ಅಭಿಪ್ರಾಯ
ವಿಜಯ್ ದರ್’ಡ
ಹಿರಿಯ ಪತ್ರಕರ್ತ, ಅಧ್ಯಕ್ಷರು, ಲೋಕಮತ್ ಮೀಡಿಯಾ
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಧಾನಿ ನರೇಂದ್ರ ಮೋದಿಯವರ ಅದ್ಭುತ ದೂರದೃಷ್ಟಿಯ ಫಲ ಎಂಬು ದರಲ್ಲಿ ಯಾವ ಅನುಮಾನವೂ ಇಲ್ಲ. ಅದರಲ್ಲಿ ಡಿಜಿಟಲ್ ಹೆಲ್ತ್ ಕಾರ್ಡ್ ವಿತರಣೆ ಕೂಡ ಒಳ್ಳೆಯ ಯೋಜನೆಯೇ. ಆದರೆ ದೇಶದ ಆರೋಗ್ಯ ವ್ಯವಸ್ಥೆ ಹೇಗೆ ಸುಧಾರಿಸುತ್ತದೆ ಎಂಬುದು ದೊಡ್ಡ ಪ್ರಶ್ನೆ. ಹೆಲ್ತ್ ಕಾರ್ಡ್ಗಳನ್ನು ನೀಡಿದ ಮೇಲೆ ದೇಶದಲ್ಲಿ ಒಳ್ಳೆಯ ಆರೋಗ್ಯ ವ್ಯವಸ್ಥೆಯನ್ನೂ ನೀಡುತ್ತೀರಾ ?
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡಿ ಭಾರತಕ್ಕೆ ಮರಳಿದ ಒಂದಷ್ಟು ಡಾಕ್ಟರ್ಗಳು ನನಗೆ ಪರಿಚಯವಿದ್ದಾರೆ. ಅವರ ಬಳಿ ಚಿಕಿತ್ಸೆಗೆ ಹೋಗಬೇಕೆಂದರೆ ನೀವು ಯಾವುದೇ ದಾಖಲೆ ಅಥವಾ ರಿಪೋರ್ಟ್ಗಳನ್ನು ಕೊಂಡೊ ಯ್ಯಬೇಕಿಲ್ಲ. ನೀವು ಅವರ ರೋಗಿಯಾಗಿದ್ದರೆ ನಿಮ್ಮೆಲ್ಲಾ ದಾಖಲೆಗಳೂ ಅವರ ಬಳಿ ಇರುತ್ತವೆ. ಅಪಾಯಿಂಟ್ ಮೆಂಟ್ ತೆಗೆದು ಕೊಳ್ಳುವಾಗ ನಿಮ್ಮ ಮೆಡಿಕಲ್ ನಂಬರ್ ಹೇಳಿದರಾಯಿತು. ಅನೇಕ ಡಾಕ್ಟರ್ಗಳು ತಮ್ಮದೇ ಆಪ್ಗಳನ್ನು ಕೂಡ ಮಾಡಿಕೊಂಡಿ ದ್ದಾರೆ. ಅದರ ಮೂಲಕ ನೀವು ಆನ್ಲೈನ್ನಲ್ಲೇ ಚಿಕಿತ್ಸೆ ಪಡೆಯಬಹುದು.
ಇವರ ಬಳಿಯಿರುವ ಹೆಲ್ತ್ ರೆಕಾರ್ಡ್ ಮ್ಯಾನೇಜ್ ಮೆಂಟ್ ವ್ಯವಸ್ಥೆ ನೋಡಿದ ಮೇಲೆ ನನ್ನ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ ಯೆಂದರೆ, ಭಾರತದ ಆರೋಗ್ಯ ವ್ಯವಸ್ಥೆ ಏಕೆ ಹೀಗಿರ ಬಾರದು? ಏಕೆ ಈ ವ್ಯವಸ್ಥೆಯನ್ನು ಇನ್ನೂ ಇಲ್ಲಿ ಪ್ರಯತ್ನಿಸಿಲ್ಲ? 2020ರ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಎಂಬ ಪ್ರಾಯೋಗಿಕ ಯೋಜನೆಯನ್ನು ದೇಶದ ಕೆಲ ಭಾಗಗಳಲ್ಲಿ ಘೋಷಿಸಿದರು. ಅದು ಖಂಡಿತ ಒಂದಷ್ಟು ಸುಧಾರಣೆ ತರುತ್ತದೆ ಎಂದು ನನಗೆ ನಿರೀಕ್ಷೆಯಿತ್ತು. ಹಾಗೇ ಆಯಿತು ಕೂಡ.
