭಾಗದಲ್ಲಿ ಎದ್ದು ಕಾಣುವಂತೆ ಚಿತ್ರ ಲೇಖನವಾಗಿ ಪ್ರಕಟಿಸಿದರು.

ಆ ಮಗು ಒಂದು -ಕೋಮೀಲಿಯ ಶಿಶು. ಇದೊಂದು ಹುಟ್ಟಿನಿಂದಲೇ ಬರುವ ಅಂಗವಿಹೀನತೆ. ಕೈ ಕಾಲುಗಳು ಗಿಡ್ಡವಾಗಿ ಅಂಗೈ ಪಾದಗಳು ದೇಹಕ್ಕೆ ತೀರ ಹತ್ತಿರದಲ್ಲಿ ಕೆಲವೊಮ್ಮೆ ದೇಹದಿಂದಲೇ ನೇರವಾಗಿ ಹುಟ್ಟಿ ಕೊಂಡಂತೆ ತೋರುತ್ತದೆ. ಭ್ರೂಣ ಬೆಳೆಯುವಾಗ ತಾಯ ಗರ್ಭಕ್ಕೆ ಅಂಟಿಕೊಂಡೇ ಬೆಳೆಯುತ್ತದೆ. ಅದಕ್ಕೆ ಸುಮಾರು 3 ತಿಂಗಳು ವಯಸ್ಸಾಗಿರುವಾಗ ಕಣ್ಣು, ಕೈಕಾಲು ಬೆರಳುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಇಂತಹ ಸಮಯದಲ್ಲಿ ಉಂಟಾಗುವ ಯಾವುದೇ ತೊಂದರೆಗಳಿಂದಾಗಿ ಕೈ ಕಾಲುಗಳು ಸರಿಯಾಗಿ ರೂಪುಗೊಳ್ಳದಿರಬಹುದು. ಆಗಲೇ ಮೊಂಡು ಅಂಗಗಳ ಇಂತಹ ಮಕ್ಕಳು ಹುಟ್ಟುವುದು. ಆದರೆ ಹೀಗೆ ಹೆಸರಿಸಲೂ ಕೈಕಾಲಿಲ್ಲದ ಶಿಶುಗಳು ಹುಟ್ಟುವುದು ಲಕ್ಷದಲ್ಲೊಂದು ಅನ್ನುವಷ್ಟು ಅಪರೂಪದ ಸಂಗತಿ. ಇಂತಹ ದೋಷಪೂರ್ಣ ಜನನಕ್ಕೆ ತಾಯಿ ಸೇವಿಸಿದ ಯಾವುದಾದರೂ ಔಷಧಗಳೋ (ಬಹಳ ಹಿಂದೆ ಥ್ಯಾಲಿಡೋಮೈಡ್ ಔಷಧ ಈ ತರಹ ಮಕ್ಕಳ ಜನನಕ್ಕೆ ಕಾರಣವಾಗಿತ್ತು), ಎಕ್ಸ್ ರೇ ವಿಕಿರಣಗಳೋ ಕಾರಣವಾಗಬಹುದು.

ಕೆಲವೊಮ್ಮೆ ತಾಯ ಗರ್ಭಕ್ಕೆ ಕ್ರಿಮಿಗಳ ಸೋಂಕಾಗಿದ್ದರೂ ಅದರಲ್ಲೂ ಸೈಟೋಮೆಗಲೋ ವೈರಸ್‌ನ ಸೋಂಕಿದ್ದರೆ ಕೂಡ ಶಿಶುವಿನ ಅಂಗಗಳು ವಿಕೃತವಾಗಿ ಬೆಳೆಯುತ್ತವೆ. ಅನುವಂಶೀಯ ದೋಷಗಳೂ ಕೆಲವೊಮ್ಮೆ ಹೀಗೆ ಮಾಡಬಹುದೆಂಬ ಗುಮಾನಿಯೂ ಇದೆ. ಈ ಮಗುವಿನ ತಾಯಿ ಔಷಧಗಳನ್ನಾಗಲೀ ವಿಕಿರಣ ಗಳಿಗೆ ಒಳಗಾಗಿದ್ದಾಗಲೀ ಎಂಬುದಕ್ಕೆ ದಾಖಲೆಗಳಿಲ್ಲ.

