ಅಭಿವ್ಯಕ್ತಿ
ಶ್ರೀನಿವಾಸ
ಮನುಷ್ಯ ಜ್ಞಾನ ಸಂಪಾದನೆ ಮಾಡಬೇಕಾದರೆ ದೇಶ ಸುತ್ತು ಕೋಶ ಓದು ‘ಅಂತ ಒಂದು ಮಾತಿದೆ. ಇಂಟರ್ನೆಟ್ ಶುರುವಾದಾಗಿನಿಂದ ಈ ನಾಣ್ನುಡಿಯ ಮಹತ್ವ ಕಡಿಮೆ ಆಗುತ್ತಲೇ ಇದೆ. ದೇಶ ನೋಡುವುದು, ಕೋಶ ಓದುವುದು ಇವೆರಡಕ್ಕೂ ಇಂಟರ್ನೆಟ್ (ಅಂತರ್ಜಾಲ) ಇದ್ದರೆ ಸಾಕು ಎಂಬಂತಾಗಿದೆ.
ಕೋಶ ಅಂತೂ ಅಪ್ರಸ್ತುತವಾಗಿದೆ. ಏನಾದರೂ ವಿಷಯ ತಿಳಿಯಬೇಕೆನಿಸಿದರೆ ಗೂಗಲ್. ಅದರ ವಿವರಣೆ ಬೇಕೆನಿಸಿದರೆ ಯೂಟ್ಯೂಬ್. ಕೋರ್ಸೆರಾ, ಉಡೆಮಿ, Unacademy, ಖಾನ್ ಅಕಾಡೆಮಿ, Byzus , Stack Overflow ಹೀಗೆ ಹಲವಾರು ವೆಬ್ ಸೈಟ್ಗಳಿಂದ ನಮಗೆ ಬೇಕಾದ ಯಾವುದೇ ವಿಷಯವನ್ನು ತಿಳಿಯ ಬಹುದಾಗಿದೆ. ವಿಷಯ ತಿಳಿಯಲು ಪುಸ್ತಕ ಓದಬೇಕೆನ್ನುವ ಯೋಚನೆಯೇ ಬಾರದಂತಾಗಿದೆ. ಮನುಕುಲದ ಬೆಳವಣಿಗೆಯಲ್ಲಿ ಪುಸ್ತಕದ ಪಾತ್ರ ಮಹತ್ವದ್ದಾಗಿತ್ತು. ಅದು 15ನೆಯ ಶತಮಾನದಲ್ಲಿ Johannes Gutenberg ಪ್ರೆಸ್ನಿಂದ ಶುರುವಾಗಿ ಯೂರೋಪಿನ ಕೈಗಾರಿಕಾ ಕ್ರಾಂತಿ, Renaissance, ಹಾಗೂ 18, 19ನೆಯ ಶತಮಾನದ ವಿಜ್ಞಾನ ಸಂಶೋಧನೆಗಳಿಗೆ ಬಹುಮುಖ್ಯ ಸಾಧನವಾಗಿತ್ತು. ಆದರೆ ಇದೆಲ್ಲವೂ ಇಂಟರ್ನೆಟ್ ಇಲ್ಲದ ಕಾಲದ ಇತಿಹಾಸ. ಕಳೆದ ಕೆಲವು ಶತಮಾನಗಳ ಕಾಲ ಪುಸ್ತಕ ಎಂಬುದು ಕೋಟ್ಯಂತರ ಜನರಿಗೆ ಜ್ಞಾನ ಹರಡಲು ಪ್ರಚಲಿತವಿದ್ದ ಮಾಧ್ಯಮವಾಗಿತ್ತು. ಈಗ ಆ ಸ್ಥಾನವನ್ನು ಇಂಟರ್ನೆಟ್ ಆಕ್ರಮಿಸಿದೆ.
ಕಂಪ್ಯೂಟರ್ ಪ್ರವೇಶದ ನಂತರ ಹಾಗೂ ಇತ್ತೀಚಿನ ವರ್ಷಗಳ ೪ಎ, ೫ಎ ತಂತ್ರಜ್ಞಾನದ ಮಿಂಚಿನ ವೇಗದ ಇಂಟರ್ನೆಟ್ನಿಂದಾಗಿ ವಿಶ್ವದ ಒಂದು ಭಾಗದ ಖ್ಯಾತ ಅಧ್ಯಾಪಕರ ಪಾಠವನ್ನು ಇನ್ನ್ಯಾವುದೋ ಮೂಲೆಯಲ್ಲಿನ ವಿದ್ಯಾರ್ಥಿಯು ಶಾಲಾ ಕಾಲೇಜು ತರಗತಿಗಳಿಗಿಂತ ಸುಸೂತ್ರವಾಗಿ ಕೇಳಬಹುದು.
ಪುಸ್ತಕವು ಜ್ಞಾನಾರ್ಜನೆಯ ಒಂದು ಮಾರ್ಗವಷ್ಟೇ. ಅದರಂತೆ ಹಲವು ಮಾರ್ಗಗಳಿವೆ. ಕಥೆ, ಹಾಡು, ಜನಪದ, ಕೀರ್ತನೆ, ನೃತ್ಯ, ಗಮಕ, ನಾಟಕ, ಯಕ್ಷಗಾನ, ರೂಪಕ, ಶಿಲ್ಪಕಲೆ , ಚಿತ್ರಕಲೆ ಇನ್ನೂ ಮುಂತಾದ ಮಾಧ್ಯಮಗಳ ಮೂಲಕ ಜ್ಞಾನವು ಒಬ್ಬರಿಂದೊಬ್ಬರಿಗೆ ಹರಡಲ್ಪಟ್ಟಿದೆ. ವೇದಗಳು, ಉಪನಿಷತ್ತುಗಳು ತಾಳೆ ಗರಿ, ತಾಮ್ರ ಪತ್ರಗಳಲ್ಲಿ ಬರೆದುದ್ದಕ್ಕಿಂತ ಕಂಠಪಾಠದ ಮೂಲಕ ಹೆಚ್ಚು ಹರಡಿವೆ.
