ನವದೆಹಲಿ: ದೆಹಲಿ ಪೊಲೀಸ್ ಆಯುಕ್ತರಾಗಿ ಸಿಬಿಐ ಮಾಜಿ ಮುಖ್ಯಸ್ಥ ರಾಕೇಶ್ ಆಸ್ಥಾನಾ ಅವರನ್ನು ನೇಮಿಸಿ ದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಗುಜರಾತ್ ಕೇಡರ್ ಅಧಿಕಾರಿ ರಾಕೇಶ್ ಅವರು ದೆಹಲಿ ಆಯುಕ್ತರಾಗಿ ಮುಂದುವರೆಯಲು ಇದ್ದ ಅಡ್ಡಿ ಆತಂಕ ದೂರಾಗಿದೆ.
ದೆಹಲಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಕುರಿತಂತೆ ಪ್ರತಿಕ್ರಿಯೆ ಕೇಳಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೂಡಾ ನೀಡಿತ್ತು.
ದೆಹಲಿ ಪೊಲೀಸ್ ಆಯುಕ್ತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಆಸ್ಥಾನಾ ನೇಮಕಾತಿ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿದ ಬಳಿಕ ಸೆಪ್ಟೆಂಬರ್ 27ರಂದು ತೀರ್ಪು ಕಾಯ್ದಿರಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಆಸ್ಥಾನಾ ಅವರನ್ನು ಕೇಂದ್ರ ಸರ್ಕಾರವು ನೇಮಕ ಮಾಡಿದೆ. ತೀರ್ಪಿನ ಪ್ರಕಾರ ಆಯುಕ್ತರನ್ನು ಎರಡು ವರ್ಷಕ್ಕೆ ನೇಮಕ ಮಾಡಬೇಕು. ಆದರೆ, ಒಂದು ವರ್ಷಕ್ಕೆ ಮಾತ್ರ ನೇಮಕಾತಿ ಮಾಡಲಾಗಿದೆ ಎಂದು ವಾದಿಸಲಾಗಿತ್ತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ಸದರಿ ತೀರ್ಪು ಅನ್ವಯಿಸುತ್ತದೆಯೇ ವಿನಾ ದೆಹಲಿ ಪೊಲೀಸ್ ಆಯುಕ್ತರಿಗೆ ಅನ್ವಯಿಸುವುದಿಲ್ಲ ಎಂದು ವಾದಿಸಿದ್ದರು.