ಪ್ರಕಟಣೆಯ ನಂತರ : ಉದಯವಾಣಿಯ ಮೇ 1988ರ ಮುಖಪುಟದಲ್ಲಿ ಈ ಮಗುವಿನ ಚಿತ್ರ ಮತ್ತು ವರದಿ ಕಾಣಿಸಿಕೊಂಡ ನಂತರ ಹತ್ತು ಹಲವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣೀ ಭೂತವಾಯಿತು. ಹೆತ್ತವರಿಗೇ ಬೇಡದ ಈ ಮಗುವನ್ನು ಸೇರಿಸಿಕೊಂಡುದು ಏಕೆ ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಹಲವು ದೂರವಾಣಿ ಕರೆಗಳು. ಮಾನವೀಯ ದೃಷ್ಟಿ ಮತ್ತು ವೈದ್ಯಕೀಯ ಮತ್ತು ನಸಿಂಗ್ ವಿದ್ಯಾರ್ಥಿಗಳಿಗೆ ಅಪರೂಪದ ವಿಕಲಾಂಗತೆಯನ್ನು ತೋರಿಸಿ ಅದರ ಬಗ್ಗೆ ಪಾಠ
ಎಂಬ ಅವರ ಪ್ರಾಮಾಣಿಕ ವಿವರಣೆ ಹಲವರನ್ನು ಸಮಾಧಾನ ಪಡಿಸಿರಲಾರದು.

ಕೇರಳದ ಕಲ್ಲಿಕೋಟೆಯ ಮಲಯಾಳಂ ಮನೋರಮಾ (ಆಗಲೇ ಆ ಗುಂಪಿನ ಪತ್ರಿಕೆಗಳಿಗೆ 11 ಲಕ್ಷ ಸರ್ಕ್ಯುಲೇಷನ್ ಇತ್ತು) ಮತ್ತು ಮುಂಬೈನ ಫ್ರೀ ಪ್ರೆಸ್ ಜರ್ನಲ್ ಉದಯವಾಣಿ ಮೂಲ ಲೇಖನವನ್ನು ಆಧರಿಸಿ ತಮ್ಮ ಸಂಚಿಕೆಗಳಲ್ಲಿ ಚಿತ್ರ ಸಮೇತ ಪ್ರಕಟಿಸಿದವು. ಹಾಗೆಯೇ ನಾಡಿನ 17-18 ಪತ್ರಿಕೆಗಳು ವಿವಿಧ ರೀತಿಯಲ್ಲಿ ವರದಿ ಪ್ರಕಟಿಸಿದವು.