ಅಂಡಮಾನ್ ನಿಕೋಬಾರ್, ಪುದುಚೇರಿ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು, ಲಕ್ಷದ್ವೀಪ, ಲಡಾಖ್ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು ಒಂದು ಲಕ್ಷ ಆರೋಗ್ಯ ಕಾರ್ಡ್ಗಳನ್ನು ಈ ಯೋಜನೆಯಲ್ಲಿ ವಿತರಿಸ ಲಾಗಿದೆ. ಅವು ಧನಾತ್ಮಕ ಫಲಿತಾಂಶ ಕೂಡ ನೀಡುತ್ತಿವೆ. 2021ರ ಸೆಪ್ಟೆಂಬರ್ 27ರಂದು ಈ ಡಿಜಿಟಲ್ ಹೆಲ್ತ್ ಕಾರ್ಡ್ ಯೋಜನೆ ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಯಿತು.
ಮೊದಲಿಗೆ ಡಿಜಿಟಲ್ ಹೆಲ್ತ್ ಕಾರ್ಡ್ ಅಂದರೇನೆಂದು ತಿಳಿದುಕೊಳ್ಳೋಣ. ಇದನ್ನು ಹೇಗೆ ತಯಾರಿಸಲಾಗುತ್ತದೆ? ಇದರ ಪ್ರಯೋ ಜನವೇನು? ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಯಾವುದೇ ಯೋಜನೆ ಜಾರಿಗೊಳಿಸಿದರೂ ಅದರ ಸುತ್ತ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮೊದಲ ಪ್ರಶ್ನೆಯೆಂದರೆ, ನಮ್ಮ ಖಾಸಗಿ ಮಾಹಿತಿಗೆ ಭದ್ರತೆ ಇದೆಯೇ? ಡಿಜಿಟಲ್ ಹೆಲ್ತ್ ಕಾರ್ಡ್ ವಿಷಯ ದಲ್ಲಿ ಸರಕಾರ ಈ ಕುರಿತು ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲವೆಂದು ಖಡಾಖಂಡಿತವಾಗಿ ಹೇಳಿದೆ.
ನಿಮ್ಮ ಮಾಹಿತಿಯನ್ನು ನೋಂದಾಯಿತ ವೈದ್ಯರು ಅಥವಾ ಆರೋಗ್ಯ ಸೇವೆ ಪೂರೈಕೆದಾರರನ್ನು ಹೊರತುಪಡಿಸಿ ಇನ್ನಾರೂ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಸರಕಾರ ತಿಳಿಸಿದೆ. ಆಧಾರ್ ಕಾರ್ಡ್ನಲ್ಲಿ ಹೇಗೆ ನಿಮ್ಮ ಮಾಹಿತಿ ಡಿಜಿಟಲ್ ರೂಪದಲ್ಲಿ ಲಭ್ಯವಿದೆಯೋ ಹಾಗೆಯೇ ಹೆಲ್ತ್ ಕಾಡ್ ನಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಆಗ ನೀವು ಡಾಕ್ಟರ್ ಬಳಿಗೆ ಹೋಗುವಾಗ ಹಳೆಯ ಔಷಧಿ ಚೀಟಿಗಳು, ಸ್ಲಿಪ್ ಗಳು ಹಾಗೂ ಟೆಸ್ಟ್ ರಿಪೋರ್ಟ್ಗಳನ್ನು ಒಯ್ಯುವ ಅಗತ್ಯ ವಿರುವುದಿಲ್ಲ. ಏಕೆಂದರೆ ಅವೆಲ್ಲವೂ ಮೊದಲೇ ಡಿಜಿಟಲ್ ರೂಪದಲ್ಲಿ ಸರ್ವರ್ನಲ್ಲಿ ಸಂಗ್ರಹವಾಗಿರುತ್ತವೆ.
