ತನ್ನಿಮಿತ್ತ
ಸಂದೀಪ್ ಶರ್ಮಾ
1980-90ರ ಕಾಲ. ಅದೊಂದು ಕಾಲವಿತ್ತು ಹಾಗೂ ಅದಕ್ಕೂ ಮುನ್ನ ಹುಟ್ಟಿದವರಿಗೆ ನಮ್ಮ ಹಿರಿಯರಿಗೆ ತುಂಬಾ ಚೆನ್ನಾಗಿ ಗೊತ್ತಿರುವ ಅಪೂರ್ವ ಕಾಲವದು. ಆ ಕಾಲದಲ್ಲಿ ಅಂಚೆಗಿದ್ದ ಮಹತ್ವ, ಇವತ್ತಿನ ವಾಟ್ಸ್ ಆಪ್‌ಗೂ, ಮೆಸ್ಸೆಂಜರ್‌ಗೂ ಇಲ್ಲ!
ಊರಿಗೊಂದು ಪೋಸ್ಟ್ ಆಫೀಸ್ ಇದ್ದರೆ ಅದೇ ದೊಡ್ಡ ಹೆಮ್ಮೆ ಹಾಗೂ ಗೌರವ. ಗೋಡೆಗೆ, ಕಂಬಕ್ಕೆ ಕಟ್ಟಿರುತ್ತಿದ್ದ ಕೆಂಪು
ಡಬ್ಬಿಯೇ ಜಗತ್ತಿನ ಸಂವಹನ ಸಾಧನ. ಊರಿಗೆ ಹೊರಟು ನಿಂತವರಿಗೆ ಕಾಗದ ಬರೆಯೋದು ಮರೆಯಬೇಡ ಎಂದು ಹಿರಿಯರು ತಪ್ಪದೇ ಹೇಳುತ್ತಿದ್ದರು. ‘ತೀರ್ಥರೂಪ ಸಮಾನರಾದ..’ ಎಂದು ಆರಂಭಿಸಿ ಉದ್ದನೆಯ ಕಾಗದವೊಂದನ್ನು ಬರೆದೇ ಬಿಡು ತ್ತಿದ್ದರು. ಅದನ್ನು ಓದುತ್ತಿದ್ದರೆ, ಬರೆದವರೇ ಎದುರು ನಿಂತು ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಿರುವಂಥಾ ಅನುಭವ. ಅದನ್ನು ನೆನಪಿಸಿಕೊಳ್ಳಲು ಪ್ರತಿ ವರ್ಷ ಅ.09 ರಂದು ವಿಶ್ವ ಅಂಚೆ ದಿನ ಪರಿಗಣಿಸಲಾಗುತ್ತದೆ.
‘ಅಂಚೆಯಣ್ಣ ಬಂದ.. ನಮಗೆ ಅಂಚೆ ತಂದ..’ ಅಂಚೆಯಣ್ಣನ ಬಗೆಗಿನ ಹೀಗೊಂದು ಹಾಡೊಂದನ್ನು ಸಣ್ಣವರಿದ್ದಾಗ ನಮ್ಮ ಪಠ್ಯ ಕ್ರಮದಲ್ಲಿ ಓದಿದ್ದೇವೆ. ಈ ದಿನದಂದು ಸಂಪೂರ್ಣ ದಿನ ಸಮರ್ಪಿತವಾಗಬೇಕಾದದ್ದು ನಮಗೆ ಸಂಬಂಧಿಸಿದ ಅಮೂಲ್ಯ ಓಲೆಯನ್ನು ತಲುಪಿಸುವ ಈ ಪೋಸ್ಟ್ ಮ್ಯಾನ್‌ಗಳೆಂಬ ಹೆಚ್ಚಾಗಿ ಸೈಕಲ್ ಏರಿಕೊಂಡು ಟಪಾಲನ್ನು ತಲುಪಿಸುವ ನಾವಿಕರಿಗೆ. ಟಪಾಲು ಸ್ವೀಕಾರ, ರವಾನೆ, ಹಂಚಿಕೆ, ಠಸ್ಸೆ ಹೊಡೆಯುವುದು, ಎಲ್ಲವನ್ನೂ ಮಾಡುವವರು ಇವರೇ. ಕವರ್, ಕಾರ್ಡ್, ಸ್ಟಾಂಪ್, ಉಳಿತಾಯ ಖಾತೆ, ಮನಿ ಆರ್ಡರ್, ರಿಜಿಸ್ಟರ್ ಪೋಸ್ಟ್ ಸೇರಿದಂತೆ ಅಂಚೆಯ ಸೇವೆ ಗಳನ್ನೆಲ್ಲಾ ಇವರು ನಿಭಾಯಿಸುತ್ತಾರೆ.