ಉದಯವಾಣಿಯ ಮುಖಪುಟದ ವರದಿಯಿಂದ ಪ್ರಭಾವಿತರಾದ ಕೆಲವು ಸಂಸ್ಥೆಗಳು ತಾವು ಮಗುವಿನ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಪತ್ರ ಬರೆದರು.
ಇವೆಲ್ಲವೂ ಮಾಧ್ಯಮದ ಪರಿಯಾದರೆ, ಆಸ್ಪತ್ರೆಯಲ್ಲಿ ಮಗುವನ್ನು ನೋಡಲು ಅನಿರೀಕ್ಷಿತ ರಷ್. ನಾನು ಬ್ಯಾಂಕಿಗೇ ಹೋಗಲಿ, ಅಂಚೆ ಕಚೇರಿಗೇ ಹೋಗಲಿ, ತರಕಾರಿ ಮಾರ್ಕೆಟ್‌ಗೇ ಹೋಗಲೀ ಆ ಮಗು ಇನ್ನೂ ಆಸ್ಪತ್ರೆಯಲ್ಲಿಯೇ ಇದೆಯೇ? ಅದನ್ನು ಮುಂದೆ ಏನು ಮಾಡುತ್ತೀರಿ ? ಎಂಬ ಕುತೂಹಲದ, ಕಳಕಳಿಯ ಸಂದೇಹಗಳು ಸ್ನೇಹಿತರಿಂದ, ಪರಿಚಯದವರಿಂದ! ಈ ಎಲ್ಲಾ ವಾದ, ವಿವಾದ, ಪ್ರಚಾರ, ವರದಿ, ನೋಡುವವರ ನುಗ್ಗು ಯಾವುದೂ ತನ್ನ ಇರುವಿಕೆಯಿಂದ ಎಂದು ಗೊತ್ತಿಲ್ಲದ ಆ ಮುದ್ದು ಮಗು ಮಾತ್ರ ತನ್ನ ಮೋಟು ಕೈಕಾಲುಗಳನ್ನೇ ಆಡಿಸಿ ನಗುತ್ತಿತ್ತು. ನೋಡಲು ಬಂದವರನ್ನು ನಗಿಸುತ್ತಿತ್ತು. ತಾಯಿಯ ಮೊಲೆ ಹಾಲು ಕುಡಿದು ಸಂತೃಪ್ತವಾಗಿರಬೇಕಾದ ಆ ಮಗು ದಾದಿಯರ ಕೈಯಿಂದ ಕುಡಿಯುವ ಬಾಟಲಿ ಹಾಲಿನಿಂದಲೇ ತೃಪ್ತಿ ಪಡಬೇಕಾಯಿತು.

1988 ರಲ್ಲಿ ವಿವಿಧ ಭಾರತೀಯ ಪತ್ರಿಕೆಗಳಲ್ಲಿ ಈ ಮಗುವಿನ ಬಗ್ಗೆ ಲೇಖನ, ವರದಿ ಪ್ರಕಟವಾಗುತ್ತಿದ್ದಂತೆ ಹಲವು ಸ್ವಾರಸ್ಯಕರ ಘಟನೆಗಳು ಜರುಗಿದವು. ಇಂಡಿಯಾ ಟುಡೇ ಪತ್ರಿಕೆಯ ಅಂತಾರಾಷ್ಟ್ರೀಯ ಆವೃತ್ತಿಯನ್ನು ಓದಿದ ಅಮೆರಿಕದ ಒಬ್ಬ ಸಹೃದಯರು 150 ಡಾಲರುಗಳ ಡಿಡಿ ಯನ್ನು ಹಾಗೂ ಕೊಲ್ಲಿ
ರಾಷ್ಟ್ರದ ಮತ್ತೊಬ್ಬರು ಎರಡು ಜತೆ ಉತ್ತಮ ಬಟ್ಟೆ ಕಳುಹಿಸಿದರು. ಈ ಮಧ್ಯೆ ಬೆಂಗಳೂರಿನ ಆಶ್ರಯ ಎಂಬ ಸಂಸ್ಥೆಯವರು ತಾವು ಸಾಕುವುದಾಗಿ ಮಣಿಪಾಲ ದಿಂದ ಬೆಂಗಳೂರಿಗೆ ಮಗು ಸ್ಥಳಾಂತರವಾಯಿತು. ವಿದೇಶದಿಂದ ಬಂದ ಹಣ ಮತ್ತು ಬಟ್ಟೆ ಎಲ್ಲವನ್ನೂ ಬೆಂಗಳೂರಿಗೇ ಕಳುಹಿಸಿಕೊಟ್ಟೆ.