ನಾವೆಲ್ಲ ರಾಮಾಯಣ, ಮಹಾಭಾರತ, ವಿಷ್ಣುಪುರಾಣ ಮುಂತಾದ ಪುರಾಣ ಕಥೆಗಳನ್ನು ಓದಿದ್ದಕ್ಕಿಂತ ಕೇಳಿದ್ದು ಹಾಗೂ ಟಿವಿಗಳಲ್ಲಿ ನೋಡಿ ತಿಳಿದಿದ್ದೇ ಹೆಚ್ಚು. ವಾಲ್ಮೀಕಿಯ ರಾಮಾಯಣ ಓದಿ ತಿಳಿದವರಿಗಿಂತ, ತುಳಸಿದಾಸರ ರಾಮಚರಿತ ಮಾನಸ ಕೇಳಿ ತಿಳಿದವರೇ ಹೆಚ್ಚು ಮಂದಿ. ನನ್ನ ಶೈಕ್ಷಣಿಕ ಜೀವನ ಪೂರ್ತಿ
ಓದುವುದರಲ್ಲೆ ಕಳೆದುಹೋಗಿತ್ತು. ಸ್ವಭಾವತಃ ನಾನು ಉತ್ತಮ ಕೇಳುಗಾರನಲ್ಲ. ಅಂದರೆ ಒಮ್ಮೆ ಅಧ್ಯಾಪಕ ಪಾಠ ಮಾಡಿದ್ದನ್ನು ಮನಸಿಟ್ಟು ಕೇಳಿ, ಯಥಾ ವತ್ತಾಗಿ ನೆನಪಿನಲ್ಲಿಟ್ಟುಕೊಳ್ಳುವಷ್ಟು ಏಕಾಗ್ರತೆ ನನ್ನಲಿಲ್ಲ. ತರಗತಿಯಲ್ಲಿ ಅಧ್ಯಾಪಕರನ್ನು ಮತ್ತೊಮ್ಮೆ ಹೇಳಿ ಎಂದು ಕೇಳುವಷ್ಟು ಧೈರ್ಯವಿರುತ್ತಿರಲಿಲ್ಲ. ಬದಲಾಗಿ ಮನೆಗೆ ಬಂದ ನಂತರ ಪುಸ್ತಕ ಓದಿ ವಿಷಯವನ್ನು ತಿಳಿಯುತ್ತಿದ್ದೆ. ಹೀಗೆ ಪಾಠ ಕೇಳುವ ಬದಲಿಗೆ ಪುಸ್ತಕ ಓದಿಯೇ ಜ್ಞಾನಾರ್ಜನೆ ಯಾಗುತ್ತಿತ್ತು.
ನನಗೂ ಕೂಡ ಹೊಸ ವಿಷಯ ತಿಳಿಯಲು ಯೂಟ್ಯೂಬ್ ಮೊರೆ ಹೋಗುವುದು ಸಹಜ, ಸಲೀಸಾದ ಮಾರ್ಗವಾಗಿ ಬಿಟ್ಟಿದೆ. ಕಳೆದ ಕೆಲವು ವರ್ಷಗಳಿಂದ Soft ]\\ware ರಂಗದಲ್ಲಿ ಹೆಚ್ಚು ಪ್ರಚಲಿತವಾಗಿರುವ Machine learning ಎಂಬ ವಿಷಯದ ಕುರಿತು ತಿಳಿಯಲು ಒಂದು ಪುಸ್ತಕ ಖರೀದಿಸಿದೆ. ಆದರೆ ಅದನ್ನು ಓದುವ ಬದಲಿಗೆ ಆನ್ ಲೈನ್ ಕೋರ್ಸ್ಗಳು , ಯೂಟ್ಯೂಬ್ ನಲ್ಲಿ ಸಿಗುವ ಲೆಕ್ಚರ್ಗಳನ್ನ ಕೇಳುವುದೇ ಸುಲಭವೆನಿಸಿಬಿಟ್ಟಿದೆ. ಅಂತಹ ಲೆಕ್ಚರ್ ಗಳಿಂದಲೇ ಹಲವು ವಿಷಯಗಳು ಅರ್ಥವಾಗಿವೆ. ಪುಸ್ತಕ ಮೂಲೆಗುಂಪಾಗಿದೆ. ಮೊನ್ನೆ ಭಾನುವಾರ ಮನೆ ಸಜ್ಜಾಗಿಡುವಾಗ ಮೂಲೆಯಲ್ಲಿ ಕಂಡು ಬಂದ ಧೂಳು ಮೆತ್ತಿದ ಮಷೀನ್ ಲರ್ನಿಂಗ್ ಪುಸ್ತಕ ನೋಡಿ, ನನ್ನಲ್ಲಾದ ಈ ಬದಲಾವಣೆ, ಕೇವಲ ನನಗಾದದ್ದೋ ಅಥವಾ ಇದು ತಂತ್ರಜ್ಞಾನ ಯುಗದ ಬದಲಾವಣೆಯೋ ಎಂಬ ಜಿಜ್ಞಾಸೆ ಗೊಳಗಾಗಿ ಈ ಲೇಖನ ಬರೆದಿರುವೆ.