ದಶಕದಿಂದ ವಿಮಾ ಸೇವೆಯನ್ನು ಶುರು ಮಾಡಿದ್ದಾರೆ. ಇಂದು ನಾವು ಇ-ಮೇಲ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಫ್ಯಾಕ್ಸ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ದಶಕಗಳ ಹಿಂದೆ ಸಂದೇಶಗಳನ್ನು, ಪತ್ರ, ಡ್ರಾಫ್ಟ್’ಗಳನ್ನು, ಚೆಕ್ ಮತ್ತು ಇತರ ಪ್ರಮುಖ ಮಾಹಿತಿ ಯನ್ನು ಕಳುಹಿಸಲು ಜನರು ಅಂಚೆಯನ್ನು ಹೆಚ್ಚಾಗಿ ಅವಲಂಬಿಸಿದ್ದರು. ಆದರೀಗ ಅದರ ಬಳಕೆ ಕಡಿಮೆಯಾಗಿದೆ. ಭಾರತದಲ್ಲಿ ಮೊದಲು ಅಂಚೆ ಸೇವೆಯನ್ನು ಪ್ರಾರಂಭಿಸಿ ದವರು ಬ್ರಿಟಿಷರು. ಹೊಸ ಯುಗದ ತಂತ್ರಜ್ಞಾನಗಳು ಮತ್ತು ಹೊಸ ಸಂವಹನ ವಿಧಾನಗಳ ಆಗಮನ ದಿಂದಾಗಿ, ಸಾಂಪ್ರದಾಯಿಕ ಸಂದೇಶ ರವಾನೆ ಸೇವೆಗಳ ಬಳಕೆ ಕಡಿಮೆಯಾಗಿದೆ.
ಮನೆಯವರು, ಬಂಧು ಮಿತ್ರರು, ಸ್ನೇಹಿತರು, ಪ್ರೇಮಿಗಳು, ಕೋರ್ಟು ಕಚೇರಿ ವ್ಯವಹಾರಸ್ಥರು ದಿನ- ವಾರ-ತಿಂಗಳುಗಳ ಕಾಲ ತಮ್ಮವರಿಂದ ಬರುವ ಒಂದು ಪತ್ರಕ್ಕಾಗಿ ಕಾಯುವ ಪರಿಸ್ಥಿತಿ ಈಗಿಲ್ಲ. ಡಿಜಿಟಲ್ ಕ್ರಾಂತಿಯಿಂದಾಗಿ ಇಂದು ಅಂಚೆ ಜನ ಮಾನಸ ದಿಂದ ದೂರವೇ ಉಳಿದಿದೆ. ಆದರೆ ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಸ್ಥಿರ ದೂರವಾಣಿ ಸೌಲಭ್ಯ ಮಿತಿಯಲ್ಲಿದ್ದ, ಕಂಪ್ಯೂ ಟರ್ ಆಧಾರಿತ ಅಂತರ್ಜಾಲ ವ್ಯವಸ್ಥೆ ಇಲ್ಲದ ದಿನಗಳಲ್ಲಿ ಅಂಚೆಯೇ ಜನರ ಸಂಪರ್ಕ ಸೇತುವೆಗಳಾಗಿದ್ದವು.
ಪ್ರಸ್ತುತ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಆರಂಭಿಸಲಾಗಿದ್ದು, ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿ ಮಾಡುತ್ತಿದೆ. ಇದರಲ್ಲಿ ನೀಡಲಾಗುವ ಬ್ಯಾಂಕಿಂಗ್ ಸೇವೆಗಳು ಪೋಸ್ಟ್‌ಮನ್ ಮೂಲಕ ಜನರ ಮನೆ ಬಾಗಿಲಿಗೆ ಬರುತ್ತಿವೆ. ಇದಕ ಸುಕನ್ಯಾ ಸಮೃದ್ಧಿ ಯೋಜನೆಯ ವಿಸ್ತರಣೆಯೂ ನಡೆಯುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಇದು ಒದಗಿಸುತ್ತಿದೆ. ಈಗ ಭಾರತೀಯ ಅಂಚೆಯ ಸ್ವರೂಪ, ಕಾರ್ಯವಿಧಾನ ಬದಲಾಗಿದೆ. ಆದರೆ ಭಾರತವನ್ನು ಬೆಸಯುವ ಕಾರ್ಯವನ್ನು ಇಂದಿಗೂ ಅದು ಉತ್ಕೃಷ್ಟವಾದ ರೀತಿಯಲ್ಲೇ ಮಾಡುತ್ತಿದೆ. ಇದೇ ಕಾರಣಕ್ಕೆ ಪ್ರತಿ ಭಾರತೀಯನಿಗೂ ಅಂಚೆಯೊಂದಿಗೆ ಅವಿನಾಭಾವ ಸಂಬಂಧವಿದೆ. ಆ ಸಂಬಂಧವೇ ಭಾರತೀಯ ಅಂಚೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ.
ತಂತ್ರಜ್ಞಾನ ಅಭಿವೃದ್ದಿ ಹೊಂದಿದಂತೆಲ್ಲಾ ಅಂಚೆ ಇಲಾಖೆಯೂ ಸಹ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಭಾರ ತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಹಲವು ಸಮಸ್ಯೆಗಳ ನಡುವೆ ಇವತ್ತಿಗೂ ಅಂಚೆ ಸೇವೆ ನೀಡುತ್ತಿರುವ ಪೋಸ್ಟ್ ಮ್ಯಾನ್, ಪೋಸ್ಟ್ ಮಾಸ್ಟರ್‌ಗಳಿಗೊಂದು ಧನ್ಯವಾದ.