1990 ರಲ್ಲಿ (ನಾನು ಮಣಿಪಾಲದಿಂದ ಸಾಗರಕ್ಕೆ ಬಂದ ಮೇಲೆ) ಇಂಡಿಯನ್ ಎಕ್ಸ್‌ಪ್ರೆಸ್‌ನ ಮುಖಪುಟದಲ್ಲಿ ಆ ಮಗು ಇನ್ನೂ ಲಕ್ಷಣವಾಗಿ ಬೆಳೆದು ಇನ್ನೂ ಲಕ್ಷಣವಾಗಿ ಬೆಳೆದು ವಿರಾಜಮಾನವಾಗಿತ್ತು. ಆಶ್ರಯ ಸಂಸ್ಥೆಯವರ ಪರಿಶ್ರಮದಿಂದ ಅಮೆರಿಕದ ಮಹಿಳೆ ಆ ಮಗುವನ್ನು ಬೆಂಗಳೂರಿನಿಂದ ದತ್ತು ತೆಗೆದು ಕೊಂಡು ಹೋಗಿ ಅಮೆರಿಕದಲ್ಲಿ ಪ್ರೀತಿಯಿಂದ ಸಾಕುತ್ತಿದ್ದಾರೆ ಎಂದು ವರದಿಯಲ್ಲಿತ್ತು.

18 ವರ್ಷಗಳ ನಂತರ : ಜನವರಿ 2008 ರ ಒಂದು ದಿನ ಎಂದಿನಂತೆ ಅಂದಿನ ದಿ ಹಿಂದೂ ಪತ್ರಿಕೆ ಜಪಾನಿನ ಪ್ರಧಾನಿಯಾಗಿದ್ದ ಶೀನ್ಜೋ ಅಬೆ ಭಾರತಕ್ಕೆ ಭೇಟಿ ನೀಡಿದ ವೇಳೆ ಸಮಯ ಹೊಂದಿಸಿಕೊಂಡು, ಕೊಲ್ಕತ್ತಾಕ್ಕೆ ಖುದ್ದು ಭೇಟಿ ನೀಡಿ ರಾಧಾ ಬಿನೋದ್ ಪಾಲ್ ಅವರ ಮಗನನ್ನು ಕಂಡು, ಜಪಾನ್ ಎಂದೆಂದಿಗೂ ಪಾಲ್ ಅವರನ್ನು ಸ್ಮರಿಸುತ್ತದೆ ಎಂದು ಹೇಳಿದರು. ಇದಲ್ಲದೇ ನಮ್ಮ ಪಾರ್ಲಿಮೆಂಟ್ ಉದ್ದೇಶಿಸಿ ಮಾತಾಡುವಾಗ ಪಾಲ್ ಅವರು ಜಪಾನಿಗಾಗಿ ಮಾಡಿದ್ದು ಸದಾ ಸ್ಮರಣೀಯ ಎಂದು ಉಲ್ಲೇಖಿಸಿದರು.

