Saturday, 23rd November 2024

ವಿಷಕಾರಿ ಅನಿಲ ಸೋರಿಕೆ: 34 ಕ್ಕೂ ಹೆಚ್ಚು ಜನರು ಅಸ್ವಸ್ಥ

ಮುಂಬೈ: ಥಾಣೆ ಜಿಲ್ಲೆಯ ಅಂಬರನಾಥ್ ಪಟ್ಟಣದ ರಾಸಾಯನಿಕ ಕೈಗಾರಿಕಾ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ 34 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.

ರಾಸಾಯನಿಕ ಕಾರ್ಖಾನೆಯ ಬಳಿ ವಾಸಿಸುವ ಹಲವಾರು ಜನರು ಉಸಿರಾಟದ ತೊಂದರೆ, ಕಣ್ಣುಗಳಲ್ಲಿ ಕಿರಿಕಿರಿ, ವಾಕರಿಕೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂಬರನಾಥದ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿರುವ ಘಟಕದಲ್ಲಿ ಸಲ್ಫ್ಯೂರಿಕ್ ಆಸಿಡ್ ಸೋರಿಕೆಯಾಗಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಪ್ರಾದೇಶಿಕ ವಿಪತ್ತು ನಿರ್ವಹಣಾ ಇಲಾಖೆಯ ಮುಖ್ಯಸ್ಥ ಸಂತೋಷ್ ಕದಮ್ ದೃಢಪಡಿಸಿದ್ದಾರೆ.

ಉಸಿರಾಟದ ತೊಂದರೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ 34 ಜನರನ್ನು ಉಲ್ಹಾಸ್ ನಗರದ ಕೇಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ. ಅಸ್ವಸ್ಥರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ(ಜನವರಿ 4) ಮಹಾರಾಷ್ಟ್ರದ ಬದ್ಲಾಪುರದಲ್ಲಿನ ನೊಬೆಲ್ ಇಂಟರ್ಮಿಡಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ರಾಸಾಯನಿಕ ಕಾರ್ಖಾನೆ ಯಲ್ಲಿ ವಿಷ ಅನಿಲ ಸೋರಿಕೆಯಾಗಿ ಜನರು ಉಸಿರಾಟ ಹಾಗೂ ಕಣ್ಣು ಉರಿ ಸಮಸ್ಯೆಯನ್ನು ಎದುರಿಸಿದ್ದರು.

ವಿಶಾಖಪಟ್ಟಣಂನಲ್ಲಿ ಎಲ್‌ಜಿ ಪಾಲಿಮರ್ಸ್ ರಾಸಾಯನಿಕ ಸ್ಥಾವರದಿಂದ ರಾತ್ರಿಯಿಡೀ ಸ್ಟೈರೀನ್ ಅನಿಲ ಸೋರಿಕೆಯಾಗಿತ್ತು. ಇದರಿಂದಾಗಿ ಮಗು ಸೇರಿದಂತೆ ಎಂಟು ಜನರು ಮೃತಪಟ್ಟು, 1,000ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದು ದೇಶವನ್ನೇ ಬೆಚ್ಚಿ ಬೀಳಿಸಿತ್ತು.