ನಿಮ್ಮ ಡಿಜಿಟಲ್ ಹೆಲ್ತ್ ಕಾರ್ಡ್ ನ ನಂಬರ್ ಹಾಕಿದರೆ ಡಾಕ್ಟರ್ಗೆ ಆ ಮಾಹಿತಿಯೆಲ್ಲ ಬೆರಳ ತುದಿಯಲ್ಲೇ ಸಿಗುತ್ತದೆ. ಈ ಮಿಷನ್ ಅಡಿ ದೇಶದ ಎಲ್ಲಾ ಡಾಕ್ಟರ್ಗಳು, ಆಸ್ಪತ್ರೆಗಳು ಹಾಗೂ ಎಲ್ಲಾ ರೀತಿಯ ಆರೋಗ್ಯ ಸೇವೆ ಪೂರೈಕೆದಾರರನ್ನು ಕೇಂದ್ರ ಸರಕಾರದ
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ನ ಸರ್ವರ್ಗೆ ಸಂಪರ್ಕಿಸಲಾಗುತ್ತದೆ. ನೀವು ಒಬ್ಬ ವೈದ್ಯರನ್ನು ಭೇಟಿ ಮಾಡಿದರೆ ಅವರು ನಿಮಗೆ ನೀಡಿದ ಚಿಕಿತ್ಸೆಯ ವಿವರವನ್ನು ಸರ್ವರ್ಗೆ ಕಳಿಸುತ್ತಾರೆ. ಅವರ ಕ್ಲಿನಿಕ್ನಿಂದಲೇ ನೇರವಾಗಿ ಅಲ್ಲಿಗೆ ಮಾಹಿತಿ ಹೋಗುತ್ತದೆ. ನೀವು ಯಾವುದಾದರೂ ಚೆಕ್-ಅಪ್ ಮಾಡಿಸಿಕೊಂಡರೆ ಅದರ ಮಾಹಿತಿಯೂ ಅಲ್ಲಿಗೆ ಅಪ್ಲೋಡ್ ಆಗುತ್ತದೆ. ಆಗ ನೀವು ದೇಶದ ಯಾವ ಭಾಗದಲ್ಲಿದ್ದರೂ ನಿಮಗೆ ಬೇಕಾದ ಅತ್ಯುತ್ತಮ ಡಾಕ್ಟರ್ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದು.
ಅದರಲ್ಲೂ, ತುರ್ತು ಸಂದರ್ಭಗಳಲ್ಲಿ ಈ ಹೆಲ್ತ್ ಕಾರ್ಡ್ ನಿಜವಾಗಿಯೂ ಅಲಾದೀನ್ನ ದೀಪದಂತೆ ಕೆಲಸ ಮಾಡುತ್ತದೆ.
ಒಬ್ಬ ಅಪರಿಚಿತ ವ್ಯಕ್ತಿಗೆ ಅಪಘಾತವಾಗಿ ಆತನನ್ನು ಯಾರೋ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾರೆ ಅಂತಿಟ್ಟುಕೊಳ್ಳಿ. ಅವನ ಪರಿಸ್ಥಿತಿ ಗಂಭೀರವಾಗಿದೆ. ತಕ್ಷಣ ಚಿಕಿತ್ಸೆ ನೀಡಬೇಕು. ಆದರೆ ರಕ್ತದ ಗುಂಪು ಯಾವುದೆಂದು ಗೊತ್ತಿಲ್ಲ. ಅವನಿಗೆ ಡಯಾ ಬಿಟೀಸ್ ಇದೆಯೇ ಅಥವಾ ಇನ್ನಾವುದಾದರೂ ಗಂಭೀರ ಅನಾರೋಗ್ಯ ಇದೆಯೇ, ಅವನು ಯಾವುದಾದರೂ ಔಷಧಿಗೆ ಅಲರ್ಜಿಕ್ ಆಗಿದ್ದಾನೆಯೇ ಎಂಬುದನ್ನೆಲ್ಲ ತಿಳಿದುಕೊಳ್ಳುವುದಕ್ಕೇ ಡಾಕ್ಟರ್ಗಳಿಗೆ ಸಾಕಷ್ಟು ಸಮಯ ಹಿಡಿಯುತ್ತದೆ.
ಅಪಘಾತವಾದಾಗ ಗೋಲ್ಡನ್ ಅವರ್ನಲ್ಲಿ ಚಿಕಿತ್ಸೆ ದೊರೆತರೆ ರೋಗಿ ಉಳಿಯುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಡಿಜಿಟಲ್ ಹೆಲ್ತ್ ಕಾರ್ಡ್ ಇದ್ದರೆ ಅದರಲ್ಲಿ ರೋಗಿಯ ಎಲ್ಲಾ ಇತಿಹಾಸವೂ ಮೊದಲೇ ಸಂಗ್ರಹವಾಗಿರುತ್ತದೆ. ಡಾಕ್ಟರ್ಗಳು
ಅದನ್ನು ನೋಡಿಕೊಂಡು ಫಟಾಫಟ್ ಚಿಕಿತ್ಸೆ ಆರಂಭಿಸಬಹುದು.