ಓದುತ್ತಿದ್ದಾಗ ಮುಖಪುಟದ ಒಂದು ಚಿತ್ರ- ಲೇಖನ ಗಮನ ಸೆಳೆಯಿತು. ಕೈಕಾಲುಗಳಿಲ್ಲದ ಹುಡುಗಿ 18 ವರ್ಷಗಳ ಹಿಂದೆ ಬೆಂಗಳೂರಿನ ಆಶ್ರಯ
ಅನಾಥಾಲಯದಿಂದ ಅಮೆರಿಕಕ್ಕೆ ದತ್ತು ಪುತ್ರಿಯಾಗಿ ತೆರಳಿದ್ದಳು. ಈಗ ಆಕೆ ತನ್ನ ಮೊಂಡು ಕೈಗಳಿಂದಲೇ ಅಭ್ಯಾಸ ಮಾಡಿಕೊಂಡು ನುರಿತ ಚಿತ್ರಕಾರಳಾಗಿ
ಮಾರ್ಪಾಡಾಗಿದ್ದಾಳೆ. ಹಲವಾರು ಚಿತ್ರಗಳನ್ನು ಪ್ರದರ್ಶಿಸುವ ಪ್ರದರ್ಶನ ಸಹಿತ ಬೇರೆ ಬೇರೆ ಕಡೆ ಏರ್ಪಡಿಸಿದ್ದಳು. ಹಲವಾರು ಮಕ್ಕಳಿಗೆ ಚಿತ್ರಕಲೆಯ
ಬಗ್ಗೆ ತರಗತಿ ಸಹಿತ ತೆಗೆದುಕೊಳ್ಳುತ್ತಿದ್ದಾಳೆ. ಸದ್ಯ ಆಕೆ ಬೆಂಗಳೂರಿನ ಆಶ್ರಯದ 25 ನೇ ವರ್ಷದ ರಜತ ಮಹೋತ್ಸವಕ್ಕೆ ಬಂದಿದ್ದಾಳೆ ಎಂದು ತಿಳಿಸಿ, ಆಕೆ
(ಮಿಂಡಾ) ಮತ್ತು ಆಕೆಯ ಸಾಕು ತಾಯಿ ಹಾಗೂ ಕಲಾಶಿಕ್ಷಕಿಯರನ್ನು ಸಂದರ್ಶಿಸಿ ಒಂದು ದೊಡ್ಡ ಲೇಖನ ಪ್ರಕಟವಾಗಿತ್ತು.

18 ವರ್ಷಗಳ ಹಿಂದೆ ನಾನು ವಿವಿಧ ಪತ್ರಿಕೆಗಳಿಗೆ ಬರೆದು ಬಹಳ ಸುದ್ದಿ ಮಾಡಿದ್ದ ಕುಂದಾಪುರ ತಾಲೂಕಿನ ಹುಡುಗಿಯೇ ಈಕೆಯಿರಬೇಕೆಂದು ಯೋಚಿಸುತ್ತಿದ್ದೆ. ಒಂದರ್ಧ ಗಂಟೆಯಲ್ಲಿ ಮೈಸೂರಿನ ಸ್ನೇಹಿತರೊಬ್ಬರು ನಾನು ಹಿಂದೆ ಬರೆದ ಹುಡುಗಿಯದ್ದೇ ಬಗೆಗಿನ ಲೇಖನ ಎಂದು ನಿಖರವಾಗಿ ತಿಳಿಸಿದರು. ಮತ್ತೆ ಒಂದರ್ಧ
ಗಂಟೆಯಲ್ಲಿ ಬೆಂಗಳೂರಿನ ಆಶ್ರಯದಿಂದಲೇ ನನಗೆ ಫೋನ್ ಬಂದಿತು. ಅಲ್ಲಿಯ ಮುಖ್ಯಸ್ಥರು ಮಾತನಾಡಿ ಆ ಹುಡುಗಿಯ ಬಗೆಗಿನ ವಿವರ ಕೊಟ್ಟು ನಂತರ ಆಕೆಗೆ ಫೋನ್ ಕೊಟ್ಟರು. ಕುಂದಾಪುರ ತಾಲೂಕಿನ ಕುಂದ ಕನ್ನಡದಲ್ಲಿ ಮಾತನಾಡಬೇಕಾದ ಆಕೆ ಅಚ್ಚ ಅಮೆರಿಕನ್ ಆಕ್ಸೆಂಟ್‌ನಲ್ಲಿ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ
ಮಾತನಾಡಿದಳು. ನಂತರ ಆಕೆಯ ಸಾಕುತಾಯಿ ಶ್ರೀಮತಿ ಕಾಕ್ಸ್ ಅವರೂ ಮಾತನಾಡಿದರು.

ಅವರಿಬ್ಬರೂ ತಾವು ಇನ್ನೊಂದೆರೆಡು ದಿನ ಮಾತ್ರ ಬೆಂಗಳೂರಿನಲ್ಲಿ ಇರುವುದಾಗಿಯೂ ಸಾಧ್ಯವಾದರೆ ನಾನು ಬೆಂಗಳೂರಿಗೆ ಬಂದು ಭೇಟಿಯಾಗಬೇಕೆಂದು
ವಿನಂತಿಸಿಕೊಂಡರು. ಚಿಕ್ಕ ಮಗುವಿದ್ದಾಗ ಆಸ್ಪತ್ರೆಯ ಹಾಸಿಗೆಯ ಮೇಲೆ ಬಿದ್ದುಕೊಂಡು ಬಡಿಯಲು ಕೈಕಾಲುಗಳೂ ಇಲ್ಲದ ಹುಡುಗಿ ಈಗ ಹೇಗಾಗಿದ್ದಾಳೆ
ಎನ್ನುವ ಕುತೂಹಲ ನನಗೂ ಇತ್ತು. ನಂತರ ಎರಡು ದಿನಗಳಲ್ಲಿ ನಾನು ಅವರನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿದೆ.

ಹೃದಯಸ್ಪರ್ಶಿ ಸಾರ್ಥಕ ಕ್ಷಣಗಳು : ಆಕೆ ಬೆಂಗಳೂರಿನ ಆಶ್ರಯ ದ ಎದುರಿಗೆ ಕಾರಿನಿಂದ ಇಳಿದು ತಳ್ಳುಗಾಡಿಯಲ್ಲಿ ಕೂತು ಬರುವಾಗ 18 ವರ್ಷಗಳ
ಹಿಂದೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ ಮಗು ಇವಳೇ ಹೌದೇ ಎಂಬ ಅನುಮಾನ ಒಂದು ನಿಮಿಷ ಕಾಡಿತು. ಹೌದು ಅದೇ
ಸುಂದರ ಮುಖ. ಆದರೆ ಎಂತಹಾ ಕಾಲದ ವಿಪರ್ಯಾಸ. ಆಗ ಆಕೆ ಪಾಲಕರು ತೊರೆದ ಅಸಹಾಯಕ ಮಗು. ಈಗ ಆತ್ಮವಿಶ್ವಾಸದ ಮತ್ತು ಉಲ್ಲಾಸದ ನಗು. ಆಕೆಗೆ ಈಗ ಕ್ಯಾಥರೀನ್ ಕಾಕ್ಸ್ ಎಂಬ ಬಲವಾದ ಸಾಕುತಾಯಿ ಇದ್ದಾಳೆ.

ಮಿಂಡಾ ಹಾಗೂ ಕ್ಯಾಥರೀನ್ ಕಾಕ್ಸ್ ಇಬ್ಬರಿಗೂ ನನ್ನಲ್ಲಿನ ಹಳೆಯ ತರಂಗದ ಲೇಖನ ಹಾಗೂ ಆಗಿನ 6-8 ಫೋಟೋಗಳನ್ನು ( ಮಿಂಡಾ ಹುಟ್ಟಿ 3 ದಿನಗಳ ನಂತರ ಹಾಗೂ ಆಸ್ಪತ್ರೆಯಲ್ಲಿದ್ದಾಗ ತೆಗೆದದ್ದು) ನೋಡಿ ಕಣ್ಣುಗಳಲ್ಲಿ ಸಂತೋಷ, ಆನಂದಾಶ್ರುಗಳು, ವ್ಯಕ್ತಪಡಿಸಲಾರದ ನಾಸ್ಟಾಲ್ಜಿಯಾ. ಆ ಎಲ್ಲಾ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಪ್ರತಿಛಾಯೆ ತೆಗೆದುಕೊಂಡರು.