ಡಿಜಿಟಲ್ ಹೆಲ್ತ್ ಕಾರ್ಡ್ ಯೋಜನೆ ನಿಜಕ್ಕೂ ಒಳ್ಳೆಯ ಹೆಜ್ಜೆ. ಆದರೆ ಸಮಸ್ಯೆಯಿರುವುದು ಎಲ್ಲಿ ಅಂದರೆ ನಮ್ಮ ದೇಶದಲ್ಲಿರುವ ಕಳಪೆ ಮಟ್ಟದ ಆರೋಗ್ಯ ವ್ಯವಸ್ಥೆಯಲ್ಲಿ. ಕೋವಿಡ್-19 ಪ್ಯಾಂಡೆಮಿಕ್ನ ಸಮಯದಲ್ಲಿ ಹೇಗೆ ಈ ದೇಶದ ಆರೋಗ್ಯ ವ್ಯವಸ್ಥೆ ಅಂಗಾತ ಮಲಗಿಬಿಟ್ಟಿತು ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಹಳ್ಳಿಗಳಲ್ಲಂತೂ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಅಲ್ಲಿ ಕೋವಿಡ್ ಪರೀಕ್ಷೆಗೂ ವ್ಯವಸ್ಥೆಯಿರಲಿಲ್ಲ. ಹಳ್ಳಿಗಳಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರವಾಗಿರಲಿ, ಸರಕಾರಿ ಆಸ್ಪತ್ರೆ ಯಾಗಿರಲಿ, ಮೆಡಿಕಲ್ ಕಾಲೇಜಾಗಿರಲಿ ಅಥವಾ ಜಿಲ್ಲಾಸ್ಪತ್ರೆಯೇ ಆಗಿರಲಿ, ಅಲ್ಲೆಲ್ಲ ಆಕ್ಸಿಜನ್ ಸಿಲಿಂಡರ್ ಹಾಗೂ ಔಷಧಗಳ ಕೊರತೆ ಕೈಮೀರಿಹೋಗಿದ್ದನ್ನು ನಾವೆಲ್ಲ ನೋಡಿದೆವು.
ಸರಿಯಾದ ಆರೋಗ್ಯ ವ್ಯವಸ್ಥೆಗಳಿಲ್ಲದೆ ಎಲ್ಲೆಡೆ ಜನರು ಪರದಾಡಿದ್ದನ್ನು ಅಸಹಾಯಕತೆಯಿಂದ ನೋಡಿದೆವು. ಸರಕಾರಕ್ಕೂ ಈ ಕಹಿ ಸತ್ಯದ ಅರಿವಾಯಿತು. ವಾಸ್ತವವಾಗಿ, ಸರಿಯಾದ ವ್ಯವಸ್ಥೆ ಇಲ್ಲದಿರುವುದು ಒಂದು ಸಮಸ್ಯೆಯಾದರೆ, ವ್ಯವಸ್ಥೆ ಇದ್ದರೂ ಅದನ್ನು ಬಳಸಲು ಆಗದಿದ್ದುದು ಅದಕ್ಕಿಂತ ಗಂಭೀರವಾದ ಸಮಸ್ಯೆ.
ಸರಕಾರ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ನಿರ್ಮಿಸಿದೆ. ಅವುಗಳಿಗೆ ಸಾವಿರಾರು ಕೋಟಿ ರು. ತೆರಿಗೆದಾರರ ಹಣ ಖರ್ಚು ಮಾಡಿದೆ. ಆ ಆಸ್ಪತ್ರೆಗಳಿಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಆಮದು ಮಾಡಿಕೊಂಡಿದೆ. ಆದರೆ ಆ ಯಂತ್ರಗಳು ಈಗ ಕೆಲಸ ಮಾಡುತ್ತಿವೆಯಾ? ಬಡವರಿಗೆ ಹಾಗೂ ಜನಸಾಮಾನ್ಯರಿಗೆ ಆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಔಷಧಿ ಸಿಗುತ್ತಿದೆಯಾ? ಸರಕಾರಿ
ಆಸ್ಪತ್ರೆಗಳಲ್ಲಿ ವೈದ್ಯರು ಔಷಧಿ ಬರೆದು, ಈ ಔಷಧಿ ಇಲ್ಲಿ ಸಿಗುವುದಿಲ್ಲ, ಹೊರಗೆ ಎಲ್ಲಾದರೂ ತೆಗೆದುಕೊಳ್ಳಿ ಎಂದು ರೋಗಿಗೆ ಹೇಳುತ್ತಾರೆ. ಮೆಡಿಕಲ್ ಕಾಲೇಜುಗಳ ಆಪರೇಷನ್ ಥಿಯೇಟರ್ಗಳು ಅನಿರ್ದಿಷ್ಟಾವಧಿಯವರೆಗೆ ಮುಚ್ಚೇ ಇರುತ್ತವೆ. ಆ ಆಸ್ಪತ್ರೆ ಗಳಲ್ಲಿ ಕೆಲಸ ಮಾಡುವ ಡಾಕ್ಟರ್ಗಳು ಖಾಸಗಿ ಕ್ಲಿನಿಕ್ನಲ್ಲಿ ದುಡಿಯುತ್ತಿರುತ್ತಾರೆ.