ವಿಕಲಾಂಗ ಮಗುವನ್ನು ದತ್ತು ಪಡೆದುಕೊಂಡು ಸಾಕಿ, ಆಕೆ ಕಲೆಯಲ್ಲಿ ನಿಪುಣಳಾಗುವಂತೆ ಮಾಡಿದ ಕ್ಯಾಥರೀನ್ ಕಾಕ್ಸ್ ಅವರ ಅಗಾಧ ಪರಿಶ್ರಮವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ಮಿಂಡಾ ತನ್ನ ಮೊಂಡುಕೈಯನ್ನು ಕುತ್ತಿಗೆ ಸಂದಿನಲ್ಲಿ ಸಿಲುಕಿಸಿ ಬಿಡಿಸಿದ ಅಪೂರ್ವ 25 ಕ್ಕೂ ಹೆಚ್ಚು ಚಿತ್ರಗಳನ್ನು ಕಂಪ್ಯೂಟರ್
ನಲ್ಲಿ ತೋರಿಸಿದಾಗ ನನಗೆ ನಂಬಲು ಸಾಧ್ಯವಾಗಲೇ ಇಲ್ಲ.

ಕೆಲವು ದಿನಗಳ ಮೊದಲು ಅಮೆರಿಕದಲ್ಲಿ ಆಕೆಯ ಚಿತ್ರಗಳ ಪ್ರದರ್ಶನಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೋಡಿ ಸಂತಸವಾಯಿತು. ಅತ್ಯುತ್ತಮ
ಅಂತಾರಾಷ್ಟ್ರೀಯ ಕಲಾಕಾರಳಾಗುವಂತೆ ಹಾರೈಸಿದೆ. ಅವರೊಡನೆ ಕಳೆದ ಮೂರು ಗಂಟೆಗಳು ನನ್ನ ವೈದ್ಯ ಸಾಹಿತ್ಯ ಜೀವನದ ಸಾರ್ಥಕ ಕ್ಷಣಗಳು ಎಂದು
ಭಾವಿಸುತ್ತೇನೆ. ಈಕೆ ನಮ್ಮ ದೇಶದಲ್ಲಿದ್ದರೆ ಈ ಸಾಧನೆ, ಬೆಳವಣಿಗೆ ಸಾಧ್ಯವಿತ್ತೇ? ಈ ಭಾವನೆ ಒಂದೆಡೆ ಆದರೆ ನಮ್ಮಲ್ಲಿನ ಹಲವಾರು ಮಠಗಳು, ಸ್ವಾಮಿಗಳು ತಮ್ಮ ಸಮಾಜ ಸೇವೆಯ ಅಂಗವಾಗಿ ಈ ರೀತಿಯ ಸೇವೆ ಮಾಡುವ ಸಂಸ್ಥೆಯನ್ನು ಸ್ಥಾಪಿಸಬಾರದೇ? ನಮ್ಮ ದೇಶದ ಅಸಹಾಯಕ, ಅತಂತ್ರ ಮಗು ವಿದೇಶಕ್ಕೆ
ಹೋಗಿ ಬೆಳೆದು ಉನ್ನತಿ ಗಳಿಸಬೇಕೇ? ಎಂಬ ನಿರಾಶಾಭಾವನೆಯೂ ಹುಟ್ಟಿತು.

ನಾನು ಮಿಂಡಾಳನ್ನು ಬೀಳ್ಕೊಡುವಾಗ ನನ್ನನ್ನು ಅಪ್ಪಿಕೊಂಡು ಫೋಟೋ ತೆಗೆಸಿಕೊಂಡು, ನಮ್ಮಲ್ಲರ ಹಿಂದಿನ ಪರಿಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು
ತಿಳಿಸಿ ನನ್ನ ಈ-ಮೇಲ್ ತಿಳಿದುಕೊಂಡು ಸಂಪರ್ಕ ದಲ್ಲಿರುವುದಾಗಿ ಹೇಳಿದಳು. ನಾನು ಸಂತಸ, ಸಾರ್ಥಕ ಭಾವದಿಂದ ಹಿಂದಿರುಗಿದೆ.