ಮಹಿಳೆಯೊಬ್ಬಳಿಗೆ ಹೆರಿಗೆಯ ನಂತರ ನರ್ಸಿಂಗ್ ಹೋಮ್ನಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕು, ಮಗುವಿಗೂ ಕೂಡ
ಅಗತ್ಯ ವಸ್ತುಗಳನ್ನು ನೀಡಬೇಕು ಎಂದು ಸರಕಾರದ ನಿಯಮದಲ್ಲಿ ಬರೆದಿದೆ. ಆದರೆ ಎಲ್ಲಿ ಅಂತಹ ಸೌಲಭ್ಯ ಸಿಗುತ್ತಿದೆ? ಹೆಲ್ತ್ ಕಾರ್ಡ್ ವಿತರಣೆಯ ನಂತರ ಈ ಸೌಲಭ್ಯಗಳೆಲ್ಲ ಸಿಗುತ್ತವೆಯೇ? ನನ್ನ ಪ್ರಕಾರ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ನಲ್ಲಿ ಹಂಚಿಕೆ ಮಾಡುವ ಹಣವನ್ನು ಗಣನೀಯವಾಗಿ ಏರಿಕೆ ಮಾಡಿ, ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಉತ್ತರದಾಯಿತ್ವ ನಿಗದಿಪಡಿಸು ವವರೆಗೂ ಈ ಪರಿಸ್ಥಿತಿ ಸುಧಾರಿಸುವುದಿಲ್ಲ. ಕೋವಿಡ್ ಸಮಯದಲ್ಲಿ ಹೇಗೆ ಔಷಧಿಗಳ ಕೊರತೆಯಾಗಿ, ಒಂದಕ್ಕೆರಡು ಬೆಲೆಗೆ
ಅವುಗಳನ್ನು ಮಾರಲಾಗುತ್ತಿತ್ತು ಎಂಬುದನ್ನು ನಾವು ನೋಡಿದ್ದೇವೆ. ಕಾಳಸಂತೆಯಲ್ಲಿ ಎಷ್ಟು ಸಾವಿರ ಇಂಜೆಕ್ಷನ್ಗಳು ಮಾರಾಟ ವಾಗಲಿಲ್ಲ? ಅದನ್ನೆಲ್ಲ ಸರಕಾರ ಆಡಿಟ್ ಮಾಡಿಸಬೇಕು. ಈ ವಿಷಯದಲ್ಲಿ ಸರಕಾರ ಶ್ವೇತಪತ್ರ ಹೊರಡಿಸಬೇಕು. ಜತೆಗೆ, ಈ ಕಾರ್ಡ್ಗಳ ಬಗ್ಗೆ ಇನ್ನೊಂದು ಪ್ರಶ್ನೆಯಿದೆ.
ನೀವು ಇನ್ನೂ ಎಷ್ಟು ಕಾರ್ಡ್ಗಳನ್ನು ಜನರಿಗೆ ವಿತರಿಸುತ್ತೀರಿ? ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಕಾರ್ಡ್, ಪಾಸ್ಪೋರ್ಟ್ ಕಾರ್ಡ್…! ಎಲ್ಲಾ ಕಾಡ್ ಗಳನ್ನೂ ಸೇರಿಸಿ ಒಂದೇ ಕಾರ್ಡ್ ಏಕೆ ನೀಡಬಾ ರದು? ಇಂತಹ ಇನ್ನೂ ಅನೇಕ ಪ್ರಶ್ನೆಗಳಿವೆ. ದೇಶದ ಸಾಮಾನ್ಯ ಪ್ರಜೆಗೆ ಈ ಹೆಲ್ತ್ ಕಾರ್ಡ್ ನಿಜಕ್ಕೂ ಪ್ರಯೋಜನ ನೀಡುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕು.